ಉತ್ತರ ಪ್ರದೇಶದ ಚರಿತ್ರೆ

ವಿಕಿಪೀಡಿಯ ಇಂದ
Jump to navigation Jump to search

ಉತ್ತರ ಭಾರತದ ಗಂಗಾ ಯಮುನಾ ಬಯಲಿನ ಒಂದು ಭಾಗವಾಗಿರುವ ಉತ್ತರ ಪ್ರದೇಶದ ಇತಿಹಾಸ ಬಲು ದೊಡ್ಡದು. ವಾಯುವ್ಯ ಗಡಿಯಿಂದ ಧಾರಾಕಾರವಾಗಿ ಭಾರತಕ್ಕೆ ಹರಿದು ಬಂದ ಆಕ್ರಮಣಕಾರರ ಹಾದಿಗೆ ಇದು ಅಡ್ಡಲಾಗಿದ್ದದ್ದರಿಂದ ಈ ಪ್ರದೇಶದ ಇತಿಹಾಸದ ಬಲು ಭಾಗ ಸೃಷ್ಟಿಯಾದದ್ದು ಇಲ್ಲಿ. ಸನಾತನ ಭಾರತದ ಪವಿತ್ರಗ್ರಂಥಗಳಲ್ಲಿ ಮಧ್ಯದೇಶವೆಂದು ಪ್ರಸಿದ್ಧವಾದ ನಾಡು ಇದೇ. ರಾಮಾಯಣ-ಮಹಾಭಾರತಗಳ ರಾಮ, ಕೃಷ್ಣ ಮುಂತಾದವರು ನಡೆದಾಡಿದ್ದೂ ವಾಸಮಾಡಿದ್ದೂ ಇಲ್ಲಿನ ನೆಲದ ಮೇಲೆ, ಎಂದು ನಂಬಿಕೆ.

ಸಾಮಾಜಿಕ ಕ್ರಾಂತಿ[ಬದಲಾಯಿಸಿ]

ಈ ನಾಡು ಅನೇಕ ಮತೀಯ ಹಾಗೂ ಸಾಮಾಜಿಕ ಕ್ರಾಂತಿಗಳಿಗೂ ತವರು. ವೈದಿಕ ಧರ್ಮದ ಹೊಸತನ ಹೋಗಿ ಸಾಂಪ್ರದಾಯಿಕವಾದಾಗ ಅವತರಿಸಿದ ಬುದ್ಧ ಇಲ್ಲೇ ಬದುಕಿದ್ದ. ಅವನ ಧರ್ಮಬೋಧೆ ಆರಂಭವಾದದ್ದು ಇಲ್ಲೆ-ಕಾಶಿಯ ಬಳಿ. ಬುದ್ಧನ ಪ್ರಥಮ ಬೋಧನೆಯ ಸ್ಥಳದಲ್ಲೊಂದು ಹಳೆಯ ಸ್ತೂಪವಿದೆ. ಅಶೋಕನ ಕಾಲದ ಶಾಸನಗಳನ್ನೂ ಇನ್ನೂ ನಾನಾ ಸ್ಮಾರಕಗಳನ್ನೂ ಈ ರಾಜ್ಯದಲ್ಲಿ ಕಾಣಬಹುದು.[೧] ಉತ್ತರ ಭಾರತದ ಕೇಂದ್ರಪ್ರದೇಶವಾದ ಈ ನಾಡು ಎಲ್ಲ ಮುಖ್ಯ ಚಕ್ರಾಧಿಪತ್ಯಗಳ ಆಳ್ವಿಕೆಗಳಿಗೂ ಒಳಪಟ್ಟಿತ್ತು. ಮೌರ್ಯರೂ ಕುಶಾನರೂ ಗುಪ್ತರೂ ಇದನ್ನಾಳಿದರು.12ನೆಯ ಶತಮಾನದಲ್ಲಿ ಇದು ಮುಸ್ಲಿಮರ ಆಕ್ರಮಣಕ್ಕೆ ತುತ್ತಾಗಿ ದೆಹಲಿ ಸುಲ್ತಾನರ ಆಳ್ವಿಕೆಯಡಿಗೆ ಬಂತು. 14ನೆಯ ಶತಮಾನದ ಅಂತ್ಯಭಾಗದಲ್ಲಿ ಈ ರಾಜ್ಯದ ಪೂರ್ವಭಾಗವಾದ ಅಯೋಧ್ಯೆ ಜಾನ್ಪುರದ ಆಡಳಿತಕ್ಕೊಳಪಟ್ಟಿತ್ತು. ಇದನ್ನು ಲೋದಿ ಸುಲ್ತಾನರು ಗೆದ್ದಾಗಲೇ ಇದು ಮತ್ತೆ ದೆಹಲಿಯ ಆಡಳಿತಕ್ಕೆ ಬಂದದ್ದು. ಅಕ್ಬರನಿಂದ ಔರಂಗಜೇಬನವರೆಗಿನ ಮೊದಲ ಚಕ್ರಾಧಿಪತ್ಯದ ಕಾಲದಲ್ಲಿ ಆಗ್ರ ಅಯೋಧ್ಯಾ ಪ್ರಾಂತ್ಯಗಳೆರಡೂ ಅದರ ಆಳ್ವಿಕೆಗೆ ಒಳಪಟ್ಟಿದ್ದುವು. ಅನಂತರ (1707) ಅಯೋಧ್ಯೆ ಸ್ವತಂತ್ರವಾಯಿತು. ಅಯೋಧ್ಯೆಯ ಸುಲ್ತಾನ ವಂಶದ ಮೂಲಪುರುಷನಾದ ಸಾದತ್ ಆಲಿಖಾನ್ (1722-39) ನೆರೆಹೊರೆ ಪ್ರದೇಶಗಳನ್ನೆಲ್ಲ ಗೆದ್ದ. ವಾರಾಣಸಿ, ಗಾಜಿûಪುರ, ಜಾನ್ಪುರ, ಚುನಾರ್ಗಳೂ ಈತನ ಆಡಳಿತಕ್ಕೊಳಪಟ್ಟುವು.[೨]

ಇಂಗ್ಲಿಷರ ಆಗಮನ[ಬದಲಾಯಿಸಿ]

ಇಂಗ್ಲಿಷರ ಆಗಮನವಾದಾಗ ಅಯೋಧ್ಯೆಯ ಸುಲ್ತಾನನಾಗಿದ್ದ ಷೂಜಾ-ಉದ್-ದೌಲನಿಗೂ ಇಂಗ್ಲಿಷರಿಗೂ ಘರ್ಷಣೆ ಆರಂಭವಾಯಿತು. 1764ರ ಬಕ್ಸಾರ್ ಕದನದಲ್ಲಿ ಈತ ಸೋತು, ಇವನ ರಾಜ್ಯ ಇಂಗ್ಲಿಷ್ ಕಂಪನಿಯ ವಶಕ್ಕೆ ಬಂತು. 1765ರ ಕೌಲಿಗೆ ಅನುಸಾರವಾಗಿ ಷೂಜಾ-ಉದ್-ದೌಲನನ್ನು ಇಂಗ್ಲಿಷರು ಮತ್ತೆ ಗಾದಿಯ ಮೇಲೆ ಕೂರಿಸಿದರಾದರೂ ಈ ರಾಜ್ಯದ ಎರಡು ಜಿಲ್ಲೆಗಳಾಗಿದ್ದ ಕೋರ, ಅಲಹಾಬಾದ್ಗಳನ್ನು ಮೊಗಲ್ ಚಕ್ರವರ್ತಿಗೆ ಕೊಟ್ಟರು. ಪಶ್ಚಿಮದಿಂದ ಒತ್ತರಿಸಲು ಯತ್ನಿಸುತ್ತಿದ್ದ ಮರಾಠರಿಗೂ ಬ್ರಿಟಿಷರ ಬಂಗಾಲಕ್ಕೂ ನಡುವೆ ಅಯೋಧ್ಯೆಯೇ ತಡೆಯಾಗಿ ಪರಿಣಮಿಸಿತು. 1773ರಲ್ಲಿ ಆದ ಬನಾರಸ್ ಒಪ್ಪಂದಕ್ಕೆ ಅನುಸಾರವಾಗಿ ಅಯೋಧ್ಯೆಯ ನವಾಬನ ರಕ್ಷಣೆಗೆಂದಿಟ್ಟಿದ್ದ ಪಡೆಯ ವೆಚ್ಚದ ಒಂದು ಭಾಗವನ್ನು ಈ ನವಾಬ ಕೊಡಬೇಕೆಂದು ವಾರೆನ್ ಹೇಸ್ಟಿಂಗ್ಸ್ ಸೂಚಿಸಿದ. ಈ ವೇಳೆಗೆ ದುರ್ಬಲನಾಗಿದ್ದ ಮೊಗಲ್ ಚಕ್ರವರ್ತಿಯಿಂದ ಬ್ರಿಟಿಷರು ಕೋರ, ಅಲಹಾಬಾದ್ ಜಿಲ್ಲೆಗಳನ್ನು ಕಿತ್ತುಕೊಂಡು ಅವನ್ನು ಷೂಜಾ-ಉದ್-ದೌಲನಿಗೆ ಮಾರಿದರು.ಅಯೋಧ್ಯೆಯ ಆಯಕಟ್ಟಿನ ಸ್ಥಿತಿಯಿಂದಾಗಿ ಇದನ್ನು ಬ್ರಿಟಿಷರು ಹಾಗೆಯೆ ಇರಗೊಡಲಿಲ್ಲ. 1801ರಲ್ಲಿ ಲಾರ್ಡ್ವೆಲೆಸ್ಲಿ ಅಯೋಧ್ಯೆಯ ನವಾಬನಿಂದ ರೋಹಿಲ್ಖಂಡ, ಕೆಳ ದೋಆಬ್ ಮತ್ತು ಗೋರಖಪುರ ಪ್ರದೇಶಗಳನ್ನು ಕಿತ್ತುಕೊಂಡ. 1804ರಲ್ಲಿ ಮರಾಠರು ಬ್ರಿಟಿಷರಿಗೆ ಸೋತರು. ಮೇಲಣ ದೋಆಬ್, ಬುಂದೇಲ್ ಖಂಡದ ಭಾಗ ಮತ್ತು ಆಗ್ರ ಇವರ ಕೈ ಸೇರಿದ್ದು ಆಗ. 1816ರಲ್ಲಿ ಗೂರ್ಖ ಯುದ್ಧದ ಫಲವಾಗಿ ಕುಮಾವ್ ಇವರಿಗೆ ಬಂತು. ಮರಾಠರಿಂದ ಬುಂದೇಲ್ ಖಂಡದ ಇನ್ನೊಂದು ಭಾಗವೂ ದಕ್ಕಿತು. ಆಗ ಬಂಗಾಲದ ಒಂದು ಭಾಗವಾಗಿದ್ದ ಈ ಪ್ರದೇಶವನ್ನೆಲ್ಲ ಗವರ್ನರ್ ಜನರಲ್ ಆಳುತ್ತಿದ್ದ. ವಾಯುವ್ಯ ಪ್ರಾಂತ್ಯಗಳೆಂದು ಆಗ ಕರೆಯಲಾಗುತ್ತಿದ್ದ ಈ ಭಾಗಕ್ಕೆ ಲೆಫ್ಟಿನೆಂಟ್ ಗವರ್ನರ್ ಒಬ್ಬರ ನೇಮಕವಾದದ್ದು 1835ರಲ್ಲಿ ಇದರಲ್ಲಿ ದೆಹಲಿಯ ಪ್ರದೇಶವೂ ಮುಂದೆ ಮಧ್ಯಪ್ರಾಂತ್ಯಗಳಿಗೆ ಸೇರಿಸಲಾದ ಕೆಲವು ಪ್ರದೇಶಗಳೂ ಸೇರಿದ್ದವು. 1856ರಲ್ಲಿ ಇಂಗ್ಲಿಷರು ಅಯೋಧ್ಯೆಯ ಆಡಳಿತವನ್ನು ತಾವೇ ತೆಗೆದುಕೊಳ್ಳುವವರೆಗೂ ಇದು ನವಾಬನ ಆಳ್ವಿಕೆಗೆ ಒಳಪಟ್ಟಿತ್ತು.1857ರಲ್ಲಿ ಬಂಡಾಯದಲ್ಲಿ ಉತ್ತರ ಪ್ರದೇಶದ್ದೂ ಮುಖ್ಯ ಪಾತ್ರವೇ ಎನ್ನಬಹುದು. ಬಂಡಾಯದ ಅನಂತರ ಈ ಪ್ರದೇಶದ ಆಂತರಿಕ ಆಡಳಿತಕ್ಕೆ ಬ್ರಿಟಿಷರು ಹೆಚ್ಚು ಗಮನ ನೀಡಿದರು. 1920ರಲ್ಲಿ ಇದಕ್ಕೆ ಗವರ್ನರ ಪ್ರಾಂತ್ಯದ ಸ್ಥಾನ ಕೊಡಲಾಯಿತು. 1947ರಲ್ಲಿ ಸ್ವತಂತ್ರ ಭಾರತದ ರಾಜ್ಯವಾದ ಇದು ಉತ್ತರ ಪ್ರದೇಶವಾದದ್ದು 1950ರಲ್ಲಿ.

ಭಾರತದ ಸಾಂಸ್ಕøತಿಕ ರಾಜಕೀಯ[ಬದಲಾಯಿಸಿ]

ಭಾರತದ ಸಾಂಸ್ಕøತಿಕ ರಾಜಕೀಯ ಜೀವನದಲ್ಲಿ ಉತ್ತರ ಪ್ರದೇಶದ ಪಾತ್ರ ಹಿರಿದು. ಹಿಂದೂ ಮುಸ್ಲಿಂ ಸಂಸ್ಕøತಿಗಳೆರಡೂ ಇಲ್ಲಿ ಬೆಳೆದಿದೆ. ವಾರಾಣಸಿಯಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯವಿರುವಂತೆ ಅಲೀಗಢದಲ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯವಿದೆ (ನೋಡಿ- ಅಲಿಘರ್-ಮುಸ್ಲಿಂ-ವಿಶ್ವವಿದ್ಯಾನಿಲಯ). ವಾರಾಣಸಿ ಹಿಂದೂ ಸಂಸ್ಕøತಿಯ ಕೇಂದ್ರವಾಗಿ ಬೆಳೆಯಿತು. ಲಖನೌ ಮುಂತಾದ ದೊಡ್ಡ ನಗರಗಳಲ್ಲಿ ಉರ್ದು ಭಾಷೆಯ ಜೀವನಾಡಿ ಇಂದಿಗೂ ಮಿಡಿಯುತ್ತದೆ. ಹಿಂದೂ ಮುಸ್ಲಿಮರಿಬ್ಬರೂ ಕೂಡಿ ಈ ಭಾಷೆ ಬೆಳೆಸಿದರು.ಸ್ವಾತಂತ್ರ್ಯ ಸಂಗ್ರಾಮದಲ್ಲಿ ಉತ್ತರಪ್ರದೇಶದ ಕೊಡುಗೆ ಗಮನಾರ್ಹ. ಸ್ವತಂತ್ರ್ಯ ಭಾರತದ ಅನೇಕ ನಾಯಕರು ಇಲ್ಲಿಂದ ಬಂದವರು. ಅಲಹಾಬಾದಿನ ನೆಹರೂ ಮನೆತನದ ಆನಂದಭವನವೀಗ ರಾಷ್ಟ್ರದ ಸ್ವತ್ತು.

ಜಮೀನ್ದಾರಿ ರದ್ದು ಕಾಯಿದೆ[ಬದಲಾಯಿಸಿ]

1951ರಲ್ಲಿ ಜಾರಿಗೆ ಬಂದ ಜಮೀನ್ದಾರಿ ರದ್ದು ಕಾಯಿದೆ ಇಲ್ಲಿನ ಆಧುನಿಕ ಸಾಮಾಜಿಕ ಇತಿಹಾಸದಲ್ಲಿ ಒಂದು ಮುಖ್ಯ ಘಟ್ಟ. ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ನಿರ್ಮಿಸಲಾಗಿರುವ ಕಟ್ಟೆಗಳು ಮಿeóರ್Áಪುರ, ವಾರಾಣಸಿ, ಬುಂದೇಲ್ಖಂಡಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ದೊಡ್ಡ ಕಾಮಗಾರಿಗಳು. 1959ರಿಂದ ಸಹಕಾರ ಕ್ಷೇತ್ರದಲ್ಲೂ ಈ ರಾಜ್ಯ ಸಾಕಷ್ಟು ಮುನ್ನಡೆ ಸಾಧಿಸಿದೆ. 1960ರಲ್ಲಿ ರುದ್ರಪುರದಲ್ಲೊಂದು ವ್ಯವಸಾಯ ವಿಶ್ವವಿದ್ಯಾನಿಲಯ ಸ್ಥಾಪಿತವಾಯಿತು. ಬನಾರಸ್ ಅಲೀಗಢಗಳಲ್ಲದೆ ಅಲಹಾಬಾದ್ ಆಗ್ರ ಲಖನೌಗಳಲ್ಲೂ ವಿಶ್ವವಿದ್ಯಾನಿಲಯಗಳು ಬೆಳೆದಿವೆ.ಚೀನ ಭಾರತ ಗಡಿ ಘರ್ಷಣೆಗೆ ಉತ್ತರ ಪ್ರದೇಶಕ್ಕೂ ಟಿಬೆಟ್ಟಿಗೂ ನಡುವೆ ಇರುವ ಗಡಿಗೆರೆಯೇ ನಿಮಿತ್ತ. ಹಿಮಾಲಯ ಪ್ರದೇಶದಲ್ಲಿ ಭಾರತಕ್ಕೆ ಸೇರಿದ ಬಾರಾಹೋತಿ ಹಳ್ಳಿಯ ಸ್ವಾಮ್ಯದ ಬಗ್ಗೆ ಚೀನದ ಕಲಹ ಆರಂಭವಾಯಿತು. ತೆಹರೀಘರ್ವಾಲಿನ ಕೆಲವು ಭಾಗಗಳು ತನಗೆ ಸೇರಿದವೆಂದು ಚೀನದ ವಾದ. ಚೀನದ ಭೂಪಟಗಳಲ್ಲಿ ಈ ಭಾಗಗಳನ್ನು ಅದು ತನ್ನ ಸೀಮೆಯೊಳಗೆ ತೋರಿಸಿಕೊಂಡಿದೆ. ಈಗ ಈ ಭಾಗಗಳು ಉತ್ತರಾಂಚಲ ರಾಜ್ಯಕ್ಕೆ ಸೇರಿವೆ.

ಉಲ್ಲೇಖಗಳು[ಬದಲಾಯಿಸಿ]