ಅಸ್ತ್ರಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಯುಧ ಲೇಖನಕ್ಕಾಗಿ ಇಲ್ಲಿ ನೋಡಿ.

ಪ್ರಾಚೀನ ಭಾರತದಲ್ಲಿ ಯುದ್ಧಗಳಲ್ಲಿ ಸೈನಿಕರು ಉಪಯೋಗಿಸುತ್ತಿದ್ದ ಆಯುಧಗಳು. ಚರಿತ್ರೆಯ ಕಾಲಕ್ಕಿಂತ ಪೂರ್ವದಲ್ಲಿ ಬಳಕೆಯಲ್ಲಿದ್ದ ಆಯುಧಗಳ ವಿಷಯ ತಿಳಿಯಬೇಕಾದರೆ ಅದಕ್ಕೆ ರಾಮಾಯಣ, ಮಹಾಭಾರತ ಮತ್ತು ಇತಿಹಾಸಗಳೇ ನಮಗಿರತಕ್ಕ ಆಧಾರ. ಈ ಅಸ್ತ್ರಗಳು ಆ ಕಾಲದ ನಮ್ಮ ಪೂರ್ವಜರಿಗೆ ಪರಿಚಿತವಾಗಿದ್ದುವೆಂದು ಸಾಧಿಸಬೇಕಾದರೆ ಆ ಮಹಾಕಾವ್ಯಗಳೂ, ಪ್ರಾಚೀನಗ್ರಂಥಗಳೂ ವಾಸ್ತವಿಕ ಸಂಗತಿಗಳನ್ನೇ ತಿಳಿಸುತ್ತವೆಯೆಂದು ಸಾಧಿಸಬೇಕಾದ ಅವಶ್ಯಕತೆಯೇನಿಲ್ಲ. ಅವು ಚಾರಿತ್ರಿಕ ವಿಷಯಗಳನ್ನು ಪ್ರತಿಪಾದಿಸಬಹುದು ಅಥವಾ ಇಲ್ಲದಿರಬಹುದು: ಅವುಗಳಲ್ಲಿ ಆಯುಧಗಳ ವಿಚಾರ ಬಂದಿದೆ ಎಂಬುದಷ್ಟೇ ನಮ್ಮ ಉದ್ದೇಶಕ್ಕೆ ಸಾಕು. ಆ ಮಹಾ ಕಾವ್ಯಗಳು ರಚಿತವಾಗುವುದಕ್ಕೆ ಮೊದಲೇ ಈ ಆಯುಧಗಳು ಬೆಳಕಿಗೆ ಬಂದಿರಲೇಬೇಕು. ಹಾಗಿಲ್ಲದಿದ್ದಲ್ಲಿ ಯಾವ ಗ್ರಂಥಕರ್ತೃವಾಗಲಿ ತನ್ನ ಗ್ರಂಥಗಳಲ್ಲೂ ಕಥೆಗಳಲ್ಲೂ ಯೋಧರು ಬಳಸುತ್ತಿದ್ದ ಆಯುಧಗಳ ವಿವರಗಳನ್ನು ಕೊಡುತ್ತಿರಲಿಲ್ಲ. ಅವನು ಎಷ್ಟೇ ಭಾವನಾಪ್ರಧಾನವಾದ ಲೇಖಕನಾಗಿದ್ದರು ತನ್ನ ಗ್ರಂಥದಲ್ಲಿ ಅವುಗಳ ವಿಷಯಗಳನ್ನು ಬರೆಯುತ್ತಿರಲಿಲ್ಲ.[೧]

ಪರಶುರಾಮ ಪರಶು[ಬದಲಾಯಿಸಿ]

ಪರಶುರಾಮ ಪರಶುವನ್ನು ಎಂದರೆ ತನ್ನ ಗಂಡುಗೊಡಲಿಯನ್ನು ಯಾವಾಗಲೂ ಬಳಿಯುಲ್ಲಿಟ್ಟುಕೊಂಡಿರುತ್ತಿದ್ದನಂತೆ. ಶ್ರೀಕೃಷ್ಣ ತನ್ನ ಚಕ್ರದಿಂದ ಶತ್ರುಗಳನ್ನು ವಧಿಸುತ್ತಿದ್ದ. ಅರ್ಜುನ ಸುವರ್ಣದ ವಜ್ರಕವಚವನ್ನು ಧರಿಸುತ್ತಿದ್ದನಂತೆ. ಕ್ರೀಡಾ ಸ್ಪರ್ಧೆಗಳಲ್ಲಿ ಅರ್ಜುನ ಕತ್ತಿಯಿಂದಲೂ ಬಿಲ್ಲಿನಿಂದಲೂ ವಿಸ್ಮಯಕರವಾದ ಕೈಚಳಕವನ್ನು ಪ್ರದರ್ಶಿಸುತ್ತಿದ್ದನಂತೆ. ತನ್ನ ರಥ ರಭಸದಿಂದ ಧಾವಿಸುತ್ತಿದ್ದಂತೆಯೇ ಆತ ಒಂದು ಕೋಣದ ಕೊಂಬಿನ ಟೊಳ್ಳಿನೊಳಗೆ 21 ಬಾಣಗಳನ್ನು ಬಿಟ್ಟನೆಂದೂ ಪ್ರತೀತಿ ಇದೆ. ಚಕ್ರದಂಥ ತನ್ನ ಸುತ್ತುಬಳೆಯನ್ನು ಎಸೆಯುವುದರಲ್ಲಿ ಅವನು ಒಮ್ಮೆಯಾದರೂ ಗುರಿತಪ್ಪಲಿಲ್ಲ. ಪದಾತಿ ಸೈನ್ಯದವರು ಈಟಿಗಳನ್ನು ಅಗಲಗತ್ತಿಗಳನ್ನು ಹೊಂದಿರುತ್ತಿದ್ದರು ಎಂದು ಗ್ರಂಥಗಳಲ್ಲಿ ಪ್ರಸ್ತಾಪಿಸಲಾಗಿದೆ.

ಬೆಂಕಿಯನ್ನುಗುಳುವ ಅಗ್ನ್ಯಸ್ತ್ರಗಳು[ಬದಲಾಯಿಸಿ]

ಬೆಂಕಿಯನ್ನುಗುಳುವ ಅಗ್ನ್ಯಸ್ತ್ರಗಳು ಬಹು ಪ್ರಾಚೀನಕಾಲದಲ್ಲೇ ಜನರಿಗೆ ತಿಳಿದಿದ್ದುವು. ಅತ್ಯಂತ ಸಮರ್ಪಕವಾದ ಎಲ್ಲ ಆಧಾರಗಳನ್ನೂ ಪರಿಶೀಲಿಸಿ, ಸರ್. ಎಚ್. ಎಲಿಯಟ್ ಎಂಬ ಪ್ರಸಿದ್ಧ ಪಾಶ್ಚಾತ್ಯ ವಿಮರ್ಶಕ ಪ್ರಾಚೀನ ಭಾರತೀಯರಿಗೆ ಈ ಅಗ್ನ್ಯಸ್ತ್ರಗಳು ತಿಳಿದಿದ್ದವೆಂದು ಹೇಳಿದ್ದಾನೆ (ಭಾರತದ ಚರಿತ್ರೆ ಸಂಪುಟ 1- ಪುಟ 481). ಆ ಬಾಣಗಳು ತುದಿಯಿಂದ ಕಿಡಿಗಳನ್ನು ಕಾರುತ್ತಿದ್ದವು. ಅವುಗಳನ್ನು ಒಂದು ಬೊಂಬಿನಿಂದ ಹಾರಿಸುತ್ತಿದ್ದರು. ಸಿಡಿಮದ್ದು, ಗಂಧಕ ಅಥವಾ ಪೆಟ್ಲುಪ್ಪಿನಿಂದ ತಯಾರಿಸಿದ ಮಿಶ್ರವಸ್ತುವಿನ ತಯಾರಿಕೆಯ ವಿಧಾನ ಬಹುಶ: ಚರಿತ್ರೆಗೆ ಪೂರ್ವದ ಕಾಲಕ್ಕೆ ಅವಶೇಷವಾಗಿ ಹೋಗಿರಬೇಕು.[೨]

ಕಬ್ಬಿಣ ಬಳಕೆ[ಬದಲಾಯಿಸಿ]

ಮನುವಿನ ಕಾಲಕ್ಕೆಲ್ಲ ಕಬ್ಬಿಣ ಬಳಕೆಗೆ ಬಂದಿತ್ತು. ಬೆತ್ತದಿಂದ ತಯಾರಿಸಿದ ಬಿಲ್ಲುಗಳೂ ತುದಿಯಲ್ಲಿ ಕಬ್ಬಿಣದ ಕೂರಲಗುಳ್ಳ ಬಾಣಗಳೂ ಭಾರತೀಯರ ಬಳಿ ಇದ್ದುವೆಂದು ಗ್ರೀಕ್ ಚರಿತ್ರಕಾರ ಹೆರಾಡಟೀಸ್ ತಿಳಿಸಿದ್ದಾನೆ. ಅಲೆಕ್ಸಾಂಡರನ ದಂಡಯಾತ್ರೆಯ ಕಾಲಕ್ಕೆ ಭಾರತೀಯರು ಕೂರಲಗಿನ ಬಾಣಗಳಿಂದಲೂ ಗುರಾಣಿಗಳಿಂದಲೂ ಸನ್ನದ್ಧರಾಗಿ ಗ್ರೀಕರನ್ನು ಎದುರಿಸಿದ ವಿಷಯವನ್ನ ಚರಿತ್ರೆಯಲ್ಲಿ ಓದಿದ್ದೇವೆ.

ಬಿಲ್ಲು ಬಾಣಗಳು[ಬದಲಾಯಿಸಿ]

ಸಾಂಚಿಯ ಅರೆಯುಬ್ಬು ಕೆತ್ತನೆಯ ಶಿಲ್ಪಕಲಾಕೃತಿಗಳಲ್ಲಿ ಕಾಲಾಳುಗಳ ಕೈಯಲ್ಲಿ ಬಿಲ್ಲುಗಳಿರುವುದನ್ನೂ ನೋಡಬಹುದು. ಭಿಲ್ಸಾತೋಪಿನ ಶಿಲ್ಪದಲ್ಲಿ ಬಿಲ್ಲು ಬಾಣ, ಕಠಾರಿ, ಖಡ್ಗ, ತ್ರಿಕೋಣಾಕಾರದ ತುದಿಯ ಈಟಿ, ಕೊಡಲಿ, ಕವಣೆ, ಗಂಡುಗೊಡಲಿ ಮತ್ತು ತ್ರಿಶೂಲಗಳಿವೆ. ಇವುಗಳನ್ನೇ ಉದಯಗಿರಿಯ ಶಿಲ್ಪಕಲಾಕೃತಿಗಲ್ಲೂ ನೋಡಬಹುದು. ಅಲ್ಲಿನ ಬಾಣಗಳು 3'-5' ಗಳಷ್ಟು ಉದ್ದವಾಗಿವೆ. ಅವುಗಳಲ್ಲಿ ಕೆಲವು ಮಂದಿ ಯೋಧರು ಬಾಣಗಳಿಗೆ ಬದಲಾಗಿ ತುದಿಯಲ್ಲಿ ಕಚ್ಚುಗಳನ್ನು ಕೆತ್ತಿರುವ ಆಯುಧಗಳನ್ನು ಉಪಯೋಗಿಸುವುದನ್ನು ಕಾಣಬಹುದು. ಕೆಲವು ಮಂದಿ ರಾವುತರ ಬಳಿ ಎರಡು ಈಟಿಗಳಿವೆ. ಅವು ಸೌನಿಯವೆಂಬ ಹೆಸರಿನ ಈಟಿಗಳಂತಿವೆ. ಕೆಲವರ ಗುರಾಣಿಗಳು 2', 3' ಉದ್ದವಾಗಿಯೂ 1.5' ಅಗಲವಾಗಿಯೂ ಇವೆ. ಅವು ಯೋಧನನ್ನು ತಲೆಯಿಂದ ಮೊಣಕಾಲವರೆಗೆ ರಕ್ಷಿಸಲು ಸಹಾಯಕವಾಗಿವೆ. ಇನ್ನು ಕೆಲವು ರಾವುತರ ಗುರಾಣಿಗಳು ಸುಮಾರು 2' ಉದ್ದವಾದ ಗಂಟೆಯ ಆಕಾರದಲ್ಲಿವೆ; ಅವುಗಳ ತಲಭಾಗ ದುಂಡಾಗಿದೆ.[೩]

ಸಿದ್ದಾರ್ಥ[ಬದಲಾಯಿಸಿ]

ಸಿದ್ದಾರ್ಥ ಬೇರೆ ಯಾರೂ ಹೆದೆಯೇರಿಸುವುದಕ್ಕೇ ಆಗದಿದ್ದ ಬಿಲ್ಲಿಗೆ ಹೆದೆಯೇರಿಸುತ್ತಿದ್ದನಂತೆ. ಮತ್ತು ಅದರಿಂದ ಬಹುದೂರದಲ್ಲಿರುವ ಕಬ್ಬಿಣದ ಲಕ್ಷ್ಯಗಳನ್ನು ಭೇದಿಸುತ್ತಿದ್ದನಂತೆ. ಅವನ ಬಾಣಪ್ರಯೋಗದಿಂದ ಚಿಲುಮೆ ಉಕ್ಕಿದ ವಿಚಾರವನ್ನು ಪಾóಹಿಯಾನ್ ಯಾತ್ರಿಕ ತನ್ನ ಗ್ರಂಥದಲ್ಲಿ ತಿಳಿಸಿದ್ದಾನೆ.

ಪರ್ವತ ಕಂದರದಲ್ಲಿ ಯುದ್ಧ ನಿರೂಪಕ ಶಿಲ್ಪಕಲೆ[ಬದಲಾಯಿಸಿ]

ಓರಿಸ್ಸದಲ್ಲಿರುವ ಕ್ರಿ. ಪೂ. 700ರ ಒಂದು ಪರ್ವತ ಕಂದರದಲ್ಲಿ ಯುದ್ಧ ನಿರೂಪಕ ಶಿಲ್ಪಕಲೆಯನ್ನು ನೋಡಬಹುದು. ಅದರಲ್ಲಿನ ಯೋಧರ ಬಳಿ ಕತ್ತಿಗಳೂ ದೀರ್ಘ ಚತುರಸ್ರಾಕಾರದ ಗುರಾಣಿಗಳೂ ಪುರುಷಪ್ರಮಾಣದಲ್ಲಿ ಮೂರನೆ ಎರಡರಷ್ಟು ಉದ್ದದ ಬಿಲ್ಲೂ ಇರುವುದನ್ನು ನೋಡಬಹುದು. ಅಜಂತದ ಚಿತ್ರಕಲೆಯಲ್ಲಿ (16ನೆಯ ಗುಹೆ) ಯೋಧರ ಬಳಿ ಕುಕ್ರಿಯಂಥ ಸಣ್ಣ ಕತ್ತಿಯೂ ಕೆತ್ತನೆ ಮಾಡಿದ ಗುರಾಣಿಯೂ ಕಂಡುಬರುತ್ತವೆ. ಭುವನೇಶ್ವರದ ಕಲಾಕೃತಿಗಳಲ್ಲಿ (ಕ್ರಿ. ಶ. 650) ಖಡ್ಗಧಾರಿಗಳೂ ಬಿಲ್ಲುಗಾರರೂ ಪದಾತಿ ಸೈನ್ಯದವರೂ ರಾವುತರೂ ನಿರೂಪಿತರಾಗಿದ್ದಾರೆ. ರಾಜಪುತಾನದ ಜೈನ ಶಿಲ್ಪಕಲಾಕೃತಿಗಳಲ್ಲಿನ ವೀರಯೋಧರು ಕತ್ತಿ, ಕಠಾರಿಗಳನ್ನು ಧರಿಸಿರುವುದನ್ನೂ ಅವುಗಳ ಹಿಡಿಗಳಿಗೆ ಕವಚಗಳಿರುವುದನ್ನೂ ಕಾಣಬಹುದು.

ಉಲ್ಲೇಖಗಳು[ಬದಲಾಯಿಸಿ]

  1. http://kannadagottilla.com/battalikeyallina-astragalu/
  2. "ಆರ್ಕೈವ್ ನಕಲು". Archived from the original on 2016-10-02. Retrieved 2016-10-19.
  3. http://www.varthabharati.in/article/antaraashtriya/15210