ಅಂಗಡಿ (ಊರು)
Jump to navigation
Jump to search
ಅಂಗಡಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಒಂದು ಪಟ್ಟಣ. ಈ ಸ್ಥಳದ ಪೂರ್ವನಾಮ ಸೊಸೆವೂರು.[೧][೨]
ಇತಿವೃತ್ತ[ಬದಲಾಯಿಸಿ]
- ಸಳನು ಇಲ್ಲಿನ ದೇವತೆಯಾದ ವಾಸಂತಿಕ ದೇವಿ ದೇವಾಲಯದಲ್ಲಿ ಜೈನ ಮುನಿ ಸುದತ್ತರ ಶಿಷ್ಯನಾಗಿ ವಿದ್ಯಾಭ್ಯಾಸ ಮಾಡುತಿದ್ದನು. ಆ ಸಮಯದಲ್ಲಿ ಹುಲಿಯೊಂದು ಅಕ್ರಮಣ ಮಾಡಲು, ಗುರುಗಳಾದ ಸುದತ್ತರು ಸಳನಿಗೆ 'ಹೊಯ್ ಸಳ' (ಹೊಯ್=ಹೊಡೆ, ಕೊಲ್ಲು) ಎನ್ನಲು, ಸಳನು ಆ ಹುಲಿಯನ್ನು ಕೊಂದನು.
- ಮುಂದೆ ಸಳನು ಸ್ಥಾಪಿಸಿದ ಸಾಮ್ರಾಜ್ಯವು ಹೊಯ್ಸಳ ಸಾಮ್ರಾಜ್ಯ ಎಂದು ಪ್ರಸಿದ್ದಿಯಾಯಿತು. ಇಂದು ಅಲ್ಲಿ ಹೊಯ್ಸಳರ ಹಳೆಯ ರಾಜಧಾನಿಯ ಕುರುಹುಗಳಿವೆ. ಮುಂದೆ ಅವರು ಬೇಲೂರಿಗೆ ಹೋದುದರಿಂದ ಇದರ ಬಗ್ಗೆ ಗಮನ ಕಡಿಮೆಯಾಗಿತ್ತು.
ಅಂಗಡಿ ವೈಶಿಷ್ಟ್ಯ[ಬದಲಾಯಿಸಿ]
- ಘಟ್ಟದಿಂದ ಕರಾವಳಿಗೆ ಹೋಗುವ ಮಾರ್ಗದ ಮಧ್ಯದಲ್ಲಿರುವ ಈ ಸ್ಥಳದಲ್ಲಿದ್ದ ಅಂಗಡಿಗಳಿಂದಾಗಿ ಇದಕ್ಕೆ ಈ ಹೆಸರು ಬಂದಿದೆಯಂದು ಊಹಿಸಲಾಗಿದೆ. 11-12ನೆಯ ಶತಮಾನದ ಶಾಸನಗಳಲ್ಲಿ ಇದನ್ನು ಸೊಸವೂರು ಎಂದು ಕರೆದಿದೆ. ಬುಕ್ಕರಾಯನ ಕಾಲದಲ್ಲೂ (1359) ಇದೇ ಹೆಸರಿತ್ತು. ಆದರೆ ಅಚ್ಚುತರಾಯನ ಕಾಲದ ಹೊತ್ತಿಗೆ (1539) ಅಂಗಡಿ ಎಂಬ ಹೆಸರು ಪ್ರಚಾರಕ್ಕೆ ಬಂದಿತ್ತು. ವಿಷ್ಣುವರ್ಧನನ ಕಾಲದ ಶಶಪುರ, ಶಶಕಪುರ ಎಂಬ ಹೆಸರುಗಳೂ ಈ ಊರನ್ನೇ ನಿರ್ದೇಶಿಸುತ್ತವೆ.
- ಈ ಸೊಸವೂರು ಹೊಯ್ಸಳರ ಮೂಲಸ್ಥಾನವಾಗಿತ್ತು. ಸಳ ಇಲ್ಲಿ ಹುಲಿಯನ್ನು ಕೊಂದು ಹೊಯ್ಸಳ ವಂಶದ ಹೆಸರಿಗೆ ಕಾರಣನಾದ ಎಂದು ಅನೇಕ ಶಾಸಗಳು ತಿಳಿಸುತ್ತವೆ. ನೃಪಕಾಮ ಸೊಸವೂರಿನಿಂದ ಆಳುತ್ತಿದ್ದ. ಇವನ ಮಗ ವಿನಯಾದಿತ್ಯ ತನ್ನ ರಾಜಧಾನಿಯನ್ನು ದೋರ ಸಮುದ್ರಕ್ಕೆ ಬದಲಾಯಿಸಿದಂತೆ ತೋರುತ್ತದೆ. ಮುಂದೆ ಬಂದ ಹಲವು ಹೊಯ್ಸಳ ಅರಸರು ತಮ್ಮ ಪೂರ್ವಜರ ಹುಟ್ಟೂರಾದ ಅಂಗಡಿಗೆ ಹೋಗಿ ಬರುತ್ತಿದ್ದರೆಂದು ಅವರ ಶಾಸನಗಳಿಂದ ತಿಳಿದುಬರುತ್ತದೆ.
- ಹೊಯ್ಸಳರ ಕುಲದೇವತೆಯಾದ ವಾಸಂತಿಕಾ ದೇವಿಯೇ ಇಲ್ಲಿನ ಮುಖ್ಯ ದೇವತೆಯಾದ ವಸಂತಮ್ಮ ಎಂದು ಹೇಳಲಾಗಿದೆ. ಅನೇಕ ಜೈನಯತಿಗಳು ಇಲ್ಲಿದ್ದು ಬಸದಿಗಳನ್ನುಕಟಿಸಿದ್ದರೆಂಬುದಕ್ಕೂ ಶಾಸನಾಧಾರಗಳಿವೆ. ಅಂಗಡಿಯ ಪಕ್ಕದಲ್ಲಿರುವ ಉಗ್ಗೇಹಳ್ಳಿಯಲ್ಲಿ ಕೋಟೆಹರವೆಂಬ ಪ್ರದೇಶವಿದೆ. ಇಲ್ಲಿರುವ ಒಂದು ಶಾಸನ ರಾಚಮಲ್ಲಪೆರ್ಮಾನಡಿಕಾಮ ಹೊಯ್ಸಳನ ಕಾಲದ್ದು.
- ಇಲ್ಲಿರುವ ವಾಸಂತಿಕಾ ಗುಡಿ ಹೆಂಚು ಹೊದಿಸಿರುವ ಈಚಿನ ಕಟ್ಟಡ ಒಳಗೆ ಐದು ದೇವಿಯರ ಮೃಣ್ಮೂರ್ತಿಗಳಿವೆ. ಅವಕ್ಕೆ ಪಂಚಮುಖ ಅಥವಾ ತ್ರಿಮುಖಗಳಿವೆ. ಅವು ಶಕ್ತಿದೇವತೆಗಳಿಗೆ ವಿಶಿಷ್ಟವಾದ ಆಯುಧಗಳನ್ನು ಹಿಡಿದಿವೆ. ಇಲ್ಲಿ ಸು.10-11ನೆಯ ಶತಮಾನದ ಎರಡು ಜೈನಬಸದಿಗಳ ಅವಶೇಷಗಳುಂಟು. ಇಲ್ಲಿರುವ ಕೇಶವ, ವೀರಭದ್ರ ಮತ್ತು ಶಿವ ದೇವಾಲಯಗಳೂ ಶಿಥಿಲವಾಗಿವೆ. ಕೇಶವ ದೇವಾಲಯದ ಮೂರ್ತಿ ಒಂದು ಉತ್ತಮ ಹೊಯ್ಸಳ ಶಿಲ್ಪ.
ಉಲ್ಲೇಖಗಳು[ಬದಲಾಯಿಸಿ]
- ↑ http://www.karnatakaholidays.com/angadi.php Archived 2017-12-13 at the Wayback Machine. accessdate 19 February 2017
- ↑ http://www.census2011.co.in/data/village/610011-angadi-karnataka.html
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: