ಈಜಿಪ್ಟಿನ ವಾಸ್ತುಶಿಲ್ಪ, ಕಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಗತ್ತಿನ ವಾಸ್ತುಶಿಲ್ಪದಲ್ಲೆಲ್ಲ ಮೊದಲಿಗೆ ಕಲ್ಲಿನ ಬಳಕೆಯನ್ನು ಮಾಡಿದವರು ಈಜಿಪ್ಟಿನವರು, ಇವರು ಬಹು ದೊಡ್ಡ ಪ್ರಮಾಣದ ಕಲ್ಲುಗಳನ್ನು ಉಪಯೋಗಿಸಿದರು. ವಾಸ್ತುಶಿಲ್ಪದ ಅತಿ ಪ್ರಾಚೀನ ಮಾದರಿಗಳೆಂದರೆ ಮಸ್ತಬ ಎಂಬ ಗೋರಿಗಳು ಹಾಗೂ ಪಿರಮಿಡ್ಡುಗಳು. ಇವುಗಳ ರಚನೆಯಲ್ಲಿ ವಾಸ್ತುಶಿಲ್ಪಕ್ಕಿಂತ ಎಂಜಿನಿಯರಿಂಗ್ ಚಾತುರ್ಯ ಹೆಚ್ಚಾಗಿದೆ. ಆದರೂ ಬಹಳ ದೊಡ್ಡ ಗಾತ್ರದ ಕಲ್ಲುಗಳನ್ನು ಕಡಿದು, ಹೊರಮೈಯನ್ನು ಮಟ್ಟಮಾಡಿ ಒಂದರ ಮೇಲೊಂದನ್ನು ಒಡ್ಡಿ ಕಟ್ಟಲಾದ ಈ ಪಿರಮಿಡ್ಡುಗಳು ಗಾಂಭೀರ್ಯ ಹಾಗೂ ಭದ್ರತೆಗಳಿಂದ ಕೂಡಿ, ಒಂದು ವಿಶಿಷ್ಟ ಆಕರ್ಷಣೆಯನ್ನು ಹೊಂದಿವೆ. ಮಸ್ತಬ ಮತ್ತು ಪಿರಮಿಡ್ಡುಗಳ ಉದ್ದೇಶ ಒಂದೇ-ಶವವನ್ನೂ, ಪರಲೋಕ ಪ್ರಯಾಣಕ್ಕೆ ಬೇಕಾದುದೆಂದು ಅದರೊಂದಿಗೆ ಇಟ್ಟ ವಸ್ತುಗಳನ್ನೂ ಕೆಡದಂತೆ ಕಾಪಾಡುವುದು. ಸಕ್ಕಾರಾ ಎಂಬಲ್ಲಿ ಮೂರನೆಯ ರಾಜವಂಶದ (ಕ್ರಿ. ಪೂ. 2980-2900) ಕಾಲದ ರಾಜ eóÉೂೀಸೆರ್‍ನ ಸಮಾಧಿ ಇರುವ ಸ್ಟೆಪ್ ಪಿರಮಿಡ್ ಇವುಗಳಲ್ಲಿ ಅತಿ ಹಿಂದಿನದು. ಇಲ್ಲಿನ ಆಕಾರವನ್ನು ಗಮನಿಸಿದರೆ ಒಂದರ ಮೇಲೊಂದು ಮಸ್ತಬಗಳನ್ನು ರಚಿಸಿದಂತೆ ಕಾಣಬರುತ್ತವೆ. ರಾಜನ ಮಂತ್ರಿ ಇಮ್ ಹೊತೆಪ್ ಬಹುಮುಖ ಪ್ರತಿಭಾಶಾಲಿ, ಇವನಿಂದ ಈ ವಾಸ್ತುಶಿಲ್ಪ, ಕಲೆಗಳು ತುಂಬ ಪ್ರೋತ್ಸಾಹ ಪಡೆದುವು. ಮುಂದಿನ ನೂರು ವರ್ಷಗಳೊಳಗೆ ಪಿರಮಿಡ್ಡಿನ ರಚನೆಯಲ್ಲಿ ತುಂಬ ಪ್ರಗತಿಯಾಗಿ ನಾಲ್ಕನೆಯ ರಾಜವಂಶದ (ಕ್ರಿ. ಪೂ 2900-2750) ಕುಫು ಅರಸನ ಗೀeóÉಹ್ ಎಂಬಲ್ಲಿರುವ ಅತಿ ದೊಡ್ಡ ಪಿರಮಿಡ್ಡಿನ ರಚನೆಯಾಯಿತು. ಚೌಕಾಕೃತಿಯ ಅಡಿಗಟ್ಟಿನ ಮೇಲೆ ಕಟ್ಟಿರುವ ಈ ಶಿಲ್ಪ 480' ಎತ್ತರವಾಗಿದೆ. ತುದಿಯಿಂದ ಬುಡದವರೆಗೂ ಇಳಿಜಾರಾದ ಇದರ ಬದಿ 760' ಗಳಷ್ಟಿದೆ. ಇಲ್ಲಿಂದ ಮುಂದೆ ಕಟ್ಟಲ್ಪಟ್ಟ ಪಿರಮಿಡ್ಡುಗಳು ಇಷ್ಟು ಭವ್ಯವಾಗಿಲ್ಲ. ದೊಡ್ಡ ದೊಡ್ಡ ಗಾತ್ರಗಳ, ಸಮ ಕ್ಷೇತ್ರಗಳ ಹೊಂದಾಣಿಕೆ ನೇರವಾದ, ಸರಳವಾದ ಘನತೆ- ಇವು ವಾಸ್ತುಶಿಲ್ಪಕ್ಕೆ ಪಿರಮಿಡ್ಡುಗಳ ಕೊಡುಗೆ.[೧]

ದೇವಾಲಯಗಳ ಚಿತ್ರನೆ[ಬದಲಾಯಿಸಿ]

ದೇವಾಲಯಗಳಲ್ಲಿ ಕೆಲವು ಪೂರ್ಣವಾಗಿ ಕಲ್ಲಿನಲ್ಲಿ ಕೊರೆಯಲ್ಪಟ್ಟವೇ ಆಗಿವೆ. ಸಾಮಾನ್ಯವಾಗಿ ಇಂಥ ದೇವಾಲಯಗಳು ಕ್ರಮವಾಗಿ ಹೆಬ್ಬಾಗಿಲಿನ ಬಳಿ ಪೈಲೊನ್ ಎಂಬ ಎರಡು ಘನವಾದ ಕಲ್ಲಿನ ಗೋಪುರಗಳು ಇವೆ. ಮೂರು ಬದಿಗಳಲ್ಲಿ ಎರಡು ಸಾಲು ಕಂಬಗಳಿರುವ ಅಂಗಣವಿದೆ. ಕಂಬಗಳಿಂದ ತುಂಬಿರುವ ಒಂದು ವಿಶಾಲವಾದ ಕೋಣೆ. ಇದರಲ್ಲಿ ನಡುವಣ ಎರಡು ಸಾಲು ಕಂಬಗಳು ಉಳಿದವಕ್ಕಿಂತ ಹೆಚ್ಚು ಎತ್ತರವಾಗಿದ್ದು ಕ್ಲೀರ್ ಸ್ಟೋರಿ ಎಂದು ಕರೆಯಲಾದ ಬೆಳಕಿನ ಕಂಡಿಗಳನ್ನು ಹೊಂದಿವೆ. ಮುಂದೆ ಗರ್ಭಗುಡಿ, ಇದರ ಮೂರು ಬದಿಗಳಲ್ಲಿ ಪೂಜಾರಿಗಳಿಗಾಗಿ ಕೋಣೆಗಳು ಇವೆ. 5ನೆಯ ರಾಜವಂಶ (ಕ್ರಿ.ಪೂ. 2750-2625) ಕಾಲದಿಂದ ಈಚಿನ ಸಮಾಧಿ ದೇಗುಲಗಳು ಭವ್ಯವಾಗಿವೆ. ದೇವಾಲಯಗಳ ಈ ವಿಶಿಷ್ಟಶೈಲಿ ಬದಲಾವಣೆಗಳಿಲ್ಲದ ಕ್ರಿಸ್ತಶಕಾರಂಭದವರೆಗೂ ನಡೆದು ಬಂತು. ಇಂಥ ದೇವಾಲಯಗಳ ಉತ್ತಮ ನಿದರ್ಶನವೆಂದರೆ ಥೀಬ್ಸ್‍ನ ಆಮನ್ ದೇವಾಲಯ (12ನೆಯ ರಾಜವಂಶ ಕ್ರಿ.ಪೂ. 2000-1788) ಇದಕ್ಕೆ ಮುಂದೆ 18ನೆಯ ರಾಜವಂಶ (ಕ್ರಿ.ಪೂ. 1580-1350) ಒಂದನೆಯ ಥಟ್ಮೋಸ್ ಕೆಲವು ಅಂಗಗಳನ್ನು ಕೂಡಿಸಿದ. ಕಾರ್ನಾಕ್ ಎಂಬಲ್ಲಿ 19ನೆಯ ರಾಜವಂಶದ (ಕ್ರಿ.ಪೂ. 1350-1205) ಎರಡನೆಯ ರ್ಯಾಮ್ಸೆಸ್ ಕಟ್ಟಿಸಿದ ಆಮನ್ ದೇವಾಲಯ ತುಂಬ ಪ್ರಸಿದ್ಧವಾದುದು. ಇದರ ಮುಂಭಾಗದ ಕಂಬಗಳ ಕೋಣೆ ವಿಶಾಲವೂ ಎತ್ತರವೂ ಆಗಿದೆ. ನಡುವಣ ಎರಡು ಸಾಲು ಕಂಬಗಳು ಸುಮಾರು 70' ಎತ್ತರವಿದ್ದು 33' ಪರಿಧಿಯುಳ್ಳವು. ಇವುಗಳ ಮೇಲೆಲ್ಲ ಹೀರೋಗ್ಲಿಫ್ (ಚಿತ್ರ) ಬರೆವಣಿಗೆ ಇದೆ. ಭವ್ಯತೆ ಮತ್ತು ಬೃಹದರ ಗಾತ್ರಗಳಲ್ಲಿ ಈಜಿಪ್ಟಿನವರಿಗೆ ಇರುವ ಪ್ರೀತಿ ಇದರಲ್ಲಿ ಕಂಡುಬರುತ್ತದೆ. ಆದರೆ ಈ ಕಂಬಗಳು ಒತ್ತಟ್ಟಾಗಿ ಇರುವುದರಿಂದ ಒಳಗಡೆಯ ವೈಶಾಲ್ಯಕ್ಕೆ ಕುಂದು ಬಂದಿರುವುದು ಮಾತ್ರವಲ್ಲದೆ ಇದನ್ನು ಉತ್ತಮ ಅಭಿರುಚಿಯೆನ್ನಲಾಗುವುದಿಲ್ಲ. ಕಂಬಗಳು ಒತ್ತಟ್ಟಾಗಿ ಇರುವುದರಿಂದ ಒಳಗಡೆಯ ವೈಶಾಲ್ಯಕ್ಕೆ ಕುಂದು ಬಂದಿರುವುದು ಮಾತ್ರವಲ್ಲದೆ ಇದನ್ನು ಉತ್ತಮ ಅಭಿರುಚಿಯೆನ್ನಲಾಗುವುದಿಲ್ಲ. ಕಂಬಗಳು ಅನೇಕ ರೀತಿಯವಿದ್ದು ಅವುಗಳ ಶಿಲೋಭಾಗದಲ್ಲಿ ಕಮಲದ ಹೂ, ತಾಳೆಗರಿ ಕಟ್ಟು, ಪಪೈರಸ್ ಮೊದಲಾದ ಆಕಾರದ ತಲೆಕಟ್ಟುಗಳಿವೆ. ಕಂಬಗಳಲ್ಲಿ ಒಂದು ಮಾದರಿ ಗ್ರೀಕ್ ವಾಸ್ತುಶಿಲ್ಪದಲ್ಲಿ ಕಂಡುಬರುವ ಡೋರಿಕ್ ಕಂಬವನ್ನು ಹೋಲುತ್ತದೆ. ಥೀಬ್ಸ್ ಬಳಿ ಲಕ್ಸರ್ ಎಂಬಲ್ಲಿ ರಾಣಿ ಹಟ್ಷೆಪ್ಸೂಟ್ (18ನೆಯ ರಾಜವಂಶ. ಕ್ರಿ. ಪೂ. 1580-1350) ಕಟ್ಟಿಸಿದ ದೇವಾಲಯ ಚಿಕ್ಕದಾದರೂ ಚೆಲುವಾಗಿದೆ. ಇದರ ಗುಡಿಯನ್ನು ಬಂಡೆಕಲ್ಲಿನಲ್ಲಿ ಕೊರೆದಿದ್ದಾರೆ.ಈಜಿಪ್ಟಿನ ಅರಸರು ಸ್ಟೀಲ್ ಎಂದು ಕರೆಯಲಾದ ಸೂಜಿಯಾಕಾರದ ಸ್ತಂಭಗಳನ್ನು ತಮ್ಮ ವಿಜಯಗಳ ಸ್ಮಾರಕವಾಗಿ ನೆಟ್ಟಿರುತ್ತಾರೆ. ಕೊನೆಯದಾಗಿ ಸಾಮಾನ್ಯ ಕಟ್ಟಡಗಳು ಮನೆಗಳು, ಹೆಚ್ಚಾಗಿ ಉತ್ತರಾಭಿಮುಖವಾಗಿದ್ದುದಾಗಿ ಕಂಡುಬರುತ್ತದೆ. ಈಜಿಪ್ಟಿನ ವಾಸ್ತುಶಿಲ್ಪದಲ್ಲಿ ಕಮಾನು ರಚನೆ ಅಷ್ಟಾಗಿ ಕಾಣುವುದಿಲ್ಲ.[೨]

ಚಿತ್ರಕಲೆ[ಬದಲಾಯಿಸಿ]

ರಾಜವಂಶ ಪೂರ್ವಕಾಲದ (ಕ್ರಿ. ಪೂ. 3400ಕ್ಕೂ ಹಿಂದೆ) ಗೋರಿಗಳಲ್ಲಿ ಕೆಲವು ಅಲ್‍ಕಾಬ್ ಎಂಬಲ್ಲಿವೆ. ಇವುಗಳ ಗೋಡೆಗಳಲ್ಲಿ ಬಿಳಿ, ಕೆಂಪು ಮತ್ತು ಕಪ್ಪು ಬಣ್ಣಗಳಲ್ಲಿ ರಚಿತವಾದ ಸರಳ ವ್ಯಕ್ತಿಚಿತ್ರಗಳಿವೆ. ಚಿತ್ರಗಾರಿಕೆಯ ಅತಿ ಪ್ರಾಚೀನ ನಿದರ್ಶನಗಳಿವು. ನಾಲ್ಕನೆಯ ರಾಜವಂಶ ಕಾಲದ (ಕ್ರಿ. ಪೂ. 2900-2750) ಕೆಲವು ವ್ಯಕ್ತಿಗಳ ಶವಾಗಾರಗಳಲ್ಲಿ ಸಾಮಾನ್ಯ ಜನರ ದೈನಂದಿನ ಜೀವನದ ಚಿತ್ರಣವಿದೆ. ಇವುಗಳಲ್ಲಿ ಗಂಡಹೆಂಡಿರು, ಆಳುಕಾಳು, ತಿಂಡಿತಿನಿಸು, ಆಟಬೇಟೆಗಳ ವಿವರಣೆಗಳಿವೆ. ರಾಜರ ಶವಾಗಾರಗಳಲ್ಲಿ ಧಾರ್ಮಿಕ, ಮತಸಂಬಂಧೀ ಚಿತ್ರಗಳು ಮಾತ್ರ ಕಂಡುಬಂದಿವೆ. ನಡುರಾಜ್ಯಕಾಲದಲ್ಲಿ ಅಂದರೆ ಸುಮಾರು 11-12ನೆಯ ರಾಜವಂಶಗಳ ಕಾಲದಲ್ಲಿ (ಕ್ರಿ.ಪೂ. 2160-1788) ಉಬ್ಬಿನ ಕೆತ್ತನೆಯ ಬದಲು ಬಣ್ಣದ ಟೆಂಪೆರಾ ಚಿತ್ರಗಳನ್ನೂ ಗೋಡೆಯಲ್ಲಿ ಬರೆಯತೊಡಗಿದರು. ಇಂಥ ಒಂದು ಚಿತ್ರದಲ್ಲಿ ಸಾಮಾನ್ಯ ಪ್ರಜೆಯೊಬ್ಬ ತನ್ನ ಹೆಂಡತಿಯೊಡನೆ ಕುಳಿತುಕೊಂಡಿದ್ದಾನೆ. ಹತ್ತಿರದಲ್ಲೇ ಆತನ ಮಿತ್ರ ಕುಳಿತಿದ್ದು, ಗಂಡಸರಿಬ್ಬರೂ ಕೈಕೈ ಹಿಡಿದುಕೊಂಡಿದ್ದಾರೆ. ಬಳಿಯಲ್ಲಿ ತಿಂಡಿತಿನಿಸುಗಳಿಂದ ತುಂಬಿದ ಬೋಗುಣಿಯೊಂದು ಮರದ ಪೀಠದ ಮೇಲಿದೆ. ಇದಕ್ಕೂ ಈಚೆಗೆ ಇನ್ನೊಬ್ಬ ಹೆಂಗಸು ನಿಂತಿದ್ದಾಳೆ. ಗಂಡಸರು ಸೊಂಟದಿಂದ ಮೊಣಕಾಲವರೆಗೆ ಮೈ ಮುಚ್ಚುವಂತೆ ಬಿಳಿ ಬಟ್ಟೆಗಳನ್ನು ಉಟ್ಟಿದ್ದಾರೆ. ಹೆಂಗಸರು ಎದೆ ಮುಚ್ಚುವ ನಿಲುವಂಗಿಗಳನ್ನು ಧರಿಸಿದ್ದಾರೆ. ಇವರೆಲ್ಲರೂ ಬಳೆ, ಕಡಗ, ಹಾರಗಳಿಂದ ಅಲಂಕೃತರಾಗಿದ್ದಾರೆ. ಗಂಡಸರನ್ನು ಕಡು ಕಂದುಬಣ್ಣದಲ್ಲೂ ಹೆಂಗಸರನ್ನು ನಸು ಹಳದಿಬಣ್ಣದಲ್ಲೂ ಚಿತ್ರಿಸಿದ್ದಾರೆ. ಎಲ್ಲರನ್ನೂ ಪಾಶ್ರ್ವಮುಖವಾಗಿ ಕಾಣಿಸಿದೆ. ಇಲ್ಲಿನ ಚಿತ್ರಣದ ಶೈಲಿ ಸರಳವೂ ನೈಜವೂ ಆಗಿದೆ. ಶವಾಗಾರಗಳ ಗೋಡೆಯಲ್ಲಿ ರೇಖೆಗಳನ್ನು ಕೆತ್ತಿ ಬಣ್ಣಗಳನ್ನು ಬಳಿಯುವಂಥ ಕೆತ್ತನೆ ಮತ್ತು ಚಿತ್ರಗಾರಿಕೆಯ ಮಿಶ್ರಣವಿರುವ ಶೈಲಿ ಇದೇ ಕಾಲಕ್ಕೆ ಪ್ರಾರಂಭವಾಯಿತು. ಇವನ್ನು ಬಣ್ಣದ ಉಬ್ಬುಚಿತ್ರ ಎಂದು ಕರೆಯಬಹುದು. ಖಾಸಗೀ ವ್ಯಕ್ತಿಗಳ ಶವಾಗಾರಗಳ ಚಿತ್ರಗಳಲ್ಲಿ ಮೃತ ತನ್ನ ಜೀವಮಾನದಲ್ಲಿ ಒಡೆಯನಿಂದ ಸನ್ಮಾನ ಪಡೆಯುತ್ತಿರುವುದು, ಒಡೆಯನ ಹೆಗ್ಗಳಿಕೆಯನ್ನು ತೋರಿಸುವಂಥದು. ಅರಸ ಪರದೇಶದ ರಾಯಭಾರಿಗಳನ್ನು ಬರಮಾಡಿಕೊಳ್ಳುವುದು. ಸಾಮಂತರಿಂದ ಕಪ್ಪ ಕಾಣಿಕೆಗಳನ್ನು ಸ್ವೀಕರಿಸುತ್ತಿರುವುದು-ಇಂಥ ವಿಷಯಗಳ ವಿವರಣೆಯಿದೆ. 18ನೆಯ ರಾಜವಂಶದ ಕಾಲದಲ್ಲಿ (ಕ್ರಿ. ಪೂ. 1580-1350) ಕಲೆ ಸಾಂಪ್ರದಾಯಿಕತೆಯ ಬಂಧನದಿಂದ ಬಿಡುಗಡೆ ಹೊಂದಿತು. ಈ ರೀತಿಯ ಸ್ವತಂತ್ರವಾದ ಚಿತ್ರಣ ಮೊದಲಾದುದು ಮೂರನೆಯ ಅಮೆನ್ ಹೋತೆಪ್ (ಕ್ರಿ. ಪೂ. 1411-1375) ರಾಜನ ಕಾಲದಲ್ಲಿ. ಈ ಅರಸು ಸಿಂಹಾಸನದಲ್ಲಿ ಮೊಣಕಾಲುಗಳ ಮೇಲೆ ತೋಳುಗಳನ್ನು ಊರಿ ಸ್ವಲ್ಪ ಮುಂದಕ್ಕೆ ಬಾಗಿ ಆರಾಮವಾಗಿ ಕುಳಿತಿರುವಂಥ ಚಿತ್ರದಲ್ಲಿ ಈ ಅಸಾಂಪ್ರದಾಯಿಕತೆ ಕಾಣುತ್ತದೆ. ಆಮೇಲಿನ ಅರಸ ಅಕ್ನಾಟನ್ನನ (ಕ್ರಿ. ಪೂ. 1375-1358) ಕಾಲದಲ್ಲಿ, ಅರಸ ತನ್ನ ರಾಣಿಗೆ ಹೂವನ್ನು ಕೊಡುತ್ತಿರುವುದು; ಅರಸು, ರಾಣಿ ಮಾತನಾಡುತ್ತ ಇರುವುದು; ಅರಸನ ಹೆಣ್ಣುಮಕ್ಕಳಿಬ್ಬರು ಬರಿಮೈಯಲ್ಲಿ ಹಾರ, ಒಡವೆಗಳಿಂದ ಮಾತ್ರ ಅಲಂಕೃತರಾಗಿದ್ದು ಒಬ್ಬಳ ಗದ್ದವನ್ನು ಮತ್ತೊಬ್ಬಳು ಕೈಯಿಂದ ಎತ್ತಿ ಪ್ರೀತಿಯಿಂದ ಮಾತನಾಡುತ್ತಿರುವುದು - ಬಹಳ ಸೊಗಸಾಗಿ ಬರೆಯಲ್ಪಟ್ಟಿವೆ. ಇನ್ನೊಂದು ಚಿತ್ರದಲ್ಲಿ ಇಬ್ಬರು ನರ್ತಕಿಯರು ಕುಣಿಯುತ್ತಿರುವುದು, ಸಂಗೀತಗಾರ್ತಿಯರು ವಾದ್ಯಗಳನ್ನು ನುಡಿಸುತ್ತಿರುವುದು ಚಿತ್ರಿತವಾಗಿದೆ. ಈ ಚಿತ್ರದಲ್ಲಿ ಸಂಗೀತಗಾರ್ತಿಯರನ್ನು ಪೂರ್ಣಮುಖವಾಗಿ ಚಿತ್ರಿಸಿದ್ದಾರೆ. ಇದನ್ನು ಅಮರ್ನ ಕಾಲವೆಂದು ಹೇಳಲಾಗಿದೆ. ಆಮೇಲೆ ಆಳಿದ ಟೂಟನ್ಕಾಮೆನ್ ಅರಸನ ಆಳ್ವಿಕೆಯಲ್ಲಿ ಈ ಶೈಲಿ ನಷ್ಟವಾಗಿ ಪುನಃ ಸಾಂಪ್ರದಾಯಿಕತೆ ತಲೆದೋರಿದೆ. ಅಮರ್ನಕಾಲ, ಚಿತ್ರಗಾರಿಕೆಯ ವೈಭವಕ್ಕೆ ಹೆಸರಾಗಿದೆ. ವಿಪುಲತೆ, ಸೌಂದರ್ಯ, ಅನಿರ್ಬಂಧಿತ ಚಿತ್ರಣ-ಇವು ಈ ಕಾಲದ ವೈಶಿಷ್ಟ್ಯ. ಸೂರ್ಯದೇವನ ಒಂದು ವಿನ್ಯಾಸದಲ್ಲಿ ಸೂರ್ಯನ ವೃತ್ತ. ಸುತ್ತಲೂ ಕಿರಣಗಳ ಕೊನೆಯಲ್ಲಿ ಎರಡು ಕೈಗಳು. ಕೈಗಳಲ್ಲಿ ಈಜಿಪ್ಟಿನವರ ಜೀವನದ ಸಂಕೇತ ಇರುವ ಚಿತ್ರಣ ನವ್ಯವಾಗಿದೆ.

ಶಿಲ್ಪ[ಬದಲಾಯಿಸಿ]

ಶಿಲ್ಪದ ಪ್ರಾಚೀನ ನಿದರ್ಶನಗಳೆಂದರೆ ರಾಜವಂಶಪೂರ್ವಕಾಲದ ಗೋರಿಗಳಲ್ಲಿ ದೊರೆತ ದಂತದ ಕೆತ್ತನೆಗಳು. ಇವುಗಳಲ್ಲಿ ಉದ್ದದ ಗಡ್ಡವಿರುವ ಮನುಷ್ಯರ ತಲೆಗಳನ್ನು ಕೆತ್ತಿದೆ. ಈ ಕಾಲದ ಕೆಲವು ಪ್ರಾಣಿಗಳ ಮೂರ್ತಿಗಳೂ ಕಲ್ಲಿನಲ್ಲಿ ಕೆತ್ತಿದ ಕಲಶಗಳೂ ದೊರೆತಿವೆ. ಮಣ್ಣಿನಲ್ಲಿ ಮಾಡಿ ಬಣ್ಣ ಬಳಿದಿರುವ ಸ್ತ್ರೀಮೂರ್ತಿಗಳು ಇವೆ. ಕೆತ್ತನೆ ನಾಜೂಕಾಗಿಲ್ಲ. ಒಂದನೆಯ ರಾಜವಂಶ ಕಾಲದ (ಕ್ರಿ.ಪೂ. 3400-3200) ಅರಸುಗಳಾದ ಇಪ್. ನಾರ್ಮರ್, ಅಹಮೀನ್ ಇವರ ಚಿತ್ರಗಳು ಉಬ್ಬಿನ ಕೆತ್ತನೆಯಲ್ಲಿ ದೊರೆತಿವೆ. ಈ ಅರಸರು ಉದ್ದನೆಯ ಶಂಖಾಕೃತಿಯ ಟೊಪ್ಪಿಗೆಗಳನ್ನು ಧರಿಸಿದ್ದಾರೆ. ಕೆಲವಲ್ಲಿ ಇವರು ಬಂಧಿತ ಶತ್ರುಗಳನ್ನು ದಂಡಿಸುತ್ತಿದ್ದಾರೆ. ಕೈರೊ ಸಂಗ್ರಹಾಲಯದ ಒಂದು ಫಲಕದಲ್ಲಿ ಉದ್ದನೆಯ ನಿಲುವಂಗಿ ಮತ್ತು ಶಂಖಾಕೃತಿಯ ಟೊಪ್ಪಿಗೆ ಧರಿಸಿರುವ ದಂತದ ಪ್ರತಿಮೆಯೂ ದೊರೆತಿದೆ. ಕೆತ್ತನೆಗಳಲ್ಲೆಲ್ಲ ಜನರನ್ನು ಪಾಶ್ರ್ವಮುಖವಾಗಿ ಕಾಣಿಸಿದ್ದಾರೆ. ಕಲ್ಲಿನ ಕಲಶಗಳು, ಬಳಪದ ಫಲಕಗಳ ಮೇಲಿನ ಕೆತ್ತಿದ ಪ್ರಾಣಿಗಳ ಉಬ್ಬು ಕೆತ್ತನೆಗಳು, ಮರದ ಕೆತ್ತನೆಗಳು, ಕಲಶಗಳ ಮೇಲಿನ ಉಬ್ಬು ಕೆತ್ತನೆಗಳು ದೊರಕಿವೆ. ಇವುಗಳಲ್ಲೆಲ್ಲ ಶೈಲಿ ಪುರಾತನವಾಗಿದ್ದು ಕಲ್ಲಿನಲ್ಲಿಯ ಕೆತ್ತನೆ ನಾಜೂಕಾಗಿಲ್ಲ. ಮೂರನೆಯ ರಾಜವಂಶ ಕಾಲದ (ಕ್ರಿ. ಪೂ. 2980-2900) ಸೋಸೆರ್ ಅರಸನ ಮಂತ್ರಿ ಇಮ್‍ಹೋತೆಪ್ ಎಂಬುವನ ಮೂರ್ತಿ ದುಂಡುಶಿಲ್ಪದ ಸುಂದರ ನಿದರ್ಶನ. ಈ ಮೂರ್ತಿಶಿಲ್ಪದಲ್ಲಿ ಆತ ಕುಳಿತುಕೊಂಡಿದ್ದು ಮೊಣಕಾಲ ಮೇಲಿನ ಬಿಡಿಸಿರುವ ಚಂದ್ರಿಕೆಯನ್ನು (ಸ್ಕ್ರೋಲ್) ನೋಡುತ್ತಿರುವಂತೆ ಕಾಣಿಸಿದೆ. ಸೋಸೆರ್ ಅರಸನ ಸಮಾಧಿಯಲ್ಲಿ ಸಿಕ್ಕಿದ ಅರಸನ ಪ್ರತಿಮೆ ಸುಂದರವಾಗಿ ಜೀವಕಳೆಯಿಂದ ತುಂಬಿದೆ. ಈವರೆಗೆ ಈಜಿಪ್ಟಿನವರ ಕಲೆಯಲ್ಲಿ ಕಾಣಬರುವ ಸಿಂಹ, ಬ್ಯಾಬಿಲಾನ್ ಸಿಂಹದಂತೆ ಉರುಟು ಮುಸುಡಿನ, ಹಲ್ಲುಕಿರಿಯುವ ಪ್ರಾಣಿಯಾಗಿದ್ದು, ಈ ಕಾಲದಲ್ಲಿ ಬಾಯಿ ಮುಚ್ಚಿದ ಗಂಭೀರವಾದ ಸಿಂಹದ ಕೆತ್ತನೆ ಪ್ರಾರಂಭವಾಯಿತು. ದುಂಡುಗಿನ ಶಿಲ್ಪ ಚೆನ್ನಾಗಿದ್ದರೂ ಪರಿಪೂರ್ಣತೆಯನ್ನು ಪಡೆದಿಲ್ಲ. ಇದು ಮುಂದೆ 4ನೆಯ ರಾಜವಂಶ ಕಾಲದಲ್ಲಿ (ಕ್ರಿ.ಪೂ. 2900-2750) ಪೂರ್ಣತೆಯನ್ನು ಹೊಂದುತ್ತದೆ. ಈ ಕಾಲದ ಕುಫು ಅರಸರ ಮೂರ್ತಿ ಡಯೊರೈಟ್ ಕಲ್ಲಿನಲ್ಲಿ ಕೆತ್ತಲ್ಪಟ್ಟು ಅತಿ ಸುಂದರವಾಗಿದೆ. ಅರಸ ತನ್ನ ಬಲಗೈಯನ್ನು ಮುಷ್ಟಿ ಕಟ್ಟಿ ಎಡಗೈಯನ್ನು ಎಡತೊಡೆಯ ಮೇಲಿಟ್ಟು ಕೂತಿರುವಂತೆ ಕಾಣಿಸಿದ ಈ ಮೂರ್ತಿಯ ಮುಖ ಶಾಂತವೂ ಸುಂದರವೂ ಆಗಿದೆ. ಅರಸ ಆ ಕಾಲದ ಸಾಂಪ್ರದಾಯಿಕ ಶಿರೋಭೂಷಣವನ್ನು ಧರಿಸಿದ್ದಾನೆ. ಇದೇ ಕಾಲದ ಮೆನ್‍ಕೌರೆ ಮತ್ತು ಅವನ ರಾಣಿಯರ ಅಲ್ಲದೆ ಪ್ರಾಂತ್ಯ ವಿಭಾಗದ ದೇವಿಯರ ಆಕೃತಿಗಳನ್ನು ಸುಣ್ಣದ ಕಲ್ಲಿನಲ್ಲಿ ವರ್ಣರಂಜಿತವಾಗಿ ಮೂಡಿಸಿದ್ದಾರೆ. ಸ್ಫಟಿಕ, ಬಿಳಿಕಲ್ಲು, ಕಪ್ಪಗಿನ ಕಲ್ಲುಗಳನ್ನು ಉಪಯೋಗಿಸಿ ಸೂಕ್ಷ್ಮವಾಗಿ ಈ ಪ್ರತಿಮೆಗಳಲ್ಲಿ ಕೆತ್ತಲ್ಪಟ್ಟ ಕಣ್ಣುಗಳು ಉತ್ಖನನ ಮಾಡುವ ವಿದ್ವಾಂಸರನ್ನು ಚಕಿತಗೊಳಿಸಿದುವು. ಈ ರೀತಿಯ ಕಣ್ಣುಗಳು ಬ್ಯಾಬಿಲಾನ್ ಮೂರ್ತಿಗಳಲ್ಲೂ ಕಾಣಬರುತ್ತವೆ. ರೇಖೆ ಮತ್ತು ಆಕೃತಿಗಳು ಈ ಕಾಲಕ್ಕೆ ಬಹಳ ಚೆಲುವಾಗಿದ್ದು, ಈಜಿಪ್ಟಿಯನ್ ಎಂಬ ವಿಶೇಷ ಶೈಲಿ ಇಲ್ಲಿಂದ ಮೊದಲಾಗುತ್ತದೆ. 5ನೆಯ ರಾಜವಂಶ ಕಾಲ (ಕ್ರಿ. ಪೂ. 2750-2625) ದಲ್ಲಿ ದೇವಾಲಯಗಳಲ್ಲಿ ಉಪಯೋಗಿಸಲ್ಪಡುವ ಉಬ್ಬಿನ ಕೆತ್ತನೆಗಳು ಸಾಂಪ್ರದಾಯಿಕತೆಯನ್ನು ತಳೆದು ಬದಲಾವಣೆಗಳಿಲ್ಲದೆ ಎರಡು ಸಾವಿರ ವರ್ಷಗಳವರೆಗೆ ಮುಂದುವರಿದಿದೆ. ಈ ಕಾಲದ ಉಬ್ಬಿನ ಕೆತ್ತನೆಗಳಲ್ಲಿ ನೀರಾನೆಗಳನ್ನು ಬೇಟೆಯಾಡುವುದು. ಚಿಕ್ಕಮಕ್ಕಳು ಕೈ ಕೈ ಹಿಡಿದು ಹಿಂದಕ್ಕೆ ಮಾಲಿಕೊಂಡು ತಿರುಗು ಬೊಗರಿ ಆಟವಾಡುವುದು, ಮುಂತಾದುವನ್ನು ಕಾಣಬಹುದು. ಕೈಯಲ್ಲಿ ಪೈರಸ್ ಚಂದ್ರಿಕೆಯನ್ನು ಹಿಡಿದು ಕುಳಿತಿರುವ ಬರೆವಣಿಗೆಯ ಸುಂದರಮೂರ್ತಿ, ಮರದಲ್ಲಿ ಕೆತ್ತಿದ ಕಾಪರ್ ಎಂಬ ಪೂಜಾರಿಯ ದುಂಡು ಹಸನ್ಮುಖ ಮೂರ್ತಿ ಈ ಕಾಲದ ವ್ಯಕ್ತಿಚಿತ್ರಣದ ಉತ್ತಮ ಉದಾಹರಣೆಗಳು. ಒಂದನೆಯ ಪೆಪಿ ಮತ್ತು ಅವನ ಮಗನ ತಾಮ್ರದ ಮೂರ್ತಿಗಳು ಬಹಳ ಚೆನ್ನಾಗಿವೆ. ಇವು ಎರಕದ ಮೂರ್ತಿಗಳಲ್ಲ. ತಾಮ್ರವನ್ನು ಬಡಿದು ರೂಪಿಸಿದಂಥವು.

ಮೂರನೆಯ ಮೆನ್ ಹೋತೆಪ್‍ನ ಆಳ್ವಿಕೆ[ಬದಲಾಯಿಸಿ]

11, 12ನೆಯ ರಾಜವಂಶಗಳ ಕಾಲಕ್ಕೆ ಮೂರನೆಯ ಮೆನ್ ಹೋತೆಪ್‍ನ ಆಳ್ವಿಕೆಯಲ್ಲಿ ಒಬ್ಬ ಚತುರ ಶಿಲ್ಪಿಯ ಕೆಲಸ ಅಪಕ್ವವಾದರೂ ಮುಂದಿನ ಬೆಳವಣಿಗೆಯ ಸೂಚನೆಯನ್ನು ಕೊಡುತ್ತದೆ. ಡೈರ್ ಎಲ್ ಬ್ರಾಹಿಯ ಸಮಾಧಿ ದೇಗುಲದಲ್ಲಿ ಇದನ್ನು ಕಾಣಬಹುದು. 12ನೆಯ ರಾಜವಂಶ (ಕ್ರಿ. ಪೂ. 2000-1788) ಕಾಲದ ಒಂದನೆಯ ಅಮೆನ್ ಆಮ್ಹೆತ್ ರಾಜನ ಕಾಲಕ್ಕೆ ಉಬ್ಬಿನ ಕೆತ್ತನೆಯೂ ಸೆನುಸ್ರೆಟ್ ರಾಜನ ಕಾಲಕ್ಕೆ ಕೊರೆದ ಉಬ್ಬಿನ (ಸಂಕ್ ರಿಲೀಫ್) ಕೆತ್ತನೆಯೂ ಹೆಚ್ಚಾಗಿ ಹರಡಿದುವು. ವ್ಯಕ್ತಿ ಚಿತ್ರಣದ ಸುಂದರ ನಿದರ್ಶನಗಳು ಅಬಿಡಾಸ್ ಮತ್ತು ಡೈರ್ ಎಲ್ ಬ್ರಾಹಿಯಲ್ಲಿ ದೊರೆತ ಮೂರನೆಯ ಸೆನುಸ್ರೆಟ್ ರಾಜನ ಶಿಲಾ ಮೂರ್ತಿಗಳು. ಇಲ್ಲಿ ಮುಖದ ಸಾದೃಶ್ಯವಿದೆ. ಉಚ್ಚಮಟ್ಟದ ಶಿಲ್ಪಚಾತುರ್ಯವನ್ನು ಹೊಂದಿದ ಇವನ ಇನ್ನೊಂದು ಕಪ್ಪುಕಲ್ಲಿನ ಚಿಕ್ಕಮೂರ್ತಿಯೂ ದೊರೆತಿದೆ. ಇತರ ಜಾತಿಯ ಕಲ್ಲುಗಳಲ್ಲಿ ಕೆತ್ತಿದ ಮೂರ್ತಿಗಳೂ ಇವೆ. ದಂತದ ಕೆತ್ತನೆ, ಅಮೂಲ್ಯವಾದ ಕಲ್ಲುಗಳಲ್ಲಿ ಕೆತ್ತನೆ, ಈ ಕಾಲಕ್ಕೆ ಜನಪ್ರಿಯವಾಗುತ್ತ ಬಂದಿತ್ತು. ಬಂಗಾರದ ವರ್ಣಲೇಪಗಳಿಂದ ಕೂಡಿದ ಒಂದನೆಯ ಸೆನುಸ್ರೆಟ್ ಅರಸನ ಚಿಕ್ಕ ಮರದ ಮೂರ್ತಿ, ಕೈಯಲ್ಲಿ ರಾಜದಂಡವನ್ನು ಹಿಡಿದಿದ್ದು. ಬಹಳ ಸುಂದರವಾಗಿದೆ (ಅಮೆರಿಕದ ಮೆಟ್ರೊಪಾಲಿಟಿನ್ ಸಂಗ್ರಹಾಲಯ). 13ನೆಯ ರಾಜವಂಶಕಾಲದ (ಕ್ರಿ. ಪೂ. 1788ರಿಂದ) ಶಿಲ್ಪಕಲೆಯ ಅವನತಿ ಪ್ರಾರಂಭವಾಯಿತು. ಈ ಕಾಲದ ಅರಸುಗಳ ಪ್ರತಿಮೆಗಳು ತೆಳ್ಳಗೆ, ಉದ್ದನೆಯವಾಗಿದ್ದು, ಮುಖ ಕುತ್ತಿಗೆಗಳು ಉದ್ದವಾಗಿಯೂ ತಲೆ ದೇಹಪ್ರಮಾಣಕ್ಕೆ ಕಿರಿದಾಗಿಯೂ ಇವೆ.

ಹೊಸರಾಜ್ಯಕಾಲ[ಬದಲಾಯಿಸಿ]

18ನೆಯ ರಾಜವಂಶಕಾಲದಿಂದ (ಕ್ರಿ. ಪೂ. 1580-1350) ಪ್ರಾರಂಭವಾಗುವ ಹೊಸರಾಜ್ಯಕಾಲ ಈಜಿಪ್ಟ್ ದೇಶದ ಅತಿ ಉನ್ನತಿಯ ಕಾಲ. ಅರಾಜಕತೆಯಿಂದ ಮತ್ತು ಹಿಕ್ಸೋಸ್ ಆಳ್ವಿಕೆಯಿಂದ ನಷ್ಟವಾದ ನಗರ, ದೇವಾಲಯಗಳು ಈಗ ಪುನಃ ನಿರ್ಮಾಣಗೊಂಡುವು. ಅಮಾಸಿಸ್‍ನಿಂದ ಟುಟುಂಖಾಮೆನ್‍ವರೆಗಿನ ಅರಸುಗಳೆಲ್ಲರೂ ಕಲೆಯನ್ನು ತುಂಬ ಪ್ರೋತ್ಸಾಹಿಸಿದರು. ಈ ಕಾಲದಲ್ಲಿ ಬೃಹದಾಕಾರದ ಮೂರ್ತಿಗಳ ಕೆತ್ತನೆ ಪ್ರಾರಂಭವಾಯಿತು. 4ನೆಯ ರಾಜವಂಶಕಾಲದಲ್ಲಿ ಸ್ಫಿಂಕ್ಸ್‍ನ ಬಹು ದೊಡ್ಡ ಮೂರ್ತಿಯೊಂದನ್ನು (187' ಉದ್ದ 66' ಎತ್ತರ) ಕೆತ್ತಿದ್ದರು. ಅರಸುಗಳನ್ನು ಅಮಾನುಷ ಗಾತ್ರದಲ್ಲಿ ಚಿತ್ರಿಸುತ್ತಿರಲಿಲ್ಲ. ಬ್ರಿಟಿಷ್ ಮ್ಯೂಸಿಯಂನಲ್ಲಿರುವ 3ನೆಯ ಅಮೆನ್ ಹೋತೆಪ್‍ನ ಬೃಹದಾಕಾರದ ತಲೆ ಇವುಗಳಲ್ಲಿ ಪ್ರಾಯಶಃ ಮೊದಲಿನದು. ಕಾರ್ನಾಕ್‍ನಲ್ಲಿರುವ ಅಕ್ನಾಟನ್ನನ ಮೂರ್ತಿ ಇದಕ್ಕಿಂತ ಚೆನ್ನಾಗಿದೆ. ನೈಲ್ ನದಿಯ ಬಳಿ ಎರಡು ಬಹಳ ದೊಡ್ಡ ಮೂರ್ತಿಗಳು 3ನೆಯ ಅಮೆನ್ ಹೋತೆಪನ ಮೂರ್ತಿಗಳು. ಕೈರೊ ಮ್ಯೂಸಿಯಂನಲ್ಲಿರುವ 3ನೆಯ ಥಟ್ಮೋಸ್ ಅರಸನ ಮೂರ್ತಿ ಚೆನ್ನಾಗಿದೆ. ಚಿಕ್ಕ ಮೂರ್ತಿಗಳು ಶೈಲಿಯಲ್ಲಿ ಸಾಂಪ್ರದಾಯಿಕವಾಗಿದ್ದರೂ ನೈಜತೆಯಿಂದ ತುಂಬಿವೆ. ವೇಷಭೂಷಣಗಳು ಸಮಕಾಲೀನವಾಗಿವೆ. ರಾಣಿ ಹಟ್ಷೆಪ್ಸುಟ್ ನೌಕೆಗಳನ್ನು ಪಂಟ್ ಎಂಬಲ್ಲಿಗೆ ಕಳುಹಿಸುತ್ತಿರುವ, ಕೆತ್ತಿ ಬಣ್ಣ ಬಳೆದ ಚಿತ್ರಗಳು ಚೆನ್ನಾಗಿವೆ. ಅಮರ್ನಕಾಲದ ಅಕ್ನಾಟನ್ನನ ಮೂರ್ತಿಯಲ್ಲಿ ಅರಸನನ್ನು ಸಾಂಪ್ರದಾಯಿಕವಾಗಿ ಚಿತ್ರಿಸುವ ಬದಲು ನೈಜ ಶೈಲಿಯಲ್ಲಿ ಚಿತ್ರಿಸಲಾಗಿದೆ. ತೆಳ್ಳಗಿನ ದೇಹ, ಭಾವುಕ ಮುಖ, ಸ್ವಲ್ಪ ಜೋಲುಹೊಟ್ಟೆಯ ಈ ಮೂರ್ತಿ ಸಂಪ್ರದಾಯಕ್ಕೆ ನೇರ ವಿರೋಧವಾಗಿದೆ. ಮೂರ್ತಿಶಿಲ್ಪದ ಸೌಂದರ್ಯದ ಪರಮಾವಧಿಯನ್ನು ಬರ್ಲಿನ್ ಮ್ಯೂಸಿಯಂನಲ್ಲಿರುವ ರಾಣಿ ನೆಫರ್ ಟಿಟಿಯ ತಲೆಯಲ್ಲಿ ಕಾಣಬಹುದು. ಬಣ್ಣ ಬಳಿಯಲ್ಪಟ್ಟು ಸೂಕ್ಷ್ಮವಾಗಿ ಚಿತ್ರಿತವಾದ ಕಣ್ಣುಗಳುಳ್ಳ ಈ ಶಿಲಾ ಮೂರ್ತಿಯಲ್ಲಿ ಅವಳ ಸೌಂದರ್ಯ, ಸ್ವಭಾವಗಳು ಚೆನ್ನಾಗಿ ಮೂಡಿವೆ. ಅಗೆತದಲ್ಲಿ ಒಬ್ಬ ಶಿಲ್ಪಯ ಮನೆ ಬೆಳಕಿಗೆ ಬಂದಿದ್ದು, ಅದರಲ್ಲಿ ಹಲವಾರು ವ್ಯಕ್ತಿಗಳ ಮುಖಗಳ ಅಚ್ಚುಗಳು (ಮಾಸ್ಕ್ಸ್) ದೊರೆತಿವೆ. 19, 20ನೆಯ ರಾಜವಂಶ (ಕ್ರಿ.ಪೂ. 1350-1094) ಕಾಲದ ಕೆಲವು ಕೆತ್ತನೆಗಳಲ್ಲಿ ಮಾತ್ರ ಸೂಕ್ಷ್ಮತೆ, ಸೌಂದರ್ಯಗಳಿವೆ. ಈಗ ಟ್ಯುರಿನ್‍ನಲ್ಲಿರುವ ಎರಡನೆಯ ರ್ಯಾಮ್ಸೆಸ್ ಮೂರ್ತಿ ಈಜಿಪ್ಟಿನ ಕಲೆಯ ಉನ್ನತಿಯ ಕೊನೆಯ ನಿದರ್ಶನ. ರ್ಯಾಮ್ಸೆಸ್‍ನ ದಂಡಯಾತ್ರೆಗಳನ್ನು ಚಿತ್ರಿಸುವ ಅನೇಕ ಉಬ್ಬಿನ ಕೆತ್ತನೆಗಳು ಬೃಹತ್ಪ್ರಮಾಣದಲ್ಲಿ ರ್ಯಾಮೇಸಿಯಮ್‍ನಲ್ಲಿ ಕೆತ್ತಲ್ಪಟ್ಟಿದ್ದರೂ ಅವುಗಳಲ್ಲಿ ಗಾತ್ರಕ್ಕೇ ಪ್ರಾಧಾನ್ಯವಲ್ಲದೆ ಅಭಿರುಚಿಗಲ್ಲ. ರೇಖೆ ಆಕೃತಿಗಳು ಸ್ವಲ್ಪ ಕೆಟ್ಟಿವೆ. ಸ್ವಲ್ಪವಾಗಿ ಏಷ್ಯದ ಪ್ರಭಾವವೂ ಅಲ್ಲಲ್ಲಿ ಕಾಣುತ್ತದೆ.

ಮಣ್ಣಿನ ಪಾತ್ರೆ, ಕಲಶಗಳು ಮತ್ತು ಇತರ ಕಲೆಗಳು[ಬದಲಾಯಿಸಿ]

ರಾಜವಂಶಪೂರ್ವ ಕಾಲದ ಕಲ್ಲಿನ ಪಾತ್ರೆಗಳಲ್ಲಿ, ಮಡಕೆಗಳಲ್ಲಿ ತೀರ ಹಳೆಯವು ಅಷ್ಟು ಚೆನ್ನಾಗಿಲ್ಲ. ಮುಂದಿನವು ಕೆಂಪು ಮತ್ತು ಕಪ್ಪು ಹೊಳಪಿನ ಹೊರಮೈಯುಳ್ಳವು. ಇದರಲ್ಲಿ ಕೆಲವು ಪಾತ್ರೆಗಳ ಮೇಲೆ ಪ್ರಾಣಿಗಳ ಗೀರು ಚಿತ್ರಗಳಿವೆ. ಅಲ್ಪಸ್ವಲ್ಪವಾಗಿ ಕೆಂಪು ಹೊರಮೈಯಲ್ಲಿ ಬಿಳಿಯ ಅಲಂಕಾರಿಕ ರೇಖೆಗಳು, ಪ್ರಾಣಿಗಳ ಚಿತ್ರಗಳು, ಅಪೂರ್ವವಾಗಿ ದೋಣಿಗಳ ಚಿತ್ರಗಳು ಇವೆ. ಆಮೇಲಿನಲ್ಲಿ ಹಳದಿ ಕಂದು ಹೊರಮೈಯ ಮೇಲೆ ಕೆಂಪು ಬಣ್ಣದಲ್ಲಿ ಹಡಗುಗಳು, ಜಲ್ಲೆಗಳು, ಗಂಡಸರು, ಹೆಂಗಸರು ಮತ್ತು ಪ್ರಾಣಿಗಳ ಚಿತ್ರಗಳಿವೆ. ಇವೆಲ್ಲ ಆ ಕಾಲದ ಆಳವಿಲ್ಲದ ಗೋರಿಗಳಲ್ಲಿ ದೊರಕಿವೆ. ದುಃಖಿಸುತ್ತಿರುವ ಬಣ್ಣದ ಸ್ತ್ರೀಮೂರ್ತಿಗಳು ದೊರಕಿವೆ. ಇವುಗಳ ಕೆಲಸ ನಾಜೂಕಾಗಿಲ್ಲ. ಕಲ್ಲಿನ ಕಲಶಗಳು ಸಾಧಾರಣವಾಗಿವೆ. ಬಳಪದ ಕಲ್ಲಿನ ಕೆಲವು ದೊಡ್ಡ ಫಲಕಗಳಲ್ಲಿ ಬಿಲ್ಲುಬಾಣಗಳನ್ನು ಹಿಡಿದಿರುವ ಬೇಟೆಗಾರರ ಮತ್ತು ಪ್ರಾಣಿಗಳ ಚಿತ್ರಗಳಿವೆ. ಹಳೆಯ ರಾಜ್ಯ ಕಾಲದಲ್ಲಿ ಮಡಕೆಗಳಿಗೆ ಕುಂಬಾರನ ಚಕ್ರದ ಉಪಯೋಗವಾಗಲಾರಂಭವಾಯಿತು. ರಾಜವಂಶ ಪೂರ್ವಕಾಲದಲ್ಲಿ ಪ್ರಾರಂಭವಾಗಿದ್ದ ನೀಲಿ ಮೆರುಗುಳ್ಳ ಫೆಯಾನ್ಸ್ ವಸ್ತುಗಳಲ್ಲಿ ಸುಧಾರಣೆಯನ್ನು ಕಾಣಬಹುದು. ಸ್ಟೆಪ್ ಪಿರಮಿಡ್ಡಿನೊಳಗಿನ ಒಂದು ಕೋಣೆಯಲ್ಲಿ ಸುಮಾರು 30 ಸಾವಿರ ಕಲ್ಲಿನ ಕಲಶಗಳು ದೊರಕಿದ್ದು ಅವುಗಳಲ್ಲಿ ಅನೇಕ ಕಲಶಗಳು ಈಜಿಪ್ಟಿನ ಕಲೆಗೆ ರತ್ನಪ್ರಾಯವಾಗಿವೆ. ಕೆಂಪು ಮಿರುಗುಳ್ಳ ಮಡಕೆಗಳು, ಕಲಶ ಪೀಠಗಳು, ಮಣಿ ಫಲಕಗಳು ಚೆನ್ನಾಗಿವೆ. ಚಂದ್ರಕಾಂತಶಿಲೆಯ ಕೆತ್ತನೆಯಿರುವ ಸುಂದರವಾದ ಲೇಪದಾನಿ ಕಲಶಗಳು ದೊರಕಿವೆ. 7ನೆಯ ರಾಜವಂಶದ (ಕ್ರಿ.ಪೂ. 2431) ವರೆಗೆ ಮಣ್ಣಿನ ಪಾತ್ರೆಗಳು ಚೆನ್ನಾಗಿದ್ದು, ಆಮೇಲೆ ಕ್ರಮವಾಗಿ ಅವನತಿ ಹೊಂದುತ್ತ 12ನೆಯ ರಾಜವಂಶದ ಕಾಲಕ್ಕೆ ನಷ್ಟವಾಗಿವೆ. ಈ ಕಾಲದ ನಿತ್ಯೋಪಯೋಗಿ ಮಡಕೆಗಳು ಸುಂದರವಾಗಿಲ್ಲ. ಹಳೆಯ ರಾಜ್ಯ ಕಾಲದಲ್ಲಿ ನಸು ನೀಲಿ ಫೆಯಾನ್ಸಿನ ನೀರಾನೆಯೇ ಮೊದಲಾದ ಪ್ರಾಣಿಮೂರ್ತಿಗಳೂ ಈ ಮನುಷ್ಯಮೂರ್ತಿಗಳೂ ಚೆನ್ನಾಗಿವೆ. ಕಲ್ಲಿನ ಕಲಶಗಳಿಗೂ ಈ ಕಾಲದಲ್ಲಿ ಹೊಳಪನ್ನು ಕೊಡುತ್ತಿದ್ದರು. ನಿಜವಾದ ಗಾಜಿನ ಪ್ರಥಮ ಬಳಕೆ ಕೂಡ ಇದೇ ಕಾಲದಲ್ಲಿ ಆದಂತೆ ತೋರುತ್ತದೆ. ಮೊದಲಿಗೆ ನಾಜೂಕಿಲ್ಲದಿದ್ದರೂ ಕೆಲವೇ ವರ್ಷಗಳಲ್ಲಿ ತೆಳ್ಳಗಿನ ಪಾರದರ್ಶಕವಲ್ಲದ ಹಸರುಗಾಜು ಹಾಗೂ ಗಾಜು ಮತ್ತು ಚಿನ್ನಗಳ ಬಳಕೆಯಿರುವ ಸುಂದರವಾದ ಕಲಶ ಪಾತ್ರೆಗಳು, ಈ ಕಾಲದಲ್ಲಿ ನಿರ್ಮಿತವಾದುವು. ಹೊಸ ರಾಜ್ಯ ಕಾಲದ ಗಾತ್ರಪ್ರಿಯತೆಯ ಪ್ರತೀಕವಾಗಿ ದೊಡ್ಡ ದೊಡ್ಡ ಚಂದ್ರಕಾಂತಶಿಲೆಯ ಕಲಶಗಳು ದೊರಕಿವೆ. 19ನೆಯ ರಾಜವಂಶ (ಕ್ರಿ. ಪೂ. 1350-1205) ಕಾಲದ ಚಂದ್ರಕಾಂತಶಿಲೆಯ ಬೋಗುಣಿಗಳು, ಕಲಶಗಳು ಚೆನ್ನಾಗಿವೆ. ಈ ಕಾಲದಲ್ಲಿ ಹೂಜಿಯಾಕಾರದ ಪಾತ್ರೆಗಳು ಜನಪ್ರಿಯವಾಗುತ್ತ ಬಂದುವು. ಮಡಕೆ ಕುಡಿಕೆಗಳಲ್ಲಿ ನೀಲಿ, ಹಳದಿ, ನೇರಳೆ, ಕಂದು, ಹಸುರೇ ಮೊದಲಾದ ಬಹುವರ್ಣದ ಹೊಳಪುಳ್ಳವು ಕಾಣಬರುತ್ತದೆ. ಬಹುವರ್ಣದ ಗಾಜಿನ ಕಲಶಗಳೂ ಈ ಕಾಲದವು. ನೀಲವರ್ಣದ ಗಾಜು ಹೆಚ್ಚು ಬಳಕೆಯಲ್ಲಿತ್ತು. ಕಪ್ಪು ಬಣ್ಣದ ಗಾಜು ತೀರ ಅಪೂರ್ವ.

ಅಲಂಕಾರಿಕ ವಸ್ಥುಗಳು[ಬದಲಾಯಿಸಿ]

ಒಡವೆಗಳು, ಆಭರಣಗಳು, ಬೆಳ್ಳಿಯ ಮತ್ತು ಬಂಗಾರದ ಪಾತ್ರೆ ಬಟ್ಟಲುಗಳು ಕಾಲಾನುಕ್ರಮವಾಗಿ ಹಳೇ ರಾಜ್ಯಕಾಲದಿಂದ ಮೊದಲಾಗಿ ದೊರಕುತ್ತವೆ. ಕೆಂಪು ಕಲ್ಲು ಕೂರಿಸಿದ ಚಿನ್ನದ ಕಡಗಗಳು, ಗೋಮೇದಿಕ ಮತ್ತು ಚಿನ್ನ ಕೂಡಿಸಿದ ರಾಜ ದಂಡ, ಹಳೇ ರಾಜ್ಯಕಾಲದಲ್ಲಿ ಬಳಕೆಯಲ್ಲಿ ಇದ್ದುವು. ಹೆಟೆಫೆರಸ್ ರಾಣಿಯ ಶವಾಗಾರದಲ್ಲಿ ಸುಂದರವಾದ ನಗಗಳು ದೊರಕಿವೆ. ಈ ಕಾಲದ ಬೆಳ್ಳಿಯ ಬೋಗುಣಿಗಳು ಅಪೂರ್ವವಾಗಿದ್ದು, ಈಗ ಕೈರೊ ಸಂಗ್ರಹಾಲಯದಲ್ಲಿವೆ. ನಡುರಾಜ್ಯ ಕಾಲದ ಒಡವೆಗಳು ಬಲು ಚೆನ್ನಾಗಿವೆ. ಈಜಿಪ್ಷಿಯನ್ ಆಭರಣಗಳಲ್ಲಿ ಅತ್ಯಂತ ಸುಂದರವಾದುವು ಈ ಕಾಲದವು. ಕುಂದಣದ ಕೆಲಸವಿರುವ ಎದೆಯ ಪದಕ ಒಂದರಲ್ಲಿ ಹದ್ದಿನ ರೂಪದ ದೇವಿಯ ಹರಡಿದ ರೆಕ್ಕೆಗಳ ಅಡಿಯಲ್ಲಿ 3ನೆಯ ಅಮೆನ್ ಅಮೆತ್ ರಾಜವೈರಿಗಳನ್ನು ದಂಡಿಸುತ್ತಿರುವ ಚಿತ್ರಣ ಸೂಕ್ಷ್ಮವಾಗಿಯೂ ಸುಂದರವಾಗಿಯೂ ಕೆತ್ತಲ್ಪಟ್ಟಿದೆ. ಸ್ಕರಬ್ ಎಂಬ ಕೀಟವಿಶೇಷದ ಮಾದರಿಗಳು ಈ ಕಾಲದಲ್ಲಿ ಜನಪ್ರಿಯವಾದುವು. ಹೊಲ, ಕಣಜಗಳಲ್ಲಿ ಜನ ಕೆಲಸಮಾಡುತ್ತಿರುವ, ಗದ್ದೆ ಉಳುವ, ಮೊದಲಾದ ಕೆಲಸಗಳಲ್ಲಿ ಪ್ರವೃತ್ತರಾಗಿರುವಂತೆ ತೋರಿಸುವ ಚಿಕ್ಕ, ನಾಜೂಕಿಲ್ಲದ ಅನೇಕ ಮೂರ್ತಿಗಳು ಗೋರಿಗಳಲ್ಲಿ ದೊರಕಿವೆ. ಕೆತ್ತನೆಯಿರುವ ಕುರ್ಚಿ, ಮಂಚಗಳು, ಚಾವಣಿಗೆಗಳು ಮತ್ತು ಇತರ ನಿತ್ಯ ಉಪಯೋಗಿ ಸಲಕರಣೆಗಳು ಅನೇಕ ಶವಾಗಾರಗಳಲ್ಲಿ ದೊರಕಿವೆ.

ಈಜಿಪ್ಟಿನ ಕಲೆಯ ಮುಖ್ಯವಾದ ಲಕ್ಷಣಗಳು[ಬದಲಾಯಿಸಿ]

ಸರಳತೆ, ಭವ್ಯತೆ, ಮತ್ತು ಶಾಂತಭಾವನೆಯ ಪ್ರಚೋದನೆ. ಉನ್ನತಿಯ ಕಾಲದಲ್ಲಿ ಅಲಂಕಾರ ಕಡಿಮೆಯಿದ್ದು ಸೌಂದರ್ಯ ಹೊರಸೂಸುತ್ತದೆ. ಪ್ರಾಣಿಗಳ ಚಿತ್ರಣದಲ್ಲಿ ಔದಾರ್ಯ ಕಾಣುತ್ತದೆ. ದೊಡ್ಡಗಾತ್ರಗಳ ಉಪಯೋಗದಿಂದ ಭಯ, ವಿಸ್ಮಯ ಮತ್ತು ಗೂಢತೆಯ ಪ್ರಚೋದನೆಯನ್ನು ಮಾಡುವ ಪ್ರಯತ್ನ ನಡೆದಿದೆ. ವ್ಯಕ್ತಿ ಚಿತ್ರಣಕ್ಕೆ ತುಂಬ ಪ್ರಾಶಸ್ತ್ಯವಿದ್ದು ಇದರಲ್ಲಿ ಶಿಲ್ಪಿಗಳು ಯುಶಸ್ವಿಯಾಗಿದ್ದಾರೆ. ಉಬ್ಬಿನ ಕೆತ್ತನೆ ಮತ್ತು ಚಿತ್ರಗಾರಿಕೆಯಲ್ಲಿ ಪಾಶ್ರ್ವಮುಖದ ಹೆಚ್ಚಾದ ಪ್ರಯೋಗ ಕಾಣುತ್ತದೆ. ಹಳೆಯ ರಾಜ್ಯಕಾಲದ ಚಿತ್ರಗಾರರ ರೇಖೆ, ರೂಪಗಳ ಮೇಲಿನ ಹಿಡಿತ ಅಸಾಮಾನ್ಯವಾದುದು. ಹೊಸರಾಜ್ಯಕಾಲದಲ್ಲಿ ಗಾತ್ರಪ್ರಿಯತೆ ಹಾಗೂ ಅಭಿರುಚಿಯ ಕುಂದು, ಚಿತ್ರಗಳಲ್ಲಿ ಅನಗತ್ಯವಾದ ಅಲಂಕಾರ ಇಹಕ್ಕಿಂತ ಪರದ ಯೋಚನೆ ಹೆಚ್ಚು ಮಾಡುವಂಥ ಸ್ವಭಾವಗಳು ಕಂಡುಬರುತ್ತವೆ.

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2016-08-09. Retrieved 2016-10-21.
  2. http://study.com/academy/lesson/ancient-egyptian-architecture-history-characteristics-influences.html