ಆಲ್ಬೆರೊನಿ

ವಿಕಿಪೀಡಿಯ ಇಂದ
Jump to navigation Jump to search


Icono aviso borrar.png
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: ಈ ಲೇಖನವನ್ನು ಅಲ್-ಬಿರುನಿಲೇಖನದೊಂದಿಗೆ ವಿಲೀನಗೊಳಿಸಲಾಗಿದೆ


ಹತ್ತನೆಯ ಶತಮಾನದಲ್ಲಿ ಭಾರತಕ್ಕೆ ಬಂದ ಪ್ರಸಿದ್ಧ ಅರಬ್ಬೀ ಪಂಡಿತ. ಸಿಂಧ್ ಪ್ರಾಂತ್ಯದ ಬಿರೊನ್ನಲ್ಲಿ ಬೆಳೆದುದರಿಂದ ಬೆರೊನಿ ಎಂಬ ಹೆಸರು ಬಂತು. ಘಜ್ನಿ ಮಹಮದ್ ಕೀವ್ ಪ್ರಾಂತ್ಯವನ್ನು ವಶಪಡಿಸಿಕೊಂಡಾಗ, ಸೆರೆಯಾದವರಲ್ಲಿ ಇವನೂ ಒಬ್ಬ. ಸೆರೆಯಿಂದ ಪಾರಾಗಿ ತನ್ನ ಮೇಧಾಶಕ್ತಿಯಿಂದ ಆಸ್ಥಾನದಲ್ಲಿ ಜ್ಯೋತಿಷಿಯಾಗಿದ್ದಿರ ಬಹುದೆಂದು ವಿದ್ವಾಂಸರ ಊಹೆ. ಇವನ ಗ್ರಂಥಗಳಲ್ಲಿ ಘಜ್ನಿ ಮಹಮ್ಮದನ ಮಗನೂ ಉತ್ತರಾಧಿಕಾರಿಯೂ ಆದ ಮಸೂದನ ಪ್ರಶಂಸೆಯಿದೆ. ಭಾರತದ ನಾನಾ ಪ್ರಾಂತ್ಯಗಳಲ್ಲಿ ಪ್ರವಾಸ ಕೈಗೊಂಡ. ಅನೇಕ ಜನರ ಸಂಪರ್ಕ ಹೊಂದಿದ್ದ. ಸಂಸ್ಕೃತ ಭಾಷೆ ಅಭ್ಯಸಿಸಿ, ಪ್ರಾಚೀನ ಗ್ರಂಥಗಳನ್ನು ವ್ಯಾಸಂಗಮಾಡಿ ಇಂಡಿಯ ಎಂಬ ಗ್ರಂಥ ರಚಿಸಿದ. ಇದರಲ್ಲಿ ಕಪಿಲಮಹರ್ಷಿಯ ಸಾಂಖ್ಯ, ಪತಂಜಲಿ ಯೋಗಸೂತ್ರ, ವ್ಯಾಸರ ಭಗವದ್ಗೀತೆ, ವಿಷ್ಣು, ವಾಯು, ಮತ್ಸ್ಯ ಮುಂತಾದ ಪುರಾಣಗಳು, ಪುಲಿಷ ಸಿದ್ಧಾಂತ, ಧರ್ಮಸಿದ್ಧಾಂತ ಮೊದಲಾದ ಜ್ಯೋತಿಷ್ಯ ಗ್ರಂಥಗಳು, ಮತ್ತು ರಾಮಾಯಣ-ಮಹಾಭಾರತಗಳಿಂದ ಆಯ್ದ ಹೇಳಿಕೆಗಳನ್ನು ಉದ್ದರಿಸಲಾಗಿದೆ. ಈ ಗ್ರಂಥದಲ್ಲಿ ಭಾರತದ ಮತ, ತತ್ತ್ವ, ಸಾಹಿತ್ಯ, ಜ್ಯೋತಿಷ್ಯ, ನ್ಯಾಯ, ಧರ್ಮ ಮತ್ತು ಸಾಮಾಜಿಕ ನಡೆನುಡಿಗಳ ಸಜೀವ ಚಿತ್ರಣವಿದೆ. ಹೊರನಾಡಿನಿಂದ ಬಂದು ನಮ್ಮ ದೇಶದ ಮತ, ತತ್ತ್ವ, ವಿಜ್ಞಾನಗಳನ್ನು ಅಭ್ಯಸಿಸಲು ಈತ ಮಾಡಿದ ಪ್ರಯತ್ನ ಸ್ತುತ್ಯವಾದುದು. ಚೀನದ ಯಾತ್ರಿಕರನ್ನು ಬಿಟ್ಟರೆ ಇಂಥ ಪ್ರಯತ್ನ ಮಾಡಿದವರಲ್ಲಿ ಈತನೇ ಮೊದಲಿಗ. ಹೇರಳ ಹಣಸುರಿದು, ದೊರೆಯಬಹುದಾದ ಸಂಸ್ಕೃತ ಗ್ರಂಥಗಳನ್ನೆಲ್ಲ ಸಂಗ್ರಹಿಸಿದ. ತನ್ನ ಗ್ರಂಥವನ್ನು ನಿರ್ದಿಷ್ಟವಾಗಿ ರಚಿಸಲು ಪಂಡಿತರನ್ನು ಕರೆಸಿಕೊಂಡು, ಅವರ ನೆರವಿನಿಂದ ಅವನ್ನು ಅಭ್ಯಾಸ ಮಾಡಿದ. ಹಿಂದೂಗಳ ತತ್ತ್ವಜ್ಞಾನ, ಗಣಿತಶಾಸ್ತ್ರಗಳ ತಜ್ಞತೆಯನ್ನು ಈತ ಪ್ರಶಂಸಿಸಿದನಾದರೂ ಅವರ ಅತಿ ಚಾತುರ್ಯ, ಸಂಕುಚಿತ ಮನೋಭಾವ, ಬಳಸುಮಾತಿನಲ್ಲಿ ಹೇಳುವ ವಿಧಾನಗಳನ್ನು ಖಂಡಿಸಿದ. ಹಿಂದೂಗಳು ಐತಿಹಾಸಿಕ ಘಟನೆಗಳನ್ನು ಕ್ರಮದಲ್ಲಿ ಬರೆಯಲು ಹೆಚ್ಚು ಆಸಕ್ತಿ ವಹಿಸುವುದಿಲ್ಲ. ಒತ್ತಾಯಪಡಿಸಿದರೆ ಮಾತ್ರ ಕಥೆ ಹೇಳಲು ಪ್ರಾರಂಭಿಸುತ್ತಾರೆ-ಎಂಬುದು ಇವನ ಅಭಿಪ್ರಾಯ. ಹಿಂದೂಸ್ತಾನದ ಮೇಲೆ ಬರೆಯುವಾಗ ಮುಖ್ಯ ನದಿಗಳು, ಪಟ್ಟಣಗಳು, ಬೆಳೆ, ಪ್ರಾಣಿ, ಜನರ ಆಚಾರ, ನಡವಳಿಕೆಗಳನ್ನು ಕುರಿತು ಕೂಡ ಈತ ಬರೆದಿದ್ದಾನೆ. ಇವನ ಗ್ರಂಥದಲ್ಲಿ ವರ್ಣಧರ್ಮ, ಆಶ್ರಮಧರ್ಮ, ವಿದ್ಯಾಭ್ಯಾಸ, ವಿವಾಹಪದ್ಧತಿಗಳ ಚಿತ್ರಣವೂ ಇದೆ. ಹಿಂದೂಗಳ ಮತ್ತು ತತ್ತ್ವ ಮತ್ತು ಗ್ರಂಥಗಳ ವಿಷಯವಾಗಿ ಆಳವಾಗಿ ತಿಳಿದುಕೊಳ್ಳಲು ಪ್ರಯತ್ನಿಸಿದ. ವೇದಗಳೂ ಸ್ಮೃತಿಗಳೂ ಪುರಾಣಗಳೂ ಆದಿಯಾಗಿ ಪ್ರಚಲಿತವಾಗಿದ್ದ ಗ್ರಂಥಗಳ ತಿರುಳನ್ನು ಅರಿಯುವ ಅಭಿರುಚಿಯನ್ನು ವ್ಯಕ್ತಪಡಿಸಿದ. ಇಲ್ಲಿಯ ಜನರ ದೇವ ದೇವತೆಗಳ ಕಲ್ಪನೆ, ಮೂರ್ತಿಪುಜೆ, ಸ್ವರ್ಗ ನರಕಗಳ ಭಾವನೆಯ ಬಗ್ಗೆಯೂ ಬರೆದ. ವಿದ್ವಾಂಸರ ನಂಬಿಕೆಗಳು ಅವಿದ್ಯಾವಂತರ ನಂಬಿಕೆಗಳಿಂದ ಹೇಗೆ ಭಿನ್ನವಾಗಿದ್ದುವೆಂಬುದನ್ನು ವಿವರಿಸಿ, ತನಗೆ ಸರಿಕಾಣದ ಹಲವು ಕಂದಾಚಾರ ಪದ್ಧತಿಗಳನ್ನು ಖಂಡಿಸಿದ. ಇವನ ಟೀಕೆಗಳಲ್ಲಿ ನಿದರ್ಶನಗಳಿವೆ. ಮಾನವೀಯತೆಯ ಪ್ರದರ್ಶನವಿದೆ. ಈತನ ಬರವಣಿಗೆಯಲ್ಲಿ ದೇಶ, ಕಾಲ ಮತ್ತು ಭಾಷೆಗಳ ಭಿನ್ನತೆಯಿದೆ. ಅಲ್ಪ ಸ್ವಲ್ಪ ದೋಷ ಕಂಡುಬಂದರೂ ಪ್ರಾಚೀನ ಭಾರತದ ಚರಿತ್ರೆಗೆ ಇವನ ಕಾಣಿಗೆ ಮಹತ್ತರವಾದುದು.