ಆರಂಭವಾದ

ವಿಕಿಪೀಡಿಯ ಇಂದ
Jump to navigation Jump to search


ಕಾರ್ಯಕಾರಣ ಸಂಬಂಧವನ್ನು ಕುರಿತ ವಾದ. ನ್ಯಾಯ, ವೈಶೇಷಿಕ ದರ್ಶನಗಳಲ್ಲಿ ಈ ವಾದವನ್ನು ಪ್ರತಿಪಾದಿಸಿದ್ದಾರೆ; ಇದನ್ನು ಅಸತ್ಕಾರ್ಯವಾದ ವೆಂದೂ ಕರೆಯುತ್ತಾರೆ. ಈ ವಾದ ಸಾಂಖ್ಯದರ್ಶನದಲ್ಲಿ ಪ್ರತಿಪಾದಿಸಿರುವ ಸತ್ಕಾರ್ಯವಾದಕ್ಕೆ ವಿರುದ್ಧವಾದುದು. ಒಂದೇ ಜಾತಿಯ ಮೂಲದ್ರವ್ಯಗಳು ಒಟ್ಟುಗೂಡಿದಲ್ಲಿ ಅನೇಕ ಸಂದರ್ಭಗಳಲ್ಲಿ ಒಂದು ಹೊಸ ಪರಿಣಾಮ ಹುಟ್ಟುತ್ತದೆ. ಉದಾಹರಣೆಗೆ ದಾರವನ್ನು ಹಾಸುಹೊಕ್ಕಾಗಿ ನೆಯ್ದಾಗ ಬಟ್ಟೆ ಎಂಬ ಒಂದು ಹೊಸ ರೂಪದ ಪರಿಣಾಮ ಉಂಟಾಗುತ್ತದೆ, ಅಂದರೆ ಆರಂಭವಾಗುತ್ತದೆ. ಈ ಪರಿಣಾಮದ ದೃಷ್ಟಿಯಿಂದ ಮೂಲದ್ರವ್ಯ ಗಳಾದ ಎಳೆಗಳು ಒಂದು ನವೀನ ಸಮವಾಯ ಸಂಬಂಧದಲ್ಲಿ ಮಾರ್ಪಾಡಾಗಿರುತ್ತವೆ. ಎಳೆಗಳೇ ಬಟ್ಟೆಯಲ್ಲಿದ್ದರೂ ಅವು ಈ ಪರಿಣಾಮ ದಿಶೆಯಲ್ಲಿ ಕೇವಲ ಒಂದು ಸಂಯೋಗ ಸಂಬಂಧದಲ್ಲಿರುವುದಿಲ್ಲ. ಅವು ಒಂದು ಹೊಸ ರೂಪರಚನೆಯಲ್ಲಿ ಪರಿಣಾಮಗೊಳ್ಳುತ್ತವೆ. ಅಂದರೆ ಪರಿಣಾಮ ಕಾರಣದಿಂದ ಒಂದು ರೀತಿಯಲ್ಲಿ ಭಿನ್ನವಾಗಿರುತ್ತದೆ. ಪುರ್ವದಲ್ಲಿ ಇಲ್ಲದೆ, ಅಸತ್ತಾಗಿದ್ದ ಪರಿಣಾಮ ಈಗ ಆವಿರ್ಭವಿಸಿದೆ. ಆದ್ದರಿಂದ ಇಲ್ಲಿ ಹೊಸ ಕಾರ್ಯ ಆರಂಭವಾಗಿದೆ ಎಂದು ಸ್ಪಷ್ಟವಾಗಿ ವಾದಿಸಬಹುದು. ಮಣ್ಣೇ ಮಡಿಕೆಯಾಗಿದ್ದರೂ ಮತ್ತೆ ಮಡಿಕೆ ಮಣ್ಣೇ ಆಗುವ ಸಂಭವವಿದ್ದರೂ (ಒಡೆದುಹೋಗಿ ನಶಿಸಿದ ಮೇಲೆ) ಮಡಿಕೆಯ ರೂಪ (ಸಮವಾಯ ಸಂಬಂಧದಲ್ಲಿರುವುದರಿಂದ) ವಿಶೇಷವಾಗಿರುತ್ತದೆ, ನೀರನ್ನು ಹಿಡಿಯಲು ಉಪಯುಕ್ತವಾಗಿರುತ್ತದೆ. ಈ ವಾದಕ್ಕೆ ವಿರುದ್ಧವಾಗಿ, ಕಾರಣದಲ್ಲಿ ಅವ್ಯಕ್ತವಾಗಿದ್ದುದು ಕಾರ್ಯದಲ್ಲಿ ವ್ಯಕ್ತವಾಗು ತ್ತದೆ, ವಿಕಾಸಹೊಂದುತ್ತದೆ. ಇಲ್ಲದ್ದರಿಂದ ಇರುವುದು ಹುಟ್ಟುವುದು ಅಸಂಭವವೆಂದು ಸತ್ಕಾರ್ಯವಾದಿಗಳು ವಾದಿಸುತ್ತಾರೆ.

"https://kn.wikipedia.org/w/index.php?title=ಆರಂಭವಾದ&oldid=759664" ಇಂದ ಪಡೆಯಲ್ಪಟ್ಟಿದೆ