ಆಧುನಿಕ ಗೇಣಿ ಸಿದ್ಧಾಂತ
ರಿಕಾರ್ಡೊ ಸಿದ್ಧಾಂತಕ್ಕನುಸಾರ ಗೇಣಿ (rent) ನಿಸರ್ಗದತ್ತವಾದ ಭೂಮಿಯ (land) ವೈಶಿಷ್ಟ್ಯ. ಮೇಲುದರ್ಜೆಯ ಹಾಗೂ ಕೆಳದರ್ಜೆಯ ಭೂಮಿಗಳ ಉತ್ಪಾದನಾ ಸಾಮರ್ಥ್ಯಗಳ ವ್ಯತ್ಯಾಸವೇ ಗೇಣಿಗೆ ಕಾರಣ. ಆದ್ದರಿಂದ ಗೇಣಿ ಸಿದ್ಧಾಂತ ಭೂಮಿಗೆ ಮಾತ್ರ ಅನ್ವಯಿಸುತ್ತದೆ.
ಆಧುನಿಕ ಗೇಣಿ ಸಿದ್ಧಾಂತದ ಉದ್ದೇಶ
[ಬದಲಾಯಿಸಿ]ಆದರೆ ಆಧುನಿಕ ಅರ್ಥಶಾಸ್ತ್ರಜ್ಞರ ಅಭಿಪ್ರಾಯದಲ್ಲಿ ಗೇಣಿ ಸಿದ್ಧಾಂತವನ್ನು ಭೂಮಿಗೆ ಮಾತ್ರವೇ ಅನ್ವಯಿಸಬೇಕಾಗಿಲ್ಲ. ಅದು ಎಲ್ಲ ಉತ್ಪಾದನಾಂಗಗಳಿಗೂ ಅನ್ವಯಿಸುತ್ತದೆ. ಭೂಮಿಯಂತೆಯೇ ಶ್ರಮ, ಬಂಡವಾಳ, ಸಂಘಟನೆ ಇವುಗಳ ಉತ್ಪಾದನಾ ಸಾಮರ್ಥ್ಯಗಳ ವ್ಯತ್ಯಾಸದಿಂದಲೂ ಗೇಣಿ ತಲೆದೋರುವುದೆನ್ನಬಹುದು. ದಕ್ಷ ಕಾರ್ಮಿಕರು ಮತ್ತು ಸಂಘಟಕರಿಂದ ಬರುವ ಅಧಿಕ ಪ್ರತಿಫಲವನ್ನು ಸಾಮರ್ಥ್ಯ ಗೇಣಿ ಎನ್ನಬಹುದು. ಹಾಗೆಯೇ ಬಂಡವಾಳಕ್ಕೆ ದೊರಕುವ ಸದವಕಾಶದಿಂದಾಗಿ ಬರುವ ಅಧಿಕ ಪ್ರತಿಫಲವನ್ನು ಸದವಕಾಶ ಗೇಣಿ ಅಥವಾ ಅವಸರ ಗೇಣಿ ಎನ್ನಬಹುದು. ಈ ದೃಷ್ಟಿಯಲ್ಲಿ ಗೇಣಿಗೂ, ವೇತನಕ್ಕೂ ಯಾವ ವ್ಯತ್ಯಾಸವೂ ಇಲ್ಲವೆಂದು ವಿಕ್‌ಸ್ಟೀಡ್ ಹೇಳಿದ್ದಾನೆ. ವಾಕರ್ ಎಂಬ ಅಮೆರಿಕನ್ ಅರ್ಥಶಾಸ್ತ್ರಜ್ಞ ಲಾಭದ ಗೇಣಿ ಸಿದ್ಧಾಂತ (rent theory of profit) ಎಂಬ ಪ್ರತ್ಯೇಕ ಸಿದ್ಧಾಂತವನ್ನೇ ಪ್ರತಿಪಾದಿಸಿದ್ದಾನೆ. ಇದರಿಂದ ವ್ಯಕ್ತವಾಗುವ ಅಂಶವೆಂದರೆ, ಗೇಣಿಯನ್ನು ಎಲ್ಲ ಉತ್ಪಾದನಾಂಗಗಳಲ್ಲೂ ಕಾಣಬಹುದು. ಮಾರ್ಷಲ್ ಹೇಳಿದಂತೆ ಗೇಣಿಯು ವಿಶಾಲತರ ಜಾತಿಯೊಂದರ (ಜೀನಸ್) ಪ್ರಮುಖ ಪ್ರಭೇದ (ಸ್ಪೀಷೀಸ್). ಆದ್ದರಿಂದ ಗೇಣಿ ಸಿದ್ಧಾಂತವನ್ನು ಭೂಮಿಗೆ ಮಾತ್ರವೇ ಅನ್ವಯಿಸದೆ ಎಲ್ಲ ಉತ್ಪಾದನಾಂಗಗಳಿಗೂ ಅನ್ವಯಿಸುವ ಒಂದು ಸಾಮಾನ್ಯ ಸಿದ್ಧಾಂತವಾಗಿ ರೂಪಿಸಬೇಕು. ಇದೇ ಆಧುನಿಕ ಗೇಣಿ ಸಿದ್ಧಾಂತದ ಉದ್ದೇಶ.
ಸಿದ್ಧಾಂತದ ಮುಖ್ಯಾಂಶಗಳು
[ಬದಲಾಯಿಸಿ]ಜೋನ್ ರಾಬಿನ್ಸನ್ ಪ್ರಕಾರ ಆಧುನಿಕ ಗೇಣಿ ಸಿದ್ಧಾಂತದ ಮುಖ್ಯಾಂಶಗಳು ಇವು: ಗೇಣಿಗೆ ಮೂಲ ಕಾರಣವೆಂದರೆ ಉತ್ಪಾದನಾಂಗದ ಅಭಾವ; ಅಂದರೆ ಅದರ ಬೇಡಿಕೆ ತಕ್ಕ ಪ್ರಮಾಣದಲ್ಲಿ ಪೂರೈಕೆಯಿಲ್ಲದಿರುವುದು. ಇದು ಭೂಮಿಗೆ ಹೇಗೆ ಅನ್ವಯಿಸುವುದೋ ಹಾಗೆಯೇ ಇತರ ಉತ್ಪಾದನಾಂಗಗಳಿಗೂ ಅನ್ವಯಿಸುತ್ತದೆ. ನಿಸರ್ಗದತ್ತವಾದ ಭೂಮಿಯ ಪರಿಮಾಣವನ್ನು ಹೇಗೆ ಹೆಚ್ಚಿಸಲಾಗುವುದಿಲ್ಲವೋ ಹಾಗೆಯೇ ಮಾನವಕೃತವಾದ ಇತರ ಉತ್ಪಾದನಾಂಗಗಳ ಪರಿಮಾಣವನ್ನೂ ಅಲ್ಪಾವಧಿಯಲ್ಲಿ ಹೆಚ್ಚಿಸಲಾಗುವುದಿಲ್ಲ.
ಹೀಗಿರುವಾಗ ಅಲ್ಪಾವಧಿಯಲ್ಲಿ ಯಾವುದಾದರೂ ಉತ್ಪಾದನಾಂಗವನ್ನು ಹೆಚ್ಚು ಹೆಚ್ಚು ಪರಿಮಾಣಗಳಲ್ಲಿ ಉಪಯೋಗಿಸಿದರೆ, ಅದರ ಸೀಮಾಂತ ಏಕಮಾನದ ವರಮಾನ ಅದರ ಉತ್ಪನ್ನಕ್ಕೆ ಸಮನಾಗಿರುತ್ತದೆ. ಅದಕ್ಕೆ ಮೇಲ್ಮಟ್ಟದ ಏಕಮಾನಗಳಿಗೆ ಹೆಚ್ಚಿನ ವರಮಾನ ದೊರೆಯುತ್ತದೆ. ಆ ಹೆಚ್ಚುವರಿಯನ್ನು ಗೇಣಿ ಎನ್ನಬಹುದು.
ಈ ದೃಷ್ಟಿಯಲ್ಲಿ ಎಲ್ಲ ಉತ್ಪಾದನಾಂಗಗಳ ಪರಿಸ್ಥಿತಿಯೂ ಸ್ಥೂಲವಾಗಿ ಒಂದೇ. ವ್ಯತ್ಯಾಸವಿಷ್ಟೆ: ಭೂಮಿಯ ಪರಿಮಾಣ ಖಾಯಂ ಆಗಿ ನಿಶ್ಚಿತವಾಗಿರುತ್ತದೆ. ಇತರ ಉತ್ಪಾದನಾಂಗಗಳ ಪರಿಮಾಣ ತಾತ್ಕಾಲಿಕವಾಗಿ ನಿಶ್ಚಿತವಾಗಿರುತ್ತದೆ. ಸಾಕಷ್ಟು ಸಮಯ ದೊರೆತರೆ ಇವುಗಳ ಪರಿಮಾಣವನ್ನು ಹೆಚ್ಚಿಸಬಹುದು.
ಹೀಗೆ ಉತ್ಪಾದನಾಂಗಗಳಿಗೆ ಅಲ್ಪಾವಧಿಯಲ್ಲಿ ಅಭಾವವಿರುವಾಗ ಅವುಗಳಿಗೆ ಪರ್ಯಾಯ ಬೇಡಿಕೆಗಳಿರುತ್ತವೆ. ಆಗ ಅವು ಅಧಿಕ ವರಮಾನವನ್ನರಸುತ್ತ ಒಂದು ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ವರ್ಗಾವಣೆ ಹೊಂದಲು ಪ್ರಯತ್ನಿಸುತ್ತವೆ. ಈ ಪರಿಸ್ಥಿತಿಯಲ್ಲಿ ಯಾವುದೇ ಉತ್ಪಾದನಾಂಗವನ್ನು ಒಂದು ಉದ್ಯಮದಲ್ಲಿ ಉಳಿಸಿಕೊಳ್ಳಲು ಅದಕ್ಕೆ ಸಲ್ಲಬೇಕಾದ ಬೆಲೆಯೇ ವರ್ಗಾವಣೆ ಸಂಪಾದನೆ (ಟ್ರಾನ್ಸ್‌ಫರ್ ಅರ್ನಿಂಗ್ಸ್). ಎಂದರೆ ಒಂದು ಉತ್ಪಾದನಾಂಗ ತನಗಿರುವ ಪರ್ಯಾಯ ಉದ್ಯೋಗಾವಕಾಶಗಳಲ್ಲಿ ಅತ್ಯಂತ ಫಲದಾಯಕ ಉದ್ಯೋಗದಿಂದ ಪಡೆಯುವ ಸಂಪಾದನೆ. ಈ ವರ್ಗಾವಣೆ ಸಂಪಾದನೆಯನ್ನು ಮೀರಿ ಬರುವ ವರಮಾನವೇ ಗೇಣಿ. ಉದಾಹರಣೆಗೆ ಒಬ್ಬ ಕಾರ್ಮಿಕನಿಗೆ ಒಂದು ಗಿರಣಿಯಲ್ಲಿ ದಿನಕ್ಕೆ 20 ರೂ. ವೇತನವಿದ್ದು, ಒಂದು ಅಂಗಡಿಯಲ್ಲಿ 12 ರೂ. ವೇತನ ದೊರೆಯುವುದಾದರೆ, ಆಗ ಗಿರಣಿಯ ದೃಷ್ಟಿಯಿಂದ ಅವನ ವರ್ಗಾವಣೆ ಸಂಪಾದನೆ 12 ರೂ. ಆತ ಗಿರಣಿಯ ಕೆಲಸ ಬಿಡದಂತೆ ತಡೆಯಲು ಅಷ್ಟನ್ನಾದರೂ ಕೊಡಲೇಬೇಕು. ಅದಕ್ಕೆ ಹೆಚ್ಚಾಗಿ ಕೊಡುವ 8 ರೂ. ಗೇಣಿ ಎನಿಸಿಕೊಳ್ಳುತ್ತದೆ.
ಅರೆ-ಗೇಣಿ
[ಬದಲಾಯಿಸಿ]ಆಲ್ಫ್ರೆಡ್ ಮಾರ್ಷಲ್ ಗೇಣಿ ಎಂಬ ಪದವನ್ನು ಭೂಮಿಯ ಹೆಚ್ಚಳದ ವರಮಾನಕ್ಕೆ ಮೀಸಲಿಟ್ಟು, ಇತರ ಉತ್ಪಾದನಾಂಗಗಳಿಗೆ ಅಲ್ಪಾವಧಿಯಲ್ಲಿ ದೊರೆಯುವ ಅಧಿಕ್ಯವನ್ನು ಅರೆ-ಗೇಣಿ ಅಥವಾ ಒಂದು ಬಗೆಯ ಗೇಣಿ ಎನ್ನುತ್ತಾನೆ. ಏಕೆಂದರೆ, ಗೇಣಿ ದೀರ್ಘಾವಧಿಯಲ್ಲಿಯೂ ಇರುತ್ತದೆ; ಆದರೆ ಅರೆ-ಗೇಣಿ ಅಲ್ಪಾವಧಿಯಲ್ಲಿ ಮಾತ್ರ ಇರುತ್ತದೆ; ದೀರ್ಘಾವಧಿಯಲ್ಲಿ ಅದು ಅದೃಶ್ಯವಾಗುತ್ತದೆ.[೧][೨]
ಅರೆ-ಗೇಣಿ ತಲೆದೋರಲು ಕಾರಣವೇನೆಂದರೆ, ಅಲ್ಪಾವಧಿಯಲ್ಲಿ ಆ ಉತ್ಪಾದನಾಂಗದ ಪರಿಮಾಣವನ್ನು ಬೇಡಿಕೆಗೆ ಅನುಗುಣವಾಗಿ ಹೆಚ್ಚಿಸಲು ಸಾಧ್ಯವಾಗುವುದಿಲ್ಲ. ಆಗ ಆ ಉತ್ಪಾದನಾಂಗದ ಕೆಳದರ್ಜೆಯು ಏಕಮಾನಗಳನ್ನು ಉಪಯೋಗಿಸಿಕೊಳ್ಳಬೇಕಾಗುತ್ತದೆ. ಎಂದರೆ ಮೇಲ್ದರ್ಜೆಯ ಏಕಮಾನಗಳಿಗೆ ಹೆಚ್ಚಿನ ವರಮಾನ ಬರುತ್ತದೆ. ಆ ಆಧಿಕ್ಯವೇ ಗೇಣಿ. ಆದರೆ ಇದು ತಾತ್ಕಾಲಿಕ, ಏಕೆಂದರೆ, ಕಾಲಕ್ರಮದಲ್ಲಿ ಉತ್ತಮ ದರ್ಜೆಯ ಏಕಮಾನಗಳ ಸರಬರಾಯಿ ಹೆಚ್ಚಿದಂತೆ ಈ ಹೆಚ್ಚಳ ಕಡಿಮೆಯಾಗುತ್ತದೆ. ಉದಾಹರಣೆಗೆ, ಮೀನಿಗೆ ಇದ್ದಕ್ಕಿದ್ದಂತೆಯೇ ಅಧಿಕ ಬೇಡಿಕೆ ತಲೆದೋರಿದರೆ, ಮೀನಿನ ಬಲೆಗಳಿಗೆ ಬೇಡಿಕೆ ಹೆಚ್ಚುತ್ತದೆ. ಆದರೆ ಕೂಡಲೇ ಬಲೆಗಳ ಸರಬರಾಯಿಯನ್ನು ಹೆಚ್ಚಿಸಲಾಗುವುದಿಲ್ಲ. ಆದ್ದರಿಂದ ಹಳೆಯ ಬಲೆಗಳನ್ನು ಹೊರತರಲಾಗುತ್ತದೆ. ಆಗ ಉತ್ತಮ ಬಲೆಗಳಿಗೆ ಹಳೆಯ ಬಲೆಗಳಿಗಿಂತ ಹೆಚ್ಚಿನ ಬೆಲೆ ಬರುತ್ತದೆ. ಈ ಆಧಿಕ್ಯವೇ ಗೇಣಿ ಇದ್ದಂತೆ. ಆದರೆ ಇದು ತಾತ್ಕಾಲಿಕ ಮಾತ್ರ. ಏಕೆಂದರೆ, ಕಾಲಕ್ರಮದಲ್ಲಿ ಹೊಸ ಬಲೆಗಳು ತಯಾರಾಗಿ ಬರುತ್ತವೆ. ಬಲೆಗಳು ಪಡೆಯುತ್ತಿದ್ದ ಗೇಣಿ ಹೋಗುತ್ತದೆ.
ಅಲ್ಪಾವಧಿಯಲ್ಲಿ ಗೇಣಿ ಮತ್ತು ಅರೆ-ಗೇಣಿ ಎರಡೂ ಒಂದೇ. ಆದರೆ ದೀರ್ಘಾವಧಿಯಲ್ಲಿ ಅವು ಭಿನ್ನವಾದಂಥವು. ಈ ವ್ಯತ್ಯಾಸವನ್ನು ಮಾರ್ಷಲ್ ಉಲ್ಕಾ ಶಿಲೆಗಳ ಉದಾಹರಣೆಯ ಮೂಲಕ ತೋರಿಸಿದ್ದಾನೆ: ಒಂದೆಡೆ ಉಲ್ಕಾವೃಷ್ಟಿಯ ಫಲವಾಗಿ ಸಾವಿರಾರು ಉಲ್ಕಾ ಶಿಲೆಗಳು ಬಿದ್ದು ಚದರಿದವೆನ್ನೋಣ. ಒಂದನ್ನೂ ಬಿಡದೆ ಅವನ್ನು ಆರಿಸಿಕೊಳ್ಳಲಾಯಿತೆಂದೂ ಭಾವಿಸೋಣ. ಅವು ಕೈಗಾರಿಕೆಗಳಿಗೆ ಉಪಯುಕ್ತವೆಂದು ಕಂಡುಬಂದರೆ ಅವನ್ನು ಆರಿಸಿಟ್ಟುಕೊಂಡಿರುವವರು ಅಧಿಕ ಹಣ ಪಡೆಯುತ್ತಾರೆ. ಆದರೆ ಅಧಿಕ ಬೆಲೆ ಕೊಟ್ಟರೂ ಅವುಗಳ ಪರಿಮಾಣವನ್ನು ಹೆಚ್ಚಿಸಲಾಗುವುದಿಲ್ಲ. ಹೀಗೆ ಅಭಾವವಿರುವಾಗ ಅವುಗಳಿಗೆ ಕೊಡುವ ಬೆಲೆ ಗೇಣಿ ಎನಿಸಿಕೊಳ್ಳುತ್ತದೆ. ಒಂದು ವೇಳೆ ಅವು ಸುಲಭವಾಗಿ ದೊರಕುವಂತಾದರೆ ಅವುಗಳಿಗೆ ಗೇಣಿಯೇ ಇರುವುದಿಲ್ಲ. ಹಾಗಲ್ಲದೆ ಅವುಗಳ ಅಭಾವ ತಾತ್ಕಾಲಿಕವಾಗಿದ್ದು, ದೀರ್ಘಾವಧಿಯಲ್ಲಿ ಅವುಗಳ ಪರಿಮಾಣವನ್ನು ಹೆಚ್ಚಿಸಬಹುದಾದರೆ ಅವುಗಳಿಗೆ ಅಲ್ಪಾವಧಿಯಲ್ಲಿ ದೊರೆಯುವ ಬೆಲೆ ಅರೆ-ಗೇಣಿ ಎನಿಸಿಕೊಳ್ಳುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Quasi Rent".
- ↑ "Quasi Rent Explained". 24 July 2014.
