ವಿಷಯಕ್ಕೆ ಹೋಗು

ಮುಹಮ್ಮದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಲ್ಲಾಹನ ಪ್ರವಾದಿ ಇಂದ ಪುನರ್ನಿರ್ದೇಶಿತ)
ಇಸ್ಲಾಂ ಧರ್ಮದ ಪ್ರವಾದಿ

ಮುಹಮ್ಮದ್
محمد
ಅರಬ್ಬೀ ಭಾಷೆಯಲ್ಲಿ ಬರೆದ ಮುಹಮ್ಮದ್‌ರ ಹೆಸರು
ವೈಯಕ್ತಿಕ
ಜನನ(೫೭೧-೦೪-೨೨)೨೨ ಏಪ್ರಿಲ್ ೫೭೧
(ಹಿಜರಿ ಪೂರ್ವ 53 ರಬೀಉಲ್ ಅವ್ವಲ್ 12)
ಮರಣ8 ಜೂನ್ 632(632-06-08)
(ಹಿಜರಿ 11 ರಬೀಉಲ್ ಅವ್ವಲ್ 12)
ಧರ್ಮಇಸ್ಲಾಂ
ಸಂಗಾತಿ
ಮಕ್ಕಳು
  • ಕಾಸಿಮ್
  • ಝೈನಬ್
  • ರುಕಯ್ಯ
  • ಉಮ್ಮು ಕುಲ್ಸೂಮ್
  • ಫಾತಿಮ
  • ಅಬ್ದುಲ್ಲಾ
  • ಇಬ್ರಾಹೀಮ್
ಹೆತ್ತವರು

ಮುಹಮ್ಮದ್ ಬಿನ್ ಅಬ್ದುಲ್ಲಾ (ಅರಬ್ಬಿ: محمد بن عبد الله)[lower-alpha ೧][] (c. 22 ಎಪ್ರಿಲ್ 571c. 8 ಜೂನ್ 632)[] — ಅರಬ್ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಮುಂದಾಳು. ಸಾಮಾನ್ಯವಾಗಿ ಇಸ್ಲಾಂ ಧರ್ಮದ ಸ್ಥಾಪಕರೆಂದು ಹೇಳಲಾಗುತ್ತದೆ.[] ಆದರೆ ಮುಸ್ಲಿಮರ ನಂಬಿಕೆಯ ಪ್ರಕಾರ ಅಬ್ರಹಾಂ, ಮೋಶೆ, ಯೇಸು ಮುಂತಾದ ಪ್ರವಾದಿಗಳಂತೆ ದೇವರಿಂದ ಕಳುಹಿಸಲ್ಪಟ್ಟ ಅಂತಿಮ ಪ್ರವಾದಿ. ಎಲ್ಲಾ ಪ್ರವಾದಿಗಳಂತೆ ಇವರೂ ಕೂಡ ಏಕದೇವತಾವಾದ, ಪ್ರವಾದಿತ್ವ ಮತ್ತು ಪರಲೋಕದ ಬಗ್ಗೆ ಬೋಧಿಸಿದ್ದರೂ, ಇತರ ಪ್ರವಾದಿಗಳಿಗೆ ವ್ಯತಿರಿಕ್ತವಾಗಿ ಇವರನ್ನು ಸಂಪೂರ್ಣ ಮಾನವಕುಲಕ್ಕೆ ಪ್ರವಾದಿಯಾಗಿ ಕಳುಹಿಸಲಾಗಿದೆ ಎಂದು ಮುಸಲ್ಮಾನರು ನಂಬುತ್ತಾರೆ. ಇವರ ಹೆಸರನ್ನು ಹೇಳುವಾಗ, ಕೇಳುವಾಗ, ಅಥವಾ ಬರೆಯುವಾಗ ಮುಸಲ್ಮಾನರು "ಸಲ್ಲಲ್ಲಾಹು ಅಲೈಹಿ ವಸಲ್ಲಂ" ಎಂಬ ನುಡಿಗಟ್ಟನ್ನು ಸೇರಿಸುತ್ತಾರೆ. ಈ ನುಡಿಗಟ್ಟನ್ನು ಸೇರಿಸಬೇಕೆಂದು ಕುರ್‌ಆನ್ ಮತ್ತು ಹದೀಸ್‌ನಲ್ಲಿ ನಿರ್ದೇಶನವಿದೆಯೆಂದು ಹೇಳುತ್ತಾರೆ.[]

ಮುಹಮ್ಮದ್ ಕ್ರಿ.ಶ. 570 ರಲ್ಲಿ ಅಥವಾ 571 ರಲ್ಲಿ (ಹಿಜರಿ ಪೂರ್ವ 53, ರಬೀಉಲ್ ಅವ್ವಲ್ 12 ಸೋಮವಾರ)[] ಇಂದಿನ ಸೌದಿ ಅರೇಬಿಯಾದಲ್ಲಿರುವ ಮಕ್ಕಾ ನಗರದಲ್ಲಿ,[] ಕುರೈಷ್ ಬುಡಕಟ್ಟಿಗೆ ಸೇರಿದ ಬನೂ ಹಾಶಿಂ ಗೋತ್ರದಲ್ಲಿ ಜನಿಸಿದರು.[] ತಂದೆ ಅಬ್ದುಲ್ಲಾ ಬಿನ್ ಅಬ್ದುಲ್-ಮುತ್ತಲಿಬ್ ಮತ್ತು ತಾಯಿ ಆಮಿನ ಬಿಂತ್ ವಹಬ್.[] ಮುಹಮ್ಮದ್ ಹುಟ್ಟುವುದಕ್ಕೆ ಮೊದಲೇ ತಂದೆ ಇಹಲೋಕವಾಸ ಮುಗಿಸಿದ್ದರು.[] ಆರು ವರ್ಷವಾಗುವಷ್ಟರಲ್ಲಿ ತಾಯಿ ಕೂಡ ಇಹಲೋಕಕ್ಕೆ ವಿದಾಯಕೋರಿದರು.[] ತಬ್ಬಲಿ ಮುಹಮ್ಮದ್‌ರನ್ನು ಅಜ್ಜ ಅಬ್ದುಲ್ ಮುತ್ತಲಿಬ್ ಸಾಕಿದರು. ಮುಹಮ್ಮದ್‌ಗೆ ಎಂಟು ವರ್ಷವಾದಾಗ ಅಜ್ಜ ಕೂಡ ದೈವಾಧೀನರಾದರು.[] ಚಿಕ್ಕ ಹುಡುಗ ಮುಹಮ್ಮದ್‌ರ ಪಾಲನೆ-ಪೋಷಣೆಯ ಜವಾಬ್ದಾರಿಯನ್ನು ಅವರ ದೊಡ್ಡಪ್ಪ ಅಬೂ ತಾಲಿಬ್ ವಹಿಸಿಕೊಂಡರು.[][]

ಮುಹಮ್ಮದ್ ಚಿಕ್ಕಂದಿನಲ್ಲಿ ಕುರಿ ಮೇಯಿಸುವ ವೃತ್ತಿ ಮಾಡುತ್ತಿದ್ದರು. ನಂತರ ಅವರು ವ್ಯಾಪಾರ ಮಾಡಲು ಶುರು ಮಾಡಿದರು. ಮುಸಲ್ಮಾನರ ನಂಬಿಕೆ ಪ್ರಕಾರ 40ನೇ ವಯಸ್ಸಿನಲ್ಲಿ ಅವರಿಗೆ ದೇವರಿಂದ ದಿವ್ಯವಾಣಿ (ವಹೀ) ಅವತೀರ್ಣವಾಯಿತು. ಅವರು ಪ್ರವಾದಿಯಾಗಿ ಆರಿಸಲ್ಪಟ್ಟರು.[] ನಂತರ ಅವರು ಮಕ್ಕಾದಲ್ಲಿ ಹದಿಮೂರು ವರ್ಷ ಧರ್ಮಪ್ರಚಾರ ಮಾಡಿದರು. ಈ ಅವಧಿಯಲ್ಲಿ ಅವರು ಮಕ್ಕಾದ ಜನರಿಂದ ನಿರಂತರ ಕಿರುಕುಳ ಮತ್ತು ಹಿಂಸೆಯನ್ನು ಸಹಿಸಬೇಕಾಯಿತು. ಅವರ ಕುಟುಂಬಕ್ಕೆ ಮೂರು ವರ್ಷಗಳ ಕಾಲ ಸಾಮೂಹಿಕ ಬಹಿಷ್ಕಾರ ಹಾಕಲಾಯಿತು.[೧೦] ಹಿಂಸೆ ತೀವ್ರ ಸ್ವರೂಪ ಪಡೆದು ಜನರು ಅವರನ್ನು ಕೊಲ್ಲುವ ಹಂತಕ್ಕೆ ಬಂದಾಗ, ಕ್ರಿ. ಶ. 622 ರಲ್ಲಿ ತಮ್ಮ 53ನೇ ವಯಸ್ಸಿನಲ್ಲಿ ಅವರು ಮಕ್ಕಾದಿಂದ ಸುಮಾರು 400 ಮೈಲು ಉತ್ತರದಲ್ಲಿರುವ ಮದೀನಾ ನಗರಕ್ಕೆ ವಲಸೆ ಹೋದರು.[೧೧]

ಮುಹಮ್ಮದ್‌ ತಮ್ಮ ಧರ್ಮಪ್ರಚಾರವನ್ನು ಮದೀನಾದಲ್ಲಿ ಮುಂದುವರಿಸಿದರು. ಅಲ್ಲಿನ ಜನರು ಇಸ್ಲಾಂ ಧರ್ಮದಿಂದ ಆಕರ್ಷಿತರಾದರು. ಮುಹಮ್ಮದ್ ಮದೀನಾದಲ್ಲಿ ಇಸ್ಲಾಮೀ ನಾಗರಿಕತೆಗೆ ಅಡಿಪಾಯ ಹಾಕಿದರು. ಒಂದು ಬಲಿಷ್ಠ ಸಾಮ್ರಾಜ್ಯವನ್ನು ಕಟ್ಟಿದರು. ಕೆಲವೇ ವರ್ಷಗಳಲ್ಲಿ ಸಂಪೂರ್ಣ ಅರೇಬಿಯನ್ ಪರ್ಯಾಯ ದ್ವೀಪವು ಅವರ ಅಧೀನಕ್ಕೆ ಬಂತು. ಕ್ರಿ. ಶ. 632 ರಲ್ಲಿ (ಹಿಜರಿ 11 ರಬೀಉಲ್ ಅವ್ವಲ್ 12 ಸೋಮವಾರ) ತಮ್ಮ 63ನೇ ವಯಸ್ಸಿನಲ್ಲಿ ಅವರು ಇಹಲೋಕಕ್ಕೆ ವಿದಾಯಕೋರಿದರು.[೧೨]

ವಂಶಾವಳಿ

[ಬದಲಾಯಿಸಿ]

ಮುಹಮ್ಮದ್‌ರ ವಂಶಾವಳಿಯನ್ನು ಇತಿಹಾಸಕಾರರು ಮೂರು ಪ್ರಮುಖ ವಿಭಾಗಗಳಲ್ಲಿ ವಿಂಗಡಿಸಿದ್ದಾರೆ:[೧೩] ಒಂದು: ಮುಹಮ್ಮದ್‌ರಿಂದ ಅದ್ನಾನ್ ವರೆಗಿನ ವಂಶವಾಳಿ. ಇದನ್ನು ಇತಿಹಾಸಕಾರರು ಮತ್ತು ವಂಶಾವಳಿ ತಜ್ಞರು ದೃಢೀಕರಿಸುತ್ತಾರೆ. ಎರಡು: ಅದ್ನಾನ್‌ರಿಂದ ಅಬ್ರಹಾಂ ವರೆಗಿನ ವಂಶಾವಳಿ. ಮುಹಮ್ಮದ್‌ರಿಂದ ಅಬ್ರಹಾಂ ವರೆಗೆ ಸುಮಾರು 60 ತಲೆಮಾರುಗಳಿವೆಯೆಂದು ಹೇಳಲಾಗುತ್ತದೆ.[೧೪] ಇದರ ಬಗ್ಗೆ ಇತಿಹಾಸಕಾರರಲ್ಲಿ ವಿವಾದಗಳು ಮತ್ತು ಗೊಂದಲಗಳಿವೆ. ಮೂರು: ಅಬ್ರಹಾಂರಿಂದ ಆದಮ್ ವರೆಗಿನ ವಂಶಾವಳಿ. ಇದರ ಬಗ್ಗೆಯೂ ಗೊಂದಲಗಳಿವೆ.[೧೩]

ಇತಿಹಾಸಕಾರರು ದೃಢೀಕರಿಸಿದ ಅದ್ನಾನ್ ವರೆಗಿನ ಮುಹಮ್ಮದ್‌ರ ವಂಶಾವಳಿ ಹೀಗಿದೆ:

ಅದ್ನಾನ್
ಮಅದ್ದ್
ನಿಝಾರ್
ಮುದರ್
ಇಲ್ಯಾಸ್
ಮುದ್ರಿಕ
ಖುಝೈಮ
ಕಿನಾನ
ನದ್ರ್
ಮಾಲಿಕ್
ಫಿಹ್ರ್ (ಕುರೈಷ್)
ಗಾಲಿಬ್
ಲುಅಯ್
ಕಅಬ್
ಮುರ್‍ರ
ಕಿಲಾಬ್
ಕುಸಯ್
ಅಬ್ದ್ ಮನಾಫ್
ಹಾಶಿಂ
ಅಬ್ದುಲ್ ಮುತ್ತಲಿಬ್
ಅಬ್ದುಲ್ಲಾ
ಮುಹಮ್ಮದ್

ಮುಹಮ್ಮದ್‌ರ ತಂದೆಯ ಹೆಸರು ಅಬ್ದುಲ್ಲಾ. ಇವರು ಅಬ್ದುಲ್ ಮುತ್ತಲಿಬ್‌ರ ಹತ್ತು ಮಕ್ಕಳಲ್ಲಿ ಒಬ್ಬರು. ಮುಹಮ್ಮದ್‌ರ ತಾಯಿಯ ಹೆಸರು ಆಮಿನ. ಇವರು ಬನೂ ಝುಹ್ರ ಗೋತ್ರದ ಮುಖಂಡ ವಹಬ್ ಬಿನ್ ಅಬ್ದು ಮನಾಫ್‌ರ ಪುತ್ರಿ.[೧೫] ಮುಹಮ್ಮದ್ ಕುರೈಷ್ ಬುಡಕಟ್ಟಿನ ಬನೂ ಹಾಶಿಂ ಗೋತ್ರದವರು.[೧೬] ಇವರ ಅಜ್ಜ ಅಬ್ದುಲ್ ಮುತ್ತಲಿಬ್ ಬನೂ ಹಾಶಿಂ ಗೋತ್ರದ ಮುಖಂಡರಾಗಿದ್ದರು. ಬನೂ ಹಾಶಿಂ ಎಂದರೆ ಅಬ್ದುಲ್ ಮುತ್ತಲಿಬ್‌ರ ತಂದೆ ಹಾಶಿಂರ ಸಂತತಿಗಳು.[೧೭]

ಜನನ ಮತ್ತು ಬಾಲ್ಯ

[ಬದಲಾಯಿಸಿ]

ಮುಹಮ್ಮದ್ ಯಾವಾಗ ಹುಟ್ಟಿದರು ಎಂಬ ಬಗ್ಗೆ ನಿಖರ ದಾಖಲೆಗಳಿಲ್ಲ.[೧೬] ಹೆಚ್ಚಿನ ಅರಬ್ ಇತಿಹಾಸಕಾರರ ಪ್ರಕಾರ ಅವರು ಆನೆಯ ವರ್ಷದಲ್ಲಿ ಹುಟ್ಟಿದರು. ಆನೆಯ ವರ್ಷ ಎಂದರೆ ಯಮನ್ ದೊರೆ ಅಬ್ರಹ ಆನೆಯ ಸೇನೆಯೊಂದಿಗೆ ಕಅಬಾವನ್ನು ಧ್ವಂಸ ಮಾಡಲು ಬಂದ ವರ್ಷ, ಅಂದರೆ ಕ್ರಿ.ಶ. 570.[೧೮] ಮುಹಮ್ಮದ್ ಹುಟ್ಟಿದ ತಿಂಗಳ ಬಗ್ಗೆ ಇತಿಹಾಸಕಾರರಿಗೆ ಗೊಂದಲಗಳಿವೆ. ಹೆಚ್ಚಿನವರ ಅಭಿಪ್ರಾಯ ಪ್ರಕಾರ ಅದು ಹಿಜರಿ ಕ್ಯಾಲೆಂಡರ್‌ನ ಮೂರನೇ ತಿಂಗಳು ರಬೀಉಲ್ ಅವ್ವಲ್. ಮುಹಮ್ಮದ್ ಯಾವ ದಿನ ಹುಟ್ಟಿದರು ಎಂಬ ಬಗ್ಗೆಯೂ ಗೊಂದಲಗಳಿವೆ. ಹೆಚ್ಚಿನವರು ಹೇಳುವುದು ರಬೀಉಲ್ ಅವ್ವಲ್ 12.[೧೮] ರಬೀಉಲ್ ಅವ್ವಲ್ 9 ಎಂದು ಹೇಳಿದವರೂ ಇದ್ದಾರೆ.[] ಭಾರತೀಯ ಇಸ್ಲಾಮಿಕ್ ವಿದ್ವಾಂಸ ಮುಹಮ್ಮದ್ ಸುಲೈಮಾನ್ ಮನ್ಸೂರ್‌ಪುರಿ ಮತ್ತು ಖಗೋಳಶಾಸ್ತ್ರಜ್ಞ ಮಹ್ಮೂದ್ ಪಾಶಾ ಹೇಳುವ ಪ್ರಕಾರ ಮುಹಮ್ಮದ್ ಕ್ರಿ.ಶ. 571 ಏಪ್ರಿಲ್ 20[೧೫] ಅಥವಾ 22 ರಂದು ಹುಟ್ಟಿದರು.[೧೯] ಆದರೆ ಆಧಾರ ಪುರಾವೆಗಳನ್ನು ತೂಗಿ ನೋಡಿದಾಗ ಮುಹಮ್ಮದ್ ಹುಟ್ಟಿದ್ದು 570 ಆಗಸ್ಟ್ ತಿಂಗಳಲ್ಲಿ ಎಂದು ಕಾಸಿನ್ ಡಿ ಪರ್ಸಿವಲ್ ಅರಬ್ಬರ ಬಗ್ಗೆ ಬರೆದ ಪುಸ್ತಕದಲ್ಲಿ ವಿವರಿಸಿದ್ದಾರೆ.[೧೮] ಮುಹಮ್ಮದ್ ಹುಟ್ಟಿದ್ದು ಸೋಮವಾರ ಎಂಬ ವಿಷಯದಲ್ಲಿ ಗೊಂದಲವಿಲ್ಲ. ಇದನ್ನು ಸ್ವತಃ ಅವರೇ ದೃಢೀಕರಿಸಿದ್ದಾರೆ.[೨೦]

ಮುಹಮ್ಮದ್ ಹುಟ್ಟುವುದಕ್ಕೆ ಎರಡು ತಿಂಗಳು ಮೊದಲು ಅವರ ತಂದೆ ಅಬ್ದುಲ್ಲಾ ನಿಧನರಾದರು.[೨೧] ಕೆಲವು ಇತಿಹಾಸಕಾರರು ಎರಡು ತಿಂಗಳುಗಳ ನಂತರವೆಂದು ಹೇಳಿದ್ದಾರೆ.[೨೨] ಮುಹಮ್ಮದ್‌ರಿಗೆ "ಮುಹಮ್ಮದ್" ಎಂದು ನಾಮಕರಣ ಮಾಡಿದ್ದು ಅವರ ಅಜ್ಜ ಅಬ್ದುಲ್ ಮುತ್ತಲಿಬ್ ಎಂದು ಹೇಳಲಾಗುತ್ತದೆ.[][೧೫] ಮುಹಮ್ಮದ್ ಎಂದರೆ ಪ್ರಶಂಸಾರ್ಹ ವ್ಯಕ್ತಿ, ಸ್ತುತಿ ಪ್ರಶಂಸೆಗೆ ಪಾತ್ರನಾದ ವ್ಯಕ್ತಿ ಎಂಬ ಅರ್ಥಗಳಿವೆ. ಅರಬ್ ಸಂಪ್ರದಾಯದಂತೆ ಹಿರಿಯರ ಹೆಸರನ್ನಿಡುವುದಕ್ಕೆ ಬದಲು ಈ ಹೆಸರನ್ನಿಟ್ಟದ್ದೇಕೆ ಎಂದು ಅಬ್ದುಲ್ ಮುತ್ತಲಿಬ್‌ರೊಂದಿಗೆ ವಿಚಾರಿಸಲಾದಾಗ, "ನನ್ನ ಮೊಮ್ಮಗನನ್ನು ಆಕಾಶದಲ್ಲಿ ದೇವರು ಮತ್ತು ಭೂಮಿಯಲ್ಲಿ ಜನರು ಪ್ರಶಂಸಿಸುವಂತಾಗಬೇಕು" ಎಂದು ಅವರು ಉತ್ತರಿಸಿದರಂತೆ.[೧೮] ಈ ಹೆಸರು ಅರಬ್ಬರಲ್ಲಿ ರೂಢಿಯಲ್ಲಿಲ್ಲದಿದ್ದರೂ ಇಸ್ಲಾಮೀ ಪೂರ್ವ ಕಾಲದಲ್ಲಿ ಈ ಹೆಸರನ್ನು ಹೊಂದಿದ್ದ ಕೆಲವರು ಇದ್ದರೆಂದು ಇಬ್ನ್ ಸಅದ್ ಹೇಳಿದ್ದಾರೆ.[೧೬]

ಮಕ್ಕಾದಲ್ಲಿ ಮುಹಮ್ಮದ್ ಹುಟ್ಟಿದರೆಂದು ನಂಬಲಾಗುವ ಸ್ಥಳ. ಈಗ ಇಲ್ಲಿ ಗ್ರಂಥಾಲಯ ಅಸ್ತಿತ್ವದಲ್ಲಿದೆ.

ಮುಹಮ್ಮದ್‌ರ ತಾಯಿ ಆಮಿನ ಒಂದು ವಾರದ ಕಾಲ ಮಗುವಿಗೆ ಎದೆಹಾಲುಣಿಸಿ,[೨೩] ನಂತರ ಮಗುವಿಗೆ ಎದೆಹಾಲುಣಿಸುವ ಜವಾಬ್ದಾರಿಯನ್ನು ಸುವೈಬ ಎಂಬ ಮಹಿಳೆಗೆ ವಹಿಸಿಕೊಟ್ಟರು.[೧೫] ಈಕೆ ಮುಹಮ್ಮದ್‌ರ ದೊಡ್ಡಪ್ಪ ಅಬೂಲಹಬ್‌ರ ದಾಸಿಯಾಗಿದ್ದು, ಮುಹಮ್ಮದ್‌ರ ಜನನ ವಾರ್ತೆಯನ್ನು ಕೇಳಿದ ತಕ್ಷಣ ಅಬೂಲಹಬ್ ಆಕೆಯನ್ನು ದಾಸ್ಯ ವಿಮೋಚನೆಗೊಳಿಸಿದ್ದರು.[೨೩] ಅರಬ್ ಸಂಪ್ರದಾಯದಂತೆ ನಗರವಾಸಿಗಳಾದ ಸ್ಥಿತಿವಂತರು ತಮ್ಮ ಮಕ್ಕಳನ್ನು ಅವರ ಸಮಗ್ರ ಬೆಳವಣಿಗೆಗಾಗಿ ಮರುಭೂಮಿಯ ದಾದಿಗಳಿಗೆ ಒಪ್ಪಿಸುತ್ತಿದ್ದರು.[೧೫] ಮಕ್ಕಳು ಮರುಭೂಮಿಯ ಮುಕ್ತ ಮತ್ತು ಆರೋಗ್ಯಕರ ವಾತಾವರಣದಲ್ಲಿ ಬೆಳೆದು, ಸುದೃಢ ದೇಹ, ಶುದ್ಧ ಭಾಷೆ ಮತ್ತು ಉತ್ತಮ ಸಂಸ್ಕಾರವನ್ನು ಕಲಿಯಬೇಕೆಂಬುದೇ ಇದರ ಉದ್ದೇಶ.[] ಹೀಗೆ ಬನೂ ಸಅದ್ ಬಿನ್ ಬಕರ್ ಗೋತ್ರಕ್ಕೆ ಸೇರಿದ ಕೆಲವು ಮಹಿಳೆಯರು ಶಿಶುಗಳನ್ನು ಅರಸುತ್ತಾ ಮಕ್ಕಾ ನಗರಕ್ಕೆ ಬಂದರು. ಅನಾಥ ಮುಹಮ್ಮದ್‌ರನ್ನು ಸ್ವೀಕರಿಸಲು ಅವರಲ್ಲಿ ಯಾರೂ ಮುಂದಾಗಲಿಲ್ಲ. ಕೊನೆಗೆ ಅವರ ಪೈಕಿ ಹಲೀಮ ಬಿಂತ್ ಅಬೂ ದುಐಬ್ ಎಂಬ ಮಹಿಳೆಗೆ ಯಾವುದೇ ಶಿಶುಗಳು ಸಿಗದೇ ಇದ್ದಾಗ ಅನಿವಾರ್ಯವಾಗಿ ಮುಹಮ್ಮದ್‌ರನ್ನು ಪಡೆದುಕೊಂಡಳು.[೧೫] ಈಕೆಯ ಗಂಡನ ಹೆಸರು ಹಾರಿಸ್ ಬಿನ್ ಅಬ್ದುಲ್ ಉಝ್ಝ.[೨೪]

ಮುಹಮ್ಮದ್‌ರನ್ನು ಪಡೆದ ನಂತರ ಹಲೀಮರ ಅದೃಷ್ಟ ಖುಲಾಯಿಸಿ ಅವರ ಸಂಪತ್ತಿನಲ್ಲಿ ಅಭಿವೃದ್ಧಿಯುಂಟಾಯಿತು[೨೫] ಮತ್ತು ಇದರಿಂದಾಗಿ ಅವರು ಆಮಿನರನ್ನು ಒತ್ತಾಯಿಸಿ ಮಗುವನ್ನು ತನ್ನ ಬಳಿಯೇ ಇಟ್ಟುಕೊಂಡರು ಎನ್ನಲಾಗುತ್ತದೆ. ಮುಹಮ್ಮದ್‌ರಿಗೆ ನಾಲ್ಕು ವರ್ಷವಾದಾಗ, ದೇವದೂತ ಗೇಬ್ರಿಯಲ್ ಅವರ ಎದೆಯನ್ನು ಸೀಳಿ ಹೃದಯವನ್ನು ಹೊರತೆಗೆದು ತೊಳೆದು ಶುಚೀಕರಿಸಿ ಪುನಸ್ಥಾಪಿಸಿದ ಘಟನೆ ಜನಜನಿತವಾಗಿದೆ. ಈ ಘಟನೆಯು ಮುಸಲ್ಮಾನರು ಅತ್ಯಂತ ಅಧಿಕೃತವೆಂದು ಪರಿಗಣಿಸುವ ಸಹೀಹ್ ಮುಸ್ಲಿಂ[೨೬] ಪುಸ್ತಕದಲ್ಲಿದೆ.

ಈ ಆಘಾತಕಾರಿ ಘಟನೆ ಜರುಗಿದ ನಂತರ ಹಲೀಮ ಭಯದಿಂದ ಮುಹಮ್ಮದ್‌ರನ್ನು ಅವರ ತಾಯಿ ಮತ್ತು ಅಜ್ಜನಿಗೆ ಮರಳಿ ಒಪ್ಪಿಸಿದರು ಎನ್ನಲಾಗುತ್ತದೆ.[೨೭][೨೮]

ಮುಹಮ್ಮದ್‌ರಿಗೆ ಆರು ವರ್ಷ ಪ್ರಾಯವಾದಾಗ, ಅವರ ತಾಯಿ ಆಮಿನ ಬನೂ ನಜ್ಜಾರ್ ಗೋತ್ರದ ತಮ್ಮ ಮಾವಂದಿರನ್ನು ಭೇಟಿಯಾಗಲು ಹೋಗಿದ್ದಾಗ, ಜೊತೆಗೆ ಮುಹಮ್ಮದ್ ಕೂಡ ಇದ್ದರು. ಮರಳಿ ಬರುವಾಗ ಅಬ್ವಾ ಎಂಬ ಸ್ಥಳದಲ್ಲಿ ಆಮಿನ ಕೊನೆಯುಸಿರೆಳೆದರು.[೨೯] ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡು ಅಕ್ಷರಶಃ ತಬ್ಬಲಿಯಾದ ಮುಹಮ್ಮದ್‌ರನ್ನು ಅವರ ಅಜ್ಜ ಅಬ್ದುಲ್ ಮುತ್ತಲಿಬ್ ಸಾಕಿದರು.[೩೦] ಆದರೆ ಅವರಿಗೆ ಎಂಟು ವರ್ಷ ಪ್ರಾಯವಾಗುವಷ್ಟರಲ್ಲಿ, ಅಜ್ಜ ಕೂಡ ಇಹಲೋಕಕ್ಕೆ ವಿದಾಯ ಹೇಳಿದರು.[೨೯] ನಂತರ ಮುಹಮ್ಮದ್‌ರನ್ನು ಸಾಕಲು ಮುಂದೆ ಬಂದದ್ದು ಅವರ ದೊಡ್ಡಪ್ಪ ಅಬೂತಾಲಿಬ್.[][೩೧]

ಮುಹಮ್ಮದ್ ಅಬೂತಾಲಿಬರ ಮನೆಯಲ್ಲಿ ಬೆಳೆಯುತ್ತಿದ್ದರು. ಅಲ್ಲಿ ಬಡತನ ತಾಂಡವವಾಡುತ್ತಿತ್ತು. ಅಬೂತಾಲಿಬರಿಗೆ ತಮ್ಮದೇ ಮಕ್ಕಳನ್ನು ಸಾಕಲಾಗುತ್ತಿರಲಿಲ್ಲ. ಆದ್ದರಿಂದ ಮುಹಮ್ಮದ್ ಮಕ್ಕಾದ ಸರದಾರರ ಕುರಿಮಂದೆಗಳನ್ನು ಬೆಟ್ಟ ಗುಡ್ಡಗಳಲ್ಲಿ ಮೇಯಿಸಿ[೩೨] ಅದರಿಂದ ಬರುತ್ತಿದ್ದ ಅಲ್ಪಸ್ವಲ್ಪ ಹಣವನ್ನು ದೊಡ್ಡಪ್ಪನಿಗೆ ನೀಡಿ ಸಹಾಯ ಮಾಡುತ್ತಿದ್ದರು.[೩೩]

ಸಿರಿಯಾದ ಬುಸ್ರಾದಲ್ಲಿರುವ ಬಹೀರಾ ಸನ್ಯಾಸಿಯ ಮಠ

ಅಬೂತಾಲಿಬ್ ಮುಹಮ್ಮದ್‌ರನ್ನು ಬಹಳ ಪ್ರೀತಿಸುತ್ತಿದ್ದರು. ಒಂದು ಕ್ಷಣ ಮುಹಮ್ಮದ್‌ರನ್ನು ಕಾಣದಿದ್ದರೆ ಅವರು ಆತಂಕಪಡುತ್ತಿದ್ದರು.[೩೩] ಆದ್ದರಿಂದ ಒಮ್ಮೆ ಅವರು ವ್ಯಾಪಾರಕ್ಕಾಗಿ ಮಕ್ಕಾದ ವರ್ತಕರೊಂದಿಗೆ ಸಿರಿಯಾಗೆ ಹೊರಟಾಗ ಮುಹಮ್ಮದ್‌ರನ್ನೂ ಜೊತೆಯಲ್ಲಿ ಸೇರಿಸಿಕೊಂಡರು.[] ಆಗ ಮುಹಮ್ಮದ್‌ರಿಗೆ ಹೆಚ್ಚೆಂದರೆ 10-12 ವರ್ಷ ಪ್ರಾಯ.[೩೩] ಈ ಯಾತ್ರೆಯಲ್ಲಿ ಜರುಗಿದ ಒಂದು ಅದ್ಭುತ ಘಟನೆಯನ್ನು ಬಗ್ಗೆ ಅನೇಕ ಚರಿತ್ರೆಕಾರರು ಉಲ್ಲೇಖಿಸಿದ್ದಾರೆ.[೩೪] ಅದೇನೆಂದರೆ, ವರ್ತಕ ತಂಡವು ಸಿರಿಯಾದ ಬುಸ್ರಾ ಎಂಬ ಊರಿಗೆ ತಲುಪಿದಾಗ, ವಿಶ್ರಾಂತಿಗಾಗಿ ಒಂದು ಮರದ ಬುಡದಲ್ಲಿ ಇಳಿದರು. ಅಲ್ಲೇ ಹತ್ತಿರದ ಒಂದು ಮಠದಲ್ಲಿ ಬಹೀರಾ ಎಂಬ ಕ್ರಿಶ್ಚಿಯನ್ ಸನ್ಯಾಸಿಯಿದ್ದರು. ಅವರು ಮುಹಮ್ಮದ್‌ರನ್ನು ಕಂಡು ಕುತೂಹಲದಿಂದ ವೀಕ್ಷಿಸಿದರು. ಬೈಬಲ್ ಬಗ್ಗೆ ಆಳಜ್ಞಾನವನ್ನು ಹೊಂದಿದ್ದ ಬಹೀರಾ ಅಬೂತಾಲಿಬ್ ಮತ್ತು ಇತರ ವರ್ತಕರನ್ನು ಮಠಕ್ಕೆ ಕರೆಸಿ, ನೀವು ಈ ಹುಡುಗನನ್ನು ಈಗಿಂದೀಗಲೇ ನಿಮ್ಮ ಊರಿಗೆ ವಾಪಸು ಕರೆದೊಯ್ಯಿರಿ. ಇವರು ಮುಂದೆ ಪ್ರವಾದಿಯಾಗುವ ಎಲ್ಲಾ ಲಕ್ಷಣ ಸ್ಪಷ್ಟವಾಗಿ ಗೋಚರಿಸುತ್ತಿದೆ. ನೀವು ಸಿರಿಯಾಗೆ ಹೋದರೆ ಅಲ್ಲಿ ಈ ಹುಡುಗನಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂದರು.[೩೫] ಇದರಿಂದ ಭಯಭೀತರಾದ ಅಬೂತಾಲಿಬ್ ತಕ್ಷಣ ಕೆಲವು ಜನರೊಡನೆ ಮುಹಮ್ಮದ್‌ರನ್ನು ಊರಿಗೆ ಕಳುಹಿಸಿಕೊಟ್ಟರು.[೩೬]

ವಿವಾಹ

[ಬದಲಾಯಿಸಿ]

ಖದೀಜ ಬಿಂತ್ ಖುವೈಲಿದ್ ಮಕ್ಕಾದ ದೊಡ್ಡ ವರ್ತಕಿಯಾಗಿದ್ದರು. ಅವರು ತಮ್ಮ ಪರವಾಗಿ ವ್ಯಾಪಾರ ಮಾಡಲು ಜನರನ್ನು ನೇಮಿಸಿ ವ್ಯಾಪಾರದಲ್ಲಿ ಸಿಗುವ ಲಾಭದ ಒಂದಂಶವನ್ನು ಅವರಿಗೆ ನೀಡುತ್ತಿದ್ದರು.[೩೭] ಅವರು ಎರಡು ಬಾರಿ ವಿವಾಹವಾಗಿದ್ದರೂ ಸಹ ವಿಧವೆಯಾಗಿದ್ದರು.[೩೮] ಖದೀಜರಿಗೆ ಮುಹಮ್ಮದ್‌ರ ಪ್ರಾಮಾಣಿಕತೆ, ಮುಗ್ಧತೆ ಮತ್ತು ವ್ಯಾಪಾರದಲ್ಲಿರುವ ಚಾಣಾಕ್ಷತೆಯ ಬಗ್ಗೆ ತಿಳಿದಾಗ, ಅವರನ್ನು ತನ್ನೊಂದಿಗೆ ವ್ಯಾಪಾರ ಮಾಡಲು ಕರೆದರು. ಹೆಚ್ಚಿನ ಆದಾಯ ನೀಡುವ ಭರವಸೆಯಿತ್ತರು. ಮುಹಮ್ಮದ್ ಒಪ್ಪಿಕೊಂಡರು. ಖದೀಜ ಮುಹಮ್ಮದ್‌ರನ್ನು ಮೈಸರ ಎಂಬ ಗುಲಾಮನ ಜೊತೆಗೆ ಸರಕು ಮಾರಲು ಸಿರಿಯಾಗೆ ಕಳುಹಿಸಿದರು.[೩೯] ಮೈಸರ ಮುಹಮ್ಮದ್‌ರನ್ನು ಸೂಕ್ಷ್ಮವಾಗಿ ವೀಕ್ಷಿಸುತ್ತಿದ್ದರು. ಮುಹಮ್ಮದ್‌ರಲ್ಲಿ ಅವರು ಅನೇಕ ಉತ್ತಮ ಗುಣಗಳನ್ನು ಕಂಡರು.[೩೯] ವ್ಯಾಪಾರ ಮುಗಿದು ಹಿಂದಿರುಗಿದಾಗ, ಇತರ ವರ್ತಕರಿಗಿಂತಲೂ ಮುಹಮ್ಮದ್ ತಂದ ಲಾಭವು ಹಲವು ಪಟ್ಟು ಹೆಚ್ಚಾಗಿತ್ತು.[೪೦]

ಮೈಸರ ಮುಹಮ್ಮದ್‌ರ ಉತ್ತಮ ಗುಣಗಳ ಬಗ್ಗೆ ತಿಳಿಸಿದಾಗ, ಖದೀಜರಿಗೆ ಮುಹಮ್ಮದ್‌ರಲ್ಲಿ ಅನುರಕ್ತರಾದರು.[೩೯] ತನ್ನ ಗೆಳತಿಯ ಮೂಲಕ ತನ್ನ ಆಸೆಯನ್ನು ಮುಹಮ್ಮದ್‌ಗೆ ತಿಳಿಸಿದಾಗ, ಮುಹಮ್ಮದ್ ಒಪ್ಪಿಕೊಂಡರು.[೩೭] ಖದೀಜರ ಚಿಕ್ಕಪ್ಪ ಅಮ್ರ್ ಬಿನ್ ಅಸದ್ ವಿವಾಹ ನೆರವೇರಿಸಿಕೊಟ್ಟರು. ಆಗ ಮುಹಮ್ಮದ್‌ರಿಗೆ 25 ವರ್ಷ ಪ್ರಾಯ ಮತ್ತು ಖದೀಜರಿಗೆ 40 ವರ್ಷ ಪ್ರಾಯ. 65ನೇ ವಯಸ್ಸಿನಲ್ಲಿ ಖದೀಜ ಮರಣಹೊಂದುವ ತನಕ ಈ ದಾಂಪತ್ಯ ಜೀವನ ಮುಂದುವರಿದಿತ್ತು. ಅಲ್ಲಿಯ ತನಕ ಮುಹಮ್ಮದ್ ಬೇರೆ ವಿವಾಹವಾಗಿರಲಿಲ್ಲ.[೩೭] ಈ ದಾಂಪತ್ಯದಲ್ಲಿ ಮುಹಮ್ಮದ್‌ಗೆ ಆರು ಮಕ್ಕಳು ಹುಟ್ಟಿದರು. ನಾಲ್ಕು ಹೆಣ್ಣು ಮತ್ತು ಎರಡು ಗಂಡು. ಕಾಸಿಂ, ರುಕಯ್ಯ, ಝೈನಬ್, ಉಮ್ಮು ಕುಲ್ಸೂಂ, ಫಾತಿಮ, ಅಬ್ದುಲ್ಲಾ. ಗಂಡು ಮಕ್ಕಳೆಲ್ಲರೂ ಎಳೆ ವಯಸ್ಸಿನಲ್ಲೇ ಅಸುನೀಗಿದರು. ಹೆಣ್ಣು ಮಕ್ಕಳಲ್ಲಿ ಫಾತಿಮ ಹೊರತು ಉಳಿದವರೆಲ್ಲರೂ ಮುಹಮ್ಮದ್ ಬದುಕಿರುವಾಗಲೇ ನಿಧನರಾದರು.[೩೭]

ಪ್ರಪ್ರಥಮ ದೇವವಾಣಿ

[ಬದಲಾಯಿಸಿ]
ಮಕ್ಕಾದಲ್ಲಿರುವ ಜಬಲ್ ನೂರ್ ಪರ್ವತ

ಮುಹಮ್ಮದ್‌ರಿಗೆ 40ರ ಪ್ರಾಯವಾಗುವ ಹೊತ್ತಿಗೆ[೪೧] ಅವರಿಗೆ ಏಕಾಂತವಾಸವು ಇಷ್ಟವಾಗತೊಡಗಿತು. ಅವರು ಬುತ್ತಿ ಕಟ್ಟಿಕೊಂಡು ಮಕ್ಕಾದ ಸಮೀಪದ ಜಬಲ್ ನೂರ್ ಪರ್ವತದಲ್ಲಿರುವ ಹಿರಾ ಗುಹೆಗೆ ಹೋಗಿ ಧ್ಯಾನ ನಿರತರಾಗುತ್ತಿದ್ದರು.[೪೨] ಕೆಲವೊಮ್ಮೆ ಅವರು ವಾರಗಳ ಕಾಲ ಮನೆಗೆ ಹಿಂದಿರುಗುತ್ತಿರಲಿಲ್ಲ. ಆಗ ಅವರಿಗೆ ಆಹಾರವನ್ನು ಸ್ವತಃ ಖದೀಜರೇ ತಲುಪಿಸಿಕೊಡುತ್ತಿದ್ದರು.[೪೩] ಹೀಗೆ ಒಮ್ಮೆ ಅವರು ಗುಹೆಯಲ್ಲಿದ್ದಾಗ, ದೇವದೂತ ಗೇಬ್ರಿಯಲ್ ಅವರ ಮುಂದೆ ಪ್ರತ್ಯಕ್ಷರಾಗಿ "ಓದು" ಎಂದರು.[೪೪] ಮುಹಮ್ಮದ್, ನನಗೆ ಓದು-ಬರಹ ತಿಳಿದಿಲ್ಲ ಎಂದು ಉತ್ತರಿಸಿದರೂ, ಆ ದೇವದೂತರು ಅವರನ್ನು ಬಲವಾಗಿ ಅಪ್ಪಿಹಿಡಿದು ನಂತರ ಸಡಿಲು ಬಿಟ್ಟು ಪುನಃ "ಓದು" ಎಂದರು. ಮುಹಮ್ಮದ್ ಪುನಃ ಅದೇ ಉತ್ತರ ಕೊಟ್ಟರು. ಆಗಲೂ ದೇವದೂತರು ಅವರನ್ನು ಅಪ್ಪಿ ಹಿಡಿದು, ಮೂರನೇ ಬಾರಿ ಓದಲು ಹೇಳಿದಾಗ ಮುಹಮ್ಮದ್ ಭಯದಿಂದ, ಏನು ಓದಬೇಕು ಎಂದು ಕೇಳಿದರು. ಆಗ ದೇವದೂತರು ಕುರ್‌ಆನ್‌ನ ಈ ಶ್ಲೋಕಗಳನ್ನು ಓದಿ ಕೊಟ್ಟರು.[೪೩]

"ಸೃಷ್ಟಿಸಿದ ನಿನ್ನ ದೇವರ ನಾಮದಲ್ಲಿ ಓದು. ಅವನು ಮನುಷ್ಯನನ್ನು ಹೆಪ್ಪುಗಟ್ಟಿದ ರಕ್ತದಿಂದ ಸೃಷ್ಟಿಸಿದನು. ಓದು, ನಿನ್ನ ದೇವರು ಬಹಳ ಉದಾರಿಯಾಗಿದ್ದಾನೆ. ಮನುಷ್ಯನು ತಿಳಿಯದಿರುವುದನ್ನು ಅವನು ಮನುಷ್ಯನಿಗೆ ಕಲಿಸಿದ್ದಾನೆ."[]

ಜಬಲ್ ನೂರ್ ಪರ್ವತದಲ್ಲಿರುವ ಹಿರಾ ಗುಹೆ. ಮುಹಮ್ಮದ್‌ರಿಗೆ ಮೊಟ್ಟಮೊದಲು ದೇವವಾಣಿ ಅವತೀರ್ಣವಾದದ್ದು ಈ ಗುಹೆಯಲ್ಲಿ ಎಂದು ನಂಬಲಾಗುತ್ತದೆ.

ಭಯದಿಂದ ನಡುಗುತ್ತಾ ಮುಹಮ್ಮದ್ ಖದೀಜರ ಬಳಿಗೆ ಓಡೋಡಿ ಬಂದರು.[೪೨] "ನನ್ನನ್ನು ಹೊದಿಯಿರಿ, ನನ್ನನ್ನು ಹೊದಿಯಿರಿ" ಎಂದು ಅವರು ಹೇಳುತ್ತಿದ್ದರು. ಖದೀಜ ಗಂಡನನ್ನು ಕಂಬಳಿಯಿಂದ ಹೊದ್ದು ಮಲಗಿಸಿದರು. ನಂತರ ಅವರ ಭಯ ನಿವಾರಣೆಯಾದಾಗ ವಿಷಯವೇನೆಂದು ಕೇಳಿದರು. ಮುಹಮ್ಮದ್ ನಡುಗುತ್ತಲೇ ನಡೆದ ಘಟನೆಯನ್ನು ವಿವರಿಸಿದರು. ನನಗೆ ನನ್ನ ಪ್ರಾಣದ ಬಗ್ಗೆ ಭಯವಾಗುತ್ತಿದೆ ಎಂದರು. ಆಗ ಖದೀಜ, "ಇಲ್ಲ, ನಿಮಗೇನೂ ಆಗಲ್ಲ, ದೇವರು ನಿಮ್ಮನ್ನು ಯಾವತ್ತೂ ನಿಂದಿಸಲಾರ, ನೀವು ಕುಟುಂಬ ಸಂಬಂಧಗಳನ್ನು ಕಾಪಾಡುತ್ತೀರಿ, ಕಷ್ಟಗಳನ್ನು ಸಹಿಸುತ್ತೀರಿ, ಬಡವರಿಗೆ ನೆರವಾಗುತ್ತೀರಿ, ಅನಾಹುತಗಳು ಸಂಭವಿಸುವಾಗ ನೆರವಿಗೆ ಧಾವಿಸುತ್ತೀರಿ" ಎನ್ನುತ್ತಾ ಗಂಡನನ್ನು ಸಾಂತ್ವನಪಡಿಸಿದರು.[೪೩] ನಂತರ ಗಂಡನನ್ನು ವರಕ ಬಿನ್ ನೌಫಲ್ ಎಂಬವರ ಬಳಿಗೆ ಕರೆದುಕೊಂಡು ಹೋದರು. ವರಕ ಒಬ್ಬ ಕ್ರಿಶ್ಚಿಯನ್ ವಿದ್ವಾಂಸರಾಗಿದ್ದು ಹೀಬ್ರೂ ಬೈಬಲನ್ನು ಅರೇಬಿಕ್ ಭಾಷೆಗೆ ಅನುವಾದ ಮಾಡಿದ್ದರು. ಮುಹಮ್ಮದ್ ನಡೆದ ಘಟನೆಯನ್ನು ತಿಳಿಸಿದಾಗ ವರಕ ಹೇಳಿದರು: "ಭಯಪಡಬೇಡಿ. ಅದು ಮೋಸೆಯ ಬಳಿಗೆ ಬಂದ ಅದೇ ದೇವದೂತರು. ನೀವು ಶೀಘ್ರವೇ ಪ್ರವಾದಿಯಾಗುತ್ತೀರಿ." ನಂತರ ಅವರು ಹೇಳಿದರು: "ನೀವು ಪ್ರವಾದಿಯಾಗುವ ಆ ಸಂದರ್ಭದಲ್ಲಿ ನಾನು ಜೀವಂತವಿರುತ್ತಿದ್ದರೆ, ಮತ್ತು ನಿಮ್ಮ ಜನರು ನಿಮ್ಮನ್ನು ಊರಿನಿಂದ ಹೊರಹಾಕುವಾಗ ನಾನು ಜೀವಂತವಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು!" ಇದನ್ನು ಕೇಳಿದ ಮುಹಮ್ಮದ್ ಆಶ್ಚರ್ಯದಿಂದ "ನನ್ನ ಜನರು ನನ್ನನ್ನು ಹೊರಹಾಕುವರೇ?" ಎಂದು ಕೇಳಿದರು. ವರಕ ಹೇಳಿದರು: "ಹೌದು! ನೀವು ತರುವಂತಹ ಸಂದೇಶವನ್ನು ತಂದ ಯಾವುದೇ ಪ್ರವಾದಿಯನ್ನೂ ಅವರ ಜನರು ಹೊರಹಾಕದೆ ಬಿಟ್ಟಿಲ್ಲ. ನಿಮ್ಮನ್ನೂ ಹೊರಹಾಕುತ್ತಾರೆ. ಆ ಕಾಲದಲ್ಲಿ ನಾನು ಜೀವಂತವಿದ್ದರೆ ನಾನು ನಿಮಗೆ ಖಂಡಿತ ಸಹಾಯ ಮಾಡುವೆನು." ಆದರೆ ವರಕ ಹೆಚ್ಚು ಕಾಲ ಬದುಕಲಿಲ್ಲ.[೪೩]

ಮುಹಮ್ಮದ್‌ಗೆ ಮೊಟ್ಟಮೊದಲು ದೇವವಾಣಿ ಅವತೀರ್ಣವಾದದ್ದು ಯಾವಾಗ ಎಂಬ ಬಗ್ಗೆ ಗೊಂದಲಗಳಿವೆ. ಸರಿಯಾದ ಅಭಿಪ್ರಾಯ ಪ್ರಕಾರ ಅದು ರಮದಾನ್ ತಿಂಗಳ 21,[೪೨] ಎನ್ನಲಾಗುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಕ್ರಿ.ಶ. 610 ಆಗಸ್ಟ್ 10.[೪೨]

ನಂತರ ಕೆಲವು ದಿನಗಳ ತನಕ[೪೫] (ಕೆಲವರು ಹೇಳುವ ಪ್ರಕಾರ 6 ತಿಂಗಳು) ದೇವವಾಣಿ ಅವತೀರ್ಣವಾಗಲೇ ಇಲ್ಲ. ಅದರ ನಂತರ 23 ವರ್ಷಗಳ ಕಾಲ – ಅವರ ಮರಣದ ವರೆಗೆ – ದೇವವಾಣಿ ನಿರಂತರವಾಗಿ ಅವತೀರ್ಣವಾಗುತ್ತಲೇ ಇತ್ತು.[೪೬] ದೇವವಾಣಿ ಅವತೀರ್ಣವಾಗುತ್ತಿದ್ದ ರೂಪವನ್ನು ಮುಹಮ್ಮದ್ ಹೀಗೆ ವಿವರಿಸುತ್ತಿದ್ದರು: "ಕೆಲವೊಮ್ಮೆ ಅದು ಗಂಟೆಯ ನಾದದಂತೆ ಕೇಳಿಬರುತ್ತಿತ್ತು. ಅದನ್ನು ಸಹಿಸಲು ನನಗೆ ಬಹಳ ಕಷ್ಟವಾಗುತ್ತಿತ್ತು. ನಾನು ಅದನ್ನು ಕಂಠಪಾಠ ಮಾಡುವಷ್ಟರಲ್ಲಿ ಅದು ಮುಗಿದುಬಿಡುತ್ತಿತ್ತು. ಕೆಲವೊಮ್ಮೆ ದೇವದೂತರು ಮನುಷ್ಯರೂಪದಲ್ಲಿ ಬರುತ್ತಿದ್ದರು. ಆಗ ಅವರು ನನ್ನಲ್ಲಿ ಮಾತನಾಡುತ್ತಿದ್ದರು. ನಾನು ಅವರು ಹೇಳಿದ್ದನ್ನು ಕಂಠಪಾಠ ಮಾಡುತ್ತಿದ್ದೆ."[೪೭] ಅವರ ಮಡದಿ ಆಯಿಶ ಹೇಳುತ್ತಿದ್ದರು: "ತೀವ್ರ ಚಳಿಯಿರುವ ದಿನಗಳಲ್ಲಿ ಮುಹಮ್ಮದ್‌ರಿಗೆ ದೇವವಾಣಿ ಅವತೀರ್ಣವಾಗುವುದನ್ನು ನಾನು ಕಂಡಿದ್ದೇನೆ. ಅದು ಮುಗಿಯುವಷ್ಟರಲ್ಲಿ ಅವರ ಹಣೆಯಲ್ಲಿ ಬೆವರು ಹರಿಯುತ್ತಿತ್ತು!"[೪೮]

ಮತ ಪ್ರಚಾರದ ಆರಂಭ

[ಬದಲಾಯಿಸಿ]

ಮುಹಮ್ಮದ್ ತನ್ನ ಆಪ್ತರನ್ನು ಕರೆದು ಅವರಿಗೆ ದೇವರ ಸಂದೇಶವನ್ನು ತಿಳಿಸಿದರು. ಮೊತ್ತಮೊದಲು ಅವರ ಸಂದೇಶದಲ್ಲಿ ನಂಬಿಕೆಯಿಟ್ಟವರು ಅವರ ಪತ್ನಿ ಖದೀಜ ಬಿಂತ್ ಖುವೈಲಿದ್.[೪೯][೫೦][೫೧] ಎರಡನೆಯದಾಗಿ ನಂಬಿಕೆಯಿಟ್ಟವರು ಅಬೂತಾಲಿಬರ ಮಗ ಅಲಿ. ಆಗ ಅವರು ಹತ್ತು ವರ್ಷದ ಹುಡುಗ.[೫೨] ಅಬೂತಾಲಿಬರ ಬಡತನವನ್ನು ಕಂಡು ಅಲಿಯನ್ನು ಸಾಕುವ ಜವಾಬ್ದಾರಿಯನ್ನು ಮುಹಮ್ಮದ್ ವಹಿಸಿಕೊಂಡಿದ್ದರು.[೪೯] ಮೂರನೆಯದಾಗಿ ನಂಬಿಕೆಯಿಟ್ಟದ್ದು ಅವರ ದತ್ತುಪುತ್ರ ಝೈದ್ ಬಿನ್ ಹಾರಿಸ ಎಂದು ಹೇಳಲಾಗುತ್ತದೆ.[೪೯] ಇದರ ನಂತರ ಅವರ ಆಪ್ತ ಸ್ನೇಹಿತರಾದ ಅಬೂ ಬಕರ್ ಬಿನ್ ಅಬೂ ಕುಹಾಫ ಮುಹಮ್ಮದ್‌ರ ಧರ್ಮವನ್ನು ಸ್ವೀಕರಿಸಿದರು.[೪೯] ಅಬೂ ಬಕರ್ ನಂತರ ಸುಮ್ಮನಿರಲಿಲ್ಲ. ತನ್ನ ಆಪ್ತರು ಮತ್ತು ಹಿತೈಷಿಗಳಿಗೂ ಅದನ್ನು ತಿಳಿಸಿದರು. ಹೀಗೆ ಉಸ್ಮಾನ್ ಬಿನ್ ಅಫ್ಫಾನ್, ಅಬ್ದುರ್‍ರಹ್ಮಾನ್ ಬಿನ್ ಔಫ್, ತಲ್ಹ ಬಿನ್ ಉಬೈದುಲ್ಲಾ, ಝುಬೈರ್ ಬಿನ್ ಅವ್ವಾಂ, ಸಅದ್ ಬಿನ್ ಅಬೂ ವಕ್ಕಾಸ್ ಮುಂತಾದವರು[೫೩] ಇಸ್ಲಾಂ ಧರ್ಮಕ್ಕೆ ಬಂದರು.[೪೯][೫೪]

ಮುಹಮ್ಮದ್ ಮೂರು ವರ್ಷಗಳ ಕಾಲ ಬಹಳ ರಹಸ್ಯವಾಗಿಯೇ ಮತಪ್ರಚಾರ ಮಾಡುತ್ತಿದ್ದರು.[೫೫][೫೬] ಅವರಿಗೆ ಮೊತ್ತಮೊದಲು ಬಂದ ದೈವಾಜ್ಞೆಯು ನಮಾಝ್‌ನ ಬಗ್ಗೆಯಾಗಿತ್ತು ಎನ್ನಲಾಗುತ್ತದೆ.[೫೭] ಮುಹಮ್ಮದ್ ಮತ್ತು ಅವರ ಅನುಯಾಯಿಗಳು ಯಾರಿಗೂ ತಿಳಿಯದಂತೆ ರಹಸ್ಯವಾಗಿ ಬೆಟ್ಟಕ್ಕೆ ಹೋಗಿ ನಮಾಝ್ ಮಾಡಿ ಬರುತ್ತಿದ್ದರು.[೫೮] ಅವರ ಅನುಯಾಯಿಗಳ ಸಂಖ್ಯೆ 30ಕ್ಕೆ ತಲುಪಿದಾಗ ಅವರು ಸಫಾ ಬೆಟ್ಟದ ಬಳಿಯಿದ್ದ ಅರ್ಕಂ ಬಿನ್ ಅಬೂ ಅರ್ಕಂರ ಮನೆಯನ್ನು ತಮ್ಮ ಧರ್ಮ ಪ್ರಚಾರದ ಕೇಂದ್ರವನ್ನಾಗಿ ಮಾಡಿ ಅಲ್ಲಿಯೇ ನಮಾಝ್ ಉಪದೇಶ ಮುಂತಾದಗಳನ್ನು ಮಾಡುತ್ತಿದ್ದರು.[೫೯]

ಮಕ್ಕಾ ಮಸೀದಿಯ ಒಳಾಂಗಣದಿಂದ ಕಾಣುವ ಸಫಾ ಬೆಟ್ಟದ ನೋಟ. ಮುಹಮ್ಮದ್ ಇದರ ಮೇಲೆ ನಿಂತು ಕುರೈಷರಿಗೆ ದೇವರ ಸಂದೇಶವನ್ನು ತಿಳಿಸಿದರು.

ಮೂರು ವರ್ಷಗಳು ಕಳೆದಾಗ, ಬಹಿರಂಗವಾಗಿ ಧರ್ಮಪ್ರಚಾರ ಮಾಡುವಂತೆ ಅವರಿಗೆ ದೈವಾಜ್ಞೆ ಬಂತು.[೬೦] ಅವರು ಮಕ್ಕಾದ ಸಫಾ ಬೆಟ್ಟವನ್ನು ಹತ್ತಿ ಕುರೈಷ್ ಗೋತ್ರದವರನ್ನು ಕೂಗಿ ಕರೆದರು.[೫೫] ಕುರೈಷರು ನೆರೆದು ವಿಷಯ ಏನೆಂದು ಕೇಳಿದಾಗ, ಮುಹಮ್ಮದ್ ಹೇಳಿದರು: "ಈ ಬೆಟ್ಟದ ಹಿಂಭಾಗದಿಂದ ಒಂದು ಸೇನೆ ನಿಮ್ಮ ಮೇಲೆ ದಾಳಿ ಮಾಡಲು ಬರುತ್ತಿದೆ ಎಂದು ನಾನು ಹೇಳಿದರೆ ನೀವು ನನ್ನ ಮಾತನ್ನು ನಂಬುತ್ತೀರೋ ಇಲ್ಲವೋ?"[೬೧] ಜನರು ಒಕ್ಕೊರಳಿನಿಂದ, "ಮುಹಮ್ಮದ್! ನಿನ್ನ ಮೇಲೆ ನಮಗೆ ನಂಬಿಕೆಯಿದೆ. ನೀನು ಈ ತನಕ ಸುಳ್ಳು ಹೇಳಿದ ಇತಿಹಾಸವಿಲ್ಲ." ಆಗ ಮುಹಮ್ಮದ್ ಹೇಳಿದರು: "ನಿಮಗೆ ಮುಂದೆ ಬರಲಿರುವ ಒಂದು ಕಠೋರ ಶಿಕ್ಷೆಯ ಬಗ್ಗೆ ಎಚ್ಚರಿಕೆ ನೀಡಲು ನಾನು ಬಂದಿದ್ದೇನೆ.[೬೧] ಓ ಅಬ್ದುಲ್ ಮುತ್ತಲಿಬರ ಮಕ್ಕಳೇ! ಓ ಅಬ್ದ್ ಮನಾಫರ ಮಕ್ಕಳೇ! ಓ ಝುಹ್ರರ ಮಕ್ಕಳೇ! ನನ್ನ ಹತ್ತಿರದ ಸಂಬಂಧಿಕರಿಗೆ ಈ ಎಚ್ಚರಿಕೆಯನ್ನು ತಿಳಿಸುವಂತೆ ದೇವರು ನನಗೆ ಆಜ್ಞಾಪಿಸಿದ್ದಾನೆ. ನಾನು ನಿಮ್ಮಿಂದ ಏನನ್ನೂ ಕೇಳುವುದಿಲ್ಲ. ನನಗೆ ನಿಮ್ಮ ಹಣ ಸಂಪತ್ತು ಏನೂ ಬೇಡ. ನಾನು ಒಂದು ಮಾತನ್ನು ಮಾತ್ರ ಹೇಳುತ್ತೇನೆ. ನೀವು ಆರಾಧಿಸುತ್ತಿರುವ ವಿಗ್ರಹಗಳು, ಮೂರ್ತಿಗಳು, ಮರಗಳು, ಕಲ್ಲುಗಳು ಯಾವುದೂ ದೇವರಲ್ಲ. ನಿಮ್ಮ ಸೃಷ್ಟಿಕರ್ತನೇ ನಿಮ್ಮ ದೇವರು. ನೀವು ನಿಮ್ಮ ಸೃಷ್ಟಿಕರ್ತನನ್ನು ಮಾತ್ರ ಆರಾಧಿಸಿರಿ. ಆರಾಧನೆಗೆ ಅರ್ಹನಾಗಿರುವುದು ಅವನು ಮಾತ್ರ." ಮುಹಮ್ಮದ್ ಇಷ್ಟು ಹೇಳುವಷ್ಟರಲ್ಲಿ ಅವರ ದೊಡ್ಡಪ್ಪ ಅಬೂಲಹಬ್ ಎದ್ದು ನಿಂತು, "ಓ ಮುಹಮ್ಮದ್! ನೀನು ನಾಶವಾಗಿ ಹೋಗು. ಇದನ್ನು ಹೇಳಲಿಕ್ಕಾ ನೀನು ನಮ್ಮನ್ನು ಇಲ್ಲಿ ಒಟ್ಟುಗೂಡಿಸಿದ್ದು?"[೬೨] ಎಂದು ಕೋಪದಿಂದಲೇ ಎದ್ದು ಹೋದರು. ಆಗ ದೇವರು ಈ ಶ್ಲೋಕಗಳನ್ನು ಅವತೀರ್ಣಗೊಳಿಸಿದನು:[೬೧]

"ಅಬೂಲಹಬನ ಎರಡು ಕೈಗಳು ನಾಶವಾಗಲಿ. ಅವನು ಕೂಡ ನಾಶವಾದನು."

ಮುಹಮ್ಮದ್ ಬಹಿರಂಗವಾಗಿ ಮತಪ್ರಚಾರ ಆರಂಭಿಸಿದ ದಿನದಿಂದಲೇ ಅವರ ಮತ್ತು ಮಕ್ಕಾದ ಕುರೈಷ್ ಗೋತ್ರದವರ ಮಧ್ಯೆ ಶತ್ರುತ್ವ ಆರಂಭವಾಯಿತು. ಮೊದಮೊದಲು ಅವರು ಇದನ್ನು ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ.[೫೮] ಆದರೆ ಮುಹಮ್ಮದ್ ಯಾವಾಗ ಅವರು ಪೂಜಿಸುತ್ತಿರುವ ದೇವರುಗಳು ದೇವರಲ್ಲ, ನಿಜವಾದ ದೇವರು ಸೃಷ್ಟಿಕರ್ತ ಮಾತ್ರ ಎಂದು ಹೇಳತೊಡಗಿದರೋ ಆಗ ಕುರೈಷ್ ಸರದಾರರು ಎಚ್ಚೆತ್ತರು.[೫೮] ಅವರು ಅದನ್ನು ತಮ್ಮ ಧಾರ್ಮಿಕ ಮತ್ತು ಸಾಮಾಜಿಕ ಅಡಿಪಾಯಕ್ಕೆ ಬೆದರಿಕೆಯಾಗಿ ಕಂಡರು.[೬೩] ಏಕೆಂದರೆ ಮುಹಮ್ಮದ್‌ರ ಆಂದೋಲನಕ್ಕೆ ಸಮಾಜದ ಎಲ್ಲ ವರ್ಗಗಳ ಜನರೂ ಸೇರುತ್ತಿದ್ದರು. ಅವರಲ್ಲಿ ಅಬೂಬಕರ್, ಉಸ್ಮಾನ್‌ರಂತಹ ಉನ್ನತ ಕುಲದವರು ಮತ್ತು ಶ್ರೀಮಂತರಿದ್ದರು. ಬಿಲಾಲ್‌ರಂತಹ ತುಳಿತಕ್ಕೊಳಗಾದ ಗುಲಾಮರಿದ್ದರು. ಈ ಆಂದೋಲನವು ಮಕ್ಕಾದ ಚಿತ್ರವನ್ನೇ ಬದಲಿಸಿಬಿಬಹುದೆಂಬ ಆತಂಕ ಕುರೈಷ್ ಗೋತ್ರದವರನ್ನು ಕಾಡುತ್ತಿತ್ತು.[೬೪]

ಕುರೈಷರು ಈ ಆಂದೋಲನವನ್ನು ಹಿಂಸಾತ್ಮಕವಾಗಿ ಹಿಮ್ಮೆಟ್ಟಿಸಲು ಪ್ರಯತ್ನಿಸಿದರು.[೬೫] ಅವರು ಮುಹಮ್ಮದ್‌ರ ಅನುಯಾಯಿಗಳನ್ನು — ವಿಶೇಷವಾಗಿ ತುಳಿತಕ್ಕೊಳಗಾದವರನ್ನು — ಸಾರ್ವಜನಿಕವಾಗಿ ಹಿಂಸಿಸತೊಡಗಿದರು.[೬೬][೬೭] ಮುಹಮ್ಮದ್‌ರ ಶಿಷ್ಯ ಇಬ್ನ್ ಮಸ್‌ಊದ್ ಹೇಳುತ್ತಾರೆ: "ಮೊತ್ತಮೊದಲು ಏಳು ಜನರು ನಾವು ಇಸ್ಲಾಂ ಧರ್ಮಕ್ಕೆ ಸೇರಿದ್ದೇವೆಂದು ಬಹಿರಂಗವಾಗಿ ಘೋಷಿಸಿದರು. ಮುಹಮ್ಮದ್, ಅಬೂಬಕರ್, ಬಿಲಾಲ್, ಖಬ್ಬಾಬ್, ಸುಹೈಬ್, ಅಮ್ಮಾರ್ ಮತ್ತು ಸುಮಯ್ಯ. ಮುಹಮ್ಮದ್ ಮತ್ತು ಅಬೂಬಕರ್‌ರಿಗೆ ಬೆಂಗಾವಲಾಗಿ ಅವರ ಗೋತ್ರವಿತ್ತು. ಆದ್ದರಿಂದ ಅವರನ್ನು ಹಿಂಸಿಸುವುದು ಅಷ್ಟು ಸುಲಭವಾಗಿರಲಿಲ್ಲ. ಆದರೆ ಉಳಿದವರು ಗುಲಾಮರಾಗಿದ್ದರು. ಅವರನ್ನು ಕುರೈಷರು ತೀವ್ರವಾಗಿ ಹಿಂಸಿಸಿದರು. ಕುರೈಷ್ ಮುಖಂಡ ಅಬೂಜಹಲ್ ಸುಮಯ್ಯರಿಗೆ ತೀವ್ರ ಹಿಂಸೆ ನೀಡಿ ಕೊನೆಗೆ ಭರ್ಚಿಯಿಂದ ತಿವಿದು ಕೊಂದುಬಿಟ್ಟ."[೬೮] ಮುಹಮ್ಮದ್‌ರಿಗೆ ಬೆಂಗಾವಲಾಗಿ ಅವರ ಗೋತ್ರವಿದ್ದರೂ ಸಹ, ಕುರೈಷರು ಅವಕಾಶ ಸಿಕ್ಕಿದಾಗಲೆಲ್ಲಾ ಅವರನ್ನು ನಿಂದಿಸುತ್ತಲೂ ಹಿಂಸಿಸುತ್ತಲೂ ಇದ್ದರು.[೬೯] ಒಮ್ಮೆ ಮುಹಮ್ಮದ್ ಕಅಬಾದಲ್ಲಿ ನಮಾಝ್ ಮಾಡಲು ನಿಂತಿದ್ದಾಗ, ಉಕ್ಬ ಬಿನ್ ಅಬೂ ಮುಈತ್ ಅವರ ಕೊರಳಿಗೆ ಶಾಲನ್ನು ಬಿಗಿದು ಉಸಿರು ಕಟ್ಟಿಸಿ ಸಾಯಿಸಲು ಪ್ರಯತ್ನಿಸಿದ್ದರು. ಆಗ ಅಬೂಬಕರ್ ಎಲ್ಲಿಂದಲೋ ಓಡಿ ಬಂದು ಅವರನ್ನು ಪಾರು ಮಾಡಿದರು.[೭೦]

ಮುಹಮ್ಮದ್ ಮತ್ತು ಅವರ ಅನುಯಾಯಿಗಳನ್ನು ತೀವ್ರವಾಗಿ ಹಿಂಸಿಸಿದವರು ಅಬೂಜಹಲ್, ಅಬೂಲಹಬ್ (ಮುಹಮ್ಮದ್‌ರ ದೊಡ್ಡಪ್ಪ), ಅಸ್ವದ್ ಬಿನ್ ಅಬ್ದ್ ಯಗೂಸ್, ಹಾರಿಸ್ ಬಿನ್ ಕೈಸ್ ಬಿನ್ ಅದೀ, ವಲೀದ್ ಬಿನ್ ಮುಗೀರ, ಉಮಯ್ಯ ಬಿನ್ ಖಲಫ್, ಉಕ್ಬ ಬಿನ್ ಅಬೂ ಮುಈತ್ ಮುಂತಾದವರು. ಇವರ ಹಿಂಸೆ ತಾಳಲಾಗದೆ ಒಮ್ಮೆ ಮುಹಮ್ಮದ್ ಇವರ ವಿರುದ್ಧ ದೇವರಲ್ಲಿ ಪ್ರಾರ್ಥಿಸಿದ್ದರು.

ಹಿಂಸೆಯಿಂದ ಇದನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ ಎಂದರಿತಾಗ ಕುರೈಷರು ಪರ್ಯಾಯ ಮಾರ್ಗಗಳನ್ನು ಶೋಧಿಸಿದರು. ಅವರು ಮುಹಮ್ಮದ್‌ರ ಮನವೊಲಿಸಲು ಉತ್ಬ ಬಿನ್ ರಬೀಅ ಎಂಬ ತಮ್ಮ ಒಬ್ಬ ಮುಖಂಡನನ್ನು ಕಳುಹಿಸಿದರು.[೭೧] ಉತ್ಬ ಮುಹಮ್ಮದ್‌ರ ಬಳಿಗೆ ಹೋಗಿ ಹೋಗಿ, "ಮುಹಮ್ಮದ್! ನಿನಗೆ ಹಣದ ಆವಶ್ಯಕತೆಯಿದ್ದರೆ ನಾವೆಲ್ಲರೂ ನಮ್ಮ ಸಂಪತ್ತಿನಿಂದ ಒಂದು ಭಾಗವನ್ನು ನೀಡಿ ನಿನ್ನನ್ನು ಶ್ರೀಮಂತನನ್ನಾಗಿ ಮಾಡುತ್ತೇವೆ, ನಿನಗೆ ಗೌರವ ಬೇಕಾಗಿದ್ದರೆ, ನಾವು ನಿನ್ನನ್ನು ನಮ್ಮ ಸರದಾರನನ್ನಾಗಿ ಮಾಡುತ್ತೇವೆ, ನಿನ್ನ ಮಾತನ್ನು ನಾವು ಮೀರುವುದಿಲ್ಲ, ನಿನ್ನ ಅಧಿಕಾರ ಬೇಕಾಗಿದ್ದರೆ, ನಾವು ನಿನ್ನನ್ನು ನಮ್ಮ ರಾಜನನ್ನಾಗಿ ಮಾಡುತ್ತೇವೆ, ಇನ್ನು ನಿನಗೆ ಏನಾದರೂ ದೆವ್ವದ ತೊಂದರೆಯಿದ್ದರೆ ನಾವು ಅತ್ಯಂತ ನುರಿತ ವೈದ್ಯರನ್ನು ತಂದು ಚಿಕಿತ್ಸೆ ಮಾಡಿಸುತ್ತೇವೆ."[೭೧] ಉತ್ಬ ಮಾತು ಮುಗಿಸಿದ ಬಳಿಕ ಮುಹಮ್ಮದ್ ಕೇಳಿದರು: "ನೀನು ಹೇಳಬೇಕಾದುದನ್ನೆಲ್ಲಾ ಹೇಳಿರುವೆ. ಈಗ ನನ್ನ ಮಾತು ಕೇಳು." ನಂತರ ಮುಹಮ್ಮದ್ ಕುರ್‌ಆನ್ ಶ್ಲೋಕಗಳನ್ನು ಪಠಿಸತೊಡಗಿದರು. ಕುರ್‌ಆನನ್ನು ಕಿವಿಗೊಟ್ಟು ಕೇಳಿದ ನಂತರ ಉತ್ಬ ಕುರೈಷರ ಬಳಿಗೆ ಬಂದು ಹೇಳಿದರು:[೭೨] "ಓ ಕುರೈಷ್ ಸರದಾರರೇ! ನನ್ನ ಮಾತನ್ನು ಕೇಳಿ. ಮುಹಮ್ಮದ್‌ನನ್ನು ಅವನ ಪಾಡಿಗೆ ಬಿಟ್ಟು ಬಿಡಿ. ಅವನನ್ನು ಸಂಪೂರ್ಣ ನಿರ್ಲಕ್ಷಿಸಿ. ಏಕೆಂದರೆ ದೇವರಾಣೆ! ಅವರು ಕೆಲವು ಶ್ಲೋಕಗಳನ್ನು ಪಠಿಸುವುದನ್ನು ನಾನು ಕೇಳಿದೆ. ಅವು ಕ್ರಾಂತಿಕಾರಿ ಶ್ಲೋಕಗಳಾಗಿವೆ. ಅರಬ್ಬರಲ್ಲಿ ಯಾರಾದರೂ ಮುಹಮ್ಮದ್‌ನ ಕಥೆ ಮುಗಿಸಿದರೆ ನಿಮ್ಮ ಕೆಲಸ ಸುಲಭವಾಯಿತು. ಇನ್ನು ಮುಹಮ್ಮದ್ ಅರಬ್ಬರನ್ನು ಗೆದ್ದು ಸಾಮ್ರಾಜ್ಯ ಸ್ಥಾಪಿಸಿದರೆ ಅದು ನಿಮ್ಮ ಸಾಮ್ರಾಜ್ಯವೂ ಆಗುತ್ತದೆ. ಅವರ ಪೌರುಷ ನಿಮ್ಮ ಪೌರುಷವೂ ಆಗುತ್ತದೆ."[೭೩][೭೪]

ಕುರೈಷರು ಹಲವಾರು ವಿಧಗಳಲ್ಲಿ ಮುಹಮ್ಮದ್‌ರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಯಾವುದೂ ಯಶಸ್ವಿಯಾಗಲಿಲ್ಲ. ಕೊನೆಗೆ ಅವರು ಮುಹಮ್ಮದ್‌ರ ದೊಡ್ಡಪ್ಪ ಅಬೂತಾಲಿಬರ ಬಳಿಗೆ ಹೋಗಲು ನಿರ್ಧರಿಸಿದರು.[೭೫] ಅಬೂತಾಲಿಬ್ ಮುಹಮ್ಮದ್‌ರ ಧರ್ಮವನ್ನು ಸ್ವೀಕರಿಸಿರಲಿಲ್ಲ.[೭೬] ಕುರೈಷರ ನಿಯೋಗವು ಪದೇ ಪದೇ ಅಬೂತಾಲಿಬರನ್ನು ಭೇಟಿಯಾಗಿ ಮುಹಮ್ಮದ್‌ರ ಮನವೊಲಿಸಲು ವಿನಂತಿಸಿದರು.[೬೩] ಕೊನೆಗೆ ಗತ್ಯಂತರವಿಲ್ಲದೆ ಅಬೂತಾಲಿಬ್ ಮುಹಮ್ಮದ್‌ರನ್ನು ಕರೆದು ಹೇಳಿದರು: "ಸಹೋದರ ಪುತ್ರ! ಕುರೈಷ್ ಗೋತ್ರದವರು ನನ್ನ ಬಳಿಗೆ ಬಂದಿದ್ದರು. ಅವರು ನನಗೆ ದೊಡ್ಡ ಹೊಣೆಗಾರಿಕೆಯನ್ನು ಹೊರಿಸಿದ್ದಾರೆ. ಅದನ್ನು ಹೊರಲು ನನಗೆ ಸಾಧ್ಯವಾಗುತ್ತಿಲ್ಲ. ಮಗೂ! ನಿನ್ನ ಜನರನ್ನು ಬಿಟ್ಟುಬಿಡು. ಅವರಿಗೆ ಇಷ್ಟವಿಲ್ಲದ ಮಾತುಗಳನ್ನು ಹೇಳಬೇಡ."[೭೭] ದೊಡ್ಡಪ್ಪನ ಮಾತು ಕೇಳಿ ಮುಹಮ್ಮದ್ ಎದೆಗುಂದಲಿಲ್ಲ. ದೊಡ್ಡಪ್ಪ ಕೂಡ ತನ್ನ ಕೈಬಿಟ್ಟರು ಎಂದು ಭಾವಿಸಿ ವಿಚಲಿತರಾಗಲಿಲ್ಲ.[೬೩] ಬದಲಾಗಿ ಅವರು ತಮ್ಮ ದಿಟ್ಟ ನಿರ್ಧಾರವನ್ನು ಹೇಳಿಯೇ ಬಿಟ್ಟರು. "ಪ್ರೀತಿಯ ದೊಡ್ಡಪ್ಪ! ಅವರು ನನ್ನ ಬಲಗೈಯಲ್ಲಿ ಸೂರ್ಯನನ್ನು ಮತ್ತು ಎಡಗೈಯಲ್ಲಿ ಚಂದ್ರನನ್ನು ತಂದಿಟ್ಟರೂ ದೇವರು ಈ ಆಂದೋಲನವನ್ನು ವಿಜಯಗೊಳಿಸುವ ತನಕ ಅಥವಾ ಈ ದಾರಿಯಲ್ಲಿ ನನ್ನ ಸಾವು ಸಂಭವಿಸುವ ತನಕ ನಾನು ಇದರಿಂದ ಹಿಂಜರಿಯುವುದಿಲ್ಲ."[೬೩] ನಂತರ ಮುಹಮ್ಮದ್ ಗಟ್ಟಿಯಾಗಿ ಅಳತೊಡಗಿದರು.[೭೮] ಮನಕರಗಿದ ಅಬೂತಾಲಿಬ್ ಹೇಳಿದರು: "ಸಹೋದರ ಪುತ್ರ! ಸರಿ, ನಿನ್ನ ಆಂದೋಲನವನ್ನು ಮುಂದುವರಿಸು. ನಿನಗೆ ಇಷ್ಟವಿರುವುದನ್ನು ಮಾಡು. ಆದರೆ ದೇವರಾಣೆಗೂ ಸತ್ಯ! ನಾನು ಜೀವಂತವಿರುವ ತನಕ ಅವರು ನಿನ್ನ ಕೂದಲನ್ನು ಮುಟ್ಟಲೂ ನಾನು ಬಿಡಲಾರೆ."[೭೭][೭೯][೮೦]

ಪ್ರಥಮ ಹಿಜ್ರ

[ಬದಲಾಯಿಸಿ]

ಮನವೊಲಿಸುವ ಪ್ರಯತ್ನ ಕೈಗೂಡದಿದ್ದಾಗ, ಕುರೈಷರು ಪುನಃ ಹಿಂಸೆಯ ದಾರಿಗಿಳಿದರು.[೮೧] ಅವರ ಹಿಂಸೆ ಮಿತಿಮೀರಿದಾಗ ಮುಹಮ್ಮದ್ ತಮ್ಮ ಕೆಲವು ಅನುಯಾಯಿಗಳಿಗೆ ಇಥಿಯೋಪಿಯಾಗೆ ವಲಸೆ ಹೋಗಲು ಅಪ್ಪಣೆ ಕೊಟ್ಟರು.[೮೨] ಅವರು ಹೇಳಿದರು: "ಇಥಿಯೋಪಿಯಾದಲ್ಲಿ ಒಬ್ಬ ದೊರೆಯಿದ್ದಾರೆ. ಅವರು ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ದೇವರು ಇಲ್ಲಿ ನೆಮ್ಮದಿಯಿಂದ ಬದುಕುವಂತೆ ಮಾಡುವ ತನಕ ಅಥವಾ ಬೇರೆ ಯಾವುದಾದರೂ ಮಾರ್ಗವನ್ನು ತೋರಿಸುವ ತನಕ ನೀವು ಅಲ್ಲಿಗೆ ವಲಸೆ ಹೋಗಿರಿ."[೮೩] ಹೀಗೆ ಮುಹಮ್ಮದ್‌ರ ಮಗಳು ರುಕಯ್ಯ ಮತ್ತು ಆಕೆಯ ಗಂಡ ಉಸ್ಮಾನ್ ಬಿನ್ ಅಫ್ಫಾನ್‌ರ ಮುಖಂಡತ್ವದಲ್ಲಿ 11 ಪುರುಷರು ಮತ್ತು 4 ಮಹಿಳೆಯರು ಇಥಿಯೋಪಿಯಾಗೆ ಹೊರಟರು. ಇದು ಮುಹಮ್ಮದ್ ಪ್ರವಾದಿಯಾದ 5 ನೇ ವರ್ಷದ[೫೬] ರಜಬ್ ತಿಂಗಳು.

ಸೂರ ನಜ್ಮ್ ಅಧ್ಯಾಯದ ಕೊನೆಯ ಶ್ಲೋಕ. ಈ ಶ್ಲೋಕವನ್ನು ಪಠಿಸಿ ಮುಹಮ್ಮದ್ ಸಾಷ್ಟಾಂಗ ಮಾಡಿದಾಗ ನೆರೆದಿದ್ದ ಕುರೈಷರೆಲ್ಲರೂ ಸಾಷ್ಟಾಂಗ ಮಾಡಿದರು.

ಒಮ್ಮೆ ಮಕ್ಕಾದ ಕಅಬಾದ ಬಳಿ ಮುಹಮ್ಮದ್ ಕುರ್‌ಆನಿನ ಸೂರ ನಜ್ಮ್ ಪಠಿಸುತ್ತಿದ್ದರು. ಸುತ್ತಲೂ ಕುರೈಷರು ನೆರೆದಿದ್ದರು. ಅವರು ಈ ತನಕ ಕುರ್‌ಆನ್ ಶ್ಲೋಕಗಳನ್ನು ಅಲಿಸಿರಲಿಲ್ಲ. ಮುಹಮ್ಮದ್ ಸೂರದ ಕೊನೆಯನ್ನು ತಲುಪಿದಾಗ ಸಾಷ್ಟಾಂಗ ಮಾಡಿದರು. ನೆರೆದಿದ್ದ ಪ್ರೇಕ್ಷಕರೆಲ್ಲರೂ ಅವರಿಗರಿವಿಲ್ಲದಂತೆ ಮುಹಮ್ಮದ್‌ರ ಹಿಂದೆ ಸಾಷ್ಟಾಂಗ ಮಾಡಿದರು.[೮೪] ಇದರಿಂದ ಮಕ್ಕಾದ ಕುರೈಷರು ಇಸ್ಲಾಂ ಧರ್ಮ ಸ್ವೀಕರಿಸಿದರು ಎಂಬ ವದಂತಿ ಹಬ್ಬಿತು. ವದಂತಿ ಇಥಿಯೋಪಿಯಾಗೂ ತಲುಪಿತು.[೮೫][೮೬] ಇಥಿಯೋಪಿಯಾಗೆ ಹೋದ ಕೆಲವರು ಮಕ್ಕಾಗೆ ಮರಳಿದ‌‌ರು.[೮೬] ಕೆಲವರು ಹೇಳುವಂತೆ ಉಮರ್ ಬಿನ್ ಖತ್ತಾಬ್ ಇಸ್ಲಾಂ ಸ್ವೀಕರಿಸಿದ ವಿಷಯ ತಿಳಿದು ಅವರು ಮಕ್ಕಾಗೆ ಹಿಂದಿರುಗಿದರು.[೮೭] ಆದರೆ ಮಕ್ಕಾದ ಸ್ಥಿತಿ ಸುಧಾರಿಸಿಲ್ಲ ಎಂದು ಅರಿವಾದಾಗ ಅವರು ಪುನಃ ಇಥಿಯೋಪಿಯಾಗೆ ಹಿಂದಿರುಗಿದರು.[೮೬] ಅವರ ಜೊತೆಗೆ ಇತರ ಕೆಲವು ಮುಸ್ಲಿಮರೂ ಸೇರಿ ಒಟ್ಟು 83 ಜನರು ಇಥಿಯೋಪಿಯಾ ತಲುಪಿದರು.[೮೮]

ಮುಸ್ಲಿಮರು ಇಥಿಯೋಪಿಯಾದಲ್ಲಿ ಆಶ್ರಯಪಡೆದ ಸುದ್ದಿ ತಿಳಿದಾಗ, ಕುರೈಷರು ಅಬ್ದುಲ್ಲಾ ಬಿನ್ ಅಬೂ ರಬೀಅ ಮತ್ತು ಅಮ್ರ್ ಬಿನ್ ಆಸ್ ರನ್ನು[೮೬] ಹಲವಾರು ಉಡುಗೊರೆಗಳೊಂದಿಗೆ ಇಥಿಯೋಪಿಯಾ ದೊರೆ ನೇಗಸ್‌ನ ಬಳಿಗೆ ಕಳುಹಿಸಿದರು.[೮೩] ಇವರು ಮಕ್ಕಾದಿಂದ ಓಡಿ ಬಂದವರು ಇವರನ್ನು ಮಕ್ಕಾಗೆ ಮರಳಿ ಕಳುಹಿಸಬೇಕೆಂದು ವಿನಂತಿಸಿದರು. ನೇಗಸ್ ಮುಸ್ಲಿಮರನ್ನು ಕರೆಸಿ ವಿಚಾರಿಸಿದಾಗ, ಅವರಲ್ಲಿ ಒಬ್ಬರಾದ ಜಅಫರ್ ಬಿನ್ ಅಬೂತಾಲಿಬ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ನೇಗಸ್‌ಗೆ ಸೂರ ಮರ್ಯಮ್‌ನ ಶ್ಲೋಕಗಳನ್ನು ಓದಿಕೊಟ್ಟರು.[೮೯] ಶ್ಲೋಕಗಳನ್ನು ಆಲಿಸಿದ ನೇಗಸ್ ಕಣ್ಣಲ್ಲಿ ಕಣ್ಣೀರು ಹರಿಯಿತು.[೯೦] ಅವರು ಹೇಳಿದರು: "ಯೇಸುಕ್ರಿಸ್ತರ ಸಂದೇಶ ಮತ್ತು ಮುಹಮ್ಮದ್‌ರ ಸಂದೇಶ ಒಂದೇ ಮೂಲದ್ದಾಗಿದೆ.[೯೧] ನಾನು ಏನೇ ಆದರೂ ಇವರನ್ನು ಇಲ್ಲಿಂದ ಕಳಿಸಿಕೊಡುವುದಿಲ್ಲ."[೯೨] ನೇಗಸ್‌ರ ಮನವೊಲಿಸಲು ವಿಫಲರಾದ ಕುರೈಷ್ ಮುಖಂಡರು ಊರಿಗೆ ಮರಳಿದರು.[೯೧] ಮುಹಮ್ಮದ್ ಮದೀನಕ್ಕೆ ವಲಸೆ ಹೋಗುವ ತನಕ ಈ ಮುಸ್ಲಿಮರು ಇಥಿಯೋಪಿಯಾದಲ್ಲೇ ಇದ್ದರು. ನಂತರ ಅವರು ಅಲ್ಲಿಂದ ಮದೀನಕ್ಕೆ ಹೋದರು.

ಬಹಿಷ್ಕಾರ

[ಬದಲಾಯಿಸಿ]

ಮುಹಮ್ಮದ್ ಪ್ರವಾದಿಯಾಗಿ ಏಳು ವರ್ಷಗಳಾದವು. ಮಕ್ಕಾದಲ್ಲಿ ಮುಹಮ್ಮದ್ ಮತ್ತು ಶಿಷ್ಯರು ಮತಪ್ರಚಾರವನ್ನು ಮುಂದುವರಿಸಿದ್ದರು. ಹೊಸ ಮುಖಗಳು ಆಂದೋಲನದಲ್ಲಿ ಭಾಗಿಯಾಗುತ್ತಿದ್ದವು. ಉಮರ್ ಬಿನ್ ಖತ್ತಾಬ್,[೯೨] ಹಂಝ ಬಿನ್ ಅಬ್ದುಲ್ ಮುತ್ತಲಿಬ್[೯೩] ಮುಂತಾದ ಕೆಲವು ಕುರೈಷ್ ದಿಗ್ಗಜರು ಮುಹಮ್ಮದ್‌ರ ಧರ್ಮಕ್ಕೆ ಸೇರಿದರು.[೯೪] ಇದರಿಂದ ಇಸ್ಲಾಂ ಬಲಪಡೆಯಿತು. ಮುಸ್ಲಿಮರು ಸಾರ್ವಜನಿಕವಾಗಿ ತಮ್ಮ ಧರ್ಮವನ್ನು ಆಚರಿಸತೊಡಗಿದರು. ಇಸ್ಲಾಂನ ಸಂದೇಶ ಮಕ್ಕಾದ ಹೊರಗಿರುವ ಗೋತ್ರಗಳಲ್ಲಿ ಮತ್ತು ಬುಡಕಟ್ಟುಗಳಲ್ಲಿ ಪ್ರತಿಧ್ವನಿಸತೊಡಗಿತು.[೯೫] ಕುರೈಷರು ಅಸಹಾಯಕರಾಗಿದ್ದರು. ಅವರು ಮುಹಮ್ಮದ್‌ರ ಗೋತ್ರವಾದ ಬನೂ ಹಾಶಿಂ ಗೋತ್ರದ ಮುಖಂಡರೊಂದಿಗೆ ಮಾತುಕತೆ ನಡೆಸಿದರು.[೯೬] "ಮುಹಮ್ಮದ್‌ನನ್ನು ನಮಗೆ ಬಿಟ್ಟುಕೊಡಿ. ನಾವು ಅವನಿಗೆ ಏನು ಮಾಡಿದರೂ ನೀವು ಅಡ್ಡ ಬರಬಾರದು." ಆದರೆ ಬನೂ ಹಾಶಿಂ ಗೋತ್ರದವರು ಒಪ್ಪಲಿಲ್ಲ. ಅವರು ಮುಹಮ್ಮದ್‌ರಿಗೆ ಬೆಂಗಾವಲಾಗಿ ನಿಂತರು.[೯೭] ಆದರೆ ಮುಹಮ್ಮದ್‌ರ ದೊಡ್ಡಪ್ಪ ಅಬೂಲಹಬ್ ಮಾತ್ರ ಗೋತ್ರದವರಿಗೆ ವಿರುದ್ಧವಾಗಿ ಕುರೈಷರ ಜೊತೆಗೆ ಸೇರಿದರು.[೯೭]

ಬನೂ ಹಾಶಿಂ ಗೋತ್ರವು ಮುಹಮ್ಮದ್‌ರನ್ನು ಬಿಟ್ಟು ಕೊಡುವುದಿಲ್ಲ ಎಂಬುದು ಸ್ಪಷ್ಟವಾದಾಗ, ಕುರೈಷ್ ಮುಖಂಡರು ಸಭೆ ಸೇರಿ ಬನೂ ಹಾಶಿಂ ಮತ್ತು ಬನೂ ಮುತ್ತಲಿಬ್ ಗೋತ್ರದವರನ್ನು ಬಹಿಷ್ಕರಿಸಲು ತೀರ್ಮಾನಿಸಿದರು.[೯೮] "ಬನೂ ಹಾಶಿಂ ಗೋತ್ರದವರು ಮುಹಮ್ಮದ್‌ರನ್ನು ಬಿಟ್ಟುಕೊಡುವ ತನಕ ಅವರನ್ನು ವಿವಾಹವಾಗುವುದು, ಅವರೊಡನೆ ವ್ಯಾಪಾರ ಮಾಡುವುದು, ಅವರೊಡನೆ ಬೆರೆಯುವುದು, ಅವರೊಡನೆ ಕುಳಿತುಕೊಳ್ಳುವುದು ಎಲ್ಲವನ್ನೂ ಬಹಿಷ್ಕರಿಸಲಾಗಿದೆ" ಎಂದು ಘೋಷಿಸಿದರು.[೯೯] ಅದನ್ನು ಬಟ್ಟೆಯಲ್ಲಿ ಬರೆದಿಟ್ಟು ಕಅಬಾದ ಒಳಗಡೆ ತೂಗಿ ಹಾಕಿದರು.[೯೮] ಮುಹಮ್ಮದ್‌ರ ಗೋತ್ರವನ್ನು ಬಹಿಷ್ಕರಿಸುವ ವಿಷಯದಲ್ಲಿ ಇತರ ಗೋತ್ರಗಳು ಕೂಡ ಕುರೈಷರೊಂದಿಗೆ ಕೈ ಜೋಡಿಸಿದರು.

ಮುಹಮ್ಮದ್‌ರ ಕುಟುಂಬ ಮತ್ತು ಅನುಯಾಯಿಗಳು ಶಿಅಬ್ ಅಬೂತಾಲಿಬ್‌ನಲ್ಲಿ ಮೂರು ವರ್ಷಗಳ ಕಾಲ ದಿಗ್ಬಂಧನಕ್ಕೊಳಗಾದರು.[೧೦೦][೯೯] ದಿಗ್ಬಂಧನ ಮುಂದುವರಿದಂತೆ ಆಹಾರದ ಕೊರತೆಯುಂಟಾಯಿತು. ಕೆಲವು ಸಂಬಂಧಿಕರು ರಾತ್ರಿಯಲ್ಲಿ ರಹಸ್ಯವಾಗಿ ಆಹಾರಗಳನ್ನು ತಲುಪಿಸುತ್ತಿದ್ದರು ಎನ್ನುವುದನ್ನು ಬಿಟ್ಟರೆ ಅವರಿಗೆ ತಿನ್ನಲು ಆಹಾರವಿರಲಿಲ್ಲ. ಹೆಚ್ಚಿನ ಸಂದರ್ಭಗಳಲ್ಲೂ ಅವರು ಮರದ ಎಲೆಗಳನ್ನು ಮತ್ತು ಬೇರುಗಳನ್ನು ತಿಂದು ಹಸಿವು ನೀಗಿಸುತ್ತಿದ್ದರು.[೧೦೧] ಮಕ್ಕಳು ಹಸಿವಿನಿಂದ ರೋದಿಸುವುದು ಪರ್ವತದಾದ್ಯಂತ ಪ್ರತಿಧ್ವನಿಸುತ್ತಿತ್ತು.[೧೦೧] ಆದರೂ ಕುರೈಷರಿಗೆ ಕರುಣೆ ಉಕ್ಕಲಿಲ್ಲ. ಮುಹಮ್ಮದ್‌ರನ್ನು ಅವರ ಧರ್ಮದಿಂದ ಹಿಮ್ಮೆಟ್ಟಿಸುವುದೇ ಅವರ ಮುಖ್ಯ ಉದ್ದೇಶವಾಗಿತ್ತು.

ಮೂರು ವರ್ಷಗಳ ಬಳಿಕ ಕೆಲವು ಕುರೈಷ್ ಮುಖಂಡರು ಬಹಿಷ್ಕಾರದ ವಿರುದ್ಧ ತಿರುಗಿ ಬಿದ್ದರು. ಕುರೈಷರಲ್ಲಿ ಗೌರವಾನ್ವಿತ ಸ್ಥಾನದಲ್ಲಿರುವ ಹಿಶಾಂ ಬಿನ್ ಅಮ್ರ್ ಬಿನ್ ರಬೀಅ ಈ ಅನ್ಯಾಯದ ವಿರುದ್ಧ ಸಿಡಿದೆದ್ದರು.[೧೦೨][೧೦೩] ಅವರು ಇತರ ಕೆಲವು ಕುರೈಷ್ ಮುಖಂಡರನ್ನು ಸಮೀಪಿಸಿ ಬಹಿಷ್ಕಾರದ ವಿರುದ್ಧ ಧ್ವನಿಯೆತ್ತುವಂತೆ ವಿನಂತಿಸಿದರು.[೧೦೧] ಕುರೈಷರು ಸಭೆ ಸೇರಿದಾಗ ಈ ಅನ್ಯಾಯವನ್ನು ಕೊನೆಗೊಳಿಸುವುದೆಂದು ತೀರ್ಮಾನಿಸಲಾಯಿತು. ಮುತ್‌ಇಂ ಬಿನ್ ಅದೀ ಬಹಿಷ್ಕಾರದ ಘೋಷಣೆಯನ್ನು ಬರೆದ ಬಟ್ಟೆಯನ್ನು ಹರಿದು ಹಾಕಿದರು.[೧೦೪] ಆಗ ಅದರಲ್ಲಿ ದೇವರ ಹೆಸರಿನ ಹೊರತು ಇತರೆಲ್ಲಾ ಭಾಗಗಳು ಗೆದ್ದಲು ತಿಂದಿದ್ದವು. ಮುಹಮ್ಮದ್ ಮತ್ತು ಅವರ ಕುಟುಂಬದವರು ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಿದರು.[೧೦೫]

ದುಃಖದ ವರ್ಷ

[ಬದಲಾಯಿಸಿ]

ಬಹಿಷ್ಕಾರ ಕೊನೆಗೊಂಡ ಅದೇ ವರ್ಷ, ಅಂದರೆ ಮುಹಮ್ಮದ್ ಪ್ರವಾದಿಯಾದ ಹತ್ತನೇ ವರ್ಷ ರಜಬ್ ತಿಂಗಳಲ್ಲಿ[೧೦೬] ಮುಹಮ್ಮದ್‌ರ ದೊಡ್ಡಪ್ಪ ಅಬೂತಾಲಿಬ್ ನಿಧನರಾದರು. ಇಷ್ಟರ ತನಕ ತನಗೆ ಬೆನ್ನೆಲುಬಾಗಿ ನಿಂತಿದ್ದ, ಎಲ್ಲಾ ರೀತಿಯ ಕಷ್ಟಗಳಲ್ಲೂ ತನಗೆ ಆಸರೆಯಾಗಿದ್ದ ದೊಡ್ಡಪ್ಪನ ಮರಣದಿಂದ ಮುಹಮ್ಮದ್ ಅಕ್ಷರಶಃ ಉಡುಗಿಹೋದರು. ಅವರಿಗೆ ದುಃಖ ಸಹಿಸಲಾಗಲಿಲ್ಲ.[೧೦೭] ಆದರೆ ಈ ಆಘಾತದಿಂದ ಹೊರಬರುವುದಕ್ಕೆ ಮೊದಲೇ ಅವರಿಗೆ ಇನ್ನೊಂದು ಆಘಾತವು ಕಾದಿತ್ತು. ಅಬೂತಾಲಿಬ್ ನಿಧನರಾಗಿ ಕೇವಲ ಎರಡು ತಿಂಗಳುಗಳಲ್ಲೇ ಅವರ ಪತ್ನಿ ಖದೀಜ ಇಹಲೋಕಕ್ಕೆ ವಿದಾಯ ಕೋರಿದರು.[೧೦೮] ಈ ಎರಡು ಸಾವುಗಳಿಂದ ಮುಹಮ್ಮದ್ ಎಷ್ಟು ದುಃಖ ಅನುಭವಿಸಿದರೆಂದರೆ ಇತಿಹಾಸಕಾರರು ಈ ವರ್ಷವನ್ನು ದುಃಖದ ವರ್ಷ ಎಂದು ಕರೆದರು.

ತಾಯಿಫ್‌ಗೆ ಪ್ರಯಾಣ

[ಬದಲಾಯಿಸಿ]
ತಾಯಿಫ್ ನಗರದ ಸುತ್ತಲಿರುವ ಪರ್ವತಗಳು

ಅಬೂತಾಲಿಬರ ಮರಣಾನಂತರ ಕುರೈಷರು ಮುಹಮ್ಮದ್‌ರನ್ನು ಮತ್ತು ಅವರ ಅನುಯಾಯಿಗಳನ್ನು ತೀವ್ರವಾಗಿ ಹಿಂಸಿಸತೊಡಗಿದರು.[೧೦೯] ಕುರೈಷರ ಹಿಂಸೆ ತಾಳಲಾಗದೆ ಮುಹಮ್ಮದ್ ತಾಯಿಫ್‌ಗೆ ಹೋಗಿ ಆಶ್ರಯ ಪಡೆಯಲು ನಿರ್ಧರಿಸಿದರು.[೧೧೦] ತಾಯಿಫ್‌ನಲ್ಲಿ ಸಕೀಫ್ ಗೋತ್ರದವರು ವಾಸವಾಗಿದ್ದರು. ಅವರೊಡನೆ ಸಹಾಯ ಕೇಳುವುದು ಮತ್ತು ಅವರನ್ನು ಇಸ್ಲಾಂ ಧರ್ಮಕ್ಕೆ ಆಮಂತ್ರಿಸುವುದು ಮುಹಮ್ಮದ್‌ರ ಉದ್ದೇಶವಾಗಿತ್ತು.[೧೧೧] ಅವರು ತನ್ನ ಬಗ್ಗೆ ಮೃದು ನಿಲುವು ತಾಳುವರು ಎಂದು ಮುಹಮ್ಮದ್ ನಿರೀಕ್ಷಿಸಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಯಿತು.[೧೧೨]

ಶವ್ವಾಲ್ ತಿಂಗಳಲ್ಲಿ (ಕ್ರಿ.ಶ. 619 ಮೇ ಅಥವಾ ಜೂನ್ ತಿಂಗಳು)[೧೧೩] ಮುಹಮ್ಮದ್ ಮಕ್ಕಾದಿಂದ 60 ಕಿ.ಮೀ. ದೂರದಲ್ಲಿರುವ ತಾಯಿಫ್‌ಗೆ ನಡೆದುಕೊಂಡು ಹೋದರು. ಅಲ್ಲಿ ಅವರು ಸಕೀಫ್ ಗೋತ್ರದ ಮುಖಂಡರೊಡನೆ ಮಾತುಕತೆ ನಡೆಸಿ ಅವರನ್ನು ಇಸ್ಲಾಂ ಧರ್ಮಕ್ಕೆ ಆಮಂತ್ರಿಸಿದರು.[೧೧೩] ಆದರೆ ಗೋತ್ರದ ಮುಖಂಡರು ಮುಹಮ್ಮದ್‌ರ ಧರ್ಮವನ್ನು ತೀವ್ರವಾಗಿ ವಿರೋಧಿಸಿದ್ದು ಮಾತ್ರವಲ್ಲದೆ, ಅವರನ್ನು ಅಪಹಾಸ್ಯ ಮಾಡಿದರು.[೧೧೧] ಜನರನ್ನು ಅವರ ವಿರುದ್ಧ ಎತ್ತಿಕಟ್ಟಿದರು. ಮುಹಮ್ಮದ್ ಅಸಹಾಯಕರಾಗಿ ಹೊರಟು ನಿಂತಾಗ ಬೀದಿಯ ಎರಡೂ ಬದಿಗಳಲ್ಲಿ ಜನರು ಅವರ ವಿರುದ್ಧ ಘೋಷಣೆ ಕೂಗಿದರು. ಮಕ್ಕಳು ಕಲ್ಲೆಸೆದರು.[೧೧೩] ಮುಹಮ್ಮದ್‌ರ ದೇಹದಿಂದ ರಕ್ತ ಒಸರುತ್ತಿತ್ತು. ಅವರು ಅಲ್ಲೇ ಇದ್ದ ಒಂದು ಖರ್ಜೂರದ ಮರದ ಕೆಳಗೆ ಕುಸಿದು ಕುಳಿತರು.[೧೧೨] ಮಕ್ಕಾದ ಕುರೈಷರಿಗಿಂತಲೂ ತೀವ್ರವಾಗಿ ತಾಯಿಫ್‌ನವರು ಅವರನ್ನು ಹಿಂಸಿಸಿದ್ದರು. ಕಣ್ಣೀರಿನೊಂದಿಗೆ ಅವರು ದೇವರಲ್ಲಿ ಪ್ರಾರ್ಥಿಸಿದರು:[೧೧೪] "ಓ ದೇವರೇ! ನನ್ನ ಅಸಹಾಯಕತೆ, ಸಂಪನ್ಮೂಲದ ಕೊರತೆ ಮತ್ತು ಜನರು ನನ್ನನ್ನು ಹೀಯಾಳಿಸುತ್ತಿರುವುದನ್ನು ನೀನು ನೋಡುತ್ತಿಲ್ಲವೇ? ನಾನು ನನ್ನ ಬವಣೆಯನ್ನು ನಿನ್ನಲ್ಲಿ ತೋಡಿಕೊಳ್ಳುತ್ತಿದ್ದೇನೆ. ನೀನು ಕರುಣಾಮಯಿ. ನೀನು ದಬ್ಬಾಳಿಕೆಗೆ ಒಳಗಾದವರ ಸಂರಕ್ಷಕನು, ನೀನು ನನ್ನ ದೇವರು. ನೀನು ನನ್ನನ್ನು ಯಾರಿಗೆ ವಹಿಸಿಕೊಟ್ಟಿರುವೆ? ನನ್ನನ್ನು ಅಪಹಾಸ್ಯ ಮಾಡುವವರಿಗೋ? ಅಥವಾ ನನ್ನ ಮೇಲೆ ಪ್ರಾಬಲ್ಯವನ್ನು ಹೊಂದಿರುವ ನನ್ನ ಶತ್ರುವಿಗೋ? ಓ ದೇವರೇ! ನಿನಗೆ ನನ್ನಲ್ಲಿ ಕೋಪವಿಲ್ಲದಿದ್ದರೆ ನನಗೆ ಇದೆಲ್ಲಾ ದೊಡ್ಡ ವಿಷಯವೇ ಅಲ್ಲ. ನನಗೆ ನಿನ್ನ ಸಹಾಯ ಮಾತ್ರ ಸಾಕು. ನಿನ್ನ ಕೋಪ ನನ್ನ ಮೇಲೆ ಎರಗದಿರಲು ನಾನು ನಿನ್ನಲ್ಲಿ ಅಭಯ ಕೋರುತ್ತೇನೆ. ಓ ದೇವರೇ! ನನ್ನನ್ನು ಕ್ಷಮಿಸು, ನಿನ್ನಲ್ಲೇ ಅಲ್ಲದೆ ಯಾರಲ್ಲೂ ಯಾವುದೇ ಶಕ್ತಿ ಸಾಮರ್ಥ್ಯವಿಲ್ಲ."[೧೧೦][೧೧೨]

ಆಗ ದೇವರು ಮುಹಮ್ಮದ್‌ರ ಬಳಿಗೆ ಒಂದು ದೇವದೂತರನ್ನು ಕಳುಹಿಸಿದನು. ದೇವದೂತರು ಮುಹಮ್ಮದ್‌ರ ಬಳಿಗೆ ಬಂದು ತಾಯಿಫ್‌ನ ಜನರನ್ನು ನಾಶ ಮಾಡಬೇಕೇ? ಎಂದು ಕೇಳಿದಾಗ, ಮುಹಮ್ಮದ್ ಉತ್ತರಿಸಿದರು:[೧೧೫] "ಬೇಡ, ಈ ಜನರಲ್ಲಿ ದೇವರನ್ನು ಮಾತ್ರ ಆರಾಧಿಸುವಂತಹ ಜನರು ಉಂಟಾಗಲೂಬಹುದು."[೧೧೬] ಮುಹಮ್ಮದ್ ತಾಯಿಫ್‌ನಿಂದ ಭಾರವಾದ ಹೃದಯದೊಂದಿಗೆ ಮಕ್ಕಾಗೆ ಮರಳಿದರು.

ಮುಹಮ್ಮದ್ ಏಕಾಂಗಿಯಾಗಿದ್ದರು. ಅವರಿಗೆ ತಮ್ಮ ದುಃಖವನ್ನು ಹಂಚಿಕೊಳ್ಳಲು ಯಾರೂ ಇರಲಿಲ್ಲ. ತನ್ನ ಅನುಯಾಯಿಗಳಲ್ಲಿ ಒಬ್ಬಳಾದ ಖೌಲ ಬಿಂತ್ ಹಕೀಮ್‌ಳ ಸಲಹೆಯಂತೆ ಅವರು ವಿಧವೆಯಾಗಿದ್ದ ಸೌದ ಬಿಂತ್ ಝಮ್‌ಅರನ್ನು ವಿವಾಹವಾದರು. ನಂತರ ಅಬೂ ಬಕರ್‌ರ ಮಗಳು ಆಯಿಶರೊಂದಿಗೆ ಅವರ ನಿಶ್ಚಿತಾರ್ಥ ನಡೆಯಿತು.[೧೧೭]

ಆಕಾಶ ಯಾನ

[ಬದಲಾಯಿಸಿ]
ಜೆರೂಸಲೇಮ್‌ನಲ್ಲಿರುವ ಬೈತುಲ್ ಮುಕದ್ದಸ್ ಅಥವಾ ಅಲ್-ಅಕ್ಸಾ ಮಸೀದಿ. ಇಲ್ಲಿ ಮುಹಮ್ಮದ್ ಇತರ ಪ್ರವಾದಿಗಳಿಗೆ ಮುಖಂಡತ್ವ ನೀಡಿ ನಮಾಝ್ ನಿರ್ವಹಿಸಿದರು ಎಂದು ನಂಬಲಾಗುತ್ತದೆ.
ಜೆರೂಸಲೇಮ್‌ನಲ್ಲಿರುವ ಶಿಲೆಯ ಗುಮ್ಮಟದ (Dome of the Rock) ಒಳಗಿರುವ ಶಿಲೆ. ಮುಹಮ್ಮದ್ ಇಲ್ಲಿಂದ ಏಳನೇ ಆಕಾಶಕ್ಕೆ ಪ್ರಯಾಣ ಮಾಡಿದರೆಂದು ಮುಸ್ಲಿಮರು ನಂಬುತ್ತಾರೆ.

ತಾಯಿಫ್‌ನಿಂದ ಮರಳಿದ ಬಳಿಕ ಮುಹಮ್ಮದ್ ಆಕಾಶಯಾನ ಮಾಡಿದರೆಂದು ಮುಸಲ್ಮಾನರು ನಂಬುತ್ತಾರೆ. ಇದು ನಡೆದದ್ದು ಯಾವಾಗ ಎಂಬ ಬಗ್ಗೆ ಇತಿಹಾಸಕಾರರಿಗೆ ಗೊಂದಲಗಳಿವೆ.[೧೧೮] ಅದೇ ರೀತಿ ಮುಹಮ್ಮದ್ ಆಕಾಶಯಾನ ಮಾಡಿದ್ದು ದೇಹ ಸಹಿತವೋ ಅಥವಾ ಅವರ ಆತ್ಮ ಮಾತ್ರವೋ ಎಂಬ ಬಗ್ಗೆಯೂ ಗೊಂದಲಗಳಿವೆ.[೧೧೯] ಹೆಚ್ಚಿನವರ ಅಭಿಪ್ರಾಯ ಪ್ರಕಾರ ಮುಹಮ್ಮದ್ ದೇಹ ಮತ್ತು ಆತ್ಮ ಸಹಿತ ಆಕಾಶಯಾನ ಮಾಡಿದರು. ಇದು ಸಂಭವಿಸಿದ್ದು ಮುಹಮ್ಮದ್ ಪ್ರವಾದಿಯಾದ ಹತ್ತನೇ ವರ್ಷದಲ್ಲಿ. ಮೊದಲು ಅವರು ದೇವದೂತ ಗೇಬ್ರಿಯಲ್‌ರೊಡನೆ ಬುರಾಕ್ ಎನ್ನುವ ವಿಶೇಷ ಮೃಗವನ್ನು ಏರಿ ಮಕ್ಕಾದಿಂದ ಜೆರೂಸಲೇಮ್‌ನಲ್ಲಿರುವ ಬೈತುಲ್ ಮುಕದ್ದಸ್‌ಗೆ ಪ್ರಯಾಣ ಮಾಡಿದರು.[೧೨೦] ಅಲ್ಲಿ ಅವರು ಎಲ್ಲಾ ಪ್ರವಾದಿಗಳಿಗೂ ಮುಖಂಡತ್ವ ನೀಡಿ ನಮಾಝ್ ನಿರ್ವಹಿಸಿದರು.[೧೧೮] ನಂತರ ಅಲ್ಲಿಂದ ಏಳನೇ ಆಕಾಶಕ್ಕೆ ಪ್ರಯಾಣ ಮಾಡಿದರು.[೧೨೧] ಒಂದೊಂದು ಆಕಾಶದಲ್ಲೂ ಒಬ್ಬೊಬ್ಬ ಪ್ರವಾದಿಯನ್ನು ಭೇಟಿಯಾದರು. ಸ್ವರ್ಗ ಮತ್ತು ನರಕವನ್ನು ವೀಕ್ಷಿಸಿದರು. ನಂತರ ಭೂಮಿಗೆ ಬಂದರು. ಇವೆಲ್ಲವೂ ಒಂದೇ ರಾತ್ರಿಯಲ್ಲಿ ಸಂಭವಿಸಿತು ಎಂದು ಮುಸ್ಲಿಮರು ನಂಬುತ್ತಾರೆ.[೧೧೫] ಮುಸ್ಲಿಮರಿಗೆ ನಮಾಝ್ ಕಡ್ಡಾಯವಾದದ್ದು ಈ ರಾತ್ರಿ ಎಂದು ನಂಬಲಾಗುತ್ತದೆ.[]

ಮೊದಲನೇ ಅಕಬಾ ಪ್ರತಿಜ್ಞೆ

[ಬದಲಾಯಿಸಿ]

ಆಕಾಶಯಾನದ ಬಳಿಕ ಮುಹಮ್ಮದ್ ಅರೇಬಿಯಾದ ನಾನಾ ದಿಕ್ಕುಗಳಿಂದ ಮಕ್ಕಾಗೆ ಬರುವ ಅರಬ್ಬರಿಗೆ ಇಸ್ಲಾಂ ಧರ್ಮವನ್ನು ಬೋಧಿಸಲು ಆರಂಭಿಸಿದರು.[೧೨೨] ವಾರ್ಷಿಕ ಹಜ್ಜ್‌ನ ಸಮಯದಲ್ಲಿ ವಿಶೇಷ ಮುತುವರ್ಜಿ ವಹಿಸಿ ಮತಪ್ರಚಾರದಲ್ಲಿ ನಿರತರಾದರು.[೧೨೩] ಪ್ರವಾದಿಯಾದ ಹನ್ನೊಂದೇ ವರ್ಷದಲ್ಲಿ ಅವರು ಮಕ್ಕಾದ ಸಮೀಪವಿರುವ ಮಿನಾದಲ್ಲಿ ಅಕಬಾ ಎಂಬ ಸ್ಥಳದಲ್ಲಿ ಯಸ್ರಿಬ್ (ಮದೀನ) ನಿಂದ ಬಂದ ಖಝ್ರಜ್ ಗೋತ್ರದ ಆರು ಯಾತ್ರಾರ್ಥಿಗಳನ್ನು ಭೇಟಿಯಾಗಿ ಅವರಿಗೆ ಇಸ್ಲಾಂ ಧರ್ಮದ ಬಗ್ಗೆ ಬೋಧಿಸಿದರು.[೧೨೪] ಮುಹಮ್ಮದ್‌ರ ಬೋಧನೆಗಳಿಗೆ ಕಿವಿಗೊಟ್ಟ ನಂತರ ಅವರು ಪರಸ್ಪರ ಹೇಳಿದರು: "ಸಹೋದರರೇ, ನೋಡಿ! ನಮ್ಮ ಊರಿನ ಯಹೂದಿಗಳು ಒಬ್ಬ ಪ್ರವಾದಿ ಬರಲಿದ್ದಾರೆ, ಅವರೊಡನೆ ಸೇರಿ ನಾವು ನಿಮ್ಮ ವಿರುದ್ಧ ಹೋರಾಡುತ್ತೇವೆ ಎಂದು ನಮ್ಮನ್ನು ಬೆದರಿಸುತ್ತಿದ್ದರಲ್ಲವೇ? ಆ ಪ್ರವಾದಿ ಇವರೇ ಆಗಿರಬಹುದು. ಯಹೂದಿಗಳು ಅವರೊಡನೆ ಸೇರುವ ಮುನ್ನ ನಾವೇ ಅವರೊಡನೆ ಸೇರೋಣ."[೧೨೫] ಹೀಗೆ ಅವರು ಮುಹಮ್ಮದ್‌ರ ಆಮಂತ್ರಣವನ್ನು ಸ್ವೀಕರಿಸಿ ಮುಸ್ಲಿಮರಾದರು.[೧೨೬] ನಂತರ ಮದೀನಕ್ಕೆ ಹೋಗಿ ಇಸ್ಲಾಂ ಧರ್ಮದ ಪ್ರಚಾರ ಮಾಡಿದರು. ಮದೀನದ ಪ್ರತಿಯೊಂದು ಮನೆಯಲ್ಲೂ ಮುಹಮ್ಮದ್ ಮನೆಮಾತಾದರು.[೧೨೭]

ಮಕ್ಕಾದ ಬಳಿಯಿರುವ ಮಿನಾ ಪ್ರದೇಶ. ಇಲ್ಲಿ ಅಕಬಾ ಎಂಬ ಸ್ಥಳದಲ್ಲಿ ಮುಹಮ್ಮದ್ ಯಸ್ರಿಬ್ (ಮದೀನ) ನಿಂದ ಬಂದ ಖಝ್ರಜ್ ಗೋತ್ರದ ಆರು ಯಾತ್ರಾರ್ಥಿಗಳನ್ನು ಭೇಟಿಯಾಗಿ ಅವರಿಗೆ ಇಸ್ಲಾಂ ಧರ್ಮದ ಬಗ್ಗೆ ಬೋಧಿಸಿದರು.

ಮುಂದಿನ ವರ್ಷ ಹಜ್ಜ್‌ನ ಸಮಯದಲ್ಲಿ ಮದೀನದಿಂದ ಹನ್ನೆರಡು ಮಂದಿ[೧೨೮] ಮಕ್ಕಾಗೆ ಬಂದು ಅಕಬಾದಲ್ಲಿ ರಹಸ್ಯವಾಗಿ ಮುಹಮ್ಮದ್‌ರನ್ನು ಭೇಟಿಯಾದರು.[೧೨೯] ಅವರಿಗೆ ಅವರು, "ನಾವು ಏಕೈಕ ದೇವರನ್ನು ಮಾತ್ರ ಆರಾಧಿಸುತ್ತೇವೆ, ನಾವು ಕಳ್ಳತನ ಮಾಡುವುದಿಲ್ಲ, ವ್ಯಭಿಚಾರ ಮಾಡುವುದಿಲ್ಲ ಮತ್ತು ಮಕ್ಕಳನ್ನು ಕೊಲ್ಲುವುದಿಲ್ಲ, ಎಲ್ಲಾ ಸತ್ಕರ್ಮಗಳಲ್ಲೂ ಮುಹಮ್ಮದ್‌ರನ್ನು ಹಿಂಬಾಲಿಸುತ್ತೇವೆ" ಎಂದು ಪ್ರತಿಜ್ಞೆ ಮಾಡಿದರು.[೧೩೦] ಇದನ್ನು ಒಂದನೇ ಅಕಬಾ ಪ್ರತಿಜ್ಞೆ ಎಂದು ಕರೆಯಲಾಗುತ್ತದೆ. ಮುಹಮ್ಮದ್ ಅವರೊಡನೆ ತಮ್ಮ ಶಿಷ್ಯ ಮುಸ್‌ಅಬ್ ಬಿನ್ ಉಮೈರ್‌ರನ್ನು ಕಳುಹಿಸಿಕೊಟ್ಟರು. ಇಸ್ಲಾಂ ಮದೀನದಲ್ಲಿ ಹಬ್ಬತೊಡಗಿತು. ಮದೀನದ ಪ್ರತಿಯೊಂದು ಮನೆಯಲ್ಲೂ ಒಬ್ಬರು ಅಥವಾ ಇಬ್ಬರು ಮುಸ್ಲಿಮರಿದ್ದರು.[೧೩೧] ಸಅದ್ ಬಿನ್ ಮುಆದ್, ಉಸೈದ್ ಬಿನ್ ಹುದೈರ್ ಮುಂತಾದ ಮದೀನದ ದಿಗ್ಗಜರು ಕೂಡ ಇಸ್ಲಾಂ ಸ್ವೀಕರಿಸಿದರು.[೧೩೨]

ಎರಡನೇ ಅಕಬಾ ಪ್ರತಿಜ್ಞೆ

[ಬದಲಾಯಿಸಿ]

ಮುಂದಿನ ವರ್ಷ ಹಜ್ಜ್ ಸಮಯದಲ್ಲಿ 73 ಪುರುಷರು ಮತ್ತು ಇಬ್ಬರು ಮಹಿಳೆಯರು[೧೩೧] ಮುಹಮ್ಮದ್‌ರನ್ನು ಅಕಬಾದಲ್ಲಿ ರಹಸ್ಯವಾಗಿ ಭೇಟಿಯಾದರು.[೧೩೩] ಅಲ್ಲಿ ಮುಹಮ್ಮದ್ ಅವರೊಡನೆ ಹೀಗೆ ಪ್ರತಿಜ್ಞೆ ಮಾಡಿಸಿದರು: "ನೀವು ನಾನು ಹೇಳಿದಂತೆ ಕೇಳುತ್ತೀರಿ. ಕಷ್ಟದಲ್ಲೂ ಸುಖದಲ್ಲೂ ದಾನಧರ್ಮ ಮಾಡುತ್ತೀರಿ, ಜನರಿಗೆ ಸದಾಚಾರವನ್ನು ಬೋಧಿಸುತ್ತೀರಿ ಮತ್ತು ದುರಾಚಾರವನ್ನು ವಿರೋಧಿಸುತ್ತೀರಿ, ದೇವರ ವಿಷಯದಲ್ಲಿ ನೀವು ಯಾರನ್ನೂ ಭಯಪಡುವುದಿಲ್ಲ ಮತ್ತು ನಾನು ಮದೀನಕ್ಕೆ ಬಂದರೆ ನೀವು ನಿಮ್ಮ ಮಡದಿ ಮಕ್ಕಳನ್ನು ರಕ್ಷಿಸುವಂತೆ ನನ್ನನ್ನು ರಕ್ಷಿಸುತ್ತೀರಿ."[೧೩೪] ಎಲ್ಲರೂ ಈ ನಿಯಮಗಳನ್ನು ಒಪ್ಪಿ ಪ್ರತಿಜ್ಞೆ ಮಾಡಿದರು. ಇದನ್ನು ಎರಡನೇ ಅಕಬಾ ಪ್ರತಿಜ್ಞೆ ಎನ್ನಲಾಗುತ್ತದೆ. ಮುಹಮ್ಮದ್ ಅವರಿಂದ ಹನ್ನೆರಡು ಮಂದಿಯನ್ನು ಮುಖಂಡರಾಗಿ ಆರಿಸಿದರು.[೧೩೫] ಒಂಬತ್ತು ಜನರು ಖಝ್ರಜ್ ಗೋತ್ರದವರು ಮತ್ತು ಮೂರು ಮಂದಿ ಔಸ್ ಗೋತ್ರದವರು.[೧೩೬]

ಮದೀನಕ್ಕೆ ಹಿಜ್ರ (ವಲಸೆ)

[ಬದಲಾಯಿಸಿ]

ಎರಡನೇ ಅಕಬಾ ಪ್ರತಿಜ್ಞೆಯ ಬಳಿಕ ಮುಹಮ್ಮದ್ ಮಕ್ಕಾದಲ್ಲಿರುವ ತನ್ನ ಅನುಯಾಯಿಗಳೊಡನೆ ಮದೀನಕ್ಕೆ ವಲಸೆ ಹೋಗಲು ಆಜ್ಞಾಪಿಸಿದರು.[೧೩೭] ಮುಸ್ಲಿಮರು ಮದೀನಕ್ಕೆ ಹಿಜ್ರ ಹೊರಟರು.[೧೩೮] ಆದರೆ ಕುರೈಷರು ಅವರನ್ನು ಅಷ್ಟು ಸುಲಭವಾಗಿ ಮಕ್ಕಾ ತೊರೆಯಲು ಬಿಡಲಿಲ್ಲ. ಅಬೂ ಸಲಮರಿಗೆ ತಮ್ಮ ಪತ್ನಿ ಮಕ್ಕಳನ್ನು ತೊರೆದು ಹೋಗಬೇಕಾಯಿತು.[೧೩೯] ಸುಹೈಬ್‌ರಿಗೆ ತಮ್ಮ ಸಂಪೂರ್ಣ ಆಸ್ತಿಯನ್ನು ತ್ಯಜಿಸಿ ಹೋಗಬೇಕಾಯಿತು.[೧೪೦] ಹೀಗೆ ಮುಸಲ್ಮಾನರು ಬಹಳ ತ್ಯಾಗಗಳನ್ನು ಸಹಿಸಿ ಮದೀನಕ್ಕೆ ವಲಸೆ ಹೋದರು. ಕೊನೆಗೆ ಮುಹಮ್ಮದ್ ಮತ್ತು ಅವರು ಆಪ್ತ ಸಂಗಡಿಗರು ಮಾತ್ರ ಮಕ್ಕಾದಲ್ಲಿ ಉಳಿದರು.[೧೪೧]

ಮುಹಮ್ಮದ್ ಮದೀನಕ್ಕೆ ಹೊರಟಿದ್ದಾರೆಂಬ ಸುದ್ದಿ ಕುರೈಷರಿಗೆ ತಿಳಿದಾಗ ಅವರು ಯಾವುದೇ ಹಂತದಲ್ಲಾದರೂ ಅದನ್ನು ತಡೆಯಬೇಕೆಂದು ನಿರ್ಧರಿಸಿದರು.[೧೪೨] ಏಕೆಂದರೆ ಮುಹಮ್ಮದ್ ಮದೀನಕ್ಕೆ ತೆರಳಿ ಅಲ್ಲಿ ಅವರ ಆಂದೋಲನ ಪ್ರಬಲವಾದರೆ ಅದರಿಂದ ತಮಗೆ ಸಮಸ್ಯೆಯಿದೆ ಮತ್ತು ಮದೀನಕ್ಕೆ ಹೋಗಿ ಅವರನ್ನು ಸೋಲಿಸುವುದು ಅಷ್ಟು ಸುಲಭವಲ್ಲ ಎಂದು ಅವರಿಗೆ ತಿಳಿದಿತ್ತು. ಅವರು ಸಭೆ ಸೇರಿ ಸಮಾಲೋಚನೆ ಮಾಡಿದರು.[೧೪೩] ಕೊನೆಗೆ ಎಲ್ಲಾ ಗೋತ್ರಗಳಿಂದ ಒಬ್ಬೊಬ್ಬರು ಸೇರಿ ಎಲ್ಲರೂ ಒಟ್ಟಿಗೆ ಮುಹಮ್ಮದ್‌ರನ್ನು ಕೊಲೆ ಮಾಡುವುದೆಂದು ಅವರು ತೀರ್ಮಾನಿಸಿದರು. ಏಕೆಂದರೆ ಎಲ್ಲಾ ಗೋತ್ರದವರು ಸೇರಿ ಕೊಂದರೆ ಕೊಲೆಯ ಆರೋಪವು ಎಲ್ಲಾ ಗೋತ್ರಗಳಿಗೂ ಅಂಟುವುದರಿಂದ, ಮುಹಮ್ಮದ್‌ರ ಗೋತ್ರದವರಿಗೆ ಇವರೆಲ್ಲರ ಮೇಲೆ ಸೇಡು ತೀರಿಸಿಕೊಳ್ಳಲು ಸಾಧ್ಯವಿಲ್ಲ.[೧೪೪]

ಮಕ್ಕಾದಿಂದ 5 ಕಿ.ಮೀ. ದೂರದ ಒಂದು ಪರ್ವತದಲ್ಲಿರುವ ಸೌರ್ ಗುಹೆ. ಮುಹಮ್ಮದ್ ಮತ್ತು ಅಬೂಬಕರ್ ಮೂರು ದಿನಗಳ ಕಾಲ ಈ ಗುಹೆಯಲ್ಲಿ ಅಡಗಿದ್ದರು.

ಕುರೈಷರ ಸಂಚು ಮುಹಮ್ಮದ್‌ರಿಗೆ ತಿಳಿಯಿತು. ಅಥವಾ ದೇವರು ಅದನ್ನು ಅವರಿಗೆ ತಿಳಿಸಿದನು.[೧೪೫] ಮುಹಮ್ಮದ್ ತನ್ನ ಆಪ್ತ ಸಂಗಡಿಗ ಅಬೂ ಬಕರ್‌ರನ್ನು ಕರೆದು ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಲು ಹೇಳಿದರು. ಆ ರಾತ್ರಿ ಕುರೈಷರು ಮುಹಮ್ಮದ್‌ರ ಮನೆಯನ್ನು ಸುತ್ತುವರಿದರು.[೧೪೬] ಮುಹಮ್ಮದ್ ತಾನು ಮಲಗುವ ಸ್ಥಳದಲ್ಲಿ ಅಲಿ ಬಿನ್ ಅಬೂತಾಲಿಬ್‌ರನ್ನು ಮಲಗಿಸಿ[೧೪೭] ಕುರೈಷರಿಗೆ ತಿಳಿಯದಂತೆ ಮನೆಯಿಂದ ಹೊರ ಬಿದ್ದರು.[೧೪೮] ಅವರು ಕುರೈಷರ ಕಣ್ಣೆದುರೇ ಅವರ ಕಣ್ಣಿಗೆ ಮಣ್ಣೆರಚಿ ಹೊರಟರು ಎಂದು ಕೂಡ ಹೇಳಲಾಗುತ್ತದೆ.[೧೪೫] ಬೆಳಗಾದರೂ ಮುಹಮ್ಮದ್ ಮಲಗಿದಲ್ಲಿಂದ ಏಳದಿರುವುದನ್ನು ಕಂಡು ಸಂಶಯದಿಂದ ಕುರೈಷರು ಒಳಹೋಗಿ ನೋಡಿದಾಗ ಅದು ಅಲಿ ಬಿನ್ ಅಬೂತಾಲಿಬ್ ಆಗಿದ್ದರು. ಮುಹಮ್ಮದ್ ತಪ್ಪಿಸಿಕೊಂಡಿದ್ದರು. ಇದು ನಡೆದದ್ದು12 ಅಥವಾ 13ನೇ ಸಪ್ಟೆಂಬರ್ 622.[೧೪೬]

ಮುಹಮ್ಮದ್ ನೇರವಾಗಿ ತನ್ನ ಸಂಗಡಿಗ ಅಬೂ ಬಕರ್ ಬಳಿಗೆ ಹೋದರು. ಅಬೂ ಬಕರ್ ಆಗಲೇ ಪ್ರಯಾಣಕ್ಕೆ ಎರಡು ಒಂಟೆಗಳನ್ನು ಸಿದ್ಧಪಡಿಸಿದ್ದರು. ಮುಹಮ್ಮದ್ ಮತ್ತು ಅಬೂ ಬಕರ್ ಮಕ್ಕಾದಿಂದ 5 ಕಿ.ಮೀ. ದೂರದಲ್ಲಿರುವ ಒಂದು ಪರ್ವತದಲ್ಲಿರುವ ಸೌರ್ ಗುಹೆಯೊಳಗೆ ಸೇರಿಕೊಂಡರು.[೧೪೯] ಅವರು ಮೂರು ದಿನ ಆ ಗುಹೆಯಲ್ಲೇ ತಂಗಿದರು. ಅಬೂ ಬಕರ್‌ರ ಮಗ ಅಬ್ದುಲ್ಲಾ ಅವರಿಗೆ ಮಕ್ಕಾದ ಸುದ್ದಿಯನ್ನು ತಲುಪಿಸುತ್ತಿದ್ದರು.[೧೪೯] ಆಮಿರ್ ಬಿನ್ ಫುಹೈರ ಒಂಟೆಯ ಹಾಲನ್ನು ಕರೆದು ರಾತ್ರಿ ವೇಳೆಯಲ್ಲಿ ಅವರಿಗೆ ತಲುಪಿಸುತ್ತಿದ್ದರು. ಅಬೂ ಬಕರ್‌ರ ಮಗಳು ಅಸ್ಮಾ ಅವರಿಗೆ ರಾತ್ರಿ ಹೊತ್ತಿನಲ್ಲಿ ಊಟ ತಲುಪಿಸುತ್ತಿದ್ದರು.[೧೫೦] ಎಲ್ಲವೂ ರಹಸ್ಯವಾಗಿಯೇ ನಡೆಯುತ್ತಿತ್ತು.

ಮುಹಮ್ಮದ್ ತಪ್ಪಿಸಿಕೊಂಡ ಸುದ್ದಿ ತಿಳಿದಾಗ ಕುರೈಷರು ನಾಲ್ಕೂ ದಿಕ್ಕಿಗೆ ಆಳುಗಳನ್ನು ಕಳುಹಿಸಿದರು. ಮುಹಮ್ಮದ್‌ರನ್ನು ಹಿಡಿದು ತಂದವರಿಗೆ 100 ಒಂಟೆಗಳ ಬಹುಮಾನವನ್ನು ಘೋಷಿಸಿದರು.[೧೫೧] ಬಹುಮಾನದ ಆಸೆಯಿಂದ ಜನರು ಎಲ್ಲಾ ಕಡೆ ಮುಹಮ್ಮದ್‌ರನ್ನು ಹುಡುಕತೊಡಗಿದರು. ಅವರು ಹುಡುಕುತ್ತಾ ಗುಹೆಯ ಬಳಿಗೂ ಬಂದರು. ಆದರೆ ಅದೃಷ್ಟವಶಾತ್ ಅವರು ಮುಹಮ್ಮದ್‌ರನ್ನು ನೋಡಲಿಲ್ಲ.[೧೫೨]

ಮೂರು ದಿನಗಳ ನಂತರ ಮಕ್ಕಾದ ಜನರ ಆವೇಶ ತಣಿದಾಗ, ಮುಹಮ್ಮದ್ ಮತ್ತು ಅಬೂ ಬಕರ್ ಮದೀನದ ದಾರಿ ಹಿಡಿದರು.[೧೫೦] ದಾರಿ ಮಧ್ಯೆ ಸುರಾಕ ಬಿನ್ ಮಾಲಿಕ್ ಎಂಬವರು ಮುಹಮ್ಮದ್‌ರನ್ನು ಅಟ್ಟಿಸಿಕೊಂಡು ಬಂದರು. ಆದರೆ ಅವರಿಗೂ ಮುಹಮ್ಮದ್‌ರನ್ನು ಹಿಡಿಯಲಾಗಲಿಲ್ಲ.[೧೫೩] ಅವರು ಮೂರು ಬಾರಿ ಮುಹಮ್ಮದ್‌ರನ್ನು ಹಿಡಿಯಲು ಪ್ರಯತ್ನಿಸಿದಾಗಲೂ ಅವರ ಕುದುರೆ ಮುಗ್ಗರಿಸಿ ಬಿದ್ದು ಅದರ ಕಾಲು ನೆಲದಲ್ಲಿ ಹೂತುಹೋಯಿತು ಎಂದು ಕೆಲವರು ಹೇಳಿದ್ದಾರೆ.[೧೫೪][೧೫೫]

ಮುಹಮ್ಮದ್ ಮದೀನದಲ್ಲಿ

[ಬದಲಾಯಿಸಿ]
ಮದೀನದ ಕುಬಾದಲ್ಲಿರುವ ಕುಬಾ ಮಸೀದಿ. ಮುಹಮ್ಮದ್ ಮದೀನಕ್ಕೆ ಬಂದ ನಂತರ ನಿರ್ಮಿಸಿದ ಮೊದಲ ಮಸೀದಿ

ಮುಹಮ್ಮದ್ ರಬೀಉಲ್ ಅವ್ವಲ್ 8 ಸೋಮವಾರ (23 ಸೆಪ್ಟೆಂಬರ್ 622) ಕುಬಾ ತಲುಪಿದರು.[೧೫೬] ಮದೀನದ ಜನರು ದಿನಾಲು ಬೆಳಗ್ಗೆ ಸೂರ್ಯ ಆಗಸಕ್ಕೇರುವ ತನಕ ಮುಹಮ್ಮದ್‌ರಿಗಾಗಿ ಕಾಯುತ್ತಿದ್ದರು.[೧೫೭] ಮುಹಮ್ಮದ್‌ರ ಆಗಮಿಸಿಲ್ಲ ಎಂದು ಖಚಿತವಾಗುವಾಗ ಅವರು ನಿರಾಸೆಯಿಂದ ಹಿಂದಿರುಗುತ್ತಿದ್ದರು. ಹೀಗೆ ಒಂದಿನ ಅವರು ನಿರಾಸೆಯಿಂದ ಹಿಂದಿರುಗಿದರು. ಆದರೆ ಸ್ವಲ್ಪ ಹೊತ್ತಿನಲ್ಲಿ ಒಬ್ಬ ಯಹೂದಿ ಅವರನ್ನು ಕೂಗಿ ಕರೆದು ಮುಹಮ್ಮದ್ ಬರುತ್ತಿದ್ದಾರೆ ಎಂದರು.[೧೫೮] ಜನರು ಮುಹಮ್ಮದ್‌ರನ್ನು ಸ್ವಾಗತಿಸಲು ಧಾವಿಸಿ ಬಂದರು.[೧೫೯]

ಮುಹಮ್ಮದ್ ಗುರವಾರ ತನಕ ನಾಲ್ಕು ದಿನಗಳ ಕಾಲ ಕುಬಾದಲ್ಲಿ ತಂಗಿದರು.[೧೬೦] ನಂತರ ಶುಕ್ರವಾರ ಬೆಳಗ್ಗೆ ಅಲ್ಲಿಂದ ಮದೀನಕ್ಕೆ ಹೊರಟು ಬನೂ ಸಲೀಂ ಬಿನ್ ಔಫ್ ಗೋತ್ರದವರ ಬಳಿಗೆ ತಲುಪಿ ಅಲ್ಲಿ ಶುಕ್ರವಾರದ ನಮಾಝ್ ನಿರ್ವಹಿಸಿದರು.[೧೬೧] ಮುಹಮ್ಮದ್ ತನ್ನ ಮನೆಯಲ್ಲಿ ತಂಗಬೇಕೆಂದು ಮದೀನದ ಪ್ರತಿಯೊಬ್ಬರೂ ಬಯಸುತ್ತಿದ್ದರು. ಅವರು ಅದಕ್ಕಾಗಿ ಒಂಟೆಯ ಲಗಾಮು ಹಿಡಿದಾಗ ಮುಹಮ್ಮದ್ ಹೇಳಿದರು: "ಅದನ್ನು ಅದರ ಪಾಡಿಗೆ ಬಿಟ್ಟುಬಿಡಿ. ಎಲ್ಲಿ ಹೋಗಿ ಮಂಡಿಯೂರಬೇಕೆಂದು ಅದಕ್ಕೆ ಗೊತ್ತಿದೆ."[೧೬೧] ಒಂಟೆ ಬನೂ ಮಾಲಿಕ್ ಬಿನ್ ನಜ್ಜಾರ್ ಗೋತ್ರದವರ ಸ್ಥಳದಲ್ಲಿ ಮಂಡಿಯೂರಿತು. ಆ ಸ್ಥಳ ಬನೂ ನಜ್ಜಾರ್ ಗೋತ್ರದ ಇಬ್ಬರು ಅನಾಥ ಬಾಲಕರಿಗೆ ಸೇರಿತ್ತು.[೧೬೨] ಮುಹಮ್ಮದ್ ಅಬೂ ಅಯ್ಯೂಬ್ ಬಿನ್ ಝೈದ್‌ರ ಮನೆಯಲ್ಲಿ ತಂಗಿದರು.[೧೬೧]

ಮಸೀದಿ ನಿರ್ಮಾಣ

[ಬದಲಾಯಿಸಿ]
ಮದೀನಾ ಮಹಾ ಮಸೀದಿಯ ರಾತ್ರಿ ನೋಟ. ಇದು ಮುಹಮ್ಮದ್ ಸ್ವತಃ ಕಟ್ಟಿದ ಮಸೀದಿ. ಇದನ್ನು ಮಸ್ಜಿದ್ ನಬವಿ (ಪ್ರವಾದಿಯ ಮಸೀದಿ) ಎಂದು ಕರೆಯಲಾಗುತ್ತದೆ.

ಮುಹಮ್ಮದ್ ಆ ಇಬ್ಬರು ಅನಾಥ ಬಾಲಕರನ್ನು ಕರೆಸಿ ಸ್ಥಳದ ಬೆಲೆಯನ್ನು ತಿಳಿಸಲು ಹೇಳಿದರು.[೧೬೩] ಬಾಲಕರು ಉಚಿತವಾಗಿ ಕೊಡುತ್ತೇವೆಂದು ಹೇಳಿದಾಗ ಮುಹಮ್ಮದ್ ಒಪ್ಪಲಿಲ್ಲ. ಅವರು ಆ ಸ್ಥಳವನ್ನು ಹಣ ಕೊಟ್ಟು ಖರೀದಿಸಿದರು.[೧೬೪] ನಂತರ ತಮ್ಮ ಅನುಯಾಯಿಗಳ ಜೊತೆಗೆ ಅಲ್ಲಿ ಮಸೀದಿ ನಿರ್ಮಿಸಿದರು. ಮುಹಮ್ಮದ್ ಸ್ವತಃ ಕಲ್ಲುಗಳನ್ನು ಹೊತ್ತು ತರುತ್ತಿದ್ದರು.[೧೬೪] ಮಸೀದಿ ಮತ್ತು ಅದರ ಪಕ್ಕದಲ್ಲಿ ತನಗೆ ಮನೆ ನಿರ್ಮಾಣವಾಗುವ ತನಕ ಸುಮಾರು ಏಳು ತಿಂಗಳುಗಳ ಕಾಲ ಮುಹಮ್ಮದ್ ಅಬೂ ಅಯ್ಯೂಬ್‌ರ ಮನೆಯಲ್ಲೇ ತಂಗಿದ್ದರು.[೧೬೧] ಮಕ್ಕಾದಲ್ಲಿದ್ದ ಮುಹಮ್ಮದ್‌ರ ಅನುಯಾಯಿಗಳೆಲ್ಲರೂ ಮದೀನಕ್ಕೆ ವಲಸೆ ಬಂದರು. ಇವರನ್ನು ಮುಹಾಜಿರ್ ಎಂದು ಕರೆಯಲಾಗುತ್ತದೆ. ಮದೀನದಲ್ಲಿ ಅವರಿಗೆ ಊಟ-ವಸತಿಯ ವ್ಯವಸ್ಥೆ ಮಾಡಿಕೊಟ್ಟವರನ್ನು ಅನ್ಸಾರ್ ಎಂದು ಕರೆಯಲಾಗುತ್ತದೆ.[೧೬೫]

ಮುಹಮ್ಮದ್ ಮುಹಾಜಿರ್ ಮತ್ತು ಅನ್ಸಾರ್‌ಗಳ ನಡುವೆ ಭಾತೃತ್ವವನ್ನು ಸ್ಥಾಪಿಸಿದರು.[೧೬೬] ಅನ್ಸಾರ್‌ಗಳು ತಮ್ಮಲ್ಲಿರುವ ಎಲ್ಲವನ್ನೂ ಮುಹಾಜಿರ್‌ಗಳೊಡನೆ ಹಂಚಿದರು. ಮುಹಮ್ಮದ್ ಮದೀನದಲ್ಲಿದ್ದ ಯಹೂದಿಗಳೊಡನೆ ಕೂಡ ಕೆಲವು ಕರಾರುಗಳನ್ನು ಮಾಡಿಕೊಂಡರು.[೧೬೭] ಇಸ್ಲಾಂ ಮದೀನದಲ್ಲಿ ವ್ಯಾಪಿಸತೊಡಗಿತು. ಮದೀನದಲ್ಲಿ ಅಧಿಕಾರ ಗಳಿಸಿ ರಾಜನಂತೆ ಆಳಬೇಕೆಂದು ಕನಸು ಕಾಣುತ್ತಿದ್ದ ಅಬ್ದುಲ್ಲಾ ಬಿನ್ ಉಬೈ ರ ಕನಸು ಮುಹಮ್ಮದ್‌ರ ಆಗಮನದಿಂದ ನುಚ್ಚುನೂರಾಯಿತು. ಅವರು ಮನದೊಳಗೇ ರಹಸ್ಯವಾಗಿ ಮುಹಮ್ಮದ್‌ರ ವಿರುದ್ಧ ಕತ್ತಿ ಮಸೆಯತೊಡಗಿದರು.[೧೬೮] ಆದರೆ ನೇರವಾಗಿ ಮುಹಮ್ಮದ್‌ರನ್ನು ಎದುರಿಸುವ ಧೈರ್ಯ ಅವರಿಗಿರಲಿಲ್ಲ. ಆದ್ದರಿಂದ ಅವರು ಮತ್ತು ಅವರ ಅನುಯಾಯಿಗಳು ತೋರಿಕೆಗೆ ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು.[೧೬೯] ಆದರೆ ಮನಸ್ಸಿನಲ್ಲಿ ಅವರು ಇಸ್ಲಾಂ ಧರ್ಮವನ್ನು ದ್ವೇಷಿಸುತ್ತಿದ್ದರು. ಅವರು ಕಪಟವಿಶ್ವಾಸಿಗಳಾಗಿದ್ದರು. ಕೆಲವು ಯಹೂದಿಗಳು ಕೂಡ ಅವರೊಡನೆ ಸೇರಿಕೊಂಡರು.[೧೭೦] ಮುಹಮ್ಮದ್ ಮತ್ತು ಅನುಯಾಯಿಗಳು 16 ತಿಂಗಳುಗಳ ಕಾಲ ಜೆರೂಸಲೇಮ್‌ಗೆ ಮುಖಮಾಡಿ ನಮಾಝ್ ನಿರ್ವಹಿಸಿದರು. ನಂತರ ಅವರಿಗೆ ದೇವರಿಂದ ಮಕ್ಕಾಗೆ ತಿರುಗಬೇಕೆಂಬ ಆಜ್ಞೆ ಬಂತು.[೧೭೧] ಅಝಾನ್ ಕೊಡುವ ಪದ್ಧತಿ ಆರಂಭವಾಯಿತು.[೧೭೨] ಮುಹಮ್ಮದ್ ಮದೀನದಲ್ಲಿ ಇಸ್ಲಾಮಿಕ್ ಸಾಮ್ರಾಜ್ಯ ನಿರ್ಮಿಸುವತ್ತ ತಮ್ಮ ದೃಷ್ಟಿಯನ್ನು ಕೇಂದ್ರೀಕರಿಸಿದರು. ಹಿಜರಿ ಎರಡನೇ ವರ್ಷದಲ್ಲಿ ಉಪವಾಸ ಕಡ್ಡಾಯವಾಯಿತು.[೧೭೩]

ಯುದ್ಧಗಳು

[ಬದಲಾಯಿಸಿ]

ಬದ್ರ್ ಯುದ್ಧ

[ಬದಲಾಯಿಸಿ]
ಬದ್ರ್ ಯುದ್ಧ ನಡೆದ ಸ್ಥಳ

ಕುರೈಷರ ಮುಖಂಡರಲ್ಲಿ ಒಬ್ಬರಾದ ಅಬೂ ಸುಫ್ಯಾನ್ ದೊಡ್ಡ ಮಟ್ಟದ ಸರಕುಗಳ ಸಹಿತ ವರ್ತಕ ತಂಡದೊಂದಿಗೆ ಸಿರಿಯಾದಿಂದ ಹಿಂದಿರುಗಿ ಬರುತ್ತಿದ್ದಾರೆಂಬ ವಾರ್ತೆ ಮುಹಮ್ಮದ್‌ಗೆ ತಿಳಿಯಿತು.[೧೭೪] ಈ ತಂಡದಲ್ಲಿ 40 ಮಂದಿ ಪಹರೆಗಾರರು ಮತ್ತು 50 ಸಾವಿರ ಚಿನ್ನದ ನಾಣ್ಯಗಳಿದ್ದವು.[೧೭೫] ಇದರ ಮೇಲೆ ದಾಳಿ ಮಾಡಿದರೆ ಅದು ಕುರೈಷರ ಆರ್ಥಿಕತೆಯನ್ನು ಸಂಪೂರ್ಣವಾಗಿ ಸರ್ವನಾಶ ಮಾಡುತ್ತದೆ ಎಂದು ಭಾವಿಸಿ ಮುಹಮ್ಮದ್ ತನ್ನ ಅನುಯಾಯಿಗಳೊಡನೆ ಆ ವರ್ತಕ ತಂಡದ ಮೇಲೆ ದಾಳಿ ಮಾಡಲು ನಿರ್ಧರಿಸಿದರು. ಮುಹಮ್ಮದ್‌ರ ಉದ್ದೇಶ ಯುದ್ಧ ಮಾಡುವುದೋ ಅವರನ್ನು ಕೊಲ್ಲುವುದೋ ಆಗಿರಲಿಲ್ಲ. ಬದಲಾಗಿ ಕುರೈಷರನ್ನು ಮಣಿಸುವುದಾಗಿತ್ತು.[೧೭೬]

ಆದರೆ ಮುಸ್ಲಿಮರು ತನ್ನ ಮೇಲೆ ದಾಳಿ ಮಾಡಲು ಹೊಂಚು ಹಾಕಿದ್ದಾರೆಂಬ ಸುದ್ದಿ ಅಬೂ ಸುಫ್ಯಾನ್‌ಗೆ ತಿಳಿಯಿತು. ಅವರು ತಕ್ಷಣ ಮಕ್ಕಾಗೆ ದೂತರನ್ನು ಕಳುಹಿಸಿ ಸಹಾಯ ಕೋರಿದರು.[೧೭೪] ಮಕ್ಕಾದ ವರ್ತಕ ತಂಡದ ಮೇಲೆ ಮುಹಮ್ಮದ್ ದಾಳಿ ಮಾಡುತ್ತಿದ್ದಾರೆಂಬ ಸುದ್ದಿ ತಿಳಿದಾಗ ಮಕ್ಕಾದ ಕುರೈಷ್ ಮುಖಂಡರು ಕೆಂಡಾಮಂಡಲವಾದರು. ಮುಸ್ಲಿಮರಿಗೆ ಪಾಠ ಕಲಿಸುವುದಕ್ಕಾಗಿ ಅವರು ತಕ್ಷಣ ಒಂದು ದೊಡ್ಡ ಸೈನ್ಯವನ್ನು ಜಮಾವಣೆ ಮಾಡಿದರು.[೧೭೭] ಅಬೂಲಹಬ್ ಹೊರತುಪಡಿಸಿ ಅವರ ಎಲ್ಲಾ ಅತಿರಥ ಮಹಾರಥರು ಯುದ್ಧದಲ್ಲಿ ಪಾಲ್ಗೊಂಡರು.[೧೭೮]

ಇತ್ತ ಕುರೈಷರು ದೊಡ್ಡ ಸೈನ್ಯದೊಂದಿಗೆ ಮುಸ್ಲಿಮರ ಮೇಲೆ ದಂಡೆತ್ತಿ ಬರುತ್ತಿದ್ದಾರೆಂಬ ಸುದ್ದಿ ತಿಳಿದು ಮುಹಮ್ಮದ್‌ ಅನುಯಾಯಿಗಳೊಡನೆ ಸಮಾಲೋಚನೆ ಮಾಡಿದರು.[೧೭೯] ಮುಹಾಜಿರರು ಅವರಿಗೆ ಸಂಪೂರ್ಣ ಬೆಂಬಲವನ್ನು ಘೋಷಿಸಿದರು. ಮುಹಮ್ಮದ್ ಅನ್ಸಾರರ (ಮದೀನಾ ನಿವಾಸಿಗಳ) ಕಡೆಗೆ ನೋಡಿದರು. ಅನ್ಸಾರರು ಮದೀನಾದ ಗಡಿಯೊಳಗೆ ಮಾತ್ರ ಮುಹಮ್ಮದ್‌ಗೆ ಸಹಾಯ ಮಾಡುವ ಒಪ್ಪಂದ ಮಾಡಿದ್ದರು.[೧೮೦] ಆದರೆ ಈಗ ಅವರು ಮದೀನಾದ ಗಡಿಯ ಹೊರಗಿದ್ದರು. ಆದರೆ ಸಅದ್ ಬಿನ್ ಮುಆದ್‌ರಂತಹ ಅನ್ಸಾರ್ ಮುಖಂಡರು ತಮ್ಮ ಬೇಷರತ್ ಬೆಂಬಲವನ್ನು ಘೋಷಿಸಿದಾಗ ಮುಹಮ್ಮದ್ ನಿರಾಳರಾದರು. ಅವರು ಕುರೈಷರೊಂದಿಗೆ ಯುದ್ಧಕ್ಕೆ ಸಿದ್ಧರಾದರು.[೧೮೧]

ಮುಹಮ್ಮದ್‌ರ ಸೈನ್ಯದಲ್ಲಿ 313 ಯೋಧರಿದ್ದರು. ಅವರು 2 ಕುದುರೆಗಳು ಮತ್ತು 70 ಒಂಟೆಗಳ ಮೇಲೆ ಸರದಿಯಾಗಿ ಸವಾರಿ ಮಾಡುತ್ತಾ ಬದ್ರ್ ತಲುಪಿದರು.[೧೮೨] ಅಬೂಬಕರ್, ಉಮರ್ ಮುಂತಾದ ಪ್ರಮುಖ ಅನುಯಾಯಿಗಳು ಅವರ ಜೊತೆಗಿದ್ದರು.[೧೮೩]

ಇತ್ತ ಅಬೂ ಸುಫ್ಯಾನ್ ಉಪಾಯದಿಂದ ತನ್ನ ವರ್ತಕ ತಂಡವನ್ನು ಬೇರೊಂದು ದಾರಿಯಲ್ಲಿ ಮಕ್ಕಾ ತಲುಪಿಸಿದರು. ತಾನು ಸುರಕ್ಷಿತವಾಗಿದ್ದೇನೆ, ಮುಸ್ಲಿಮರ ಮೇಲೆ ದಾಳಿ ಮಾಡಬೇಕಾಗಿಲ್ಲ ಎಂದು ಅವರು ಕುರೈಷರಿಗೆ ಹೇಳಿ ಕಳುಹಿಸಿದರು. ಕುರೈಷ್ ಮುಖಂಡರು ಮಕ್ಕಾಗೆ ಹಿಂದಿರುಗಲು ತೀರ್ಮಾನಿಸಿದರು.[೧೮೪] ಆದರೆ ಅಬೂಜಹಲ್ ಒಪ್ಪಲಿಲ್ಲ. ಏನೇ ಆದರೂ ಮುಸ್ಲಿಮರಿಗೆ ಒಂದು ಪಾಠ ಕಲಿಸಿಯೇ ಹಿಂದಿರುಗುವುದೆಂದು ಅವನು ಪಟ್ಟು ಹಿಡಿದಾಗ, ಬೇರೆ ದಾರಿಯಿಲ್ಲದೆ ಇತರ ಮುಖಂಡರೂ ಒಪ್ಪಿಗೆ ಸೂಚಿಸಿದರು.[೧೮೫] ಕುರೈಷರ ಸೇನೆಯಲ್ಲಿ 1000 ಕ್ಕಿಂತಲೂ ಹೆಚ್ಚು ಯೋಧರಿದ್ದರು.[೧೮೬]

ಮುಹಮ್ಮದ್ ಮತ್ತು ಅವರ ಸೈನ್ಯವು ಕುರೈಷರಿಗಿಂತ ಮೊದಲೇ ಬದ್ರ್ ತಲುಪಿದರು. ಯುದ್ಧದ ಗತಿಯನ್ನು ನಿಯಂತ್ರಿಸಲು ಅವರಿಗೆ ಒಂದು ಸಣ್ಣ ಗುಡ್ಡದ ಮೇಲೆ ಡೇರೆಯನ್ನು ನಿರ್ಮಿಸಲಾಯಿತು.[೧೮೭] ಮುಸ್ಲಿಮರು ಸಂಪೂರ್ಣ ಆತ್ಮವಿಶ್ವಾಸದಿಂದಿದ್ದರು. ಕುರೈಷರು ಕೂಡ ಮುಸ್ಲಿಮರನ್ನು ಸರ್ವನಾಶ ಮಾಡುವ ಚಿಂತೆಯಲ್ಲಿದ್ದರು.

ಅದು ಹಿಜರಿ 2ನೇ ವರ್ಷ ರಮದಾನ್ 17. ಬದ್ರ್‌ನ ರಣರಂಗದಲ್ಲಿ ಎರಡು ಸೈನ್ಯಗಳು ಮುಖಾಮುಖಿಯಾದವು.[೧೮೮] ಮುಹಮ್ಮದ್ ಸೇರಿದಂತೆ ಮುಸ್ಲಿಮ್ ಯೋಧರು ವೀರಾವೇಶದಿಂದ ಹೋರಾಡಿದರು. ಬದ್ರ್ ಯುದ್ಧದಲ್ಲಿ ಕುರೈಷರ ಭಾಗದಲ್ಲಿ ಅವರ ಅನೇಕ ಮುಖಂಡರು ಸೇರಿದಂತೆ 70 ಮಂದಿ ಹತರಾದರು. 70 ಮಂದಿಯನ್ನು ಸೆರೆ ಹಿಡಿಯಲಾಯಿತು. ಮುಸ್ಲಿಮರ ಸೈನ್ಯದಲ್ಲಿ ಆರು ಮಂದಿ ಮುಹಾಜಿರರು ಮತ್ತು ಎಂಟು ಮಂದಿ ಅನ್ಸಾರರು ಹತರಾದರು.[೧೮೯]

ಮುಸ್ಲಿಮರ ಅನಿರೀಕ್ಷಿತ ವಿಜಯವು ಅರೇಬಿಯಾದಾದ್ಯಂತ ಮಾರ್ದನಿಸಿತು. ಮದೀನಾದಲ್ಲಿ ಮುಸ್ಲಿಮರನ್ನು ದ್ವೇಷಿಸುತ್ತಿದ್ದವರಿಗೆ ಇದರಿಂದ ಆತಂಕ ತೋರಿತು. ಮಕ್ಕಾದಲ್ಲಿ ಸೂತಕಛಾಯೆ ಆವರಿಸಿತ್ತು. ಇದೇ ಮೊದಲ ಬಾರಿಗೆ ಅವರು ಮುಸ್ಲಿಮರ ಬಗ್ಗೆ ಭಯಪಟ್ಟರು.[೧೮೯]

ಮುಹಮ್ಮದ್ ಪರಿಹಾರವನ್ನು ಪಡೆದು ಕೆಲವು ಯುದ್ಧ ಖೈದಿಗಳನ್ನು ಖುಲಾಸೆಗೊಳಿಸಿದರು. ಕೆಲವು ಖೈದಿಗಳನ್ನು ಮುಸ್ಲಿಮರಿಗೆ ಅಕ್ಷರ ಕಲಿಸಬೇಕೆಂಬ ಷರತ್ತಿನೊಂದಿಗೆ ಖುಲಾಸೆಗೊಳಿಸಲಾಯಿತು.[೧೮೯] ಯುದ್ಧಖೈದಿಗಳಲ್ಲಿ ಅವರ ಮಗಳು ಝೈನಬ್‌ಳ ಗಂಡ ಅಬುಲ್ ಆಸ್ ಕೂಡ ಇದ್ದರು. ಝೈನಬ್ ಆತನ ಜೊತೆಗೆ ಮಕ್ಕಾದಲ್ಲೇ ವಾಸಿಸುತ್ತಿದ್ದಳು. ಮಗಳನ್ನು ತನ್ನ ಬಳಿಗೆ ಕಳುಹಿಸಿಕೊಡಬೇಕೆಂಬ ಷರತ್ತಿನಲ್ಲಿ ಮುಹಮ್ಮದ್ ಅಳಿಯನನ್ನು ಖುಲಾಸೆಗೊಳಿಸಿದರು.[೧೯೦]

ಉಹುದ್ ಯುದ್ಧ

[ಬದಲಾಯಿಸಿ]
ಉಹುದ್ ಯುದ್ಧ ಜರುಗಿದ ಸ್ಥಳ. ಹಿನ್ನಲೆಯಲ್ಲಿರುವುದು ಉಹುದ್ ಪರ್ವತ.

ಬದ್ರ್ ಯುದ್ಧದಲ್ಲಿ ಸಂಭವಿಸಿದ ಅನಿರೀಕ್ಷಿತ ಸೋಲಿನಿಂದ ಹಾಗೂ ತಮ್ಮ ಅನೇಕ ಸರದಾರರನ್ನು ಕಳೆದುಕೊಂಡ ಮಕ್ಕಾ ಜನತೆಯಲ್ಲಿ ರೋಷ ಉಕ್ಕಿ ಹರಿಯುತ್ತಿತ್ತು.[೧೯೧] ಅವರು ಅಬೂ ಸುಫ್ಯಾನ್‌ರ ಬಳಿಗೆ ಹೋಗಿ ವ್ಯಾಪಾರದಲ್ಲಿ ಉಂಟಾದ ಲಾಭ ಮತ್ತು ಮಕ್ಕಾದ ಜನರ ಎಲ್ಲಾ ಸೊತ್ತುಗಳನ್ನು ಬಳಸಿ ಮುಹಮ್ಮದ್ ಮತ್ತು ಮುಸ್ಲಿಮರ ವಿರುದ್ಧ ಪುನಃ ಯುದ್ಧ ಸಾರುವಂತೆ ಒತ್ತಾಯಿಸಿದರು.[೧೯೨] ಅಬೂ ಸುಫ್ಯಾನ್ ಒಪ್ಪಿದರು.[೧೯೩] ಹೀಗೆ ಹಿಜರಿ 3ನೇ ವರ್ಷದಲ್ಲಿ ಮಕ್ಕಾದಿಂದ ಕುರೈಷರ ಸೇನೆ ಮದೀನದತ್ತ ಹೊರಟಿತು. ಅವರು ಮದೀನದ ಸರಹದ್ದಿನ ತನಕ ಬಂದು ಬೀಡುಬಿಟ್ಟರು.[೧೯೪]

ಕುರೈಷರು ಮದೀನದ ಮೇಲೆ ದಾಳಿ ಮಾಡಿದರೆ ಮಾತ್ರ ಅವರೊಂದಿಗೆ ಹೋರಾಡುವುದೆಂದು ಮುಹಮ್ಮದ್ ಮೊದಲು ನಿರ್ಧರಿಸಿದ್ದರು.[೧೯೫] ಕಪಟಿಗಳ ನಾಯಕ ಅಬ್ದುಲ್ಲಾ ಬಿನ್ ಉಬೈ ಕೂಡ ಅದಕ್ಕೆ ದನಿಗೂಡಿಸಿದ್ದರು.[೧೯೬] ಆದರೆ ಬದ್ರ್ ಯುದ್ಧದಲ್ಲಿ ಭಾಗವಹಿಸಲು ಅವಕಾಶ ದೊರಕದ ಮುಸ್ಲಿಮರು ಮುಹಮ್ಮದ್‌ರ ಬಳಿಗೆ ಬಂದು, "ದೇವರ ಸಂದೇಶವಾಹಕರೇ! ನಮ್ಮನ್ನು ಶತ್ರುಗಳ ಮುಖಾಮುಖಿಯಾಗಿ ನಿಲ್ಲಿಸಿ. ಅವರು ನಮ್ಮನ್ನು ಹೇಡಿಗಳು ಮತ್ತು ದುರ್ಬಲರೆಂದು ತಿಳಿಯದಿರಲಿ" ಎನ್ನುತ್ತಾ ಸೈನ್ಯದೊಂದಿಗೆ ಮದೀನದಿಂದ ಹೊರಗೆ ಹೋಗಲು ಒತ್ತಾಯಿಸಿದರು. ಕೊನೆಗೆ ಮುಹಮ್ಮದ್ ಯುದ್ಧಾಂಗಿ ಧರಿಸಿ ಬಂದರು.[೧೯೭] ಮದೀನದಿಂದ ಹೊರಹೋಗಿ ಶತ್ರುಗಳನ್ನು ಎದುರುಗೊಳ್ಳುವುದೆಂದು ತೀರ್ಮಾನಿಸಲಾಯಿತು. ಮುಹಮ್ಮದ್‌ರ ಸೈನ್ಯದಲ್ಲಿ 1,000 ಯೋಧರಿದ್ದರು. ಕುರೈಷರ ಸೇನೆಯಲ್ಲಿ 3,000 ಯೋಧರು ಮತ್ತು 200 ಕುದುರೆಗಳಿದ್ದವು.[೧೯೮] ಸೈನ್ಯವು ಮದೀನ ಮತ್ತು ಉಹುದ್ ಪರ್ವತದ ಮಧ್ಯದಲ್ಲಿರುವ ಶೌತ್ ಎಂಬ ಸ್ಥಳಕ್ಕೆ ತಲುಪಿದಾಗ, ಅಬ್ದುಲ್ಲಾ ಬಿನ್ ಉಬೈ ತನ್ನ 300 ಮಂದಿ ಅನುಯಾಯಿಗಳೊಂದಿಗೆ ಯುದ್ಧದಿಂದ ಹಿಂಜರಿದು ಮದೀನಕ್ಕೆ ಮರಳಿದರು.[೧೯೭]

ಮುಹಮ್ಮದ್ 700 ಯೋಧರೊಂದಿಗೆ ಮದೀನದಲ್ಲಿ 3 ಕಿ.ಮೀ. ದೂರದಲ್ಲಿರುವ ಉಹುದ್ ಪರ್ವತದ ತಪ್ಪಲಿಗೆ ತಲುಪಿದರು. ಅವರು 50 ಬಿಲ್ಗಾರರನ್ನು ಐನೈನ್ ಎಂಬ ಸಣ್ಣ ಗುಡ್ಡದ ಮೇಲೆ ನಿಲ್ಲಿಸಿ ಹಿಂಭಾಗದಿಂದ ಶತ್ರುಗಳ ದಾಳಿಯನ್ನು ತಡೆಯಬೇಕೆಂದು ಹೇಳಿದರು.[೧೯೮] ಯುದ್ಧ ನಡೆಯುತ್ತಿದ್ದರೂ ಇಲ್ಲದಿದ್ದರೂ ನನ್ನ ಆದೇಶ ಸಿಗುವ ತನಕ ನೀವು ನಿಮ್ಮ ಸ್ಥಾನದಿಂದ ಕೆಳಗಿಳಿಯಬಾರದೆಂದು ಅವರಿಗೆ ಕಟ್ಟಪ್ಪಣೆ ನೀಡಿದರು.[೧೯೯]

ಯುದ್ಧ ಆರಂಭವಾಯಿತು. ಮುಸ್ಲಿಮರು ವೀರಾವೇಶದಿಂದ ಹೋರಾಡಿದರು. ಮಧ್ಯಾಹ್ನಕ್ಕೆ ಮುಂಚೆಯೇ ಮುಸ್ಲಿಮರು ಕುರೈಷರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು. ಕುರೈಷರು ದಿಕ್ಕೆಟ್ಟು ಓಡಿದರು. ಕುರೈಷರು ರಣರಂಗದಿಂದ ಓಡಿದ್ದನ್ನು ಕಂಡು ಗುಡ್ಡದ ಮೇಲೆ ಕಾವಲು ನಿಲ್ಲಿಸಿದ್ದ ಬಿಲ್ಗಾರರು ಯುದ್ಧ ಮುಗಿಯಿತೆಂದು ಭಾವಿಸಿ, ಸಮರಾರ್ಜಿತ ಸೊತ್ತುಗಳನ್ನು ಸಂಗ್ರಹಿಸಲು ಗುಡ್ಡದಿಂದ ಕೆಳಗೆ ಓಡಿ ಬಂದರು.[೨೦೦] ಅಷ್ಟರಲ್ಲಿ ಖಾಲಿದ್ ಬಿನ್ ವಲೀದ್‌ರ ನೇತೃತ್ವದಲ್ಲಿ ಕುರೈಷ್ ಅಶ್ವಸೇನೆಯು ಹಿಂಭಾಗದಿಂದ ಮುಸ್ಲಿಮರ ಮೇಲೆ ಒಮ್ಮೆಲೇ ದಾಳಿ ಮಾಡಿತು.[೨೦೧] ಈ ಅನಿರೀಕ್ಷಿತ ದಾಳಿಯಿಂದ ಮುಸ್ಲಿಮ್ ಯೋಧರು ದಿಗ್ಭ್ರಾಂತರಾದರು. ಅಷ್ಟರಲ್ಲಿ ಯಾರೋ ಮುಹಮ್ಮದ್ ಕೊಲೆಯಾದರು ಎಂದು ದೊಡ್ಡದಾಗಿ ಕೂಗಿ ಹೇಳಿದರು. ಇದು ಮುಸ್ಲಿಮರನ್ನು ಇನ್ನಷ್ಟು ಆಘಾತಕ್ಕೊಳಪಡಿಸಿತು.[೨೦೨]

ಸಿಕ್ಕಿದ ಅವಕಾಶವನ್ನು ಕುರೈಷರು ಚೆನ್ನಾಗಿ ಬಳಸಿದರು. ಮುಸ್ಲಿಮರಲ್ಲಿ ಅಪಾರ ಸಾವು ನೋವು ಉಂಟಾಯಿತು. ಮುಹಮ್ಮದ್‌ರ ಕೆಲವು ಪ್ರಮುಖ ಶಿಷ್ಯರು ಹತರಾದರು. ಕುರೈಷರು ಮುಹಮ್ಮದ್‌ರನ್ನು ಕೂಡ ಕೊಲ್ಲುವ ಹಂತಕ್ಕೆ ಬಂದಿದ್ದರು. ಆದರೆ ಕೆಲವು ಧೀರ ಯೋಧರು ಮುಹಮ್ಮದ್‌ರಿಗೆ ಮಾನವ ಗೋಡೆಯನ್ನು ನಿರ್ಮಿಸಿ ಅವರನ್ನು ಪರ್ವತದಾಚೆಗೆ ಒಯ್ದರು.[೨೦೩] ಯುದ್ಧದಲ್ಲಿ ಮುಹಮ್ಮದ್‌ರಿಗೆ ತೀವ್ರ ಗಾಯಗಳಾಗಿದ್ದವು. ಅವರ ಹಲ್ಲು ಮುರಿದಿತ್ತು. ಆದರೆ ಮುಹಮ್ಮದ್ ಜೀವಂತವಾಗಿದ್ದಾರೆಂಬ ಸುದ್ದಿ ಹರಡಿದಾಗ ಮುಸ್ಲಿಮ್ ಯೋಧರು ಪುನಃ ಸಂಘಟಿತರಾಗಿ ಕುರೈಷರ ವಿರುದ್ಧ ಹೋರಾಡಿ ಅವರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು. ಗುಡ್ಡದ ಮೇಲೆ ಕಾವಲು ನಿಲ್ಲಿಸಿದ ಬಿಲ್ಗಾರರು ಮಾಡಿದ ತಪ್ಪಿನಿಂದ ಮುಸ್ಲಿಮರಿಗೆ ಅಪಾರ ನಷ್ಟವುಂಟಾಯಿತು. ಮುಸ್ಲಿಮರಲ್ಲಿ 70 ಮಂದಿ ಹತರಾದರೆ ಕುರೈಷರಲ್ಲಿ 22 ಮಂದಿ ಹತರಾದರು.[೨೦೪]

ಖಂದಕ್ ಯುದ್ಧ

[ಬದಲಾಯಿಸಿ]

ಬದ್ರ್ ಹಾಗೂ ಉಹುದ್ ಯುದ್ಧದಲ್ಲಿ ಸೋಲನುಭವಿಸಿದ್ದ ಕುರೈಷರು ಇನ್ನೊಂದು ಯುದ್ಧಕ್ಕೆ ಸಿದ್ಧರಿರಲಿಲ್ಲ. ಆದರೆ ಬನೂ ನದೀರ್ ಗೋತ್ರದ ಯಹೂದಿಗಳು ಇತರ ಯಹೂದಿ ಗೋತ್ರಗಳೊಂದಿಗೆ ಸೇರಿ, ಕುರೈಷರನ್ನು ರಹಸ್ಯವಾಗಿ ಸಂಪರ್ಕಿಸಿ ಮುಹಮ್ಮದ್ ಮತ್ತು ಮದೀನದ ವಿರುದ್ಧ ದಾಳಿ ಮಾಡಲು ಹುರಿದುಂಬಿಸಿದರು. ನೀವು ದಾಳಿ ಮಾಡಿದರೆ ನಾವು ನಿಮಗೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದರು.[೨೦೫] ಕುರೈಷರು ಯುದ್ಧಕ್ಕೆ ಒಪ್ಪಿದರು. ಯಹೂದಿಗಳು ಗತ್ಫಾನ್ ಗೋತ್ರದವರ ಬಳಿಗೆ ಹೋಗಿ ಅವರನ್ನೂ ಹುರಿದುಂಬಿಸಿದರು. ಗತ್ಫಾನ್ ಗೋತ್ರದವರು ಒಪ್ಪಿಕೊಂಡರು.[೨೦೬] ಹೀಗೆ ಹಿಜರಿ 5ನೇ ವರ್ಷದಲ್ಲಿ (ಕ್ರಿ.ಶ. 627) ಕುರೈಷ್ ಮತ್ತು ಗತ್ಫಾನ್ ಗೋತ್ರಗಳು ಇತರ ಅರಬ್ ಗೋತ್ರಗಳನ್ನು ಸೇರಿ ಮಿತ್ರಪಕ್ಷ ರಚಿಸಿ, ಸುಮಾರು 10,000 ಸೈನಿಕರ ಬಲಿಷ್ಠ ಸೇನೆಯನ್ನು ಕಟ್ಟಿದರು. ಅಬೂ ಸುಫ್ಯಾನ್ ಅದರ ಸೇನಾಧಿಪತಿಯಾಗಿದ್ದರು. ಯಹೂದಿಗಳು ಅವರಿಗೆ ಹಿಂದಿನಿಂದ ಬೆಂಬಲ ನೀಡುತ್ತಿದ್ದರು.[೨೦೫]

ಕುರೈಷರು ಮತ್ತು ಅವರ ಮಿತ್ರಪಕ್ಷಗಳು 10,000 ಯೋಧರ ಬಲಿಷ್ಠ ಸೇನೆಯೊಂದಿಗೆ ಮದೀನದ ಮೇಲೆ ದಾಳಿ ಮಾಡುತ್ತಿದ್ದಾರೆಂಬ ಸುದ್ದಿ ಮುಹಮ್ಮದ್‌ಗೆ ತಲುಪಿತು. ಅವರು ಯುದ್ಧ ತಂತ್ರದ ಬಗ್ಗೆ ಅನುಯಾಯಿಗಳೊಡನೆ ಸಮಾಲೋಚನೆ ಮಾಡಿದಾಗ ಪರ್ಶಿಯಾ ದೇಶದಿಂದ ಬಂದ ಸಲ್ಮಾನ್ ಫಾರಿಸಿ ಅಲ್ಲಿನ ಯುದ್ಧ ತಂತ್ರದ ಬಗ್ಗೆ ಮುಹಮ್ಮದ್‌ಗೆ ತಿಳಿಸಿದರು.[೨೦೭] ಮದೀನದ ಸುತ್ತ ಎರಡು ದಿಕ್ಕುಗಳಲ್ಲಿ ಪರ್ವತಗಳಿದ್ದವು. ಮಿತ್ರಪಕ್ಷಗಳು ಈ ಪರ್ವತಗಳನ್ನು ಏರಿ ಮದೀನದ ಮೇಲೆ ದಾಳಿ ಮಾಡುವುದು ಅಸಂಭವ್ಯವಾಗಿತ್ತು. ಇನ್ನೊಂದು ದಿಕ್ಕಿನಲ್ಲಿ ಬನೂ ಕುರೈಝ ಗೋತ್ರದ ಯಹೂದಿಗಳು ವಾಸಿಸುತ್ತಿದ್ದರು. ಇವರೊಂದಿಗೆ ಮುಸ್ಲಿಮರು ಮೈತ್ರಿ ಮಾಡಿಕೊಂಡಿದ್ದರು. ಆದ್ದರಿಂದ ಮಿತ್ರಪಕ್ಷಗಳು ಆ ದಿಕ್ಕಿನಿಂದಲೂ ಮದೀನದ ಮೇಲೆ ದಾಳಿ ಮಾಡುವಂತಿರಲಿಲ್ಲ. ಇನ್ನೊಂದು ದಿಕ್ಕು ಮಾತ್ರ ತೆರೆದುಕೊಂಡಿತ್ತು. ಮಿತ್ರಪಕ್ಷಗಳು ಮದೀನದ ಮೇಲೆ ದಾಳಿ ಮಾಡಲು ಹೆಚ್ಚು ಸಂಭಾವ್ಯತೆಯಿರುವ ಈ ದಿಕ್ಕಿನಲ್ಲಿ ಸಲ್ಮಾನ್‌ರ ಸಲಹೆಯಂತೆ ಒಂದು ಕಂದಕ ತೋಡಿ ಅವರು ಮದೀನ ಪ್ರವೇಶಿಸದಂತೆ ತಡೆಯುವುದು ಮುಸ್ಲಿಮರ ಯುದ್ಧ ತಂತ್ರವಾಗಿತ್ತು. ಹೀಗೆ ಮುಸ್ಲಿಮರು ಈ ದಿಕ್ಕಿನಲ್ಲಿ  5,000 ಮೊಳ ಉದ್ದ, 7ರಿಂದ 10 ಮೊಳ ಆಳ ಮತ್ತು 9 ಮೊಳ ಅಗಲವಿರುವ ಕಂದಕವನ್ನು ತೋಡಿದರು.[೨೦೮]

ನಿರೀಕ್ಷೆಯಂತೆ ಮಿತ್ರಪಕ್ಷಗಳು ಈ ದಿಕ್ಕಿನಿಂದಲೇ ಬಂದರು. ಆದರೆ ಕಂದಕವನ್ನು ಕಂಡು ಅವರು ಸ್ತಬ್ಧರಾದರು. ಏಕೆಂದರೆ ಅರಬ್ಬರಿಗೆ ಸಂಬಂಧಿಸಿದಂತೆ ಇದೊಂದು ಹೊಸ ತಂತ್ರವಾಗಿತ್ತು.[೨೦೯] ಅವರು ಕಂದಕದ ಆಚೆ ಬದಿಯಲ್ಲಿ ಬೀಡು ಬಿಟ್ಟರು. ಸುಮಾರು 3,000 ಯೋಧರನ್ನೊಳಗೊಂಡು ಮುಸ್ಲಿಮ್ ಸೇನೆ ಕಂದಕದ ಈಚೆ ಬದಿಯಲ್ಲಿ ಬೀಡುಬಿಟ್ಟರು.[೨೦೯] ಎರಡು ಸೇನೆಗಳ ಮಧ್ಯೆ ಕಂದಕವು ಅಡ್ಡವಾಗಿದ್ದರಿಂದ ನೇರ ಯುದ್ಧ ನಡೆಯಲಿಲ್ಲ. ಎರಡು ಸೇನೆಗಳ ನಡುವೆ ಬಾಣ ಪ್ರಯೋಗಗಳಾಗಿ ಎರಡೂ ಕಡೆಯಲ್ಲೂ ಕೆಲವು ಬೆರಳೆಣಿಕೆಯ ಸಾವು ನೋವುಗಳು ಸಂಭವಿಸಿದವು.[೨೧೦] ಆದರೆ ಮಿತ್ರಪಕ್ಷಗಳು ಕಂದಕ ದಾಟಿ ಬರುವ ಧೈರ್ಯ ತೋರಲಿಲ್ಲ. ಅವರು ಸುಮಾರು ಒಂದು ತಿಂಗಳ ಕಾಲ ಅಲ್ಲೇ ಬೀಡುಬಿಟ್ಟು ಮದೀನಕ್ಕೆ ಮುತ್ತಿಗೆ ಹಾಕಿದರು. ಈ ಮಧ್ಯೆ ಮುಹಮ್ಮದ್‌ರೊಂದಿಗೆ ಮೈತ್ರಿಯಲ್ಲಿದ್ದ ಬನೂ ಕುರೈಝ ಗೋತ್ರದ ಯಹೂದಿಗಳು ಶತ್ರುಗಳೊಂದಿಗೆ ಸೇರಿದ ವಿಷಯ ಮುಹಮ್ಮದ್‌ಗೆ ತಿಳಿಯಿತು.[೨೧೧] ಶತ್ರುಗಳು ಯಹೂದಿಗಳು ವಾಸಿಸುವ ದಿಕ್ಕಿನಿಂದ ದಾಳಿ ಮಾಡಿದರೆ ಮದೀನವನ್ನು ಕಾಪಾಡುವುದು ಹೇಗೆಂಬ ಸಮಸ್ಯೆ ಮುಸ್ಲಿಮರನ್ನು ಕಾಡುತ್ತಿತ್ತು. ಅಷ್ಟರಲ್ಲಿ ಗತ್ಫಾನ್ ಗೋತ್ರಕ್ಕೆ ಸೇರಿದ ನುಐಮ್ ಬಿನ್ ಮಸ್‌ಊದ್ ಎಂಬ ವ್ಯಕ್ತಿ ಆಪತ್ಭಾಂಧವನಂತೆ ಮುಹಮ್ಮದ್‌ರ ಬಳಿಗೆ ಬಂದು,[೨೧೨] "ನಾನು ಈಗಾಗಲೇ ಮುಸಲ್ಮಾನನಾಗಿದ್ದೇನೆ. ಆದರೆ ನನ್ನ ಗೋತ್ರಕ್ಕೆ ಈ ವಿಷಯ ತಿಳಿದಿಲ್ಲ. ನಿಮಗೆ ಏನಾದರೂ ಸಹಾಯ ಬೇಕಾದರೆ ಮಾಡುತ್ತೇನೆ" ಎಂದರು. "ನೀವು ಶತ್ರುಗಳ ಪಾಳಯದಲ್ಲೇ ಇದ್ದು ನಮಗೆ ಸಹಾಯ ಮಾಡಿರಿ" ಎಂದು ಮುಹಮ್ಮದ್ ಉತ್ತರಿಸಿದರು.

ನುಐಮ್ ನೇರವಾಗಿ ಯಹೂದಿಗಳ ಬಳಿಗೆ ಹೋಗಿ, "ಕುರೈಷರು ಮತ್ತು ಗತ್ಫಾನ್‌ನವರು ಮೋಸಗಾರರು. ಅವರನ್ನು ನಂಬಬೇಡಿ. ಅವರು ನಿಮಗೆ ಮೋಸ ಮಾಡುವ ಸಾಧ್ಯತೆಯಿದೆ. ಆದ್ದರಿಂದ ನೀವು ಯುದ್ಧ ಪ್ರಾರಂಭವಾಗುವುದಕ್ಕೆ ಮೊದಲೇ ಅವರ ಕೆಲವು ನಾಯಕರನ್ನು ಒತ್ತೆಯಾಳುಗಳಾಗಿ ಪಡೆದುಕೊಳ್ಳಿರಿ." ಯಹೂದಿಗಳಿಗೆ ಇದು ಸರಿ ಕಂಡಿತು.[೨೧೨] ಅವರು ಒಪ್ಪಿಕೊಂಡರು. ನುಐಮ್ ನಂತರ ಕುರೈಷರ ಬಳಿಗೆ ಹೋಗಿ, "ಯಹೂದಿಗಳು ಮುಹಮ್ಮದ್‌ರಿಗೆ ನಂಬಿಕೆದ್ರೋಹ ಮಾಡಿದ ಬಗ್ಗೆ ವಿಷಾದಪಡುತ್ತಿದ್ದಾರೆ. ಅವರು ಉಪಾಯದಿಂದ ನಿಮ್ಮ ಕೆಲವು ನಾಯಕರನ್ನು ಒತ್ತೆಯಾಳುಗಳಾಗಿ ಪಡೆದುಕೊಂಡು ಮುಹಮ್ಮದ್‌ಗೆ ಒಪ್ಪಿಸುವ ಸಂಚು ಹೂಡುತ್ತಿದ್ದಾರೆ" ಎಂದರು.[೨೧೨] ಇದನ್ನು ಕೇಳಿ ಕುರೈಷರಿಗೆ ಯಹೂದಿಗಳ ಮೇಲೆ ರೋಷ ಉಕ್ಕಿ ಬಂತು. ನುಐಮ್ ಗತ್ಫಾನ್ ಗೋತ್ರದವರ ಬಳಿಗೆ ಹೋಗಿ ಇದೇ ಕಥೆ ಹೇಳಿದರು. ಅವರೂ ಕೂಡ ಯಹೂದಿಗಳ ಮೇಲೆ ನಂಬಿಕೆ ಕಳೆದುಕೊಂಡರು.[೨೧೩]

ಮಿತ್ರಪಕ್ಷಗಳು ಮದೀನದ ಮೇಲೆ ದಾಳಿ ಮಾಡುವ ನಿರ್ಣಾಯಕ ಹಂತಕ್ಕೆ ಬಂದಾಗ ನುಐಮ್‌ರ ಉಪಾಯ ಫಲಿಸಿತು. ಕುರೈಷರು ಮತ್ತು ಗತ್ಫಾನ್‌ನವರು ಯಹೂದಿಗಳಿಗೆ ಸಂದೇಶ ಕಳುಹಿಸಿ ಹಿಂಭಾಗದಿಂದ ದಾಳಿ ಮಾಡುವಂತೆ ಹೇಳಿದರು. ಆದರೆ ಯಹೂದಿಗಳು ಅವರೊಂದಿಗೆ ಒತ್ತೆಯಾಳುಗಳ ಬೇಡಿಕೆಯಿಟ್ಟರು. ಆದರೆ ಇಬ್ಬರೂ ಒತ್ತೆಯಾಳುಗಳನ್ನು ಕೊಡಲು ನಿರಾಕರಿಸಿದರು. ಮಿತ್ರಪಕ್ಷಗಳ ನಡುವೆ ಭಿನ್ನಮತ ತಲೆದೋರಿತು.[೨೧೨] ಇದು ಸಾಲದಂತೆ, ಅದೇ ರಾತ್ರಿ ತೀವ್ರವಾಗಿ ಚಳಿಗಾಳಿ ಬೀಸಿ ಮಿತ್ರಪಕ್ಷಗಳ ಡೇರೆಗಳೆಲ್ಲವೂ ಹಾರಿ ಹೋದವು. ಅವರು ಸಂಪೂರ್ಣ ಹತಾಶರಾದರು. ಗಾಳಿ ನಿಲ್ಲುವ ಸೂಚನೆ ಕಾಣದೇ ಹೋದಾಗ ಅಬೂ ಸುಫ್ಯಾನ್ ಸಂಪೂರ್ಣ ನಿರಾಶೆಯಿಂದ ಮಕ್ಕಾಗೆ ಹಿಂದಿರುಗುವ ನಿರ್ಧಾರ ಕೈಗೊಂಡರು.[೨೧೪] ಕುರೈಷರು ಅವರನ್ನು ಹಿಂಬಾಲಿಸಿದರು. ಕುರೈಷರು ಯುದ್ಧದಿಂದ ಹಿಮ್ಮೆಟ್ಟಿದ್ದನ್ನು ಕಂಡು ಗತ್ಫಾನ್ ಗೋತ್ರದವರು ಕೂಡ ರಣರಂಗದಿಂದ ಕಾಲ್ಕಿತ್ತರು.[೨೧೫] ಹೀಗೆ ಹೆಚ್ಚಿನ ಸಾವು ನೋವುಗಳಿಲ್ಲದೆ ಖಂದಕ್ ಯುದ್ಧ ಮುಕ್ತಾಯವಾಯಿತು.

ಬನೂ ಕುರೈಝ ಯುದ್ಧ

[ಬದಲಾಯಿಸಿ]

ಮುಹಮ್ಮದ್ ಮದೀನಕ್ಕೆ ಬಂದಾಗ ಮದೀನದ ಬನೂ ಕುರೈಝ ಗೋತ್ರದ ಯಹೂದಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಈ ಒಪ್ಪಂದದ ಪ್ರಕಾರ ಎರಡೂ ಕಡೆಯವರು ಪರಸ್ಪರ ಸಹಾಯ ಮಾಡಬೇಕು. ಮದೀನದ ಮೇಲೆ ದಾಳಿಯಾಗುವಾಗ ಎರಡೂ ಕಡೆಯವರು ಸೇರಿ ಶತ್ರುಗಳನ್ನು ಹಿಮ್ಮೆಟ್ಟಿಸಬೇಕು. ಆದರೆ ಬನೂ ನದೀರ್ ಗೋತ್ರದ ಯಹೂದಿಗಳ ಮುಖಂಡ ಹಯಯ್ ಬಿನ್ ಅಖ್ತಬ್ ಬನೂ ಕುರೈಝ ಗೋತ್ರದ ಮುಖಂಡ ಕಅಬ್ ಬಿನ್ ಅಸದ್‌ನನ್ನು ಭೇಟಿಯಾಗಿ ಮುಸ್ಲಿಮರ ವಿರುದ್ಧ ಮಿತ್ರಪಕ್ಷಗಳೊಂದಿಗೆ ಕೈ ಜೋಡಿಸಬೇಕೆಂದು ವಿನಂತಿಸಿದ್ದನು.[೨೧೬] ಮುಹಮ್ಮದ್‌ರೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಬನೂ ಕುರೈಝ ಗೋತ್ರವು ಮಿತ್ರಪಕ್ಷಗಳಿಗೆ ಸಹಾಯ ಮಾಡುವ ಮೂಲಕ ನಿರ್ಣಾಯಕ ಸಮಯದಲ್ಲಿ ಒಪ್ಪಂದವನ್ನು ಉಲ್ಲಂಘಿಸಿದರು.[೨೧೬]

ಖಂದಕ್ ಯುದ್ಧ ಮುಗಿದ ಬಳಿಕ ಮುಹಮ್ಮದ್ ಸೈನ್ಯದೊಂದಿಗೆ ಬನೂ ಕುರೈಝ ಗೋತ್ರದವರ ಖೈಬರ್ ಕೋಟೆಗೆ ಮುತ್ತಿಗೆ ಹಾಕಿದರು. ಮುತ್ತಿಗೆ 25ನೇ ದಿನ ತಲುಪಿತು. ಬನೂ ಕುರೈಝ ಗೋತ್ರದವರು ಮುಹಮ್ಮದ್‌ರ ಮುಂದೆ ಶರಣಾದರು. ಅವರ ವಿಷಯದಲ್ಲಿ ತೀರ್ಪು ನೀಡಲು ಸಅದ್ ಬಿನ್ ಮುಆದ್‌ರನ್ನು ನೇಮಿಸಲಾಯಿತು. ಬನೂ ಕುರೈಝ ಗೋತ್ರದವರು ಒಪ್ಪಿಕೊಂಡರು. ಅವರ ಪೈಕಿ ಗಂಡಸರನ್ನು ಕೊಲ್ಲಬೇಕು ಮತ್ತು ಹೆಂಗಸರು ಮಕ್ಕಳನ್ನು ಸೆರೆಹಿಡಿಯಬೇಕೆಂದು ಸಅದ್ ತೀರ್ಪು ನೀಡಿದರು.[೨೧೭] ಇದು ಯಹೂದಿಗಳ ತೋರಾ ಗ್ರಂಥದಲ್ಲಿರುವ ನಿಯಮವಾಗಿತ್ತು.[೨೧೮]

ಬನೂ ಮುಸ್ತಲಿಕ್ ಯುದ್ಧ

[ಬದಲಾಯಿಸಿ]

ಹಿಜರಿ 6ನೇ ವರ್ಷ (ಕ್ರಿ.ಶ. 628) ಬನೂ ಮುಸ್ತಲಿಕ್ ಗೋತ್ರದ ಮುಖಂಡ ಹಾರಿಸ್ ಬಿನ್ ದಿರಾರ್ ಮದೀನದ ಮೇಲೆ ದಾಳಿ ಮಾಡಲು ಸಿದ್ಧತೆಗಳನ್ನು ಮಾಡುತ್ತಿದ್ದಾನೆಂಬ ಸುದ್ದಿ ಮುಹಮ್ಮದ್‌ಗೆ ತಲುಪಿತು.[೨೧೯] ಸುದ್ದಿಯನ್ನು ದೃಢೀಕರಿಸಿದ ನಂತರ ಮುಹಮ್ಮದ್ ಬನೂ ಮುಸ್ತಲಿಕ್ ಗೋತ್ರದವರ ವಿರುದ್ಧ ತಮ್ಮ ಸೇನೆಯೊಂದಿಗೆ ಹೊರಟರು. ಎರಡು ಸೇನೆಗಳು ಮುರೈಸಿ ಎಂಬ ಸ್ಥಳದಲ್ಲಿ ಮುಖಾಮುಖಿಯಾದವು. ಯುದ್ಧದಲ್ಲಿ ಮುಸ್ಲಿಮರು ಗೆಲುವು ಸಾಧಿಸಿದರು.[೨೧೯]

ಹುದೈಬಿಯಾ ಒಪ್ಪಂದ

[ಬದಲಾಯಿಸಿ]

ಹಿಜರಿ 6ನೇ ವರ್ಷದಲ್ಲಿ (ಕ್ರಿ.ಶ. 628)[] ಮುಹಮ್ಮದ್ ಸುಮಾರು 1,500 ಅನುಯಾಯಿಗಳೊಂದಿಗೆ ಉಮ್ರ ನಿರ್ವಹಿಸಲು ಮಕ್ಕಾಗೆ ಹೊರಟರು. ಅವರು ಮಕ್ಕಾದ ಬಳಿಯಿರುವ ಹುದೈಬಿಯಾ ಎಂಬ ಸ್ಥಳವನ್ನು ತಲುಪಿದಾಗ, ಉಸ್ಮಾನ್‌ರನ್ನು ಕುರೈಷರ ಬಳಿಗೆ ಕಳುಹಿಸಿದರು.[೨೨೦] ಉಸ್ಮಾನ್ ಕುರೈಷರ ಬಳಿಗೆ ಹೋಗಿ, ನಾವು ಯುದ್ಧಕ್ಕೆ ಬಂದಿರುವುದಿಲ್ಲ, ನಾವು ಶಾಂತಿಯುತವಾಗಿ ಉಮ್ರ ನಿರ್ವಹಿಸಿ ಹೊರಟು ಹೋಗುತ್ತೇವೆ. ನೀವು ನಮಗೆ ಅನುಮತಿ ಕೊಡಬೇಕು ಎಂದರು. ಆದರೆ ಕುರೈಷರು ಒಪ್ಪಲಿಲ್ಲ. ಕುರೈಷರ ಬಳಿಗೆ ಹೋದ ಉಸ್ಮಾನ್ ಇನ್ನೂ ಮರಳಿ ಬರದಿರುವುದನ್ನು ಕಂಡು ಮುಸ್ಲಿಮರು ಗಾಬರಿಯಾದರು. ಉಸ್ಮಾನ್ ಕೊಲೆಯಾದರು ಎಂಬ ವದಂತಿ ಹರಡಿತು.[೨೨೧] ಆಗ ಮುಹಮ್ಮದ್ ಒಂದು ಮರದ ಕೆಳಗೆ ತನ್ನ ಅನುಯಾಯಿಗಳನ್ನು ಒಟ್ಟು ಸೇರಿಸಿ, ಜೀವವಿರುವ ತನಕ ಕುರೈಷರೊಂದಿಗೆ ಹೋರಾಡುವುದಾಗಿ ಪ್ರತಿಜ್ಞೆ ಮಾಡಿಸಿದರು. ಅನುಯಾಯಿಗಳೆಲ್ಲವೂ ಪ್ರತಿಜ್ಞೆ ಮಾಡಿದರು. ಅಷ್ಟರಲ್ಲಿ ಉಸ್ಮಾನ್ ಮರಳಿ ಬಂದರು. ನಂತರ ಕುರೈಷರು ತಮ್ಮ ಮುಖಂಡ ಸುಹೈಲ್ ಬಿನ್ ಅಮ್ರ್‌ರನ್ನು ಮುಹಮ್ಮದ್‌ರ ಬಳಿಗೆ ಶಾಂತಿ ಒಪ್ಪಂದಕ್ಕಾಗಿ ಕಳುಹಿಸಿದರು.[೨೨೨]

ಮುಹಮ್ಮದ್ ಸುಹೈಲ್‌ರ ಉಪಸ್ಥಿತಿಯಲ್ಲಿ ಅಲಿ ಬಿನ್ ಅಬೂತಾಲಿಬ್‌ರೊಡನೆ ಶಾಂತಿ ಒಪ್ಪಂದ ಬರೆಯಲು ಹೇಳಿದರು. ಮುಹಮ್ಮದ್‌ರ ನಿರ್ದೇಶನದಂತೆ ಶಾಂತಿ ಒಪ್ಪಂದ ಬರೆಯಲಾಯಿತು. ಒಪ್ಪಂದದ ನಿಯಮಗಳು ಹೀಗಿದ್ದವು: ಮುಸ್ಲಿಮರು ಈ ವರ್ಷ ಉಮ್ರ ಮಾಡಬಾರದು. ಆದರೆ ಮುಂದಿನ ವರ್ಷ ಮಾಡಬಹುದು. ಆದರೆ ಅವರು ಮಕ್ಕಾದಲ್ಲಿ ಮೂರು ದಿನಕ್ಕಿಂತ ಹೆಚ್ಚು ತಂಗಬಾರದು. ಮುಸ್ಲಿಮರು ಮತ್ತು ಕುರೈಷರ ನಡುವೆ ಹತ್ತು ವರ್ಷಗಳ ಕಾಲ ಯುದ್ಧ ವಿರಾಮ ಜಾರಿಯಲ್ಲಿರುವುದು. ಈ ಸಮಯದಲ್ಲಿ ಉಭಯ ಪಕ್ಷದವರು ಪರಸ್ಪರ ಶಸ್ತ್ರ ಎತ್ತಬಾರದು. ಕುರೈಷರಲ್ಲಿ ಯಾರಾದರೂ ಮುಸ್ಲಿಮರ ಪಕ್ಷಕ್ಕೆ ಸೇರಿದರೆ ಅವರನ್ನು ಕುರೈಷರಿಗೆ ಹಿಂದಿರುಗಿಸಬೇಕು. ಆದರೆ ಮುಸ್ಲಿಮರ ಪೈಕಿ ಯಾರಾದರೂ ಕುರೈಷರ ಪಕ್ಷಕ್ಕೆ ಸೇರಿದರೆ ಅವರನ್ನು ಹಿಂದಿರುಗಿಸಬೇಕಾಗಿಲ್ಲ. ಕುರೈಷರಿಗೆ ತಮಗಿಷ್ಟವಿರುವ ಗೋತ್ರದವರ ಜೊತೆಗೆ ಮೈತ್ರಿ ಮಾಡಿಕೊಳ್ಳಬಹುದು. ಮುಸ್ಲಿಮರಿಗೂ ತಮಗಿಷ್ಟವಿರುವ ಗೋತ್ರಗಳೊಂದಿಗೆ ಮೈತ್ರಿ ಮಾಡಿಕೊಳ್ಳಬಹುದು.[೨೨೩] ಇವು ಒಪ್ಪಂದದ ನಿಯಮಗಳಾಗಿದ್ದವು.

ಈ ಒಪ್ಪಂದಕ್ಕೆ ಸಹಿ ಹಾಕುವುದಕ್ಕೆ ಸ್ವಲ್ಪ ಮುಂಚೆ ಸುಹೈಲ್‌ರ ಮಗ ಅಬೂ ಜಂದಲ್ ಕುರೈಷರ ಹಿಂಸೆಯಿಂದ ತಪ್ಪಿಸಿಕೊಂಡು ಮುಹಮ್ಮದ್‌ರ ಬಳಿಗೆ ಓಡಿ ಬಂದರು. ಅವರು ಇಸ್ಲಾಮ್‌ಗೆ ಮತಾಂತರವಾಗಿದ್ದರು. ಆದಕಾರಣ ಕುರೈಷರು ಅವರಿಗೆ ಚಿತ್ರಹಿಂಸೆ ಕೊಡುತ್ತಿದ್ದರು. ಒಪ್ಪಂದದ ಪ್ರಕಾರ ಅಬೂ ಜಂದಲ್‌ರನ್ನು ಕುರೈಷರಿಗೆ ಹಿಂದಿರುಗಿಸಬೇಕೆಂದು ಸುಹೈಲ್ ಹೇಳಿದರು. ಆದರೆ ಮುಹಮ್ಮದ್ ಒಪ್ಪಲಿಲ್ಲ. ಏಕೆಂದರೆ ಒಪ್ಪಂದಕ್ಕೆ ಇನ್ನೂ ಸಹಿ ಹಾಕಿರಲಿಲ್ಲ. ಆದರೆ ಒಪ್ಪಂದದ ನಿಯಮಗಳ ಬಗ್ಗೆ ಈಗಾಗಲೇ ಎರಡೂ ಕಡೆಯವರು ಒಪ್ಪಿರುವುದರಿಂದ ಅಬೂ ಜಂದಲ್‌ರನ್ನು ಹಿಂದಿರುಗಿಸಬೇಕೆಂದು ಸುಹೈಲ್ ಪಟ್ಟು ಹಿಡಿದಾಗ ಮುಹಮ್ಮದ್ ಅಬೂ ಜಂದಲ್‌ರನ್ನು ಕುರೈಷರಿಗೆ ಮರಳಿಸಿದರು.[೨೨೪]

ಒಪ್ಪಂದದ ನಿಯಮಗಳು ನ್ಯಾಯಸಮ್ಮತವಲ್ಲದಿದ್ದರೂ ಸಹ ಮುಹಮ್ಮದ್ ಒಪ್ಪಿಗೆ ಸೂಚಿಸಿ ಒಪ್ಪಂದಕ್ಕೆ ಸಹಿ ಹಾಕಿದರು. ಒಪ್ಪಂದದ ಪ್ರಕಾರ ಮುಸ್ಲಿಮರು ಉಮ್ರ ನಿರ್ವಹಿಸದೆ ಮದೀನಕ್ಕೆ ಮರಳಿದರು. ಅಷ್ಟರಲ್ಲಿ ಕುರೈಷರಲ್ಲಿ ಸೇರಿದ ಅಬೂ ಬಸೀರ್ ಉತ್ಬ ಬಿನ್ ಉಸೈದ್ ಎಂಬ ವ್ಯಕ್ತಿ ಮಕ್ಕಾದಿಂದ ತಪ್ಪಿಸಿಕೊಂಡು ಮದೀನಕ್ಕೆ ಬಂದು ಮುಸ್ಲಿಮರ ಜೊತೆಗೆ ಸೇರಿದರು.[೨೨೫] ಆದರೆ ಒಪ್ಪಂದದ ಪ್ರಕಾರ ಅವರನ್ನು ಕುರೈಷರಿಗೆ ಹಿಂದಿರುಗಿಸಬೇಕು. ಕುರೈಷರು ಬೇಡಿಕೆಯಿಟ್ಟಾಗ ಮುಸ್ಲಿಮರು ಆತನನ್ನು ಕುರೈಷರಿಗೆ ಒಪ್ಪಿಸಿದರು. ಆದರೆ ಅಬೂ ಬಸೀರ್ ಕುರೈಷರ ಕೈಯಿಂದ ಪುನಃ ತಪ್ಪಿಸಿಕೊಂಡು ಸಮುದ್ರ ತೀರಕ್ಕೆ ಓಡಿದರು. ಅಬೂ ಜಂದಲ್ ಕೂಡ ಮಕ್ಕಾದಿಂದ ತಪ್ಪಿಸಿಕೊಂಡು ಅಬೂ ಬಸೀರ್ ಜೊತೆಗೆ ಸೇರಿಕೊಂಡರು. ನಂತರ ಮಕ್ಕಾದಲ್ಲಿ ಇಸ್ಲಾಮ್‌ಗೆ ಮತಾಂತರವಾದ ಎಲ್ಲರೂ ಅಲ್ಲಿಂದ ತಪ್ಪಿಸಿಕೊಂಡು ಅಬೂ ಬಸೀರ್ ಜೊತೆಗೆ ಸೇರತೊಡಗಿದರು.[೨೨೬] ಇವರ ಸಂಖ್ಯೆ 70 ತಲುಪಿದಾಗ ಅವರು ಒಂದು ಸಂಘವನ್ನು ಕಟ್ಟಿ ಸಿರಿಯಾದಿಂದ ಹಿಂದಿರುಗುವ ಕುರೈಷರ ವರ್ತಕ ಸಂಘಗಳ ಮೇಲೆ ದಾಳಿ ಮಾಡಿ ಅವರನ್ನು ಕೊಲ್ಲತೊಡಗಿದರು. ಇದು ಪುನರಾವರ್ತಿಸಿದಾಗ ಕುರೈಷರಿಗೆ ಗಾಬರಿಯಾಯಿತು. ಅವರು ಮದೀನಕ್ಕೆ ಧಾವಿಸಿ, ಅಬೂ ಬಸೀರ್ ಮತ್ತಿತರರನ್ನು ಮದೀನಕ್ಕೆ ವಾಪಸು ಕರೆಸಿಕೊಳ್ಳಬೇಕೆಂದು ಮುಹಮ್ಮದ್‌ರ ಮುಂದೆ ಅಂಗಲಾಚಿದರು. ಆದರೆ ಅವರನ್ನು ಮದೀನಕ್ಕೆ ಸೇರಿಸಿದರೆ ಅದು ಒಪ್ಪಂದದ ಉಲ್ಲಂಘನೆಯೆಂದು ಮುಹಮ್ಮದ್ ಹೇಳಿದಾಗ, ಅವರು ಆ ನಿಯಮವನ್ನು ರದ್ದುಗೊಳಿಸಲು ವಿನಂತಿಸಿದರು.[೨೨೭] ಮುಹಮ್ಮದ್ ಅಬೂ ಬಸೀರ್ ಮತ್ತಿತರರನ್ನು ಮದೀನಕ್ಕೆ ಕರೆಸಿಕೊಂಡರು.

ಹುದೈಬಿಯಾ ಒಪ್ಪಂದ ಮುಹಮ್ಮದ್‌ರಿಗೆ ದೊಡ್ಡ ಪ್ರಯೋಜನ ಮಾಡಿತು. ಕುರೈಷರು ಮುಸ್ಲಿಮರೊಂದಿಗೆ ಯುದ್ಧ ವಿರಾಮ ಘೋಷಿಸಿದ್ದರಿಂದ ಗತ್ಫಾನ್ ಮತ್ತಿತರ ಗೋತ್ರದವರು ಕೂಡ ಮುಹಮ್ಮದ್‌ಗೆ ದೊಡ್ಡ ಬೆದರಿಕೆಯಾಗಿ ಕಾಣಲಿಲ್ಲ.[೨೨೮] ಯುದ್ಧವಿಲ್ಲದೆ ಶಾಂತಿ ನೆಲೆಸಿದ್ದರಿಂದ ಮುಹಮ್ಮದ್ ಕುರೈಷರ ಎಲ್ಲಾ ಗೋತ್ರಗಳಿಗೂ ಇತರ ಅರೇಬಿಯನ್ ಗೋತ್ರಗಳಿಗೂ ಅನುಯಾಯಿಗಳನ್ನು ಕಳುಹಿಸಿ ಇಸ್ಲಾಮ್ ಧರ್ಮದ ಪ್ರಚಾರ ಮಾಡಿದರು. ಇದರಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಇಸ್ಲಾಮ್‌ಗೆ ಸೇರಿದರು. ಹಿಜರಿ 7ನೇ ವರ್ಷದ ಆರಂಭದಲ್ಲಿ ಅಮ್ರ್ ಬಿನ್ ಆಸ್, ಖಾಲಿದ್ ಬಿನ್ ವಲೀದ್ ಮತ್ತು ಉಸ್ಮಾನ್ ಬಿನ್ ತಲ್ಹ ಮುಂತಾದ ಮೂರು ಪ್ರಮುಖ ಕುರೈಷ್ ಮುಖಂಡರು ಇಸ್ಲಾಮ್‌ಗೆ ಮತಾಂತರವಾದರು.[೨೨೯]

ನಿಯೋಗಗಳು

[ಬದಲಾಯಿಸಿ]
ಮುಹಮ್ಮದ್ ಈಜಿಪ್ಟ್ ಆಡಳಿತಗಾರ ಮುಕೌಕಿಸ್‌ಗೆ ಬರೆದ ಪತ್ರ. ಇದು ಟರ್ಕಿಯ ಇಸ್ತಾಂಬುಲ್‌ನಲ್ಲಿರುವ ತೋಪ್ ಕಾಪಿ ಮ್ಯೂಸಿಯಂನಲ್ಲಿದೆ.

ಕದನ ವಿರಾಮ ಅಸ್ತಿತ್ವದಲ್ಲಿದ್ದ ಕಾರಣ ಮುಹಮ್ಮದ್ ಅರೇಬಿಯಾದ ವಿಭಿನ್ನ ಗೋತ್ರ ಮುಖಂಡರ ಕಡೆಗೆ ಅನುಯಾಯಿಗಳನ್ನು ಕಳುಹಿಸಿ ಇಸ್ಲಾಮ್ ಧರ್ಮದ ಪ್ರಚಾರ ಮಾಡಿದರು. ಅಷ್ಟೇ ಅಲ್ಲದೆ, ಅರೇಬಿಯಾದ ಹೊರಗಿನ ದೊರೆಗಳು ಮತ್ತು ಸಾಮ್ರಾಟರ ಬಳಿಗೂ ಇಸ್ಲಾಮ್ ಧರ್ಮದ ಪ್ರಚಾರಾರ್ಥ ನಿಯೋಗಗಳನ್ನು ಕಳುಹಿಸಿದರು. ಅವರು ಕಳುಹಿಸಿದ ಪ್ರಮುಖ ನಿಯೋಗಗಳು ಹೀಗಿದ್ದವು:

  1. ಇಥಿಯೋಪಿಯಾದ ದೊರೆ ನೇಗಸ್ ಬಳಿಗೆ ಅಮ್ರ್ ಬಿನ್ ಉಮಯ್ಯರನ್ನು ಕಳುಹಿಸಿದರು.[೨೩೦]
  2. ಈಜಿಪ್ಟಿನ ಆಡಳಿತಗಾರ ಮುಕೌಕಿಸ್ ಬಳಿಗೆ ಹಬೀಬ್ ಬಿನ್ ಅಬೂ ಬಲ್ತಅರನ್ನು ಕಳುಹಿಸಿದರು.[೨೩೧]
  3. ಪರ್ಶಿಯಾದ ಸಾಮ್ರಾಟ ಕೋಸ್ರೋಸ್ ಬಳಿಗೆ ಅಬ್ದುಲ್ಲಾ ಬಿನ್ ಹುದಾಫರನ್ನು ಕಳುಹಿಸಿದರು.[೨೩೨]
  4. ರೋಮ್ ಸಾಮ್ರಾಟ ಹಿರಾಕ್ಲಿಯಸ್ ಬಳಿಗೆ ದಿಹ್ಯ ಬಿನ್ ಖಲೀಫ ಕಲ್ಬಿರನ್ನು ಕಳುಹಿಸಿದರು.[೨೩೩]
  5. ಬಹ್ರೈನ್‌ನ ರಾಜ್ಯಪಾಲ ಮುಂದಿರ್ ಬಿನ್ ಸಾವಾ ಬಳಿಗೆ ಅಲಾ ಬಿನ್ ಹದ್ರಮಿರನ್ನು ಕಳುಹಿಸಿದರು.[೨೩೪]
  6. ಯಮಾಮದ ರಾಜ್ಯಪಾಲ ಹೌದಾ ಬಿನ್ ಅಲಿ ಬಳಿಗೆ ಸುಲೈತ್ ಬಿನ್ ಅಮ್ರ್‌ರನ್ನು ಕಳುಹಿಸಿದರು.[೨೩೫]
  7. ಡಮಾಸ್ಕಸ್‌ನ ದೊರೆ ಹರೀತ್ ಬಿನ್ ಅಬೂ ಶಮೀರ್ ಬಳಿಗೆ ಶುಜಾ ಬಿನ್ ವಹಬ್‌ರನ್ನು ಕಳುಹಿಸಿದರು.[೨೩೬]
  8. ಒಮಾನ್ ದೊರೆ ಜೈಫರ್ ಮತ್ತು ಅವರ ಸಹೋದರ ಅಬ್ದುಲ್ ಜಲಂದಿ ಬಳಿಗೆ ಅಮ್ರ್ ಬಿನ್ ಆಸ್‌ರನ್ನು ಕಳುಹಿಸಿದರು.[೨೩೭]
ಮುಹಮ್ಮದ್ ಪತ್ರಗಳಿಗೆ ಹಾಕುತ್ತಿದ್ದ ಮೊಹರು. ಇದರಲ್ಲಿ ಮುಹಮ್ಮದ್ ರಸೂಲುಲ್ಲಾ (ಮುಹಮ್ಮದ್ ದೇವರ ಸಂದೇಶವಾಹಕ) ಎಂದು ಅರೇಬಿಕ್ ಭಾಷೆಯಲ್ಲಿ ಬರೆಯಲಾಗಿದೆ.

ಹಿರಾಕ್ಲಿಯಸ್, ನೇಗಸ್ ಮತ್ತು ಮುಕೌಕಿಸ್ ಪತ್ರಗಳನ್ನು ಸ್ವೀಕರಿಸಿದರು.[೨೩೮] ಹಿರಾಕ್ಲಿಯಸ್ ಮುಹಮ್ಮದ್‌ರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಬಯಸಿದರು. ಅವರು ತಮ್ಮ ಸಾಮ್ರಾಜ್ಯದಲ್ಲಿ ಯಾರಾದರೂ ಮಕ್ಕಾದವರು ಇದ್ದಾರೋ ಎಂದು ಪರಿಶೋಧಿಸಿದಾಗ ಅಬೂ ಸುಫ್ಯಾನ್ ದೊರಕಿದರು. ಅಬೂ ಸುಫ್ಯಾನ್ ವ್ಯಾಪಾರ ನಿಮಿತ್ತ ಸಿರಿಯಾಗೆ ತೆರಳಿದ್ದರು. ಹಿರಾಕ್ಲಿಯಸ್ ಮುಹಮ್ಮದ್‌ರ ಬಗ್ಗೆ ವಿಚಾರಿಸಿದಾಗ, ಮುಹಮ್ಮದ್ ತಮ್ಮ ಶತ್ರುವಾಗಿದ್ದರೂ ಸಹ ಅಬೂ ಸುಫ್ಯಾನ್ ನಿಜಸಂಗತಿಯನ್ನೇ ತಿಳಿಸಿದರು. ಇದರಿಂದ ಹಿರಾಕ್ಲಿಯಸ್‌ಗೆ ಮುಹಮ್ಮದ್‌ರ ಬಗ್ಗೆ ಗೌರವ ಮೂಡಿತು.[೨೩೪] ಆದರೆ ತಮ್ಮ ಸಾಮ್ರಾಜ್ಯ ಮತ್ತು ಜನರನ್ನು ಕಳಕೊಳ್ಳಬೇಕಾದೀತೆಂಬ ಭಯದಿಂದ ಅವರು ಇಸ್ಲಾಮ್ ಬಗ್ಗೆ ಒಲವು ಬೆಳೆಸಿಕೊಳ್ಳಲಿಲ್ಲ. ಮುಹಮ್ಮದ್‌ರ ಕಾಲಾನಂತರ ಮುಸ್ಲಿಮರ ವಿರುದ್ಧ ನಡೆದ ಅನೇಕ ಯುದ್ಧಗಳಲ್ಲಿ ಅವರು ತಮ್ಮ ಸಾಮ್ರಾಜ್ಯದ ದೊಡ್ಡ ಭಾಗವನ್ನು ಕಳೆದುಕೊಳ್ಳಬೇಕಾಗಿ ಬಂತು.

ಇಥಿಯೋಪಿಯಾದ ನೇಗಸ್ ದೊರೆ ಇಸ್ಲಾಮ್ ಧರ್ಮಕ್ಕೆ ಮತಾಂತರವಾದರು.[೨೩೦] ಆದರೆ ಅವರು ಅದನ್ನು ಬಹಿರಂಗಪಡಿಸಲಿಲ್ಲ. ಮುಕೌಕಿಸ್ ಇಸ್ಲಾಮ್‌ಗೆ ಮತಾಂತರವಾಗದಿದ್ದರೂ ಮುಹಮ್ಮದ್‌ಗೆ ಅನೇಕ ಉಡುಗೊರೆಗಳನ್ನು ಕಳುಹಿಸಿಕೊಟ್ಟರು.[೨೩೨] ಪರ್ಶಿಯಾದ ಸಾಮ್ರಾಟ ಕೋಸ್ರೋಸ್ ಮುಹಮ್ಮದ್‌ರ ಪತ್ರವನ್ನು ಹರಿದು ಎಸೆದು, ಮುಹಮ್ಮದ್‌ರನ್ನು ಸೆರೆಹಿಡಿದು ತನ್ನ ಮುಂದೆ ಹಾಜರುಪಡಿಸುವಂತೆ ತನ್ನ ಅಧೀನದಲ್ಲಿರುವ ಯಮನ್ ರಾಜ್ಯಪಾಲರಿಗೆ ಆದೇಶಿಸಿದರು. ಯಮನ್ ರಾಜ್ಯಪಾಲ ತಕ್ಷಣ ಮುಹಮ್ಮದ್‌ರನ್ನು ಕರೆತರಲು ಮದೀನಕ್ಕೆ ದೂತರನ್ನು ಕಳುಹಿಸಿದರು. ಆದರೆ ಅದೇ ಸಮಯ ಕೋಸ್ರೋಸ್‌ರ ಪುತ್ರ ತಂದೆಯನ್ನು ಕೊಲೆ ಮಾಡಿ ಅಧಿಕಾರಕ್ಕೇರಿದರು.[೨೩೯] ಕೋಸ್ರೋಸ್‌ನ ಮರಣವಾರ್ತೆಯ ಬಗ್ಗೆ ಮುಹಮ್ಮದ್ ದೂತರಿಗೆ ತಿಳಿಸಿದಾಗ ಅವರು ಗಾಬರಿಯಿಂದ ಯಮನ್‌ಗೆ ಮರಳಿದರು. ಪರ್ಶಿಯಾದ ಹೊಸ ಸಾಮ್ರಾಟ ಯಮನ್ ರಾಜ್ಯಪಾಲರಿಗೆ ಪತ್ರ ಬರೆದು ಮುಹಮ್ಮದ್‌ರನ್ನು ಸೆರೆಹಿಡಿಯಬೇಡಿ, ಅವರನ್ನು ಬಿಟ್ಟುಬಿಡಿ ಎಂದು ಆದೇಶಿಸಿದರು.[೨೩೩]

ಮಕ್ಕಾ ವಿಜಯ

[ಬದಲಾಯಿಸಿ]
ಮಕ್ಕಾ ವಿಜಯದ ದಿನ ಬಿಲಾಲ್ ಕಅಬಾದ ಮೇಲೇರಿ ಆಝಾನ್ ಮೊಳಗಿಸುವ ಪರ್ಶಿಯನ್ ಚಿತ್ರ.

ಹುದೈಬಿಯ ಒಪ್ಪಂದದ ಪ್ರಕಾರ ಯಾವುದಾದರೂ ಗೋತ್ರವು ಕುರೈಷರೊಂದಿಗೆ ಸೇರಲು ಬಯಸಿದರೆ ಸೇರಬಹುದು ಮತ್ತು ಮುಹಮ್ಮದ್‌ರೊಂದಿಗೆ ಸೇರಲು ಬಯಸಿದರೆ ಸೇರಬಹುದು. ಹೀಗೆ ಬನೂ ಬಕರ್ ಗೋತ್ರವು ಕುರೈಷರೊಂದಿಗೆ ಮತ್ತು ಬನೂ ಖುಝಾಅ ಗೋತ್ರವು ಮುಹಮ್ಮದ್‌ರೊಂದಿಗೆ ಸೇರಿಕೊಂಡವು.[೨೪೦] ಬನೂ ಬಕರ್ ಮತ್ತು ಬನೂ ಖುಝಾಅ ಗೋತ್ರಗಳು ಅಜನ್ಮ ವೈರಿಗಳಾಗಿದ್ದರು. ಕದನ ವಿರಾಮವು ಅಸ್ತಿತ್ವದಲ್ಲಿರುವುದರಿಂದ ಕುರೈಷರೊಂದಿಗೆ ಸೇರಿದ ಗೋತ್ರಗಳು ಮುಹಮ್ಮದ್‌ರೊಂದಿಗೆ ಸೇರಿದ ಗೋತ್ರಗಳ ವಿರುದ್ಧ ಶಸ್ತ್ರವೆತ್ತುವಂತಿರಲಿಲ್ಲ. ಆದರೆ ಬನೂ ಬಕರ್ ಗೋತ್ರದವರು ಒಂದು ರಾತ್ರಿ ಅನಿರೀಕ್ಷಿತವಾಗಿ ಬನೂ ಖುಝಾಅ ಗೋತ್ರದವರ ಮೇಲೆ ಆಕ್ರಮಣ ಮಾಡಿ ಅವರ ಕೆಲವು ಜನರನ್ನು ಹತ್ಯೆ ಮಾಡಿದರು. ಬನೂ ಬಕರ್ ಗೋತ್ರಕ್ಕೆ ಕುರೈಷರು ಗುಪ್ತವಾಗಿ ಶಸ್ತ್ರಾಸ್ತ್ರ ಸರಬರಾಜು ಮಾಡಿದ್ದರು. ಆಕ್ರಮಣದಲ್ಲಿ ಕುರೈಷರು ಕೂಡ ಭಾಗಿಯಾಗಿದ್ದರೆಂದು ಹೇಳಲಾಗುತ್ತದೆ.[೨೪೧]

ಬನೂ ಖುಝಾಅ ಗೋತ್ರದ ಮುಖಂಡ ಅಮ್ರ್ ಬಿನ್ ಸಲೀಮ್ ನೇರವಾಗಿ ಮುಹಮ್ಮದ್‌ರ ಬಳಿಗೆ ಹೋಗಿ ಈ ಆಕ್ರಮಣದ ಬಗ್ಗೆ ತಿಳಿಸಿದರು. ಬನೂ ಖುಝಾಅ ಗೋತ್ರವು ಮುಹಮ್ಮದ್‌ರ ಮಿತ್ರಪಕ್ಷವಾಗಿರುವುದರಿಂದ ಅವರಿಗೆ ಸಹಾಯ ಮಾಡುವುದು ಮುಹಮ್ಮದ್‌ರ ಕರ್ತವ್ಯವಾಗಿತ್ತು. ಬನೂ ಖುಝಾಅ ಗೋತ್ರದ ಮೇಲೆ ಆಕ್ರಮಣ ಮಾಡಿದ ವಿಷಯ ಮುಹಮ್ಮದ್‌ರಿಗೆ ತಿಳಿಯುವುದಕ್ಕೆ ಮೊದಲೇ ಒಪ್ಪಂದವನ್ನು ಇನ್ನಷ್ಟು ಬಲಪಡಿಸಲು ಅಬೂ ಸುಫ್ಯಾನ್ ಮದೀನಕ್ಕೆ ಬಂದರು.[೨೪೨] ಆದರೆ ಆ ವಿಷಯ ಮುಹಮ್ಮದ್‌ರಿಗೆ ಈಗಾಗಲೇ ತಿಳಿದಿದ್ದರಿಂದ ಅವರು ಅಬೂ ಸುಫ್ಯಾನ್‌ರಿಗೆ ಯಾವುದೇ ಉತ್ತರ ನೀಡಲಿಲ್ಲ. ಅಬೂ ಸುಫ್ಯಾನ್ ಇತರ ಮುಸ್ಲಿಮ್ ಮುಖಂಡರನ್ನು ಸಂಪರ್ಕಿಸಿದರು. ಆದರೂ ಎಲ್ಲೂ ಅವರಿಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಗಲಿಲ್ಲ.[೨೪೩] ಅಬೂ ಸುಫ್ಯಾನ್ ಏನು ಮಾಡುವುದೆಂದು ತೋಚದೆ ಮಕ್ಕಾಗೆ ಹಿಂದಿರುಗಿದರು.

1910 ರ ಕಅಬಾಲಯದ ಚಿತ್ರ.

ಕುರೈಷರು ಒಪ್ಪಂದವನ್ನು ಉಲ್ಲಂಘಿಸಿದ ಕಾರಣ ಮುಹಮ್ಮದ್ ಸೈನ್ಯ ಸಮೇತ ಮಕ್ಕಾದ ಮೇಲೆ ಆಕ್ರಮಣ ಮಾಡಲು ನಿರ್ಧರಿಸಿದರು. ಅವರು 10,000 ಸೈನಿಕರೊಂದಿಗೆ ಹೊರಟು ಮಕ್ಕಾದ ಹೊರವಲಯದಲ್ಲಿ ಬೀಡುಬಿಟ್ಟರು. ಅಬೂ ಸುಫ್ಯಾನ್ ಅವರ ಬಳಿಗೆ ಬಂದು ಇಸ್ಲಾಮ್ ಧರ್ಮಕ್ಕೆ ಸೇರಿದರು.[೨೪೪] ಮರುದಿನ ಬೆಳಗ್ಗೆ ಮುಹಮ್ಮದ್ ಮತ್ತು ಸೈನ್ಯವು ಮಕ್ಕಾ ಪ್ರವೇಶ ಮಾಡಿತು. ಮಕ್ಕಾದಲ್ಲಿರುವ ಜನರಿಗೆ ತಮ್ಮ ಪ್ರಾಣವನ್ನು ರಕ್ಷಿಸಲು ಮುಹಮ್ಮದ್ ಮೂರು ಆಯ್ಕೆಗಳನ್ನು ನೀಡಿದರು. ಒಂದು: ಅಬೂ ಸುಫ್ಯಾನ್‌ರ ಮನೆಯನ್ನು ಪ್ರವೇಶಿಸುವುದು, ಎರಡು: ಕಅಬಾಲಯವನ್ನು ಪ್ರವೇಶಿಸುವುದು ಮತ್ತು ಮೂರು: ಅವರವರ ಮನೆಯೊಳಗೆ ಬಾಗಿಲು ಮುಚ್ಚಿ ಕೂರುವುದು. ಇವುಗಳಲ್ಲಿ ಒಂದನ್ನು ಸ್ವೀಕರಿಸಿದವರು ಸುರಕ್ಷಿತರು. ತಮ್ಮ ವಿರುದ್ಧ ಶಸ್ತ್ರವೆತ್ತದ ಯಾರನ್ನೂ ಕೊಲ್ಲಬಾರದೆಂದು ಮುಹಮ್ಮದ್ ತಮ್ಮ ಸೈನ್ಯಕ್ಕೆ ಕಟ್ಟಪ್ಪಣೆ ಮಾಡಿದರು. ಅದರಂತೆ ಜನರು ಕಅಬಾಲಯದಲ್ಲೂ ತಮ್ಮ ಮನೆಗಳಲ್ಲೂ ಸೇರಿಕೊಂಡರು.[೨೪೫] ಮುಹಮ್ಮದ್‌ರ ಸೈನ್ಯವನ್ನು ತಡೆಯಲು ಬಂದು ಸುಮಾರು 12 ಮಂದಿ ಹತರಾದರು. ಇದನ್ನು ಬಿಟ್ಟರೆ ಈ ಆಕ್ರಮಣವು ಸಂಪೂರ್ಣ ರಕ್ತರಹಿತವೂ ಶಾಂತಿಯುತವೂ ಆಗಿತ್ತು.[೨೪೬]

ಮುಹಮ್ಮದ್ ಕಅಬಾಲಯದ ಬಳಿಗೆ ಬಂದು ಅಲ್ಲಿದ್ದ ವಿಗ್ರಹಗಳನ್ನು ತೆರವುಗೊಳಿಸಿ ಕಅಬಾಲಯವನ್ನು ಶುಚೀಕರಿಸಿದರು. ಅಲ್ಲಿ 360 ವಿಗ್ರಹಗಳಿದ್ದವು. ಬಿಲಾಲ್ ಕಅಬಾದ ಮೇಲೇರಿ ಆಝಾನ್ ಮೊಳಗಿಸಿದರು. ಮುಹಮ್ಮದ್ ಜನರ ಕಡೆಗೆ ತಿರುಗಿ ಕೇಳಿದರು: "ಓ ಜನರೇ! ನಾನು ನಿಮ್ಮನ್ನು ಏನು ಮಾಡುತ್ತೇನೆಂದು ನೀವು ಭಾವಿಸಿದ್ದೀರಿ?" ಅವರು ಉತ್ತರಿಸಿದರು: "ತಾವು ಒಳ್ಳೆಯದನ್ನಲ್ಲದೆ ಇನ್ನೇನೂ ಮಾಡಲಾರಿರಿ ಎಂದು ನಾವು ಭಾವಿಸುತ್ತೇವೆ. ತಾವು ನಮ್ಮ ಒಬ್ಬ ಶ್ರೇಷ್ಠ ಸಹೋದರನ ಶ್ರೇಷ್ಠ ಪುತ್ರರಾಗಿದ್ದೀರಿ." ಮುಹಮ್ಮದ್ ಹೇಳಿದರು: "ಇಂದು ನಿಮ್ಮ ಮೇಲೆ ಯಾವುದೇ ಪ್ರತೀಕಾರವಿಲ್ಲ. ಹೋಗಿರಿ! ನೀವೆಲ್ಲರೂ ಸ್ವತಂತ್ರರು."[೨೪೭] ತನಗೆ ಹಿಂಸೆ ನೀಡಿ, ತನ್ನನ್ನು ಮತ್ತು ತನ್ನ ಅನುಯಾಯಿಗಳನ್ನು ಮಕ್ಕಾ ಬಿಟ್ಟು ಹೋಗುವಂತೆ ಮಾಡಿದ ಎಲ್ಲರಿಗೂ ಮುಹಮ್ಮದ್ ಸಾರ್ವತ್ರಿಕ ಕ್ಷಮಾಪಣೆ ಘೋಷಿಸಿದರು.

ವಿದಾಯದ ಹಜ್ಜ್

[ಬದಲಾಯಿಸಿ]
ಅರಫಾತ್ ಕಣಿವೆಯಲ್ಲಿರುವ ಜಬಲ್ ರಹ್ಮ ಪರ್ವತ. ಇಲ್ಲಿರುವ ಬಿಳಿ ಸ್ತಂಭದ ಬಳಿ ಮುಹಮ್ಮದ್ ವಿದಾಯ ಪ್ರವಚನ ನೀಡಿದರೆಂದು ನಂಬಲಾಗುತ್ತದೆ.

ಕ್ರಿ.ಶ. 631 ರಲ್ಲಿ ಮುಹಮ್ಮದ್ ಹಜ್ಜ್ ನಿರ್ವಹಿಸಲು ಮಕ್ಕಾಗೆ ತೆರಳುವುದಾಗಿ ಅನುಯಾಯಿಗಳಿಗೆ ತಿಳಿಸಿ, ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳುವಂತೆ ಹೇಳಿದರು.[೨೪೮] ದುಲ್-ಕಅದ ತಿಂಗಳ 25ನೇ ದಿನ ಶನಿವಾರ ಮಧ್ಯಾಹ್ನ ಝುಹರ್ ನಮಾಝ್ ನಿರ್ವಹಿಸಿದ ಬಳಿಕ ಅವರು ತಮ್ಮ ಅನುಯಾಯಿಗಳೊಡನೆ ಮದೀನದಿಂದ ಹೊರಟರು.[೨೪೯] ದುಲ್-ಹಿಜ್ಜ 4 ಭಾನುವಾರದಂದು ಅವರು ಮಕ್ಕಾ ತಲುಪಿದರು.[೨೫೦] ಕಅಬಾಲಯದಲ್ಲಿ ತವಾಫ್ ಮತ್ತು ಸಈ ನಿರ್ವಹಿಸಿದ ಬಳಿಕ ಅವರು ಮಕ್ಕಾದಲ್ಲಿ ನಾಲ್ಕು ದಿನ ತಂಗಿದರು. ದುಲ್-ಹಿಜ್ಜ 8 ಗುರುವಾರ ಅವರು ತಮ್ಮ ಅನುಯಾಯಿಗಳೊಡನೆ ಮಿನಾಗೆ ಹೊರಟರು. ಅಂದು ಅಲ್ಲಿ ತಂಗಿ ಮರುದಿನ ಬೆಳಗ್ಗೆ ಅಲ್ಲಿಂದ ಅರಫಾತ್‌ಗೆ ಹೊರಟರು.[೨೫೧] ಅಂದು ದುಲ್-ಹಿಜ್ಜ 9 ಶುಕ್ರವಾರ. ಇಸ್ಲಾಮಿಕ್ ನಂಬಿಕೆಯ ಪ್ರಕಾರ ಅರಫ ದಿನ. ಮುಹಮ್ಮದ್ ಅರಫಾತ್‌ನ ಕಣಿವೆಯಲ್ಲಿ ಒಂಟೆಯ ಮೇಲೆ ಕುಳಿತು[೨೫೦] ಸುಮಾರು 1,24,000 ಅಥವಾ 1,44,000 ಮಂದಿ[೨೫೧] ಅನುಯಾಯಿಗಳಿಗೆ ಬಹಳ ವಿಶಿಷ್ಟವಾದ ಒಂದು ಪ್ರವಚನವನ್ನು ನೀಡಿದರು. ಈ ಪ್ರವಚನವು "ವಿದಾಯ ಪ್ರವಚನ" (Farwell Sermon) ಎಂಬ ಹೆಸರಿನಲ್ಲಿ ಪ್ರಸಿದ್ಧಿ ಪಡೆಯಿತು. ಈ ಪ್ರವಚನದಲ್ಲಿ ಅವರು ಅನೇಕ ವಿಷಯಗಳ ಬಗ್ಗೆ ಮಾತನಾಡಿದರು. ದೇವರ ಹಕ್ಕುಗಳು, ಮಾನವ ಹಕ್ಕುಗಳು, ಮಹಿಳೆಯರ ಹಕ್ಕುಗಳು ಮುಂತಾದವುಗಳ ಬಗ್ಗೆ ತಮ್ಮ ಅನುಯಾಯಿಗಳಿಗೆ ತಿಳಿಸಿದರು.[೨೫೦] ದೇವರ ಗ್ರಂಥವನ್ನು (ಕುರ್‌ಆನ್) ಮತ್ತು ತನ್ನ ನಡವಳಿಕೆಯನ್ನು ಅನುಸರಿಸಿ ಜೀವಿಸುವಂತೆ ಅನುಯಾಯಿಗಳಿಗೆ ಒತ್ತಿ ಹೇಳಿದರು. ಪ್ರವಚನದ ಕೊನೆಯಲ್ಲಿ ಅವರು ತಮ್ಮ ಅನುಯಾಯಿಗಳೊಡನೆ, "ನಾನು ನಿಮಗೆ ದೇವರ ಸಂದೇಶವನ್ನು ತಲುಪಿಸಿದ್ದೇನಲ್ಲವೇ?" ಎಂದು ಕೇಳಿದರು. ಅನುಯಾಯಿಗಳೆಲ್ಲರೂ ಒಕ್ಕೊರಳಲ್ಲಿ ಹೌದು ಎಂದರು. ಆಗ ಅವರು ಆಕಾಶಕ್ಕೆ ಬೆರಳು ತೋರಿಸಿ, "ದೇವರೇ ನೀನೇ ಇದಕ್ಕೆ ಸಾಕ್ಷಿ" ಎಂದರು.[೨೫೨]

ಹಜ್ಜ್ ಮುಗಿಸಿದ ಬಳಿಕ ಅವರು ಮದೀನಕ್ಕೆ ಹಿಂದಿರುಗಿದರು.[೨೫೩]

ಮದೀನಾ ಮಸೀದಿಯಲ್ಲಿರುವ ಹಸಿರು ಗುಮ್ಮಟ. ಈ ಗುಮ್ಮಟದ ಕೆಳಗೆ ಮುಹಮ್ಮದ್‌ರ ಸಮಾಧಿಯಿದೆ.

ಹಿಜರಿ 11, ಸಫರ್ ತಿಂಗಳ 29 ನೇ ಸೋಮವಾರ ಮುಹಮ್ಮದ್ ಕಾಯಿಲೆ ಪೀಡಿತರಾದರು.[೨೫೪] ಕಾಯಿಲೆ ಉಲ್ಬಣಿಸುತ್ತಲೇ ಹೋಯಿತು. ಕೊನೆಗೆ ಅದೇ ಕಾಯಿಲೆಯಲ್ಲಿ ಅವರು ಹಿಜರಿ 11, ರಬೀಉಲ್ ಅವ್ವಲ್ ತಿಂಗಳ 12ನೇ ದಿನ ಸೋಮವಾರ (8 ಜೂನ್ 632) ಮಧ್ಯಾಹ್ನ ಕೊನೆಯುಸಿರೆಳೆದರು. ಆಗ ಅವರ ವಯಸ್ಸು 63.[೨೫೫] ನಿಧನರಾಗುವಾಗ ಅವರು ಸಂಪೂರ್ಣ ಅರೇಬಿಯನ್ ಪರ್ಯಾಯ ದ್ವೀಪದ ರಾಜನಾಗಿದ್ದರೂ ಅವರ ಬಳಿ ಯಾವುದೇ ಸಂಪತ್ತು ಅಥವಾ ಐಶ್ವರ್ಯವಿರಲಿಲ್ಲ. ತಮ್ಮಲ್ಲಿದ್ದ ಕೆಲವು ಶಸ್ತ್ರಗಳು ಮತ್ತು ತುಂಡು ಭೂಮಿಯನ್ನು ಅವರು ಮರಣಕ್ಕೆ ಮುಂಚೆಯೇ ದಾನ ಮಾಡಿದ್ದರು.[೨೫೬] ಅವರ ಯುದ್ಧಾಂಗಿಯನ್ನು ಮೂವತ್ತು ಬೊಗಸೆ ಜವೆಗಾಗಿ ಒಬ್ಬ ಯಹೂದಿಯ ಬಳಿ ಅಡವಿಡಲಾಗಿತ್ತು.[೨೫೬]

ಮುಹಮ್ಮದ್‌ರ ಸಮಾಧಿಯಿರುವ ಕೋಣೆಯ ಗೋಡೆ. ಇಲ್ಲಿ ಮುಹಮ್ಮದ್ ಮತ್ತು ಅವರ ಇಬ್ಬರು ಶಿಷ್ಯರಾದ ಅಬೂಬಕರ್ ಮತ್ತು ಉಮರ್ ರವರ ಸಮಾಧಿಗಳಿವೆ.

ಮುಹಮ್ಮದ್‌ರ ಮರಣ ಅವರ ಅನುಯಾಯಿಗಳಿಗೆ ಸಿಡಿಲೆರಗಿದಂತಹ ಆಘಾತವನ್ನು ನೀಡಿತ್ತು. ಅವರಲ್ಲಿ ಕೆಲವರಿಗೆ ಅದನ್ನು ನಂಬಲು ಕೂಡ ಸಾಧ್ಯವಾಗಲಿಲ್ಲ. ಮುಹಮ್ಮದ್ ನಿಧನರಾದರೆಂದು ಯಾರಾದರೂ ಹೇಳಿದರೆ ಅವರ ಕೈಕಾಲುಗಳನ್ನು ಕತ್ತರಿಸುತ್ತೇನೆ ಎಂದು ಉಮರ್ ಬಿನ್ ಖತ್ತಾಬ್ ಕೋಪದಿಂದ ಹೇಳುತ್ತಿದ್ದರು.[೨೫೭] ಅಬೂ ಬಕರ್ ಬಂದು ಅವರನ್ನು ಸಮಾಧಾನಪಡಿಸಿ, ನಂತರ ಪ್ರವಚನ ಪೀಠವನ್ನೇರಿ, "ಓ ಜನರೇ! ನೀವು ಮುಹಮ್ಮದ್‌ರನ್ನು ಆರಾಧಿಸುತ್ತಿದ್ದರೆ ಇಗೋ ಮುಹಮ್ಮದ್ ಅಸುನೀಗಿದ್ದಾರೆ. ಆದರೆ ನೀವು ದೇವರನ್ನು ಆರಾಧಿಸುವುದಾದರೆ ಅವನು ಎಂದಿಗೂ ಸಾಯದೆ ಸದಾ ಜೀವಂತವಾಗಿರುತ್ತಾನೆ." ಎಂದರು. ನಂತರ ಅವರು "ಮುಹಮ್ಮದ್ ಒಬ್ಬ ಪ್ರವಾದಿಯಲ್ಲದೆ ಇನ್ನೇನೂ ಅಲ್ಲ. ಅವರಿಗಿಂತ ಮೊದಲು ಅನೇಕ ಪ್ರವಾದಿಗಳು ಬಂದು ಹೋಗಿದ್ದಾರೆ. ಹೀಗಿರುವಾಗ, ಅವರು ನಿಧನರಾದರೆ ಅಥವಾ ಕೊಲೆಗೈಯಲ್ಪಟ್ಟರೆ ನೀವು ನಿಮ್ಮ ಹಿಮ್ಮಡಿಗಳಲ್ಲಿ ಓಡುವಿರಾ? ಯಾರಾದರೂ ಅವರ ಹಿಮ್ಮಡಿಗಳಲ್ಲಿ ಓಡಿ ಹೋದರೆ ಅದರಿಂದ ದೇವರಿಗೇನೂ ನಷ್ಟವಿಲ್ಲ. ಕೃತಜ್ಞರಾಗಿರುವವರಿಗೆ ದೇವರು ಸೂಕ್ತ ಪ್ರತಿಫಲವನ್ನು ನೀಡುವನು." ಎಂದು ಕುರ್‌ಆನ್ ಶ್ಲೋಕವನ್ನು ಪಾರಾಯಣ ಮಾಡಿದರು.[೨೫೮] ಆಗ ಮುಹಮ್ಮದ್ ನಿಧನರಾಗಿದ್ದಾರೆಂದು ಎಲ್ಲರಿಗೂ ಮನವರಿಕೆಯಾಯಿತು.[೨೫೮] ಹಿಜರಿ 11, ರಬೀಉಲ್ ಅವ್ವಲ್ ತಿಂಗಳ 14ನೇ ಬುಧವಾರ ಅವರನ್ನು ಅವರ ಪತ್ನಿ ಆಯಿಶರ ಮನೆಯಲ್ಲಿ ಸಮಾಧಿ ಮಾಡಲಾಯಿತು.

ಆಧಾರ ಗ್ರಂಥಗಳು

[ಬದಲಾಯಿಸಿ]
  1. Safi-ur-Rahman Mubarakpuri, The Sealed Nectar, 1996, Darussalam Publications, Riyadh.
  2. Sayyid Abul Hasan Ali Nadwi, Muhammad: The Last Prophet - A Model for All Time, 1993, UK Islamic Academy, UK.
  3. Ibn Kathir, The Life of the Prophet Muhammad, Trans. by Prof. Trevor Le Gassick, Garnet Publishing, UK.
  4. Ibn Ishaq, The Life of Muhammad, Trans. by A. Guillaume, 1998, Oxford University Press, Karachi.
  5. W. Montgomery Watt, Muhammad At Mecca, 1960, Oxford University Press, London.
  6. Washington Irving, Life of Mahomet, 1874, London George Bell & Sons.

ಟಿಪ್ಪಣಿಗಳು

[ಬದಲಾಯಿಸಿ]
  1. ಯೂನಿಕೋಡ್‌ನ U+FDF4 ನಲ್ಲಿ "ಮುಹಮ್ಮದ್" ﷴ ಎಂದು ಅರೇಬಿಕ್ ಭಾಷೆಯಲ್ಲಿ ಬರೆಯಲಾದ ಸಂಯುಕ್ತಾಕ್ಷರವಿದೆ.

ಉಲ್ಲೇಖಗಳು

[ಬದಲಾಯಿಸಿ]
  1. ಅರೇಬಿಕ್ ಉಚ್ಛಾರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ 
  2. ೨.೦ ೨.೧ ೨.೨ ೨.೩ Mubarakpuri, Safiur-Rahman (1996). The Sealed Nectar: Biography of the Noble Prophet. Dar-us-Salam Publications. p. 56.
  3. ೩.೦ ೩.೧ ೩.೨ ೩.೩ ೩.೪ ೩.೫ ೩.೬ "Muhammad: Prophet of Islam". britannica.com. Retrieved 18-02-2023. {{cite web}}: Check date values in: |access-date= (help)
  4. "Chapter: "Humiliated is a Man Before Whom I am Mentioned..."". sunnah.com. Retrieved 17-02-2023. {{cite web}}: Check date values in: |access-date= (help)
  5. Rodinson, Maxime (2002). Muhammad: Prophet of Islam. Tauris Parke Paperbacks. p. 38. ISBN 978-1-86064-827-4.
  6. ೬.೦ ೬.೧ Watt, William Montgomery (1960). Muhammad At Mecca. Oxford University Press. p. 47.
  7. Mubarakpuri, Safiur-Rahman (1996). The Sealed Nectar: Biography of the Noble Prophet. Dar-us-Salam Publications. p. 61.
  8. ೮.೦ ೮.೧ ೮.೨ ೮.೩ Watt, William Montgomery (1960). Muhammad At Mecca. Oxford University Press. p. 48.
  9. Mubarakpuri, Safiur-Rahman (1996). The Sealed Nectar: Biography of the Noble Prophet. Dar-us-Salam Publications. p. 68.
  10. Mubarakpuri, Safiur-Rahman (1996). The Sealed Nectar: Biography of the Noble Prophet. Dar-us-Salam Publications. p. 118.
  11. Mubarakpuri, Safiur-Rahman (1996). The Sealed Nectar: Biography of the Noble Prophet. Dar-us-Salam Publications. p. 169.
  12. Mubarakpuri, Safiur-Rahman (1996). The Sealed Nectar: Biography of the Noble Prophet. Dar-us-Salam Publications. p. 480.
  13. ೧೩.೦ ೧೩.೧ Mubarakpuri, Safiur-Rahman (1996). The Sealed Nectar: Biography of the Noble Prophet. Dar-us-Salam Publications. p. 49.
  14. ಅಬ್ದುಲ್ ಹೈ, ಮುಹಮ್ಮದ್ (2016). ಪ್ರವಾದಿ ಮುಹಮ್ಮದ್: ಆದರ್ಶ ಜೀವನ (in Kannada). ಶಾಂತಿ ಪ್ರಕಾಶನ, ಮಂಗಳೂರು. p. 24.{{cite book}}: CS1 maint: unrecognized language (link)
  15. ೧೫.೦ ೧೫.೧ ೧೫.೨ ೧೫.೩ ೧೫.೪ ೧೫.೫ ಅಬ್ದುಲ್ ಹೈ, ಮುಹಮ್ಮದ್ (2016). ಪ್ರವಾದಿ ಮುಹಮ್ಮದ್: ಆದರ್ಶ ಜೀವನ (in Kannada). ಶಾಂತಿ ಪ್ರಕಾಶನ, ಮಂಗಳೂರು. p. 25.{{cite book}}: CS1 maint: unrecognized language (link)
  16. ೧೬.೦ ೧೬.೧ ೧೬.೨ The Encyclopaedia of Islam. Vol. 7. Brill. 1986. pp. 361–376. ISBN 9004081143.
  17. Haykal, Mohammad Husayn (1997). The Life of Muhammad. American Trust Publications. p. 38. ISBN 0-89259-137-4.
  18. ೧೮.೦ ೧೮.೧ ೧೮.೨ ೧೮.೩ Haykal, Mohammad Husayn (1997). The Life of Muhammad. American Trust Publications. p. 48. ISBN 0-89259-137-4.
  19. ಉಲ್ಲೇಖ ದೋಷ: Invalid <ref> tag; no text was provided for refs named :59
  20. "Chapter: It is recommended to fast three days of every month, and to fast on the days of 'Arafah and 'Ashura', and to fast on Mondays and Thursdays". sunnah.com. Retrieved 19-02-2023. {{cite web}}: Check date values in: |access-date= (help)
  21. Haykal, Mohammad Husayn (1997). The Life of Muhammad. American Trust Publications. p. 47. ISBN 0-89259-137-4.
  22. Mubarakpuri, Safiur-Rahman (1996). The Sealed Nectar: Biography of the Noble Prophet. Dar-us-Salam Publications. p. 55.
  23. ೨೩.೦ ೨೩.೧ Ibn Kathir. The Life of the Prophet Muhammad. Vol. 1. Translated by Prof. Trevor Le Gassick. 2006: Garnet Publishing. p. 160. ISBN 1-85964142-3.{{cite book}}: CS1 maint: location (link)
  24. Ibn Ishaq (1998). The Life of Muhammad. Translated by A. Guillaume. Oxford University Press. p. 70. ISBN 0-19-636033-1.
  25. Mubarakpuri, p. 58.
  26. https://sunnah.com/muslim:162c
  27. Mubarakpuri, p.59
  28. Umri, 1/105
  29. ೨೯.೦ ೨೯.೧ Ibn Ishaq, p.73
  30. Umri, 1/150
  31. Ibn Ishaq, p. 79
  32. Ibn Ishaq, p.72
  33. ೩೩.೦ ೩೩.೧ ೩೩.೨ Umri 1/106
  34. Ibn Ishaq, p. 79-81
  35. Ibn Ishaq, p. 80-81
  36. Mubarakpuri, p.60
  37. ೩೭.೦ ೩೭.೧ ೩೭.೨ ೩೭.೩ Mubarakpuri, p.62
  38. W.M. Watt, p.38
  39. ೩೯.೦ ೩೯.೧ ೩೯.೨ Ibn Ishaq, p.82
  40. Haykal, p.62
  41. Ibn Kathir, 1/281
  42. ೪೨.೦ ೪೨.೧ ೪೨.೨ ೪೨.೩ Mubarakpuri, p. 67
  43. ೪೩.೦ ೪೩.೧ ೪೩.೨ ೪೩.೩ https://sunnah.com/bukhari:3
  44. Ibn Ishaq, p.106
  45. Mubarakpuri, p. 70
  46. Ibn Kathir, 1/300
  47. https://sunnah.com/bukhari:3215
  48. https://sunnah.com/bukhari:2
  49. ೪೯.೦ ೪೯.೧ ೪೯.೨ ೪೯.೩ ೪೯.೪ Abul Hasan, p. 32-33
  50. Ibn Ishaq, p. 111
  51. W.M. Watt, p.86
  52. Ibn Ishaq, p.114
  53. Mubarakpuri, p.77
  54. Ibn Ishaq, p.115
  55. ೫೫.೦ ೫೫.೧ Abul Hasan, p. 34
  56. ೫೬.೦ ೫೬.೧ W.M. Watt, p.58
  57. Ibn Ishaq, p. 112
  58. ೫೮.೦ ೫೮.೧ ೫೮.೨ Mubarakpuri, p.79
  59. Mubarakpuri, p.98
  60. Ibn Ishaq, p.117
  61. ೬೧.೦ ೬೧.೧ ೬೧.೨ Mubarakpuri, p.83
  62. Abul Hasan, p. 35
  63. ೬೩.೦ ೬೩.೧ ೬೩.೨ ೬೩.೩ Haykal, p. 88
  64. Mubarakpuri, p.87
  65. Ibn Ishaq, p.144
  66. Abul Hasan, p.37
  67. Ibn Kathir, 1/347
  68. https://sunnah.com/ibnmajah:150
  69. Ibn Ishaq, p.130
  70. Abul Hasan, p.41
  71. ೭೧.೦ ೭೧.೧ Haykal, p.96
  72. Haykal, p.97
  73. Abul Hasan, p. 43
  74. Ibn Ishaq, p.132-133
  75. Mubarakpuri, p.85
  76. Haykal, p.88
  77. ೭೭.೦ ೭೭.೧ Abul Hasan, p.36
  78. Ibn Kathir, 1/344
  79. Haykal, p.90
  80. Ibn Kathir, 1/345
  81. Mubarakpuri, p.99
  82. Ibn Ishaq, p.146
  83. ೮೩.೦ ೮೩.೧ Abul Hasan, p. 44
  84. Haykal, p.106
  85. W.M. Watt, p.102
  86. ೮೬.೦ ೮೬.೧ ೮೬.೨ ೮೬.೩ Mubarakpuri, p.102
  87. Haykal, p.105
  88. W.M. Watt, p.110
  89. Abul Hasan, p.45
  90. Mubarakpuri, p.103
  91. ೯೧.೦ ೯೧.೧ Haykal, p.100
  92. ೯೨.೦ ೯೨.೧ Abul Hasan, p.47
  93. Haykal, p.95
  94. Mubarakpuri, p.108-109
  95. Haykal, p.131
  96. Mubarakpuri, p.105
  97. ೯೭.೦ ೯೭.೧ Mubarakpuri, p.116
  98. ೯೮.೦ ೯೮.೧ Abul Hasan, p.51
  99. ೯೯.೦ ೯೯.೧ Mubarakpuri, p.117
  100. Ibn Ishaq, p.160
  101. ೧೦೧.೦ ೧೦೧.೧ ೧೦೧.೨ Mubarakpuri, p.118
  102. Ibn Ishaq, p.172
  103. Haykal, p.132
  104. Haykal, p.133
  105. Mubarakpuri, p.119
  106. Mubarakpuri, p.123
  107. Haykal, p.135
  108. Mubarakpuri, p.124
  109. Mubarakpuri, p.125
  110. ೧೧೦.೦ ೧೧೦.೧ Ibn Ishaq, p.193
  111. ೧೧೧.೦ ೧೧೧.೧ W.M. Watt, p.139
  112. ೧೧೨.೦ ೧೧೨.೧ ೧೧೨.೨ Abul Hasan, p.54
  113. ೧೧೩.೦ ೧೧೩.೧ ೧೧೩.೨ Mubarakpuri, p.136
  114. Mubarakpuri, p.137
  115. ೧೧೫.೦ ೧೧೫.೧ Abul Hasan, p.55
  116. Mubarakpuri, p.138
  117. Haykal, p.139
  118. ೧೧೮.೦ ೧೧೮.೧ Mubarakpuri, p.147
  119. Haykal, p.140
  120. Ibn Ishaq, p.182
  121. Ibn Ishaq, p.185
  122. Ibn Ishaq, p.194
  123. Haykal, p.148
  124. Mubarakpuri, p.145
  125. Ibn Ishaq, p.198
  126. Mubarakpuri, p.146
  127. Abul Hasan, p.57
  128. W.M. Watt, p.145
  129. Ibn Ishaq, p.199
  130. Mubarakpuri, p.154
  131. ೧೩೧.೦ ೧೩೧.೧ Abul Hasan, p.58
  132. Mubarakpuri, p.155
  133. Ibn Ishaq, p.202
  134. Mubarakpuri, p.158
  135. Ibn Ishaq, p. 204
  136. Abul Hasan, p.59
  137. W.M. Watt, p.149
  138. Ibn Ishaq, p.216
  139. Mubarakpuri, p.163
  140. Mubarakpuri, p.164
  141. Abul Hasan, p.60
  142. Ibn Ishaq, p. 221
  143. Mubarakpuri, p.166
  144. W.M. Watt, p.150
  145. ೧೪೫.೦ ೧೪೫.೧ Ibn Ishaq, p. 222
  146. ೧೪೬.೦ ೧೪೬.೧ Mubarakpuri, p.169
  147. Haykal, p.163
  148. W.M. Watt, p.151
  149. ೧೪೯.೦ ೧೪೯.೧ Mubarakpuri, p.170
  150. ೧೫೦.೦ ೧೫೦.೧ Ibn Ishaq, p.224
  151. Mubarakpuri, p.171
  152. Haykal, p.165
  153. Mubarakpuri, p.172
  154. Ibn Ishaq, p.226
  155. Haykal, p.168
  156. Mubarakpuri, p.174
  157. Mubarakpuri, p.175
  158. Ibn Ishaq, p.227
  159. Abul Hasan, p.67
  160. Mubarakpuri, p.176
  161. ೧೬೧.೦ ೧೬೧.೧ ೧೬೧.೨ ೧೬೧.೩ Ibn Ishaq, p.228
  162. Haykal, p.171
  163. Abul Hasan, p.68
  164. ೧೬೪.೦ ೧೬೪.೧ Haykal, p.174
  165. Mubarakpuri, p.182
  166. Ibn Ishaq, p.234
  167. Ibn Ishaq, p.232
  168. Mubarakpuri, p.199
  169. Abul Hasan, p.70
  170. Ibn Ishaq, p.246
  171. Haykal, p.194
  172. Ibn Ishaq, p.235
  173. Abul Hasan, p.72
  174. ೧೭೪.೦ ೧೭೪.೧ Ibn Ishaq, p.289
  175. Mubarakpuri, p.210
  176. Haykal, p. 263
  177. Mubarakpuri, p. 211
  178. Ibn Ishaq, p.291
  179. Ibn Ishaq, p.293
  180. Abul Hasan, p. 75
  181. Ibn Ishaq, p.294
  182. Ibn Ishaq, p.292-93
  183. Abul Hasan, p. 76
  184. Mubarakpuri, p. 212
  185. Ibn Ishaq, p.296-97
  186. Abul Hasan, p. 77
  187. Mubarakpuri, p. 215
  188. Abul Hasan, p. 78
  189. ೧೮೯.೦ ೧೮೯.೧ ೧೮೯.೨ Abul Hasan, p. 81
  190. Ibn Ishaq, p.314
  191. Mubarakpuri, p.245
  192. Haykal, p.254
  193. Ibn Ishaq, p.370
  194. Abul Hasan, p.83
  195. Ibn Ishaq, p.371
  196. Mubarakpuri, p.247
  197. ೧೯೭.೦ ೧೯೭.೧ Ibn Ishaq, p.372
  198. ೧೯೮.೦ ೧೯೮.೧ Ibn Ishaq, p.373
  199. Mubarakpuri, p.253
  200. Mubarakpuri, p.263
  201. Mubarakpuri, p.264
  202. Mubarakpuri, p.265
  203. Mubarakpuri, p.270
  204. Abul Hasan, p.94
  205. ೨೦೫.೦ ೨೦೫.೧ Mubarakpuri, p. 311
  206. Ibn Ishaq, p.450
  207. Mubarakpuri, p. 312
  208. Abul Hasan, p.100
  209. ೨೦೯.೦ ೨೦೯.೧ Mubarakpuri, p. 313
  210. Mubarakpuri, p. 314
  211. Ibn Ishaq, p.453
  212. ೨೧೨.೦ ೨೧೨.೧ ೨೧೨.೨ ೨೧೨.೩ Mubarakpuri, p. 319
  213. Abul Hasan, p.105
  214. Abul Hasan, p.106
  215. Mubarakpuri, p. 320
  216. ೨೧೬.೦ ೨೧೬.೧ Abul Hasan, p.109
  217. Mubarakpuri, p.323
  218. Abul Hasan, p.111
  219. ೨೧೯.೦ ೨೧೯.೧ Mubarakpuri, p.330
  220. Ibn Ishaq, p. 503
  221. Mubarakpuri, p. 342
  222. Ibn Ishaq, p. 504
  223. Mubarakpuri, p. 343
  224. Mubarakpuri, p. 344
  225. Ibn Ishaq, p. 507
  226. Mubarakpuri, p. 347
  227. Ibn Ishaq, p. 508
  228. Mubarakpuri, p. 349
  229. Mubarakpuri, p. 348
  230. ೨೩೦.೦ ೨೩೦.೧ Mubarakpuri, p. 350
  231. Mubarakpuri, p. 353
  232. ೨೩೨.೦ ೨೩೨.೧ Mubarakpuri, p. 354
  233. ೨೩೩.೦ ೨೩೩.೧ Mubarakpuri, p. 355
  234. ೨೩೪.೦ ೨೩೪.೧ Mubarakpuri, p. 358
  235. Mubarakpuri, p. 359
  236. Mubarakpuri, p. 360
  237. Mubarakpuri, p. 361
  238. Abul Hasan, p.123
  239. Abul Hasan, p. 126
  240. Mubarakpuri, p. 388
  241. Abul Hasan, p. 143
  242. Mubarakpuri, p. 389
  243. Abul Hasan, p. 144
  244. Abul Hasan, p. 146
  245. Mubarakpuri, p. 393
  246. Abul Hasan, p. 149
  247. Mubarakpuri, p. 396
  248. Abul Hasan, p. 173
  249. Mubarakpuri, p. 461
  250. ೨೫೦.೦ ೨೫೦.೧ ೨೫೦.೨ Abul Hasan, p. 174
  251. ೨೫೧.೦ ೨೫೧.೧ Mubarakpuri, p. 463
  252. Mubarakpuri, p. 465
  253. Abul Hasan, p. 177
  254. Mubarakpuri, p. 472
  255. Mubarakpuri, p. 479
  256. ೨೫೬.೦ ೨೫೬.೧ Abul Hasan, p. 185
  257. Mubarakpuri, p. 480
  258. ೨೫೮.೦ ೨೫೮.೧ Mubarakpuri, p. 481