ಅಪರ್ಣಾ ಪೋಪಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಪರ್ಣಾ ಪೋಪಟ್
— ಬ್ಯಾಡ್ಮಿಂಟನ್‌ ಆಟಗಾರ —
ವೈಯುಕ್ತಿಕ ಮಾಹಿತಿ
ಹುಟ್ಟು ಹೆಸರುಅಪರ್ಣಾ ಲಾಲ್ಜಿ ಪೋಪಟ್
ಹುಟ್ಟು (1978-01-18) ೧೮ ಜನವರಿ ೧೯೭೮ (ವಯಸ್ಸು ೪೬)
ಮುಂಬಯಿ, ಮಹಾರಾಷ್ಟ್ರ,ಭಾರತ
ವಾಸಸ್ಥಾನಮುಂಬಯಿ, ಮಹಾರಾಷ್ಟ್ರ,ಭಾರತ
ಎತ್ತರ1.63 m (5 ft 4 in)
ದೇಶಭಾರತ
ಆಡುವ ಕೈಬಲಗೈ
ಮಹಿಳೆಯರ ಸಿಂಗಲ್ಸ್
ಅತಿಹೆಚ್ಚಿನ ಸ್ಥಾನ೧೬
BWF profile

ಅಪರ್ಣಾ ಪೋಪಟ್( ಗುಜರಾತಿ : અપર્ણા પોપટ ; ಜನವರಿ 18 , 1978 ರಂದು ಜನನ) ಭಾರತದ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ. ಈಕೆ 1997 ರಿಂದ 2006 ರ ನಡುವೆ ಒಂಭತ್ತು ಬಾರಿ ಭಾರತೀಯ ಹಿರಿಯರ ರಾಷ್ಟ್ರೀಯ ಚಾಂಪಿಯನ್ಶಿಪ್ ಗೆದ್ದು ದಾಖಲೆ ನಿರ್ಮಿಸಿದ್ದಾರೆ.[೧]

ಆರಂಭಿಕ ಜೀವನ[ಬದಲಾಯಿಸಿ]

ಅಪರ್ಣಾ ಪೋಪಟ್ ಅವರು ಲಾಲ್ಜಿ ಪೋಪಟ್ ಮತ್ತು ಹೀನಾ ಪೋಪಟ್ ಎಂಬ ಗುಜರಾತಿ ದಂಪತಿಗಳಿಗೆ ಮಹಾರಾಷ್ಟ್ರದ ಮುಂಬಯಿನಲ್ಲಿ 18 ಜನವರಿ 1978 ರಂದು ಜನಿಸಿದರು. ಅವರು ಮುಂಬಯಿನ ಜೆಬಿ ಪೆಟಿಟ್ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣವನ್ನೂ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ತನ್ನ ಪದವಿ ಪೂರ್ವ ಶಿಕ್ಷಣವನ್ನು ಪೂರೈಸಿದರು. ಮುಂಬಯಿ ವಿಶ್ವವಿದ್ಯಾಲಯದಿಂದ ವಾಣಿಜ್ಯ ಶಾಸ್ತ್ರದಲ್ಲಿ ಪದವಿಯನ್ನೂ ಪಡೆದಿದ್ದಾರೆ.

ತರಬೇತಿ ಹಿನ್ನೆಲೆ[ಬದಲಾಯಿಸಿ]

ಅಪರ್ಣಾ ಮುಂಬಯಿನಲ್ಲಿರುವಾಗಲೇ 1986 ರಲ್ಲಿ ಬ್ಯಾಡ್ಮಿಂಟನ್ ಆಡಲು ಆರಂಭಿದರು. ಅಪರ್ಣಾ 8 ವರ್ಷದವರಿದ್ದಾಗ ಬ್ಯಾಡ್ಮಿಂಟನ್ ತರಬೇತುದಾರ ಅನಿಲ್ ಪ್ರಧಾನ್ ಅವರನ್ನು ತರಬೇತಿ ಪಡೆಯಲು ಸಂಪರ್ಕಿಸಿದರು. ಅವರು ಹುಡುಗಿಯಲ್ಲಿದ್ದ ಆತ್ಮಸ್ಥೈರ್ಯವನ್ನು ಕಂಡುಅಪರ್ಣಾಳ ಪೋಷಕರೊಟ್ಟಿಗೆ ಮಾತನಾಡಿ " ನಿಮ್ಮ ಮಗಳನ್ನು ತರಬೇತಿಗೆ ಕಳುಹಿಸಿ, ಒಂದು ದಿನ ಈಕೆ ಭಾರತೀಯ ಬ್ಯಾಡ್ಮಿಂಟನ್ ಭೂಪಟದಲ್ಲಿ ಮಿನುಗುತಾರೆಯಾಗುತ್ತಾಳೆ " ಎಂದು ಹೇಳಿದರು. ಸ್ವತಃ ರಾಷ್ಟ್ರೀಯ ಚಾಂಪಿಯನ್ ಆಗಿದ್ದ ಪ್ರಧಾನ್ ಅವರ ತರಬೇತಿಯ ಕೌಶಲಗಳು ಅಪರ್ಣಾಗೆ ಮುಂದೆ ಅನೇಕ ಸವಾಲುಗಳನ್ನು ಎದುರಿಸಲು ನೆರವಾಯಿತು .[೨] 1994 ರಲ್ಲಿ ಅಪರ್ಣಾ ಅವರು ತನ್ನ ಸಾಮರ್ಥ್ಯವನ್ನು ಬಲಪಡ್ಸಿಕೊಳ್ಳಲು ಬೆಂಗಳೂರಿನಲ್ಲ್ಲಿದ್ದ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯನ್ನು ಸೇರಿದರು . ಪ್ರಸಿದ್ಧ ಪ್ರಕಾಶ್ ಪಡುಕೋಣೆಯವರು ಮಾಜಿ ಆಲ್ ಇಂಗ್ಲೆಂಡ್ ಚಾಂಪಿಯನ್ ಆಗಿದ್ದರಿಂದ, ಅವರ ನೆರವಿನಲ್ಲಿ ತರಬೇತಿ ಪಡೆದದ್ದು , ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಂಡಿದ್ದು ಮತ್ತು ಅವರಿಂದ ಕಲಿತ ಅನೇಕ ತಂತ್ರಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಸ್ಪರ್ಧಾತ್ಮಕ ಹೋರಾಟ ನೀಡಲು ಅನುವಾಯಿತು. ತನ್ನ ಕಲಿಕೆಯ ಹಂಬಲವನ್ನು ನೀಗಿಕೊಳ್ಳದ ಅಪರ್ಣಾ 2002 ರಲ್ಲಿ ಬೆಂಗಳೂರಿನ ಕೆಂಗೇರಿಯಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ ತರಬೇತಿ ವಲಯಕ್ಕೆ ಸೇರಿಕೊಂಡರು. ಅಲ್ಲಿ ಆಕೆ ತರಬೇತುದಾರ ಗಂಗೂಲ ಪ್ರಸಾದ್ ಅವರ ನೆರವಿನೊಂದಿಗೆ ಆಟದ ಸೂಕ್ಷ್ಮಗಳನ್ನು ಅರಿತುಕೊಂಡರು.[೩]

ವೃತ್ತಿಜೀವನದ ಮುಖ್ಯಾಂಶಗಳು[ಬದಲಾಯಿಸಿ]

ಅಪರ್ಣಾ ಅವರು 1997 ರಲ್ಲಿ ಹೈದರಾಬಾದ್ ನಲ್ಲಿ ತನ್ನ ಮೊದಲ ಸೀನಿಯರ್ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡರು. ಅಪರ್ಣಾ ೧೯೯೭ ರಿಂದ ೨೦೦೫ ರ ವರೆಗೆ ಸತತವಾಗಿ ಒಂಭತ್ತು ಬಾರಿ ಸಿಂಗಲ್ಸ್ ನಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗುವ ಮೂಲಕ ಪ್ರಕಾಶ್ ಪಡುಕೋಣೆ ಯವರ ಈ ಮುಂಚಿನ ಅದೇ ದಾಖಲೆಯನ್ನು ಸರಿಗಟ್ಟಿದ ಏಕೈಕ ಭಾರತೀಯ ಆಟಗಾರರಾದರು. ಜನವರಿ 2006 ರಲ್ಲಿ ಬೆಂಗಳೂರಿನಲ್ಲಿ ನಡೆದ ಸೀನಿಯರ್ ನ್ಯಾಶನಲ್ಸ್ ಚಾಂಪಿಯನ್ಶಿಪ್ ನಲ್ಲಿ ಸೈನಾ ನೆಹ್ವಾಲ್ ಅವರನ್ನು ಸೋಲಿಸಿ ಸೀನಿಯರ್ ನ್ಯಾಶನಲ್ಸ್ ಚಾಂಪಿಯನ್ ಪಟ್ಟವನ್ನು ಹಾಗೆ ಉಳಿಸಿಕೊಂಡರು. ಅಪರ್ಣಾ ಅವರು ವೃತ್ತಿಪರರಾಗಿ ಆಡಿದ 17 ವರ್ಷಗಳಲ್ಲಿ 16 ರಾಷ್ಟ್ರೀಯ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದ ಏಕೈಕ ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ದಾಖಲೆಯನ್ನೂ ಹೊಂದಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಈಕೆ ಎರಡು ಬಾರಿ ಒಲಿಂಪಿಕ್ ಪಂದ್ಯಾವಳಿಯನ್ನು ಪ್ರತಿನಿಧಿದ್ದಾರೆ. ಒಮ್ಮೆ ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಮತ್ತು 1996 ರಲ್ಲಿ ವಿಶ್ವ ಜೂನಿಯರ್ ಚಾಂಪಿಯನ್ಶಿಪ್ನಲ್ಲಿ ಪದಕ ಮತ್ತು 3 ಕಾಮನ್ವೆಲ್ತ್ ಪಂದ್ಯಗಳಲ್ಲಿ 4 ಪದಕಗಳನ್ನು ಪಡೆದಿದ್ದಾರೆ. ಈ ಸಮಯದಲ್ಲಿ ವೃತ್ತಿಜೀವನದ ಗರಿಷ್ಠ ೧೬ ನೆಯ ವಿಶ್ವ ಶ್ರೇಯಾಂಕವನ್ನು ತಲುಪಿದ್ದು ಅವರ ಮತ್ತೊಂದು ಸಾಧನೆ .

ನಿವೃತ್ತಿ[ಬದಲಾಯಿಸಿ]

ವೃತ್ತಿಪರ ಬ್ಯಾಡ್ಮಿಂಟನ್ ಆಟದಲ್ಲಿ 17 ವರ್ಷಗಳು ಕಳೆದಿದ್ದಾಗ ಅವರು ಮಣಿಕಟ್ಟಿನ ಗಾಯದ ತೊಂದರೆಗೆ ಗುರಿಯಾದರು. ಇದರ ಸಲುವಾಗಿ 2006 ರಲ್ಲಿ ಆಟದಿಂದ ನಿವೃತ್ತರಾದರು . ಭಾರತದ ನಂ ೧ ಆಟಗಾರ್ತಿಯ ಪಟ್ಟದಲ್ಲಿದ್ದಾಗಲೇ ಅವರು ನಿವೃತ್ತರಾಗಿದ್ದು ವಿಶೇಷ. ಸದ್ಯಕ್ಕೆ ಅವರು ಮುಂಬಯಿನ ಇಂಡಿಯನ್ ಆಯಿಲ್ ಕಾರ್ಪೊರೇಷನ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.

ತರಬೇತಿ[ಬದಲಾಯಿಸಿ]

ಅಪರ್ಣಾ ಪೋಪಟ್ ಅವರು ೨೦೧೩ ರಲ್ಲಿ ಜರುಗಿದ ಭಾರತೀಯ ಬ್ಯಾಡ್ಮಿಂಟನ್ ಲೀಗ್ ನ ಮೊದಲ ಆವೃತ್ತಿಯಲ್ಲಿ ಮುಂಬಯಿ ಮಾಸ್ಟರ್ಸ್ ಪರ ತರಬೇತುದಾರರ ಪಾತ್ರವನ್ನು ವಹಿಸಿಕೊಂಡಿದ್ದರು.[೪]

ಪ್ರಶಸ್ತಿಗಳು ಮತ್ತು ಸಾಧನೆಗಳು[ಬದಲಾಯಿಸಿ]

ಅಪರ್ಣಾ ಅವರಿಗೆ 2005 ಭಾರತದ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದು ಭಾರತ ಸರ್ಕಾರದಿಂದ ನೀಡಲಾಗುವ ಪ್ರಶಸ್ತಿ. ಅಮೇರಿಕ ಸಂಯುಕ್ತ ಸಂಸ್ಥಾನದ ಆಡಳಿತ ಕಾರ್ಯದರ್ಶಿಯಾಗಿದ್ದ ಹಿಲರಿ ಕ್ಲಿಂಟನ್ ರವರ ಆಶಯದಂತೆ ಆಯೋಜಿಸಲಾಗಿದ್ದ ಜಾಗತಿಕ ಕ್ರೀಡಾ ಅಭ್ಯುದಯ ಮೇಳದಲ್ಲಿ ಭಾಗವಹಿಸಿದ್ದ ವಿಶ್ವದ ೧೭ ಕ್ರೀಡಾಳುಗಳುಗಳಲ್ಲಿ ಅಪರ್ಣಾ ಕೂಡಾ ಒಬ್ಬರಾಗಿದ್ದರು. ವಿಶ್ವದಲ್ಲಿ ಮಹಿಳೆಯರನ್ನು ಕ್ರೀಡೆಯ ಮುಖ್ಯವಾಹಿನಿಗೆ ತರಬೇಕೆಂಬ ಆಶಯದ ಈ ಮೇಳದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಏಕೈಕ ಕ್ರೀಡಾಳುವೂ ಸಹ ಇವರೇ ಆಗಿದ್ದರು. ಇದು ಈಕೆಗೆ ಸಂದಿದ್ದ ಮತ್ತೊಂದು ಗೌರವ.

ಸಾಧನೆಗಳು(ಕಾಲಾನುಕ್ರಮವಾಗಿ)[ಬದಲಾಯಿಸಿ]

1989 ಬೆಂಗಳೂರಿನಲ್ಲಿ ರಾಷ್ಟ್ರೀಯ ಪ್ರಶಸ್ತಿ ( 12 ವರ್ಷದೊಳಗಿನ )ಗೆದ್ದರು .ರಾಷ್ಟ್ರೀಯ ಮಟ್ಟದಲ್ಲಿ ಆಡಿದ ಮೊದನೆಯ ಪಂದ್ಯಾವಳಿ . 1990 ಸಬ್ ಜೂನಿಯರ್ ಬಾಲಕಿಯರ ವಿಭಾಗದಲ್ಲಿ ನ್ಯಾಷನಲ್ಸ್ ( 15 ವರುಷದೊಳಗಿನ ) ರನ್ನರ್ ಅಪ್ . 1991 ಬಾಲಕಿಯರ ರಾಷ್ಟ್ರೀಯ ಸಬ್ ಜೂನಿಯರ್ ಚಾಂಪಿಯನ್ ( 15 ರೊಳಗಿನ ). 1992 ರಾಷ್ಟ್ರೀಯ ಸಬ್ ಜೂನಿಯರ್ ಗರ್ಲ್ಸ್ ಚಂಪಿಯನ್ಶಿಪ್ ( 15 ) ಉಳಿಸಿಕೊಂಡಿದ್ದೂ ಅಲ್ಲದೆ ಹುಡುಗಿಯರ ( 18 ರೊಳಗಿನ ) ಜೂನಿಯರ್ ವರ್ಗದಲ್ಲಿ ಅಂತಿಮ ಹಂತತಲುಪಿದರು. ಅಲ್ಲದೆ ಜಕಾರ್ತಾದಲ್ಲಿ ನಡೆದ ವಿಶ್ವ ಜೂನಿಯರ್ ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಲು ಅವಕಾಶ ಸಿಕ್ಕಿತು . ಇದು ಈಕೆಯ ಮೊದಲ ಅಂತರರಾಷ್ಟ್ರೀಯ ಪಂದ್ಯಾವಳಿ ಆಗಿತ್ತು. 1993 ಪುಣೆಯಲ್ಲಿ ಜರುಗಿದ ಜೂನಿಯರ್ ರಾಷ್ಟ್ರೀಯ ಪ್ರಶಸ್ತಿ (18 ) ಗೆದ್ದಿದ್ದಾರೆ . 1994 ಜೂನಿಯರ್ ರಾಷ್ಟ್ರೀಯ ಪ್ರಶಸ್ತಿ ( 18 ) ಉಳಿಸಿಕೊಂಡರು. ಕೌಲಾಲಂಪುರ್ ನಡೆದ ವಿಶ್ವ ಜೂನಿಯರ್ ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು . ಈ ವರ್ಷ ಅವರು ಪ್ರೇಗ್ ನಲ್ಲಿ ಜರುಗಿದ ಉಬರ್ ಕಪ್ ಚಾಂಪಿಯನ್ ಶಿಪ್ ಪಂದ್ಯಾವಳಿಗೆ ಭಾರತೀಯ ತಂಡದ ಭಾಗವಾಗಿ ಪದಾರ್ಪಣೆ ಮಾಡಿದರು. 1995 ಜೂನಿಯರ್ ರಾಷ್ಟ್ರೀಯ ಪ್ರಶಸ್ತಿ (18 ರೊಳಗೆ ) ಉಳಿಸಿಕೊಂಡರು . ಸೀನಿಯರ್ ನ್ಯಾಶನಲ್ಸ್ ನಲ್ಲಿ ಅಂತಿಮ ಹಂತ ತಲುಪಿದರು. 1996 ಹಾಂಗ್ ಕಾಂಗ್ ನಲ್ಲಿ ಜರುಗಿದ ಪ್ರಿನ್ಸ್ ಏಷ್ಯನ್ ಜೂನಿಯರ್ ಚಾಂಪಿಯನ್ಷಿಪ್ನಲ್ಲಿ ಗೆದ್ದು ಕಂಚಿನ ಪದಕ ಪಡೆದರು . ನಂತರ ಅದೇ ವರ್ಷ, ಆಕೆ ಡೆನ್ಮಾರ್ಕ್ ನಲ್ಲಿ ಜರುಗಿದ ವಿಶ್ವ ಜೂನಿಯರ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಗೆದ್ದರು. ಈ ಪಂದ್ಯಾವಳಿಯಲ್ಲಿ ಭಾರತದ ಕ್ರೀಡಾಳುವೊಬ್ಬರು ಗೆದ್ದ ಮೊಟ್ಟಮೊದಲ ಪದಕ ಅದಾಗಿತ್ತು . ಕಿರಿಯರ ರಾಷ್ಟ್ರೀಯ ಪ್ರಶಸ್ತಿ ( 19 ರೊಳಗೆ ) ಉಳಿಸಿಕೊಂಡರು ಮತ್ತು ಪುಣೆಯಲ್ಲಿ ನಡೆದ ಸೀನಿಯರ್ ನ್ಯಾಶನಲ್ಸ್ ನಲ್ಲಿ ಸ್ಪರ್ಧಿಯಾಗಿದ್ದರು. ಈ ವರುಷವೂ ಉಬರ್ ಕಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು . 1997 ಹಿಂದಿನ ಎರಡು ವರ್ಷಗಳಲ್ಲಿ ರನ್ನರ್ ಅಪ್ ಆಗಿದ್ದ ಅಪರ್ಣಾ, ಹೈದರಾಬಾದ್ ನಲ್ಲಿ ಜರುಗಿದ ರಾಷ್ಟ್ರೀಯ ಸೀನಿಯರ್ ಚಾಂಪಿಯನ್ ಶಿಪ್ ನಲ್ಲಿ ಮಂಜೂಷಾ ಕನ್ವರ್ ಅವರನ್ನು ನೇರ ಸೆಟ್ಗಳಿಂದ ಸೋಲಿಸಿ ತನ್ನ ಮೊದಲ ಸೀನಿಯರ್ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದರು. 1998 ಅಪರ್ಣಾಗೆ ಈ ವರುಷವು ಬ್ಯಾಡ್ಮಿಂಟನ್ ಆಟಗಾರ್ತಿಯಾಗಿ ಅತ್ಯಂತ ಸಫಲ ವರ್ಷಗಳಲ್ಲಿ ಒಂದಾಗಿತ್ತು . ಹಿರಿಯ ರಾಷ್ಟ್ರೀಯ ಪ್ರಶಸ್ತಿಯನ್ನು ಉಳಿಸಿಕೊಂಡ ಅವರು ಕೌಲಾಲಂಪುರ್ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಒಂದು ವೈಯಕ್ತಿಕ ಬೆಳ್ಳಿ ಪದಕ ಮತ್ತು ತಂಡದ ಪರ ಕಂಚಿನ ಪದಕವನ್ನು ಗೆದ್ದರು. ಅಲ್ಲದೆ , ಅವರು ಇದೇ ವರ್ಷದಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದು ಬ್ಯಾಂಕಾಕ್ ನಲ್ಲಿ ನೆಡೆದ ಉಬರ್ ಕಪ್ ಮತ್ತು ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿದರು . ಇದೇ ವರುಷ ಏಷ್ಯನ್ ಉಪಗ್ರಹ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗೆದ್ದರು. 1999 ಹಿಂದಿನ ವರ್ಷದ ಸಾಧನೆಯ ಓಟದಲ್ಲೇ ಅವರು ಇದೇ ವರುಷ ಫ್ರೆಂಚ್ ಓಪನ್ನಲ್ಲಿ ಮತ್ತು ಸ್ವೀಡಿಷ್ ಓಪನ್ ನಲ್ಲಿ ಸೆಮಿಫೈನಲ್ ತಲುಪಿ ರನ್ನರ್ ಅಪ್ ಆದರು. ಮಹಿಳೆಯರ ಸಿಂಗಲ್ಸ್ನಲ್ಲಿ ತನ್ನ ಹಿರಿಯ ರಾಷ್ಟ್ರೀಯ ಪ್ರಶಸ್ತಿಯನ್ನು ಉಳಿಸಿಕೊಂಡರು. ಮಹಿಳೆಯರ ಡಬಲ್ಸ್ ನಲ್ಲಿ ಅಂತಿಮ ಹಂತ ತಲುಪಿದರು. ಏಷ್ಯನ್ ಉಪಗ್ರಹ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗೆದ್ದುಕೊಂಡರು . 2000 ಈ ವರುಷ ಜರುಗಿದ ಸಿಡ್ನಿ ಒಲಿಂಪಿಕ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಭಾರತದ ಏಕೈಕ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದರು . ಉಬರ್ ಕಪ್ ನಲ್ಲಿ ಭಾರತ ಪ್ರತಿನಿಧಿಯಾಗಿದ್ದರು. ಸೀನಿಯರ್ ರಾಷ್ಟ್ರೀಯ ಪ್ರಶಸ್ತಿಯನ್ನು ಉಳಿಸಿಕೊಂಡರು. 2001 ಸೀನಿಯರ್ ರಾಷ್ಟ್ರೀಯ ಪ್ರಶಸ್ತಿಯನ್ನು ಉಳಿಸಿಕೊಂಡರು. ಏಷ್ಯನ್ ಉಪಗ್ರಹ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗೆದ್ದುಕೊಂಡರು. 2002 ಮ್ಯಾಂಚೆಸ್ಟರ್ನಲ್ಲಿ ಜರುಗಿದ ಕಾಮನ್ವೆಲ್ತ್ ಕ್ರೀಡಾಕೂಟದ ಮಹಿಳೆಯರ ಸಿಂಗಲ್ಸ್ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಕ್ರೀಡಾಕೂಟದಲ್ಲಿ ಪದಕ ಗಳಿಸಿದ ಏಕೈಕ ಭಾರತೀಯ ಕ್ರೀಡಾಳುವಾಗಿದ್ದರು. ಸೀನಿಯರ್ ರಾಷ್ಟ್ರೀಯ ಪ್ರಶಸ್ತಿಯನ್ನು ಉಳಿಸಿಕೊಂಡರು. ಉಬರ್ ಕಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು . 2003 ಸೀನಿಯರ್ ರಾಷ್ಟ್ರೀಯ ಪ್ರಶಸ್ತಿಯನ್ನು ಉಳಿಸಿಕೊಂಡರು. ಏಷ್ಯನ್ ಉಪಗ್ರಹ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗೆದ್ದುಕೊಂಡರು . 2004 ಗ್ರೀಸ್ ನ ಅಥೆನ್ಸ್ ನಲ್ಲಿ ನಡೆದ ತನ್ನ ಎರಡನೇ ಒಲಿಂಪಿಕ್ ಗೇಮ್ಸ್ ಅ ನಲ್ಲಿ ಭಾಗವಹಿಸಿ ಪೂರ್ವ ಕ್ವಾರ್ಟರ್ ಫೈನಲ್ ತಲುಪಿದ ಏಕೈಕ ಭಾರತದ ಕ್ರೀಡಾಳುವಾದರು. ಈ ಹಂತದಲ್ಲಿ ಅವರು 2 ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಏಕೈಕ ಭಾರತೀಯ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಎನಿಸಿಕೊಂಡರು . ಸೀನಿಯರ್ ರಾಷ್ಟ್ರೀಯ ಪ್ರಶಸ್ತಿಯನ್ನು ಉಳಿಸಿಕೊಂಡರು . ಉಬರ್ ಕಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು . 2005 ಸೀನಿಯರ್ ರಾಷ್ಟ್ರೀಯ ಪ್ರಶಸ್ತಿಯನ್ನು ಉಳಿಸಿಕೊಂಡರು. ಇದೇ ವರ್ಷ ಈಕೆಗೆ ಮಣಿಕಟ್ಟಿನ ನೋವು ಕಾಣಿಸಿಕೊಂಡಿತು. 2006 ಈ ವೇಳೆಗೆ ಮಣಿಕಟ್ಟಿನ ನೋವಿನ ಗಾಯ ಹೆಚ್ಚಾಗಿತ್ತು. ಆದರೂ ಸೀನಿಯರ್ ನ್ಯಾಶನಲ್ಸ್ ಆಡಲು ಮತ್ತು ತಮ್ಮ ದಾಖಲೆಯ 9 ಸತತ ಪ್ರಶಸ್ತಿಯನ್ನು ಗೆಲ್ಲಲು ಸಮರ್ಥರಾದರು . ನಂತರ ಜೈಪುರ ದಲ್ಲಿ ಜರುಗಿದ ಉಬರ್ ಕಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು . ಆಸ್ಟ್ರೇಲಿಯಾದ ಮೆಲ್ಬರ್ನ್ ನಲ್ಲಿ ಜರುಗಿದ್ದ ತನ್ನ 3 ನೇ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ತಲುಪಿದರು ಮತ್ತು ತಂಡದ ಚಾಂಪಿಯನ್ಷಿಪ್ಗಳಲ್ಲಿ ಒಂದು ಕಂಚಿನ ಪದಕ ಗೆದ್ದು ಸಾಧನೆ ಮಾಡಿದರು. ಇದು ಅಪರ್ಣಾ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯಾವಳಿಯಾಗಿತ್ತು. . ಮಣಿಕಟ್ಟಿನ ತೊಂದರೆಯಿಂದಾಗಿ ದೇಶದ ನಂ ೧ ಆಟಗಾರ್ತಿಯ ಪಟ್ಟದಲ್ಲಿದ್ದಾಗಲೇ ಆಟದಿಂದ ನಿವೃತ್ತಿಯನ್ನು ಘೋಶಿಸಿದರು.

ಉಲ್ಲೇಖನಗಳು[ಬದಲಾಯಿಸಿ]

  1. "Mumbai Masters – Aparna Popat". Badminton India. Archived from the original on 14 ಆಗಸ್ಟ್ 2013. Retrieved 14 August 2013. {{cite web}}: Italic or bold markup not allowed in: |publisher= (help)
  2. "Aparna Popat's Profile". Studyrays. Archived from the original on 31 ಜುಲೈ 2012. Retrieved 14 August 2013. {{cite web}}: Italic or bold markup not allowed in: |publisher= (help)
  3. "Aparna Popat to train with Ganguly Prasad". The Times of India. 19 August 2001. Archived from the original on 14 ಆಗಸ್ಟ್ 2013. Retrieved 14 August 2013. {{cite news}}: Italic or bold markup not allowed in: |publisher= (help)
  4. "ಆರ್ಕೈವ್ ನಕಲು". Archived from the original on 2016-03-04. Retrieved 2013-10-26.