ವಿಷಯಕ್ಕೆ ಹೋಗು

ಆರ್ಥರ್ ಗ್ರಿಫಿತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆರ್ಥರ್ ಗ್ರಿಫಿತ್ (1872-1922) ಐರ್ಲೆಂಡಿನ ಒಬ್ಬ ಕ್ರಾಂತಿನಾಯಕ. ಅಸಾಧಾರಣ ಹೋರಾಟಗಾರ, ಪತ್ರಕರ್ತ, ಸಮರ್ಥ ರಾಜನೀತಿಜ್ಞ.

ಜೀವನ, ಸಾಧನೆಗಳು

[ಬದಲಾಯಿಸಿ]

1872ರ ಮಾರ್ಚ್ 31ರಂದು ಡಬ್ಲಿನ್‌ನಲ್ಲಿ ಜನಿಸಿದ.[] ಈತ ಮುದ್ರಣಕಾರನಾಗಿ ಜೀವನ ಪ್ರಾರಂಭಿಸಿದ. ಐರಿಷ್ ಭಾಷೆಯ ರಕ್ಷಣೆ ಅಭಿವೃದ್ಧಿಗಳಿಗಾಗಿ 1893ರಲ್ಲಿ ಸ್ಥಾಪಿತವಾದ ಗೇಲಿಕ್ ಲೀಗನ್ನು ಇವನು ಸೇರಿದ. ಕೆಲ್ಟಿಕ್ ಸಾಹಿತ್ಯ ಸಂಘ, ಐರಿಷ್ ರಿಪಬ್ಲಿಕನ್ ಬ್ರದರ್‌ಹುಡ್-ಈ ಸಂಸ್ಥೆಗಳ ಸದಸ್ಯನೂ ಆಗಿದ್ದ. ಪ್ರಾರಂಭದಲ್ಲಿ ಯುನೈಟೆಡ್ ಐರಿಷ್‌ಮನ್ ಎಂಬ ವಾರಪತ್ರಿಕೆಗೆ ಲೇಖನಗಳನ್ನು ಬರಯುತ್ತಿದ್ದ. 1901ರಿಂದ ಅದರ ಸಂಪಾದಕನಾದ. ಐರ್ಲೆಂಡಿನ ಪ್ರಸಿದ್ಧ ಬರೆಹಗಾರರದಿಂದ ಲೇಖನಗಳನ್ನು ಬರೆಸಿ ತನ್ನ ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದ. ತೀವ್ರ ರಾಜಕೀಯ ವಿಚಾರಗಳಿಗೆ ಪತ್ರಿಕೆ ಪ್ರಸಿದ್ಧವಾಗಿತ್ತಾದರೂ ಮಾನಸಿಕ ವಿಚಾರಗಳಿಗೂ ಅದು ವಿಶೇಷ ಗಮನ ನೀಡುತ್ತಿತ್ತು.

ಐರ್ಲೆಂಡಿನ ಸ್ವಾತಂತ್ರ್ಯ ಚಳವಳಿಯಲ್ಲಿ ಗ್ರಿಫಿತ್ ವಿಶೇಷ ಆಸಕ್ತಿ ವಹಿಸಿದ್ದ. ಸಂವೈಧಾನಿಕ ಮಾರ್ಗಗಳಿಂದ ತನ್ನ ದೇಶಕ್ಕೆ ಸ್ವಾತಂತ್ರ್ಯ ಲಭ್ಯವಾದೀತೆಂದು ಈತ ಆಶಿಸಿದ್ದ. ಆ ಆಶೆ ವಿಫಲವಾಯಿತು. ಐರಿಷ್ ಜನ ಒಗ್ಗಟ್ಟಾಗಿ ಇಂಗ್ಲೆಂಡಿನ ಪರಮಾಧಿಕಾರವನ್ನು ಕಿತ್ತೊಗೆದು ಸ್ವಾತಂತ್ರ್ಯ ಘೋಷಿಸಿಕೊಳ್ಳಬೇಕೆಂದು ಗ್ರಿಫಿತ್ ವಾದಿಸತೊಡಗಿದ. ರಾಜತ್ವದ ವಿನಾ ಉಳಿದ ವಿಚಾರಗಳಲ್ಲಿ ಐರ್ಲೆಂಡು ಬ್ರಿಟನ್ನಿನಿಂದ ಸ್ವತಂತ್ರವಾಗಿರಬೇಕೆಂಬುದು ಅವನ ಇಚ್ಛೆಯಾಗಿತ್ತು. ಬ್ರಿಟಿಷ್ ಸರ್ಕಾರಕ್ಕೆ ತೆರಿಗೆಗಳನ್ನು ಸಲ್ಲಿಸಕೂಡದೆಂದೂ, ಚುನಾಯಿತ ಪ್ರತಿನಿಧಿಗಳು ವೆಸ್ಟ್‌ಮಿನ್‌ಸ್ಟರ್‌ಗೆ ಹೋಗದೆ ಐರ್ಲೆಂಡಿನಲ್ಲೇ ಸಭೆ ಸೇರಿ ತಮ್ಮ ದೇಶದ ಇಚ್ಛೆಯ ಮೇರೆಗೆ ರಾಜ್ಯವಾಳಬೇಕೆಂದೂ ಈತ ಘೋಷಿಸಿದ. ಈ ಧೋರಣೆಗೆ ಷಿನ್ ಫೇನ್ (Sinn Féin) ಎಂದು ಹೆಸರು ಬಂತು. ನಾವೇ ಎಂದು ಅರ್ಥವಿರುವ ಈ ಶಬ್ದಕ್ಕೆ ಒಗ್ಗಟ್ಟಾಗಿ ನಿಲ್ಲಿ ಎಂಬುದು ರೂಢಿಯ ಅರ್ಥ.[][] ಈ ನೀತಿಯನ್ನನುಸರಿಸುವವರು ಷಿನ್ ಫೇನ್ ಎಂದೇ ಹೆಸರಾದರು. ಇವನ ನಿಕಟ ಅನುಯಾಯಿಗಳು ಹಲವರು ಫೇನಿಯನರೇ ಆಗಿದ್ದಾಗ್ಯೂ ಐರಿಷ್ ರಾಷ್ಟ್ರೀಯವಾದಿಗಳಲ್ಲಿ ಹಲವರು ಐರ್ಲೆಂಡು ಬ್ರಿಟನ್ನಿನಿಂದ ಪ್ರತ್ಯೇಕಗೊಳ್ಳುವುದು ಸಾಧ್ಯವೆಂದು ನಂಬಿರಲಿಲ್ಲ. ಆದ್ದರಿಂದ ಈತ ಐರಿಷ್ ರಿಪಬ್ಲಿಕನ್ ಬ್ರದರ್‌ಹುಡ್‌ಗೆ ರಾಜೀನಾಮೆ ನೀಡಿ ತನ್ನಂತೆಯೇ ಅಭಿಪ್ರಾಯ ಹೊಂದಿದ್ದವರ ಪ್ರತ್ಯೆಕ ಸಂಸ್ಥೆಯೊಂದನ್ನು ಸ್ಥಾಪಿಸಲು ಯತ್ನಿಸಿದ.

1906ರಲ್ಲಿ ಗ್ರಿಫಿತನ ಯುನೈಟೆಡ್ ಐರಿಷ್‌ಮನ್ ಪತ್ರಿಕೆ ಮಾನನಷ್ಟಕ್ಕಾಗಿ ದಂಡ ತೆರಬೇಕಾಗಿ ಬಂದಾಗ ಆತ ಪತ್ರಿಕೆಯ ಹೆಸರನ್ನು ಷಿನ್ ಫೇನ್ ಎಂದೇ ಬದಲಿಸಿದ. 1907ರಲ್ಲಿ ಇದು ದಿನಪತ್ರಿಕೆಯಾಯಿತು. ಆದರೆ ಇದನ್ನು ನಡೆಸಲಾಗಲಿಲ್ಲ. ಅನಂತರ ಇದರ ಹೆಸರನ್ನು ಐರಿ (Eire) ಎಂದು ಬದಲಾಯಿಸಲಾಯಿತು. 1912ರ ಮೂರನೆಯ ಹೋಂರೂಲ್ ವಿಧೇಯಕವನ್ನು ಈತ ತೀವ್ರವಾಗಿ ವಿರೋಧಿಸಿದ. ಐರ್ಲೆಂಡಿನ ವಿಭಜನೆಗೆ ಈತನ ಉಗ್ರ ವಿರೋಧವಿತ್ತು. 1916ರಲ್ಲಿ ಸಂಭವಿಸಿದ ಈಸ್ಟರ್ ದಂಗೆಯಲ್ಲಿ ಈತ ಭಾಗವಹಿಸಲಿಲ್ಲ. ಆದ್ದರಿಂದ ಉಗ್ರವಾದಿಗಳ ಮೇಲೆ ಈತನ ಪ್ರಭಾವ ತಗ್ಗಿತು. ಆದರೂ ಬ್ರಿಟಿಷ್ ಸರ್ಕಾರ ಇವನನ್ನು ಸ್ಥಾನಬದ್ಧತೆಯಲ್ಲಿಟ್ಟಿತು.[] ಷಿನ್ ಫೇನ್ ಪ್ರಬಲವಾಯಿತು. ಬಂಧಿತರು ಬಿಡುಗಡೆಯಾದಾಗ ಈಮನ್ ಡೆ ವಲೇರ ಅವರ ನಾಯಕನಾಗಿ ಆಯ್ಕೆ ಹೊಂದಿದ. ಗ್ರಿಫಿತನೇ ಈತನ ಹೆಸರನ್ನು ಸೂಚಿಸಿದ್ದು. ಅನಂತರ ಗ್ರಿಫಿತ್ ಮತ್ತೆ ಪತ್ರಿಕಾ ಪ್ರಕಟನೆಯಲ್ಲಿ ತೊಡಗಿದ. ಆಗ ಇವನು ಹೊರಡಿಸಿದ ಪತ್ರಿಕೆಯ ಹೆಸರು ನ್ಯಾಷನಾಲಿಟಿ. ಇದಕ್ಕೂ ಪ್ರತಿಬಂಧಕಾಜ್ಞೆ ಬಂತು. ಗ್ರಿಫಿತ್ ಮತ್ತೆ ಬಂಧನಕ್ಕೊಳಗಾದ (1918). 1918ರ ಡಿಸೆಂಬರಿನಲ್ಲಿ ನಡೆದ ಚುನಾವಣೆಗಳಲ್ಲಿ ಷಿನ್ ಫೇನ್ ಜಯ ಗಳಿಸಿತು.[] ಚುನಾಯಿತ ಪ್ರತಿನಿಧಿಗಳು ಸಭೆ ಸೇರಿ ಐರಿಷ್ ಗಣರಾಜ್ಯವನ್ನು ಘೋಷಿಸಿದರು. ಡೆ ವಲೇರ ಅಧ್ಯಕ್ಷನಾಗಿಯೂ, ಗ್ರಿಫಿತ್ ಉಪಾಧ್ಯಕ್ಷನಾಗಿಯೂ ಆಯ್ಕೆಯಾದರು.

1919-20ರಲ್ಲಿ ಡೆ ವಲೇರ ಅಮೆರಿಕಕ್ಕೆ ಹೋಗಿದ್ದಾಗ ಗ್ರಿಫಿತ್ ಐರಿಷ್ ಗಣರಾಜ್ಯದ ಅಧ್ಯಕ್ಷನಕಾಗಿ ಕಾರ್ಯನಿರ್ವಹಿಸಿದ. ಆತನ ಸೂತ್ರಗಳನ್ನು ಜಾರಿಗೆ ತರಲು ತಕ್ಕ ಸಂದರ್ಭ ಒದಗಿಬಂತು. ಚುನಾಯಿತ ಸ್ಥಳೀಯ ನಿಕಾಯಗಳು ಬ್ರಿಟಿಷರ ಅದೇಶವನ್ನು ತಿರಸ್ಕರಿಸಿದುವು. ಷಿನ್ ಫೇನ್ ನ್ಯಾಯಾಲಯಗಳು ಜಾರಿಗೆ ಬಂದುವು. ಜನರು ವರಮಾನ ತೆರಿಗೆ ಕೊಡಲು ನಿರಾಕರಿಸಿದರು. ಉಗ್ರ ಚಳವಳಿಗಾರರೂ ಆಗ ಬಿರುಸಾದ್ದರಿಂದ ಈ ಶಾಂತಿಯುತ ಪ್ರತಿಭಟನೆಯ ಮಾರ್ಗಗಳು ಯಶಸ್ವಿಯಾದುವು. ಯುವಕರು ಉಗ್ರ ಮಾರ್ಗ ತಳೆದಿದ್ದರು. 1921ರಲ್ಲಿ ಬ್ರಿಟಿಷರು ಲಂಡನಿನಲ್ಲಿ ಸಂಧಾನಕ್ಕೆ ಐರಿಷರನ್ನು ಆಹ್ವಾನಿಸಿದರು. ಐರಿಷ್ ನಿಯೋಗಕ್ಕೆ ಗ್ರಿಫಿತ್ ನಾಯಕನಾದ. ಬ್ರಿಟಿಷರ ಷರತ್ತುಗಳಿಗೆ ಗ್ರಿಫಿತ್ ಒಪ್ಪಿಗೆ ನೀಡಿದ. ಒಪ್ಪಂದವೊಂದಕ್ಕೆ ಸಹಿಯಾಯಿತು. ಆದರೆ ಇದಕ್ಕೆ ಅನೇಕರು ವಿರೋಧ ಸೂಚಿಸಿದರು. ಇದರಿಂದ ಐರ್ಲೆಂಡಿಗೆ ಪೂರ್ಣ ಸ್ವಾತಂತ್ರ್ಯ ಲಭಿಸಿದ್ದರೂ ಅದರತ್ತ ಶಾಂತಿಯುತವಾಗಿ ನಡೆಯಲು ಇದೊಂದು ಸಾಧನವೆಂದು ಗ್ರಿಫಿತ್ ವಾದಿಸಿದ. ವಿಧಾನಸಭೆ ಅಲ್ಪ ಬಹುಮತದಿಂದ ಈ ಒಪ್ಪಂದಕ್ಕೆ ಒಪ್ಪಿಗೆ ನೀಡಿತು. ಡೆ ವಲೇರ ರಾಜೀನಾಮೆ ನೀಡಿದ. ಗ್ರಿಫಿತ್ ಅಧ್ಯಕ್ಷನಾಗಿ ಆಯ್ಕೆಯಾದ. ಆದರೆ ಒಪ್ಪಂದದ ಪ್ರಕಾರ ವಿಧಾನಸಭೆಯ ಮಂತ್ರಿಮಂಡಲದ ಜೊತೆಗೆ ಇನ್ನೊಂದು ತಾತ್ಕಾಲಿಕ ಸರ್ಕಾರ ಸ್ಥಾಪಿತವಾಗಿತ್ತು. ಅದಕ್ಕೆ ಕಾಲಿನ್ಸ್ ಅಧ್ಯಕ್ಷ. ಹಲವು ವೇಳೆ ಗ್ರಿಫಿತನ ಹೇಳಿಕೆಯನ್ನು ಈ ಸರ್ಕಾರ ನಿರಾಕರಿಸುತ್ತಿತ್ತು, ಅಲಕ್ಷಿಸುತ್ತಿತ್ತು. ಇದರಿಂದ ಅನಿಶ್ಚಯ ಪರಿಸ್ಥಿತಿ ಉಂಟಾಗಿತ್ತು. 1922ರ ಆಗಸ್ಟ್ 12ರಂದು ಗ್ರಿಫಿತ್ ಹಠಾತ್ತನೆ ತೀರಿಕೊಂಡ.[][]

ಉಲ್ಲೇಖಗಳು

[ಬದಲಾಯಿಸಿ]
  1. "31st March 1871 - Birth of Arthur Griffith" (PDF). Civil Records on Irish Genealogy Site. Archived from the original on 22 September 2021. Retrieved 30 May 2017.
  2. Niall Ó Dónaill (1977). (advisory ed. Tomás de Bhaldraithe) (ed.). Foclóir Gaeilge-Béarla [Irish-English Dictionary] (in Irish). Dublin: An Gúm. pp. 533, 1095. ISBN 978-1-85791-037-7.{{cite book}}: CS1 maint: unrecognized language (link)
  3. MacDonncha (2005), p. 12.
  4. Kennedy, Maev (21 April 2016). "Jailer complained about noisy Easter Rising prisoners, letter reveals". The Guardian. London. Retrieved 10 March 2024.
  5. "Arthur Griffith". ElectionsIreland.org. Archived from the original on 25 October 2007. Retrieved 1 June 2009.
  6. "General Registrar's Office". IrishGenealogy.ie. Archived from the original on 22 September 2021. Retrieved 12 August 2017.
  7. "Arthur Griffith Dies Suddenly" (PDF). The New York Times. 13 August 1922. Archived (PDF) from the original on 22 September 2021. Retrieved 13 June 2018.


ಗ್ರಂಥಸೂಚಿ

[ಬದಲಾಯಿಸಿ]

ಹೊರಗಿನ ಕೊಂಡಿಗಳು

[ಬದಲಾಯಿಸಿ]




ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: