ಆನೆಗಳ ರೋಗಗಳು ಮತ್ತು ಚಿಕಿತ್ಸೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆನೆ

ಆನೆಗಳ ರೋಗಗಳು ಮತ್ತು ಚಿಕಿತ್ಸೆ

ಆನೆಗಳು ಕಾಯಿಲೆ ಬೀಳುವುದು ಅಪೂರ್ವ. ಕಾಯಿಲೆ ಬಿದ್ದಾಗ ಚಿಕಿತ್ಸೆ ಸ್ವಲ್ಪ ಕಷ್ಟವಾದ ಕೆಲಸ. ಸಾಧಾರಣವಾಗಿ ಈ ಪ್ರಾಣಿಗಳಿಗೆ ಅಂಜುಬುರುಕುತನ ಮತ್ತು ಅನುಮಾನ ಹೆಚ್ಚು. ಆದ್ದರಿಂದ ಅವುಗಳಿಗೆ ಔಷಧಿ ತಿನ್ನಿಸಬೇಕಾದರೆ, ನಂಬಿಕೆ ಹುಟ್ಟಿಸಿ ಅವು ತಿನ್ನುವ ರುಚಿಕರವಾದ ಆಹಾರದಲ್ಲಿ ಸೇರಿಸಿ ಕೊಡಬೇಕು.

ಆನೆ ಆರೋಗ್ಯವಾಗಿದೆ ಎಂದರೆ ಲವಲವಿಕೆಯಿಂದ, ಸೊಂಡಿಲು, ಕಿವಿಗಳು ಮತ್ತು ಬಾಲ ಇವುಗಳನ್ನು ಅಲ್ಲಾಡಿಸುತ್ತಿರಬೇಕು. ಕಾಲಿನ ಉಗುರುಗಳ ಬುಡದ ಸುತ್ತಲೂ ಬೆವರಿನಿಂದ ಕೂಡಿದ ತೇವವಿರಬೇಕು; ಮತ್ತು ಯಾವಾಗಲೂ ಆಹಾರ ತಿನ್ನುತ್ತಿರಬೇಕು.

ಅನಾರೋಗ್ಯದ ಲಕ್ಷಣಗಳು[ಬದಲಾಯಿಸಿ]

ಅನಾರೋಗ್ಯದ ಚಿಹ್ನೆಗಳೆಂದರೆ ಮಂಕಾಗಿ, ಯಾವ ತರಹದ ಲವಲವಿಕೆ, ಆಹಾರದ ಮೇಲಿನ ಆಸೆ ಇಲ್ಲದೆ ಇರುವುದು. ಕೆಲವು ರೋಗಗಳಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಅವುಗಳ ಆರೋಗ್ಯ ಉಷ್ಣಾಂಶತೆ 970. 4 ಫ್ಯಾ. -980 ಫ್ಯಾ ಗಳ ವರೆಗೆ ಇರುತ್ತದೆ. ಜ್ವರ ಬಂದಾಗ ಈ ಉಷ್ಣತೆ ಅಧಿಕವಾಗುತ್ತದೆ. ಕೆಲವು ವೇಳೆ ಕಡಿಮೆಯಾಗುವುದೂ ಉಂಟು.

ಚಿಕಿತ್ಸೆ[ಬದಲಾಯಿಸಿ]

ಆನೆಗೆ ಅನಾರೋಗ್ಯದ ಚಿಹ್ನೆಗಳು ಕಂಡಕೂಡಲೆ ಅದಕ್ಕೆ ವಿಶ್ರಾಂತಿ ಕೊಟ್ಟು, ತಕ್ಷಣಾ ನಿತ್ಯವೂ ಕೊಡುವ ಅಕ್ಕಿ, ಬತ್ತ ಮುಂತಾದ ಆಹಾರಗಳನ್ನು ನಿಲ್ಲಿಸಿ, ಅಹಾರ ತಿನ್ನುವ ಆಸೆ ತೋರಿಸಿದರೆ ಯಥೇಚ್ಛವಾಗಿ ಹಸಿ ಹುಲ್ಲನ್ನೂ ಸ್ವಚ್ಛ ನೀರನ್ನೂ ಕೊಡಬೇಕು. ಅವುಗಳ ರೋಗ ಇಂಥಾದ್ದು ಎಂದು ತಿಳಿದ ಕೂಡಲೆ ಅದಕ್ಕೆ ಸರಿಯಾದ ಔಷಧಿಗಳನ್ನು ಆಹಾರದ ಅಥವಾ ಇಂಜಕ್ಷನ್ ಮುಖಾಂತರ ಕೊಟ್ಟು ಚಿಕಿತ್ಸೆ ಮಾಡಬೇಕು. ಸ್ವಲ್ಪ ಗುಣಮುಖ ಕಂಡಕೂಡಲೆ ಅವನ್ನು ಸ್ವೇಚ್ಚೇಯಾಗಿ, ಇಷ್ಟಬಂದ ಆಹಾರವನ್ನು ಹುಡುಕಿಕೊಂಡು ತಿನ್ನುವುದಕ್ಕೆ ಕಾಡಿನಲ್ಲಿ ಬಿಡಬೇಕು. ಹೀಗೆ ಮಾಡುವುದರಿಂದ ಕೆಲವು ರೋಗಗಳು ಶೀಘ್ರವಾಗಿ ಗುಣಮುಖ ಹೊಂದುತ್ತದೆ.

ವಿವಿಧ ರೋಗಗಳು[ಬದಲಾಯಿಸಿ]

ಆನೆಗಳಿಂದ ಬರುವ ರೋಗಗಳು ಸಾಮಾನ್ಯವಾಗಿ ಹೀಗಿವೆ: 1. ಜಹೀರ್ ಅಥವಾ ಜಲೋದರ ರೋಗ ಬಹಳ ವಿಶೇಷವಾಗಿ ಬರುತ್ತವೆ. ದೀರ್ಘಕಾಲ ಪುಷ್ಟಿಕರ ಆಹಾರದ ಅಭಾವ ಇದರ ಕಾರಣ. ಇದರಲ್ಲಿ ರಕ್ತವೆಲ್ಲ ನೀರಾಗಿ, ಗಂಟಲಿನ ಕೆಳಭಾಗ, ಕತ್ತಿನ ಕೆಳಭಾಗ ಮತ್ತು ಕಾಲುಗಳಿಗೆ ನೀರು ತುಂಬಿಕೊಂಡು ಊದಲೂ ಕ್ರಮೇಣ ದಿನದಿನಕ್ಕೆ ನಿಶ್ಯಕ್ತಿ ಹೊಂದಿ ಸತ್ತು ಹೋಗುತ್ತದೆ. ಈ ರೋಗದ ಪ್ರಾರಂಭದಲ್ಲಿ ಅಂದರೆ ಊದಲು ಹೆಚ್ಚಿಗೆ ಇಲ್ಲದಿರುವಾಗ ಚಿಕಿತ್ಸೆ, ಮಾಡಿದರೆ ಗುಣಸಾಧ್ಯ. ಪುಷ್ಟಿಕರವಾದ ಆಹಾರ ಕೊಡಬೇಕು. ಅಂದರೆ ಗೋಧಿರೊಟ್ಟಿ, ತುಪ್ಪ, ಬೆಲ್ಲ ಮತ್ತು ಜೊತೆಗೆ ಭಗಿನಿ ಮರದ ತಿರುಳು ಮತ್ತು ಈಚಲ ಮರದ ಸುಳಿಗಳನ್ನು ಕೊಟ್ಟರೆ ಗುಣ ಹೊಂದುತ್ತದೆ. ಚೆನ್ನಾಗಿ ಹುಲ್ಲು ಮತ್ತು ಬಿದಿರು ಸೊಪ್ಪು ಬೆಳೆದಿರುವ ಕಾಡಿನಲ್ಲಿ ಬಿಟ್ಟರೂ ಗುಣ ಹೊಂದಲು ಅನುಕೂಲ. 2. ಕೆಲವು ಹುಳುಗಳ ರೋಗ ಬರುವುದುಂಟು. ವಿಶೇಷವಾಗಿ ಈ ಹುಳುಗಳು ಕರುಳಿನಲ್ಲೂ ಪಿತ್ತಕೋಶದಲ್ಲಿಯೂ ಇರುತ್ತವೆ. ಹುಳುಗಳು ಹೆಚ್ಚಾದಾಗ ಆನೆಗಳು ಸ್ವಾಭಾವಿಕವಾಗಿ, ಕಾಡಿನಲ್ಲಿ ಒಂದು ತರಹ ಕೆಂಪು ಮಣ್ಣುನ್ನು ತಿಂದು ಚೆನ್ನಾಗಿ ಭೇದಿ ಮಾಡಿಕೊಂಡು ಶಮನ ಪಡೆಯುತ್ತವೆ. 3.ಕೆಲವು ಅಂಟುರೋಗಗಳು ಬರುವುದುಂಟು. ಮುಖ್ಯವಾದವು i. ನರಡಿ ರೋಗ; ii ಮೆಟ್ರಾಗಟ್ಟು iii. ಸರ್ರಾ; iv. ಉಣ್ಣೆಗಳಿಂದ ಹರಡುವ ರೋಗ; v. ಕಾಲು ಜ್ವರ ಬಾಯಿಜ್ವರ, ಇತ್ಯಾದಿ. ಈ ರೋಗಗಳನ್ನು ಪ್ರಾರಂಭದಲ್ಲಿಯೇ ಕಂಡುಹಿಡಿದು ಚಿಕಿತ್ಸೆ ಮಾಡಿದರೆ, ಗುಣಹೊಂದುತ್ತವೆ. (ಡಿ.ಎಸ್.ಇ.)

ಉಲ್ಲೇಖಗಳು[ಬದಲಾಯಿಸಿ]

[೧] [೨]

  1. "ಆರ್ಕೈವ್ ನಕಲು". Archived from the original on 2016-11-14. Retrieved 2016-10-19.
  2. http://www.elephant.se/elephant_diseases.php?open=Elephant%20diseases