ಎಂ. ಆರ್. ಶ್ರೀನಿವಾಸಮೂರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಂ. ಆರ್. ಶ್ರೀನಿವಾಸ ಮೂರ್ತಿ
Bornಆಗಸ್ಟ್ ೨, ೧೮೯೨
ಮೈಸೂರು
Diedಸೆಪ್ಟೆಂಬರ್ ೧೬, ೧೯೫೩
Occupation(s)ಪ್ರಾಧ್ಯಾಪಕರು, ಸಾಹಿತಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು

ಎಂ. ಆರ್. ಶ್ರೀನಿವಾಸಮೂರ್ತಿ (ಆಗಸ್ಟ್ ೨, ೧೮೯೨ - ಸೆಪ್ಟೆಂಬರ್ ೧೬, ೧೯೫೩) ಅವರು ಆಧುನಿಕ ಯುಗದಲ್ಲಿ ಕನ್ನಡಕ್ಕಾಗಿ ದುಡಿ, ಕನ್ನಡವನ್ನು ಬೆಳೆಸಿದ ಮಹಾನೀಯರಲ್ಲಿ ಪ್ರಮುಖರು. ಕನ್ನಡ ಸಾಹಿತ್ಯದಲ್ಲಿ ಅವರು ಎಂ. ಆರ್. ಶ್ರೀ ಎಂದೇ ಪ್ರಖ್ಯಾತರು.

ಜೀವನ[ಬದಲಾಯಿಸಿ]

ಎಂ. ಆರ್. ಶ್ರೀನಿವಾಸ ಮೂರ್ತಿ ಅವರು ಆಗಸ್ಟ್ ೨, ೧೮೯೨ರಂದು ಮೈಸೂರಿನಲ್ಲಿ ಜನಿಸಿದರು. ತಂದೆಯವರಾದ ರಾಮಚಂದ್ರರಾಯರು ಅಬ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ತಾಯಿ ಸಾವಿತ್ರಮ್ಮನವರು. ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಎಂ. ಆರ್. ಶ್ರೀ ಅವರಿಗೆ ಪದ್ಯ ಬರೆಯುವ ಹವ್ಯಾಸ. ಸೆಂಟ್ರಲ್ ಕಾಲೇಜಿನಲ್ಲಿ ವಿಜ್ಞಾನದ ವಿದಾರ್ಥಿಯಾಗಿ ಎಫ್. ಎ ವ್ಯಾಸಂಗ ಮಾಡುತ್ತಿದ್ದಾಗ ಅವರಿಗೆ ವೆಂಕಟರಾವ್ ತೆಲಾಂಗ್ ಎಂಬ ಸಾಹಿತ್ಯ ವಿದ್ಯಾರ್ಥಿಯ ಪರಿಚಯವಾಯಿತು. ಆತನ ಸಹವಾಸದಿಂದ ಅವರಿಗೆ ಅನೇಕ ಕನ್ನಡ ಕಾವ್ಯಗಳ ಪರಿಚಯವಾಯಿತು. ಅದರ ಫಲವಾಗಿ ಸೆಂಟ್ರಲ್ ಕಾಲೇಜಿನ ಗ್ರಂಥಾಲಯದಲ್ಲಿದ್ದ ಸಾಹಿತ್ಯ ಗ್ರಂಥಗಳನ್ನೆಲ್ಲಾ ಶ್ರದ್ಧೆಯಿಂದ ಓದತೊಡಗಿದರು. ಎಂ. ಆರ್. ಶ್ರೀ ಅವರ ಸ್ಮರಣಶಕ್ತಿ ಅಪಾರವಾಗಿದ್ದುದರಿಂದ ಹಳಗನ್ನಡ ಕಾವ್ಯಗಳ ಅನೇಕ ಭಾಗಗಳು, ಶಿವಶರಣರ ವಚನಗಳು ಇವರಿಗೆ ಕಂಠಸ್ತವಾಗಿದ್ದವು. ೧೯೧೫ರಲ್ಲಿ ಪದವೀಧರರಾದ ಎಂ. ಆರ್. ಶ್ರೀ ಅವರು ಶಿವಮೊಗ್ಗ, ತೀರ್ಥಹಳ್ಳಿ, ಬೆಂಗಳೂರುಗಳಲ್ಲಿ ಅಧ್ಯಾಪಕರಾಗಿ ಕೆಲಕಾಲ ಕೆಲಸ ಮಾಡಿ ೧೯೨೨ರ ಪ್ರಾರಂಭದಲ್ಲಿ ಸ್ನಾತಕೋತ್ತರ ಶಿಕ್ಷಣ ತರಬೇತಿಗೆಂದು ಮೈಸೂರಿಗೆ ಬಂದರು. ಮುಂದೆ ಮಂಡ್ಯ, ಬೆಂಗಳೂರು, ದೊಡ್ಡಬಳ್ಳಾಪುರ ಮುಂತಾದೆಡೆಗಳಲ್ಲಿ ಅಧ್ಯಾಪನ ಮತ್ತು ಶೈಕ್ಷಣಿಕ ಅಧಿಕಾರಗಳ ಜವಾಬ್ಧಾರಿಗಳನ್ನು ನಿರ್ವಹಿಸಿದರು. ೧೯೩೯ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟಿನ ಕೆಲಸಕ್ಕಾಗಿ ನಿಯೋಜಿತರಾಗಿ ಬಂದರು. ೧೯೪೩ರಲ್ಲಿ ಬೆಳ್ಳಾವೆ ವೆಂಕಟನಾರಾಣಪ್ಪನವರು ನಿಧನರಾದ ಮೇಲೆ ಪ್ರಧಾನ ಸಂಪಾದಕರಾಗಿ ನೇಮಕಗೊಂಡರು. ೧೯೪೭ರವರೆವಿಗೆ ಅಲ್ಲಿ ಸೇವೆ ಸಲ್ಲಿಸಿ ಡಿಸೆಂಬರ್ ತಿಂಗಳಿನಲ್ಲಿ ಶಿಕ್ಷಣ ಇಲಾಖೆಗೆ ಹಿಂದಿರುಗಿ ಬೆಂಗಳೂರು ಸೆಂಟ್ರಲ್ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾಗಿದ್ದರು. ೧೯೪೯ರಲ್ಲಿ ಶಿಕ್ಷಣ ಇಲಾಖೆಯ ಸೇವೆಯಿಂದ ನಿವೃತ್ತರಾಗುವ ಮುನ್ನ ಆರು ತಿಂಗಳು ಕೋಲಾರದಲ್ಲಿ ಜಿಲ್ಲಾ ಶಿಕ್ಷಣ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದರು. ಎಂ. ಆರ್. ಶ್ರೀ ಅವರು ವಿಜ್ಞಾನದ ಉಪಾಧ್ಯಾಯರಾಗಿ ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಂಡು ಶ್ರದ್ಧೆಯಿಂದ ಪಾಠ ಮಾಡುತ್ತಿದ್ದರು. ಅವರ ಬೋಧನೆ ಎಂದೂ ಶುಷ್ಕವಾಗಿರುತ್ತಿರಲಿಲ್ಲ. ತಮ್ಮ ಬದುಕಿನಲ್ಲಿ ಶಿಸ್ತನ್ನು ನಿಷ್ಠೆಯಿಂದ ಪರಿಪಾಲಿಸಿದ ಅವರು ಮಕ್ಕಳಲ್ಲೂ ಅದನ್ನು ಪ್ರಕಟಗೊಳಿಸಲುಲು ವಿಶೇಷವಾಗಿ ಶ್ರಮಿಸಿದರು. ನಾರ್ಮಲ್ ಸ್ಕೂಲಿನ ಮುಖ್ಯೋಪಾಧ್ಯಾಯರಾಗಿದ್ದಾಗ ಬಿಡುವಿನ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಯಾವುದಾದರೊಂದು ಸಾಹಿತ್ಯ ಕೃತಿಯ ಪರಿಚಯ ಮಾಡಿಕೊಡುತ್ತಿದ್ದರು.

ಮಹತ್ವದ ಕೊಡುಗೆ[ಬದಲಾಯಿಸಿ]

ಎಂ. ಆರ್. ಶ್ರೀ ಅವರ ಶಿಕ್ಷಣಕ್ಕೆ ಸಂಬಂಧಪಟ್ಟ ಅನೇಕ ವಿಚಾರ ಧಾರೆಗಳು ಅವರ ‘ರಂಗಣ್ಣನ ಕನಸಿನ ದಿನಗಳು’ ಕಾದಂಬರಿಯಲ್ಲಿ ಮೂಡಿವೆ. ಅವರ ‘ಸ್ಕೌಟ್ ಮಾಸ್ಟರುಗಳಿಗೆ ಸಲಹೆಗಳು’ ಎಂಬ ಅನುವಾದಿತ ಗ್ರಂಥ ಹಾಗೂ ‘ಸ್ಕೌಟುಗಳ ಕೈಪಿಡಿ’ ಉಪಯುಕ್ತ ಕೃತಿಗಳು. ಸ್ಕೌಟುಗಳಿಗಾಗಿಯೇ ಅವರು ಬರೆದ ‘ಕಂಠೀರವ ವಿಜಯ’ ಕೃತಿಯನ್ನು ಓದಿ ಮೆಚ್ಚಿದ ಮಹಾರಾಜರು ಎಂ.ಆರ್. ಶ್ರೀ ಅವರನ್ನು ಅರಮನೆಗೆ ಬರಮಾಡಿಕೊಂಡು ಸನ್ಮಾನಿಸಿ ಗೌರವಿಸಿದರು. ‘ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟು’ ಅವರ ದುಡಿಮೆಯ ಮಹಸ್ಮಾರಕವಾಗಿದೆ.

ಶ್ರೇಷ್ಠ ಭಾಷಣಕಾರರು[ಬದಲಾಯಿಸಿ]

ಎಂ. ಆರ್. ಶ್ರೀ ಅವರು ಶ್ರೇಷ್ಠ ವಾಗ್ಮಿಗಳು. ಕನ್ನಡ ಸಾಹಿತ್ಯದ ಬಗೆಗೆ ಅದರಲ್ಲೂ ವೀರಶೈವ ಸಾಹಿತ್ಯದ ಬಗೆಗೆ ಅಧಿಕಾರವಾಣಿಯಿಂದ ಮಾತನಾಡಬಲ್ಲ ವಿದ್ವಾಂಸರಾಗಿದ್ದರು. ಜರಿಯ ಪೆಟ, ಪಟ್ಟೆಯಾಗಿ ಮಡಿಸಿದ ಶಲ್ಯ, ಎದ್ದು ಕಾಣುವ ಕಿವಿಯ ಹತ್ತಕಡಕುಗಳು, ಎತ್ತರವಾದ ನಿಲುವು, ಕೆಂಬಿಳುಪಿನ ಮೈಬಣ್ಣ, ಕಾಂತಿಯುಕ್ತವಾದ ನಗುಮುಖ-ಹೀಗೆ ಹತ್ತು ಜನರಲ್ಲಿ ಎದ್ದು ಕಾಣುವ ವ್ಯಕ್ತಿತ್ವದ ಎಂ.ಆರ್. ಶ್ರೀ ಅವರು ಭಾಷಣಕ್ಕೆ ನಿಂತರೆ ಪುಂಖಾನುಪುಂಖವಾಗಿ ಶಿವಶರಣರ ವಚನಗಳು, ಹರಿಹರನ ರಗಳೆಗಳ ಸಾಲು ಸಾಲುಗಳು, ಕನ್ನಡದ ಧೀಮಂತ ಕವಿಗಳ ಪದ್ಯಗಳ ಜೊಂಪೆ ಜೊಂಪೆ ಉಲ್ಲೇಖಗಳು ಹರಿದು ಬರುತ್ತಿದ್ದವು. ಅವರ ನೆನಪಿನಾಳದಿಂದ ಉಕ್ಕಿ ಬರುವ ಉಲ್ಲೇಖ ಪದ್ಯಗಳನ್ನು ಕೇಳಿದಾಗ ಜನ ಮಂತ್ರಮುಗ್ಧರಾಗುತ್ತಿದ್ದರು. ಅವರದು ಕೇವಲ ಶುಷ್ಕ ಪಾಂಡಿತ್ಯವಾಗಿರಲಿಲ್ಲ. ಶ್ರೋತೃಗಳ ಮನದುಂಬುವಂತೆ ನವಿರಾದ ಹಾಸ್ಯವನ್ನು ಬಳಸಿ ವಿವರಿಸುವ ಭಾಷಣ ಕಲೆ ಅವರಿಗೆ ಕರಗತವಾಗಿತ್ತು. ಎಂ. ಆರ್. ಶ್ರೀ ಕನ್ನಡಿಗರಿಗೆ ಹೆಚ್ಚು ಪರಿಚಿತರಾಗಿದ್ದುದು ಭಾಷಣಗಳ ಮೂಲಕವೇ ಎಂದರೆ ತಪ್ಪಾಗಲಾರದು.

ವಚನ ಸಾಹಿತ್ಯದಲ್ಲಿ ಕೊಡುಗೆ[ಬದಲಾಯಿಸಿ]

ಎಂ. ಆರ್. ಶ್ರೀ ವರು ಕನ್ನಡ ಸಾಹಿತ್ಯವನ್ನು ಅಮೂಲಾಗ್ರವಾಗಿ ಓದಿಗ್ರಹಿಸಿದ್ದರು. ಅವರು ವಿಜ್ಞಾನದ ವಿದ್ಯಾರ್ಥಿಯಾದರೂ ಕನ್ನಡದ ಆಕರ್ಷಣೆಗೆ ಒಳಗಾಗಿ ಶ್ರಮಪಟ್ಟು ಕನ್ನಡ ಸಾಹಿತ್ಯದಲ್ಲಿ ಪ್ರಭುತ್ವವನ್ನು ಪಡೆದಿದ್ದರು. ವೀರಶೈವ ಸಾಹಿತ್ಯ, ಅದರಲ್ಲೂ ವಚನ ಸಾಹಿತ್ಯಕ್ಕೆ ಎಂ. ಆರ್. ಶ್ರೀ ಅವರದು ಬೆಲೆಯುಳ್ಳ ಕಾಣಿಕೆ. ‘ವಚನಧರ್ಮಸಾರ’ ಅವರ ಆಳವಾದ ವ್ಯಾಸಂಗಕ್ಕೆ, ವಿದ್ವತ್ತಿಗೆ, ಹೊಸದಾದ ಆಲೋಚನೆಗಳಿಗೆ ಸಂಕೇತವಾಗಿದೆ. “ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ವಿಹರಿಸುತ್ತ ಬರುವಾಗ ಒಂದು ಕಡೆ ತಪೋವನವನ್ನು ಪ್ರವೇಶಿಸಿದಂತೆಯೂ, ಸಿದ್ಧ ಸಾಧಕ ಋಷಿಗಳ ಸಂದರ್ಶನ ಪಡೆದು, ಅವರ ಉದಾತ್ತ ಜೀವನ ಧರ್ಮ ಬೋಧೆಗಳಿಂದ ನಮ್ಮ ಅಂತರಂಗ ಪರಿಶುದ್ಧವಾದಂತೆಯೂ, ಆತ್ಮನ ಬಂಧನಗಳು ಕಳಚಿಬಿದ್ದು ನಾವು ಮುಕ್ತರಾದಂತೆಯೂ ಒಂದು ದಿವ್ಯವಾದ ಆನಂದಾನುಭವ ಉಂಟಾಗುತ್ತದೆ. ಇಲ್ಲಿ ಪಟ್ಟಣವಾಸದ ಗೊಂದಲವಿಲ್ಲ, ರಾಜರುಗಳ ಆಸ್ಥಾನದ ವೈಭವ ದೃಶ್ಯಗಳಿಲ್ಲ. ತಪೋವನದ ಸಹಜ ಶಾಂತಿ, ಪರಸ್ಪರ ಪ್ರೇಮ, ಸಮತಾಭಾವ, ಸ್ವಾತಂತ್ರ್ಯ ಇವು ಮೂರ್ತಿವೆತ್ತಾಗಿ ಕಾಣುತ್ತವೆ. ಅರಣ್ಯಕಗಳಲ್ಲಿ ಉಪನಿಷತ್ತಿನ ದರ್ಶನವನ್ನು ಕಂಡಂತೆ, ಇಲ್ಲಿ ವಚನಧರ್ಮದ ದರ್ಶನವನ್ನು ಕಾಣುತ್ತೇವೆ. ಸತ್ಯದ ಹಂಬಲು ಸಾಹಿತ್ಯವಾಗಿ, ಸತ್ಯಾನ್ವೇಷಣ ಸಿದ್ಧಾಂತವಾಗಿ, ಸತ್ಯ ಸಾಕ್ಷಾತ್ಕಾರವೇ ದರ್ಶನವಾಗಿ ನಮಗೆ ಆನಂದವನ್ನುಂಟುಮಾಡುತ್ತವೆ” ಎನ್ನುವ ಅವರ ‘ವಚನ ಧರ್ಮಸಾರದ’ ಪ್ರಾರಂಭದ ಮಾತುಗಳು ವಚನ ಸಾಹಿತ್ಯದ ಬಗೆಗೆ ಅವರಿಗಿರುವ ಗೌರವ, ಪೂಜ್ಯ ಭಾವನೆಗಳನ್ನು ತಿಳಿಯಪಡಿಸುತ್ತವೆ. ಈ ಕೃತಿ ಇಂದಿಗೂ ಜನಮನ್ನಣೆ ಗಳಿಸಿರುವುದು ಗಮನಿಸಬೇಕಾದ ಸಂಗತಿಯಾಗಿದೆ. ‘ಭಕ್ತಿಭಾಂಡಾರಿ ಬಸವಣ್ಣನವರು’ ಎಂ. ಆರ್. ಶ್ರೀ ಅವರ ಮಹತ್ವದ ಸಾಹಿತ್ಯ ಕೃತಿ. ಚಾಮರಸನ ‘ಪ್ರಭುಲಿಂಗಲೀಲೆ’ಯನ್ನು ಅವರು ಎಂ. ಎಸ್. ಬಸವಲಿಂಗಯ್ಯನವರ ಜೊತೆಗೂಡಿ ಸಂಗ್ರಹಿಸಿದ್ದಾರೆ. ಅವರ ‘ಶೂನ್ಯ ಸಂಪಾದನೆಗಳು’, ಸಿದ್ಧರಾಮ ಚಾರಿತ್ರದ ಅಲ್ಲಮಪ್ರಭು’, ‘ವೀರಶೈವಾಮೃತಮಹಾಪುರಾಣ’, ಚೆನ್ನಬಸವಾಂಕನ ‘ಮಹಾದೇವಿಯಕ್ಕನ ಪುರಾಣ’, ಷಡಕ್ಷರಿಯ ‘ರಾಜಶೇಖರ ವಿಳಾಸ’, ‘ವೃಷಭೇಂದ್ರ ವಿಜಯ’, ಹರಿಹರನ ‘ಗಿರಿಜಾ ಕಲ್ಯಾಣ ವಸ್ತು ರಚನೆ’, ‘ಹರಿಹರನ ಗಿರಿಜಾ ಕಲ್ಯಾಣ ಶೈಲಿ’, ‘ಹರಿಹರನ ಸ್ಥಾನ ನಿರ್ದೇಶ’ ಮುಂತಾದ ಲೇಖನಗಳು ವಿದ್ವತ್ ಪಾಂಡಿತ್ಯಗಳಿಂದ ಕಂಗೊಳಿಸಿದ್ದು ಸಾಹಿತ್ಯ ಮೌಲ್ಯಗಳಿಂದ ಮಹತ್ವಪೂರ್ಣವೆನಿಸಿವೆ.

ವೈವಿದ್ಯಮಯ ಸಾಹಿತ್ಯ ಸೃಷ್ಟಿ[ಬದಲಾಯಿಸಿ]

ಎಂ. ಆರ್. ಶ್ರೀ ಅವರ ಸಾಹಿತ್ಯಸೃಷ್ಟಿ ವೈವಿಧ್ಯಮಯವಾದುದು. ‘ಕಂಠೀರವ ವಿಜಯ’, ‘ಧರ್ಮದುರಂತ’, ‘ಯದುವಿಜಯ’, ಮತ್ತು ‘ನಾಗರಿಕ’ – ಇವು ನಾಟಕಗಳು. ೧೯೩೩ರಲ್ಲಿ ‘ಕವಿಯ ಸೋಲು’ ಮತ್ತು ಇತರ ಕವಿತೆಗಳು ಪ್ರಕಟವಾದವು. ‘ಕವಿಯ ಸೋಲು’ ಎಂಬುದು ಸರಳರಗಳೆಯ ಪುಟ್ಟ ನಾಟಕ. ‘ರೋಲ್ಸ್ ಮೇಷ್ಟ್ರು’ ಹಾಗೂ ‘ರಂಗಣ್ಣನ ಕನಸಿನ ದಿನಗಳು’ ಎಂ.ಆರ್. ಶ್ರೀ ಅವರ ವೃತ್ತಿ ಜೀವನದ ಅನುಭವಗಳನ್ನು ಒಳಗೊಂಡಿದೆ. ‘ರಂಗಣ್ಣನ ಕನಸಿನ ದಿನಗಳು’ ಕಥೆಯ ಜಾತಿಗೂ ಸೇರದ, ಕಾದಂಬರಿಯ ಜಾತಿಗೂ ಸೇರದ ಒಂದು ವಿಶಿಷ್ಟ ಕೃತಿ. ಕುವೆಂಪುರವರು ಇದನ್ನು ‘ಚಿತ್ರಕಾದಂಬರಿ’ ಎಂದು ಕರೆದಿದ್ದಾರೆ. ಕಳೆದ ಶತಮಾನದ ಎರಡನೆಯ ದಶಕದಲ್ಲಿ ಎಂ. ಆರ್. ಶ್ರೀ ಅವರು ‘ಸಾವಿತ್ರಿ’ ಎನ್ನುವ ಸ್ವತಂತ್ರ ಸಾಮಾಜಿಕ ಕಾದಂಬರಿಯನ್ನು ಬರೆದರು. ೧೯೧೬-೧೭ರಲ್ಲಿ ‘ಕಾದಂಬರಿ ಸಂಗ್ರಹ’ ಎನ್ನುವ ಮಾಸ ಪತ್ರಿಕೆಯಲ್ಲಿ ಇದು ಧಾರಾವಾಹಿಯಾಗಿ ಪ್ರಕಟವಾಯಿತು. ಮುಂದೆ ಇದು ಪುಸ್ತಕರೂಪದಲ್ಲಿ ಪ್ರಕಟಗೊಂಡಿತು. ಎಂ. ಆರ್. ಶ್ರೀ ಅವರ ‘ಮಹಾತ್ಯಾಗ’ ಪ್ರಕಟವಾದದ್ದು ೧೯೫೫ರಲ್ಲಿ.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ[ಬದಲಾಯಿಸಿ]

ಎಂ. ಆರ್. ಶ್ರೀ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಯಿಸುವ ಆಸೆಯಿತ್ತು. ಅಂತೆಯೇ ಅದಕ್ಕಾಗಿ ತ್ರಿಕರಣಪೂರ್ವಕವಾಗಿ ದುಡಿದರು. ಅಂದಿನ ದಿನಗಳಲ್ಲಿ ಹಗಲೂ ರಾತ್ರಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏಕಾಂಗಿಯಾಗಿ ಕುಳಿತು ಪತ್ರ ಬರೆಯುವುದು, ಪೋಸ್ಟ್ ಸ್ಟಾಂಪು ಹಚ್ಚುವುದು, ಪುಸ್ತಕ ಜೋಡಿಸುವುದು ಇತ್ಯಾದಿಯಾಗಿ ಪ್ರತಿಯೊಂದು ಕೆಲಸವನ್ನೂ ತಾವೇ ಮಾಡುತ್ತಿದ್ದ ಎಂ. ಆರ್. ಶ್ರೀ ಅವರ ಜೊತೆಗಿನ ಅನುಭವವನ್ನು ಎಲ್ ಎಸ್ ಶೇಷಗಿರಿರಾಯರು ಒಂದು ವಿಶೇಷ ಲೇಖನದಲ್ಲಿ ಸ್ಮರಿಸಿದ್ದಾರೆ. ಪರಿಷತ್ತಿನ ಎಲ್ಲ ಸಾಹಿತ್ಯಕ ಚಟುವಟಿಕೆಗಳ ಹಿನ್ನೆಲೆಯಲ್ಲಿ ಗುಪ್ತಗಾಮಿಯಾಗಿ ಎಂ. ಆರ್. ಶ್ರೀ ಅವರ ಪರಿಶ್ರಮ ಹರಿದಿದೆ. ಕನ್ನಡಕ್ಕೆ ಧಕ್ಕೆ ಬಂದಾಗಲೆಲ್ಲಾ, ಅದರ ಸ್ಥಾನಮಾನಕ್ಕೆ ಚ್ಯುತಿ ಬಂದಾಗಲೆಲ್ಲಾ, ಎಂ. ಆರ್. ಶ್ರೀ ಹೋರಾಟ ನಡೆಸಿದವರು. ಎಂ. ಆರ್. ಶ್ರೀ ಅವರು ಅಧ್ಯಕ್ಷರಾಗಿದ್ದಾಗಿನ ಅವಧಿಯಲ್ಲಿ ಸೊಲ್ಲಾಪುರ, ಮುಂಬಯಿ ಮತ್ತು ಬೇಲೂರುಗಳಲ್ಲಿ ಮೂರು ಸಾಹಿತ್ಯ ಸಮ್ಮೇಳನಗಳಾದವು. ಅವರ ಕಾರ್ಯದಲ್ಲಿ ಪ್ರಾಮಾಣಿಕತೆ, ಒಂದು ಒಪ್ಪ, ಓರಣ, ಶಿಸ್ತು ಲೆಖ್ಖಾಚಾರವಿರುತ್ತಿತ್ತು. ನಿಘಂಟಿನ ಕಾರ್ಯದ ಪುನರ್ವ್ಯವಸ್ಥೆ, ಕನ್ನಡ ನುಡಿ ಪತ್ರಿಕೆಯ ಪರಿಷ್ಕರಣ, ಗಮಕ ಕಲೆಗೆ ಪ್ರೋತ್ಸಾಹ, ಪ್ರತಿಭಾನ್ವಿತರನ್ನೂ, ಕಲಾವಿದರನ್ನೂ ಸನ್ಮಾನಿಸುವುದು ಇವೆಲ್ಲಾ ಅವರ ಅಧಿಕಾರಾವಧಿಯಲ್ಲಿ ಆದಂತಹ ಕಾರ್ಯಗಳು.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ[ಬದಲಾಯಿಸಿ]

೧೯೫೦ರಲ್ಲಿ ಸೊಲ್ಲಾಪುರದಲ್ಲಿ ನಡೆದ ೩೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವ ಗೌರವವನ್ನು ಕನ್ನಡ ಸಾಹಿತ್ಯಲೋಕ ಎಂ. ಆರ್. ಶ್ರೀ ಅವರಿಗೆ ಸಲ್ಲಿಸಿತು.

ವಿದಾಯ[ಬದಲಾಯಿಸಿ]

ಕನ್ನಡದ ಈ ಶ್ರೇಷ್ಠ ಪುತ್ರರು ಸೆಪ್ಟೆಂಬರ್ 16, 1953ರ ವರ್ಷದಲ್ಲಿ ಈ ಲೋಕವನ್ನಗಲಿದರು.

ಶ್ರೇಷ್ಠ ವ್ಯಕ್ತಿತ್ವ[ಬದಲಾಯಿಸಿ]

ಎಂ. ಆರ್. ಶ್ರೀ ಅವರು ಹೊಸಗನ್ನಡ ಸಾಹಿತ್ಯದ ಕುತೂಹಲಗಳಲ್ಲಿ ಒಂದಾಗಿರುವರು. ಅವರ ಪ್ರತಿಭೆ, ಪಾಂಡಿತ್ಯ, ಅರ್ಪಣ ಮನೋಭಾವ, ಶಿಸ್ತು, ಶುಚಿ-ರುಚಿ ಜೀವನ, ರಸಿಕತೆ, ಸೌಜನ್ಯ ಇವೆಲ್ಲವೂ ನವೋದಯ ಕಾಲದ ವಿದ್ವಾಂಸರ ಪರಂಪರೆಗೆ ಸೇರಿದವಾಗಿದ್ದವು. ಅವರು ಉಜ್ವಲ ವಾಗ್ಮಿಗಳಾಗಿ ಸಹೃದಯರ ನೆನಪಿನ ಅಂಗಳದಲ್ಲಿ ನೆಲೆಸಿರುವವರು. ಶ್ರೇಷ್ಠ ವಿದ್ವಾಂಸರಾಗಿ ಅವರು ಮಾಡಿರುವ ಕನ್ನಡದ ಸೇವೆ ಕನ್ನಡವಿರುವವರೆವಿಗೂ ಉಳಿಯುವಂತಹುದಾಗಿದೆ.

ಹೆಚ್ಚಿನ ಓದಿಗೆ[ಬದಲಾಯಿಸಿ]

ಮಾಹಿತಿ ಆಧಾರ[ಬದಲಾಯಿಸಿ]

ಎಸ್. ವಿದ್ಯಾಶಂಕರ ಅವರ ಸಾಲು ದೀಪಗಳು ಕೃತಿಯಲ್ಲಿನ ಲೇಖನ ಮತ್ತು ಡಾ. ಎಲ್ ಎಸ್. ಶೇಷಗಿರಿರಾವ್ ಅವರ ಲೇಖನ