ಅವಸ್ಥೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅವಸ್ಥಾತ್ರಯಗಳೆಂದು ಪ್ರಸಿದ್ಧ. ಆತ್ಮನಿಗೆ ಜಾಗೃತ್, ಸ್ವಪ್ನ, ಸುಷುಪ್ತಿ ಎಂಬ ಮೂರು ಅವಸ್ಥೆಗಳಿವೆಯೆಂದು ನಮಗೆ ಮಾಂಡೂಕ್ಯೋಪನಿಷತ್ತು ತಿಳಿಸುತ್ತದೆ. ಗೌಡಪಾದರು ತಮ್ಮ ಕಾರಿಕೆಗಳಲ್ಲಿ ತಮ್ಮದೇ ಆದ ಒಂದು ವಿಶಿಷ್ಟ ರೀತಿಯಲ್ಲಿ ಈ ಅವಸ್ಥಾತ್ರಯಗಳ ವಿಶ್ಲೇಷಣೆ ಮಾಡಿದ್ದಾರೆ. ಜಾಗೃದವಸ್ಥೆಯಲ್ಲಿ ಆತ್ಮ ಬಾಹ್ಯಪ್ರಜ್ಞೆಯುಳ್ಳವನಾಗಿ ಸ್ಥೂಲವಿಷಯಗಳನ್ನು ಅನುಭವಿಸುತ್ತಾನೆ. ಸ್ವಪ್ನಾವಸ್ಥೆಯಲ್ಲಿ ಅಂತಃಪ್ರಜ್ಞನಾಗಿ ಸೂಕ್ಷ್ಮ ವಿಷಯಗಳನ್ನು ಅನುಭವಿಸುತ್ತಾನೆ. ಸುಷುಪ್ತಿಯಲ್ಲಿ ಬಯಕೆಗಳಾಗಲೀ ಸ್ವಪ್ನಗಳಾಗಲೀ ಇರುವುದಿಲ್ಲ; ದೃಗ್‍ದೃಶ್ಯಗಳಿಲ್ಲದೆ ಎಲ್ಲವೂ ಒಂದಾಗಿರುತ್ತದೆ. ಈ ಅವಸ್ಥೆಯಲ್ಲಿ ಆತ್ಮ ಪ್ರಜ್ಞಾನಘನನೂ ಆನಂದಮಯನೂ ಆನಂದಭೋಗಿಯೂ ಆಗಿರುತ್ತಾನೆ. ಈ ಮೂರು ಅವಸ್ಥೆಗಳು ಆತ್ಮನ ವೈಶ್ವಾನರ, ತೈಜಸ, ಪ್ರಾಜ್ಞ ಎಂಬ ಮೂರು ಪಾದಗಳಿಗೆ ಹೋಲುತ್ತವೆ. ಆತ್ಮನ ನಾಲ್ಕನೆಯ ಪಾದಕ್ಕೆ ತುರೀಯವೆಂದು ಹೆಸರು. ತುರೀಯದಲ್ಲಿ ಆತ್ಮ ಅಂತಃಪ್ರಜ್ಞನಲ್ಲ, ಬಹಿಃಪ್ರಜ್ಞನಲ್ಲ, ಉಭಯಪ್ರಜ್ಞನಲ್ಲ, ಪ್ರಜ್ಞಾಘನನಲ್ಲ, ಪ್ರಜ್ಞನಲ್ಲ, ಅಪ್ರಜ್ಞನಲ್ಲ - ಇದು ಪಾರಮಾರ್ಥಿಕದ ಆತ್ಮ ಸ್ವರೂಪ.

ಅವಸ್ಥಾತ್ರಯದ ಅನುಭವವೂ ಜಾಗೃದವಸ್ಥೆಯಿಂದಲೇ ತಿಳಿದುಬರುತ್ತದೆ. ಸ್ವಪ್ನ ಸುಷುಪ್ತಿಗಳು ಬೇರೆಬೇರೆ ಲಕ್ಷಣಗಳಿಂದ ಕೂಡಿದ ಅವಸ್ಥೆಗಳೆಂದು ಎಚ್ಚರದಲ್ಲಿಯೇ ತಿಳಿಯಬೇಕು. ಮೂರು ಜ್ಞಾತೃಗಳು ಒಂದೇ ಶರೀರದಲ್ಲಿದ್ದರೆ ಸ್ಮೃತಿಜ್ಞಾನದ ಸಂತತಿ ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಒಬ್ಬನೇ ಆದ ಜ್ಞಾತೃ ಶರೀರದಲ್ಲಿ ಮೂರು ಬಗೆಯಾಗಿದ್ದಾನೆ. ವೈಶ್ವಾನರ, ತೈಜಸ, ಪ್ರಾಜ್ಞರೆಂದು ಮೇಲುಮೇಲೆ ತೋರುವ ಭೇದ ಅವಸ್ಥಾತ್ರಯದೊಂದಿಗೆ ಉಂಟಾಗಿರುವ ತಾದಾತ್ಮ್ಯದಿಂದ ಸಂಭವಿಸಿದೆ. ಈಗ ಅವಸ್ಥಾತ್ರಯದ ಅರ್ಥವನ್ನು ಆಧ್ಯಾತ್ಮಿಕ ದೃಷ್ಟಿಯಿಂದ ಪರೀಕ್ಷಿಸಬಹುದು. ನಿಜವಾಗಿ ನೋಡಿದರೆ ನಮ್ಮ ಎಚ್ಚರ ಎಚ್ಚರವೇ ಅಲ್ಲ; ಸ್ವಪ್ನ ಸುಷುಪ್ತಿಗಳಂತೆ ಇಲ್ಲೂ ಅಜ್ಞಾನದ ಕತ್ತಲು ಕವಿದುಕೊಂಡಿರುವುದು. ತತ್ತ್ವದ ಅಪ್ರತಿಬೋಧ ರೂಪವಾದ, ಅನ್ಯಥಾಗ್ರಹಣರೂಪವಾದ ನಿದ್ರೆಯಿಂದ ಜೀವ ಯಾವಾಗ ಎಚ್ಚರಗೊಳ್ಳುವನೋ ಆಗ ಅವನಿಗೆ ನಿಜವಾದ ಎಚ್ಚರವಾಗುವುದು. ಈ ಅಲೌಕಿಕಾನುಭವದಿಂದ ನೋಡಿದರೆ ಜಾಗೃತ್, ಸ್ವಪ್ನ, ಸುಷುಪ್ತಿಗಳೇ ಜೀವಾತ್ಮನ ರಾತ್ರಿಗಳಾಗಿರುತ್ತವೆ. ಶ್ರೀಕೃಷ್ಣನು ಗೀತೆಯಲ್ಲಿ ಹೇಳಿರುವಂತೆ ಪ್ರಾಣಿಗಳಿಗೆಲ್ಲ ಯಾವುದು ರಾತ್ರಿಯೋ ಅದರಲ್ಲಿ ಸಂಯಮಿ ಎಚ್ಚೆತ್ತಿರುತ್ತಾನೆ; ಯಾವುದರಲ್ಲಿ ಪ್ರಾಣಿಗಳು ಎಚ್ಚೆತ್ತಿರುವುವೋ ಅದು ಮುನಿಗೆ ರಾತ್ರಿ. ಪಾರಮಾರ್ಥಿಕ ಪ್ರಬೋಧವೇ ಎಚ್ಚರವಾದರೆ ಸ್ವಪ್ನ ಸುಷುಪ್ತಿಗಳು ಯಾವುವು? ಅನ್ಯಥಾಗ್ರಹಣವೇ ಸ್ವಪ್ನ. ತತ್ತ್ವವನ್ನು ತಿಳಿಯದಿರುವುದೇ ಸುಷುಪ್ತಿ. ತತ್ತ್ವವನ್ನು ತಪ್ಪಾಗಿ ತಿಳಿಯುವುದು ಅನ್ಯಥಾಗ್ರಹಣ; ತತ್ತ್ವವನ್ನು ಅರಿಯದೆ ಇರುವುದು ತತ್ತ್ವಜ್ಞಾನ. ಅನ್ಯಥಾಗ್ರಹಣ ಜಾಗೃತ್ ಸ್ವಪ್ನಗಳಿಗೆ ಸಾಮಾನ್ಯವಾದರೆ ತತ್ತ್ವಜ್ಞಾನ ಜಾಗೃತ್, ಸ್ವಪ್ನ, ಸುಷುಪ್ತಿಗಳಿಗೂ ಸಾಮಾನ್ಯವಾಗಿರುತ್ತದೆ. ಅಗ್ರಹಣ ಕಾರಣ, ಅನ್ಯಥಾಗ್ರಹಣ ಕಾರ್ಯ. ಹಗ್ಗ ನಮ್ಮ ದೃಷ್ಟಿಗೆ ಬೀಳದಿದ್ದರೆ ಹಾವನ್ನು ನೋಡುತ್ತೇವೆ. ಆತ್ಮಜ್ಞಾನವಿಲ್ಲದಿದ್ದರೆ ದ್ವೈತಪ್ರಪಂಚವನ್ನು ನೋಡುತ್ತೇವೆ. ಅನ್ಯಥಾಗ್ರಹಣ ಜಾಗೃತ್ ಸ್ವಪ್ನಗಳಿಗೆ ಸಾಮಾನ್ಯವಾಗಿರುವುದರಿಂದ ಜಾಗೃತ್ತೇ ಸ್ವಪ್ನ, ಅವಪ್ನವೇ ಜಾಗೃತ್ ಎಂದು ಹೇಳಿದರೆ ತಪ್ಪಾಗಲಾರದು. ವೈಶ್ವಾನರ ತೈಜಸ ಎಂಬ ಪಾದಗಳೆನಿಸಿದ ಆತ್ಮರು ಕಾರ್ಯ ಕಾರಣಗಳಿಂದ ಬದ್ಧರಾಗಿದ್ದರೆ ಪ್ರಾಜ್ಞವೆಂಬ ಪಾದವಾದ ಆತ್ಮ ಕಾರಣದಿಂದ ಮಾತ್ರ ಬದ್ಧನಾಗಿದ್ದಾನೆ. ವೈಶ್ವಾನರ ತೈಜಸರು ಸ್ವಪ್ನ- ಸುಷುಪ್ತಿಗಳಿಂದ ಕೂಡಿರುವರು. ಪಾಜ್ಞ ಸ್ವಪ್ನರಹಿತವಾದ ನಿದ್ರೆಯಿಂದ ಕೂಡಿದ್ದಾನೆ. ದ್ವೈತವನ್ನು ಗ್ರಹಿಸದಿರುವುದು ಪ್ರಾಜ್ಞ ತುರೀಯರಿಗೆ ಸಮಾನವಾಗಿರು ತ್ತದೆ. ಆದರೆ ಪ್ರಾಜ್ಞ ತತ್ತ್ವಾಗ್ರಹಣವೆಂಬ ನಿದ್ರೆಯಿಂದ ಕೂಡಿರುತ್ತಾನೆ. ಇದೇ ದ್ವೈತಜ್ಞಾನಕ್ಕೆ ಬೀಜವಾಗಿರುವುದು. ತುರೀಯ ಸರ್ವದೃಕ್-ಸ್ವಭಾವವಾಗಿರುವುದರಿಂದ ಅದರಲ್ಲಿ ಬೀಜನಿದ್ರೆಯಿರುವುದಿಲ್ಲ. ಆದ್ದರಿಂದ ತುರೀಯದಲ್ಲಿ ಕಾರಣಬಂಧ ಇರುವುದಿಲ್ಲ. ಅವಸ್ಥಾತ್ರಯದ ಪರೀಕ್ಷೆಯಿಂದ ಈ ಸಿದ್ಧಾಂತವನ್ನು ಸಾಧಿಸಬಹುದು. 1. ಜಾಗೃದವಸ್ಥೆಯಲ್ಲಿ ಸ್ವಪ್ನ-ಸುಷುಪ್ತಿಗಳ ಎಂದರೆ ಅನ್ಯಥಾಗ್ರಹಣ: ಅಗ್ರಹಣಗಳ ಅನುಭವವಾಗುವುದು. 2. ಸ್ವಪ್ನದಲ್ಲಿ ಸುಷುಪ್ತಿಯ ಎಂದರೆ ಅಗ್ರಹಣದ ಅನುಭವವೂ ಇರುವುದು. 3. ಸುಷುಪ್ತಿಯಲ್ಲಿ ಸ್ವಪ್ನರಹಿತವಾದ ನಿದ್ರೆ ಮಾತ್ರ ಉಳಿಯುವುದು. ಅವಿದ್ಯಾರೂಪವಾದ ನಿದ್ರೆ ಸಂಸಾರ ದೆಶೆಯಲ್ಲಿ ಎಡಬಿಡದೆ ಇದ್ದುಕೊಂಡು ಜ್ಞಾನೋದಯವಾದ ಮೇಲೆ ನಾಶವಾಗುವುದು. ಅನಾದಿಮಾಯೆಯಿಂದ ಸುಪ್ತನಾದ ಜೀವ ಯಾವಾಗ ಎಚ್ಚರಗೊಳ್ಳು ವನೋ ಆಗ ಅಜವೂ ನಿದ್ರಾ-ಸ್ವಪ್ನರಹಿತವೂ ಆದ ಅದ್ವೈತವನ್ನು ಅರಿತುಕೊಳ್ಳುವನು. ಗೌಡಪಾದರು ಅವಸ್ಥಾತ್ರಯದ ತಾತ್ಪರ್ಯವನ್ನು ಅಲಾತಶಾಂತಿಪ್ರಕರಣದಲ್ಲಿ ಬೌದ್ಧರ ಯುಕ್ತಿಯನ್ನು ಅನುಸರಿಸಿಕೊಂಡು ಅವರ ಪರಿಭಾಷೆಯಲ್ಲಿಯೇ ಉಪಸಂಹರಿಸಿರುತ್ತಾರೆ. ಜಾಗೃತ್, ಸ್ವಪ್ನ, ಸುಷುಪ್ತಿಗಳನ್ನು ಲೌಕಿಕ, ಶುದ್ಧ ಲೌಕಿಕ, ಲೋಕೋತ್ತರಗಳೆಂದು ಕರೆದಿರುತ್ತಾರೆ. ಸ್ಥೂಲವಸ್ತುಗಳ ಅನುಭವದಿಂದ ಕೂಡಿರುವುದು ಲೌಕಿಕ; ಇದನ್ನೇ ಉಪನಿಷತ್ತು ಗಳಲ್ಲಿ ಜಾಗೃದಾವಸ್ಥೆಯೆಂದು ಹೇಳಿದೆ. ಶುದ್ಧ ಲೌಕಿಕದಲ್ಲಿ ಬಾಹ್ಯವಸ್ತುಗಳಿಲ್ಲದಿದ್ದರೂ ಅವುಗಳ ಅನುಭವವಾಗುತ್ತದೆ; ಇದೇ ಸ್ವಪ್ನಾವಸ್ಥೆ. ಗ್ರಾಹ್ಯಗ್ರಹಣ ವಿಷಯವಿಲ್ಲದಿರುವುದು ಲೋಕೋತ್ತರವೆನಿಸುವುದು; ಇದೇ ಎಲ್ಲ ಪ್ರವೃತ್ತಿಗಳಿಗೂ ಕಾರಣವಾದ ಸುಷುಪ್ತಿ. ಈ ಮೂರು ಅವಸ್ಥೆಗಳೇ ಜ್ಞೇಯ; ಇವುಗಳನ್ನು ಅರಿತುಕೊಳ್ಳುವ ಜ್ಞಾನವೇ ಜ್ಞಾನ. ವಿಜ್ಞೇಯವೇ ತುರೀಯವೆಂಬ ಪರಮಾರ್ಥಸತ್ಯ. ದ್ವೈತ ಪ್ರಪಂಚವನ್ನೇ ಯಾವಾಗಲೂ ಅನುಭವಿಸುತ್ತಿರುವ ನಮಗೆ ಅದ್ವಯವಾದ ಪರಮಾರ್ಥಸತ್ಯ ಹೇಗೆ ತಿಳಿದುಬರುತ್ತದೆ? ಪರಮಾರ್ಥಾನುಭವಕ್ಕೆ ಜಾಗೃದವಸ್ಥೆಯ ದ್ವೈತಾನುಭವವೇ ನಿಜವಾದ ಅಡಚಣೆ. ಸ್ವಪ್ನಾವಸ್ಥೆಯ ಅನುಭವ ಜಾಗೃದವಸ್ಥೆಯಲ್ಲಿ ಹುಸಿಯಾಗಿ ತೋರುವುದೆಂಬುದರಲ್ಲಿ ಸಂಶಯವಿಲ್ಲ; ಆದರೆ ಇದೇ ರೀತಿ ನಮ್ಮ ಜಾಗೃದವಸ್ಥೆಯೂ ಹುಸಿಯೆಂದು ಒಪ್ಪಿಕೊಳ್ಳುವುದು ಅಷ್ಟು ಸುಲಭವಲ್ಲ. ಏಕೆಂದರೆ ನಮಗೆ ಯಾವಾಗಲೂ ವೇದ್ಯವಾಗಿರುವ ಜಾಗೃದವಸ್ಥೆಯಿಂದಲೇ ಎಲ್ಲವನ್ನೂ ಅಳೆಯುತ್ತೇವೆ ಮತ್ತು ಪರೀಕ್ಷಿಸುತ್ತೇವೆ. ಆದರೆ ಗೌಡಪಾದರಿಗೆ ವ್ಯವಹಾರಜ್ಞಾನವಾಗಲೀ ಸಂಬದ್ಧತೆಯಾಗಲೀ ಅನುರೂಪತೆಯಾಗಲೀ ತತ್ತ್ವಸಮೀಕ್ಷೆಯ ಒರೆಗಲ್ಲಾಗಿಲ್ಲ. ಇತರರು ಒಪ್ಪಲಿ ಒಪ್ಪದಿರಲಿ ತತ್ತ್ವದರ್ಶಿ ತತ್ತ್ವವನ್ನು ಯಥಾರ್ಥವಾಗಿ ಹೇಳಬೇಕು. ಆತ ವ್ಯಾವಹಾರಿಕ ಸತ್ಯತ್ತ್ವವನ್ನು ಸಾಪೇಕ್ಷವಾಗಿ ಒಪ್ಪಿಕೊಂಡರೂ ಪಾರಮಾರ್ಥಿಕ ದೃಷ್ಟಿಯಿಂದ ಅದು ಮಿಥ್ಯೆಯೆಂದು ತಿಳಿದಿರುತ್ತಾನೆ.

ಗೌಡಪಾದರು ಜಾಗೃದವಸ್ಥೆಯ ಮಿಥ್ಯಾತ್ವವನ್ನು ಸ್ವಪ್ನ ಪ್ರಪಂಚದ ಸಾದೃಶ್ಯದ ಮೂಲಕ ಸಾಧಿಸಿದ್ದಾರೆ. ಸ್ವಪ್ನದಲ್ಲಿ ಕಾಣುವ ದೃಶ್ಯಗಳೆಲ್ಲ ಮಿಥ್ಯೆ. ಅವುಗಳು ನಿಜವಾಗಿದ್ದರೆ ಅವುಗಳ ಸ್ಥಾನ ಕನಸುಗಾಣುವವನ ಶರೀರದಲ್ಲೇ ಇರಬೇಕು ಆದರೆ ಇದು ಅಸಾಧ್ಯ ; ಏಕೆಂದರೆ ಪರ್ವತವೇ ಮೊದಲಾದ ದೊಡ್ಡವಸ್ತುಗಳೂ ನಗರಗಳೂ ಎಷ್ಟು ಸಣ್ಣ ಶರೀರದಲ್ಲಿ ಹೇಗಿರುವುವು? ಕನಸುಗಾಣುವವ ಶರೀರದಿಂದ ಹೊರಗೆ ಹೋಗಿ ವಸ್ತುಗಳನ್ನು ನೋಡುವುದಿಲ್ಲ; ಏಕೆಂದರೆ ಕನಸಿನಲ್ಲಿ ಕಂಡ ಪ್ರದೇಶಕ್ಕೆ ಹೋಗಿದ್ದರೆ ಆತ ಎಚ್ಚರವಾದಾಗ ಅಲ್ಲಿಯೇ ಇರಬೇಕಾಗಿತ್ತು. ಕನಸಿನ ದೃಶ್ಯಗಳು ದೇಶಕಾಲಗಳಿಗೆ ಸಂಬಂಧಿಸಿಲ್ಲದಿರುವುದರಿಂದ ಅವು ಮಿಥ್ಯೆ. ಆದ್ದರಿಂದ ಕನಸಿನಲ್ಲಿ ಓಡಾಡುವ ಶರೀರ ಕೇವಲ ಮನೋಭ್ರಾಂತಿ. ಕನಸುಗಾಣುವವನ ಶರೀರ ಮಲಗಿದ್ದಲ್ಲೇ ಬಿದ್ದಿರುವುದು. ಕನಸಿನ ಶರೀರದಂತೆ ಕನಸಿನಲ್ಲಿ ತೋರುವ ಭಾವನೆಗಳೂ ಕೇವಲ ಕಲ್ಪನೆ. ಅಲ್ಲಿ ರಥಗಳಿಲ್ಲ ಎಂದು ಬೃಹದಾರಣ್ಯಕ ಶ್ರುತಿಯೇ ಹೇಳುತ್ತದೆ.

ಜಾಗೃದವಸ್ಥೆ ಸ್ವಪ್ನವನ್ನು ಅನೇಕ ವಿಧಗಳಲ್ಲಿ ಹೋಲುತ್ತದೆ. ಸ್ವಪ್ನದಂತೆಯೇ ಜಾಗೃದಾವಸ್ಥೆಯಲ್ಲೂ ವಸ್ತುಗಳನ್ನು ನೋಡುತ್ತೇವೆ ಮತ್ತು ನೋಡಿದ್ದೆಲ್ಲ ಅಸತ್ಯವಾಗಿರುತ್ತದೆ; ಎಂದರೆ ದೃಶ್ಯತ್ವ-ಮಿಥ್ಯತ್ವಗಳೆಂಬ ಎರಡು ಲಕ್ಷಣಗಳು ಜಾಗೃತ್ ಸ್ವಪ್ನಗಳಿಗೆ ಸಾಧಾರಣ ವಾಗಿರುತ್ತವೆ. ಯಾವುದು ಆದಿ ಅಂತ್ಯಗಳಿಲ್ಲವೋ ಅದು ಮಧ್ಯದಲ್ಲೂ ಇಲ್ಲ. ಯಾವುದು ಕಾಲವೆಂಬ ಉಪಾಧಿಗೆ ಒಳಪಟ್ಟರುವುದೋ ಅದು ಅಸತ್ಯ. ಸ್ವಪ್ನ ವಸ್ತುಗಳು ಸ್ವಪ್ನದಲ್ಲಿ ಕಾಣಿಸುತ್ತವೆಯೇ ಹೊರತು ಸ್ವಪ್ನಕ್ಕೆ ಮೊದಲಾಗಲೀ ಸ್ವಪ್ನ ಮುಗಿದಮೇಲಾಗಲೀ ಕಾಣುವುದಿಲ್ಲ. ಹಾಗೆಯೇ ಜಾಗೃದವಸ್ಥೆಯ ವಿಷಯಗಳು ಜಾಗೃದವಸ್ಥೆಯಲ್ಲಿ ಮಾತ್ರ ಕಾಣುತ್ತವೆ.

ಜಾಗೃದವಸ್ಥೆ ಮಿಥ್ಯೆಯೆಂದು ತೋರಿಸಲು ಸ್ವಪ್ನದ ದೃಷ್ಟಾಂತ ಕೊಟ್ಟಿದ್ದಾಯಿತು. ಆದರೆ ಮಿಥ್ಯೆಯನ್ನು ಸೂಚಿಸುವ ಕೆಲವು ಅನುಭವಗಳನ್ನು ನಾವು ಜಾಗೃದವಸ್ಥೆಯಲ್ಲಿಯೇ ಹೊಂದಬಹುದು. ಹಗ್ಗ, ಹಾವು-ಇವುಗಳ ದೃಷ್ಟಾಂತ ವೇದಾಂತದಲ್ಲಿ ಪ್ರಸಿದ್ಧವಾಗಿದೆ. ಕತ್ತಲೆಯಲ್ಲಿ ಹಗ್ಗ ಹಾವಿನಂತೆಯೇ ಕಾಣುವುದು; ಹಾಗೆಯೇ ಆತ್ಮ ಜೀವಪ್ರಾಣಾದಿ ಭೇದಗಳಿಂದ ಕಲ್ಪಿತನಾಗಿರುತ್ತಾನೆ. ಆಕಾಶದಲ್ಲಿ ವಿಚಿತ್ರವಾದ ದೃಶ್ಯಗಳನ್ನು ಕೆಲವು ಋತುಗಳಲ್ಲಿ ನೋಡಬಹುದು; ನಗರಗಳು, ಪರ್ವತಗಳು, ನದಿಗಳು ಆಕಾಶದಲ್ಲಿ ಕಾಣಿಸಿಕೊಂಡು, ಬಗೆಬಗೆಯ ಬಣ್ಣಗಳಿಂದ ಕೂಡಿ ಒಂದು ಕ್ಷಣದಲ್ಲಿ ಬೇರೆರೂಪಗಳನ್ನು ಹೊಂದುತ್ತವೆ. ಇದೇ ಗಂಧರ್ವ ನಗರ. ಗಂಧರ್ವನಗರ ಎಷ್ಟು ಮಿಥ್ಯೆಯೋ ಅಷ್ಟೇ ಈ ಜಗತ್ತು ಮಿಥ್ಯೆಯೆಂದು ಪಂಡಿತರು ಎಣಿಸುತ್ತಾರೆ. ಅವರು ನಾನಾತ್ವವನ್ನು ನಿಜವೆಂದು ತಿಳಿಯುವುದಿಲ್ಲ. ಗೌಡಪಾದರು ಕೊಟ್ಟಿರುವ ಮತ್ತೊಂದು ಪ್ರಸಿದ್ಧವಾದ ದೃಷ್ಟಾಂತ ಅಲಾತ ಕೊಳ್ಳಿ. ಉರಿಯುವ ಅಲಾತವನ್ನು ತಿರುಗಿಸಿದರೆ ಅದು ಉದ್ದವಾಗಿ ಅಥವಾ ವಕ್ರವಾಗಿ ತೋರುವುದು; ಅದನ್ನು ತಿರುಗಿಸದಿದ್ದರೆ ಯಾವ ಆಭಾಸವೂ ತೋರುವುದಿಲ್ಲ. ಆಭಾಸಗಳು ಅಲಾತದಿಂದ ಹೊರಗೆ ಬರಲಿಲ್ಲ; ಒಳಕ್ಕೂ ಹೋಗಲಿಲ್ಲ. ವಿಜ್ಞಾನ ವಿಷಯದಲ್ಲೂ ಹೀಗೆಯೇ. ವಿಜ್ಞಾನ ಅವಿದ್ಯೆಯಿಂದ ಸ್ಪಂದಿಸಿದಾಗ ಜ್ಞಾನ- ಜ್ಞಾತೃರೂಪಗಳಲ್ಲಿ ತೋರಿಬರುತ್ತದೆ. ಆಭಾಸಗಳು ವಿಜ್ಞಾನದಿಂದ ಹುಟ್ಟಿಲ್ಲ. ವಿಜ್ಞಾನದಲ್ಲಿ ಲಯವನ್ನೂ ಹೊಂದುವುದಿಲ್ಲ. ವಿಜ್ಞಾನ ಅಚಲವೂ ಅಜವೂ ಆಗಿದೆ. ಆಧ್ಯಾತ್ಮಿಕ ದೃಷ್ಟಿಯಿಂದ ಜಾಗ್ರತ್, ಸ್ವಪ್ನಗಳಿಗೆ ಯಾವ ಭೇದವಿಲ್ಲದಿದ್ದರೂ ವ್ಯಾವಹಾರಿಕ ದೃಷ್ಟಿಯಿಂದ ಅವುಗಳಿಗಿರುವ ಭೇದವನ್ನು ಗೌಡಪಾದರು ನಿರಾಕರಿಸಿಲ್ಲ: 1. ಜಾಗೃದವಸ್ಥೆಯ ಅವುಭವಗಳು ಬಾಹ್ಯಪ್ರಪಂಚಕ್ಕೆ ಸೇರಿದುವು. ಜಾಗೃದವಸ್ಥೆಯ ದೃಷ್ಟಿಯಿಂದ ಸ್ವಪ್ನ ವಿಷಯ ಗಳು ಶರೀರದ ಒಳಗಿವೆ, ಸಂವೃತವಾಗಿವೆ. 2. ಸ್ವಪ್ನದಲ್ಲಿ ತೋರಿಕೊಳ್ಳುವ ವಸ್ತುಗಳು ಅವ್ಯಕ್ತವಾಗಿರುವುವು. ಜಾಗೃದವಸ್ಥೆಯ ವಸ್ತುಗಳು ಸ್ಫುಟವಾಗಿರುವುವು. 3. ಕನಸಿನ ವಿಷಯಗಳು ಕನಸು ನೋಡುವವನ ಚಿತ್ರ ಕಲ್ಪಿಸುವವರೆಗೆ ಉಳಿಯುತ್ತವೆ. ಆದರೆ ಜಾಗೃದವಸ್ಥೆಯ ವಿಷಯಗಳು ದ್ವಯಕಾಲವುಳ್ಳವು ಎಂದರೆ ಎಚ್ಚರವಾದ ಮೇಲೆ ಅದೇ ಇದು ಎಂಬ ಪ್ರತ್ಯಭಿಜ್ಞೆಗೆ (ಅಂದರೆ ನಿದ್ರೆಗೆ ಅಥವಾ ಸ್ವಪ್ನಕ್ಕೆ), ಮೊದಲು ನೋಡಿದ ವಸ್ತುಗಳು ವಿಷಯ ವಾಗಿರುತ್ತವೆ. ಆದುದರಿಂದ ಜಾಗೃತ್- ಸ್ವಪ್ನಗಳಿಗೆ ಭೇದವಿಲ್ಲ.

ತುರೀಯ ನಿಜವಾಗಿ ಯಾವ ಅವಸ್ಥೆಯೂ ಅಲ್ಲ ; ಎಲ್ಲ ಅವಸ್ಥೆಗಳನ್ನೂ ಒಳಗೊಂಡು ಎಲ್ಲ ಅವಸ್ಥೆಗಳಲ್ಲೂ ಒಬ್ಬನೇ ಆತ್ಮನಿರುವನೆಂಬ ಪ್ರತೀತಿಗೆ ಆಧಾರವಾಗಿದೆ. ಇದು ವ್ಯವಹಾರಾತೀತವೂ ಪ್ರಪಂಚೋಪಶಮವೂ ಆಗಿದೆ.