ವಿಷಯಕ್ಕೆ ಹೋಗು

ಅಗ್ರಲೇಖನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೧೯೨೧ ರ ಸಂಚಿಕೆಯ ಸಂಪಾದಕೀಯ ಫೋಟೊಪ್ಲೇ ಓದುಗರು ಚಲನಚಿತ್ರವನ್ನು ನೋಡಬಾರದು ಎಂದು ಶಿಫಾರಸು ಮಾಡುತ್ತಾರೆ,

ಅಗ್ರಲೇಖನ (ಸಂಪಾದಕೀಯ) ಎಂದರೆ ವೃತ್ತಪತ್ರಿಕೆಯ ನಿಯತವಾದ ಪುಟಭಾಗದಲ್ಲಿ ಸಂಪಾದಕ ವರ್ಗದವರು ಅಂದಿನ ಅತಿಮುಖ್ಯ ಸಮಸ್ಯೆಗಳನ್ನು ಕುರಿತ ಪರಿಚಯಾತ್ಮಕವಾಗಿ ವಿಮರ್ಶಾತ್ಮಕವಾಗಿ ಬರೆಯುವ ಲೇಖನ.[೧]

ಇತಿಹಾಸ

[ಬದಲಾಯಿಸಿ]

ರಾಜಕಾರಣವಾಗಿರಲಿ, ಆರ್ಥಿಕ ಪ್ರಶ್ನೆಯಾಗಿರಲಿ, ಸಾಮಾಜಿಕ ಸಮಸ್ಯೆಯಾಗಿರಲಿ, ಏನೇ ಆಗಿರಲಿ, ಅಗ್ರಲೇಖನ ಆ ಪತ್ರಿಕೆಯ ನೀತಿ, ದೃಷ್ಟಿ, ಆದರ್ಶ ಏನೆಂಬುದನ್ನು ಸೂಚಿಸುತ್ತದೆ. ವಿಷಯ ಯಾವುದೇ ಆಗಿರಲಿ, ಅಗ್ರಲೇಖನ ಓದಿದ ಕೂಡಲೇ ಪತ್ರಿಕೆಯ ಅಭಿಪ್ರಾಯ ಇಂಥದೇ ಎಂಬುದು ಸ್ಪಷ್ಟವಾಗುತ್ತದೆ. ರಾಜಕೀಯ ಪಕ್ಷಗಳಿಗಿರುವಂತೆ ಪತ್ರಿಕೆಗೂ ಒಂದು ನೀತಿ, ಒಂದು ಗುರಿ ಉಂಟು. ಆ ನೀತಿಯನ್ನು ನಿಷ್ಠೆಯಿಂದ ಪಾಲಿಸುವುದು ಪತ್ರಿಕೆಯ ಪ್ರಥಮ ಕರ್ತವ್ಯ. ನೀತಿ ನಿಯಂತ್ರಣ ಅಂದರೆ ತನ್ನ ನಿಶ್ಚಿತನೀತಿಯನ್ನು ಆಚರಣೆಗೆ ತರುವ ರೀತಿ ಪತ್ರಿಕೆಯ ಇಡೀ ಜೀವನವನ್ನೆಲ್ಲ ಆವರಿಸಿರುತ್ತದೆ. ಆದ್ದರಿಂದ ಅಗ್ರಲೇಖನ ಈ ನೀತಿ ನಿಯಂತ್ರಣ ಕರ್ತವ್ಯವನ್ನು ನಿಷ್ಠುರತೆಯಿಂದ ನಿರ್ವಹಿಸುತ್ತದೆ. ವಿಷಯ ಯಾವುದೇ ಆಗಿರಲಿ, ಸಮಸ್ಯೆ ಎಂಥದೇ ಆಗಿರಲಿ, ಪತ್ರಿಕೆ ತನ್ನ ನೀತಿಗೆ ಆದರ್ಶಕ್ಕೆ ಅನುಗುಣವಾಗಿ ಪ್ರಭುತ್ವ ತನ್ನ ನೀತಿಯನ್ನು ಮಾರ್ಪಡಿಸಿಕೊಳ್ಳುವಂತೆ ಮಾಡಲು ಅಗ್ರಲೇಖನವನ್ನು ಪರಿಣಾಮಕಾರಿ ಸಾಧನವನ್ನಾಗಿ ಮಾಡಿಕೊಳ್ಳುತ್ತದೆ. ಸಾರ್ವಜನಿಕಾಭಿಪ್ರಾಯವನ್ನೂ ತನ್ನ ಕಡೆಗೇ ಎಳೆದುಕೊಂಡು ತನ್ನ ಕೈ ಬಲಪಡಿಸಿಕೊಳ್ಳಲು ಯತ್ನಿಸುತ್ತದೆ. ಪ್ರಜಾತಂತ್ರ ಪ್ರಧಾನವಾದ ಈ ಯುಗದಲ್ಲಿ ಪತ್ರಿಕೆಯ ಸ್ಥಾನ ಬಹು ದೊಡ್ಡದು. ಚತುರಂಗಬಲದಲ್ಲಿ ಪತ್ರಿಕೆ ನಾಲ್ಕನೆಯ ಅಂಗವೆಂದು ರಾಜನೀತಿಜ್ಞರು ಹೇಳುತ್ತಾರೆ.[೨]

ಪತ್ರಿಕೆಯ ನಿರ್ವಾಹಣೆ

[ಬದಲಾಯಿಸಿ]

ಪತ್ರಿಕೆಯ ನೀತಿಯನ್ನು ನಿಯಂತ್ರಣ ಮಾಡುವವ ಮುಖ್ಯ ಸಂಪಾದಕ. ವಿಶೇಷ ಪರಿಶ್ರಮವುಳ್ಳ ಸಹಸಂಪಾದಕರು ಆಯಾ ವಿಷಯಗಳನ್ನು ಕುರಿತು ಬರೆಯುತ್ತಾರಾದರೂ ಧೋರಣೆಯ ದೃಷ್ಟಿಯಿಂದ ಅವನ್ನು ಒಪ್ಪಬೇಕಾದವನು ಪ್ರಧಾನಸಂಪಾದಕನೇ. ಈ ರೀತಿ ಪತ್ರಿಕೆಯ ನಿರ್ವಾಹ ನಡೆದಾಗ ಆ ಪತ್ರಿಕೆಗೊಂದು ಮರ್ಯಾದಿತ ಸ್ಥಾನ ಏರ್ಪಡುತ್ತದೆ. ಪ್ರಭುತ್ವವಾಗಿಲಿ, ಪ್ರಜಾವರ್ಗವಾಗಲಿ, ಜಟಿಲವಾದೊಂದು ಸಮಸ್ಯೆ ತಲೆಹಾಕಿದಾಗ `ಈ ಪತ್ರಿಕೆ ಏನು ಹೇಳುತ್ತದೆ` ಎಂದು ಕುತೂಹಲದಿಂದ ಕಾದು ನೋಡುತ್ತಿರುತ್ತದೆ. ಅಂದರೆ ಪತ್ರಿಕೆ ತನ್ನ ನಿರ್ಮಲ, ನಿರ್ಮಮನೀತಿಯಿಂದ, ತತ್ವ್ತ ನಿಷ್ಠೆಯಿಂದ, ಪ್ರಜಾಹಿತಸಾಧನಾಧ್ಯೇಯದಿಂದ ಸಮಾಜದಲ್ಲೊಂದು ಅಪೂರ್ವಸ್ಥಾನ ಮರ್ಯಾದೆಯನ್ನು ಕಲ್ಪಿಸಿಕೊಂಡಿರುತ್ತದೆ. ಸತ್ಯವೇ ಅಗ್ರಲೇಖನದ ಸರ್ವಾಧಾರವೆಂಬುದರ ಮೂಲಕ ಪತ್ರಿಕೆ ಜನತೆಯ ನಂಬಿಕೆಯನ್ನು ಗಳಿಸಿ ಉಳಿಸಿಕೊಳ್ಳುವ ಸಾಮಥ್ರ್ಯ ತೋರಿಸುತ್ತದೆ. ಅಗ್ರಲೇಖನ ಬರೆಯುವ ಸಂಪಾದಕನ ಈ ಸತ್ಯಶ್ರದ್ಧೆ, ಧರ್ಮಬೋಧೆ, ಸೇವಾತತ್ಪರತೆ, ಅತಿ ಪ್ರಮುಖವಾದುವು. ಆದಕಾರಣ ಬರೆಯುವವನ ಜವಾಬ್ದಾರಿ ಬಹಳ ದೊಡ್ಡದು. ಅಗ್ರಲೇಖನಕಾರ ಒಳಗೂ ಹೊರಗೂ ನಿರ್ಮಲನಾಗಿದ್ದು ಪರಮ ಆಸ್ತಿಕನಂತೆ ವರ್ತಿಸಬೇಕು. ಅವನ ಮನಸ್ಸು ಸರಳ, ಮಾತು ಸ್ಪಷ್ಟ, ಶೈಲಿ ಗಂಭೀರ, ಧೋರಣೆ ಸತ್ಯ ಆದಾಗ ಅವನು ಬರೆದದ್ದು ಹೃದಯವನ್ನು ತಾಕುತ್ತದೆ.

ಅಗ್ರಲೇಖನಕಾರನ ಕರ್ತವ್ಯ

[ಬದಲಾಯಿಸಿ]

ಅಗ್ರಲೇಖನಕಾರ ತಾನು ಬರೆಯುತ್ತಿರುವ ವಿಷಯ ಕುರಿತು ಪೂರ್ಣ ತಿಳಿವಳಿಕೆಯುಳ್ಳವನಾಗಿರಬೇಕು. ಪೂರ್ವಾಪರಗಳನ್ನು ನಿಷ್ಪಕ್ಷಪಾತವಾಗಿ ತೂಗಿ ನೋಡಿ, ನಿರ್ಭಯವಾಗಿ, ತನ್ನ ಅಂತರಂಗಕ್ಕೆ ಒಪ್ಪಿಗೆಯಾದುದನ್ನು ಬರೆಯಬೇಕು. ಪೂರ್ವ ಸಿದ್ಧತೆ, ಹೃದಯಸಿದ್ಧತೆಗಳಿಂದ ಬರೆಯಲಾರಂಭಿಸಿದಾಗ ಅಗ್ರಲೇಖನದ ಪದಪ್ರಯೋಗ ಸೂಕ್ಷ್ಮ ಮಾತ್ರವಲ್ಲ, ಸರಳವೂ ಸುಂದರವೂ ಆಗುತ್ತದೆ. ಏಕೆಂದರೆ ಸತ್ಯ ಸರಳತೆಯನ್ನೇ ಆಶ್ರಯಿಸುತ್ತದೆ; ಸೌಂದರ್ಯವನ್ನೇ ಅಪ್ಪುತ್ತದೆ. ಶೈಲಿ ಲಲಿತವೂ ಗಂಭೀರವೂ ಆಗುತ್ತದೆ. ಅಗ್ರಲೇಖನಕ್ಕೆ ಆರಿಸುವ ವಿಷಯವೂ ಪವಿತ್ರತೆಯ, ಗಾಂಭೀರ್ಯದ, ಮಟ್ಟವನ್ನು ಹೆಚ್ಚಿಸುತ್ತದೆ. ಆಗ ತಾನು ಬರೆದ ಲೇಖನದಲ್ಲಿ ಅನಪೇಕ್ಷಿತವಾಗಿ ಭಾಷೆಯ, ಉತ್ತಮೋತ್ತಮ ಸಾಹಿತ್ಯದ, ಲಕ್ಷಣಗಳು ಕಂಡುಬರುತ್ತವೆ. ಹಿರಿಯ ಸಾಹಿತಿ ಪತ್ರಿಕಾಸಂಪಾದಕನೆನಿಸುವುದು ಕಷ್ಟ. ಯಶಸ್ವಿ ಸಂಪಾದಕ ಉತ್ತಮ ಸಾಹಿತಿಯೆನಿಸುವುದೂ ಕಷ್ಟವೇ. ಒಂದು ವೇಳೆ ಇದು ಸಾಧ್ಯವಾದರೆ ಅದೊಂದು ಅಪೂರ್ವ ಸಂಘಟನೆಯೇ ಸರಿ.

ಅಗ್ರಲೇಖನಕಾರನ ಸಮರ್ಥನೆ

[ಬದಲಾಯಿಸಿ]

ಅಗ್ರಲೇಖನದಲ್ಲಿ ಸರ್ವತೋಮುಖವಾದ ತಿಳಿವಳಿಕೆಯನ್ನು ಎಷ್ಟು ಅಪೇಕ್ಷಿಸುವವೋ ಅಷ್ಟೇ ಲೋಕಾನುಭವ ಮತ್ತು ವಿಮರ್ಶಾಗುಣವನ್ನೂ ಅಪೇಕ್ಷಿಸುತ್ತವೆ. ದಿನದಿನ, ಕ್ಷಣ ಕ್ಷಣ, ನಮ್ಮನ್ನು ದುರುಗುಟ್ಟಿಕೊಂಡು ನೋಡುವ, ಹೆದರಿಸುವ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಕುರಿತು ಆಲೋಚನೆ ಮಾಡುವಾಗ ಅಗ್ರಲೇಖನಕಾರ ದೂರದೃಷ್ಟಿಯುತನಾಗಿ, ಉದಾರಹೃದಯಿಯಾಗಿ, ಪ್ರತಿಪಕ್ಷಕ್ಕೆ ಯಾವ ರೀತಿಯಿಂದಲೂ ಯಾವ ಪ್ರಮಾಣದಲ್ಲೂ ನೋವಾಗದಂತೆ ತನ್ನ ವಾದ ಸಮರ್ಥನೆ ಮಾಡುವ ಮಧುರಮಾರ್ಗವನ್ನು ಹಿಡಿಯಬೇಕು. ಅವನಲ್ಲಿ ಪರಿಹಾಸ ಮನೋಧರ್ಮವಿರಬೇಕು. ಉಗ್ರತೆಯನ್ನು ತೋರುವ ಅಗ್ರಲೇಖನ ಅಗ್ಗದ ಲೇಖನವಾಗಿ ಪರಣಾಮದಲ್ಲಿ ನಿರೀಕ್ಷಿಸಿದ್ದಕ್ಕೆ ವಿರುದ್ಧವೇ ಆದೀತು.

ಅಗ್ರಲೇಖನದ ಗುರಿ

[ಬದಲಾಯಿಸಿ]

ಅಗ್ರಲೇಖನ ಒಂದು ಸ್ವಸಂಪೂರ್ಣಪ್ರಬಂಧ; ಸಾಂಗವಾಗಿ, ತೀಡಿ ತಿದ್ದಿದ, ಕಣ್ಡರಿಸಿದ. ಒಂದು ರೂಪಕರ್ಮ. ಇದರಲ್ಲಿ ಯಾವ ಕಳಂಕವೂ ಇರಬಾರದು. ನಿಜವನ್ನು ಮುಚ್ಚಿಡುವುದೂ ಸುಳ್ಳನ್ನು ಸೂಚಿಸುವುದೂ ನ್ಯಾಯವಲ್ಲ. ನೀತಿಯಲ್ಲ, ಅಗ್ರಲೇಖನ ಕ್ಷೇತ್ರ ಕುರುಕ್ಷೇತ್ರ ಧರ್ಮಕ್ಷೇತ್ರಗಳ ಐಕ್ಯಸ್ಥಳ.

ಉಲ್ಲೇಖಗಳು

[ಬದಲಾಯಿಸಿ]
  1. http://www.businessdictionary.com/definition/editorial.html Archived 2019-07-07 ವೇಬ್ಯಾಕ್ ಮೆಷಿನ್ ನಲ್ಲಿ. What is editorial?
  2. Staff (23 May 2012). "Opinion". The New York Times. Retrieved 23 May 2012.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: