ಅಲೆಕ್ಸಾಂಡರ್ ಸೆರ್ಗೆಯ್‍ವಿಚ್ ಗ್ರಿಬಯೆಡಫ್

ಅಲೆಕ್ಸಾಂಡರ್ ಸೆರ್ಗೆಯ್‍ವಿಚ್ ಗ್ರಿಬಯೆಡಫ್ (1795-1829) ಒಬ್ಬ ರಷ್ಯನ್ ನಾಟಕಕಾರ ಹಾಗೂ ರಾಯಭಾರ ನಿರ್ವಾಹಕ.
ಜೀವನ, ಬರೆದ ಕೃತಿಗಳು
[ಬದಲಾಯಿಸಿ]ಮಾಸ್ಕೋದಲ್ಲಿ ಹುಟ್ಟಿದ ಈತ ಅದೇ ವಿಶ್ವವಿದ್ಯಾಲಯದ ವಿಜ್ಞಾನ, ಸಾಹಿತ್ಯ ಮತ್ತು ನ್ಯಾಯಶಾಸ್ತ್ರಗಳಲ್ಲಿ ಪದವಿಗಳನ್ನು ಪಡೆದ. ಅನಂತರ ರಷ್ಯದ ಅಶ್ವದಳವನ್ನು ಸೇರಿ 1816ರಲ್ಲಿ ಅವನ್ನು ತ್ಯಜಿಸಿ, ಪರರಾಜ್ಯ ಕಚೇರಿಯಲ್ಲಿ ಗುಮಾಸ್ತನಾದ. ಈ ಅವಧಿಯಲ್ಲಿ ರಾಜಧಾನಿಯ ರಂಗಭೂಮಿ ಈತನ ನಾಟಕಾಸಕ್ತಿಯ ಕೇಂದ್ರವೆನ್ನಿಸಿತು; ಹೀಗಾಗಿ ಈತ ಕೆಲವು ಹರ್ಷನಾಟಕಗಳನ್ನು ಬರೆದು ಪ್ರದರ್ಶಿಸಿದ. ಆದರೆ ಅವು ಅಷ್ಟೇನೂ ಖ್ಯಾತಿ ಗಳಿಸಲಿಲ್ಲ. ಅಲ್ಲದೆ ರಾಜಧಾನಿಯ ಕ್ರಾಂತಿಕಾರಕ ವರ್ತುಲಗಳೊಡನೆಯೂ ಸಂಪರ್ಕವನ್ನಿಟ್ಟುಕೊಂಡಿದ್ದುದರಿಂದ ದೇಶದ ಗಣ್ಯರ ದೃಷ್ಟಿಗೆ ಬೀಳುವಂತಾದ. ಪರರಾಜ್ಯ ಕಚೇರಿಯಲ್ಲಿ ಅತ್ಯಂತ ದಕ್ಷತೆಯಿಂದ ದುಡಿಯುತ್ತಿದ್ದುದರ ಫಲವಾಗಿ ಈತನನ್ನು ಪರ್ಷಿಯದ ರಾಜಧಾನಿಯಾದ ಟೆಹರಾನಿಗೆ ರಷ್ಯನ್ ನಿಯೋಗದ ಕಾರ್ಯದರ್ಶಿಯಾಗಿ (1822) ನೇಮಿಸಲಾಯಿತು.
ಈ ಅವಧಿಯಲ್ಲಿ (1822-1823) ಈತ ಗೋರೆ ಒಟ್ ಉಮ ಅಥವಾ ದ ಮಿಸ್ಚೀಫ್ ಆಫ್ ಬೀಯಿಂಗ್ ಕ್ಲೆವರ್ (ಇಂಗ್ಲಿಷ್ ಭಾಷಾಂತರ 1925) ಎಂಬ ಹರ್ಷನಾಟಕದ ಬಹು ಭಾಗವನ್ನು ಬರೆದ. ಅನಂತರ 1823-1825ರ ಅವಧಿಯಲ್ಲಿ ರಜೆ ಪಡೆದು ಟೆಹಾರಾನಿನಿಂದ ಸ್ವದೇಶಕ್ಕೆ ಮರಳಿ, ಅಲ್ಲಿ ಆ ನಾಟಕವನ್ನು ಪೂರ್ತಿಗೊಳಿಸಿದ. ಸರ್ಕಾರದ ಪರಾಮರ್ಶಕರು (ಸೆನ್ಸಾರ್) ಇದನ್ನು ರಂಗಭೂಮಿಯಲ್ಲಿ ಪ್ರದರ್ಶಿಸಲು ಅನುಮತಿ ನೀಡಲಿಲ್ಲ. ಆದರೆ ಇದರ ಎಷ್ಟೋ ಸಾವಿರ ಹಸ್ತಪ್ರತಿಗಳು ದೇಶದಲ್ಲಿ ಕೈಯಿಂದ ಕೈಗೆ ಸಾಗಿ ಜನಮನವನ್ನು ಸೂರೆಗೊಂಡಿತು.[೧] ಆದುದರಿಂದ ಇದು ಅನಧಿಕೃತವಾಗಿ 1825ರಲ್ಲಿಯೇ ಪ್ರಕಟವಾಯಿತೆನ್ನಬಹುದು. ಅದೇ ವರ್ಷ ಒಂದನೆಯ ನಿಕಲಸ್ ದೊರೆಯ ವಿರುದ್ಧ ಸಿಡಿದೆದ್ದ ಕ್ರಾಂತಿಯಲ್ಲಿ ಪಾಲುಗೊಂಡನೆಂಬ ಆರೋಪಕ್ಕೊಳಗಾಗಿ ಈತ ಬಂಧನಕ್ಕೀಡಾದ. ಆದರೂ ತಾನು ನಿರಪರಾಧಿಯೆಂದು ಸರ್ಕಾರವನ್ನು ಹೇಗೋ ನಂಬಿಸಿ, ತೊಂದರೆಯಿಂದ ಪಾರಾದ. ಅನಂತರ 1828ರಲ್ಲಿ ಟೆಹರಾನಿಗೆ ರಷ್ಯದ ರಾಯಭಾರಿಯಾಗಿ ನೇಮಕಗೊಂಡ. 1829ರಲ್ಲಿ ಟೆಹರಾನಿನಲ್ಲಿದ್ದ ರಷ್ಯನ್ ದೂತವಾಸಕ್ಕೆ ಕೆಲವು ಸ್ಥಳೀಯ ನಾಗರಿಕರು ದಾಳಿಯಿಟ್ಟಾಗ ಈತ ಉದ್ರಿಕ್ತ ಜನರಿಂದ ಕೊಲೆಯಾದ.[೨][೩] ಈತನ ಗೋರೆ ಒಟ್ ಉಮ ನಾಟಕ ಪ್ರಪ್ರಥಮವಾಗಿ ಮುದ್ರಿತವಾದದು ಈತ ಮಡಿದ ನಾಲ್ಕು ವರ್ಷಗಳ ಮೇಲೆ (1833). ತಾನು ಬದುಕಿದ್ದಾಗ ಒಮ್ಮೆ ಮಾತ್ರ ಈತ ಈ ನಾಟಕವನ್ನು ರಂಗಭೂಮಿಯ ಮೇಲೆ ನೋಡಿದ್ದ.
ಈತನ ಖ್ಯಾತಿ ಇಂದಿಗೂ ಉಳಿದಿರುವುದು ಈ ನಾಟಕದಿಂದಾಗಿ, ಈತನ ಇತರ ನಾಟಕಗಳು ನಿರ್ಲಕ್ಷಿಸಬಹುದಾದಂಥವು. ಪ್ರಾಸಬದ್ಧವಾದ ಪದ್ಯಗಳಿಂದ ರಚಿಸಿರುವ ಈ ನಾಟಕ ಅಂದಿನ ರಷ್ಯದಲ್ಲಿ ವ್ಯಾಪಕವಾಗಿದ್ದ ಲಂಚಗುಳಿತನ, ಅಧಿಕಾರ ಸ್ಥಾನಗಳಲ್ಲಿ ತಾಂಡವವಾಡುತ್ತಿದ್ದ ಸ್ವಾರ್ಥ ಮತ್ತು ಆಡಂಬರ ಇವುಗಳ ವಿಡಂಬನೆಯಾಗಿದೆ. ಇದರಲ್ಲಿ ಕಥಾವಸ್ತುವಿನ ರಚನೆಗಿಂತ ಸಂಭಾಷಣೆಗೂ, ಪಾತ್ರನಿರೂಪಣೆಗೂ ಹೆಚ್ಚಿನ ಪ್ರಾಮುಖ್ಯ ಕೊಡಲಾಗಿದೆ. ಇದರಲ್ಲಿರುವ ಸಂಭಾಷಣೆಯ ಎಷ್ಟೋ ಮಾತುಗಳು ರಷ್ಯನ್ ಭಾಷೆಯ ಮೇಲೆ ಮಹತ್ತ್ವವಾದ ಪ್ರಭಾವವನ್ನು ಬೀರಿ ಅವು ಈಗ ಗಾದೆ ಮಾತುಗಳಾಗಿವೆ. ನಾಟುನುಡಿಗಳ ಮತ್ತು ಪ್ರತ್ಯುಕ್ತಿಗಳ ಮಟ್ಟಿಗೆ ಹೇಳುವುದಾದರೆ ಈ ನಾಟಕಕ್ಕೆ ಸರಿಸಾಟಿಯಾದ ಕೃತಿ ಸಮಗ್ರ ರಷ್ಯನ್ ಸಾಹಿತ್ಯದಲ್ಲಿಯೇ ಇನ್ನೊಂದಿಲ್ಲ.
ಉಲ್ಲೇಖಗಳು
[ಬದಲಾಯಿಸಿ]- ↑
One or more of the preceding sentences incorporates text from a publication now in the public domain: Chisholm, Hugh, ed. (1911). . Encyclopædia Britannica. Vol. 12 (11th ed.). Cambridge University Press. p. 593. {{cite encyclopedia}}: Cite has empty unknown parameters:|separator=and|HIDE_PARAMETER=(help); Invalid|ref=harv(help) - ↑ Hopkirk, Peter. The Great Game: The Struggle for Empire in Central Asia. New York: Kodansha Globe, 1997 p. 122 ISBN 1-56836-022-3
- ↑ Baron K. K. Bode. "Griboyedov's Death". www.feb-web.ru.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Works by or about ಅಲೆಕ್ಸಾಂಡರ್ ಸೆರ್ಗೆಯ್‍ವಿಚ್ ಗ್ರಿಬಯೆಡಫ್ at Internet Archive
- Works by ಅಲೆಕ್ಸಾಂಡರ್ ಸೆರ್ಗೆಯ್‍ವಿಚ್ ಗ್ರಿಬಯೆಡಫ್ at LibriVox (public domain audiobooks)

- Pages using duplicate arguments in template calls
- CS1 errors: empty unknown parameters
- CS1 errors: invalid parameter value
- 1911 ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ
- Wikipedia articles incorporating text from the 1911 Encyclopædia Britannica
- Articles with Internet Archive links
- Articles with LibriVox links
- ರಾಯಭಾರಿಗಳು
- ನಾಟಕಕಾರರು
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ