ವಿಷಯಕ್ಕೆ ಹೋಗು

ಉತ್ತರ (ಮಹಾಭಾರತ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಉತ್ತರ ಕುಮಾರ ಇಂದ ಪುನರ್ನಿರ್ದೇಶಿತ)

ಮಹಾಭಾರತ ಮಹಾಕಾವ್ಯದಲ್ಲಿ, ಉತ್ತರ ಮತ್ಸ್ಯ ರಾಜ್ಯದ ರಾಜಕುಮಾರ ಮತ್ತು ವಿರಾಟ ರಾಜನ ಪುತ್ರ, ಇವರ ಆಸ್ಥಾನದಲ್ಲೇ ಪಾಂಡವರು ತಮ್ಮ ವನವಾಸದ ಅವಧಿಯಲ್ಲಿ ಗೌಪ್ಯತೆಯಲ್ಲಿ ಒಂದು ವರ್ಷ ಕಳೆದರು. ಅವನು ಉತ್ತರೆಯ ಸಹೋದರ ಮತ್ತು ಶ್ರೀಲಾಜನ್ ರಾಜನ ಮಗಳು ಕೀಸವಿಯ ಪತಿ. ಪಾಂಡವರ ಅಜ್ಞಾತವಾಸದ ಕೊನೆಯ ದಿನಗಳಲ್ಲಿ ದುರ್ಯೋಧನನು ಮತ್ಸ್ಯ ರಾಜ್ಯದ ಮೇಲೆ ದಾಳಿ ಮಾಡಿದಾಗ ಉತ್ತರನು ಬೃಹನ್ನಳೆಯೊಂದಿಗೆ ದುರ್ಯೋಧನನ ಸೇನೆಯನ್ನು ಎದುರಿಸಲು ಹೋಗಿದ್ದನು. ದ್ರೌಪದೀ ಸ್ವಯಂವರ ಕಾಲದಲ್ಲಿ ಈತ ಪಾಂಚಾಲ ದೇಶಕ್ಕೂ ಹೋಗಿದ್ದ. ಭೂಮಿಂಜಯ, ವಿರಾಟಪುತ್ರ, ಮತ್ಸ್ಯಪುತ್ರ ಎಂಬ ಹೆಸರುಗಳೂ ಈತನಿಗೆ ಇದ್ದವು. ಕೌರವರು ಉತ್ತರದ ದಿಕ್ಕಿನಲ್ಲಿ ಗೋಹರಣ ಮಾಡಿದ್ದನ್ನು ತಿಳಿದ ಉತ್ತರ ಕುಮಾರ ಅವರ ಮೇಲೆ ಯುದ್ಧಕ್ಕೆ ಹೋಗಲು ತನಗೆ ಸರಿಯಾದ ಸಾರಥಿಯಿಲ್ಲವೆಂದು ಚಡಪಡಿಸುತ್ತಾನೆ. ಬೃಹನ್ನಳೆಯ ವೇಷದಲ್ಲಿದ್ದ ಅರ್ಜುನನನ್ನು ಸಾರಥಿಯನ್ನಾಗಿ ನೇಮಿಸಿಕೊಳ್ಳಬೇಕೆಂದು ಸೈರಂಧ್ರಿ ಸೂಚಿಸುತ್ತಾಳೆ. ಬೃಹನ್ನಳೆಯನ್ನು ಸಾರಥಿಯಾಗೆಂದು ಕೇಳಿದಾಗ ಬೇಕೆಂದೇ ಬೃಹನ್ನಳೆ ಯುದ್ಧಭೂಮಿಯಲ್ಲಿ ಸಾರಥಿಯಾಗಲು ತನ್ನ ಅಸಮರ್ಥತೆಯನ್ನು ಹೇಳಿಕೊಂಡಾಗ ಉತ್ತರ ಕುಮಾರ ತನ್ನಲ್ಲಿ ಇಲ್ಲದ ಪೌರುಷವನ್ನು ಅರಮನೆಯ ಹೆಂಗೆಳೆಯರ ಮುಂದೆ ಕೊಚ್ಚಿಕೊಳ್ಳುವುದು ಮಹಾಭಾರತದಲ್ಲಿ ಒಂದು ಸ್ವಾರಸ್ಯ ಪ್ರಸಂಗ. ಈ ಪ್ರಸಂಗವನ್ನು ಕುಮಾರವ್ಯಾಸ ತನ್ನ ಗದುಗಿನ ಭಾರತದಲ್ಲಿ ರಸಪೂರ್ಣವಾಗಿ ಚಿತ್ರಿಸಿದ್ದಾನೆ. ಅನಂತರ ಬೃಹನ್ನಳೆಯ ಸಾರಥ್ಯವನ್ನು ಪಡೆದ ಉತ್ತರ ಕುಮಾರ ಯುದ್ಧ ಭೂಮಿಯನ್ನು ನೋಡಿದ ಕೂಡಲೇ ಹೆದರಿ ನಿಲ್ಲುತ್ತಾನೆ. ಆತನಿಗೆ ಧೈರ್ಯ ತುಂಬಿ ಅರ್ಜುನ ತಾನೇ ಯುದ್ಧ ಮಾಡುತ್ತಾನೆ. ಆ ಸಮಯದಲ್ಲಿ ಉತ್ತರಕುಮಾರ ಅರ್ಜುನನ ಸಾರಥಿಯಾಗಿ ರಥವನ್ನು ನಡೆಸುತ್ತಾನೆ. ಮುಂದೆ ಮಹಾಭಾರತ ಯುದ್ಧದಲ್ಲಿ ಶಲ್ಯನಿಂದ ಹತನಾಗುತ್ತಾನೆ. ಶೌರ್ಯವಿಲ್ಲದೆ ಬಡಾಯ ಕೊಚ್ಚುವವರನ್ನು ಸಾಮಾನ್ಯವಾಗಿ ಉತ್ತರಕುಮಾರನೆನ್ನುವುದು ರೂಢಿ. ಉತ್ತರನ ಪೌರುಷ ಒಲೆಯ ಮುಂದೆ, ನಿನ್ನ ಪೌರುಷ ಎಲೆಯ ಮುಂದೆ ಎನ್ನುವುದು ಗಾದೆ ಮಾತಾಗಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: