ವಿಷಯಕ್ಕೆ ಹೋಗು

ಅಕಶೇರುಕ ಭ್ರೂಣಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಕಶೇರುಕ ಭ್ರೂಣಶಾಸ್ತ್ರ

[ಬದಲಾಯಿಸಿ]

ಅಂಡದಲ್ಲಿ (ಮೊಟ್ಟೆ) ಅಡಗಿರುವ ಜೀವಿ ಬೆಳೆದು ಮರಿಯಾಗಿ ಹೊರಬರುವ ವಿವಿಧ ಹಂತಗಳ ವಿವರವೇ ಭ್ರೂಣಶಾಸ್ತ್ರ. ಮೊದಮೊದಲು ಜೀವದ ಸೃಷ್ಟಿಯಬಗ್ಗೆ ವೈಜ್ಞಾನಿಕವೆನಿಸದ ಅನೇಕ ಕಲ್ಪನೆಗಳು ಇದ್ದವು. ಆ ರೀತಿಯ ಕಲ್ಪನೆಗಳನ್ನೇ ಸತ್ಯವೆಂದು ನಂಬುವವರು ಇಂದಿಗೂ ಇಲ್ಲದೇ ಇಲ್ಲ. 1839ರಲ್ಲಿ ಮ್ಯಾಥ್ಯೂಸ್ ಜೇಕಬ್ ಶ್ಲೈಡನ್ ಮತ್ತು ಥಿಯೊಡರ್ ಶ್ವಾನ್ ಎಂಬುವರು ಜೀವಕೋಶ ತತ್ವವನ್ನು ಪ್ರತಿಪಾದಿಸಿದರು. ‘ಜೀವಕೋಶಗಳು ಹಿಂದಿದ್ದ ಜೀವಕೋಶಗಳಿಂದಲೇ ಹುಟ್ಟಿಬಂದಿವೆ; ಜೀವ ಜೀವಿಯಿಂದಲೇ ಹುಟ್ಟಿಬರಬೇಕು’ ಎಂಬುದು ಅವರ ತತ್ವದ ತಿರುಳು. ಜೀವಿ ವಿಕಾಸದ ಪರಿಣಾಮವೇ ಹೊರತು ಭಗವಂತ ಒಮ್ಮೆಗೇ ಸೃಷ್ಟಿಮಾಡಿದ್ದಲ್ಲ ಎಂಬ ಮಾತನ್ನು ಲೂಯಿ ಪ್ಯಾಸ್ಚರ್ ಎತ್ತಿಹಿಡಿದ. ಈ ನೂತನ ವಿಚಾರಧಾರೆಗಳಿಗೆ ಪ್ರಯೋಗಗಳೂ ಸಾಕ್ಷಿಯನ್ನು ಹೊಂದಿಸಿದುವು. ಇಲ್ಲಿಂದ ಮುಂದೆ ಜೀವಿಗಳ ಹುಟ್ಟು ಹಾಗೂ ಬೆಳೆವಣಿಗೆಯನ್ನು ಅರಿಯಲು ಅಧ್ಯಯನಗಳು ನಡೆದವು. ಜೀವದ ಬೆಳೆವಣಿಗೆಯನ್ನು ಕೆಲವು ತತ್ವಗಳ ಆಧಾರದ ಮೇಲೆ ಅರ್ಥಮಾಡಿಕೊಳ್ಳಲು ಹಾಗೂ ಅರಿಯಲು ಪ್ರಯತ್ನಿಸಿದರು. ಈ ತತ್ವಗಳಲ್ಲಿ ಪುರ್ವೋದ್ಭವ ತತ್ವ (ಪ್ರಿಫಾರ್ಮೇಷನ್ ಥಿಯೊರಿ) ಹಾಗೂ ಜೈವಾಂಕುರತತ್ವ (ಎಪಿಜೆನೆಸಿಸ್ ಥಿಯೊರಿ) ಅತಿ ಮುಖ್ಯವಾದುವು. ಪುರ್ವೋದ್ಭವತತ್ವದ ಪ್ರಕಾರ ಅಂಡಾಶಯದಿಂದ ಉದಯವಾದ ಮೊಟ್ಟೆ ಅಥವಾ ವೃಷಣದಿಂದ ಉದಯವಾದ ರೇತಸ್ಸು ಅತಿಮುಖ್ಯವಾದುವು. ಹೆಣ್ಣುಜೀವಿ ಉತ್ಪಾದನೆ ಮಾಡುವ ಅಂಡಾಣುವಿನೊಳಗೆ ಭವಿಷ್ಯಜೀವಿಯ ಒಂದು ಸೂಕ್ಷ್ಮಾಕೃತಿ ಇರುತ್ತದೆ ಎಂಬುದಾಗಿ ಕೆಲವು ವಿಜ್ಞಾನಿಗಳು ನಂಬಿದ್ದರು. ಈ ಸೂಕ್ಷ್ಮಜೀವಿಗೆ ಅದರ ಪಿತೃಗಳಂತೆಯೇ ಇರುವ ಎಲ್ಲ ಅಂಗಾಂಗಗಳೂ ಇರುವುದೆಂದೂ ಪುರುಷಜೀವಿಯಿಂದ ಬರುವ ವೀರ್ಯಾಣು ಈ ಅಂಡಾಣು ಬೆಳೆಯಲು ಬೇಕಾದ ಪ್ರಚೋದನೆಯನ್ನು ನೀಡುತ್ತದೆಂದೂ ಪ್ರತಿಪಾದಿಸಿದರು. ಆದರೆ ಇದನ್ನು ಕೆಲವರು ಒಪ್ಪಲಿಲ್ಲ. ಅವರಿಗೆ ಅಂಡಾಣುವಿಗಿಂತ ವೀರ್ಯಾಣು ಮುಖ್ಯವಾಗಿ ಕಂಡುಬಂದಿತು. ಮುಂದೆ ಬೆಳೆಯಬೇಕಾದ ಜೀವಿಯ ಸೂಕ್ಷ್ಮಾಕಾರ ವೀರ್ಯಾಣುವಿನಲ್ಲೇ ಇರುತ್ತದೆಯೆಂದು ಅವರು ಪ್ರತಿಪಾದಿಸಿದರು. ಕಡೆಗೆ ಜಾನ್ ಸ್ವಾಮರ್ಡಾಮ್, ಮಾರ್ಸೆಲ್ಲೊ ಮಾಲ್ಪಿಗಿ, ಚಾರ್್ಲ್ಸ ಬಾಲೆಟ್ ಮುಂತಾದ ವಿಜ್ಞಾನಿಗಳು ಅಂಡಾಣುವೇ ಅತಿಮುಖ್ಯವೆಂದು ಮತ್ತೆ ಪ್ರತಿಪಾದಿಸಿದರು. ಕೀಟವರ್ಗ, ಪ್ರಾಣಿಗಳ ಮೊಟ್ಟೆಗಳು ಹಾಗೂ ಕೋಳಿ ಮೊಟ್ಟೆಯ ಬೆಳೆವಣಿಗೆಗಳನ್ನು ಅಭ್ಯಾಸಮಾಡಿದ ಅವರು ಅಂಡಾಣುವಿನೊಳಗೇ ಮುಂದಿನ ಪೀಳಿಗೆಯ ಸೂಕ್ಷ್ಮಾಕಾರವಿರುತ್ತದೆ, ವೀರ್ಯಾಣುವಿನಲ್ಲಲ್ಲ ಎಂದು ವಾದಿಸಿದರು. ಆದರೆ ಅವರಿಗೆ ಈ ಅಂಡಾಣುಗಳು ಗರ್ಭಧರಿಸಿದ್ದ ಅಂಡಾಣುಗಳೆಂಬುದು ಹೊಳೆಯಲಿಲ್ಲ. ಚಾರ್್ಲ್ಸ ಬಾಲೆಟ್ ಮಾತ್ರ ಕೀಟವರ್ಗಗಳಾದ ಏಫಿಡ್ಗಳ ಅಂಡಾಣು ವೀಯಾರ್ಣುಗಳ ಸಂಪರ್ಕವಿಲ್ಲದೆ ಬೆಳೆಯುವುದನ್ನು ಪತ್ತೆಹಚ್ಚಿ, ವೀರ್ಯಾಣುಗಳು ಇಲ್ಲದಿದ್ದರೂ ಅಂಡಾಣು ಬೆಳೆದು ಮರಿಯಾಗಬಲ್ಲದು ಎಂದು ತೋರಿಸಿದನು. ಇದು ವಾಸ್ತವವಾದರೂ ಬೆಳೆವಣಿಗೆಯ ಪೂರ್ವದಲ್ಲಿ ಈ ಅಂಡಾಣುವಿನೊಳಗೆ ಮುಂದಿನ ಪೀಳಿಗೆಯ ಸರ್ವಾಂಗಗಳೂ ಅಡಕವಾಗಿರುತ್ತವೆಂಬುದು ಆಧಾರರಹಿತವಾಗಿತ್ತು. ಭ್ರೂಣಶಾಸ್ತ್ರದ ಬೆಳೆವಣಿಗೆಯಲ್ಲಿ ಬರುವ ಮತ್ತೊಂದು ವಾದ ಜೀವಾಂಕುರ ಸೃಷ್ಟಿವಾದ, ಇದು ಅಂಡಾಣುವಿನಲ್ಲಾಗಲೀ ವೀರ್ಯಾಣುವಿನಲ್ಲಾಗಲಿ ಪೀಳಿಗೆಯ ಸೂಕ್ಷ್ಮಾಕೃತಿ ಅಡಗಿರುವುದಿಲ್ಲ. ಭ್ರೂಣದ ಬೆಳೆವಣಿಗೆಗೆ ಸಹಕಾರಿಯಾಗುವ ಅಂಡಾಣುವಿನೊಳಗೆ ಜೀವರಸ ಹಾಗೂ ಕ್ರೋಮೋಸೋಮುಗಳ ಸಮುದಾಯವಿರುತ್ತವೆ, ಈ ಅಂಡಾಣು ಗರ್ಭಧರಿಸಿದ ಮೊದಲ ಹಂತದಲ್ಲಿ ಭ್ರೂಣದ ಯಾವುದೇ ಅಂಗಗಳಿರುವುದಿಲ್ಲ ಎಂದು ಪ್ರತಿಪಾದಿಸುವ, ಇದನ್ನು ಅರಿಸ್ಟಾಟಲನೂ ಅನುಮೋದಿಸಿರುತ್ತಾನೆ. ಆದರೆ ಇದನ್ನು ಪುರ್ಣವಾಗಿ ನಂಬಲು ಆಗ ವೈಜ್ಞಾನಿಕ ಪ್ರಯೋಗಗಳ ಸಾಕ್ಷ್ಯಗಳಿಲ್ಲದಿದ್ದುದರಿಂದ ಅದು ಪ್ರಕಾಶಕ್ಕೆ ಬರಲಿಲ್ಲ. 1750ರಲ್ಲಿ ಕ್ಯಾಸ್ಟರ್ ಎಫ್. ವುಲ್ಫ್ ಈ ತತ್ವವನ್ನು ಮತ್ತೆ ಪ್ರತಿಪಾದಿಸಿದ. ಸ್ತನಿಗಳ ಭ್ರೂಣದ ಬೆಳೆವಣಿಗೆಯ ಬಗ್ಗೆ ಪ್ರಯೋಗಗಳನ್ನು ನಡೆಸಿದ. ಆದ್ದರಿಂದ ಇದರ ಕರ್ತೃ ವುಲ್ಫ್ ಎಂದು ಹೇಳಬೇಕಾಗುತ್ತದೆ. 1821ರಲ್ಲಿ ಜಾನ್ ಫ್ರೆಡ್ರಿಕ್ ಮಕೆಲ್ ಎಂಬ ಜೀವವಿಜ್ಞಾನಿ ವುಲ್ಫ್ ನ ವಾದದಲ್ಲಡಗಿದ್ದ ತಿರುಳನ್ನು ಕಂಡುಕೊಂಡ, ಮುಂದೆ ಅವನ ನಂಬಿಕೆ ಸರ್ವ ಸಾಮಾನ್ಯವಾಯಿತು. ಈ ತತ್ತ್ವದ ಪ್ರಕಾರ ಪ್ರತಿಯೊಂದು ಜೀವಿಯೂ ತನ್ನದೇ ಆದ ಅನುವಂಶೀಯತೆ ಯನ್ನು ಹೊಂದಿದೆ. ಈ ಜೀವಿಯ ಸರ್ವ ಕ್ರಿಯೆಗಳೂ ಕೂಡ ಅನುವಂಶೀಯತೆಯ ಚೌಕಟ್ಟಿನಲ್ಲಿಯೇ ನಡೆಯುತ್ತವೆ. ಅನುವಂಶೀಯತೆ ಸಫಲವಾಗಬೇಕಾದರೆ ಪರಿಸರ ಅಗತ್ಯ. ಆದುದರಿಂದ ಯಾವುದೇ ಜೀವಿ ತನ್ನ ಬೆಳೆವಣಿಗೆಯ ಪುರ್ಣತೆಯನ್ನು ಸಾಧಿಸಬೇಕಾದರೆ ಪರಿಸರವೂ ಮುಖ್ಯ. ಇವೆರಡು ಸರಿಯಾಗಿದ್ದಾಗ ಮಾತ್ರ ಬೆಳೆವಣಿಗೆ ಪರಿಪುರ್ಣವಾಗುತ್ತದೆ. ಒಂದು ಕಪ್ಪೆಯ ಅಂಡಾಣು ಕಪ್ಪೆಯಾಗಲು ಬೇಕಾದ ಅನುವಂಶೀಯ ಕಾರ್ಯಸೂಚಿ ಇರುತ್ತವೆ. ಅದರಂತೆಯೇ ಮಾನವ ಭ್ರೂಣ ಮಾನವನಾಗಿ ಬೆಳೆಯಲು ಅನುವಂಶೀಯ ಗುಣಾಧಾರಗಳನ್ನು ಹೊಂದಿರುತ್ತದೆ. ಈ ಅನುವಂಶೀಯ ಗುಣಗಳಿಗೆ ಸೂಕ್ತ ಪರಿಸರ ಇದ್ದಾಗ ಮಾತ್ರ ಅವುಗಳ ಬೆಳೆವಣಿಗೆ ಸಾಧ್ಯ. ಸುಸ್ಥಿತಿಯಲ್ಲಿರುವ ಒಂದು ಭ್ರೂಣ ಸರಿಯಾದ ಪರಿಸರದಲ್ಲಿದ್ದಾಗ ಅದರಲ್ಲಿ ಊಹೆಗೆ ನಿಲುಕದಂಥ ಬದಲಾವಣೆಗಳಾಗುತ್ತಿರುತ್ತವೆ. ಪ್ರತಿ ಬದಲಾವಣೆಯೂ ಅತಿಸೂಕ್ಷ್ಮವೂ ಸಂಕೀರ್ಣವೂ ಆದದ್ದು. ಇಂಥದರಲ್ಲಿ ಈ ಭ್ರೂಣದ ಪರಿಸರವನ್ನೇನಾದರೂ ಉದ್ದೇಶಪುರ್ವಕವಾಗಿ ಪ್ರಯೋಗಕಾರ ಬದಲಾಯಿಸಿದರೆ ಅದರ ಬೆಳೆವಣಿಗೆ ಅಸ್ತವ್ಯಸ್ತವಾಗಿ, ಹಾನಿಯಾಗುತ್ತದೆ. ಭ್ರೂಣದ ಬೆಳೆವಣಿಗೆ ಕುಂಠಿತವಾಗುತ್ತದೆ. ಆದುದರಿಂದ ಗರ್ಭಧರಿಸಿರುವ ಮೊಟ್ಟೆ ತನ್ನ ಆನುವಂಶಿಕವಸ್ತುವಿನ ನಿರ್ದೇಶನದಂತೆ ಒಂದು ಗೊತ್ತಾದ ಪರಿಸರದಲ್ಲಿ ಹಂತ ಹಂತವಾಗಿ ಪರಿವರ್ತನೆ ಹೊಂದಿ ತನ್ನ ಅಂತಿಮ ಸ್ವರೂಪವನ್ನು ಪಡೆಯುತ್ತದೆ. ಆದುದರಿಂದ ಅಂಡಾಣುವಿನಲ್ಲಾಗಲೀ ಅಥವಾ ವೀರ್ಯಾಣುವಿನಲ್ಲಾಗಲಿ ಜೀವಿಯ ಪುರ್ಣಚಿತ್ರ ಇರುವುದಿಲ್ಲ. ಭ್ರೂಣಶಾಸ್ತ್ರದ ಬೆಳೆವಣಿಗೆಗೆ ವಾóನ್ಬೇರ್ (1792-1876) ಪ್ರತಿಪಾದಿಸಿದ ಜರ್್ಮ ಲೇಯರ್ವಾದವೂ ನೆರವಾಯಿತು. ಅಲ್ಲದೆ ಕೆಲವು ಸ್ತನಿಗಳು ಮೊಟ್ಟೆಯಿಡುವುದು ಬೆಳಕಿಗೆ ಬಂದಮೇಲೆ ಅದಕ್ಕೆ ಸಾಮಾನ್ಯ ಸ್ವರೂಪವೂ ಗೋಚರಿಸ ಹತ್ತಿತ್ತು. ಅಷ್ಟರಲ್ಲಿ ಭ್ರೂಣಶಾಸ್ತ್ರಕ್ಕೆ ಸಂಬಂಧಿಸಿದಂತೆ ಅನೇಕ ವಿಜ್ಞಾನಿಗಳ ಅಭಿಪ್ರಾಯವನ್ನು ಒಂದೆಡೆ ಕ್ರೋಡೀಕರಿಸಲಾಯಿತು. ಇವೆಲ್ಲದರ ಫಲವಾಗಿ ಭ್ರೂಣಶಾಸ್ತ್ರಕ್ಕೆ ಒಂದು ಹೊಸ ತಿರುವು ಸಿಕ್ಕಿತು. ಜೀವಕೋಶತತ್ವ ಪ್ರತಿಪಾದನೆಯಾದಮೇಲೆ ಭ್ರೂಣಶಾಸ್ತ್ರಕ್ಕೆ ಸಂಬಂಧಿಸಿದ ಪ್ರಯೋಗಗಳಿಗೆ ಒಂದು ಹೊಸ ಹಾದಿ ತೆರೆಯಿತು. ಅಂಡಾಣು ಒಂದು ಕೋಶವೆಂತಲೂ ಹಾಗೂ ಆ ಕೋಶ ವಿಭಜನೆಯಾಗಿ ಜೀವಾಂಕುರವಾಗಲು ಅದರೊಡನೆ ವೀರ್ಯಾಣು ಮಿಲನಗೊಳ್ಳಬೇಕೆಂತಲೂ ಈ ರೀತಿ ಇವೆರಡೂ ಮಿಲನಗೊಳ್ಳುವ ಕ್ರಿಯೆಗೆ ನಿಶೇಚನವೆಂತಲೂ ಕರೆಯಲಾಯಿತು. ಹೀಗೆ ಇವೆರಡರ ಮಿಲನದಿಂದ ಉಂಟಾಗುವ ಸಂಯುಕ್ತ ಜೀವಕೋಶಕ್ಕೆ ನಿಶೇಚಿತ ಅಂಡಾಣು (ಜೈ಼ಗೋಟ್) ಎಂದು ಹೆಸರು. ಮುಂದೆ ಈ ಜೈ಼ಗೋಟ್ ಕೋಶ ವಿಭಜನೆ ಹೊಂದಿ, ಬೆಳೆದು ಭ್ರೂಣವಾಗುತ್ತದೆ. ಎಂದರೆ ತಡೆಯಿಲ್ಲದೇ ನಡೆಯುವ ಕೋಶವಿಭಜನೆ ಮತ್ತು ಕೋಶಗಳ ಸಕಾಲಿಕ ವಿಭೇದೀಕರಣವೇ ಭ್ರೂಣದ ಬೆಳೆವಣಿಗೆಯೆಂದು ಕರೆಯಬಹುದು. 1859ರಲ್ಲಿ ಚಾರಲ್್ಸ ಡಾರ್ವಿನ್ ಜೀವ ವಿಕಾಸತತ್ವವನ್ನು ಪ್ರತಿಪಾದಿಸಿದ ಮೇಲಂತೂ ಭ್ರೂಣಶಾಸ್ತ್ರದ ಬೆಳೆವಣಿಗೆಯಲ್ಲಿ ಒಂದು ಹೊಸ ಅಧ್ಯಾಯ ಆರಂಭವಾಯಿತು. ಬಿಡಿಸಲಾಗದಿದ್ದ ಭ್ರೂಣ ಬೆಳೆವಣಿಗೆಯ ಕ್ಲಿಷ್ಟಸಮಸ್ಯೆಗಳಿಗೆ ವಿಕಾಸ ತತ್ವ ಉತ್ತರ ನೀಡಿತು. ಜೀವವಿಜ್ಞಾನದ ಪ್ರಯೋಗಗಳಿಗೆ ಹೊಸ ಬಗೆಯ ಉಪಕರಣಗಳು ಬಳಕೆಗೆ ಬಂದುವು. ಭ್ರೂಣದ ಬೆಳೆವಣಿಗೆಯ ಪ್ರಾರಂಭದಿಂದ ಹಿಡಿದು ಪುರ್ಣಗೊಳ್ಳುವವರೆಗೆ ಅದನ್ನು ಪ್ರತಿ ಹಂತದಲ್ಲಿಯೂ ಅಭ್ಯಸಿಸಲು ಈಗ ಸಾಧ್ಯ. ಭ್ರೂಣಶಾಸ್ತ್ರದ ಬೆಳೆವಣಿಗೆಯಲ್ಲಿ ಬರುವ ಮತ್ತೊಂದು ಅಮೋಘ ತತ್ವವೆಂದರೆ, ಹೆಕೆಲ್ನ ಜೀವಾನುವಂಶೀಯ ತತ್ವ. ಇದನ್ನು ಫಿಟ್್ಸ ಮುಲ್ಲರ್ (1821-97) ಹೆಕೆಲ್ನಿಗಿಂತ ಹಿಂದೆಯೇ ಪ್ರತಿಪಾದಿಸಿದ್ದ. ಬೆಳೆಯುತ್ತಿರುವ ಭ್ರೂಣ ತನ್ನ ಬೆಳೆವಣಿಗೆಯ ವಿವಿಧ ಹಂತಗಳಲ್ಲಿ ತನ್ನ ಪುರ್ವಜರನ್ನು ನೆನೆಸಿಕೊಳ್ಳುತ್ತದೆ ಎಂಬುದೇ ಈ ತತ್ವದ ತಿರುಳು. ಮುಲ್ಲರ್ ಈ ತತ್ವವನ್ನು ಪ್ರತಿಪಾದಿಸಬೇಕಾದರೆ ಕ್ರಸ್ಟೇಷಿಯಾ ವರ್ಗದ ಭ್ರೂಣ ಬೆಳೆವಣಿಗೆಯನ್ನು ಕೂಲಂಕಷವಾಗಿ ಅಭ್ಯಸಿಸಿದನು. ಆ ವರ್ಗದ ವಿವಿಧ ಪ್ರಭೇದಗಳ ಭ್ರೂಣಗಳಲ್ಲಿ ವೈವಿಧ್ಯ ಇದ್ದರೂ ಅವೆಲ್ಲವೂ ನಾಪ್ಲಿಯಸ್ ಲಾರ್ವದ ಹಂತದಲ್ಲಿ ಒಂದೇ ತೆರನಾಗಿರುತ್ತವೆ. ಕ್ರಸ್ಟೇಷಿಯ ವರ್ಗದ ಎಲ್ಲ ಜೀವಿಗಳಲ್ಲಿಯೂ ಅವುಗಳ ಭ್ರೂಣ ನಾಪ್ಲಿಯಸ್ ಲಾರ್ವವಾಗಿಯೇ ಬೆಳೆದು ಮುಂದೆ ಬೇರೆ ಬೇರೆ ದಾರಿಯನ್ನು ಹಿಡಿಯುತ್ತವೆ. ಜೀವ ವಿಜ್ಞಾನಕ್ಕೆ ಅಕಶೇರುಕ ಭ್ರೂಣಶಾಸ್ತ್ರದ ಮಹತ್ವದ ಕೊಡುಗೆಯೆಂದರೆ ಈ ‘ಜೀವಾನುವಂಶೀಯ ತತ್ವ’. ಹೆಕೆಲ್ಲನ ಶಿಷ್ಯ, ಆಸ್ಕರ್ ಹರ್್ಟವಿಗ್ ಪ್ರಪ್ರಥಮವಾಗಿ ಜೀವಿಗಳಲ್ಲಿ ಫಲೀಕರಣ ಕ್ರಿಯೆಯನ್ನು ಕಂಡನು. ಈತ ಕಡಲಕುಡಿಕೆ ಅಂಡಾಣುವಿನೊಳಕ್ಕೆ ಆ ಜೀವಿಗಳ ವೀರ್ಯಾಣು ಪ್ರವೇಶಿಸುವುದನ್ನು ಸೂಕ್ಷ್ಮದರ್ಶಕದಲ್ಲಿ ಕಂಡನು. ಅಂಡಾಣು ಹಾಗೂ ರೇತಸ್ಸು ಇವೆರಡರ ಮಿಲನವೇ ಫಲೀಕರಣ (ನಿಶೇಚನ) ಎಂದು ಮೊಟ್ಟಮೊದಲು ಪ್ರಕಟಿಸಿದನು. ಈತನೂ ಮತ್ತು ಇವನ ಸೋದರ ರಿಚರ್ಡ್ ಹರ್್ಟವಿಗ್ ಭ್ರೂಣಶಾಸ್ತ್ರಕ್ಕೆ ಮಹತ್ತರ ಕೊಡುಗೆಯನ್ನು ನೀಡಿದರು. ಭ್ರೂಣದ ಬೆಳೆವಣಿಗೆಯ ಕಾಲದಲ್ಲಿ ಉದಯಿಸುವ ನಡುಮೂಲಪದರ, ದೇಹದೊಳಗಿನ ಅವಕಾಶವಾದ ಸೀಲೋಮ್ ಬಗ್ಗೆ ಇವರು ನಡೆಸಿದ ಸಂಶೋಧನೆಗಳು ಅತಿ ಮುಖ್ಯವಾದವು. ಅಲ್ಲದೆ ಇವರು ಕೃತಕ ಫಲವಂತಿಕೆಯ ಕ್ರಿಯೆಯನ್ನೂ ಜೀವಿಗಳಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಿದರು. ಭ್ರೂಣಶಾಸ್ತ್ರ ಸಂಶೋಧನೆಗಳಿಗೆ ಹೊಸ ರೂಪವನ್ನು ಕೊಟ್ಟ ಒಂದು ಹೊಸ ತತ್ತ್ವವೆಂದರೆ ಬೆಳೆವಣಿಗೆಯ ಯಾಂತ್ರಿಕ ನಿಯಮಬದ್ಧತೆಯ ತತ್ತ್ವ ಇದರಂತೆ ಭ್ರೂಣದ ಬೆಳೆವಣಿಗೆಯನ್ನು ಪ್ರಯೋಗಕ್ಕೆ ಒಳಪಡಿಸಿ ಅದರ ಪ್ರತಿಯೊಂದು ಹಂತವನ್ನೂ ವೈಜ್ಞಾನಿಕ ಯಂತ್ರೋಪಕರಣಗಳ ಸಹಾಯದಿಂದ ವಿವರವಾಗಿ ಪರೀಕ್ಷಿಸಿ ನೋಡಬಹುದು. ಭ್ರೂಣದ ಬೆಳವಣಿಗೆ ಯಾಂತ್ರಿಕವಾಗಿ ನಿಯಮಬದ್ಧವಾಗಿ ಸಾಗುವ ಕ್ರಿಯೆ. ಈ ಕ್ರಿಯೆಯನ್ನು ಯಾಂತ್ರಿಕ ತತ್ತ್ವಗಳ ಮೂಲಕ ವಿವರಿಸಬಹುದು. ಭ್ರೂಣದ ಬೆಳೆವಣಿಗೆಯ ಯಾವುದಾದರೊಂದು ಹಂತ ಮುಂದಿನ ಇನ್ನೊಂದು ಅನುಕ್ರಮ ಹಂತಕ್ಕೆ ನಾಂದಿ. ಆ ಇನ್ನೊಂದು ಹಂತ ಭ್ರೂಣದ ವಿಭೇದೀಕರಣದ ಮತ್ತೊಂದು ಹಂತದ ಹಾದಿಯಾಗುತ್ತದೆ. ಈ ರೀತಿ ಭ್ರೂಣದ ಬೆಳೆವಣಿಗೆ ಯಾಂತ್ರಿಕವಾಗಿ ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಸಾಗುತ್ತದೆ. ಇದನ್ನೇ ಬೆಳೆವಣಿಗೆಯ ಯಾಂತ್ರಿಕತೆಯೆನ್ನುವುದು. ಅಂಡಾಣು ವೀರ್ಯಾಣುವಿನೊಡನೆ ಮಿಲನವಾಗಿ ಯಾಂತ್ರಿಕವಾಗಿ ಬದಲಾಗುತ್ತಾ ಭ್ರೂಣವಾಗಿ ಬೆಳೆದು ಮುಂದೆ ಪ್ರಬುದ್ಧಜೀವಿಯಾಗಿ ವಿಕಸಿಸಿ ಮತ್ತೆ ತನ್ನ ಅಂಗಾಂಗಗಳಲ್ಲಿ ಲೈಂಗಿಕ ಕೋಶಗಳನ್ನು ಉತ್ಪತ್ತಿ ಮಾಡುತ್ತದೆ. ಈ ಲೈಂಗಿಕಕೋಶಗಳು ಮತ್ತೆ ಮಿಲನಗೊಂಡು ತಮ್ಮ ಪೀಳಿಗೆಯನ್ನು ಮುಂದುವರಿಸುತ್ತವೆ. ಇದು ನಿರಂತರ. ಭ್ರೂಣಶಾಸ್ತ್ರದ ವಿಕಾಸಕ್ಕೆ ಆಗಸ್್ಟ ವೀಸ್ಮನ್ನ ಕೊಡುಗೆಯೂ ಸಹಾಯ ಮಾಡಿದೆ. ಈತನು ಕೀಟಗಳ ಹಾಗೂ ಇತರ ಅಕಶೇರುಕಗಳ ಅಂಡಾಣುಗಳು ಬೆಳೆಯುವ ವಿಧಾನವನ್ನು ಅಭ್ಯಾಸ ಮಾಡಿದನು. ಈ ಜೀವಿಗಳ ಫಲಿತ ಅಂಡಾಣು ವಿಭಜನೆ ಹೊಂದುತ್ತಾ ಹೋಗುವುದನ್ನು ಪರಿಶೀಲಿಸಿದನು. ಆ ವಿಭಜನೆಯಿಂದಾಗಿ ಜೀವಕೋಶಗಳ ಸಂತತಿಯಲ್ಲಿ ಕೆಲವೇ ಜೀವಕೋಶಗಳು ಪ್ರಬುದ್ಧಜೀವಿಯ ಅಂಡಾಣು ಜನಾಂಗಗಳನ್ನು ಕೊಡುತ್ತವೆಯೆಂಬುದನ್ನು ಕಂಡುಕೊಂಡನು. ಉದಾಹರಣೆಗೆ ಜಂತುಹುಳುಗಳಲ್ಲಿ (ಅಸ್ಕಾರಿಸ್) ಎರಡನೇ ಕ್ಲೀವೇಜ್ ಕ್ರಿಯೆಯಿಂದ ಉತ್ಪತ್ತಿಯಾದ ಒಂದು ಕೋಶ ಮತ್ತೆಲ್ಲ ಕೋಶಗಳಿಂದ ಸ್ವಲ್ಪ ಸರಿದು ಮುಂದೆ ಆ ಜೀವಿಯ ಜನನಾಂಗವಾಗುವುದನ್ನು ವಿವರಿಸಿದನು. ಈ ಜನನಾಂಗ ವೃಷಣವಾಗಬಹುದು ಅಥವಾ ಅಂಡಾಶಯವಾಗಬಹುದು. ಇನ್ನುಳಿದ ಜೀವಕೋಶಗಳು ಪ್ರಾಣಿಯ ಶರೀರರಚನೆಗೆ ಸಹಾಯ ಮಾಡುತ್ತವೆಯೇ ವಿನಾ ಸಂತಾನೋತ್ಪತ್ತಿಕ್ರಿಯೆ ಅವುಗಳಿಂದ ಸಾಧ್ಯವಿಲ್ಲ. ಆದುದರಿಂದ ಈತ ಜೀವಿಯ ಶರೀರದಲ್ಲಿ ಎರಡು ಅಂಗಗಳನ್ನು ಗುರುತಿಸಿದನು. ಮೊದಲನೆಯದು ಸಂತಾನೋತ್ಪತ್ತಿಯಲ್ಲಿ ಭಾಗವಹಿಸುವ ಭಾಗ; ಎರಡನೆಯದು, ಈ ಸಂತಾನೋತ್ಪತ್ತಿ ವಿಭಾಗಕ್ಕೆ ಸಹಾಯ ಮಾಡುವ ಮಿಕ್ಕ ಶರೀರಭಾಗ. ಅವನು, ಸಂತಾನೋತ್ಪತ್ತಿ ಮಾಡುವ ಭಾಗ ಶರೀರದ ಇತರ ಭಾಗದ ಉಪಜೀವಿ ಇದ್ದಂತೆ ಎಂದು ಪ್ರತಿಪಾದಿಸಿದನು. ಆದ್ದರಿಂದ ವೀಸ್ಮನ್, ಜೀವಿಗಳು ಅಮರವಲ್ಲದಿದ್ದರೂ ಆ ಸಂತಾನೋತ್ಪತ್ತಿಯ ಭಾಗ ಅಮರವಾದದ್ದೆಂದು ಸಾರಿದ. ಅಕಶೇರುಕ ಭ್ರೂಣಶಾಸ್ತ್ರದ ಮುನ್ನಡೆಗೆ ಮೊಸಾಯಿಕ್ ತತ್ವವೂ ಸಹಾಯಮಾಡಿದೆ. ಹಿಸ್ ಪ್ರತಿಪಾದಿಸಿದ ಈ ತತ್ವವನ್ನು ವಿಲ್ಹೆಲ್ಮ್ರ ರೂಕ್ಸಸ್ ಎತ್ತಿ ಹಿಡಿದ. ಬೆಳೆವಣಿಗೆಯ ಪುರ್ವಾವಸ್ಥೆಯಲ್ಲಿರುವ ಅಂಡಾಣುವಿನೊಳಗಿರುವ ಕೋಶರಸದಲ್ಲಿ ವಿವಿಧ ಭಾಗಗಳು ಪದರಗಳಂತಿದ್ದು ಮುಂದೆ ಆಯಾ ಅಂಗಗಳನ್ನು ಕೊಡುತ್ತವೆ ಎಂಬುದು ಈ ಮೊಸಾಯಿಕ್ ತತ್ವದ ತಿರುಳು. ಅಂಡಾಣು ಇನ್ನೂ ಅಂಡಾಶಯದೊಳಗಿರುವಾಗಲೆ ಅದರಲ್ಲಿ ಕೆಲವು ವಿಶಿಷ್ಟ ಭಾಗಗಳು ಉದಯವಾಗುತ್ತವೆಯೆಂದು ರೂಕ್ಸ್ ತಿಳಿಸಿದ. ಈ ತತ್ತ್ವವನ್ನು ಊರ್ಜಿತಗೊಳಿಸುವುದಕ್ಕಾಗಿ ಕಶೇರುಕ ಹಾಗೂ ಅಕಶೇರುಕ ಅಂಡಾಣುಗಳನ್ನು ಅನೇಕ ವಿಧವಾದ ಪ್ರಯೋಗಗಳಿಗೆ ಒಳಪಡಿಸಿ ಅದರ ಬೆಳೆವಣಿಗೆಯನ್ನು ಪ್ರತಿಹಂತದಲ್ಲಿಯೂ ಪರಿಶೀಲಿಸಿದ. ರೂಕ್ಸ್ ಮುಖ್ಯವಾಗಿ ಕಪ್ಪೆಗಳ ಮೊಟ್ಟೆಗಳ ಮೇಲೆ ಪ್ರಯೋಗಗಳನ್ನು ನಡೆಸಿದ. ನಿಶೇಚಿತ ಅಂಡಾಣುವಿನ ಪ್ರತಿ ಭಾಗವನ್ನೂ ಭೌತಿಕವಾಗಿ ಹಾಗೂ ರಾಸಾಯನಿಕವಾಗಿ ವಿಶ್ಲೇಷಿಸಿ ಅದರಲ್ಲಿ ಪ್ರಾಣಿವಲಯ ಹಾಗೂ ಆಹಾರ ವಲಯವನ್ನು ಗುರುತಿಸಿದ. ನಿಶೇಚಿತ ಅಂಡಾಣುವಿನಿಂದ ಉತ್ಪತ್ತಿಯಾದ ಜೀವಕೋಶಗಳ ಜೀವರಸವನ್ನೂ ಜೀವಕೋಶಗಳ ಭಾಗಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸಿ ಕೋಶ ವಿಭಜನೆಯ ಕ್ರಿಯೆ ಮುಂದುವರಿದಂತೆ ಹಿಂದಿದ್ದ ಕೋಶಗಳಿಂದ ಉದಯವಾದ ಹೊಸ ಕೋಶಗಳು ಚಿಕ್ಕದಾಗಿರುವುದನ್ನು ಹಾಗೂ ಅವುಗಳಲ್ಲಿ ಕೆಲವು ನರಮಂಡಲ ಕೆಲವು ಮಾಂಸಖಂಡ, ಇತ್ಯಾದಿ ಭಾಗಗಳಾಗಿ ಬೆಳೆಯುವುದನ್ನು ಕಂಡುಕೊಂಡ. ಈ ರೀತಿಯ ಸಮಗ್ರ ಪರಿಶೀಲನೆಯನ್ನು ಹಿಮ್ಮುಖವಾಗಿ ಕೊಂಡೊಯ್ದು ಅಂಡಾಣುವಿನೊಳಗಿನ ಕೋಶರಸದ ವಿವಿಧ ಭಾಗಗಳಿಗೆ ಸಂಬಂಧ ಕಲ್ಪಿಸಿದ. ಮೊಸಾಯಿಕ್ ತತ್ತ್ವವನ್ನು ಪರಿಶೀಲಿಸಲು ವಿವಿಧ ಪ್ರಭೇದಗಳ ಜೀವಿಗಳ ಅಂಡಾಣು ಯನ್ನು ಪ್ರಯೋಗಕ್ಕೊಳಪಡಿಸಲಾಯಿತು. ಕೆಲವು ಜೀವಿಗಳ ಅಂಡಾಣು ಮೊಸಾಯಿಕ್ ತತ್ತ್ವವನ್ನು ಪರಿಪಾಲಿಸಿದರೆ ಮತ್ತೆ ಕೆಲವು ಜೀವಿಗಳ ಅಂಡಾಣುಗಳು ಈ ತತ್ವಕ್ಕೆ ಹೊರತಾಗಿದ್ದವು. ಆದುದರಿಂದ ಮೊಸಾಯಿಕ್ ತತ್ತ್ವವನ್ನು ಸಂಪುರ್ಣವಾಗಿ ಎಲ್ಲಾ ಜೀವಿಗಳಿಗೂ ಅನ್ವಯಿಸುವುದು ಕಷ್ಟ. ಬಹುತೇಕ ಅಕಶೇರುಕ ಜೀವಿಗಳು ಮೊಸಾಯಿಕ್ ಅಂಡಾಣುವನ್ನು ಹೊಂದಿವೆ. ಮತ್ತೆ ಕೆಲವೇ ಕೆಲವು ಅಕಶೇರುಕಗಳು ಇದಕ್ಕೆ ವಿರುದ್ಧವಾದ ರೀತಿಯ ಅಂಡಾಣುಗಳನ್ನು ಹೊಂದಿವೆ. ಈ ರೀತಿಯ ಮೊಟ್ಟೆಗಳನ್ನು ವಿಧಿಬದ್ಧ ಅಂಡಾಣುಗಳು ಎಂದು ಹೇಳುತ್ತಾರೆ. ವಿಧಿಬದ್ಧ ಅಂಡಾಣುಗಳ ಕೋಶರಸ ಮೊಸಾಯಿಕ್ ಅಂಡಾಣುಗಳ ಕೋಶರಸದಂತೆ ನಾನಾ ವಲಯಗಳನ್ನು ಹೊಂದಿಲ್ಲ. ಇಲ್ಲಿ ವಿಭಜನೆಯಾದ ನಿಶೇಚಿತ ಅಂಡಾಣುವಿನ ಕೋಶಗಳನ್ನು ಬೇರ್ಪಡಿಸಿ ಬೆಳೆಸಿದರೆ ಅವು ಎರಡು ಲಾರ್ವಾಗಳಾಗಿ ಬೆಳೆಯುವುದು ಕಂಡುಬಂತು. ಇನ್ನೂ ಮುಂದುವರಿದ ಪ್ರಯೋಗಗಳು ಜೈ಼ಗೋಟ್ ವಿಭಜನೆಯಿಂದ 4 ಜೀವಕೋಶಗಳು ಹುಟ್ಟಿಬಂದ ಅವಸ್ಥೆಯಲ್ಲಿ ಅವುಗಳನ್ನು ಬೇರ್ಪಡಿಸಿ 4 ಲಾರ್ವಾಗಳನ್ನು ಬೆಳೆಸಿರುವುದೂ ಉಂಟು. ಅಂದಮೇಲೆ ಈ ನಿಶೇಚಿತ ಅಂಡಾಣುಗಳ ಕೋಶರಸದಲ್ಲಿ ಜೈ಼ಗೋಟ್ ವಿಭಜನೆಯ ಪ್ರಥಮ ಹಂತದ ಪ್ರತಿಯೊಂದು ಕೋಶಗಳಲ್ಲಿಯೂ ಸಂಪುರ್ಣ ಜೀವಿಯಾಗಲು ಬೇಕಾದ ಪರಿಕರಗಳೆಲ್ಲವೂ ಕಂಡುಬರುತ್ತವೆ. ಆದರೆ ಮೊಸಾಯಿಕ್ ಅಂಡಾಣುಗಳಲ್ಲಿ ಈ ರೀತಿ ಇಲ್ಲ. ಮೃದ್ವಂಗಿಗಳ ಹಾಗೂ ವಲಯವಂತಗಳ ಅಂಡಾಣುಗಳು ಮೊಸಾಯಿಕ್ ಅಂಡಾಣುಗಳಿಗೆ ಉತ್ತಮ ಉದಾಹರಣೆ. ಕಠಿಣಚರ್ಮಿಗಳಾದ ನಕ್ಷತ್ರಮೀನುಗಳು, ಕಡಲ ಕುಡಿಕೆಗಳು ವಿಧಿಬದ್ಧ ಮೊಟ್ಟೆಗಳನ್ನು ಹೊಂದಿವೆ. ಕಾನ್ಕ್ಲಿನ್ ಈ ಅಂಡಾಣುಗಳ ಜೈ಼ಗೋಟ್ ಅವಸ್ಥೆಯಲ್ಲಿ ನಡೆಯುವ ವಿಭಜನೆಯನ್ನು ನಿರ್ದಿಷ್ಟ ಹಾಗೂ ಅನಿರ್ದಿಷ್ಟ ಎಂದು ಎರಡು ರೀತಿಯಾಗಿ ವಿಂಗಡಿಸಿದ್ದಾನೆ. ಇಷ್ಟೆಲ್ಲ ಪ್ರಯೋಗಗಳು ನಡೆದಿದ್ದರೂ ರೂಕ್್ಸ ಪ್ರತಿಪಾದಿಸಿದ ಮೊಸಾಯಿಕ್ ತತ್ವ ಇನ್ನೂ ಜೀವಂತವಾಗಿ ಉಳಿದಿದೆ. ಈ ತತ್ತ್ವಕ್ಕೆ ಪ್ರಯೋಗಗಳ ಸಾಕ್ಷ್ಯಾಧಾರ ಹೆಚ್ಚಾಗಿ ಅಕಶೇರುಕ ಜೀವಿಗಳ ಮೊಟ್ಟೆಗಳಲ್ಲಿ ಕಂಡುಬಂದಿದೆ. ಮೃದ್ವಂಗಿಗಳ ಮತ್ತು ವಲಯವಂತಗಳ ಮೊಟ್ಟೆ ಬೆಳೆಯುವಾಗ ಕಂಡುಬರುವ ವೈಶಿಷ್ಟ್ಯಗಳನ್ನು, ಗರ್ಭಕಟ್ಟಿದ ಮೊಟ್ಟೆಯಿಂದ ಉದಯವಾದ ಪ್ರತಿ ಜೀವಕೋಶಗಳ ಬೆಳೆವಣಿಗೆಯನ್ನು, ಅವು ಮುಂದೆ ಕೊಡುವ ಅಂಗಗಳನ್ನು ನಿರ್ದಿಷ್ಟವಾಗಿ ಗುರುತಿಸಲಾಗಿದೆ. ಇದಕ್ಕೆ ಕೋಶವಂಶಾವಳಿ ಎನ್ನುವರು. ಈ ಬೆಳೆವಣಿಗೆಯ ಹಂತಗಳ ಅಧ್ಯಯನದಿಂದ ಅಕಶೇರುಕ ಭ್ರೂಣಶಾಸ್ತ್ರ ಬಹುವಾಗಿ ಪುಷ್ಟಿಗೊಂಡಿತು. ನಿಶೇಚಿತ ಅಂಡಾಣುವಿನ ವಿಭಜನೆಯಿಂದ ಹುಟ್ಟಿಬರುವ ಬ್ಲಾಸ್ಟುಲ ಅವಸ್ಥೆಯಲ್ಲಿ ಬರುವ ಜೀವಕೋಶಗಳ ವಿವಿಧ ಭಾಗಗಳು ಮುಂದೆ ಬೆಳೆಯುವ ಭ್ರೂಣ ಇಂಥ ಅಂಗವನ್ನೇ ಕೊಡುತ್ತವೆ ಎಂಬುದನ್ನು ಪತ್ತೆಹಚ್ಚುವುದು ಈಗ ಸಾಧ್ಯವಾಗಿದೆ. ಜೈ಼ಗೋಟ್ ವಿಭಜನೆಯಿಂದ ಉತ್ಪತ್ತಿಯಾಗುವ ಜೀವಕೋಶಗಳ ಪ್ರಾಥಮಿಕ ವಿಭಜನಾಹಂತವನ್ನು ಗುರುತಿಸಿ ಹಾಗೂ ಪ್ರಾಥಮಿಕ ಹಂತದಲ್ಲಿದ್ದ ಜೀವಕೋಶಗಳನ್ನು ಗುರುತಿಟ್ಟುಕೊಂಡು ಅವುಗಳ ಬೆಳೆವಣಿಗೆಯನ್ನು ನೇರವಾಗಿ ಜೀವಿ ರೂಪುಗೊಳ್ಳುವವರೆಗೂ ಪರಿಶೀಲಿಸಿ ಅದು ಕೊನೆಯ ಘಟ್ಟದಲ್ಲಿ ಏನಾಗುತ್ತದೆಂಬುದನ್ನು ಅರಿಯುವುದೇ ಕೋಶವಂಶಾವಳಿಯ ಅಭ್ಯಾಸ. ಇದು ಭ್ರೂಣಶಾಸ್ತ್ರಕ್ಕೆ ಮಾತ್ರ ಸೀಮಿತವಲ್ಲ, ಜೀವಕೋಶಶಾಸ್ತ್ರಕ್ಕೂ ಸೇರಿದೆ. ಈ ಅಭ್ಯಾಸದಿಂದಾಗಿ ರೂಕ್್ಸನ ಮೊಸಾಯಿಕ್ ತತ್ತ್ವಕ್ಕೆ ಹೆಚ್ಚಿನ ವೈಜ್ಞಾನಿಕ ಬೆಲೆ ದೊರಕಿತು; ಪ್ರಾಯೋಗಿಕ ಬೆಳೆವಣಿಗೆಯ ಹಂತದಲ್ಲಿ ಈ ಕೋಶವಂಶಾವಳಿಯನ್ನು ಗುರುತಿಸಲಾಯಿತು. ಅಮೆರಿಕದ ಜೀವಕೋಶ ಶಾಸ್ತ್ರಜ್ಞರಾದ ಕಾಕ್ಲಿನ್, ಹ್ಯಾರಿಸನ್, ರೋಯೆಬ್ ಬ್ರಾಷೆ, ಹರ್್ಟವಿಗ್, ವೀಸ್ಮನ್ ಮುಂತಾದವರು ರೂಕ್್ಸ ತತ್ವವನ್ನು ಒಪ್ಪಿಕೊಂಡರು. ಇವರು ಸಾಮಾನ್ಯವಾಗಿ ಅಕಶೇರುಕ ಗುಂಪಿನ ಎಲ್ಲಾ ವಂಶದ ಪ್ರಭೇದಗಳ ಬೆಳೆವಣಿಗೆಯಲ್ಲೂ ಕೋಶವಂಶಾವಳಿಯನ್ನು ಗುರುತಿಸಬಹುದು ಎಂಬ ತೀರ್ಮಾನಕ್ಕೆ ಬಂದರು. ಕೆಲವು ಕಶೇರುಕಗಳೂ ಕೋಶವಂಶಾವಳಿ ಯನ್ನು ಹೊಂದಿವೆ ಎಂಬುದಾಗಿಯೂ ತಿಳಿಸಿದರು. ಕೋಶವಂಶಾವಳಿಯನ್ನು ಸಂಪುರ್ಣವಾಗಿ ಅರಿಯಬೇಕಾದರೆ ಮೊಟ್ಟೆಯೊಳಗೆ ಇರುವ ವಿವಿಧ ವಲಯಗಳನ್ನು ಗುರುತಿಸಿಕೊಳ್ಳಬೇಕು. ವಿವಿಧ ವಲಯಗಳಲ್ಲಿರುವ ರಾಸಾಯನಿಕ ವಸ್ತುಗಳನ್ನು ಅರ್ಥಮಾಡಿಕೊಳ್ಳಬೇಕು. ಯುಗ್ಮಜದ ವಿಭಜನೆಯಿಂದಾಗಿ ಹುಟ್ಟಿಬರುವ ಬ್ಲಾಸ್ಟುಲ ಹಾಗೂ ಗ್ಯಾಸ್ಟ್ರುಲ ಅವಸ್ಥೆಗಳಲ್ಲಿ ಮೊಟ್ಟೆಯ ವಿವಿಧವಲಯಗಳಿಂದ ಉಂಟಾಗುವ ಕೋಶಗಳ ಭಾಗಗಳನ್ನು ಗುರುತಿಸಿಕೊಳ್ಳಬೇಕು. ಈ ರೀತಿಯ ನಿರ್ದಿಷ್ಟ ಭಾಗಗಳ ಗುರುತಿನಿಂದಾಗಿ ಈ ಭಾಗಗಳಲ್ಲಿರುವ ಜೀವಕೋಶಗಳು ಮುಂದೆ ಯಾವ ಅಂಗಕಟ್ಟನ್ನು ಅಥವಾ ಅಂಗವನ್ನು ಕೊಡುತ್ತವೆ ಎಂಬುದನ್ನು ಪ್ರಯೋಗಗಳ ಮೂಲಕ ಅರಿಯುತ್ತ ಆ ಕೋಶಸಂತತಿಯ ಗತಿಯನ್ನೇ ಅನುಕ್ರಮವಾಗಿ ಪತ್ತೆ ಹಚ್ಚಿದಲ್ಲಿ ಕೊನೆಯ ಹಂತದಲ್ಲಿ ಅದು ಯಾವ ಅಂಗವನ್ನು ಕೊಡುತ್ತದೆಂದು ಗುರುತಿಸಬಹುದು. ಪ್ರಾಯೋಗಿಕ ಭ್ರೂಣಶಾಸ್ತ್ರದಲ್ಲಿ ಇಂತಹ ಅಧ್ಯಯನಗಳು ಹೊಸಬೆಳಕನ್ನು ಚೆಲ್ಲಿವೆ. ಇಂದು ಯಾವುದೇ ಅಕಶೇರುಕದ ಕೋಶವಂಶಾವಳಿಯನ್ನಾದರೂ ಅರ್ಥಮಾಡಿಕೊಳ್ಳಬಹುದು. ಪಾಲಿಗಾರ್ಡಿಯಸ್, ಪಟೆಲ್ಲಾ ಮುಂತಾದ ಪ್ರಭೇದÀಗಳಲ್ಲಿ ಇದನ್ನು ಪುರ್ಣವಾಗಿ ಅಧ್ಯಯನಮಾಡಲಾಗಿದೆ. ಮೊಟ್ಟೆಯಲ್ಲಿರುವ ಪ್ರಾಣಿವಲಯ ಹಾಗೂ ಆಹಾರ ವಲಯಗಳಲ್ಲಿ ನಡೆಯುವ ಜೈವಿಕ ಕ್ರಿಯೆಗಳಲ್ಲಿ ಬಹಳ ವ್ಯತ್ಯಾಸಗಳು ಕಂಡುಬರುತ್ತವೆ. ಇದು ಚೈಲ್ಡ್ ಎಂಬುವನ ಮೆಟಬಾಲಿಕ್ ಆ್ಯಕ್ಸಿಯಲ್ ಗ್ರೇಡಿಯೆಂಟ್ ಎಂಬ ತತ್ವದ ತಿರುಳು. ಈ ಜೈವಿಕ ಕ್ರಿಯೆಗಳ ಕಾರ್ಯರಂಗವನ್ನು ಪ್ರಾಯೋಗಿಕವಾಗಿ ಪರಿಶೀಲಿಸಿ ಚೈಲ್ಡ್ ಈ ತತ್ವವನ್ನು ಪ್ರತಿಪಾದಿಸಿರುತ್ತಾನೆ. ಪ್ರಾಣಿವಲಯದ ಭಾಗದಲ್ಲಿ ಜೈವಿಕ ಕ್ರಿಯೆಗಳ ಪ್ರಮಾಣ ಹೆಚ್ಚು. ಇದರಿಂದಾಗಿ ಅಲ್ಲಿ ಕೋಶವಿಭಜನೆ ತೀವ್ರಗತಿಯಲ್ಲಿ ನಡೆಯುತ್ತಿರುತ್ತದೆ. ಪ್ರಾಣಿವಲಯದಿಂದ ಕೆಳಗೆ ಬಂದಂತೆ ಈ ಕೋಶವಿಭಜನಾ ಪ್ರಮಾಣದ ಗತಿ ಕಡಿಮೆಯಾಗುತ್ತ ಬರುತ್ತದೆ. ಇದರಿಂದಾಗಿ ಚೈಲ್ಡ್, ಮೊಟ್ಟೆಯಲ್ಲಿ ಮೆಟಬಾಲಿಕ್ ಆ್ಯಕ್ಸಿಯಲ್ ಗ್ರೇಡಿಯೆಂಟ್ ಒಂದು ಕೊನೆಯಿಂದ ಮತ್ತೊಂದು ಕೊನೆಯವರೆಗೆ ಇರುತ್ತದೆ ಎಂಬ ತೀರ್ಮಾನಕ್ಕೆ ಬಂದ. ಈ ಆ್ಯಕ್ಸಿಯಲ್ ಗ್ರೇಡಿಯೆಂಟ್ ಸ್ಥಿತಿಗತಿಗಳು ಮೊಟ್ಟೆಯೊಳಗಿರುವ ಕೋಶರಸದಲ್ಲಿರುವ ವಿವಿಧ ರಾಸಾಯನಿಕ ವಸ್ತುಗಳಿಗೆ ಸಂಬಂಧಿಸಿರುವುದನ್ನು ಸೂಚಿಸಿದನು. ಡ್ರೋಸಾಫಿಲ ನೊಣದ ಮೊಟ್ಟೆಯನ್ನೇ ತೆಗೆದುಕೊಂಡರೆ ಅದರಲ್ಲಿರುವ ವಿವಿಧ ಭಾಗಗಳ ಕೋಶರಸದ ಸ್ಥಿತಿಗತಿಗಳನ್ನು ಹಾಗೂ ಅದರ ಆಕಾರವನ್ನು ಅಭ್ಯಾಸಮಾಡಿದರೆ ಮೊಟ್ಟೆಯ ಬೆಳೆವಣಿಗೆಯ ಪರಿಸರ ಅತಿ ಮುಖ್ಯ ಎಂಬುದು ಅರ್ಥವಾಗುತ್ತದೆ. ಚೈಲ್ಡ್ ಈ ತತ್ವವನ್ನು ಕಡಲ ಕುಡಿಕೆಗಳಲ್ಲಿ ಪ್ರಾಯೋಗಿಕವಾಗಿ ತೋರಿಸಿದ್ದಾನೆ. ಈ ತತ್ವವನ್ನೇ ಆಧರಿಸಿದ ಸುಧಾರಿತ ವಿವರಣೆಗಳು ಈಗ ಲಭ್ಯ. ಭ್ರೂಣಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿವಿಜೇತನಾದ ಸ್ಟೀಮನ್ನನ ಆರ್ಗ್ನೈಸರ್್ಸ ತತ್ವ ಅತಿ ಮುಖ್ಯವಾದದ್ದು. ಆದರೆ ಈ ತತ್ವಪ್ರತಿಪಾದನೆಗೆ ಆತ ಉಪಯೋಗಿಸಿದ ಜೀವಿ ಕಶೇರುಕ. ಒಟ್ಟಿನಲ್ಲಿ ಹೇಳುವುದಾದರೆ ಭ್ರೂಣಶಾಸ್ತ್ರದಲ್ಲಿ ಫಲಿತ ಮೊಟ್ಟೆಯೊಳಗೆ ನಡೆಯುವ ನಾನಾ ಭೌತಿಕ ಹಾಗು ರಾಸಾಯನಿಕ ಕ್ರಿಯೆಗಳನ್ನು ಚಾಚೂ ತಪ್ಪದಂತೆ ಪ್ರತಿ ಹಂತದಲ್ಲಿಯೂ ಅಭ್ಯಾಸಮಾಡಲು ಸಹಾಯಕವಾಗಿದೆ. ಆದುದರಿಂದ ಭ್ರೂಣಶಾಸ್ತ್ರದ ಅಧ್ಯಯನ ಮೊಟ್ಟೆ ಹಾಗೂ ವೀರ್ಯಾಣುಗಳ ಮಿಲನದಿಂದ ಆರಂಭವಾಗುತ್ತದೆ. ಮೊಟ್ಟೆಯಿಂದ ಮರಿ ಹೊರಬರುವವರೆಗಿನ ಪರಿಶೀಲನೆಯೆಲ್ಲ ಅದರ ಪರಿಮಿತಿಯಲ್ಲಿ ಸೇರುತ್ತದೆ.[]

ಉಲ್ಲೇಖ

[ಬದಲಾಯಿಸಿ]
  1. http://kn.vikaspedia.in/health/women-health/c85c95cb6cb0cc1c95-cadccdcb0cc2ca3cb6cbecb8ccdca4ccdcb0