ವಿಷಯಕ್ಕೆ ಹೋಗು

ಅವಧಾನ(ಗಮನ ಕೇಂದ್ರೀಕರಣ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅವಧಾನ ಇಂದ ಪುನರ್ನಿರ್ದೇಶಿತ)

ಗಮನ ಕೇಂದ್ರೀಕರಣಕ್ಕೆ ಈ ಹೆಸರಿದೆ (ಅಟೆನ್ಷನ್). ಪ್ರಜ್ಞಾವಸ್ಥೆಯಲ್ಲಿ ಮನಸ್ಸು ಎದುರಿನ ಎಲ್ಲ ವಿಷಯಗಳ ಕಡೆಗೂ ಹರಿದಿರುತ್ತದಾದರೂ ಯಾವುದೋ ಉದ್ದಿಷ್ಟ ವಿಷಯದಲ್ಲಿ ಮಾತ್ರ ವಿಶಿಷ್ಟವಾಗಿ ಕೆಲಸ ಮಾಡುತ್ತಿರುತ್ತದೆ. ಉಳಿದೆಲ್ಲ ವಿಷಯಗಳಲ್ಲಿ ಅದು ಅಷ್ಟು ಸ್ಪಷ್ಟವಾಗಿ ಗಮನ ಹರಿಸುತ್ತಿರುವುದಿಲ್ಲ. ಗಮನದ ತೀವ್ರತೆಗೆ ತಕ್ಕಂತೆ ಅರಿವಿನ ತೀವ್ರತೆಯೂ ಹೆಚ್ಚು ಕಡಿಮೆಯಾಗುತ್ತದೆ. ನೆನಪಿಗೂ ಅವಧಾನವೇ ಕಾರಣ. ಅವಧಾನದಿಂದ ಕಲಿತದ್ದು ಜ್ಞಾಪಕದಲ್ಲಿ ನಿಲ್ಲುತ್ತದೆ. ಎಲ್ಲ ಇಂದ್ರಿಯ ಶಕ್ತಿಗಳನ್ನೂ ಏಕೀಭವಿಸುವಂತೆ ಮಾಡಿ ಪ್ರಕೃತ ವಿಷಯದತ್ತ ಮಾತ್ರ ಉಪಯೋಗಿಸಿದಲ್ಲಿ ಅವಧಾನ ಅತಿ ತೀವ್ರವಾಗುತ್ತದೆ. ಇದನ್ನೇ ಚಿತ್ತೈಕಾಗ್ರತೆ ಎನ್ನುವುದು. ಮನಸ್ಸು ಗುರಿಯನ್ನಲ್ಲದೆ ಬೇರೆಯದನ್ನು ಯೋಚಿಸಬಾರದು. ಕಣ್ಣು, ಕಿವಿ, ನಾಲಗೆ ಇತ್ಯಾದಿಗಳು ಅದಕ್ಕೆ ಸಹಕಾರಿಗಳಾಗಬೇಕು.

ಅವಧಾನ ನಮ್ಮ ವರ್ತನೆಯ ಮತ್ತು ಜಾಗೃದವಸ್ಥೆಯ ಒಂದು ಸಾಮಾನ್ಯ ಗುಣವಿಶೇಷ ವಾಗಿದೆ. ಅವಧಾನವಿಡುವುದು ಎಂದರೆ, ಕಾರ್ಯೋನ್ಮುಖ ಸ್ಥಿತಿಯನ್ನು ಹೊಂದುವುದು, ಕೆಲವು ವಸ್ತುಗಳನ್ನು ಗ್ರಹಿಸಲು, ಕೆಲವು ಕೆಲಸಗಳನ್ನು ನಡೆಸಲು ಸಿದ್ಧವಾಗುವುದು-ಎಂದು ಸಂಕ್ಷಿಪ್ತವಾಗಿ ಹೇಳಬಹುದು. ವ್ಯಕ್ತಿನಿಷ್ಠೆ ಮತ್ತು ವಸ್ತುನಿಷ್ಠೆ ಎಂದು ಅವಧಾನದಲ್ಲಿ ಎರಡು ಬಗೆ. ವ್ಯಕ್ತಿನಿಷ್ಠವಾಗಿ ಹೇಳುವುದಾದರೆ ನಾಭಿಗೆ (ಫೋಕಸ್) ಮತ್ತು ಎಲ್ಲೆಗೆ (ಮಾರ್ಜಿನ್) ಹೊಂದಿಕೊಂಡಂತೆ ಜಾಗೃದವಸ್ಥೆಯ ಏರ್ಪಾಡು ಎನ್ನಬಹುದು. ಅವಧಾನದಲ್ಲಿ ನಾಭಿ ಜಾಗೃದವಸ್ಥೆಯ ಒಂದು ಭಾಗ. ಆದ್ದರಿಂದಲೇ ಅವಧಾನ ಜಾಗೃದವಸ್ಥೆಯ ಆಯ್ದುಕೊಂಡ ಕಾರ್ಯ ಎನ್ನುತ್ತಾರೆ. ವಸ್ತುನಿಷ್ಠವಾಗಿ ಅವಧಾನ ವರ್ತನೆಯ ಒಂದು ರೂಪ. ಅಂದರೆ, ಒಂದು ಸನ್ನಿವೇಶಕ್ಕೆ ಅಥವಾ ಪರಿಸರಕ್ಕೆ ಹೊಂದಿಕೊಳ್ಳುವಿಕೆ. ಈ ಹೊಂದಾಣಿಕೆಯಲ್ಲಿ ರಿಸೆಪ್ಟರ್ ಹೊಂದಾಣಿಕೆಗಳು ಮತ್ತು ಶಾರೀರಿಕ ಭಂಗಿಯ (ಪಾಸ್ಚುರಲ್) ಹೊಂದಾಣಿಕೆಗಳಿವೆ. ಅಲ್ಲದೆ ಅವಧಾನ ಸ್ನಾಯುಗಳಲ್ಲಿ ಬಿಗಿತವನ್ನು ಹುಟ್ಟಿಸುತ್ತದೆ. ಕಣ್ಣುಗಳಲ್ಲಿ ವಿಶೇಷ ಬಳಕೆಯುಳ್ಳ ಮತ್ತು ಸ್ಪಷ್ಟದೃಷ್ಟಿಗೆ ಅಗತ್ಯವಾದ ಯವದ (ಲೆನ್ಸ್‌) ವ್ಯವಸ್ಥೆ, ಆಘ್ರಾಣಿಸುವಿಕೆ ಮತ್ತು ಕತ್ತನ್ನು ತಿರುಗಿಸುವಿಕೆ ಮುಂತಾದ ಪ್ರತಿಕ್ರಿಯೆಗಳು ರಿಸೆಪ್ಟರ್ ಹೊಂದಾಣಿಕೆಗಳಿಗೆ ಉದಾಹರಣೆಗಳಾಗಿವೆ. ಬಾಗಿ ನಿಂತು ಇಲಿಯ ಮೇಲೆ ಎರಗಲು ಸಿದ್ಧವಾಗಿರುವ ಬೆಕ್ಕಿನ ಆ ಒಂದು ಚಿತ್ರ ಶಾರೀರಿಕ ಭಂಗಿಯ ಹೊಂದಾಣಿಕೆಯನ್ನು ವ್ಯಕ್ತಪಡಿಸುತ್ತದೆ. ಯಾವುದೇ ಶಾರೀರಿಕ ಭಂಗಿಯ ಬಿಗಿತ ಸ್ನಾಯುಗಳ ಬಿಗಿತವನ್ನು ಒಳಗೊಂಡಿರುತ್ತದೆ.

ಅವಧಾನದಲ್ಲಿ ಮೂರು ರೀತಿಯನ್ನು ನಾವು ಕಾಣಬಹುದು:

  1. ಅನುದ್ದೇಶಿತ ಅವಧಾನ;
  2. ಉದ್ದೇಶಿತ ಅವಧಾನ;
  3. ರೂಢಿಯ ಅವಧಾನ.

ದೊಡ್ಡ ಶಬ್ದ, ಪ್ರಕಾಶಮಾನವಾದ ಬೆಳಕಿನ ಹೊಳಪು, ತೀವ್ರತರವಾದ ವಿದ್ಯುತ್ಸಂಪರ್ಕ ಮುಂತಾದ ತೀಕ್ಷ್ಣವಾದ ಹಾಗೂ ಅನಿರೀಕ್ಷಿತವಾದ ಕ್ರಿಯೆಗಳಿಗೆ ಅಥವಾ ಪ್ರಚೋದನೆಗಳಿಗೆ ನಾವು ಥಟ್ಟನೆ ಅವಧಾನವನ್ನು ಅತ್ತ ಹರಿಸಿದಾಗಲೆಲ್ಲ, ಅದನ್ನು ಅನುದ್ದೇಶಿತ ಅವಧಾನವೆಂದು ಕರೆಯಬಹುದು. ಈ ರೀತಿಯ ಅವಧಾನಗಳಲ್ಲಿ ಪ್ರಚೋದನೆಗಳು ಅಥವಾ ಸನ್ನಿವೇಶಗಳು ವ್ಯಕ್ತಿ ಅವುಗಳನ್ನು ಸ್ವೀಕರಿಸಲು ಕಾರ್ಯೋನ್ಮುಖ ಸ್ಥಿತಿಯಲ್ಲಿರಲಿ ಅಥವಾ ಇಲ್ಲದಿರಲಿ ತಾವೇ ತಾವಾಗಿ ಸಂಭವಿಸುತ್ತಿರುತ್ತವೆ.

ವ್ಯಕ್ತಿ ಮನಃಪುರ್ವಕವಾಗಿ ನೋಡುವಾಗ, ಕೇಳುವಾಗ, ಅವಧಾನಿಸಲು ಸುದೀರ್ಘ ಪ್ರಯತ್ನ ಮಾಡುವಾಗ, ಅಂಥದನ್ನು ಉದ್ದೇಶಿತ ಅವಧಾನ ಎನ್ನಬಹುದು. ಇಲ್ಲಿ ಪ್ರೇರಣಾಪುರ್ವಕವಾದ ಪ್ರಭಾವೀ ಹೇತುಗಳು ಪ್ರಮುಖಪಾತ್ರ ವಹಿಸುತ್ತವೆ; ಅಲ್ಲದೆ ಅಡೆತಡೆಗಳು ಹಿಡಿತದಲ್ಲಿರುತ್ತವೆ. ಅವಧಾನ ಉದ್ದೇಶಪುರ್ವಕವಾಗಿಯೇ ಪ್ರಸ್ತುತ ಕಾರ್ಯದ ಕಡೆ ಹರಿಯುತ್ತದೆ.

ಮತ್ತೆ ಕೆಲವು ರೀತಿಯ ಪ್ರಚೋದನೆಗಳಿವೆ. ಅವುಗಳತ್ತ ವ್ಯಕ್ತಿ ಅವಧಾನ ನೀಡುತ್ತಾನೆ. ಇದಕ್ಕೆ ಆತನ ಆಸಕ್ತಿ , ಸಾಮಾನ್ಯ ಅಭ್ಯಾಸ, ಮನಸ್ಸಿನ ನಿಲುವುಗಳೇ ಕಾರಣಗಳು. ಇಂಥ ಅವಧಾನವನ್ನು ರೂಢಿಯ ಅವಧಾನವೆಂದು ಕರೆಯಬಹುದು. ಆಂತರಿಕ ಸ್ಥಿತಿಗಳಾಗಿದ್ದು, ಬಲಯುತವಾದ ಹಸಿವು, ಲೈಂಗಿಕ ಮುಂತಾದ ದೈಹಿಕ ಪ್ರೇರಣೆಗಳೂ ರೂಢಿಯ ಅವಧಾನಕ್ಕೆ ಕಾರಣಗಳಾಗಿವೆ.

ಅವಧಾನವನ್ನು ವಸ್ತುನಿಷ್ಠವಾದ, ವ್ಯಕ್ತಿನಿಷ್ಠವಾದ ಪ್ರಭಾವೀ ಹೇತುಗಳಿಂದ ನಿರ್ಣಯಿಸಬಹುದು. ಅವುಗಳನ್ನೇ ಅವಧಾನದ ಸ್ಥಿತಿಗಳೆಂದು, ನಿರ್ಣಾಯಕಗಳೆಂದು ತಿಳಿಯಬಹುದು. ಅವಧಾನವನ್ನು ಪುರ್ಣವಾಗಿ ವಸ್ತುವಿನಲ್ಲಿ ಅಂತರ್ಜಾತವಾದ ಗುಣವೈಶಿಷ್ಟ್ಯಗಳಿಂದ, ಮತ್ತಿತರ ವಿಶಿಷ್ಟ ಸ್ವಭಾವದಿಂದ ನಿರ್ಣಯಿಸಿದರೆ, ಅವುಗಳನ್ನು ವಸ್ತುನಿಷ್ಠವಾದ ಪ್ರಭಾವೀ ಹೇತುಗಳೆಂದು ಪರಿಗಣಿಸುತ್ತಾರೆ. ವ್ಯಕ್ತಿಯ ಆಸಕ್ತಿ, ರೂಢಿಗಳು, ಮನಸ್ಸಿನ ಸ್ಥಿತಿ, ನಿಲುವುಗಳು-ಈ ವ್ಯಕ್ತಿನಿಷ್ಠವಾದ ಪ್ರಭಾವೀ ಹೇತುಗಳಿಂದಲೂ ಒಬ್ಬಾತನ ಅವಧಾನವನ್ನು ನಿರ್ಣಯಿಸಬಹುದು.

ಆಕಾರ, ತೀವ್ರತೆ, ಪುನರಾವರ್ತನೆ, ಚಲನೆ, ಬದಲಾವಣೆ, ಸುವ್ಯವಸ್ಥಿತ ರೂಪ ಮತ್ತು ನವ್ಯತೆ-ಇವುಗಳು ಪ್ರಮುಖವಾದ ವಸ್ತುನಿಷ್ಠ ಪ್ರಭಾವೀ ಹೇತುಗಳಾಗಿವೆ. ಪ್ರಚೋದ ನೆಯ ತೀವ್ರತೆ ಅಥವಾ ಬಲ, ಚಲನೆಯಲ್ಲಿರುವ ಪ್ರಚೋದನೆಗಳು-ಮತ್ತು ಪುನರಾವರ್ತನೆ ಗೊಳ್ಳುವ ಪ್ರಚೋದನೆಗಳು-ಇವು ನಮ್ಮ ಅವಧಾನವನ್ನು ಸೆಳೆಯುತ್ತವೆ. ದೊಡ್ಡ ಧ್ವನಿಯ ಪರಿಣಾಮಗಳು, ಪ್ರಕಾಶಮಾನವಾದ ದೀಪಗಳು ಮತ್ತು ವ್ಯಾಪಕವಾದ ಚಲನೆ, ಪುನರಾವರ್ತನೆ ಯುಳ್ಳ ಚಿಹ್ನೆಗಳು ಮುಂತಾದ ಮೇಲಿನ ವಿಷಯಗಳನ್ನು ಜಾಹೀರಾತುಗಳಲ್ಲಿ ಸುಸ್ಪಷ್ಟವಾಗಿ ಕಾಣಬಹುದು. ತೀವ್ರತೆ ಅಥವಾ ಪ್ರಚೋದನೆ ಸ್ಥಗಿತವಾಗುವುದು-ಇಂಥ ಪ್ರಚೋದನೆಯ ಬದಲಾವಣೆಗಳು ನಮ್ಮ ಅವಧಾನವನ್ನು ಸೆಳೆಯುತ್ತವೆ. ಒಂದು ನಿರ್ದಿಷ್ಟವಾದ ಮಾದರಿ ಯುಳ್ಳವು ಇಲ್ಲವೆ ತಾಳಬದ್ಧವಾಗಿ ಪ್ರವಹಿಸುವಂಥವು, ಬೇರೆ ವಸ್ತುಗಳಿಗಿಂತ ಹೆಚ್ಚಾಗಿ ನಮ್ಮ ಅವಧಾನವನ್ನು ಆಕರ್ಷಿಸಬಹುದು. ಯಾವುದೇ ಅಪರಿಚಿತವಾದದ್ದು, ಅಪುರ್ವ ವಾದದ್ದು ಮತ್ತು ನವ್ಯವಾದದ್ದು ನಿರ್ವಿಕಾರವಾಗಿ ನಮ್ಮ ಅವಧಾನವನ್ನು ಸೆಳೆಯುತ್ತದೆ. ವಸ್ತುಗಳು ತಮ್ಮ ದೊಡ್ಡಗಾತ್ರದಿಂದಾಗಲಿ ತಮ್ಮ ವ್ಯಾಪಕತೆಯಿಂದಾಗಲಿ, ಬಹುಮಟ್ಟಿಗೆ ಅವಧಾನವನ್ನು ಆಕರ್ಷಿಸುವ ಸಂಭವವುಂಟು. ದೈಹಿಕ ಮತ್ತು ಮಾನಸಿಕ ಸ್ಥಿತಿಗತಿಗಳೂ ನಮ್ಮ ಅವಧಾನವನ್ನು ನಿರ್ಣಯಿಸುತ್ತವೆ. ಬೇರೆಯ ವಸ್ತುಗಳಿಗಿಂತ ಹೆಚ್ಚಾಗಿ, ಒಬ್ಬ ಹಸಿದ ವ್ಯಕ್ತಿ ತಿನ್ನುವ ಪದಾರ್ಥಗಳತ್ತ ತನ್ನ ಅವಧಾನವನ್ನು ಹರಿಸುವ ಸಂಭವವೇ ಹೆಚ್ಚು. ವ್ಯಕ್ತಿ ಕೋಪದ ಸ್ಥಿತಿಯಲ್ಲಿರುವಾಗ ಒಂದು ಸಣ್ಣ ಕಿರುಕುಳವೊ ಅಥವಾ ಒಂದು ಸಣ್ಣ ಪೀಡನೆಯೊ ಬಹು ಬೇಗ ಅವನ ಗಮನಕ್ಕೆ ಬಂದು ಅವಧಾನ ಅತ್ತ ಹರಿಯುತ್ತದೆ. ನಮ್ಮಲ್ಲಿರುವ ಆಳವಾದ ಪ್ರೇಮ, ಪ್ರೇರಣೆಗಳು (ಮೊಟಿವೇಷನ್ಸ್) ಆಂತರಿಕ ಒತ್ತಡಗಳು, ಆಸಕ್ತಿ ಹಾಗೂ ಅಭ್ಯಾಸಗಳು ನಮ್ಮ ಅವಧಾನವನ್ನು ಆಕರ್ಷಿಸುವುದರಲ್ಲಿ ಪ್ರಧಾನಪಾತ್ರ ವಹಿಸುತ್ತವೆ. ನಿದ್ರಿಸುತ್ತಿರುವ ಮಾತೆಯೋರ್ವಳಿಗೆ ಹೊರಗಡೆಯ ಗದ್ದಲದಿಂದ ನಿದ್ರೆಗೆ ಭಂಗ ಬರದಿರಬಹುದು; ಆದರೆ ಆಕೆಯ ಕಾಯಿಲೆಯ ಮಗುವಿನ ಕ್ಷೀಣವಾದ ನೋವಿನ ರೋದನದಿಂದ ಒಂದೇ ಬಾರಿಗೆ ಆ ತಾಯಿಯ ಅವಧಾನ ಜಾಗೃತಗೊಂಡು ಆಕೆ ಎಚ್ಚರಗೊಳ್ಳಬಹುದು. ಇವೆಲ್ಲ ವ್ಯಕ್ತಿನಿಷ್ಠ ಅವಧಾನಕ್ಕೆ ಉದಾಹರಣೆಗಳಾಗಿವೆ.

ನಮ್ಮ ಅಧ್ಯಯನದ ಅನುಕೂಲಕ್ಕಾಗಿ ಅವಧಾನದ ಸ್ಥಿತಿಗತಿಗಳನ್ನು ವಸ್ತುನಿಷ್ಠ ಹಾಗೂ ವ್ಯಕ್ತಿನಿಷ್ಠ ಪ್ರಭಾವಿ ಹೇತುಗಳೆಂದು ವಿಭಾಗ ಮಾಡಿಕೊಳ್ಳುತ್ತೇವೆ. ಆದರೆ ಯಾವುದೇ ಒಂದು ನಿಶ್ಚಿತ ಸಂದರ್ಭದಲ್ಲಿ ಈ ರೀತಿಯ ಸೂಕ್ಷ್ಮಭೇದಗಳನ್ನು ಮಾಡಲು ಸಾಧ್ಯವಾಗದಿರಬಹುದು.

ಅವಧಾನ ಏಕಪ್ರಕಾರವಾಗಿರುವುದಿಲ್ಲ. ಅಲ್ಲದೆ ಯಾವುದೇ ದೀರ್ಘಾವಧಿಯವರೆಗೆ ಏಕಾಗ್ರಗೊಳಿಸಲೂ ಆಗುವುದಿಲ್ಲ. ಇದು ಒಂದು ವಸ್ತುವಿನಿಂದ ಮತ್ತೊಂದು ವಸ್ತುವಿಗೆ ಬೇಗ ಬೇಗನೆ ಬದಲಾವಣೆಗೊಳ್ಳುವ ಪ್ರವೃತ್ತಿಯನ್ನು ಹೊಂದಿದೆ. ಈ ಅವಧಾನದ ಬದಲಾವಣೆಯನ್ನು ಅವಧಾನದ ತೂಗುಯ್ಯಾಲೆ ಎನ್ನುತ್ತಾರೆ. ನಾವು ಒಂದು ವಸ್ತುವಿನ ಮೇಲೆ ಅವಧಾನವನ್ನು ಏಕಾಗ್ರಗೊಳಿಸಿದಾಗ, ಒಂದು ನಿರ್ದಿಷ್ಟ ಕಾಲದ ಅನಂತರ ಅವಧಾನ ಅದೇ ವಸ್ತುವಿನ ಒಂದು ಭಾಗದಿಂದ ಮತ್ತೊಂದು ಭಾಗದತ್ತ ಹರಿಯುತ್ತದೆ. ಸಾಮಾನ್ಯವಾಗಿ ಪ್ರತಿ 5 ಇಲ್ಲವೆ 6 ಸೆಕೆಂಡಿಗೊಮ್ಮೆ ಅವಧಾನ ಬದಲಾಗುತ್ತಿರುತ್ತದೆ. ಹೆಚ್ಚೆಂದರೆ 25 ಸೆಕೆಂಡುಗಳು ಅವಧಾನವನ್ನು ಬದಲಿಸದೆ ಇದ್ದ ನಿದರ್ಶನಗಳಿವೆ. ಅವಧಾನದ ಕಾಲಾವಧಿ ವ್ಯಕ್ತಿಯಿಂದ ವ್ಯಕ್ತಿಗೆ, ವಸ್ತುವಿನ ಸಂಕೀರ್ಣತೆಯಿಂದ ಮತ್ತು ವ್ಯಕ್ತಿಯ ಮನೋನಿಲುವುಗಳಿಂದ ಬದಲಾವಣೆ ಹೊಂದುತ್ತಿರುತ್ತದೆ. ತೂಗಾಡುವ ಅವಧಾನ ಸುಪ್ರಸಿದ್ಧ ವಿಷಯ.

ಎರಡು ಕಾರ್ಯಗಳ ನಡುವೆ ಅವಧಾನದ ವಿಭಜನೆಯ ಸಾಧ್ಯತೆ ಅವಧಾನದ ಗಮನಾರ್ಹವಾದ ವೈಶಿಷ್ಟ್ಯವೆನಿಸಿದೆ. ಜೂಲಿಯಸ್ ಸೀಸರ್ ಬೇರೆ ಬೇರೆ ಪತ್ರ ಪ್ರತಿಮಾಡುವ ವರಿಗೆ ಒಂದೇಕಾಲದಲ್ಲಿ ಬೇರೆ ಬೇರೆ ಪತ್ರಗಳನ್ನು ಬರೆಸುತ್ತಿದ್ದ. ಆತ ಮೊದಲನೆಯ ಪತ್ರ ಪ್ರತಿಮಾಡುವವನಿಗೆ ಮೊದಲ ವಾಕ್ಯವನ್ನು ಹೇಳುತ್ತಿದ್ದ; ತತ್ಕ್ಷಣವೇ ಆತನ ಗಮನ ಎರಡನೆಯ ಪತ್ರ ಪ್ರತಿಮಾಡುವವನತ್ತ ಹರಿಯುತ್ತಿತ್ತು; ಕೂಡಲೇ ಆತನಿಗೂ ಒಂದು ವಾಕ್ಯವನ್ನು ಹೇಳುತ್ತಿದ್ದ; ಹೀಗೆಯೇ ಉಳಿದ ಪತ್ರ ಪ್ರತಿಕಾರರಿಗೆ ಒಂದೊಂದು ಸಾಲು ಬರೆಸುತ್ತಿದ್ದ. ಮತ್ತೆ ಮೊದಲನೆಯ ಪತ್ರಕ್ಕೆ ಗಮನ ಹರಿಸುತ್ತಿದ್ದ. ಹೀಗೆ ಮಾಡುವಾಗ ಆತ ಎಂದೂ ಗೊಂದಲಕ್ಕೆ ಒಳಗಾಗುತ್ತಿರಲಿಲ್ಲ. ಇಲ್ಲಿ ವಿವಿಧ ಕಾರ್ಯಗಳನ್ನು ಏಕಕಾಲದಲ್ಲಿ ನಡೆಸಲು ಬೇಕಾಗುವ ಸಾಕಷ್ಟು ವ್ಯಾಪಕವಾದ ಅವಧಾನ ಕಂಡುಬರುತ್ತದೆ. ನಿರ್ಣಾಯಕವಾಗಿ ಹೇಳುವುದಾದರೆ ಅವಧಾನದ ವಿಭಜನೆ ದುಸ್ಸಾಧ್ಯ. ಬೇರೆ ಬೇರೆ ಪತ್ರ ಪ್ರತಿಮಾಡುವವರಿಗೆ ಬೇರೆ ಬೇರೆ ಪತ್ರವನ್ನು ಒಂದೇ ಸಮಯದಲ್ಲಿ ಹೇಳಿ ಬರೆಸುವ ಶಕ್ತಿಗೆ, ಅವಧಾನದ ವಿಭಜನೆಗಿಂತ ಹೆಚ್ಚಾಗಿ, ತೀವ್ರವಾಗಿ ತೂಗಾಡುವ ಅವಧಾನದ ಸೌಲಭ್ಯವೇ ಕಾರಣವೆನಿಸುತ್ತದೆ. ಅನೇಕ ಸಂದರ್ಭಗಳಲ್ಲಿ ಜನರು ಮಾತನಾಡುತ್ತಲೇ ಕಸೂತಿ ಮುಂತಾದ ಕರಕೌಶಲ ಕೆಲಸಗಳಲ್ಲಿ ನಿರತರಾಗಿರುವುದನ್ನು ನಾವು ಕಾಣುತ್ತೇವೆ. ಇದರ ಅರ್ಥ ಏಕಕಾಲದಲ್ಲಿ ಎರಡು ಕಾರ್ಯಗಳ ಕಡೆ ಅವಧಾನ ಹರಿಸಲ್ಪಟ್ಟಿದೆ ಎಂದಲ್ಲ. ಅನೇಕ ವೇಳೆ ಕಸೂತಿ ಮುಂತಾದ ಕರಕೌಶಲ ಕೆಲಸಗಳಲ್ಲಿ ಅವಧಾನ ಕೇಂದ್ರಿಕೃತವಾಗಿರುವುದೇ ಇಲ್ಲ; ಅದು ಸ್ವಯಂಚಾಲಿತ ಕ್ರಿಯೆಯಾಗಿರುತ್ತದೆ; ಹಾಗೂ ಮಾತನಾಡುವ ಕ್ರಿಯೆ ಅವಧಾನದ ಸಹಾಯದಿಂದ ಮುಂದುವರಿಯುತ್ತಿರುತ್ತದೆ.

ಅವಧಾನಕ್ಕೆ ಸಂಬಂಧಿಸಿದ ಮತ್ತೊಂದು ಮುಖ್ಯವಾದ ಕುತೂಹಲಕಾರಿಯಾದ ಸಮಸ್ಯೆಯೆಂದರೆ ಅವಧಾನದ ಚಾಂಚಲ್ಯ, ಭ್ರಮಣೆ ಅಥವಾ ಅವಧಾನದ ವೈಕಲ್ಯ. ಅವಧಾನದಲ್ಲಿ ಉಂಟಾಗುವ ಭ್ರಮಣೆಯ ಪರಿಣಾಮ ಗಮನಾರ್ಹವಾದ ಪ್ರಾಮುಖ್ಯ ಹೊಂದಿದೆ. ಈ ಚಾಂಚಲ್ಯ ಕಾರ್ಯಕೌಶಲದ ನಾಶಕ್ಕೆ ಅಥವಾ ಅದರ ಅಪ್ರಯೋಜಕತೆಗೆ ಕಾರಣವಾಗಬಹುದು; ಮತ್ತು ಅವಧಾನದ ಏಕಾಗ್ರತೆಗೆ ಭಂಗ ತರಬಹುದು. ಆದರೆ ಪ್ರಯೋಗಶಾಲೆಯ ಆಧಾರಗಳು ವಿರುದ್ಧ ಫಲಿತಾಂಶಗಳನ್ನು ಕೊಟ್ಟಿವೆ. ಕೆಲವು ನಿದರ್ಶನಗಳಲ್ಲಿ ಅವಧಾನ ಭ್ರಮಣೆ ಪ್ರತಿಕೂಲ ಪರಿಣಾಮವನ್ನು ಬೀರಿದೆ. ಮತ್ತೆ ಕೆಲವು ನಿದರ್ಶನಗಳಲ್ಲಿ ಅದರ ಪ್ರಭಾವದಿಂದ ಉತ್ತಮ ಕಾರ್ಯ ನಡೆದಿದೆ. ಇಂಥ ಸಂದರ್ಭಗಳಲ್ಲಿ ಅದು ಉತ್ತೇಜಕವಾಗಿ ವರ್ತಿಸಿ ಕಾರ್ಯಕ್ಕೆ ಹೆಚ್ಚಿನ ಅವಧಾನವನ್ನು ದೊರಕಿಸಿಕೊಡಬಹುದು. ಕೆಲವು ವ್ಯಕ್ತಿಗಳ ಅಭಿಪ್ರಾಯದಂತೆ ಅವಧಾನವನ್ನು ಕದಲಿಸಲು ಕನಿಷ್ಠದರ್ಜೆಯ ಶಬ್ದ ಅಥವಾ ಮಾತಷ್ಟೇ ಸಾಕು. ಮತ್ತೆ ಕೆಲವರಿಗೆ ತುಂಬ ನಿಶ್ಶಬ್ದವಾಗಿದ್ದರೂ ಕೆಲಸಮಾಡುವ ಉತ್ತೇಜಕಶಕ್ತಿಯ ಅಭಾವವಿರುವುದು ಕಂಡುಬರುತ್ತದೆ. ಅವಧಾನ ಭ್ರಮಣೆ ಹಿಂಸಾಮಯ ವಾಗಿಯೂ ಅನಿಯತವಾಗಿಯೂ ಸಂಭವಿಸುತ್ತಿದ್ದರೆ, ಇದರ ಪರಿಣಾಮ ಅವಧಾನೋತ್ಕರ್ಷ ವಾಗಿ ಕಂಡುಬರುತ್ತದೆ. ಇಂಥ ಸನ್ನಿವೇಶಗಳಲ್ಲಿ ಚಿತ್ತಭ್ರಮಣೆಯನ್ನು ನಿವಾರಿಸಿಕೊಂಡು ಹೋಗಲು ಹೆಚ್ಚಿನ ಶಕ್ತಿವ್ಯಯದ ಅಗತ್ಯ ಕಂಡುಬರುತ್ತದೆ. ಅವಧಾನ ಭ್ರಮಣೆಯ ಪರಿಣಾಮ ಬಹುಮಟ್ಟಿಗೆ ವ್ಯಕ್ತಿಯ ಉದ್ವೇಗಕಾರಕ ಪ್ರತಿಕ್ರಿಯೆಗಳನ್ನೂ ಆತನ ಮನೋನಿಲುವುಗಳನ್ನೂ ಅವಲಂಬಿಸಿರುತ್ತದೆ. ಒಂದು ವೇಳೆ ಈ ಭ್ರಮಣೆ ತನ್ನ ಪಾಲಿಗೆ ಹಾನಿಕರವೆಂದು ವ್ಯಕ್ತಿ ಭಾವಿಸುವುದಾದರೆ, ಅದರಿಂದಾಗಿ ಆತನ ಕಾರ್ಯಗಳು ಕೆಡಬಹುದು. ಕೋಪ, ಭಯ, ಬೇಸರ, ಆಯಾಸ, ಪ್ರಿಯವಾದ ಆಲೋಚನೆಗಳು ಮುಂತಾದ ಆಂತರಿಕ ಚಾಂಚಲ್ಯ ಕಾರಣಗಳು ದಿನನಿತ್ಯದ ಬಾಹ್ಯ ಕಾರಣಗಳಿಗಿಂತ ಹೆಚ್ಚಾಗಿ ನಮ್ಮ ಕೆಲಸ ಕಾರ್ಯಗಳಲ್ಲಿ ಪರಿಣಾಮವನ್ನುಂಟುಮಾಡುತ್ತವೆ. ಇಂಥ ಚಾಂಚಲ್ಯಗಳ ಸ್ವಭಾವ, ಪರಿಣಾಮವನ್ನು ಕುರಿತು ಮನೋವಿಜ್ಞಾನಿಗಳು ಪ್ರಾಯೋಗಿಕವಾಗಿ ಅಧ್ಯಯನ ನಡೆಸಿದ್ದಾರೆ.

ಒಂದು ಗುಂಪಿನ ವಿದ್ಯಾರ್ಥಿಗಳಿಗೆ ಯಾವುದಾದರೊಂದು ಪದ್ಯವನ್ನು ಕೊಟ್ಟು, ಅದನ್ನು ಜ್ಞಾಪಕದಲ್ಲಿಟ್ಟುಕೊಳ್ಳುವಂತೆ ಅಥವಾ ಯಾವುದಾದರೂ ಗಣಿತಕ್ಕೆ ಸಂಬಂಧಿಸಿದ ಲೆಕ್ಕಗಳನ್ನು ಮಾಡುವಂತೆ ಹೇಳಿ, ನಿಶ್ಶಬ್ದವಾದ ವಾತಾವರಣವನ್ನೂ ಗೊಂದಲಮಯವಾದ ವಾತಾವರಣವನ್ನೂ ಕಲ್ಪಿಸಿ ಅವರ ಚಟುವಟಿಕೆಗಳನ್ನು ಗಮನಿಸುವುದು. ಈ ಎರಡು ವಾತಾವರಣಗಳಲ್ಲಿನ ಪ್ರಯೋಗಗಳಲ್ಲಿನ ಫಲಿತಾಂಶವನ್ನು ತೌಲನಿಕವಾಗಿ ನೋಡಿದಾಗ, ಹೆಚ್ಚು ಪ್ರಯೋಗಗಳಲ್ಲಿ ವ್ಯಕ್ತಿಗಳ ಒಟ್ಟು ಕಾರ್ಯಚಟುವಟಿಕೆಯಲ್ಲಿ, ಚಾಂಚಲ್ಯಗಳ ಪರಿಣಾಮ ಅಲ್ಪವೆಂದೂ ಮತ್ತೆ ಕೆಲವು ಸಂದರ್ಭಗಳಲ್ಲಿ ಗಮನಾರ್ಹವೆಂದೂ ಕಂಡುಬಂದಿದೆ.

ಅವಧಾನದ ವ್ಯಾಪ್ತಿ (ಸ್ಪ್ಯಾನ್) ಅತ್ಯಂತ ಮುಖ್ಯವಾದ ವಿಷಯ. ಒಂದೇ ಒಂದು ನೋಟದಲ್ಲಿ ಎಷ್ಟು ವಸ್ತುಗಳನ್ನು ಅವಧಾನಮಾಡಬಹುದೋ ಅದನ್ನು ಅವಧಾನದ ವ್ಯಾಪ್ತಿ ಎನ್ನುತ್ತಾರೆ. ಒಂದೇ ಒಂದು ಅವಧಾನ ಕ್ರಿಯೆಯಲ್ಲಿ ಎಷ್ಟು ವಿಭಿನ್ನವಾದ ಅಂಕೆಗಳನ್ನು ಅಥವಾ ಅಕ್ಷರಗಳನ್ನು ಗ್ರಹಿಸಬಹುದು? ಈ ಅವಧಾನ ವ್ಯಾಪ್ತಿಯನ್ನು ಟ್ಯಾಚಿಸ್ಟೊಸ್ಕೋಪ್ ಎಂಬ ಉಪಕರಣದ ಸಹಾಯದಿಂದ ನಿರ್ಣಯಿಸಬಹುದು. ಈ ಉಪಕರಣದ ಮೂಲಕ ಅಕ್ಷರಗಳು, ಚುಕ್ಕೆಗಳು, ರೇಖೆಗಳು ಅಥವಾ ಸಂಖ್ಯೆಗಳನ್ನು ಪ್ರದರ್ಶಿಸಲಾಗುವುದು. ಅನಂತರ ಪರೀಕ್ಷಾರ್ಥಿ ತಾನು ನೋಡಿದ ಅಥವಾ ಗ್ರಹಿಸಿದ ಅಂಶಗಳನ್ನು ವರದಿಮಾಡುತ್ತಾನೆ. ಮೇಲಿನ ಉಪಕರಣದಲ್ಲಿ ವಿಷಯಗಳನ್ನು ಪ್ರದರ್ಶಿಸುವ ಕಾಲಾವಧಿಯು ಬಹು ಅತ್ಯಲ್ಪ. ಅದನ್ನು 1/100ರಿಂದ 1/5 ಸೆಕೆಂಡುಗಳವರೆಗೆ ಬದಲಾಯಿಸಬಹುದು. ಒಂದೇ ಒಂದು ನೋಟದಲ್ಲಿ ನಾಲ್ಕು ಅಥವಾ ಐದು ಸಂಖ್ಯೆಯನ್ನೊ ಅಥವಾ ಅಕ್ಷರವನ್ನೊ ಅವಧಾನ ಮಾಡಬಹುದೆಂದು ನಿರ್ಣಯಿಸಿದ್ದಾರೆ. ಯಾವಾಗ ಅಕ್ಷರಗಳು ಅರ್ಥದಿಂದ ಕೂಡಿದ ಪದವಾಗಿರುತ್ತವೋ ಆಗ ಒಂದೇ ಒಂದು ಅವಧಾನಕ್ರಿಯೆಯಲ್ಲಿ ಹತ್ತು ಅಥವಾ ಹತ್ತಕ್ಕಿಂತ ಹೆಚ್ಚು ಅಕ್ಷರಗಳುಳ್ಳ ಪದಗಳನ್ನು ಗ್ರಹಿಸಬಹುದು. ವ್ಯಕ್ತಿಯ ಮನಸ್ಸಿನ ನಿಲುವು ಮತ್ತು ಆಸಕ್ತಿಗಳು ಅವಧಾನವ್ಯಾಪನೆಯ ಮೇಲೆ ಹೆಚ್ಚು ಪ್ರಭಾವ ಬೀರುತ್ತವೆ. ತೀಕ್ಷ್ಣವಾದ ಅವಲೋಕನ, ದೃಷ್ಟಿಯ ಚಟುವಟಿಕೆ, ಜ್ಞಾಪಕ ಶಕ್ತಿ, ಓದುವ ಸಾಮಥರ್್ಯದಲ್ಲಿರುವ ಶೀಘ್ರತೆ, ಗ್ರಹಣಶಕ್ತಿ ಮತ್ತು ವ್ಯಕ್ತಿಯ ಬುದ್ಧಿಶಕ್ತಿಯ ಮಟ್ಟ ಇವುಗಳೆಲ್ಲವೂ ಅವಧಾನದ ವ್ಯಾಪ್ತಿಯ ಮೇಲೆ ಪ್ರಭಾವ ಬೀರುತ್ತವೆ.

ಶಿಕ್ಷಣ ಕ್ಷೇತ್ರದಲ್ಲಿ

[ಬದಲಾಯಿಸಿ]

ಅವಧಾನದ ಸ್ಥಾನ ದೊಡ್ಡದು. ಮಕ್ಕಳಲ್ಲಿ ಅದು ಇಲ್ಲದಲ್ಲಿ ಕಲಿಕೆ ಕುಂಟುತ್ತದೆ. ವಿಷಯವನ್ನೋ ವಸ್ತುವನ್ನೋ ನಿರ್ದಿಷ್ಟವಾಗಿ ಸ್ಪಷ್ಟಪಡಿಸಿ ಮನಸ್ಸಿಗೆ ನಾಟುವಂತೆ ಮಾಡುವುದು ಅವಧಾನದ ಕೆಲಸ. ಅದರಿಂದ ಮನಸ್ಸಿನ ದಕ್ಷತೆ ಹೆಚ್ಚುತ್ತದೆ. ಕಲಿಕೆ ಸರಾಗವೂ ಪರಿಣಾಮಕಾರಿಯೂ ಆಗುತ್ತದೆ. ಸ್ವಭಾವಜನ್ಯ ಆಸಕ್ತಿಯಿಂದಾಗಿ ಅವಧಾನ ಸ್ವಾಭಾವಿಕವಾಗಿ ಕಂಡುಬರುತ್ತದೆ. ಕುತೂಹಲ, ರಚನೆಯ ಚಮತ್ಕಾರ, ಸಂಘಜೀವನ, ಆತ್ಮರಕ್ಷಣೆ, ಆಟ, ಸಂಗ್ರಹಣೆ, ಕೈಕೆಲಸ, ಸಾಹಸ ಮುಂತಾದ ಸಹಜಪ್ರವೃತ್ತಿಗಳಿದ್ದಲ್ಲಿ ಮಕ್ಕಳು ತೀವ್ರವಾದ ಅವಧಾನವನ್ನು ತೋರುತ್ತಾರೆ. ಇವುಗಳನ್ನು ಶಿಕ್ಷಣದಲ್ಲಿ ಅಳವಡಿಸಿದಲ್ಲಿ ಕಲಿಕೆ ಹಸನಾಗುತ್ತದೆ. ಆದರೆ ಸಹಜವಾದ ಆಸಕ್ತಿಯನ್ನು ಕುದುರಿಸದ ಮನೆಯ ಅಥವಾ ಶಾಲೆಯ ಪಾಠಗಳು ಉದ್ದನೆಯ ಬರೆವಣಿಗೆ, ಲೆಕ್ಕ ಮಾಡುವುದು, ಚರಿತ್ರೆ ಉರು ಹಾಕುವುದು-ಇತ್ಯಾದಿಗಳಲ್ಲಿ ಮಕ್ಕಳ ಗಮನ ಸಹಜವಾಗಿ ಹರಿಯದು. ಒತ್ತಾಯಪುರ್ವಕವಾಗಿ ಅದನ್ನು ಕುದುರಿಸಬೇಕಾಗುತ್ತದೆ. ಪ್ರಾರಂಭದಲ್ಲಿ ಇದು ಕಷ್ಟದ ಕೆಲಸವಾಗಿ ತೋರಬಹುದು. ಆದರೆ ಶಾಸ್ತ್ರವಿಚಾರಗಳ ಮೂಲಾಂಶಗಳನ್ನು ಮನದಟ್ಟು ಮಾಡುವವರೆಗೆ ಅವಧಾನವನ್ನು ಉಳಿಸಿಕೊಂಡಲ್ಲಿ ಅನಂತರ ಕುತೂಹಲ ಕೆರಳಿ ಅವಧಾನ ಸಹಜವಾಗಿ ಏರ್ಪಡುತ್ತದೆ. ಓದುವ ಮಗುವಿನ ಸುತ್ತ ಆಟದ ಸನ್ನಿವೇಶ ಏರ್ಪಡದಂತೆ ನೋಡಿಕೊಳ್ಳಬೇಕು. ಏಕೆಂದರೆ ಸನ್ನಿವೇಶ ಚಿತ್ತಚಾಂಚಲ್ಯಕ್ಕೆ ಪ್ರಬಲ ಕಾರಣವಾಗಬಹುದು. ಅವಧಾನ ಹೆಚ್ಚಬೇಕಾದರೆ ಸುಲಭವಾಗಿ ಗಮನ ಸೆಳೆಯುವ ಅವಕಾಶಗಳಿಂದ ದೂರವಿರಬೇಕಾದ್ದು ಅಗತ್ಯ. ವೈವಿಧ್ಯ, ನಿರ್ದಿಷ್ಟತೆ, ಉತ್ತೇಜನದ ತೀಕ್ಷ್ಣತೆ, ಪುನರಾವರ್ತನೆ, ಆಸಕ್ತಿ ಇವೆಲ್ಲ ಅವಧಾನವನ್ನು ಹೆಚ್ಚಿಸುವ ಸಾಧನಗಳು. ಇವುಗಳಲ್ಲಿ ಅತಿ ಮುಖ್ಯವಾದ್ದು ಆಸಕ್ತಿ. ಮೆಗ್ಡುಗಲ್ ಹೇಳಿರುವಂತೆ ಆಸಕ್ತಿ ಅವಧಾನದ ಸ್ಥಾವರರೂಪ; ಅವಧಾನ ಆಸಕ್ತಿಯ ಕ್ರಿಯಾರೂಪ. ಆಸಕ್ತಿ ಕಾರ್ಯ ರೂಪಕ್ಕೆ ಬರುವುದೇ ಅವಧಾನ. ನಮ್ಮ ಆಸಕ್ತಿಗಳು ಹುಟ್ಟುಗುಣಗಳಿಂದ ಪ್ರಾರಂಭವಾಗಿ ಅನುಭವ, ಪುರ್ವಾರ್ಜಿತ ಸ್ನೇಹಸಂಪರ್ಕಗಳು, ಸಾಮಾಜಿಕ ಅಗತ್ಯಗಳು, ಸನ್ನಿವೇಶ-ಇವುಗಳಿಂದ ಪೋಷಿತವಾಗಿ ಹೊಸ ಹೊಸ ಆಸಕ್ತಿಗಳಾಗಿ ಪರಿಣಾಮಗೊಳ್ಳುತ್ತವೆ. ಅಂದರೆ ನಮ್ಮ ಸಂಸ್ಕಾರಗಳಿಂದ ಆಸಕ್ತಿಗಳು ಬೆಳೆಯುತ್ತವೆ. ಆರ್ಜಿತ ಆಸಕ್ತಿ ವಿಸ್ತರಿಸಿ ಬೆಳೆದಂತೆಲ್ಲ ಅವಧಾನ ಹೆಚ್ಚುತ್ತದೆ. ಅದರಿಂದ ದಕ್ಷತೆ ಹೆಚ್ಚು. ನಮ್ಮ ಆಲೋಚನೆಗಳೂ ಕೆಲಸಗಳೂ ಹೆಚ್ಚು ಸಮರ್ಪಕವಾಗುತ್ತವೆ.

ಜೀವನದಲ್ಲಿ ಅವಧಾನ

[ಬದಲಾಯಿಸಿ]

ಆಸಕ್ತಿಗಳಿಗೆ ತಕ್ಕಂತೆ ಅವಧಾನ, ಅವಧಾನಕ್ಕೆ ತಕ್ಕಂತೆ ಅರಿವು. ಆದ್ದರಿಂದ ಜೀವನದಲ್ಲಿ ವ್ಯಕ್ತಿ ಉತ್ತಮ ಆಸಕ್ತಿಗಳನ್ನು ರೂಢಿಸಿಕೊಳ್ಳಬೇಕು. ಜ್ಞಾನ, ವಿಜ್ಞಾನ, ಸಂಗೀತ, ಸಾಹಿತ್ಯ, ವ್ಯಾಸಂಗ, ಉಪಯೋಗಕಾರಿ ಕೆಲಸಗಳು-ಇವುಗಳಲ್ಲಿ ನಮ್ಮ ಅವಧಾನವೇರ್ಪಡಬೇಕು. ಕವಾಯಿತಿಗೆ ಮುನ್ನ ಸೈನಿಕ ‘ಸಾವಧಾನ’ ಸ್ಥಿತಿಯಲ್ಲಿರುವಂತೆ ಜೀವನದಲ್ಲಿ ಸತ್ಕಾರ್ಯಗಳನ್ನು ಕೈಗೊಳ್ಳುವಾಗಲೆಲ್ಲ ಮನಸ್ಸು, ದೇಹ ಅವಧಾನಸ್ಥಿತಿಯಲ್ಲಿರಬೇಕು. ಹಾಗಾದರೆ ದೊಡ್ಡ ಸಾಧನೆಗಳು ಸಾಧ್ಯವಾಗುತ್ತವೆ.