ಅಂಶ - ಚತುರ್ಥಕ ಕಾರ್ಯಕ್ರಮ

ವಿಕಿಪೀಡಿಯ ಇಂದ
Jump to navigation Jump to search

ಅಂಶ - ಚತುರ್ಥಕ ಕಾರ್ಯಕ್ರಮ[ಬದಲಾಯಿಸಿ]

  1. ಅಮೇರಿಕ ಸರ್ಕಾರ 1949ರಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ದೇಶಗಳಿಗೆ ತಾಂತ್ರಿಕ ನೆರವು ನೀಡಲು ಪ್ರಾರಂಭಿಸಿದ ಒಂದು ಕಾರ್ಯಕ್ರಮ. 1949 ಜನವರಿ 20ರಂದು ಪ್ರೆಸಿಡೆಂಟ್ ಹ್ಯಾರಿ ಎಸ್. ಟ್ರೂಮನ್ನರು ಅಮೆರಿಕದ ಕಾಂಗ್ರೆಸ್ಸಿನಲ್ಲಿ ಮಾಡಿದ ಭಾಷಣದ ನಾಲ್ಕನೆಯ ಅಂಶದಲ್ಲಿ ಈ ವಿಷಯ ಪ್ರತಿಪಾದಿತವಾಗಿದ್ದುದರಿಂದ ಈ ಹೆಸರು ಬಂದಿತು.
  2. ಅಧ್ಯಕ್ಷ ಟ್ರೂಮನ್ ಹೇಳಿದ್ದೇನೆಂದರೆ ‘ನಾಲ್ಕನೆಯದಾಗಿ, ನಮ್ಮ ವಿಜ್ಞಾನದ ಮುನ್ನಡೆ ಮತ್ತು ಔದ್ಯೋಗಿಕಾಭಿವೃದ್ಧಿ ಇವುಗಳ ನೆರವನ್ನು ಅಭಿವೃದ್ಧಿ ಹೊಂದದ ದೇಶಗಳ ಏಳಿಗೆಗೂ ಬೆಳೆವಣಿಗೆಗೂ ಒದಗುವಂತೆ ಮಾಡಲು ನಾವು ಧೃತಿಗೊಂಡು ಒಂದು ಹೊಸ ಕಾರ್ಯಕ್ರಮವನ್ನು ಹಾಕಿಕೊಂಡು ಅದನ್ನು ನಡೆಸಬೇಕಾಗಿದೆ. ಶಾಂತಿಪ್ರಿಯರಾದ ಜನಗಳಿಗೆ ನಮ್ಮ ತಾಂತ್ರಿಕ ವಿಜ್ಞಾನದ ಬೊಕ್ಕಸವನ್ನು ತೆರೆದು, ಅವರು ತಮ್ಮ ಉತ್ತಮ ಜೀವನದಾಸೆಗಳನ್ನು ಪುರೈಸಿಕೊಳ್ಳಲು ನಾವು ನೆರವು ನೀಡಬೇಕು......ತಮ್ಮ ತಾಂತ್ರಿಕ ಜ್ಞಾನದ ಸಂಪನ್ಮೂಲಗಳನ್ನು ಈ ಕೆಲಸಕ್ಕಾಗಿ ಒಟ್ಟುಗೂಡಿಸಲು ಇತರ ದೇಶಗಳನ್ನು ನಾವು ಆಹ್ವಾನಿಸುತ್ತೇವೆ. ಇದು ವಿಶ್ವಸಂಸ್ಥೆ ಮತ್ತು ಅದರ ಎಲ್ಲ ವಿಶಿಷ್ಟ ನಿಯೋಗಗಳ ಮೂಲಕ ಎಲ್ಲೆಲ್ಲಿ ಕಾರ್ಯಗತ ಮಾಡಲು ಸಾಧ್ಯವಾಗುತ್ತದೋ ಅಲ್ಲಲ್ಲಿ ಎಲ್ಲ ರಾಷ್ಟ್ರಗಳೂ ಸಹಕರಿಸಿ ವರ್ತಿಸುವ ಉದ್ಯಮವಾಗಬೇಕು. ಮುಖ್ಯವಾಗಿ ತಾಂತ್ರಿಕ ನೆರವನ್ನು ಕೊಡುವ ಸಲುವಾಗಿಯೇ ಈ ಕಾರ್ಯಕ್ರಮವೇರ್ಪಟ್ಟಿತು; ದೇಶಾಭಿವೃದ್ಧಿಗಾಗಿ ಮೂಲಧನವನ್ನು ಒದಗಿಸುವುದಕ್ಕಲ್ಲ. 1949ರಲ್ಲಿ ಅಮೆರಿಕದ ಸ್ಟೇಟ್ ಕಾರ್ಯದರ್ಶಿಯವರು ವಿವರಿಸಿದಂತೆ, ಇದು ತಾಂತ್ರಿಕತಜ್ಞರ ವೇತನ ಮತ್ತು ಇತರ ವೆಚ್ಚಗಳನ್ನು ಒಳಗೊಂಡಿದೆ; ಬೃಹತ್ ಪ್ರಮಾಣದಲ್ಲಿ ಯಂತ್ರಸಾಮಗ್ರಿಗಳನ್ನು ಮತ್ತು ಕಚ್ಚಾವಸ್ತುಗಳನ್ನು ಕೊಂಡುಕೊಳ್ಳುವ ವೆಚ್ಚವನ್ನಲ್ಲ. ಆದರೂ ಖಾಸಗಿಯಾಗಿ ಅಮೆರಿಕ ದೇಶದವರು ಅನಭಿವೃದ್ಧಿ ದೇಶಗಳಿಗೆ ಮೂಲಧನವನ್ನು ಒದಗಿಸುವ ಪ್ರವೃತ್ತಿಗೆ ಉತ್ತೇಜನ ಕೊಡುವುದು ಅಂಶ-ಚತುರ್ಥಕ ಉದ್ದೇಶಗಳಲ್ಲೊಂದು.
  3. 1949-52ರ ನಡುವೆ ಏಷ್ಯ, ಆಫ್ರಿಕ ಮತ್ತು ಲ್ಯಾಟಿನ್ ಅಮೆರಿಕದ 30 ದೇಶಗಳು ಅಂಶ-ಚತುರ್ಥಕದ ಪ್ರಕಾರ ತಾಂತ್ರಿಕ ಸಹಾಯವನ್ನು ಪಡೆದಿವೆ. ಈ ಕಾರ್ಯಕ್ರಮದ ನೆರವನ್ನು ಪ್ರಥಮತಃ ಪಡೆದ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿತ್ತು. ಇದನ್ನು ಒಂದು ಕಾನೂನಿನ ಮೂಲಕ ಸ್ಟೇಟ್ ಕಾರ್ಯದರ್ಶಿಯವರು ನಿರ್ವಹಿಸಿದರು. ಈ ಕಾನೂನಿಗೆ ಅಂತಾರಾಷ್ಟ್ರೀಯ ಅಭಿವೃದ್ಧಿ ಕಾನೂನು ಎಂದು ಹೆಸರು. ಇದನ್ನು ಈ ಉದ್ದೇಶಕ್ಕಾಗಿಯೇ 1950ರಲ್ಲಿ ಕಾರ್ಯಗತಗೊಳಿಸಲಾಯಿತು. ವರ್ಷವೊಂದಕ್ಕೆ 50 ದಶಲಕ್ಷ ಡಾಲರ್ ವೆಚ್ಚದಿಂದ ಈ ಕಾರ್ಯಾಚರಣೆ ಪ್ರಾರಂಭವಾಯಿತು.
  4. ಅಂಶ-ಚತುರ್ಥಕ ಕಾರ್ಯಕ್ರಮ ತನ್ನ ಮೂಲ ರೂಪದಲ್ಲಿ ಸು. 3 ವರ್ಷಗಳ ಕಾಲ ಮಾತ್ರ ಜರುಗಿತು. 1952ರಿಂದೀಚೆಗೆ ಅಭಿವೃದ್ಧಿಗೊಳ್ಳದ ದೇಶಗಳಿಗೆ ಅಮೆರಿಕದ ಸಹಾಯ ಪರಸ್ಪರ ಸಂರಕ್ಷಣ ಕಾನೂನಿನ ಪ್ರಕಾರ ಮೂಲ ಧನದ ಎಂದರೆ, ಅಮೆರಿಕದ ಯಂತ್ರಸಾಮಗ್ರಿಗಳನ್ನು ಮತ್ತು ಕಚ್ಚಾವಸ್ತುಗಳನ್ನು ಕೊಳ್ಳಲು ಹಣದ ಸಹಾಯವನ್ನೂ ಒಳಗೊಳ್ಳುವಂತೆ ವಿಸ್ತೃತವಾಯಿತು. 1956ರಿಂದೀಚೆಗೆ ಅಮೆರಿಕ ದೇಶ ಪಬ್ಲಿಕ್ ಲಾ-480 ಎಂಬ ವಿಧಿಯ ಮೂಲಕ (ಇದು ತಮ್ಮಲ್ಲಿ ಅಧಿಕವಾಗಿ ಶೇಖರವಾಗಿರುವ ಕೃಷಿವಸ್ತುಗಳನ್ನು ಹೊರಗೆ ವಿಲೇವಾರಿ ಮಾಡಲು ಅವರು ಬಳಸಿದ ಒಂದು ಕಾನೂನು) ತನ್ನಲ್ಲಿ ಹೆಚ್ಚುವರಿಯಾಗಿರುವ ಗೋಧಿ ಮತ್ತು ಹತ್ತಿಯನ್ನು ಕೊಡುವುದರ ಮೂಲಕ ಸಹಾಯ ಮಾಡಲು ಪ್ರಾರಂಭಿಸಿತು. ತಾಂತ್ರಿಕ ಸಹಾಯ ಮೊದಲು ಅಂತಾರಾಷ್ಟ್ರೀಯ ಸಹಕಾರಾಡಳಿತ, ಆ ಬಳಿಕ ಅಂತಾರಾಷ್ಟ್ರೀಯ ಅಭಿವೃದ್ಧಿ ನಿಯೋಗ-ಇವುಗಳಿಂದ ನಿರ್ವಹಿಸಲ್ಪಟ್ಟು, ಅಭಿವೃದ್ಧಿಗೊಳ್ಳದ ದೇಶಗಳಿಗೆ ಸಹಾಯವನ್ನು ನೀಡಲು ಸುಸಂಘಟಿತವಾದ ಯೋಜನೆಯೊಂದರ ಅಂಗವಾಗಿ ಪರಿಣಮಿಸಿತು.
  5. 1950ರಲ್ಲಿ ವಿಶ್ವಸಂಸ್ಥೆ ‘ವಿಸ್ತೃತ ತಾಂತ್ರಿಕ ಸಹಾಯ ಕಾರ್ಯಕ್ರಮ’ವನ್ನು ಮೊದಲು ಪ್ರಾರಂಭಿಸಲು ಅಂಶ-ಚತುರ್ಥಕ ಕಾರ್ಯಕ್ರಮ ತಕ್ಕಷ್ಟು ಪ್ರಭಾವವನ್ನು ಬೀರಿತು. ವಿಶ್ವಸಂಸ್ಥೆಯ ಕಾರ್ಯಕ್ರಮಗಳಿಗೆ ಅಮೆರಿಕ ತನ್ನ ಕೊಡುಗೆಯನ್ನು ಅಧಿಕಾಂಶದಲ್ಲಿ ನೀಡುವ ದೇಶವಾಗಿದೆ. ತಮಗಿಂತ ಹೀನಸ್ಥಿತಿಯಲ್ಲಿರುವ ರಾಷ್ಟ್ರಗಳಿಗೆ ಸುಸ್ಥಿತಿಯಲ್ಲಿರುವ ರಾಷ್ಟ್ರಗಳು ಸಾಧ್ಯವಾದಷ್ಟು ಸಹಾಯ ಸಂಪತ್ತಿಯನ್ನು ಒದಗಿಸುವಂತೆ ಅಂಶ-ಚತುರ್ಥಕ ಮೇಲುಪಂಕ್ತಿಯನ್ನು ಹಾಕಿಕೊಟ್ಟಿದೆ.