ಅಧಿಕಲಾಭತೆರಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವ್ಯಕ್ತಿ ಹಾಗೂ ವ್ಯಾಪಾರಗಾರರು ಗಳಿಸುವ ಅಧಿಕಲಾಭಗಳ ಮೇಲೆ ವಿಧಿಸುವ ತೆರಿಗೆ (ಎಕ್ಸೆಸ್ ಪ್ರಾಫಿಟ್ ಟ್ಯಾಕ್ಸ್). ವ್ಯಾಪಾರದ ಪ್ರತಿ ವಸ್ತುವಿಗೂ ಲಾಭದ ಪ್ರಮಾಣ ನಿರ್ಣಯವಾಗಿರುತ್ತದೆ. ಆ ಲಾಭಕ್ಕಿಂತಲೂ ಅಧಿಕವಾಗಿ ಬರುವ ಲಾಭ ತೆರಿಗೆಗೆ ಒಳಗಾಗುತ್ತದೆ. ಅಧಿಕಲಾಭ ಉದ್ಯಮಸಾಹಸಕ್ಕಿಂತ ಹೆಚ್ಚಾಗಿ ಅಸಾಧಾರಣಪರಿಸ್ಥಿತಿಯಿಂದ ಉಂಟಾಗುತ್ತದೆ. ಸಾಮಾನ್ಯವಾಗಿ ಯುದ್ಧಕಾಲದಲ್ಲಿ, ಯುದ್ಧಕ್ಕೆ ಮೊದಲು ಸ್ವಲ್ಪಕಾಲ ಮತ್ತು ಯುದ್ಧಾನಂತರ ಸ್ವಲ್ಪ ಕಾಲ ಅಧಿಕಲಾಭವುಂಟಾಗುವುದು ಸರ್ವಸಾಧಾರಣ. ಈ ತೆರಿಗೆಯನ್ನು ಯುದ್ಧಕಾಲದ ಅಧಿಕಲಾಭಕ್ಕೆ ಮಾತ್ರ ಹಾಕಲಾಗುತ್ತಿತ್ತು. ಆದರೆ ಸಾಮಾನ್ಯಪರಿಸ್ಥಿತಿಯಲ್ಲೂ ಅಧಿಕಲಾಭ ಉಂಟಾಗಬಹುದಾದ್ದರಿಂದ ಒಂದು ದೇಶದ ತೆರಿಗೆಯ ಚೌಕಟ್ಟಿನಲ್ಲಿ ಇದು ಖಾಯಂ ಆಗಿ ಉಳಿಯಲು ಸಾಧ್ಯ. ಯುದ್ಧಕಾಲದ ಅಧಿಕಲಾಭತೆರಿಗೆಯನ್ನು (ವಾರ್ ಪ್ರಾಫಿಟ್ ಟ್ಯಾಕ್ಸ್) ಯುದ್ಧಕಾಲದ ತೆರಿಗೆ ಎಂದೂ ಸಾಮಾನ್ಯ ಪರಿಸ್ಥಿತಿಯಲ್ಲಿನ ತೆರಿಗೆಯನ್ನು ಅಧಿಕಲಾಭತೆರಿಗೆ ಎಂದೂ ಕರೆಯಬಹುದು. ಇದು ಈಚಿನ ಅರ್ಥಶಾಸ್ತ್ರಜ್ಞರ ಅಭಿಪ್ರಾಯ.[೧]

ಅಧಿಕಲಾಭತೆರಿಗೆಯ ವಿಧಾನ[ಬದಲಾಯಿಸಿ]

ಯುದ್ಧಕಾಲದ ಅಧಿಕಲಾಭತೆರಿಗೆ ಯುದ್ಧಕಾಲಕ್ಕೆ ಮಾತ್ರ ಅನ್ವಯವಾಗುವ ತೆರಿಗೆ. ಯುದ್ಧ ಮುಗಿದಮೇಲೆ ಅದನ್ನು ರದ್ದುಮಾಡುತ್ತಾರೆ. ಯುದ್ಧಕಾಲದಲ್ಲಿ ಬೆಲೆಗಳು ಹೆಚ್ಚಾಗಿರುವುದರಿಂದ ಲಾಭವೂ ಹೆಚ್ಚಾಗಿರುತ್ತದೆ. ಯುದ್ಧಸಾಮಗ್ರಿಗಳ ಉತ್ಪಾದನೆ, ಇತರ ಕೈಗಾರಿಕೆಗಳು, ಅಧಿಕಲಾಭವನ್ನು ಸಂಪಾದಿಸುತ್ತವೆ. ಹೀಗೆ ಅಧಿಕಲಾಭದ ಮೇಲೆ ಬರುವ ತೆರಿಗೆಯೆಲ್ಲ ಸರ್ಕಾರಕ್ಕೆ ಸೇರುತ್ತದೆ. ಯುದ್ಧಕಾಲದ ಅಧಿಕಲಾಭತೆರಿಗೆಯನ್ನು ವಿಧಿಸುವಾಗ ಯುದ್ಧಪೂರ್ವಲಾಭವನ್ನು ಸಾಮಾನ್ಯಲಾಭವೆಂದು ಪರಿಗಣಿಸುತ್ತಾರೆ. ಆದರೆ ಶಾಶ್ವತ ಅಧಿಕಲಾಭತೆರಿಗೆಯನ್ನು ವಿಧಿಸುವಾಗ ಯುದ್ಧಪೂರ್ವಲಾಭವನ್ನು ಸಾಮಾನ್ಯಲಾಭವೆಂದು ಪರಿಗಣಿಸುವುದಿಲ್ಲ. ಸಾಮಾನ್ಯ ಲಾಭವನ್ನು ಕಂಡುಹಿಡಿಯಲು ಬಂಡವಾಳದ ಮೇಲೆ ಬರುವ ಬಡ್ಡಿ, ಕೂಲಿದರ, ಜೀವನಮಟ್ಟ, ಉತ್ಪಾದನಾ ವೆಚ್ಚ, ಬಂಡವಾಳಲಭ್ಯತೆ, ರಾಷ್ಟ್ರೀಯ ಯೋಜನೆಯ ಗುರಿ ಮತ್ತು ಹಾಲಿ ಇರುವ ಲಾಭ- ಇವೆಲ್ಲವನ್ನೂ ಪರಿಗಣಿಸುತ್ತಾರೆ. ಅಧಿಕಲಾಭತೆರಿಗೆ ಯುದ್ಧಕಾಲದಲ್ಲಿ ಪ್ರಾರಂಭವಾದರೂ ಅದರ ಮೂಲ ಉದ್ದೇಶ ಯುದ್ಧಕಾಲದ ಲಾಭವನ್ನು ಮಾತ್ರ ತೆಗೆದುಕೊಳ್ಳುವುದಲ್ಲ. ಸಾಮಾನ್ಯಲಾಭವನ್ನು ನಿರ್ಣಯ ಮಾಡುವಾಗ ಅದು ಒಂದು ನಿರ್ದಿಷ್ಟ ಅಳತೆಗೋಲನ್ನು ಹೊಂದಿ, ಯುದ್ಧ ಕಾರಣದಿಂದಾಗಲಿ ಅಥವಾ ಬೇರಾವ ಕಾರಣದಿಂದಾಗಲಿ ಉಂಟಾಗುವ ಅಧಿಕಲಾಭವನ್ನು ತೆರಿಗೆಗೆ ಒಳಪಡಿಸುತ್ತದೆ. ಅಧಿಕಲಾಭತೆರಿಗೆಯ ಮುಖ್ಯ ಗುರಿ ಸಾಮಾಜಿಕ ಪುರೋಭಿವೃದ್ಧಿ, ಕೇವಲ ಸರ್ಕಾರದ ಆದಾಯವನ್ನು ಹೆಚ್ಚಿಸುವುದೇ ಅಲ್ಲ.

ಅಧಿಕಲಾಭತೆರಿಗೆಯ ವಿಭಜನೆ[ಬದಲಾಯಿಸಿ]

ಈ ತೆರಿಗೆ ಒಂದು ನಿರ್ದಿಷ್ಟ ಸಾಮಾನ್ಯಲಾಭದ ಮೇಲೆ ಬರುವ ಲಾಭಕ್ಕೆ ಮಾತ್ರ ಅನ್ವಯಿಸುತ್ತದಾದ್ದರಿಂದ ಸಾಮಾನ್ಯಲಾಭವನ್ನು ನಿರ್ಣಯಮಾಡುವುದು ಮೊದಲ ಸಮಸ್ಯೆ. ಅನಂತರ ಈ ತೆರಿಗೆ ಮತ್ತು ಆದಾಯತೆರಿಗೆಗೆ ಇರುವ ಸಂಬಂಧ, ಅಧಿಕಲಾಭತೆರಿಗೆಯ ಪರಿಣಾಮಗಳು ಅನುಕೂಲ ಮತ್ತು ಅನಾನುಕೂಲಗಳು- ಇವನ್ನು ಪರಿಶೀಲಿಸಿ ಕೊನೆಗೆ ತೆರಿಗೆಯ ರೀತಿ ಅನುಪಾತಕ್ರಮದಲ್ಲಿರಬೇಕೆ ಆರೋಪಣ ಕ್ರಮದಲ್ಲಿರಬೇಕೆ ಎಂಬುದನ್ನು ನಿರ್ಧರಿಸಬೇಕಾಗುತ್ತದೆ.ಸಾಮಾನ್ಯಲಾಭ ನಿರ್ಣಯಿಸುವಾಗ ಎರಡು ಮಾನಗಳನ್ನು ಅನುಸರಿಸಬಹುದು. ಮೊದಲನೆಯದು ಆದಾಯಮಾನ (ಇನ್‍ಕಮ್ ಸ್ಟ್ಯಾಂಡೆರ್ಡ್), ಎರಡನೆಯದು ಬಂಡವಾಳಮಾನ (ಕ್ಯಾಪಿಟಲ್ ಸ್ಟ್ಯಾಂಡರ್ಡ್). ಆದಾಯಮಾನದಲ್ಲಿ ಯಾವುದಾದರೂ ಒಂದು ವರ್ಷ ಅಥವಾ ಕೆಲವು ನಿರ್ದಿಷ್ಟವರ್ಷಗಳಲ್ಲಿ ಬಂದಿರುವ ಲಾಭವನ್ನು ಸಾಮಾನ್ಯಲಾಭವೆಂದು ಪರಿಗಣಿಸಬಹುದು. ಇದರ ಗುಣಾವಗುಣಗಳು ಹೀಗಿವೆ: ತೆರಿಗೆಯನ್ನು ವಿಧಿಸುವವರು ಆ ವರ್ಷ ಅಥವಾ ವರ್ಷಗಳ ಲಾಭ ಜಾಸ್ತಿಯೆ ಅಥವಾ ಕಡಿಮೆಯೆ ಎಂಬ ವಿಷಯವನ್ನು ನಿರ್ಧರಿಸಲಿಕ್ಕೆ ಹೋಗುವುದಿಲ್ಲ. ಈ ಮಾನದ ಅನುಸರಣೆಯಿಂದ ಈ ತೆರಿಗೆ ಕೊಡುವ ಎಷ್ಟು ಉದ್ಯಮಗಳು ಇವೆಯೋ ಅಷ್ಟು ಸಾಮಾನ್ಯಲಾಭದರಗಳು ಇರಬಹುದು. ಆದಾಯಮಾನವನ್ನು ಇಲ್ಲ ಉದ್ಯಮಗಳಿಗೂ ಅನ್ವಯಿಸಲು ಸಾಧ್ಯವಿಲ್ಲ. ಅಧಿಕಲಾಭತೆರಿಗೆಯ ಪೂರ್ವದಲ್ಲಿ ಇದ್ದ ಉದ್ಯಮಗಳಿಗೆ ಮಾತ್ರ ಇದನ್ನು ಅನ್ವಯಿಸಬಹುದು. ಅಲ್ಲದೆ ಸರಿಯಾದ ಪ್ರಾರಂಭಿಕವರ್ಷ ಅಥವಾ ವರ್ಷಗಳನ್ನು ಪಡೆಯುವುದು ಬಹಳ ಕಷ್ಟ. ಈ ಮಾನ ಹೂಡಿರುವ ಬಂಡವಾಳ ಮತ್ತು ಆ ಹೂಡಿಕೆಯಲ್ಲಿರುವ ಬದಲಾವಣೆ ಇವುಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಬದಲಾಗುತ್ತಿರುವ ಉದ್ಯಮಸ್ಥಿತಿಗೆ ಹಿಂದಿನ ಯಾವುದಾದರೂ ಒಂದು ವರ್ಷದ ಅಥವಾ ವರ್ಷಗಳ ಲಾಭವನ್ನೇ ಸಾಮಾನ್ಯಲಾಭವೆಂದು ಪರಿಗಣಿಸುವುದು ಸರಿಯೂ ಆಗುವುದಿಲ್ಲ.

ಬಂಡವಾಳಮಾನ ಪದ್ಧತಿ[ಬದಲಾಯಿಸಿ]

ಬಂಡವಾಳಮಾನದಲ್ಲಿ ಶಾಸನದ ಮೂಲಕ ಬಂಡವಾಳದ ಮೇಲೆ ಒಂದು ನಿರ್ದಿಷ್ಟ ಲಾಭವನ್ನು ಸಾಮಾನ್ಯಲಾಭವೆಂದು ನಿರ್ಣಯಿಸಬಹುದು. ಇದರ ಪ್ರಕಾರ ಒಂದು ಉದ್ಯಮದ ಒಟ್ಟು ಲಾಭ ಮುಖ್ಯವಲ್ಲ. ಬಂಡವಾಳ ಹೂಡಿಕೆಯ ಮೇಲೆ ಬರುವ ಲಾಭದ ದರ ಮುಖ್ಯ. ಬಂಡವಾಳಹೂಡಿಕೆಯಲ್ಲಿ ಬದಲಾವಣೆ, ಉದ್ಯಮಗಳು ಎದುರಿಸಬೇಕಾದ ಅನಿರೀಕ್ಷಿತ ಪರಿಸ್ಥಿತಿ ಇವುಗಳನ್ನು ಅವಲಂಬಿಸಿ ತೆರಿಗೆ ನಿರ್ಧರಿಸಲ್ಪಡಬೇಕು. ಬಂಡವಾಳಮಾನದಲ್ಲಿ ಸಾಮಾನ್ಯಲಾಭನಿರ್ಣಯ ಉದ್ಯಮಗುಂಪುಗಳ ಆಧಾರದ ಮೇಲೆ ನಡೆಯುತ್ತದೆ. ಪ್ರತಿ ಉದ್ಯಮದ ಪ್ರಕಾರ ನಿರ್ಣಯವಾಗುವುದಿಲ್ಲ. ಬಂಡವಾಳಮಾನದಲ್ಲೂ ಕೆಲವು ತೊಂದರೆಗಳಿವೆ. ಶಾಸನದಿಂದ ನಿರ್ಧಾರವಾದ ಯಾವ ಸಾಮಾನ್ಯಲಾಭ ಪ್ರಮಾಣವೇ ಆಗಲಿ ಸ್ವಲ್ಪಮಟ್ಟಿಗೆ ನಿರಂಕುಶವಾಗಿರಬಹುದು (ಆರ್‍ಬಿಟ್ರರಿ) ಮತ್ತು ಹೂಡಿರುವ ಬಂಡವಾಳವನ್ನು ಪ್ರತಿವರ್ಷವೂ ಅಳೆಯುವುದು ಕಷ್ಟ ಮತ್ತು ಬಹಳ ದುಬಾರಿ, ಉದ್ಯಮಿಗೆ ತೊಂದರೆಯೂ ಉಂಟು. ಕೆಲವು ತೊಂದರೆಗಳು ಇದ್ದರೂ ಅಧಿಕಲಾಭತೆರಿಗೆಯ ನೈತಿಕಧ್ಯೇಯವನ್ನು ಅನುಸರಿಸಲು, ಈ ತೆರಿಗೆಯನ್ನು ರಾಷ್ಟ್ರೀಯಯೋಜನೆಯ ಒಂದು ಸಾಧನವಾಗಿ ಮಾಡಲು ವಿವಿಧ ಬಗೆಯ ಉದ್ಯಮಿಗಳ ಗಳಿಕೆಯಲ್ಲಿ ತೆರಿಗೆ ಎತ್ತುವಾಗ ನ್ಯಾಯವನ್ನು ಪರಿಪಾಲಿಸಲು ಬಂಡವಾಳಮಾನ ಆದಾಯಮಾನಕ್ಕಿಂತ ಉತ್ತಮ. ಈ ತೆರಿಗೆಯನ್ನು ವಿಧಿಸಿರುವ ವಿವಿಧದೇಶಗಳ ಅನುಭವವನ್ನು ನೋಡಿದರೆ ಎರಡು ಮಾನಗಳಲ್ಲಿ ಬಂಡವಾಳಮಾನ ಉತ್ತಮವೆಂಬುದಕ್ಕೆ ಹೇರಳ ನಿದರ್ಶನಗಳು ದೊರೆಯುತ್ತವೆ. ಈ ತೆರಿಗೆಯನ್ನು ಆರೋಹಣಕ್ರಮದಲ್ಲಿ ವಿಧಿಸಲು ಅನೇಕ ಅರ್ಥಶಾಸ್ತ್ರಜ್ಞರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಮೊದಲನೆಯದಾಗಿ ನೀತಿಯ ದೃಷ್ಟಿಯಿಂದ ಆರೋಹಣಕ್ರಮತೆರಿಗೆ ಕೊಡುವವರ ಶಕ್ತಿಯನ್ನು ಪರಿಗಣಿಸುವುದಿಲ್ಲ. ಅಧಿಕಲಾಭ ಶ್ರೀಮಂತರಿಗೇ ಹೋಗುವ ಭರವಸೆ ಇಲ್ಲ. ಅಧಿಕಲಾಭತೆರಿಗೆ ಒಟ್ಟುವರಮಾನವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಎರಡನೆಯದಾಗಿ ಆರೋಹಣಕ್ರಮದಿಂದ ಅಧಿಕಲಾಭ ಕೊಡುವ ಉದ್ಯಮಗಳ ಸಂಖ್ಯೆ ಕಡಿಮೆಯಾಗುತ್ತದೆ. ಮೂರನೆಯದಾಗಿ ಆಡಳಿತದೃಷ್ಟಿಯಿಂದ ಆರೋಹಣಕ್ರಮ ಅನುಕೂಲವಾದ್ದಲ್ಲ.

ತೆರಿಗೆ ತೆಗೆದುಕೊಳ್ಳುವಿಕೆ[ಬದಲಾಯಿಸಿ]

ತೆರಿಗೆ ಕೊಡುವವರ ಶಕ್ತಿಯ ಮೇಲೆ ತೆರಿಗೆ ನಿರ್ಧರಿಸುವುದಲ್ಲ. ಎಲ್ಲ ಅಧಿಕಲಾಭವೂ ಅಸಮರ್ಥನೀಯ; ತಾತ್ತ್ವಿಕವಾಗಿ ನೋಡಿದರೆ ಶೇಕಡ ನೂರರಷ್ಟು ಅಧಿಕಲಾಭತೆರಿಗೆ ಸಮರ್ಥನೀಯ; ಅಧಿಕಲಾಭತೆರಿಗೆಯೇ ನೈತಿಕ ತೆರಿಗೆ. ಆದ್ದರಿಂದ ಅದಕ್ಕೆ ಆರೋಹಣಕ್ರಮದಲ್ಲಿನ ನೈತಿಕ ಆಧಾರ ಅಪ್ರಕೃತ ಎಂದು ಕೆಲವರ ವಿರೋಧಾಭಿಪ್ರಾಯವೂ ಉಂಟು. ಆರೋಹಣಕ್ರಮವನ್ನು ಅನುಸರಿಸಬೇಕೆ ಬೇಡವೆ ಎಂಬುದು ಆಡಳಿತಾನುಕೂಲ ಮತ್ತು ಈ ತೆರಿಗೆಯಿಂದ ನಿರೀಕ್ಷಿಸುವ ಆದಾಯ- ಇವನ್ನು ಅವಲಂಬಿಸಿದೆ. ಅನುಪಾತಕ್ರಮದಿಂದ ಅಧಿಕಲಾಭತೆರಿಗೆಯ ಆದಾಯ ಕಡಿಮೆಯಾಗುತ್ತದೆ. ಆದುದರಿಂದ ಆರೋಹಣಕ್ರಮವನ್ನು ಅನುಸರಿಸಿ ಆಡಳಿತದೃಷ್ಟಿಯಿಂದ ಅದು ಪರಿಣಾಮಕಾರಿಯಾದರೆ ಆರೋಹಣಕ್ರಮ ಉತ್ತಮ. ಮೊದಲನೆಯ ಮಹಾಯುದ್ಧಕಾಲದಲ್ಲಿ ಅಮೆರಿಕ ಸಂಯುಕ್ತಸಂಸ್ಥಾನ, ಆಸ್ಟ್ರೇಲಿಯ, ರಷ್ಯ, ಡೆನ್‍ಮಾರ್ಕ್, ಇಟಲಿ ಮತ್ತು ಸ್ಪೇನ್ ದೇಶಗಳು ಆರೋಹಣಅಧಿಕಲಾಭತೆರಿಗೆಯನ್ನು ವಿಧಿಸಿದುವು. ಭಾರತ, ಬ್ರಿಟನ್ ಮುಂತಾದ ದೇಶಗಳು ಅನುಪಾತ ಅಧಿಕಲಾಭತೆರಿಗೆಯನ್ನು ವಿಧಿಸಿದುವು. ಎರಡನೆಯ ಮಹಾಯುದ್ಧಕಾಲದಲ್ಲೂ ಭಾರತ ಮತ್ತು ಬ್ರಿಟನ್ ದೇಶಗಳು ಅನುಪಾತಕ್ರಮವನ್ನು ಅನುಸರಿಸಿದರೆ ಅಮೆರಿಕ ಸಂಯುಕ್ತಸಂಸ್ಥಾನ ಮತ್ತು ಕೆನಡ ದೇಶಗಳು ಆರೋಹಣಕ್ರಮ ಅನುಸರಿಸಿದುವು. ಈ ತೆರಿಗೆ ಯುದ್ಧಕಾಲದ ಅಧಿಕಲಾಭವನ್ನು ಮಾತ್ರ ತೆಗೆದುಕೊಳ್ಳುವ ಉದ್ದೇಶ ಹೊಂದಿದ್ದರೆ ಅನುಪಾತಕ್ರಮ ಸಮಂಜಸವಾಗಬಹುದು. ಆದರೆ ಅದು ಶಾಶ್ವತ ತೆರಿಗೆಯೆಂದು ಪರಿಗಣಿಸಲ್ಪಟ್ಟರೆ ಆರೋಹಣಕ್ರಮ ಉತ್ತಮವಾಗುತ್ತದೆ. ಆರೋಹಣ ಅಥವಾ ಅನುಪಾತಕ್ರಮಗಳನ್ನು ಅನುಸರಿಸುವಾಗ ಅಧಿಕಲಾಭತೆರಿಗೆ ವಿಧಿಸುವ ಉದ್ದೇಶಗಳು. ಆರೋಹಣಕ್ರಮದ ಸಾಧ್ಯತೆ, ಅಧಿಕಲಾಭತೆರಿಗೆಯಿಂದ ನಿರೀಕ್ಷಿಸುವ ವರಮಾನ ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡು ಯಾವ ಮಾರ್ಗ ಯೋಗ್ಯವೋ ಅದನ್ನು ಅನುಸರಿಸಬಹುದು.

ವರಮಾನತೆರಿಗೆ[ಬದಲಾಯಿಸಿ]

ಈ ತೆರಿಗೆ ಮತ್ತು ವರಮಾನತೆರಿಗೆಗಳಿಗೆ ಕೆಲವು ಸಾಮ್ಯಗಳಿವೆ. ಒಂದು ಉದ್ಯಮದ ಆದಾಯವನ್ನು ತೆರಿಗೆಗೆ ಒಳಪಡಿಸಿದರೆ ಅದು ಅಧಿಕಲಾಭತೆರಿಗೆಯಾಗುತ್ತದೆ. ಆದರೆ ಒಬ್ಬ ವ್ಯಕ್ತಿಯ ಆದಾಯವನ್ನು ತೆರಿಗೆಗೆ ಒಳಪಡಿಸಿದರೆ ಅದು ವರಮಾನತೆರಿಗೆಯಾಗುತ್ತದೆ. ಲಾಭ ಸಹ ಒಂದು ವಿಧವಾದ ಆದಾಯ. ಯುದ್ಧಕಾಲದ ಅಧಿಕಲಾಭತೆರಿಗೆಯಲ್ಲಿ ವರಮಾನವೇ ಮುಖ್ಯ ಗುರಿಯಾಗಿದ್ದು, ತೆರಿಗೆ ಕೊಡುವ ಶಕ್ತಿಯ ಆಧಾರದ ಮೇಲೆ ಅದನ್ನು ನಿರೂಪಿಸಲಾಗಿತ್ತು. ಆದಾಯ ತೆರಿಗೆ ಕೂಡ ಈ ನಿಯಮಗಳಿಗೆ ಅನುಸಾರವಾಗಿರುವುದರಿಂದ ಈ ಎರಡು ತೆರಿಗೆಗಳಿಗೆ ಯಾವ ವ್ಯತ್ಯಾಸವೂ ಇಲ್ಲ ಎಂಬ ಭಾವನೆ ಇದೆ. ಆದಾಯತೆರಿಗೆ ಮತ್ತು ಅಧಿಕಲಾಭತೆರಿಗೆಗೆ ಮುಖ್ಯವಾದ ಕೆಲವು ವ್ಯತ್ಯಾಸಗಳಿವೆ. ಆದಾಯತೆರಿಗೆಯ ಮುಖ್ಯ ಗುರಿ ವರಮಾನ. ಅಧಿಕಲಾಭತೆರಿಗೆಯಲ್ಲಿ ಮುಖ್ಯಗುರಿ ಸಾಮಾಜಿಕ ನೀತಿ, ನ್ಯಾಯ. ಉದ್ಯಮಸಂಸ್ಥೆ ನಿಗದಿಯಾದ ಲಾಭಕ್ಕಿಂತ ಹೆಚ್ಚು ಲಾಭ ಪಡೆಯಲು ಯಾವ ಹಕ್ಕೂ ಇಲ್ಲ. ನಿರ್ದಿಷ್ಟ ಲಾಭಕ್ಕಿಂತ ಹೆಚ್ಚು ಲಾಭ ಪಡೆಯುವುದು ಸಮಾಜದ್ರೋಹ. ಆದ್ದರಿಂದ ಗಳಿಸಿದ ಹೆಚ್ಚು ಲಾಭವನ್ನು ತೆರಿಗೆಯ ಮೂಲಕ ಸರ್ಕಾರ ಪಡೆಯಬಹುದು. ಆದಾಯತೆರಿಗೆ ಎಲ್ಲ ಲಾಭವನ್ನೂ ಗಣನೆಗೆ ತೆಗೆದುಕೊಂಡು ವಿಧಿಸಲ್ಪಟ್ಟರೆ ಅಧಿಕಲಾಭತೆರಿಗೆ, ಅಧಿಕಲಾಭ ಮತ್ತು ಸಂಪಾದನೆ ಮಾಡದ ಅಧಿಕಲಾಭಕ್ಕೆ ಮಾತ್ರ ಅನ್ವಯಿಸುತ್ತದೆ. ಆದಾಯತೆರಿಗೆಯ ದೃಷ್ಟಿಯಿಂದ ಒಟ್ಟು ಲಾಭ ಮುಖ್ಯವಾದರೆ, ತೆರಿಗೆಯಲ್ಲಿ ಬಂಡವಾಳದ ಮೇಲೆ ಬರುವ ಲಾಭದ ದರ ಮುಖ್ಯ. ವರಮಾನತೆರಿಗೆಯಲ್ಲಿ ತೆರಿಗೆ ಕೊಡುವ ಶಕ್ತಿ ಮುಖ್ಯ; ಅಧಿಕಲಾಭ ತೆರಿಗೆಯಲ್ಲಿ ಲಾಭಾಧಿಕ್ಯ ಮುಖ್ಯ. ಈ ತೆರಿಗೆಯ ಪರವಾಗಿ ಇಷ್ಟು ಹೇಳಬಹುದು. ಅಧಿಕಲಾಭ ಉದ್ಯಮಿಯ ಸಾಹಸ ಪ್ರತಿಭೆಗಳಿಂದ ಉಂಟಾಗುವುದಿಲ್ಲ. ಅದು ಅಸಾಧಾರಣ ಪರಿಸ್ಥಿತಿಯ ಫಲ. ಅಧಿಕಲಾಭ ಒಂದು ರೀತಿಯಲ್ಲಿ ಸಂಪಾದನೆ ಮಾಡದ ಹೆಚ್ಚು ಗಳಿಕೆ. ಈ ಅನಿರೀಕ್ಷಿತ ಲಾಭವನ್ನು ಸಮಾಜದ ಹಿತದೃಷ್ಟಿಯಿಂದ ಸರ್ಕಾರ ತೆಗೆದುಕೊಳ್ಳುವುದರಲ್ಲಿ ಯಾವ ಅನ್ಯಾಯವೂ ಇಲ್ಲ. ಅಲ್ಲದೆ ಸಾಮಾನ್ಯ ಪರಿಸ್ಥಿತಿ ಇರುವ ಕಾಲದಲ್ಲೂ ಒಂದು ನಿರ್ದಿಷ್ಟಪ್ರಮಾಣಕ್ಕಿಂತ ಹೆಚ್ಚು ಲಾಭಪಡೆಯುವುದು ಸಮಾಜವಿರೋಧ ಕಾರ್ಯ. ಆದುದರಿಂದ ಅದಕ್ಕೆ ತೆರಿಗೆ ವಿಧಿಸಬೇಕು. ಅಧಿಕಲಾಭತೆರಿಗೆ ಉದ್ಯಮಿಗಳು ಸಂಪಾದಿಸದ ಅಧಿಕವರಮಾನ ತೆರಿಗೆಯೆಂದು ಪರಿಗಣಿಸಲ್ಪಡಬಹುದು. ಈ ದೃಷ್ಟಿಯಿಂದ ಅದು ಮರಣೋತ್ತರ ಆಸ್ತಿ ತೆರಿಗೆಗಳನ್ನು ಹೋಲುತ್ತದೆ.

ಅಹಿತ ಪರಿಣಾಮ[ಬದಲಾಯಿಸಿ]

ಈ ತೆರಿಗೆ ಮುಖ್ಯವಾಗಿ ಇದರಲ್ಲಿನ ಅಹಿತ ಪರಿಣಾಮವನ್ನು ಪ್ರಸ್ತಾಪಿಸುತ್ತಾರೆ. 1. ಈ ತೆರಿಗೆಯಲ್ಲಿ ಏಕರೂಪತೆ ಇಲ್ಲ, ಇದು ನಿರಂಕುಶ ರೀತಿಯದು, ತೆರಿಗೆ ಕೊಡುವವರಿಗೆ ಅನನುಕೂಲ ಮತ್ತು ವಸೂಲು ಮಾಡುವ ವೆಚ್ಚ ಹೆಚ್ಚು. ಆದುದರಿಂದ ಇದು ತೆರಿಗೆಯ ಮುಖ್ಯ ಸೂತ್ರಗಳಿಗೆಲ್ಲ ವಿರುದ್ಧವಾಗಿದೆ. 2. ಈ ತೆರಿಗೆ ಉದ್ಯಮಿಗಳ ಸಾಹಸ, ಕಾರ್ಯತತ್ಪರತೆಯನ್ನು ತಡೆಯುತ್ತದೆ. 3. ಬಂಡವಾಳ ಶೇಖರಣೆಗೆ ಅಡಚಣೆಯನ್ನುಂಟುಮಾಡುತ್ತದೆ. 4. ಇದು ತೆರಿಗೆ ಕೊಡುವ ಶಕ್ತಿ ಅನುಸಾರವಾಗಿಲ್ಲ; ಗ್ರಾಹಕರಿಗೆ ಹೆಚ್ಚು ಬೆಲೆಯನ್ನು ಒದಗಿಸುತ್ತದೆ. 5. ಈ ತೆರಿಗೆಯಿಂದ ವ್ಯರ್ಥವೆಚ್ಚ ಜಾಸ್ತಿ. ಹೊಸ ಉದ್ಯಮಗಳು ಪ್ರೋತ್ಸಾಹ ಪಡೆಯುವುದಿಲ್ಲ. ಬುದ್ಧಿವಂತಿಕೆ, ಉದ್ಯಮಸಾಹಸ - ಇವುಗಳಿಗೆ ಅಡಚಣೆ ಒದಗಿ ತೆರಿಗೆಯನ್ನು ತಪ್ಪಿಸಿಕೊಳ್ಳಲು ಉತ್ಪಾದನಾ ವೆಚ್ಚವನ್ನು ಹೆಚ್ಚು ಮಾಡಲು ಪ್ರೋತ್ಸಾಹಿಸುತ್ತದೆ.ಈ ತೆರಿಗೆಯ ಅಹಿತಪರಿಣಾಮಗಳು ಅನಿವಾರ್ಯವೇನೂ ಅಲ್ಲ. ಸಾಮಾನ್ಯ ಲಾಭವನ್ನು ನಿರ್ಧರಿಸುವಾಗ ಶಾಸ್ತ್ರೀಯವಾಗಿ ಬಂಡವಾಳಹೂಡಿಕೆಯ ಪ್ರಮಾಣ, ಸಾಲರೂಪದಲ್ಲಿ ಇರುವ ಬಂಡವಾಳ, ಬಂಡವಾಳದಮೇಲೆ ಬರುವ ಬಡ್ಡಿದರ, ಕೂಲಿದರ ಮತ್ತು ಸಾಮಾನ್ಯ ಲಾಭದರ- ಇವೆಲ್ಲವನ್ನೂ ಪರಿಗಣಿಸಿ ನಿರ್ಧಾರ ಮಾಡಿದರೆ ಉದ್ಯಮಗಳಿಗೆ ಅನ್ಯಾಯವಾಗುವುದಿಲ್ಲ. ತೆರಿಗೆಯನ್ನು ಶೇಕಡ ನೂರರಷ್ಟು ವಿಧಿಸಿದರೆ ಅಹಿತಪರಿಣಾಮಗಳಾಗಬಹುದು. ಆದರೆ ತೆರಿಗೆಯ ದರವನ್ನು ನಿಗದಿಮಾಡುವಾಗ ವಿವಿಧ ಉದ್ಯಮಿಗಳ ಪರಿಸ್ಥಿತಿಯ ಮೇಲೆ ವ್ಯತ್ಯಾಸವನ್ನು ಮಾಡಿದರೆ ಯಾವ ಉದ್ಯಮಕ್ಕಾಗಲಿ ಅನ್ಯಾಯವಾಗುವುದಿಲ್ಲ. ದರ ನಿಗದಿ ಮಾಡುವಾಗ ಪ್ರಾಮುಖ್ಯ ಉಳ್ಳ ಉದ್ಯಮಕ್ಕೆ ಪ್ರೋತ್ಸಾಹ ಕೊಡಬಹುದು. ಕೆಲವು ಹಿಂದುಳಿದ ಪ್ರದೇಶಗಳಲ್ಲಿ ಉದ್ಯಮಗಳನ್ನು ಪ್ರೋತ್ಸಾಹಿಸಲು ಕಡಿಮೆದರವನ್ನು ನಿಗದಿಮಾಡಬಹುದು. ಉದ್ಯಮದ ಪ್ರಾಮುಖ್ಯ, ಉದ್ಯಮಿಗಳ ಕಾರ್ಯತತ್ಪರತೆ, ಸರಾಸರಿ ಲಾಭ, ಬಡ್ಡಿದರ - ಇವೆಲ್ಲವನ್ನೂ ಪರಿಗಣಿಸಿ ತೆರಿಗೆಯ ದರವನ್ನು ನಿಗದಿಮಾಡಬಹುದು. ಅಧಿಕಲಾಭತೆರಿಗೆ ತೆರಿಗೆಕೊಡುವ ಶಕ್ತಿಗೆ ವಿರೋಧವಾಗಿದೆ ಎಂಬವಾದ ತೆರಿಗೆಕೊಡುವವುದರಿಂದ ಒಬ್ಬ ವ್ಯಕ್ತಿಯ ಮೇಲೆ ಆಗುವ ಪರಿಣಾಮವನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುತ್ತದೆ. ಆದರೆ ತೆರಿಗೆಭಾರವನ್ನು ವಿಧಿಸುವಾಗ ವ್ಯಕ್ತಿಯಮೇಲೆ ಆಗುವ ಪರಿಣಾಮ ಮತ್ತು ಸಮಾಜದ ಮೇಲೆ ಆಗುವ ಪರಿಣಾಮ ಇವೆರಡನ್ನೂ ಗಣನೆಗೆ ತೆಗೆದುಕೊಳ್ಳುತ್ತದೆ. ಸಮಾಜದ ಅತ್ಯಧಿಕಕ್ಷೇಮಾಭಿವೃದ್ಧಿ ದೃಷ್ಟಿಯಿಂದ ಕೆಲವು ವ್ಯಕ್ತಿಗಳು ಅಧಿಕಲಾಭದ ಮೇಲೆ ತೆರಿಗೆ ಕೊಡಬೇಕಾದರೆ ಅದು ಅನ್ಯಾಯವೆನಿಸುವುದಿಲ್ಲ. ಅಧಿಕಲಾಭತೆರಿಗೆ ವಿಧಿಸುವಾಗ ಸರಿಯಾಗಿ ಸಾಮಾನ್ಯ ಲಾಭವನ್ನು ನಿರ್ಧರಿಸಿ ಬೇರೆ ಬೇರೆ ದರವನ್ನು ನಿಗದಿ ಮಾಡಿದರೆ, ಉದ್ಯಮಸಾಹಸ, ಬಂಡವಾಳಹೂಡಿಕೆ, ಉದ್ಯಮಿಗಳ ಕಾರ್ಯತತ್ಪರತೆ ಮತ್ತು ಮುಖ್ಯವಾದ ಉದ್ಯಮಗಳಿಗೆ ಉತ್ತೇಜನ ಕೊಡಬಹುದು. ಸಾಮಾನ್ಯಲಾಭನಿರ್ಣಯ ಮತ್ತು ಅಧಿಕಲಾಭತೆರಿಗೆಯ ದರ ಇವುಗಳನ್ನು ನಿರ್ಣಯಿಸುವಾಗ ಪ್ರತಿದೇಶದ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಸೂಕ್ತ ಬದಲಾವಣೆ ಮಾಡಬಹುದು.

ಮೊದಲ ಮಹಾಯುದ್ಧ[ಬದಲಾಯಿಸಿ]

ಮೊದಲ ಮಹಾಯುದ್ಧದ ವೇಳೆಯಲ್ಲಿ ಭಾರತದಲ್ಲಿ 50% ಅಧಿಕಲಾಭ ತೆರಿಗೆಯನ್ನು ವಿಧಿಸಲಾಯಿತು. ಬಂಡವಾಳಹೂಡಿಕೆಯ ಮೇಲೆ 10% ಅಥವಾ ವರಮಾನ ತೆರಿಗೆಗೆ ಒಳಪಟ್ಟ ಯುದ್ಧಪೂರ್ವದ ವರ್ಷ ಅಥವಾ ವರ್ಷಗಳ ಸರಾಸರಿ ಲಾಭವನ್ನು ಸಾಮಾನ್ಯಲಾಭವೆಂದು ಪರಿಗಣಿಸಲಾಯಿತು. ವರ್ಷಕ್ಕೆ 30,000 ರೂ.ಗಳಿಗೆ ಕಡಿಮೆ ವರಮಾನ ಇರುವ ಉದ್ಯಮಿಗಳು ಈ ತೆರಿಗೆಯಿಂದ ವಿನಾಯಿತಿ ಹೊಂದಿದುವು. ಹಾಗೆಯೆ ಸಂಬಳ, ವ್ಯವಸಾಯ, ವೃತ್ತಿಯ ಆದಾಯಗಳಿಗೂ ವಿನಾಯಿತಿ ಕೊಡಲ್ಪಟ್ಟಿತ್ತು. ಈ ತೆರಿಗೆಯನ್ನು 1920ರಲ್ಲಿ ಕೈಬಿಡಲಾಯಿತು.

ಎರಡನೆಯ ಮಹಾಯುದ್ಧ[ಬದಲಾಯಿಸಿ]

ಎರಡನೆಯ ಮಹಾಯುದ್ಧ ಪ್ರಾರಂಭವಾದ ಕೆಲವು ಕಾಲದಲ್ಲಿ (1940) ಅಧಿಕಲಾಭ ತೆರಿಗೆಯನ್ನು ಪುನಃ ವಿಧಿಸಲಾಯಿತು. ವರ್ಷಕ್ಕೆ 30,000 ರೂ.ಗಿಂತ ಹೆಚ್ಚು ಇರುವ ಎಲ್ಲ ವರಮಾನಕ್ಕೂ 30% ಅಧಿಕಲಾಭತೆರಿಗೆಯನ್ನು ವಿಧಿಸಲಾಯಿತು. ನಿಗದಿಯಾದ ವರ್ಷಗಳ ಲಾಭದ ಮೇಲೆ ಬರುವ ಲಾಭವನ್ನು ಅಧಿಕಲಾಭವೆಂದು ಪರಿಗಣಿಸಲಾಯಿತು. 1935-36, 1936-37ರ ಲಾಭ ಮತ್ತು 1935-36 ಮತ್ತು 1937-38 ಇವುಗಳ ಸರಾಸರಿ ಲಾಭ, 1936-37 ಮತ್ತು 1937-38 ಅಥವಾ 1938-39 ಇವುಗಳ ಸರಾಸರಿ ಲಾಭ- ಇವುಗಳಲ್ಲಿ ಯಾವುದನ್ನಾದರೂ ತೆರಿಗೆ ಕೊಡುವವರು ಸಾಮಾನ್ಯಲಾಭವೆಂದು ಪರಿಗಣಿಸುವ ಹಕ್ಕನ್ನು ಹೊಂದಿದ್ದರು. 1942ರಲ್ಲಿ ಈ ತೆರಿಗೆ ದರವನ್ನು 66 2/3% ಕ್ಕೆ ಏರಿಸಲಾಯಿತು. ಇದರ ಜೊತೆಗೆ ಅಧಿಕಲಾಭ ತೆರಿಗೆ ಕೊಡುವವರು ಅಧಿಕಲಾಭದ 13 1/2% ಕಡ್ಡಾಯಠೇವಣಾತಿಯಾಗಿ ಸರ್ಕಾರದಲ್ಲಿ ಇಡಬೇಕಿತ್ತು. ಈ ಠೇವಣಾತಿ ಯುದ್ಧ ಮುಗಿದ ಒಂದು ವರ್ಷದ ಅನಂತರ ಮರುಪಾವತಿ ಆಯಿತು. ಈ ಅಧಿಕಲಾಭತೆರಿಗೆ 1946ನೆಯ ಮಾರ್ಚಿ 31ರಂದು ರದ್ದಾಯಿತು. ಭಾರತದಲ್ಲಿ ಹಿಂದೆ ವಿದಿಸüಲಾದ ಅಧಿಕಲಾಭತೆರಿಗೆ ಯುದ್ಧಕಾಲದ ಅಧಿಕಲಾಭತೆರಿಗೆಯಾಗಿತ್ತು. ಈ ತೆರಿಗೆ ಯುದ್ಧಕಾಲದ ಅತೀವ ಲಾಭದ ಮೇಲೆ ವಿಧಿಸಲ್ಪಟ್ಟದ್ದರಿಂದ ಉದ್ಯಮಗಳ ಮೇಲೆ ಯಾವ ದುಷ್ಪರಿಣಾಮವೂ ಆಗಲಿಲ್ಲ. ತೆರಿಗೆಯ ದರ ಕೂಡ 30% ರಿಂದ 66 2/3%ರವರೆಗೆ ಇದ್ದುದರಿಂದ, ಯುದ್ಧಕಾಲದಲ್ಲಿ ಈ ದರ ಅತಿಯೆನಿಸಲಿಲ್ಲ. ತೆರಿಗೆ ಆರೋಹಣಕ್ರಮ ಅನುಸರಿಸಲಿಲ್ಲ. ಇದರ ವರಮಾನ ಈ ರೀತಿ ಇತ್ತು:

ವರ್ಷ			ವರಮಾನ (ಕೋಟಿ ರೂಪಾಯಿಗಳಲ್ಲಿ)
1940-41			1-55
1942-44			53-51
1945-46			79-51
1946-47			72-00

ಭಾರತದ ಅಧಿಕಲಾಭತೆರಿಗೆ[ಬದಲಾಯಿಸಿ]

ಯುದ್ಧಾನಂತರವೂ ಅಧಿಕಲಾಭತೆರಿಗೆ ಬೇರೆ ಹೆಸರಿನಲ್ಲಿ ಭಾರತದಲ್ಲಿ ಇದೆ ಎನ್ನಬಹುದು. 1947-48ರಲ್ಲಿ ಉದ್ಯಮಲಾಭ ತೆರಿಗೆಯನ್ನು (ಬಿಸಿನೆಸ್ ಪ್ರಾಫಿಟ್ ಟ್ಯಾಕ್ಸ್) ಹಾಕಲಾಯಿತು. ಈ ತೆರಿಗೆಯನ್ನು ವಿಧಿಸುವುದಕ್ಕೆ ಮುಖ್ಯ ಕಾರಣಗಳು: ಅಧಿಕಲಾಭತೆರಿಗೆಯನ್ನು ಅವಸರದಲ್ಲಿ ಕೈಬಿಟ್ಟದ್ದು ಮತ್ತು ಯುದ್ಧಕಾಲದ ಲಾಭ ಜನರಲ್ಲಿ ಇನ್ನೂ ಇದ್ದದ್ದು. ಒಂದು ಲಕ್ಷದ ಮೇಲೆ ಬರುವ ಲಾಭಕ್ಕೆ 25% ಉದ್ಯಮ ತೆರಿಗೆಯನ್ನು ಮೊದಲು ಸೂಚಿಸಲಾಗಿತ್ತು. ಅನಂತರ ಅದನ್ನು 16 2/3% ಇಳಿಸಲಾಯಿತು. ಈ ತೆರಿಗೆಯನ್ನು 1950-51ರಲ್ಲಿ ಕೈಬಿಡಲಾಯಿತು. 1963-64ರಲ್ಲಿ ವರಿಷ್ಠಲಾಭತೆರಿಗೆ (ಸೂಪರ್ ಪ್ರಾಫಿಟ್ ಟ್ಯಾಕ್ಸ್) ರೂಪದಲ್ಲಿ ಪುನಃ ಪ್ರಾರಂಭವಾಯಿತು. ಇದರ ಪ್ರಕಾರ ಒಂದು ಉದ್ಯಮ ತನ್ನ ಬಂಡವಾಳಹೂಡಿಕೆಯ ಮೇಲೆ 6%ಕ್ಕಿಂತ ಹೆಚ್ಚು ಲಾಭ ಪಡೆದರೆ ವರಿಷ್ಠಲಾಭತೆರಿಗೆಯನ್ನು ಕೊಡಬೇಕು. ಲಾಭದ ದರ 6%ಕ್ಕಿಂತ ಜಾಸ್ತಿಯಾಗಿ 10%ಕ್ಕಿಂತ ಜಾಸ್ತಿಯಾಗದಿದ್ದರೆ ತೆರಿಗೆಯ ದರ 50%ರಷ್ಟು ಇರುತ್ತದೆ. ಲಾಭದ ದರ 10%ಕ್ಕಿಂತ ಜಾಸ್ತಿಯಾದರೆ ತೆರಿಗೆಯ ದರ 60%ರಷ್ಟು ಇರುತ್ತದೆ. ಉದ್ಯಮಸಂಸ್ಥೆಗಳು ರಾಷ್ಟ್ರೀಯಜವಾಬ್ದಾರಿಯಲ್ಲಿ ಪಾಲುಗೊಳ್ಳಬೇಕು. ಅಧಿಕಲಾಭವನ್ನು ನಿಯಂತ್ರಿಸಬೇಕು ಮತ್ತು ಬೆಲೆಗಳನ್ನು ಇಳಿಸಬೇಕು ಎಂಬುದೇ ಈ ತೆರಿಗೆ ವಿಧಿಸಲು ಇದ್ದ ಕಾರಣ. ಇದು ಉದ್ಯಮಿಗಳ ಕಟುಟೀಕೆಗೆ ಗುರಿಯಾಯಿತು. ಏಕೆಂದರೆ ತೆರಿಗೆ ವಿಧಿಸುವಾಗ ಮುಖ್ಯವಾಗಿ ಸಂಸ್ಥೆಯ ಬಂಡವಾಳವನ್ನು ಸರಿಯಾದ ರೀತಿಯಲ್ಲಿ ನಿರ್ಧರಿಸಲಿಲ್ಲ; ಮತ್ತು ಕಡಿಮೆ ಬಂಡವಾಳ ಹಾಕಿ ಉದ್ಯಮಿಯ ಕಾರ್ಯಸಮರ್ಥತೆಯಿಂದ ಹೆಚ್ಚು ಲಾಭಪಡೆಯುವ ಉದ್ಯಮಗಳು ತೊಂದರೆಗಳನ್ನು ಅನುಭವಿಸಬೇಕಾಯಿತು. 1964-65ರಲ್ಲಿ ಈ ತೆರಿಗೆಯನ್ನು ರದ್ದುಪಡಿಸಿ ಅದರ ಬದಲು ಲಾಭದ ಮೇಲೆ ಹೆಚ್ಚಿನ ತೆರಿಗೆಯನ್ನು (ಸೂಪರ್ ಟ್ಯಾಕ್ಸ್ ಆನ್ ಪ್ರಾಫಿಟ್ಸ್) ವಿಧಿಸಲಾಯಿತು. ಈ ತೆರಿಗೆ ಕೆಲವು ದೃಷ್ಟಿಯಿಂದ ವರಿಷ್ಠಲಾಭ ತೆರಿಗೆಗಿಂತ ಉತ್ತಮವೆನ್ನಬಹುದು. ಒಂದು ಉದ್ಯಮದ ಬಂಡವಾಳವನ್ನು ನಿರ್ಧರಿಸುವಾಗ ಹೂಡಿರುವ ಬಂಡವಾಳ ಕ್ಷೇಮನಿಧಿ, ಅಲ್ಪ ಮತ್ತು ಧೀರ್ಘಾವದಿ ಸಾಲ- ಇವೆಲ್ಲವನ್ನೂ ಪರಿಗಣಿಸಲಾಗುವುದು. 10% ಕ್ಕಿಂತ ಬಂಡವಾಳದಮೇಲೆ ಲಾಭ ಜಾಸ್ತಿಯಾಗಿದ್ದರೆ ಆ ಅಧಿಕಲಾಭದ ಮೇಲೆ 40% ತೆರಿಗೆ ವಿಧಿಸಲಾಗುವುದು. ಈ ತೆರಿಗೆ ಬಂಡವಾಳಕ್ಕೆ ವಿಶಾಲವಾದ ಅರ್ಥವನ್ನು ಕಲ್ಪಿಸಿರುವುದರಿಂದ ಮತ್ತು ಸಾಮಾನ್ಯ ಲಾಭವನ್ನು 10% ಕ್ಕೆ ಹೆಚ್ಚಿಸಿರುವುದರಿಂದ ಮತ್ತು ತೆರಿಗೆಯ ದರವನ್ನು ಕಡಿಮೆ ಮಾಡಿರುವುದರಿಂದ ವರಿಷ್ಠಲಾಭತೆರಿಗೆಗಿಂತ ಉತ್ತಮವೆನ್ನಬಹುದು.

ಅಂತಿಮ ವಿಚಾರ[ಬದಲಾಯಿಸಿ]

ಅಧಿಕಲಾಭತೆರಿಗೆಯನ್ನು ಸಮಾಜದ ಹಿತದೃಷ್ಟಿ ಮತ್ತು ನೈತಿಕ ಆಧಾರದ ಮೇಲೆ ನೋಡಬೇಕು. ಒಂದು ನಿರ್ದಿಷ್ಟಪ್ರಮಾಣಕ್ಕಿಂತ ಹೆಚ್ಚು ಲಾಭ ಪಡೆಯುವುದು ಸಮಾಜದ ಹಿತದೃಷ್ಟಿಯಿಂದ ಸರಿಯಲ್ಲ ಎಂಬುದನ್ನು ಒಪ್ಪಿಕೊಂಡರೆ ಅಧಿಕಲಾಭತೆರಿಗೆಯನ್ನು ತತ್ತ್ವಶಃ ವಿರೋಧಿಸಲಾಗುವುದಿಲ್ಲ. ಹಾಗೆಯೆ ತಾತ್ತ್ವಿಕವಾಗಿ ಆರೋಹಣಕ್ರಮದ ಅಧಿಕಲಾಭತೆರಿಗೆ ನ್ಯಾಯವಾದದ್ದು. ಅಧಿಕಲಾಭತೆರಿಗೆಯನ್ನು ಅನುಷ್ಠಾನಕ್ಕೆ ತರುವಾಗ, ಸಾಮಾನ್ಯಲಾಭ ನಿರ್ಣಯ, ಆರೋಹಣ ಅಥವಾ ಅನುಪಾತಕ್ರಮ ಮತ್ತು ತೆರಿಗೆಯ ದರ- ಇವುಗಳನ್ನು ನಿರ್ಣಯಮಾಡುವಾಗ ಪ್ರತಿದೇಶದ ಆರ್ಥಿಕಸ್ಥಿತಿ ಆರ್ಥಿಕಪ್ರಗತಿ ಇವುಗಳನ್ನು ಗಣನೆಗೆ ತೆಗೆದುಕೊಂಡು ನಿರ್ಧಾರಮಾಡಿದರೆ ಅಧಿಕಲಾಭತೆರಿಗೆಯಿಂದ ಉದ್ಯಮ ಸಾಹಸಕ್ಕಾಗಲಿ, ಆರ್ಥಿಕ ಬೆಳವಣಿಗೆಗಾಗಲಿ, ಕಾರ್ಯದಕ್ಷತೆಗಾಗಲಿ, ಬಂಡವಾಳಶೇಖರಣೆಗಾಗಲಿ, ಅನನುಕೂಲ ಆಗುವುದಿಲ್ಲ. ಅಧಿಕಲಾಭತೆರಿಗೆ ಒಂದು ದೇಶದ ತೆರಿಗೆ ಚೌಕಟ್ಟಿನಲ್ಲಿ ಶಾಶ್ವತವಾದ ಸ್ಥಾನಪಡೆಯಲು ಅರ್ಹವಾಗಿದೆ.

ಉಲ್ಲೇಖಗಳು[ಬದಲಾಯಿಸಿ]