ಅನ್ನಮ್ಮಬೆಟ್ಟ

ವಿಕಿಪೀಡಿಯ ಇಂದ
Jump to navigation Jump to search

ಬೆಂಗಳೂರಿನ ಹೊರವಲಯದ ಉತ್ತರಹಳ್ಳಿಯ ಬಳಿ ಇರುವ ಅನ್ನಮ್ಮ ಬೆಟ್ಟದಲ್ಲಿ ಪ್ರತಿ ತಪಸ್ಸುಕಾಲದ ಐದನೇ ಭಾನುವಾರ ಶಿಲುಬೆಯಾತ್ರೆ ನಡೆಯುತ್ತದೆ. ಸುಮಾರು ೨೦೦ ವರ್ಷಗಳಿಗೆ ಮುನ್ನ ಈ ಬೆಟ್ಟದ ತಪ್ಪಲಿನಲ್ಲಿದ್ದ ಸಾಧ್ವಿ ಹೆಣ್ಣುಮಗಳೊಬ್ಬಳು ಕಾಮುಕ ಸೈನಿಕರಿಂದ ತಪ್ಪಸಿಕೊಳ್ಳಲು ಓಡುತ್ತಾ ಸಾಗಿ ಕೊನೆಗೆ ಬೆಟ್ಟದ ಮೇಲಿನಿಂದ ಹಾರಿ ಪ್ರಾಣಾರ್ಪಣೆ ಮಾಡಿದಳೆಂದೂ ಕೊನೆಗೆ ಅದೇ ಸೈನಿಕರು ಆಕೆಯ ಸಚ್ಚಾರಿತ್ರ್ಯವನ್ನು ಮೆಚ್ಚಿ ಮಣ್ಣು ಮಾಡಿದರೆಂದೂ ಐತಿಹ್ಯವಿದೆ. ಬೆಟ್ಟದ ಬುಡದಲ್ಲಿರುವ ಏಕೈಕ ಕ್ರೈಸ್ತ ಸಮಾಧಿಗೆ ಭಕ್ತರು ವಿಶೇಷವಾಗಿ ಹೆಣ್ಣುಮಕ್ಕಳು ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಸಮಾಧಿಯ ಮಣ್ಣನ್ನು ಜನ ಪೂಜ್ಯಭಾವದಿಂದ ತಮ್ಮ ನೆತ್ತಿಯ ಮೇಲೆ ಹಾಕಿಕೊಳ್ಳುತ್ತಾರೆ. ತಪಸ್ಸುಕಾಲದ ಐದನೇ ಭಾನುವಾರ ಇಲ್ಲಿ ದೊಡ್ಡ ಜಾತ್ರೆಯೇ ನೆರೆಯುತ್ತದೆ. ಜನ ವಾಹನಗಳಲ್ಲಿ ಕಾಲ್ನಡಿಗೆಯಲ್ಲಿ ಇಲ್ಲಿಗೆ ಧಾವಿಸುತ್ತಾರೆ. ಬೆಂಗಳೂರು ನಗರಸಾರಿಗೆಯು ಅಂದು ವಿಶೇಷ ಬಸ್ ವ್ಯವಸ್ಥೆಯನ್ನೂ ಮಾಡುತ್ತದೆ.

ಕನ್ನಡ ಕ್ರೈಸ್ತ ಸಮುದಾಯದ ಜಾನಪದ ದೇವತೆ[ಬದಲಾಯಿಸಿ]

ಬೆಂಗಳೂರು ಮಹಾನಗರದ ಒಡಲನ್ನು ಸೇರಿಹೋಗಿರುವ ಹಾಗೂ ಹೊರವಲಯದ ಗ್ರಾಮಗಳಲ್ಲಿರುವ ಕನ್ನಡ ಕ್ರೈಸ್ತರ ಜಾನಪದ ದೈವವಾಗಿ ಅನ್ನಮ್ಮನು ಅವರನ್ನೆಲ್ಲ ವರ್ಷಕ್ಕೊಮ್ಮೆ ಸೂಜಿಗಲ್ಲಿನಂತೆ ಸೆಳೆಯುತ್ತಾಳೆ. ಚರ್ಚಿನೊಳಗಡೆಯ ಶಿಷ್ಟ ದೈವಗಳ ಜೊತೆಜೊತೆಗೇ ಮಣ್ಣಿನ ಮಕ್ಕಳ ಸಾಂಸ್ಕೃತಿಕ ಕೊಂಡಿಯಾಗಿ ಅನ್ನಮ್ಮ ಕಾರ್ಯನಿರ್ವಹಿಸುತ್ತಾಳೆ. ಮಲೆನಾಡಿನ ಕ್ರೈಸ್ತರು ಹಸೆ ಬರೆಯುವಾಗ ಈ ರೀತಿ ಹಾಡುತ್ತಾರಂತೆ: ಸಣ್ಣಕ್ಕಿ ಹಸೆಯ ಸಣ್ಣಾಗಿ ಬರೆಯಮ್ಮ ಸಣ್ಣಾಕಿ ಉತ್ತರಹಳ್ಳಿ ಅನ್ನಮ್ಮ | ಬರೆದಾರೊ ಸಣ್ಣ ಸುಣ್ಣಾದ ಹಸೆಗಳ | ಕಂಡಾರೋ ಮರಿಯವ್ವ ತಾಯಿ ಜರಿದಾರೊ | ಅನ್ನಮ್ಮನ ಸಣ್ಣಾಗಿ ಹಸೆಯ ಬರೆಯೆಂದು || ಇಂದು ಅನ್ನಮ್ಮನ ಸಮಾಧಿಯ ಬಳಿ ಪುಟ್ಟ ಚರ್ಚ್ ತಲೆಯೆತ್ತಿದ್ದು ಪ್ರತಿನಿತ್ಯ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಬೆಟ್ಟದ ತಪ್ಪಲಿನ ಹಸಿರು ಕಾಡು ಮಾಯವಾಗಿ ವಸತಿ ಬಡಾವಣೆಗಳು ವಿಜೃಂಭಿಸುತ್ತಿವೆ. ಆದರೆ ಅನ್ನಮ್ಮ ಬೆಟ್ಟ ಮಾತ್ರ ಅಚಲವಾಗಿ ನಿಂತಿದೆ. ಭಕ್ತಾದಿಗಳು ಎಂದಿನಂತೆ ಬರುತ್ತಾ ಹೋಗುತ್ತಾ ಇದ್ದಾರೆ. ರಣಬಿಸಿಲನ್ನು ಲೆಕ್ಕಿಸದೆ ಶಿಲುಬೆಯಾತ್ರೆ ಮಾಡುತ್ತಿದ್ದಾರೆ.