ಅಬು ಬಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಬು ಬಕರ್ ಮಹಮದ್ ಪೈಗಂಬರನ ಮೊದಲನೆಯ ಅನುಯಾಯಿ, ಉತ್ತರಾಧಿಕಾರಿ. ಧರ್ಮನಿಷ್ಠೆ, ಪ್ರಜ್ಞೆ, ಆತ್ಮತ್ಯಾಗಗಳು ಈತನ ಅದ್ವಿತೀಯ ಗುಣಗಳು. ಪೈಗಂಬರನಲ್ಲಿ ಅಚಲವಾದ ನಂಬಿಕೆಯನ್ನು ಇಟ್ಟಿದ್ದು ಆತನ ಆಜೀವ ಮಿತ್ರನಾಗಿದ್ದ. ಇವನ ಸಹಾಯವಿಲ್ಲದಿದ್ದ ಪಕ್ಷದಲ್ಲಿ ಮಹಮ್ಮದ್ ಮೆಕ್ಕದಿಂದ ಮದೀನಕ್ಕೆ ತಪ್ಪಿಸಿಕೊಂಡು ಹೋಗಲು ಸಾಧ್ಯವಿರಲಿಲ್ಲ. ಶ್ರೀಮಂತವರ್ತಕನಾದ ಈತ ತನ್ನ ಸರ್ವಸ್ವವನ್ನೂ ಜನಸಾಮಾನ್ಯರ ಹಿತಕ್ಕಾಗಿ ತ್ಯಾಗಮಾಡಲು ಹಿಂಜರಿಯಲಿಲ್ಲ. ಪೈಗಂಬರನ ಅನುಯಾಯಿಯಾಗುವ ಮೊದಲು ಖೊರೈಷ್ ಬುಡಕಟ್ಟಿನ ಜನರ ಮುಖ್ಯ ನ್ಯಾಯಾಧೀಶರಲ್ಲಿ ಒಬ್ಬನಾಗಿದ್ದ. ಮೆಕ್ಕದ ಜನ ಈತನ ಸದ್ಗುಣಗಳಿಗೆ ಮಾರುಹೋಗಿ ಸತ್ಯವಾದಿ ಎಂದು ಕರೆಯುತ್ತಿದ್ದರು. ತನ್ನ ಮಗಳ ಮರಣಾನಂತರ ಅರಬ್ಬಿಗಳು ಅತ್ಯಂತ ಉತ್ಸಾಹದಿಂದ ಈತನನ್ನೇ ಕಲೀಫನನ್ನಾಗಿ ಆರಿಸಿಕೊಂಡರು. ಈತನ ಕಾಲದಲ್ಲಿ ಇರಾಕ್ ಮತ್ತು ಇರಾನ್ ದೇಶಗಳಲ್ಲಿ ಇಸ್ಲಾಂ ಮತ ವ್ಯಾಪಿಸಿತು. ತನ್ನ ಅಧಿಕಾರಾವಧಿಯ ಮೊದಲ ಆರು ತಿಂಗಳಕಾಲ ತನ್ನ ಹೆಂಡತಿ ಹಬೀಬಳೊಡನೆ ವಾಸವಾಗಿದ್ದು ಅಲ್-ಸುನಾಹ್ ಗ್ರಾಮದಿಂದ ರಾಜಧಾನಿಯಾದ ಮದೀನಕ್ಕೆ ನಡೆದೇ ಬರುತ್ತಿದ್ದ. ರಾಜ್ಯದ ಆಡಳಿತವನ್ನು ಪೈಗಂಬರನ ಮಸೀದಿಯಿಂದಲೇ ನಿರ್ವಹಿಸುತ್ತಿದ್ದ. ಅಲ್ಲದೆ ಕಲೀಫನಾಗಿ ಆಡಳಿತ ನಡೆಸುತ್ತಿದ್ದಾಗ ತನ್ನ ಸ್ವಂತಕ್ಕೆಂದು ಯಾವ ವಿಧವಾದ ಅನುಕೂಲಗಳನ್ನೂ ಪಡೆಯಲಿಲ್ಲ. ಪ್ರಜೆಗಳ ಹಿತಕ್ಕಾಗಿ ರಾಜ್ಯದ ಏಳಿಗೆಗಾಗಿ ಸರ್ವಶಕ್ತಿಯನ್ನೂ ವಿನಿಯೋಗಿಸಿದ. ಸರಳ ಸ್ವಭಾವದಿಂದಲೂ ದಕ್ಷತೆಯಿಂದಲೂ ಜನರ ಅಪಾರ ಮೆಚ್ಚುಗೆಯನ್ನು ಗಳಿಸಿದ್ದ. ಗಾದಿಗೆ ಬರುವಾಗಲೇ ವಯೋವೃದ್ಧನಾಗಿದ್ದ ಈತ ಎರಡು ವರ್ಷಗಳ ಕಾಲ (732-734) ಆಡಳಿತ ನಡೆಸಿ ಮರಣ ಹೊಂದಿದ.[೧][೨]

ಉಲ್ಲೇಖಗಳು[ಬದಲಾಯಿಸಿ]