ಅಲ್ ಕೈದಾ
ಅಲ್ ಕೈದಾ ಒಂದು ಅಂತರರಾಷ್ಟ್ರೀಯ ಸುನ್ನಿ ಇಸ್ಲಾಂ ಧಾರ್ಮಿಕ ಉಗ್ರಗಾಮಿ ಸಂಘಟನೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ಷೋಭೆಯುಂಟುಮಾಡುತ್ತಿರುವ ಪ್ರಮುಖ ಭಯೋತ್ಪಾದಕ ಸಂಘಟನೆಯಾಗಿದೆ. ಇದು ಸುಮಾರು ೧೮೮೮ - ೧೯೯೦ರ ಮಧ್ಯ ಸ್ಥಾಪನೆಗೊಂಡಿತು. ಇದು ಸೆಪ್ಟೆಂಬರ್ ೧೧ರ ದಾಳಿಗಳು, ಲಂಡನ್ನಿನ ಜುಲೈ ೭, ೨೦೦೫ರ ಸ್ಪೋಟಗಳು ಮತ್ತಿತರ ಹಲವು ವಿಧ್ವಂಸಕಾರಿ ಚಟುವಟಿಕೆಗಳಿಗೆ ಕಾರಣವಾಗಿರುವ ಒಂದು ಭಯೋತ್ಪಾದಕ ಸಂಘಟನೆ. ಅಮೆರಿಕ, ಬ್ರಿಟನ್ನಂಥ ಪಾಶ್ವಾತ್ಯ ರಾಷ್ಟ್ರಗಳು ಅಲ್ ಖೈದಾ ಸಂಘಟನೆ ಮತ್ತು ಅದರ ಸದಸ್ಯಬಲವನ್ನು ಬಗ್ಗು ಬಡಿಯಲು ಸಮರ ತಂತ್ರಗಳನ್ನು ಹೂಡುತ್ತಿದ್ದರೂ ಆ ಸಂಘಟನೆ ಮತ್ತಷ್ಟು ಶಕ್ತಿಶಾಲಿ ಆಗುತ್ತಿದೆ ಎನ್ನುವುದಕ್ಕೆ ಅಲ್ಖೈದಾ ಮುಖ್ಯಸ್ಥ ಬಿನ್ಲಾಡನ್ ತಲೆಯ ಮೌಲ್ಯ ದುಪ್ಪಟ್ಟಾಗಿರುವುದೇ ಸಾಕ್ಷಿ. ಪ್ರಪಂಚವನ್ನೇ ನೆಲೆಯನ್ನಾಗಿ ಮಾಡಿಕೊಂಡಿರುವ ಈ ಭಯೋತ್ಪಾದಕ ಸಂಘಟನೆ ತನ್ನ ಹಿಂಸಾಕೃತ್ಯಗಳಿಂದ ಪ್ರಪಂಚವನ್ನೆ ನಡುಗಿಸುತ್ತಿದೆ. ಅಲ್ ಖೈದಾ ಎಂದರೆ ಅರೆಬಿಕ್ ಭಾಷೆಯಲ್ಲಿ ನೆಲೆ ಎಂದರ್ಥ. ಸುನ್ನಿ ಪಂಗಡಕ್ಕೆ ಸೇರಿದ ಮೂಲಭೂತವಾದಿಗಳ ಜಿಹಾದಿ ಸಂಘಟನೆ ಇದು. 1989ರ ಆಸುಪಾಸಿನಲ್ಲಿ ಆಫ್ಘಾನಿಸ್ತಾನದಲ್ಲಿ ಸೋವಿಯತ್ ಒಕ್ಕೂಟದ ಅಸ್ತಿತ್ವವನ್ನು ಕೊನೆಗಾಣಿಸಲು ಒಸಾಮ ಬಿನ್ ಲಾಡೆನ್ ಮತ್ತು ಇತರರು ಸೇರಿ ಇದನ್ನು ಕಟ್ಟಿದರು. ಆದರೆ ಮತ್ತಷ್ಟು ಅದರ ಮೂಲ ಹುಡುಕುತ್ತ ಹೋದರೆ ಇದರ ಬೇರು ಇರುವುದು 1978ರಲ್ಲಿ ಸೋವಿಯತ್ ಒಕ್ಕೂಟದ ಪ್ರಾಬಲ್ಯ ಮುರಿಯಲು ಅಮೆರಿಕ ಮತ್ತು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಗಳು ಆಫ್ಘಾನಿಸ್ತಾನದ ಮುಜಾಹಿದ್ದೀನ್ಗಳಿಗೆ ನೆರವು ನೀಡಿದವು. ಇದಕ್ಕೆ ಇಟ್ಟಹೆಸರು ಆಪರೇಷನ್ ಸೈಕ್ಲೋನ್. ಶೀತಲ ಸಮರದ ಆ ಸಂದರ್ಭದಲ್ಲಿ ಅಮೆರಿಕ ಸಿಐಎ ಸ್ವತಃ ಲಾಡೆನ್ಗೆ ಹಣಕಾಸಿನ ನೆರವು ನೀಡಿತ್ತು. ಸೋವಿಯತ್ ಒಕ್ಕೂಟ ತನ್ನ ಪಡೆಗಳನ್ನು ಹಿಂತೆಗೆದುಕೊಂಡಾಗ ಅಲ್ ಖೈದಾದ ಗೆರಿಲ್ಲಾ ಪಡೆಗಳನ್ನು ಕಾಡಿದ್ದು ನಿರುದ್ಯೋಗ. ಆಗ ಜಿಹಾದ್ನತ್ತ ಅಲ್ಖೈದಾ ಗಮನ ಹರಿಸಿತು. ಮುಸ್ಲಿಂ ರಾಷ್ಟ್ರಗಳಲ್ಲಿ ವಿದೇಶಿ ರಾಷ್ಟ್ರಗಳ ಪ್ರಭಾವವನ್ನು ಕೊನೆಗಾಣಿಸುವುದು, ಅಮೆರಿಕ, ಇಸ್ರೇಲ್ ನಂಥ ರಾಷ್ಟ್ರಗಳನ್ನು ನಾಶ ಮಾಡಿ ಜಾಗತಿಕವಾಗಿ ಹೊಸ ಇಸ್ಲಾಂ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತರುವುದು ಅದರ ಈಗಿನ ಗುರಿ. ಅಮೆರಿಕದ ಕೈಗೂಸಾದ ಅಲ್ ಖೈದಾ ಅದರ ವಿರುದ್ಧವೇ ತಿರುಗಿ ಬಿದ್ದಿದ್ದು ಪರಿಸ್ಥಿತಿಯ ವಿಪರ್ಯಾಸ. ಉಗ್ರಗಾಮಿಗಳಿಗೆ ಪ್ರಚೋದನೆ ನೀಡಿದ ರಾಷ್ಟ್ರಗಳು ಮತ್ತು ವ್ಯಕ್ತಿಗಳಿಗೆ ಅದೇ ವ್ಯವಸ್ಥೆ ತಿರುಗೇಟು ನೀಡುತ್ತಿರುವುದು ಐತಿಹಾಸಿಕ ಮತ್ತು ಪ್ರಚಲಿತ ಸತ್ಯ. ಪಾಕಿಸ್ತಾನ ಇದಕ್ಕೊಂದು ಹಾಲಿ ನಿದರ್ಶನ. ತಾಲಿಬಾನ್ಗಳ ಮೂಲಕ ಆಫ್ಘಾನಿಸ್ತಾನವನ್ನು ತನ್ನ ಭದ್ರನೆಲೆ ಮಾಡಿಕೊಂಡಿದ್ದ ಅಲ್ ಖೈದಾ ಈಗ ಎಲ್ಲ ಮುಸ್ಲಿಂ ರಾಷ್ಟ್ರಗಳಲ್ಲಿ ಸಕ್ರಿಯವಾಗಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳು, ಉತ್ತರ ಆಫ್ರಿಕಾದ ರಾಷ್ಟ್ರಗಳಲ್ಲಿ ವಿವಿಧ ಸಂಘಟನೆಗಳ ಹೆಸರಿನಲ್ಲಿ ಅಲ್ ಖೈದಾ ಈಗಾಗಲೇ ಅಸ್ತಿತ್ವವನ್ನು ಹೊಂದಿದೆ. ಧರ್ಮಕ್ಕಾಗಿ ಪ್ರಾಣ ಕೊಡುವ ವ್ಯಕ್ತಿಗಳು ಅಲ್ ಖೈದಾ ಹೋರಾಟಕ್ಕೆ ಜೀವತುಂಬುತ್ತಲೇ ಇದ್ದಾರೆ. ಮೊದಲು ಸಾಮಾನ್ಯ ಜನರು, ನಿರುದ್ಯೋಗಿಗಳು ಹಣಕ್ಕಾಗಿ ಈ ಸಂಘಟನೆ ಸೇರಿಕೊಂಡು ಬಂದೂಕು ಹಿಡಿದರೆ ಈಗ ಸುಶಿಕ್ಷಿತರೂ ಅಲ್ ಖೈದಾ ಜಾಡಿನಲ್ಲಿ ಸಾಗುತ್ತಿರುವುದು ಘೋರ ದುರಂತ 2000 ದ ಸೆಪ್ಟೆಂಬರ್ 11 ದಾಳಿಯ ಬಳಿಕ. ಅಮೆರಿಕ, ಆಫ್ಘಾನಿಸ್ತಾನದ ಮೇಲೆ ನಡೆಸಿದ ಆಕ್ರಮಣದಿಂದಾಗಿ ಛಿದ್ರವಾಗಿದ್ದ ಅಲ್ ಖೈದಾ ಸಂಘಟನೆ ಈಗ ಮತ್ತೆ ಚಿಗುರಿಕೊಂಡಿದೆ. ಬ್ರಿಟನ್ನಿನಲ್ಲಿ ನಡೆದ ವಿಧ್ವಂಸಕ ಕೃತ್ಯಗಳು ಮತ್ತೊಮ್ಮೆ ಅಲ್ ಖೈದಾದ ಪ್ರಬಲ ಅಸ್ತಿತ್ವವನ್ನು ಸಾಬೀತು ಪಡಿಸಿವೆ. ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಗಡಿಯಲ್ಲಿರುವ ರಕ್ಷಣೆಯನ್ನು ದುರುಪಯೋಗ ಪಡಿಸಿಕೊಂಡಿರುವ ಅಲ್ ಖೈದಾ ಶಕ್ತಿಯೊಂದಿಗೆ ಇನ್ನಷ್ಟು ದಾಳಿಗಳಿಗೆ ಸಜ್ಜಾಗುತ್ತಿದೆ ಎಂದು ಅಮೆರಿಕದ ಭಯೋತ್ಪಾದನಾ ನಿಗ್ರಹ ದಳದ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇತ್ತೀಚಿನ ವಿದ್ಯಮಾನಗಳು ಈ ಅವ್ಯಕ್ತ ಭಯವನ್ನು ಸಮರ್ಥಿಸಿವೆ. ವಿಶ್ವ ವಾಣಿಜ್ಯ ಕೇಂದ್ರದ ಎರಡು ಗೋಪುರಗಳ ಮೇಲೆ ನಡೆಸಿದ ಧಾಳಿಯಿಂದ ಅಲ್ ಖೈದಾ ತನ್ನದೇ ಚರಮಗೀತೆ ಹಾಡಿತು ಎಂದು ಭಾವಿಸಲಾಗಿದೆ. ಈ ಧಾಳಿಯಿಂದ ಕಂಗೆಟ್ಟ ಅಮೆರಿಕ ಅಲ್ ಖೈದಾದ ಕೇಂದ್ರ ಸ್ಥಳವೆಂದು ಭಾವಿಸಲಾದ ಆಫ್ಘಾನಿಸ್ತಾನದ ಮೇಲೆ ಆಕ್ರಮಣ ನಡೆಸಿತು. ತಾಲಿಬಾನ್ಗಳನ್ನು ಹಿಮ್ಮೆಟ್ಟಿಸುವಲ್ಲಿ ಅಮೆರಿಕ ಯಶಸ್ವಿಯಾದರೂ ಅವರನ್ನು ಪುರ್ತಿ ಚಿವುಟಿಹಾಕಲು ಸಾಧ್ಯವಾಗಲಿಲ್ಲ. ಅದಕ್ಕಿಂತ ದೊಡ್ಡ ವೈಫಲ್ಯವೆಂದರೆ ಅಲ್ ಖೈದಾದ ಪರಮೋಚ್ಚ ನಾಯಕ ಒಸಾಮ ಬಿನ್ ಲಾಡೆನ್ನನ್ನು ಹಿಡಿಯಲು ಅಥವಾ ಕೊಲ್ಲಲು ಅಮೆರಿಕ ಮಾಡಿದ ಎಲ್ಲ ಸಮರ ತಂತ್ರವೂ ವಿಫಲವಾಯಿತು. ಲಾಡೆನ್ ಸತ್ತ ವದಂತಿಗಳಿಂದಷ್ಟೇ ಅಮೆರಿಕ ತೃಪ್ತಿ ಪಡಬೇಕಾಯಿತು. ಸತತ ಆರು ವರ್ಷಗಳ ಕಾಲ ಆಫ್ಘಾನಿಸ್ತಾನದ ಮೇಲೆ ಬಾಂಬ್ಗಳ ಸುರಿಮಳೆ ಸುರಿಸಿದರೂ ಅಲ್ ಖೈದಾ ಬಗ್ಗಿದಂತೆ ಕಾಣುತ್ತಿಲ್ಲ. ಬದಲಾಗಿ ಹೊಸ ತಂತ್ರಗಳು, ಊಹಿಸಲೂ ಅಸಾಧ್ಯವಾದ ವ್ಯಕ್ತಿಗಳ ನೆರವಿ ನೊಂದಿಗೆ ಅಲ್ ಖೈದಾ ದಾಳಿಗಳಿಗೆ ಮುಂದಾಗಿದೆ. ಅತೃಪ್ತ ಜನಸಾಮಾನ್ಯರಿಗಿಂತ ಮೇಧಾವಿಗಳ ದೊಡ್ಡ ಪಡೆ ಅಲ್ ಖೈದಾದ ಬತ್ತಳಿಕೆಯಲ್ಲಿರುವುದೇ ದೊಡ್ಡ ಆತಂಕದ ವಿಷಯ. ಇರಾಕ್ ಮೇಲೆ ನಡೆದ ಅಮೆರಿಕದ ಧಾಳಿ ಅಲ್ ಖೈದಾಕ್ಕೆ ಪರೋಕ್ಷ ಪರವಾನಗಿ ಬಂದಂತಿದೆ. ಪಾಶ್ಚಿಮಾತ್ಯ ರಾಷ್ಟ್ರಗಳ ಬಗ್ಗೆ ಇಸ್ಲಾಂ ಧರ್ಮದ ಒಂದು ವರ್ಗದಲ್ಲಿರುವ ದ್ವೇಷವನ್ನು ಮೂಲಭೂತವಾದಿ ಧಾರ್ಮಿಕ ಗುರುಗಳು ಚೆನ್ನಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಅಲ್ ಖೈದಾ ದಿನದಿಂದ ದಿನಕ್ಕೆ ಪ್ರಬಲವಾಗುತ್ತಿರುವುದು ಪಾಶ್ಚಿಮಾತ್ಯ ರಾಷ್ಟ್ರಗಳ ತಪ್ಪುಗಳಿಂದಲೇ ಎನ್ನಬಹುದು. ಹಿಂದಿನ ವರ್ಷಗಳಿಗಿಂತ ಅಲ್ ಖೈದಾ ಬಲಗೊಳ್ಳುತ್ತಲೇ ಸಾಗುತ್ತಿದೆ. 2001 ರಿಂದೀಚೆಗೆ ಆ ಸಂಘಟನೆಯ ಉಗ್ರರು ಹೆಚ್ಚು ಸಂಘಟಿತರಾಗಿದ್ದಾರೆ. ಅಮೆರಿಕ ಮತ್ತು ಅದರ ಮಿತ್ರ ಪಕ್ಷಗಳು ತಮ್ಮ ರಕ್ಷಣೆಯನ್ನು ಹೇಗೆ ಬಲಗೊಳಿಸುತ್ತಿವೆಯೋ ಹಾಗೆಯೇ ಅಲ್ ಖೈದಾ ಸಂಘಟನೆಯೂ ರಕ್ಷಣೆಯನ್ನು ಬಿಗಿಗೊಳಿಸುವುದರೊಂದಿಗೆ ತನ್ನ ಬಲವನ್ನೂ ಹೆಚ್ಚಿಸಿಕೊಳ್ಳುತ್ತಿದೆ ಎಂದು ಅಮೆರಿಕದ ಭಯೊತ್ಪಾದನಾ ನಿಗ್ರಹ ತಜ್ಞರ ವರದಿಯಲ್ಲಿ ಹೇಳಲಾಗಿದೆ. ಇತ್ತೀಚೆಗೆ ಅಲ್ ಖೈದಾ ಪರಮೋಚ್ಚ ನಾಯಕ ಒಸಾಮ ಬಿನ್ ಲಾಡೆನ್ ಸಾರ್ವಜನಿಕ ವಾಗಿ ಯಾವುದೇ ಹೇಳಿಕೆ ನೀಡಿಲ್ಲದಿದ್ದರೂ ಅಲ್ ಖೈದಾದ ಯೋಜನೆಯಲ್ಲಿ ಈತ ಪಾತ್ರವಹಿಸುತ್ತಿದ್ದಾನೆ ಎಂದು ಬೇಹುಗಾರಿಕೆ ಸಂಸ್ಥೆಗಳು ಹೇಳಿವೆ. ಇದಕ್ಕಾಗಿ ಅಮೆರಿಕ ಈತನ ತಲೆಯ ಮೌಲ್ಯವನ್ನು ದ್ವಿಗುಣಗೊಳಿಸಿ ಐದು ಕೋಟಿ ಡಾಲರ್ಗೆ ಹೆಚ್ಚಿಸಿದೆ. ಆದರೆ ಅಲ್ಖೈದಾ ತನ್ನ ಆರ್ಥಿಕ ಜೀವನಾಡಿಗಳನ್ನು ಚುರುಕುಗೊಳಿಸಿ, ಜಾಗತಿಕ ಕಾರ್ಯಾಚರಣೆಗೆ ಸಜ್ಜಾಗಿದೆ. ಆಫ್ಘಾನಿಸ್ತಾನ ಮತ್ತು ಇರಾಕ್ಗಳಲ್ಲಿ ದಿನಂಪ್ರತಿ ತನ್ನ ಅಸ್ತಿತ್ವವನ್ನು ಸಾಬೀತು ಪಡಿಸುತ್ತಲೇ ಅಲ್ ಖೈದಾ, ಯುರೋಪ್ ಮತ್ತು ಮುಸ್ಲಿಂ ವಿರೋಧಿ ರಾಷ್ಟ್ರಗಳ ಮೇಲೆರಗಲು ಯೋಜನೆ ರೂಪಿಸುತ್ತಲೇ ಇದೆ. ಗೆರಿಲ್ಲಾ ಸಮರ ತಂತ್ರ ಅಲ್ಖೈದಾದ ದೊಡ್ಡ ಶಕ್ತಿ. ಉಗ್ರರನ್ನು ಎದುರಿಸಲು ಎಷ್ಟೇ ಸಿದ್ಧತೆ ನಡೆಸಿದರೂ ಊಹಿಸಿದ ವಿಧಾನದಲ್ಲಿ ಮೇಲೆರಗುವುದು ಅದರ ತಂತ್ರ. ಹೀಗಾಗಿ ಅಮೆರಿಕದಂಥ ಶಿಸ್ತುಬದ್ಧ ರಾಷ್ಟ್ರವೂ ಅಲ್ ಖೈದಾ ದಾಳಿಯನ್ನು ಎದುರಿಸಲು ವಿಫಲವಾಗುತ್ತಿದೆ. ಏಷ್ಯನ್ ಟೈಮ್ಸ್ ಆನ್ಲೈನ್ ಪತ್ರಿಕೆಯ ವರದಿಯ ಪ್ರಕಾರ ಅಲ್ ಖೈದಾ ಕ್ಷಿಪಣಿ ಮತ್ತು ರಾಕೆಟ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಒಸಾಮ ಬಿನ್ ಲಾಡೆನ್ ಬಳಿ ಪರಮಾಣು ತಂತ್ರಜ್ಞಾನ ಇರುವುದು ಈಗ ರಹಸ್ಯವಾಗಿ ಉಳಿದಿಲ್ಲ. ಪರಮಾಣುಬಾಂಬ್ಗಳನ್ನು ಕೊಂಡೊಯ್ಯಬಲ್ಲ ಕ್ಷಿಪಣಿಗಳನ್ನೂ ಅಲ್ ಖೈದಾ ಹೊಂದಿದೆ ಎಂದರೆ ಅದರ ಶಕ್ತಿಯ ಕಲ್ಪನೆ ಮಾಡಬಹುದು.