ಆರ್. ಕೃಷ್ಣಮೂರ್ತಿ
ಕೃಷ್ಣಮೂರ್ತಿ, ಆರ್ಕಲ್ಕಿ ಎಂಬ ಕಾವ್ಯನಾಮದಿಂದ ಪ್ರಸಿದ್ಧ ಗ್ರಂಥಕರ್ತೃವಾಗಿ ಅದೇ ಹೆಸರಿನ ಪತ್ರಿಕೆಯ ಸಂಪಾದಕನಾಗಿ ಕೀರ್ತಿ ಗಳಿಸಿರುವ ತಮಿಳು ಲೇಖಕ.
ಬಾಲ್ಯ ಮತ್ತು ವಿದ್ಯಾಭ್ಯಾಸ
[ಬದಲಾಯಿಸಿ]ಇವರು ತಂಜಾವೂರು ಜಿಲ್ಲೆಯ ಬುದ್ಧಮಂಗಲಂ (ಮಣಲ್ ಮೇಡು) ಎಂಬಲ್ಲಿಯ ಕರ್ಣಂ ರಾಮಸ್ವಾಮಯ್ಯರ್ ಎಂಬುವರ ದ್ವಿತೀಯ ಪುತ್ರ. ಬಾಲ್ಯದಲ್ಲಿಯೇ ಕಥೆ ಕೇಳುವುದರಲ್ಲಿ ಹಾಗೂ ಇತರರಿಗೆ ಅದನ್ನು ಸ್ವಾರಸ್ಯವಾಗಿ ಹೇಳುವುದರಲ್ಲಿ ಇವರಿಗೆ ಆಸಕ್ತಿ ಅಧಿಕವಾಗಿತ್ತು. ಇಂಥ ಇವರ ಕಲ್ಪನಾ ಸಾಮಥ್ರ್ಯವೇ ಭವಿಷ್ಯದಲ್ಲಿ ಇವರು ದೊಡ್ಡ ಕತೆಗಾರರಾಗಲು ಅಡಿಗಲ್ಲಾಯಿತೆಂದು ಹೇಳಬಹುದು. ಚಿಕ್ಕವರಾಗಿದ್ದಾಗಲೇ ಭಜನೆಗಳನ್ನು ಹಾಡುತ್ತಿದ್ದರಲ್ಲದೆ ಹರಿಕಥೆಗಳನ್ನೂ ಮಾಡುತ್ತಿದ್ದರು. ತಿರುಚಿಯ ನ್ಯಾಷನಲ್ ಕಾಲೇಜಿನಲ್ಲಿ ಇವರು 9ನೆಯ ತರಗತಿಯ ತನಕ ಕಲಿತರು. ಗಾಂಧೀಜಿಯ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿ 1921ರಲ್ಲಿ ಕರೂರಿನಲ್ಲಿ ಸೆರೆಮನೆಗೆ ಹೋದರು. ರಾಷ್ಟ್ರೀಯ ಆಂದೋಳನದಲ್ಲಿ ಭಾಗವಹಿಸಲು ಆಸಕ್ತರಾದರು. ಕಲ್ಪನೆಯ ಜೊತೆಗೆ ಬರವಣಿಗೆಯಲ್ಲೂ ಶಕ್ತರಾದ ಇವರು ಪತ್ರಿಕೋದ್ಯಮದಲ್ಲಿ ತೊಡಗಿದರಲ್ಲದೆ ಆ ವೃತ್ತಿಯಲ್ಲಿ ಉದ್ದಕ್ಕೂ ರಾಷ್ಟ್ರೀಯ ಧೋರಣೆಯಿಂದ ದುಡಿದರು.
ವೃತ್ತಿ ಜೀವನ
[ಬದಲಾಯಿಸಿ]ನವಶಕ್ತಿ, ವಿಮೋಚನಂ, ಆನಂದವಿಕಟನ್ ಮುಂತಾದ ಪತ್ರಿಕೆಗಳಿಗೆ ಸಂಪಾದಕರಾದರು. ತಮ್ಮ ಸಾಮಥ್ರ್ಯವನ್ನು ಅನುಭವವನ್ನು ಕ್ರಮವಾಗಿ ವರ್ಧಿಸಿಕೊಂಡರು. ಕಲ್ಕಿ ಎಂಬ ಹೆಸರಿನಿಂದ ಪ್ರಬಂಧಗಳನ್ನೂ ಕಥೆಗಳನ್ನೂ ವಿಮರ್ಶೆಗಳನ್ನೂ ಬರೆದರು. ಅಲ್ಲದೆ ಕರ್ನಾಟಕಂ, ಲಾಂಗೂಲನ್, ತಮಿಳ್ ಮಗನ್, ವ್ಯವಸಾಯಿ, ತಮಿಳ್ ತೇನೀ, ಯಮನ್, ರಾ.ಕಿ. ಪೆಟ್ರೋನ್, ಅಗಸ್ತ್ತ್ಯರ್-ಎಂಬ ಗುಪ್ತನಾಮದಿಂದಲೂ ಅನೇಕ ಲೇಖನಗಳನ್ನೂ ಬರೆದರು. 1941ರಲ್ಲಿ ರಾಜಾಜಿ, ಟಿ.ಕೆ. ಚಿದಂಬರನಾಥ ಮುದಲಿಯಾರರಂಥವರ ಸಹಾಯದಿಂದ ಕಲ್ಕಿ ಎಂಬ ಪತ್ರಿಕೆಯನ್ನು ಆರಂಭಿಸಿದರು. ಇದು ಅನೇಕ ಬಗೆಯಲ್ಲಿ ಹೊಸತನವನ್ನು ಪ್ರದರ್ಶಿಸಿ ಒಂದು ಉನ್ನತಮಟ್ಟದ ಪತ್ರಿಕೆಯಾಯಿತು. ಗಾಂಧೀಜಿಯನ್ನು ಕುರಿತು ಮಾನ್ದರುಕ್ಕುಳ್ ಒರು ದೈವಂ (ಮನುಷ್ಯರಲ್ಲಿ ಒಬ್ಬ ದೇವರು) ಎಂದೂ ರಾಜಾಜಿಯನ್ನು ಕುರಿತು ನಾಟ್ಟುಕ್ಕೊರು ತಲೈವರ್ (ನಾಡಿಗೊಬ್ಬ ಮುಖಂಡ) ಎಂದೂ ಇವರು ಎರಡು ಪುಸ್ತಕಗಳನ್ನು ಬರೆದಿದ್ದಾರೆ. ಲೇಖಕ ಹಾಗೂ ಪತ್ರಿಕಾಕರ್ತರಾಗಿ, ತಿಳಿಯಾದ ತಮಿಳಿನಲ್ಲಿ ಎಲ್ಲರಿಗೂ ತಿಳಿಯುವಂತೆ ರಾಜಕೀಯ ವಿಷಯಗಳನ್ನು ವಿವರಿಸಿದ್ದಾರೆ. ಸಂಗೀತ ವಿದ್ವಾಂಸರು, ಇತರ ಕಲಾವಿದರು, ನಾಟಕಗಳು, ಚಲನಚಿತ್ರಗಳು ಮುಂತಾದ ಕಲಾ ವಿಷಯಗಳ ಮೇಲೆ ನಿಷ್ಪಕ್ಷಪಾತ ದೃಷ್ಟಿಯ ವಿಮರ್ಶೆಗಳನ್ನು ಬರೆದಿದ್ದಾರೆ. ಸಾಹಿತಿಗಳಿಗೆ, ವಾಗ್ಮಿಗಳಿಗೆ ಪ್ರೋತ್ಸಾಹವಿತ್ತಿದ್ದಾರೆ. ಕವಿಗಳಾದ ಸುಬ್ರಹ್ಮಣ್ಯ ಭಾರತೀಯಾರ್ ಆರಂಭಿಸಿದ ತಮಿಳಿನ ಪುನರುದ್ಧಾರ ಕಾರ್ಯವನ್ನು ಇವರು ಇನ್ನಷ್ಟು ವೃದ್ಧಿಗೊಳಿಸಿದರು. ತಮಿಳಿನ ಉದ್ಧಾರ ಕಾರ್ಯಕರ್ತರಲ್ಲೊಬ್ಬರಾಗಿಯೂ ತಮಿಳು ಬರೆಹಗಾರರ ಸಂಘದ ಮೊದಲಿಗರಾಗಿಯೂ ಸೇವೆ ಸಲ್ಲಿಸಿದರು.
ಸಂಘ ಸಂಸ್ಥೆಗಳ ಸ್ಥಾಪನೆ
[ಬದಲಾಯಿಸಿ]ರಾಷ್ಟ್ರೀಯ ಕವಿಗಳಾದ ಭಾರತೀಯಾರ್ ಸ್ಮಾರಕಕ್ಕಾಗಿ ಎಟ್ಟೆಯಪುರವೆಂಬಲ್ಲಿ ಭಾರತಿಮಣಿಮಂಡಪಂ ಎಂಬ ಸಂಸ್ಥೆಯನ್ನು ಸ್ಥಾಪಿಸಲು ಶ್ರಮಿಸಿ ಅದನ್ನು ನೆರವೇರಿಸಿದರು. ದೇಶಕ್ಕಾಗಿ ತ್ಯಾಗ ಮಾಡಿದ ವಿ.ಒ. ಚಿದಂಬರಂ ಪಿಳ್ಳೆಯವರ ನೆನಪಿಗೆ ತೂತ್ತುಕುಡಿಯಲ್ಲಿ ಕಾಲೇಜು ಸ್ಥಾಪಿಸಲು ಕಾರಣರಾದರು. ವಿ. ಕಲ್ಯಾಣ ಸುಂದರನಾರ್ ಮಣಿಮಂಡಪಂ, ಗಾಂಧಿ ನಿನೈವು ಮಂಡಪಂಗಳ ಸ್ಥಾಪನೆಗೆ ನಿಧಿ ಸಂಗ್ರಹಿಸುವುದರಲ್ಲಿ ಮಗ್ನರಾದರು.
ಸಾಹಿತಿ
[ಬದಲಾಯಿಸಿ]ಕಲ್ಕಿಯವರ ಮಹತ್ಸಾಧನೆ ಅವರು ಬರೆದ ಚಾರಿತ್ರಿಕ ಕಾದಂಬರಿಗಳಲ್ಲಿದೆ. ಗತಕಾಲದ ಜನರ ಮನಸ್ಸಿನ ನೆಲೆ, ಆಚಾರ ವಿಚಾರಗಳು, ರಾಜಕೀಯ, ಧಾರ್ಮಿಕ ಹಾಗೂ ಕಲಾಭಿರುಚಿಯ ವಿವರಗಳನ್ನು ಇವುಗಳಲ್ಲಿ ಅವರು ಚೆನ್ನಾಗಿ ವಿವರಿಸಿದ್ದಾರೆ. ಚಾರಿತ್ರಿಕ ಸತ್ಯದ ಹಿನ್ನಲೆಯಲ್ಲಿ ಪಾತ್ರಗಳನ್ನು ಸಜೀವಗೊಳಿಸಿದ್ದಾರೆ. ಕೆಲವು ಕಲ್ಪನಾ ಸನ್ನಿವೇಶಗಳನ್ನೂ ಸಂದರ್ಭಗಳನ್ನೂ ಅನುಕೂಲಕ್ಕೆ ತಕ್ಕಂತೆ ಸುಂದರವಾಗಿ ಕಡೆದಿದ್ದಾರೆ. ನಿಜ ಹಾಗೂ ಕಾಲ್ಪನಿಕ ಸನ್ನಿವೇಶಗಳು ಒಂದರೊಡನೊಂದು ಸರಿಯಾಗಿ ಹೊಂದಿಕೊಂಡು ಬರುವಂತೆ ಎಸಗಿ ಜನಮನವನ್ನು ಸೂರೆಗೊಂಡಿದ್ದಾರೆ. ಪತ್ರಿಕಾಲೋಕದಲ್ಲಿ ಪಾರ್ತಿಬನ್ ಕನವು, ಪೊನ್ನಿಯಿನ್ ಶೆಲ್ವನ್, ಶಿವಗಾಮಿಯಿನ್ ಶಪಥಂ-ಎಂಬ ಕಾದಂಬರಿಗಳನ್ನು ಪ್ರಕಟಿಸಿ ಹಲವು ಲಕ್ಷ ಜನರು ಆತುರದಿಂದ ಓದುವಂತೆ ಮಾಡಿದ್ದಾರೆ. ಕಲ್ಕಿ ಅವರ ಸಾಮಾಜಿಕ ಕಾದಂಬರಿಗಳೂ ಚಾರಿತ್ರಿಕ ಕಾದಂಬರಿಗಳಂತೆಯೇ ಉತ್ತಮವಾದುವು. ಅವರು ಬರೆದ ತ್ಯಾಗಭೂಮಿ. ಅಲೈ ಓಸೈ ಎಂಬವುಗಳಲ್ಲಿ ರಾಷ್ಟ್ರೀಯತೆ ಎದ್ದು ಕಾಣುತ್ತದೆ. ಪೊಯ್ ಮಾನ್ ಕರಡು, ಮಕುಟಪತಿ, ವೀಣೈ ಭವಾನಿ, ಶಾರದೆಯಿನ್ ತಂತಿರಂ, ಅಬಲೈಯಿನ್ ಕಣ್ಣೀರ್-ಇಂಥ 30ಕ್ಕೂ ಮೇಲ್ಪಟ್ಟು ಕೃತಿಗಳನ್ನು ಅವರು ರಚಿಸಿದ್ದಾರೆ. ಕಲ್ಕಿಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ ನಾಲ್ಕು ಕೃತಿಗಳ ಸಂಗ್ರಹಕ್ಕೆ ಸಾಹಿತ್ಯ ಅಕೆಡಮಿಯ ಬಹುಮಾನ ಬಂದಿದೆ. ತಮಿಳು ಸಂಗೀತಕ್ಕೆ ಕಲ್ಕಿ ಮನಃಪೂರ್ವಕ ಬೆಂಬಲ ಕೊಟ್ಟರಲ್ಲದೆ ತಾವೇ ಕೆಲವು ಉತ್ತಮ ಹಾಡುಗಳನ್ನು ರಚಿಸಿದ್ದಾರೆ. ಮೂವತ್ತು ವರ್ಷಗಳ ಅವಿರತ ಸೇವೆಯಿಂದ ಕಲ್ಕಿ ತಮಿಳು ನಾಡಿನ ಚಿರಪರಿಚಿತ ಹಾಗೂ ಜನಪ್ರಿಯ ಲೇಖಕರಾಗಿದ್ದಾರೆ.
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |