ಅರಿಕೇಸರಿ II

ವಿಕಿಪೀಡಿಯ ಇಂದ
Jump to navigation Jump to search

ಅರಿಕೇಸರಿ II : ವೇಮುಲವಾಡದ ಚಾಳುಕ್ಯ ಶಾಖೆಯಲ್ಲಿನ ಮೂವರು ಅರಿಕೇಸರಿಗಳಲ್ಲಿ ಎರಡನೆಯ ಅರಿಕೇಸರಿ ಆ ವಂಶದಲ್ಲೇ ಪ್ರಖ್ಯಾತ, ಪರಾಕ್ರಮಿ, ಪಂಪಮಹಾಕವಿಗೆ ಆಶ್ರಯದಾತನಾಗಿದ್ದವ. ಹೀಗೆ ಚರಿತ್ರೆ ಮತ್ತು ಸಾಹಿತ್ಯ ಈ ಎರಡು ದೃಷ್ಟಿಯಿಂದಲೂ ಈತ ಮುಖ್ಯ ವೆನಿಸುತ್ತಾನೆ.

ಇತಿಹಾಸ[ಬದಲಾಯಿಸಿ]

 • ಕನ್ನಡನಾಡಿನ ಚರಿತ್ರೆಯಲ್ಲಿ ಬಾದಾಮಿಯ ಚಾಳುಕ್ಯರು, ಕಲ್ಯಾಣದ ಚಾಳುಕ್ಯರು, ವೆಂಗಿಯ ಚಾಳುಕ್ಯರು ಮತ್ತು ಗುಜರಾತಿನ ಚಾಳುಕ್ಯರು ಎಂಬುದಾಗಿ ನಾಲ್ಕು ಮುಖ್ಯ ಚಾಳುಕ್ಯ ಮನೆತನಗಳು ಪ್ರಸಿದ್ಧವಾಗಿವೆ. ಇವಲ್ಲದೆ ಇನ್ನೂ ಕೆಲವು ಚಾಳುಕ್ಯ ಶಾಖೆಗಳಿವೆ. ಅವುಗಳಲ್ಲಿ ಒಂದು ವೇಮುಲವಾಡದ ಚಾಳುಕ್ಯ ಶಾಖೆ. ಈ ಶಾಖೆಯ ಅರಸರು 8ನೆಯ ಶತಮಾನದಿಂದ ಹಿಡಿದು 10ನೆಯ ಶತಮಾನದವರೆಗೆ ಇಂದಿನ ಆಂಧ್ರ ಪ್ರದೇಶದ ನಿಜಾಮಾಬಾದ್ `ಕರೀಂನಗರ್’ ನಲ್ಗೊಂಡ ಮತ್ತು ಕರ್ನಾಟಕ ರಾಯಚೂರು ಜಿಲ್ಲೆಗಳನ್ನು ಬಹುಮಟ್ಟಿಗೆ ಒಳಗೂಂಡ ಪ್ರದೇಶದಲ್ಲಿ ರಾಷ್ಟಕೂಟರ ಅಧೀನತೆಯಲ್ಲಿ ರಾಜ್ಯವಾಳುತ್ತಿದ್ದರು. ಇಂದಿನ ಅಂಧ್ರಪ್ರದೇಶದ ಕರೀಂನಗರ್ ಜಿಲೆಯ ವೇಮುಲವಾಡವೆ. (ಲೇಮುಲವಾಡ) ಅಂದು ಲೆಂಬುಳಪಾಟಕವೆಂಬ (ವೆಂಬುಳವಾಟಕಪತ್ತನ/ವೆಂಬುಳವಾಟ) ಹೆಸರಿಂದ ಅವರ ರಾಜಧಾನಿಯಾಗಿತ್ತು.
 • ಈ ಕಾರಣವಾಗಿಯೇ ಇವರನ್ನು ವೇಮುಲವಾಡದ ಚಾಳುಕ್ಯರು ಎಂಬುದಾಗಿ ಕರೆಯುವುದು ರೂಢಿಯಾಗಿದೆ. ಈ ಮನೆತನದ ಮೂಲಪುರುಷ 1ನೆಯ ಯುದ್ಧಮಲ್ಲ ವಿನಯಾದಿತ್ಯ. ಈತ ಇಮ್ಮಡಿ ಪುಲಕೇಶಿಯ ಪುತ್ರರಲ್ಲಿ ಲಾಟದ ಜಯಸಿಂಹದಾರಾಶಯನ ಮಗನಿರಬೇಕೆಂದು ಕೆಲವರೂ ಪೃಥುವಿಕ್ರಮ ರಾಜಾದಿತ್ಯನೆನ್ನಿಸಿದ ಬಾದಾಮಿಯ 1ನೆಯ ವಿಕಮಾದಿತ್ಯನ ಮಗನಿರಬೇಕೆಂದು ಕೆಲವರೂ ವಾದಿಸಿರುತ್ತಾರೆ. ಹೀಗೆ ವೇಮುಲವಾಡದ ಚಾಳುಕ್ಯರು ಆದಿಯ ಬಾದಾಮಿಯ ಚಾಳುಕ್ಯ ಮನೆತನಕ್ಕೆ ಸೇರಿದವರೇ ಆದರೂ ಆ ಸಂಬಂಧವನ್ನು ಇನ್ನೂ ಸರ್ವಸಮ್ಮತವಾಗಿ ಗುರುತಿ ಸುವುದು ಸಾಧ್ಯವಾಗಿಲ್ಲ.

ಶಾಸನಗಳು[ಬದಲಾಯಿಸಿ]

 • ಚಾಳುಕ್ಯಶಾಖೆಯ ಅರಸರಾದ 1ನೆಯ ಅರಿಕೇಸರಿಯ ಕೊಲ್ಲಿಪಾರದ ತಾಮ್ರಪಟಗಳು (ಸು.750), 2ನೆಯ ಅರಿಕೇಸರಿಯ ವೇಮುಲವಾಡದ ಶಿಲಾಶಾಸನ(ಸು.927) ಮತ್ತು 3ನೆಯ ಅರಿಕೇಸರಿಯ ಪರಭಣಿಯ ತಾಮ್ರಪಟಗಳು (966) ಇವುಗಳಿಂದಲೂ ಪಂಪಕವಿಯ ವಿಕ್ರಮಾ ರ್ಜುನ ವಿಜಯ (941) ಎಂಬ ಕನ್ನಡಕಾವ್ಯ ಹಾಗೂ ಸೋಮದೇವಸೂರಿಯ ಯಶಸ್ತಿಲಕ ಚಂಪೂ (959) ಎಂಬ ಸಂಸ್ಕೃತಕಾವ್ಯಗಳಿಂದಲೂ ಆ ಮನೆತನದ ಅರಸರ ವಿಚಾರವಾಗಿ ಹಲವು ಚಾರಿತ್ರಿಕ ವಿವರಗಳು ಬೆಳಕಿಗೆ ಬಂದಿವೆ.
 • ಇವುಗಳಿಂದ ತಿಳಿದುಬರುವ ಇವರ ವಂಶಾನು ಕ್ರಮಣಿಕೆ ಹೀಗಿದೆ: ಯುದ್ಧಮಲ್ಲ ವಿನಯಾದಿತ್ಯI--> ಅರಿಕೇಸರಿ I-->ನರಸಿಂಹ I ಮತ್ತು ಭದ್ರದೇವ I-->(ನರಸಿಂಹನ ಜ್ಯೇಷ್ಠಪುತ್ರ)ಯುದ್ಧಮಲ್ಲ II-->ಭದ್ರದೇವ II(ಬದ್ದೆಗ) -->ಯುದ್ಧಮಲ್ಲ III-->ನರಸಿಂಹ II--> ಅರಿಕೇಸರಿ II-->ಭದ್ರದೇವ III-->ಅರಿಕೇಸರಿ III. ಕೊಲ್ಲಿಪಾರದ ತಾಮ್ರಪಟಗಳಲ್ಲಿ ಮೊದಲು ನಾಲ್ಕು ತಲೆಗಳು ಹೆಚ್ಚಾಗಿವೆ.
 • ಇಮ್ಮಡಿ ಅರಿಕೇಸರಿಯ ವಿಚಾರವಾಗಿ ವೇಮುಲವಾಡ ಮತ್ತು ಪರಭಣಿ ಶಾಸನಗಳಲ್ಲಿಯೂ ಪಂಪನ ವಿಕ್ರಮಾರ್ಜುನ ವಿಜಯದಲ್ಲಿಯೂ (ಪಂಪಬಾರತ) ದೊರೆಯುವ ಕೆಲವು ಸಂಗತಿಗಳನ್ನು ಚರಿತ್ರಕಾರರು ವಿಮರ್ಶಿಸಿರುತ್ತಾರೆ. ಅವನ್ನು ಇಲ್ಲಿ ಸಂಗ್ರಹಿಸಿದೆ : ಅರಿಕೇಸರಿ ಇಮ್ಮಡಿ ನರಸಿಂಹನಿಗೆ ಜಾಕವ್ವೆಯಲ್ಲಿ ಮಗನಾಗಿ ಜನಿಸಿದ. ಜಾಕವ್ವೆ ರಾಷ್ರ್ಟಕೂಟ ಚಕ್ರವರ್ತಿ 3ನೆಯ ಇಂದ್ರನ ಸೋದರಿಯಿರಬಹುದೆಂದು ಕೆಲವರ ಊಹೆ.
 • ಪಂಪ ಇಂದ್ರೇಂದ್ರನ ತೋಳೆ ತೊಟ್ಟಿಲಾಗಿರೆ ಬಳೆದಂ ಎಂಬುದಾ ಗಿ ಅರಿಕೇಸರಿಯ ಬಾಲ್ಯವನ್ನು ವರ್ಣಿಸಿರುವುದರಿಂದ, ಅರಿಕೇಸರಿ ಮುಮ್ಮಡಿ ಇಂದನ ಪ್ರೀತ್ಯಾದರಗಳಿಗೆ ಪಾತ್ರನಾಗಿದ್ದನೆಂದು ತಿಳಿದುಬರುತ್ತದೆ. ಆತ ಇಂದ್ರನ ಪುತ್ರಿ ರೇವಕನಿರ್ಮಡಿಯನ್ನು ವರಿಸಿದ್ದನೆಂಬುದಾಗಿ ವೇಮುಲವಾಡದ ಶಾಸನದಲ್ಲಿ ಹೇಳಿದೆ. ಆದರೆ ರಾಷ್ಟ್ರಕೂಟ ಕುಲದ ಲೋಕಾಂಬಿಕೆಯೆಂಬುವಳು ಪತ್ನಿ ಎಂಬುದಾಗಿ ಪರಭಣಿ ತಾಮ್ರಪಟಗಳಲ್ಲಿದೆ. ಲೋಕಾಂಬಿಕೆ ಎಂಬುದು ರೇವಕನಿರ್ಮಡಿಯ ಬಿರುದೇ, ಪ್ರತಿನಾಮವೇ ಅಥವಾ ಇನ್ನೊಬ್ಬ ಹೆಂಡತಿಯ ಹೆಸರೇ ಎಂಬುದು ಸ್ಪಷ್ಟವಿಲ್ಲ. *ಕೆಲವರು ಲೋಕಾಂಬಿಕೆಯೊಬ್ಬಳೇ ಅರಿಕೇಸರಿಯ ಪತ್ನಿಯೆನ್ನುತ್ತಾರೆ. ಮತ್ತೆ ಕೆಲವರು ಅತನಿಗೆ ರೇವಕನಿರ್ಮಡಿ ಮತ್ತು ಲೋಕಾಂಬಿಕೆ ಇಬ್ಬರೂ ಪತ್ನಿಯರೆವನ್ನುತ್ತಾರೆ. ಅರಿಕೇಸರಿಗೆ ಸಾಮಂತಚೂಡಾಮಣಿ, ಉದಾತ್ತ ನಾರಾಯಣ, ಆರೂಢ ಸರ್ವಜ್ಞ, ಕದನ ತ್ರಿಣೇತ್ರ, ಸಹಜಮನೋಜ, ಶರಣಾಗತ ಜಳನಿಧಿ, ಗುಣಾರ್ಣವ, ಪ್ರಿಯಗಳ್ಳ ಮೊದಲಾದ ಹಲವು ಬಿರುದುಗಳಿದ್ದುವೆಂಬುದಾಗಿ ವೇಮುಲವಾಡದ ಶಾಸನದಿಂದಲೂ ವಿಕಮಾರ್ಜುನ ವಿಜಯದಿಂದಲೂ ತಿಳಿದು ಬರುತ್ತದೆ.

ಉಲೇಖಗಳ ಪ್ರಕಾರ[ಬದಲಾಯಿಸಿ]

 • ಅರಿಕೇಸರಿಯ ಸಾಹಸಗಳಲ್ಲಿ ಮೂರರ ಬಗೆಗೆ ಮಾತ್ರ ಉಲೇಖಗಳು ದೊರೆಯುತ್ತವೆ. ರಾಷ್ರ್ಟಕೂಟ ಚಕ್ರವರ್ತಿ 4ನೆಯ ಗೋವಿಂದರಾಜ (ಗೊಜ್ಜಿಗ 928-33) ಚಾಳುಕ್ಯವಂಶದ ವಿಜಯಾದಿತ್ಯನ (ಬಿಜ್ಜ) ಮೇಲೆ ಮುಳಿಯಲು ಈ ಚಾಳುಕ್ಯರಾಜ ಅರಿಕೇಸರಿಗೆ ಶರಣು ಹೋದನಂದೂ ಅರಿಕೇಸರಿ ಆತನಿಗೆ ರಕ್ಷಣೆ ನೀಡಿದನಂದೂ ವೇಮುಲವಾಡದ ಶಾಸನದಿಂದಲೂ ವಿಕ್ರಮಾರ್ಜುನ ವಿಜಯದಿಂದಲೂ ತಿಳಿದುಬರುತ್ತದೆ. ಇದು ಮೊದಲನೆಯದು- ಚರಿತ್ರಕಾರರು ಈ ಪ್ರಸಂಗವನ್ನು ಹೀಗಿರಬಹುದೆಂದು ವಿವರಿಸಿರುತ್ತಾರೆ.
 • ರಾಷ್ರ್ಟಕೂಟ ಚಕ್ರವರ್ತಿ 3ನೆಯ ಇಂದ್ರನ (ಸು. 914 -22) ಆಳ್ವಿಕೆಯ ಕೊನೆಗೆ ವೆಂಗಿಯ ಚಾಳುಕ್ಯರಲ್ಲಿ ಅರಸೊತ್ತಿಗೆಯ ಕಲಹಗಳು, ಗೊಂದಲಗಳು ತಲೆದೋರತೊಡಗಿದ್ದವು. 4ನೆಯ ಗೋವಿಂದ ವೆಂಗಿಯ ಇಮ್ಮಡಿ ಯುದ್ಧಮಲ್ಲನಿಗೆ ಆತನ ವಿರೋಧಿಗಳಿಗೆ ಪತಿಯಾಗಿ ನೆರವು ನೀಡಿದ. ಇದನ್ನು ಒಂದು ಕಡೆ ಹಿರಿಯ ಶಾಖೆಯ 2ನೆಯ ಭೀಮ ಗೋವಿಂದ ವಿರೋಧಿಗಳ ಒತ್ತಾಸೆಯೊಡನೆ ಪ್ರತಿಭಟಿಸಿದರೆ.
 • ಅದರ ಬೆನ್ನಿಗೇ ಇನ್ನೊಂದು ಕಡೆ ಮುದುಗೊಂಡ ಚಾಳುಕ್ಯಶಾಖೆಯ (ವೇಮುಲವಾಡದ ಸೀಮೆಗೆ ಸೇರಿದಂತೆ ಸ್ವಲ್ಪ ದಕ್ಷಿಣದಲ್ಲಿದ್ದ ಪ್ರದೇಶವನ್ನು ಆಳುತ್ತಿದ್ದ ಚಾಳುಕ್ಯರು) ಬಿಜ್ಜ ಅಥವಾ ವಿಜಯಾದಿತ್ಯ ಮೇಲೆದ್ದು ಪ್ರತಿಭಟಿಸಿ ದ. ಈ ಮೊದಲು ಭೀಮನ ದಂಗೆಯನ್ನಡಗಿಸಲು ಗೋವಿಂದ ಸಾಮಂತರ ಕೈಕೆಳಗೆ ಸೇನೆಯೊಂದನ್ನು ಅಟ್ಟಿದ್ದ ಹಾಗೆಯೇ ಈಗ ಇನ್ನೊಂದು ಸೇನೆಯನ್ನು ಬಿಜ್ಜನ ಮೇಲೆ ಕಳುಹಿಸಿದ.
 • ಈ ಘಟದಲ್ಲಿ ಬಿಜ್ಜ ಅರಿಕೇಸರಿಯ ನೆರವನ್ನು ಕೋರಿದ. ಅರಿಕೇಸರಿ ಬಿಜ್ಜನಿಗೆ ಸಹಾಯವಾಗಿ ಗೋವಿಂದ ನ ಸೈನ್ಯವನ್ನು ಸೋಲಿಸಿ ಓಡಿಸಿ, ಶರಣಾಗತ ಜಳನಿಧಿ, ಸಾಮಂತ ಚೂಡಾಮಣಿ ಎನ್ನಿಸಿದ (ಚಾಳುಕ್ಯ ರಾಜ್ಯದಲ್ಲಿ ಅರಸೊತ್ತಿಗೆಗಾಗಿ ಮೇಲಾಟ ಹೋರಾಟಗಳು ನಡೆದಿದ್ದಾಗ ಕೊಲ್ಲಭಿಗಂಡ ವಿಜಯಾದಿತ್ಯನೆಂಬವ ಬದ್ದೆಗ ಅರಿಕೇಸರಿಗಳಿಗೆ ಶರಣಾಗತನಾಗಿರಬೇಕೆಂದು ಮುಂತಾಗಿ ಬೇರೆ ರೀತಿಯಲ್ಲಿ ಈ ಪ್ರಸಂಗವನ್ನು ವಿವರಿಸಿರುತ್ತಾರೆ).
 • ಅರಿಕೇಸರಿ ಮಿತಿಮೀರಿ ನಡೆಯುತ್ತಿದ್ದ ಚಕ್ರವರ್ತಿ ಗೋವಿಂದನನ್ನು ಕೆಡಿಸಿ ತನ್ನನ್ನು ನಂಬಿ ಬಂದ ಬದ್ದೆಗದೇವನಿಗೆ ಸಾಮ್ರಾಜ್ಯ ಪದವನ್ನು ಕೈಗೂಡಿಸಿದನಂದು ಪಂಪಭಾರತದಲ್ಲಿ ಹೇಳಿದೆ. ಇದು ಎರಡನೆಯ ಸಾಹಸ ಕಾರ್ಯ. ಇದರ ಬಗೆಗೆ ಚರಿತ್ರಕಾರರ ವಿವರಣೆಯಿದು: ರಾಷ್ರ್ಟಕೂಟ ಚಕ್ರವರ್ತಿ 4ನೆಯ ಗೋವಿಂದ ತನ್ನ ಅಣ್ಣ ಇಮ್ಮಡಿ ಅಮೋಘ ವರ್ಷನನ್ನು ಪದಚ್ಯುಯುತಿಗೊಳಿಸಿ ರಾಷ್ಟ್ರಕೂಟ ಸಿಂಹಾಸನವನ್ನು ಹಿಡಿದಿದ್ದ (ಸು.930). ಇದು ಆತನ ಕೆಲವು ಆಸ್ಥಾನಿಕರಿಗೆ, ಮಂತ್ರಿ ಸಾಮಂತರಿಗೆ ಇಷ್ಟವಾಗಿರಲಿಲ್ಲ.

ಕುಟುಂಬ ಕಲಹ[ಬದಲಾಯಿಸಿ]

 • ಇವರಿಗೆ ರಾಜಕುಟುಂಬ ದಲ್ಲಿಯೇ ಗೋವಿಂದನ ಚಿಕ್ಕಪ್ಪನಾದ ಬದ್ದೆಗದೇವನಿಂದಲೂ ಆತನ ಪುತ್ರ ಮುಮ್ಮುಡಿ ಕೃಷ್ಣನಿಂದಲೂ ಒತ್ತಾಸೆ ದೊರೆಯಿತು. ಗೋವಿಂದ ಇಂಥವರನ್ನು ದೇಶ ದಿಂದ ಹೊರಹಾಕಿದಾಗ ಅವರು ಬದ್ದೆಗನ ಪತ್ನಿಯ (ಚೇರಿಯ ರಾಜಕುಮಾರಿ, ಒಂದನೆಯ ಯುವರಾಜ ದೇವನ ಪುತ್ರಿ) ತವರುರಾಜ್ಯವಾದ ತ್ರಿಪುರಿಗೆ ತೆರಳಿ ಚೇದಿಯ ಆಸ್ಥಾನವನ್ನು ಸೇರಿಕೊಂಡರು. ಅಲ್ಲಿಂದಲೇ ಅವರು ಗೋವಿಂದನ ಪುತ್ರಿಯಾಗಿ ಕುಟಿಲೋಪಾಯಗಳನ್ನು ಜರುಗಿಸುತ್ತಿದ್ದ ಹಾಗೆ ತೋರುತ್ತದೆ.
 • ಇತ್ತ ಗೋವಿಂದನಾದರೋ ಪ್ರಜಾನುರಾಗವನ್ನು ಗಳಿಸಲು ಏನೊಂದೂ ಮಾಡಲಿಲ್ಲ. ಆತ ವ್ಯಸನಾಸಕ್ತನಾಗಿದ್ದುದರಿಂದ ಪ್ರಜೆಗಳಿಗೂ ಕೂಡ ಆತನ ಆಳ್ವಿಕೆ ಬೇಸರವನ್ನು ತಂದಿತು; ರಾಜ್ಯ ಸೂತ್ರಗಳು ಸಡಿಲವಾಗುತ್ತಿದ್ದುವು. ತನಗೆ ಗೋವಿಂದ ಭಾವಮೈದುನನೇ ಆದರೂ, ಅರಿಕೇಸರಿ ಪ್ರಜಾಭಿಪ್ರಾಯವನ್ನು ಲಕ್ಷಿಸಿ ಆತನ ಹಗೆಗಳ ಕಡೆಯೇ ಸೇರಿಕೊಂಡು, ಪ್ರಜೆಗಳ ಗೌರವಾದರಗಳನ್ನು ಗಳಿಸಿದ್ದ ಬದ್ದೆಗನ ಆಶೋತ್ತರಗಳನ್ನೇ ಪೋಷಿಸಿದ ಹಾಗೆ ತೋರುತ್ತದೆ. ಬದ್ದೆಗನಿಗೆ ಆತನ ಅಳಿಯ ಗಂಗಬೂತುಗನ ಬೆಂಬಲವೂ ಇದ್ದಿತು.
 • ಗೋವಿಂದ ಚಾಳುಕ್ಯ ವಂಶದ ಅರಸರ ಅರಸೊತ್ತಿಗೆಯ ಕಲಹದಲ್ಲಿ ಕೈಹಾಕಿ ಇಕ್ಕಟ್ಟಿಗೆ ಸಿಕ್ಕಿಕೊಂಡ. ಬಿಜ್ಜನ ವ್ಯವಹಾರದಲ್ಲಿ ಅತನ ಸೈನ್ಯ ಅರಿಕೇಸರಿಯಿಂದ ಸೋಲನ್ನು ಅನುಭವಿಸಿತು. ಈ ವಿದ್ಯಮಾನಗಳನ್ನೆಲ್ಲ ತ್ರಿಪುರಿಯಿಂದ ವೀಕ್ಷಿಸುತ್ತಿದ್ದ ಬದ್ದೆಗನಿಗೆ ಕರೆ ಹೋಯಿತು. ಆತ ಅಲ್ಲಿಂದ ಬರುತ್ತಲೇ ಪ್ರಾಯಶಃ ವೇಮುಲವಾಡದಲ್ಲಿಯೆ ಆತನನ್ನು ರಾಷ್ಟ್ರಕೂಟ ಚಕ್ರವರ್ತಿಯೆಂದು ಘೋಷಿಸಲಾಯಿತು. ಅರಿಕೇಸರಿ ಗೋವಿಂದನನ್ನು ಪದಚ್ಯುತಿಗೊಳಿಸಿ ಆತನ ಸ್ಥಾನದಲ್ಲಿ ಬದ್ದೆಗ ಮುಮ್ಮಡಿ ಅಮೋಘವರ್ಷನನ್ನು ನಿಲ್ಲಿಸಿದ. ಇದು ಪ್ರಾಯಶಃ ನಡೆದದ್ದು 934-35ರಲ್ಲಿ.
 • ಮೂರನೆಯದಾಗಿ ಅರಿಕೇಸರಿ, ಮದ್ದಾನೆ. ಸೈನ್ಯದೊಡನೆ ಆಟೋಪದಿಂದ ಬಂದು ತನ್ನನ್ನಿದಿರಿಸಿದ ಕಕ್ಕಲನ ತಮ್ಮ ಶೂರನಾದ ಬಪ್ಪುವನೆಂಬುವನನ್ನು, ತಾನು ಒಂದೇ ಆನೆಯ ಮೇಲಿದ್ದುಕೊಂಡು ಓಡಿಸಿದನೆಂಬುದಾಗಿ ಪಂಪಭಾರತದಲ್ಲಿ ಹೇಳಿದೆ. ಈ ಪ್ರಕರಣವನ್ನು ಹೆಚ್ಚು ಸಮರ್ಪಕವಾಗಿ ವಿವರಿಸುವುದು ಅಶಕ್ಯವೆಂದು ಚರಿತ್ರಕಾರರ ಅಭಿಪ್ರಾಯ. ಕಕ್ಕಲನೆಂಬುವನು ಅಚಳಪುರದ ಅರಸನೆಂದೂ ಆತ ಬದ್ದೆಗನ ಮರಣಾನಂತರದಲ್ಲಿ ಗಂಗಬೂತುಗನಿಂದ ಹvನಾದನಂದು ಮುಂತಾಗಿ ಕೂಡಲೂರಿನ ಒಂದು ಶಾಸನಸಲ್ಲಿದೆ.
 • ಬದ್ದೆಗ ಆಳುತ್ತಿದ್ದಾಗಲೇ ದಂತಿಗ ಮತ್ತು ಬಪ್ಪುಗ ಎಂಬ ದುಷರಿಬ್ಬರು ಆತನಿಗೆ ಎದುರುಬಿದ್ದು 3ನೆಯ ಕೃಷ್ಣನಿಂದ ನಾಶವಾದರೆಂದು ದೇವೋಳಿಯ ಒಂದು ಶಾಸನದಲ್ಲಿ (940) ಹೇಳಿದೆ. ಈ ಬಪ್ಪುಗನೇ ಕಕ್ಕಲನ ತಮ್ಮನಾದ ಬಪ್ಪುವನಿರಬೇಕೆಂದು ಕೆಲವರು ಹೇಳುತ್ತಾರೆ. ಅಂತೂ ಈತ 940ರ ಮೊದಲಲ್ಲಿ ಎಂದೋ ಒಮ್ಮೆ ಅರಿಕೇಸರಿಗೆ ಎದುರು ಬಿದ್ದು ಆತನಿಂದ ಪರಾಜಿತನಾಗಿ ಓಡಿಹೋಗಿರಬೇಕು ಎಂದು ತಿಳಿಯುತ್ತ್ತದೆ. ಅರಿಕೇಸರಿ ರಾಜಧಾನಿಯಾದ ವೇಮುಲವಾಡದಲ್ಲಿ ಸೂರ್ಯದೇವಾಲಯವೊಂದವನ್ನು ಕಟ್ಟಿಸಿದ್ದ.
 • ಆ ದೇವಾಲಯದಲ್ಲಿ ಪೂಜೆಗಾಗಿ ಬರುವವರ ಅಶನಾರ್ಥವಾಗಿ ಸತ್ರವೊಂದನ್ನು ಕಟ್ಟಿಸಲು ಪೆದ್ದಣಾರ್ಯನೆಂಬುವನ ಕೋರಿಕೆಯಂತೆ 100 ನಿವರ್ತನಗಳ ಭೂಮಿಯನ್ನು ಉತ್ತರಾಯಣ ಪುಣ್ಯ ಸಂಕ್ರಾಂತಿ ದಿವಸದಲ್ಲಿ ದತ್ತಿಯಾಗಿ ಕೊಟ್ಟನೆಂಬುದಾಗಿಯೂ ಹಾಗೆಯೇ ಕುಡಿಯುವ ನೀರಿನ ಕೊಳ ವೊಂದನ್ನು ಕಟ್ಟಿಸಲು ಅಲ್ಲಿಯೆ ಎಂಟು ನಿವರ್ತನಗಳ ಭೂಮಿಯನ್ನು ದತ್ತಿಬಿಟ್ಟಂತೆಯೂ ವೇಮುಲವಾಡದ ಶಾಸನದಲ್ಲಿ ಹೇಳಿದೆ.

ಪಂಪಕವಿ[ಬದಲಾಯಿಸಿ]

 • ಪಂಪ ಮಹಾಕವಿ ಅರಿಕೇಸರಿಯ ಆಸ್ಥಾನದಲ್ಲಿ ಕವಿಯಾಗಿದ್ದುದು ಪ್ರಸಿದ್ಧ ವಿಷಯ. ಅರಿಕೇಸರಿ ಪಂಪನನ್ನು ಸ್ನೇಹಾದರಪೂರ್ವಕವಾಗಿ ಆತ್ಮೀಯತೆಯಿಂದ ನೋಡಿಕೊಳ್ಳುತಿದ್ದನೆಂಬುದು, ಪಂಪ ಯುದ್ಧವೀರನಾಗಿ ಅರಿಕೇಸರಿ ಕೈಕೊಂಡ ಯುದ್ಧಪ್ರಸಂಗಗಳಲ್ಲಿ ಪ್ರತ್ಯಕ್ಷವಾಗಿ ಪಾಲ್ಗೊಂಡಿದ್ದನೆಂಬು ದು ಇಲ್ಲಿ ನೆನೆಯತಕ್ಕದ್ದಾಗಿದೆ. ಆದಿಪುರಾಣವನ್ನು ಶ್ರೇಷ್ಠ ರೀತಿಯಿಂದ ರಚಿಸಿ ಪ್ರಖ್ಯಾತನಾಗಿದ್ದ ಪಂಪನನ್ನು ಅರಿಕೇಸರಿ ಪ್ರೀತಿಯಿಂದ ತನ್ನಲ್ಲಿಗೆ ಬರಮಾಡಿಕೊಂಡು ವಿಶೇಷವಾಗಿ ಸನ್ಮಾನಿಸಿ ತನ್ನ ವಿಖ್ಯಾತಿ ಲೋಕದಲ್ಲಿ ಸ್ಥಿರಗೊಳ್ಳುವ ಹಾಗೆ ಭಾರತವನ್ನು ಬರೆಯುವಂತೆ ಕೋರಿದ. *ಅರಿಕೇಸರಿ ಸಾಮಂತರಾಜನಾಗಿಯೂ ಅತಿ ಸಾಹಸಿಯೂ ಪ್ರಭಾವಶಾಲಿಯೂ ಆಗಿದ್ದ; ಗುಣವಂತನೂ ಸ್ನೇಹಪ್ರಿಯನೂ ಆಗಿದ್ದ. ತನ್ನ ಕಾಲದ ರಾಜಕೀಯ ಜೀವನದ ನೇತಾರನಾಗಿದ್ದ. ಆದ್ದರಿಂದ ಪಂಪಕವಿ ಅರಿಕೇಸರಿಯ ಆಶಯವನ್ನು ಈಡೇರಿಸಲು ಒಪ್ಪಿಕೊಂಡಿದ್ದಲ್ಲದೆ ಅತನನ್ನೇ

ತನ್ನ ಮಹಾಕಾವ್ಯದ ಕಥಾ ನಾಯಕನನ್ನಾಗಿಟ್ಟುಕೊಂಡ. ಅರಿಕೇಸರಿ ಅರ್ಜುನರನ್ನು ಅಭೇದವಾಗಿ ಗಣಿಸಿದ. ಅರ್ಜುನನ ಹೆಸರು ವ್ಯಕ್ತಿತ್ವ ಶೌರ್ಯ ಪ್ರತಾಪಗಳು ಕಥೆಯಲ್ಲಿ ಬರುವ ಕಡೆಗಳಲ್ಲಿ ಅರಿಕೇಸರಿಯ ಹೆಸರು ಬಿರುದುಗಳು ವ್ಯಕ್ತಿತ್ವ ಶೌರ್ಯ ಪ್ರತಾಪಗಳನ್ನು ಯೋಜಿಸಿದ.

 • ತತ್ಕಾಲೀನ ರಾಜಕೀಯವನ್ನು ಭಾರತ ಕಥೆಯೊಡನೆ ಸಾಧ್ಯ ವಿದ್ದಮಟ್ಟಿಗೆ ಹೊಂದಿಸಿ ಅಪೂರ್ವ ರೀತಿಯಲ್ಲಿ ವಿಕ್ರಮಾರ್ಜುನ ವಿಜಯವೆಂಬ ಸಮಸ್ತ ಭಾರತವನ್ನು ರಚಿಸಿದ. ಹೀಗೆ ರಚಿಸಿದ ಮೇಲೆ ಅರಿಕೇಸರಿ ಇನ್ನೂ ಅತಿಶಯವಾಗಿ ವಸ್ತ್ರವಿಭೂಷಣಾದಿಗಳಿಂದ ಪಂಪಕವಿಯನ್ನು ಸನ್ಮಾನಿಸಿ ಕೀರ್ತಿಸಿ ಸಬ್ಬಿಸಾಸಿರದಲ್ಲಿ ಧರ್ಮವುರವೆಂಬ ಅಗ್ರಹಾರವನ್ನು ಉಂಬಳಿಯಾಗಿ ಕೊಟ್ಟು, ಆತನಿಗೆ ಶಾಸನ ಹಾಕಿಸಿಕೊಟ್ಟ.
 • ಸಬ್ಬಿನಾಡು ಎಂಬುದು ಇಂದಿನ ಆಂಧ್ರಪ್ರದೇಶದ ಕರೀಂನಗರ ಜಿಲ್ಲೆ ಎಂಬುದಾಗಿಯೂ ಆ ಜಿಲ್ಲೆಯಲ್ಲಿಯೇ ಈಗ 2-3 ಧರ್ಮವುರಗಳಿರುವುದರಿಂದ ಇವುಗಳಲ್ಲಿ ಯಾವುದೊ ಒಂದು ಪಂಪನಿಗೆ ಅರಿಕೇಸರಿ ಕೊಟ್ಟ ಶಾಸನದ ಅಗ್ರಹಾರವಾದ ಧರ್ಮವುರವಿರಬೇಕೆಂಬುದಾಗಿಯೂ ಚರಿತ್ರಕಾರರು ಅಭಿಪ್ರಾಯಪಡುತ್ತಾರೆ. ಹಾಗೆಯೇ ಜಿನವಲ್ಲಭನ ಗಂಗಾಧರಂ ಶಾಸನದಲ್ಲಿ ಜಿನವಲ್ಲಭ ಪಂಪನ ತಮ್ಮನೆಂಬ ವಿಚಾರ ತಿಳಿದು ಬಂದಿದೆ.

ಉಲ್ಲೇಖ[ಬದಲಾಯಿಸಿ]