ಅರ್ಥ - ದರ್ಶನ

ವಿಕಿಪೀಡಿಯ ಇಂದ
Jump to navigation Jump to search

ಅರ್ಥ ಎಂಬ ಶಬ್ದಕ್ಕೆ ಅನೇಕಾರ್ಥಗಳು ಬಳಕೆಯಲ್ಲಿವೆ. ವಿಶಾಲಾರ್ಥದಲ್ಲಿ ಬಳಸಿದರೆ, ಮತ್ತೊಂದನ್ನು ಸೂಚಿಸುವ, ಆದರೆ ಪ್ರತಿಕೃತಿಯಾಗಿರದ, ಯಾವುದೇ ಒಂದು ವಸ್ತು ಇಲ್ಲವೆ ಕ್ರಿಯೆ ಅರ್ಥವತ್ತೆನ್ನಬಹುದು. ಅರ್ಥತ್ತ್ವದಿಂದಾಗಿ ಅದನ್ನು ಸಂಜ್ಞೆ ಅಥವಾ ಸಂಕೇತವೆನ್ನಲೂಬಹುದು. ಭಾವಚಿತ್ರ ಒಬ್ಬನನ್ನು ಚಿತ್ರಿಸಿದರೂ ಅವನು ಅದರ ಅರ್ಥವಲ್ಲ; ಅವನ ವರ್ಣನೆಗಳ ಅರ್ಥ ಅವನಾಗಬಹುದು. ಮನಬಂದಂತೆ ಒಂದನ್ನು ಇನ್ನೊಂದಕ್ಕೆ ಪ್ರತೀಕವಾಗಿಸಬಹುದು. ತ್ರಿವರ್ಣಧ್ವಜ ಭಾರತ ರಾಷ್ಟ್ರವನ್ನು ಪ್ರತಿನಿಧಿಸುವುದು ಉದಾಹರಣೆ. ಕೆಲವೊಂದು ಸ್ವಾಭಾವಿಕ ಸಂಬಂಧಗಳನ್ನು ಅನುಲಕ್ಷಿಸಿಯೂ ಪ್ರತೀಕಗಳನ್ನು ಬಳಸಬಹುದು. ಉದಾಹರಣೆಗೆ, ಉಂಗುರವಿವಾಹಕ್ಕೆ ಪ್ರತೀಕವಾಗಿರುವಂತೆ, ಕೆಲವೊಂದು ವಸ್ತುಗಳಿಗೆ ತಮ್ಮ ಸ್ವರೂಪಕ್ಕೆ ಸಂಬಂಧಿಸಿದ ಆದರೆ ಅರ್ಥಕ್ಕೆ ಮಾತ್ರ ಸಂಬಂಧಿಸಿದ ಹೆಸರುಗಳೂ ಇರುವುದುಂಟು. ಉದಾಹರಣೆ-ಮುಟ್ಟಿದರೆ ಮುನಿ. ಹೀಗೆ ವಿಶಾಲಾರ್ಥದಲ್ಲಿ ಎಲ್ಲ ಕಲೆಗಳ, ವಿಜ್ಞಾನಗಳ, ಗುರಿಯೂ ವಸ್ತುಗಳ ಅರ್ಥ ಶೋಧನೆಯೇ ಎಂದರೆ ಸಲ್ಲುತ್ತದೆ. ಮನುಷ್ಯ ಪ್ರಾಣಿಯಿಲ್ಲದಿದ್ದರೂ ಧ್ವನಿಗಳೂ ವಸ್ತುಗಳೂ ಜಗತ್ತಿನಲ್ಲಿ ಇರಬಲ್ಲವು; ಆದರೆ ಅವು ಅರ್ಥವತ್ತಾದ ಪ್ರತೀಕಗಳೆನಿಸುವುದು ಮನುಷ್ಯ ಬುದ್ಧಿಯಿಂದ ಮಾತ್ರ. ಆದ್ದರಿಂದ ಎಲ್ಲ ಮನುಷ್ಯನ ವಿಚಾರಗಳೂ ಕಲ್ಪನೆಗಳೂ ಅರ್ಥದ ಪ್ರಕಾರ ಲೇಶಗಳೇ ಸರಿ. ಆದರೆ ಅತಿ ಪ್ರಸಿದ್ಧವೂ ಅತಿ ಪರಿಚಿತವೂ ಆದ ಪ್ರತೀಕವೆಂದರೆ ಭಾಷೆಯೊಂದೇ. ಆದ್ದರಿಂದ ತತ್ತ್ವಶಾಸ್ತ್ರದಲ್ಲಿ ವಿವೇಚಿಸುವ ಅರ್ಥ ಭಾಷೆಗೆ ಮಾತ್ರ ಸಂಬಂಧಿಸಿದ್ದು. ತರ್ಕಶಾಸ್ತ್ರದಲ್ಲಿ ಅರ್ಥವನ್ನು ಎರಡು ಬಗೆಗಳಾಗಿ ವಿಂಗಡಿಸಿದ್ದಾರೆ : 1. ಕರ್ತೃಪದ ಇಲ್ಲವೆ ಕ್ರಿಯಾಪದಕ್ಕಿರುವ ಅನ್ವಯವ್ಯಾಪ್ತಿ. ಯಾವುದಕ್ಕೆ ಒಂದು ಪದ ಅನ್ವಯಿಸುವುದೆಂಬ ಜ್ಞಾನವಿದ್ದರೆ ಈ ಬಗೆಯ ಅರ್ಥಜ್ಞಾನವಿದೆಯೆನ್ನಬಹುದು. ರಾಮ ಎಂಬ ಪದ ದಶರಥಪುತ್ರನೆಂಬ ವ್ಯಕ್ತಿಗೆ ಅನ್ವಯಿಸುವುದೆಂಬ ಪರಿಜ್ಞಾನವೇ ಅದರ ವ್ಯಾಪ್ತಿ ನಿರ್ದೇಶಕ ಅರ್ಥ 2. ಒಂದು ಪದದಿಂದ ಅಭಿಪ್ರೇತವಾಗಿರುವ ಅರ್ಥಸ್ವರೂಪ. ಪದ ಸೂಚಿಸುವ ಗುಣ ಹಾಗೂ ಲಕ್ಷಾಣಾದಿಗಳು ಇದರಲ್ಲಿ ಸೇರುತ್ತವೆ. ಇದು ಶ್ರೋತೃಗಳಿಗೆ ಬೇರೆ ಬೇರೆಯಾಗಿದ್ದರೆ ವೈಯಕ್ತಿಕ ಅರ್ಥ ಎಲ್ಲರಿಗೂ ಸಮಾನವಾಗಿರುವಾಗ ಸಾಂಕೇತಿಕ ಅರ್ಥ. ಮನುಷ್ಯ ಎಂದರೆ ಆಲೋಚನಾ ಸಾಮಥರ್್ಯವುಳ್ಳ[[ ಪ್ರಾಣಿ]ಯೆಂಬುದು ಇದಕ್ಕೆ ಉದಾಹರಣೆ. ತತ್ತ್ವಶಾಸ್ತ್ರದಲ್ಲಿ ಅರ್ಥಮೀಮಾಂಸೆಯನ್ನು ಕುರಿತು ಅನೇಕ ಸಿದ್ಧಾಂತಗಳು ಹುಟ್ಟಿವೆ. ಪುರೋಭಾಗಿ ಎಂದರೆ ದೋಷಗಳನ್ನು ಮಾತ್ರ ಎತ್ತಿ ಹಿಡಿಯುವವನು ಎಂದರ್ಥವೆಂಬ ವಾಕ್ಯವನ್ನು ನೋಡೋಣ. ಇಲ್ಲಿ ಅರ್ಥದ ಸ್ವರೂಪವೇನು? ಶಬ್ದದ ಶ್ರೋತೃಗ್ರಾಹ್ಯ ಅಂಶವಾಗಲಿ, ಅದರ ಪರಿಣಾಮ ವಿಶೇಷವಾಗಲಿ, ಅರ್ಥವೆನಿಸಲಾರದೆಂಬುದು ಸ್ಪಷ್ಟ. ಶಬ್ದಾಂಶದಿಂದಾಚೆಗೆ ಅದು ಸೂಚಿಸುವ ಅರ್ಥವೊಂದಿರಬೇಕೆಂದಾಯಿತು. ಇದಾವುದು? ಇದೇ ತಾತ್ತ್ವಿಕರ ಮೀಮಾಂಸೆಗೆ ಮೂಲಸಮಸ್ಯೆ. ಈ ಸಮಸ್ಯೆಯ ಪರಿಹಾರಕ್ಕೆ ಪಾಶ್ಚಾತ್ಯ ತತ್ತ್ವಶಾಸ್ತ್ರದಲ್ಲಿ ಶೋಧಿಸಿರುವ ವಾದಗಳನ್ನು ಮುಖ್ಯವಾಗಿ ಮೂರು ಗುಂಪುಗಳಾಗಿ ವರ್ಗೀಕರಿಸಬಹುದು: ಅನ್ವಿತ ವಸ್ತುವೇ ಶಬ್ದದ ಅರ್ಥವೆಂಬ ಬಹುಪ್ರಚಲಿತ ವಾದವನ್ನು ಸಾನ್ವಯಸಿದ್ಧಾಂತ (ರೆಫರೆನ್ಷಿಯಲ್ ಥಿಯರಿ) ಎನ್ನಬಹುದು. ರಾಮ ಮುಂತಾದ ಅಂಕಿತನಾಮಗಳಿಗೆ ಅನ್ವಿತವ್ಯಕ್ತಿಯೇ ಅರ್ಥವೆಂದು ಇದರ ಆಶಯ. ಅನ್ವಿತ ವಸ್ತು ಸಂಬಂಧ ಮಾತ್ರ ಅರ್ಥವೆಂಬ ವಿವರಣೆಯೂ ಈ ಸಿದ್ಧಾಂತದ ಪ್ರಕಾರಾಂತರವೇ. ಈ ವಾದದ ಪುರಸ್ಕರ್ತರಲ್ಲಿ ಜೆ. ಎಸ್. ಮಿಲ್ (ಎ ಸಿಸ್ಟಮ್ ಆಫ್ ಲಾಜಿಕ್), ಬರ್ಟ್ರೆಂಡ್ ರಸೆಲ್ (ಎನ್ ಇನ್ಕ್ವೈರಿ ಇಂಟು ಮೀನಿಂಗ್ ಅಂಡ್ ಟ್ರೂತ್), ರುಡೋಲ್ಫ ಕಾರ್ನಾಸ್ (ಇಂಟ್ರೊಡಕ್ಷನ್ ಟು ಸೆಮ್ಯಾಂಟಿಕ್್ಸ) ಇವರನ್ನು ಉಲ್ಲೇಖಿಸಬಹುದು. ಭಿನ್ನ ಶಬ್ದಗಳು ಸೀತೆಯ ಗಂಡ, ಭರತನ ಅಣ್ಣ ಇತ್ಯಾದಿ ಒಬ್ಬನೇ ವ್ಯಕ್ತಿಗೆ ಅನ್ವಯಿಸಬಹುದಾದ್ದರಿಂದ, ಇವೆಲ್ಲ ಸಮಾನಾರ್ಥವೆನ್ನುವುದು ಅಷ್ಟು ಸರಿಯಾಗುವುದಿಲ್ಲ. ಶಬ್ದಭೇದದಿಂದ ಅರ್ಥಭೇದವನ್ನು ಒಪ್ಪದೆ ಗತ್ಯಂತರವಿಲ್ಲ. ಅನ್ವಯಿಸುವಿಕೆ ಒಂದು ಶಾಬ್ದಿಕಕ್ರಿಯೆಯಾದರೆ, ಅರ್ಥಬೋಧಕತೆ ಒಬ್ಬ ವಕ್ತೃವಿನ ಕಾರ್ಯವೆಂಬುದನ್ನು ಮರೆಯುವಂತಿಲ್ಲ. ಅನ್ವಯಗಳಿಗೆಲ್ಲ ಅನ್ವಿತಬಾಹ್ಯಾರ್ಥವನ್ನು ನಿರ್ದೇಶಿಸುವುದೂ ಅಶಕ್ಯ. ಇಡಿಯ ವಾಕ್ಯವೊಂದಕ್ಕೂ ಇದೇ ರೀತಿ ಅನ್ವಿತವಾದ ಬಾಹ್ಯಾರ್ಥವನ್ನು ತೋರಿಸುವುದು ಹೇಗೆ ? ಆದ್ದರಿಂದ ಅಭಿಪ್ರಾಯಸಿದ್ಧಾಂತ (ಐಡಿಯೇಷನಲ್ ಥಿಯರಿ) ಎಂಬ ಮತ್ತೊಂದು ಅರ್ಥವಿವರಣೆ ಹೊರಡುವಂತಾಯಿತು. ಜಾನ್ ಲಾಕ್ (ಎಸ್ಸೆ ಕನ್ಸರ್ನಿಂಗ್ ಹ್ಯೂಮನ್ ಅಂಡರ್ಸ್ಟ್ಯಾಂಡಿಂಗ್) ಈ ವಾದದ ಮುಖ್ಯ ಪ್ರವರ್ತಕ. ಭಾಷೆಯಿರುವುದೇ ಅಭಿಪ್ರಾಯ ಪ್ರಕಟಣೆಗಾಗಿ; ಬುದ್ಧಿಯಲ್ಲಿ ಮೂಡುವ ವಿಚಾರ ತರಂಗಗಳೇ ಅಭಿಪ್ರಾಯಗಳು. ವಕ್ತೃ ತನ್ನ ವೈಯಕ್ತಿಕ ವಿಚಾರಗಳ ಪ್ರಕಟಣೆಗಾಗಿ ಭಾಷೆಯನ್ನು ಬಳಸುತ್ತಾನೆ. ಇದೇ ಅಭಿಪ್ರಾಯ ಶ್ರೋತೃವಿನಲ್ಲೂ ಮೂಡಿದಾಗ ಅರ್ಥಗ್ರಾಹ್ಯವಾದಂತೆ. ಈ ಸಿದ್ಧಾಂತದ ಪರಿಷ್ಕೃತ ರೂಪಗಳು ಹೆನ್ರಿ ಲಿಯೊನಾರ್ಡ್ನ ಎನ್ ಇಂಟ್ರೊಡಕ್ಷನ್ ಟು ಪ್ರಿನ್ಸಿಪಲ್ ಆಫ್ ರೀಸóನ್ ಇತ್ಯಾದಿಗಳಲ್ಲಿ ಕಾಣಬರುತ್ತವೆ. ಜೀವನ ವೆಚ್ಚ ಏರುತ್ತಿದೆ ಎಂಬಂಥ ಸಣ್ಣ ವಾಕ್ಯಗಳಲ್ಲಿಯೇ ಆಗಲಿ ಪ್ರತಿ ಶಬ್ದಕ್ಕೂ ಅದರ ಹಿಂದಿನ ಅಭಿಪ್ರಾಯದ ವಿಶಿಷ್ಟಸ್ವರೂಪ ಬೇರೆಯಾಗಿ ಅನುಭವಕ್ಕೆ ಬರುತ್ತದೆಯೆ? ಈ ವಾದದಲ್ಲಿ ಅಭಿಪ್ರಾಯ, ಅರ್ಥ-ಇವಕ್ಕೆ ಅನ್ಯೋನ್ಯಾಶ್ರಯ ದೋಷವೂ ತಪ್ಪದು. ಅರ್ಥ ಪ್ರತಿವ್ಯಕ್ತಿಯ ಅಭಿಪ್ರಾಯಕ್ಕಿಂತ, ಇಡಿಯ ಸಮಾಜದಿಂದ ಸ್ವೀಕೃತವಾದದ್ದನ್ನು ಪ್ರತಿನಿಧಿಸುತ್ತದೆಂಬ ವಿಚಾರವನ್ನು ಮುಂದೆ ಮಾಡಿ ಆಧುನಿಕ ಮನಶ್ಯಾಸ್ತ್ರಕಾರರಲ್ಲಿ ಅನೇಕರು ಪ್ರಚೋದನೆ ಹಾಗೂ ಪರಿಣಾಮ (ಸ್ಟಿಮ್ಯುಲಸ್, ರೆಸ್ಪಾನ್ಸ್) ಎಂಬ ಮೂರನೆಯ ವಿವರಣೆ ಯನ್ನಿತ್ತಿದ್ದಾರೆ. ಎಲ್. ಬ್ಲೂಮ್ಫೀಲ್ಡ್ ಮುಂತಾದ ಭಾಷಾಶಾಸ್ತ್ರಜ್ಞರೂ ಸಿ.ಕೆ. ಆಗ್ಡನ್, ಐ. ಎ. ರಿಚಡ್ರ್್ಸ ಮುಂತಾದವರೂ ಈ ಸಿದ್ಧಾಂತದ ಅನುಯಾಯಿಗಳೇ. ಪ್ರಚೋದನಾ ಸಾಮಗ್ರಿಗಳ ಸಮಾವೇಶ-ಮನಃಪರಿಣಾಮಗಳ ಸಮೂಹ, ಇವುಗಳಿಂದ ತೋರುವ ಚರ್ಯೆಗಳೇ (ಬಿಹೇವಿಯರ್) ಶಬ್ದಾರ್ಥವೆಂದರೂ ಇಲ್ಲಿ ಕೂಡ ವೈಯಕ್ತಿಕ ಭೇದಗಳಿಗೆ ಸಂಪುರ್ಣ ವ್ಯಾಖ್ಯೆ ದೊರೆಯದು. ಅತ್ಯಾಧುನಿಕರಲ್ಲಿ ವಿಟ್ಗೈನ್ಸ್ಟೈನ್ನ ವಾದಸರಣಿ (ಫಿಲಸಾಫಿಕಲ್ ಇನ್ವೆಸ್ಟಿಗೇಷನ್ಸ್) ಗಮನಾರ್ಹವಾಗಿದೆ. ವಕ್ತೃವಿನ ಕಾರ್ಯದಲ್ಲಿ ಪ್ರಾರ್ಥನೆ, ಗದರಿಕೆ, ವಿಧಿ, ನೀಷೇಧ ಮುಂತಾದ ಅಂಗಗಳನ್ನು ಗಮನಿಸಿ ಅವನ ಶಬ್ದ ವ್ಯವಹಾರಕ್ಕೆ ಸಂಬಂಧಿಸಿದ ಅದೆಲ್ಲವನ್ನೂ ಅರ್ಥವೆಂದು ತಿಳಿಯಬೇಕೆಂಬುದು ಈ ನೂತನ ದೃಷ್ಟಿ. ಇಡಿಯ ವಾಕ್ಯ ತಾತ್ಪರ್ಯದೊಡನೆ ಪ್ರತಿ ಶಬ್ದಕ್ಕಿರುವ ಸಾಮಂಜಸ್ಯವೇ ಅದರ ಅರ್ಥ. ಶಬ್ದಾಂತರವನ್ನಿಟ್ಟಾಗಲೂ ಈ ಸಾಮಂಜಸ್ಯ ತಪ್ಪದಿದ್ದರೆ ಅದು ಸಮಾನಾರ್ಥಕ. ಹೀಗೆ ಅರ್ಥಮೀಮಾಂಸೆ ಇನ್ನೂ ನಡೆಯುತ್ತಲೇ ಇದೆ.

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: