ಸೂರ್ಯಾಸ್ತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಸ್ತಮಾನ ಇಂದ ಪುನರ್ನಿರ್ದೇಶಿತ)
ಸೂರ್ಯಾಸ್ತವಾಗುತ್ತಿರುವುದು

ಸೂರ್ಯಾಸ್ತ ಎಂದರೆ ಭೂಮಿಯ ಪರಿಭ್ರಮಣದ ಪರಿಣಾಮವಾಗಿ ದಿಗಂತದ ಕೆಳಗೆ ಸೂರ್ಯ ದೈನಂದಿನ ಮರೆಯಾಗುವುದು. ವರ್ಷಕ್ಕೆ ಕೇವಲ ಒಮ್ಮೆ ಉಂಟಾಗುವ ವಸಂತ ಮತ್ತು ಶರತ್ಕಾಲದ ವಿಷುವತ್ಸಂಕ್ರಾಂತಿಗಳಂದು ಸೂರ್ಯ ಪಶ್ಚಿಮದಲ್ಲಿ ನಿಖರವಾಗಿ ಭೂಮಧ್ಯರೇಖೆಯಲ್ಲಿ ಅಸ್ತವಾಗುತ್ತದೆ.

ಖಗೋಳಶಾಸ್ತ್ರದಲ್ಲಿ ಸೂರ್ಯಾಸ್ತದ ಸಮಯವನ್ನು ಸೂರ್ಯನ ಬಿಂಬದ ಹಿಂಭಾಗದ ಅಂಚು ದಿಗಂತದ ಕೆಳಗೆ ಕಣ್ಮರೆಯಾಗುವ ಕ್ಷಣವೆಂದು ವ್ಯಾಖ್ಯಾನಿಸಲಾಗುತ್ತದೆ. ದಿಗಂತದ ಹತ್ತಿರ, ವಾಯುಮಂಡಲದ ವಕ್ರೀಭವನದ ಕಾರಣ ಸೂರ್ಯನ ಬೆಳಕಿನ ಕಿರಣ ಪಥವು ಎಷ್ಟು ವಿರೂಪಗೊಳ್ಳುತ್ತದೆಂದರೆ ಸೂರ್ಯಾಸ್ತವನ್ನು ವೀಕ್ಷಿಸಿದಾಗ ಜ್ಯಾಮಿತೀಯವಾಗಿ ಸೂರ್ಯನ ಬಿಂಬವು ಆಗಲೇ ಸುಮಾರು ಒಂದು ವ್ಯಾಸದಷ್ಟು ದಿಗಂತದ ಕೆಳಗಿರುತ್ತದೆ.

ಸೂರ್ಯಾಸ್ತವು ನಸುಬೆಳಕಿನಿಂದ ಭಿನ್ನವಾಗಿದೆ. ನಸುಬೆಳಕು ಮೂರು ಹಂತಗಳನ್ನು ಹೊಂದಿರುತ್ತದೆ, ಮೊದಲನೆಯದು ವ್ಯಾವಹಾರಿಕ ನಸುಬೆಳಕು, ಇದು ಸೂರ್ಯ ದಿಗಂತದ ಕೆಳಗೆ ಮರೆಯಾದ ನಂತರ ಆರಂಭವಾಗಿ ಅದು ದಿಗಂತದ ಕೆಳಗೆ 6 ಡಿಗ್ರಿ ಕೆಳಗಿಳಿಯುವವರೆಗೆ ಮುಂದುವರಿಯುತ್ತದೆ; ಎರಡನೇ ಹಂತ ನಾವಿಕ ನಸುಬೆಳಕು, ದಿಗಂತದ ಕೆಳಗೆ ೬ ಮತ್ತು ೧೨ ಡಿಗ್ರಿ ನಡುವೆ; ಮತ್ತು ಮೂರನೆಯದು ಖಗೋಳಶಾಸ್ತ್ರೀಯ ನಸುಬೆಳಕು, ಇದು ಸೂರ್ಯ ದಿಗಂತದ ಕೆಳಗೆ ೧೨ ಮತ್ತು ೧೮ ಡಿಗ್ರಿ ನಡುವೆ ಇರುವ ಅವಧಿ.[೧] ಮುಂಗತ್ತಲೆಯು ಖಗೋಳಶಾಸ್ತ್ರೀಯ ನಸುಬೆಳಕಿನ ಅತಿ ಕೊನೆಯಲ್ಲಿ ಬರುವಂಥದ್ದು, ಮತ್ತು ರಾತ್ರಿಗೆ ಸ್ವಲ್ಪ ಮೊದಲು ನಸುಬೆಳಕಿನ ಅತ್ಯಂತ ಕತ್ತಳೆ ಕ್ಷಣ. ಸೂರ್ಯ ದಿಗಂತದ ಕೆಳಗೆ ೧೮ ಡಿಗ್ರಿ ತಲುಪಿದಾಗ ಮತ್ತು ಆಕಾಶವನ್ನು ಪ್ರಕಾಶಗೊಳಿಸದಿದ್ದಾಗ ರಾತ್ರಿ ಉಂಟಾಗುತ್ತದೆ.

ಆರ್ಕ್ಟಿಕ್ ವೃತ್ತದ ಉತ್ತರದಲ್ಲಿನ ಮತ್ತು ಅಂಟಾರ್ಕ್ಟಿಕ್ ವೃತ್ತದ ದಕ್ಷಿಣದಲ್ಲಿನ ಸ್ಥಳಗಳು ವರ್ಷಕ್ಕೆ ಕನಿಷ್ಠಪಕ್ಷ ಒಂದು ದಿನದಂದು ಸೂರ್ಯಾಸ್ತ ಅಥವಾ ಸೂರ್ಯೋದಯವನ್ನು ಅನುಭವಿಸುವುದಿಲ್ಲ, ಆಗ ಧ್ರುವೀಯ ಹಗಲು ಅಥವಾ ಧ್ರುವೀಯ ರಾತ್ರಿ ೨೪ ಗಂಟೆವರೆಗೆ ನಿರಂತರವಾಗಿ ಇರುತ್ತದೆ.

ಸೂರ್ಯಾಸ್ತವು ಅನನ್ಯವಾದ ವಾತಾವರಣ ಸ್ಥಿತಿಗಳನ್ನು ಸೃಷ್ಟಿಸುತ್ತದೆ, ಉದಾಹರಣೆಗೆ ಅನೇಕವೇಳೆ ಸೂರ್ಯ ಮತ್ತು ಸುತ್ತಲಿನ ಆಕಾಶದ ತೀವ್ರ ಕಿತ್ತಳೆ ಮತ್ತು ಕೆಂಪು ಬಣ್ಣಗಳು.

ಸೂರ್ಯಾಸ್ತದ ಸಮಯ ವರ್ಷದಾದ್ಯಂತ ಬದಲಾಗುತ್ತದೆ, ಮತ್ತು ರೇಖಾಂಶ, ಅಕ್ಷಾಂಶ ಹಾಗೂ ಎತ್ತರದಿಂದ ಸೂಚಿಸಲ್ಪಟ್ಟ ಭೂಮಿ ಮೇಲಿನ ವೀಕ್ಷಕನ ಸ್ಥಾನದಿಂದ ನಿರ್ಧಾರಿತವಾಗುತ್ತದೆ. ಸೂರ್ಯಾಸ್ತದ ಸಮಯದಲ್ಲಿನ ಸಣ್ಣ ದೈನಿಕ ಬದಲಾವಣೆಗಳು ಮತ್ತು ಗಮನಾರ್ಹವಾದ ಅರೆವಾರ್ಷಿಕ ಬದಲಾವಣೆಗಳು ಭೂಮಿಯ ಅಕ್ಷೀಯ ಬಾಗು, ಭೂಮಿಯ ದೈನಂದಿನ ಪರಿಭ್ರಮಣ, ಸೂರ್ಯನ ಸುತ್ತ ಅದರ ವಾರ್ಷಿಕ ಅಂಡಾಕಾರದ ಕಕ್ಷೆಯಲ್ಲಿ ಗ್ರಹದ ಚಲನೆ, ಮತ್ತು ಭೂಮಿ ಹಾಗೂ ಚಂದ್ರಗಳ ಒಂದರ ಸುತ್ತ ಒಂದು ಜೋಡಿ ತಿರುಗುವಿಕೆಗಳಿಂದ ಚಾಲಿತವಾಗಿರುತ್ತವೆ.

ಉಲ್ಲೇಖಗಳು[ಬದಲಾಯಿಸಿ]

  1. "Definitions from the US Astronomical Applications Dept (USNO)". Archived from the original on 2015-08-14. Retrieved 2016-06-17.