ಅಗ್ಗಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಗ್ಗಳಕವಿ : - ವಿಜಯಪುರ ಜಿಲ್ಲೆಯ ೧೨ನೆಯ ಶತಮಾನದ ಜೈನಕವಿ. ಚಂದ್ರಪ್ರಭಪುರಾಣ ಎಂಬ ಚಂಪೂ ಕಾವ್ಯದ ಕರ್ತೃ. ವಿಜಯಪುರ ಜಿಲ್ಲೆಯ ಇಂಗಳೇಶ್ವರ ಇವನ ಜನ್ಮಸ್ಥಳ. ತಂದೆ ಶಾಂತೀಶ, ತಾಯಿ ಪೋಚಾಂಬಿಕೆ . ತ್ರೈವಿದ್ಯಶ್ರುತಕೀರ್ತಿದೇವ ಗುರು. ಕವಿಗೆ ಭಾರತೀಭಾಳನೇತ್ರ, ಸಾಹಿತ್ಯವಿದ್ಯಾವಿನೋದ ಎಂಬ ಬಿರುದುಗಳು ಇವೆ. ಪೂರ್ವಕವಿಗಳಲ್ಲಿ ಪಂಪ, ಪೊನ್ನ, ರನ್ನ-ಇವರುಗಳನ್ನು ಸ್ತುತಿಸಿದ್ದಾನೆ. "ಕಳೆಗಳೆನಿತನಿತಣೋಳಮಗ್ಗಳಗಣ್ಣಂ ತೋರ್ಪನಗ್ಗಳಂ ನೃಪಸಭೆಯೊಳ್"-ಎಂದು ಹೇಳಿಕೊಂಡಿರುವುದರಿಂದ ಪ್ರಸಿದ್ಧ ಕವಿಯಾಗಿದ್ದಂತೆ ತೋರುತ್ತದೆ. "ನಾನಾರಸ ಮೊಪ್ಪೆ ವಸ್ತುಕೃತಿಯಂ ಪೇಳ್ದಗ್ಗಳಂ "ಎಂದು ತನ್ನ ಕಾವ್ಯ ನವರಸಭರಿತವಾಗಿದೆ ಎಂದೂ ಹೇಳಿಕೊಂಡಿದ್ದಾನೆ. ಈತ "ರೂಪಸ್ತವನಮಣಿಪ್ರವಾಳ", "ಜಿನಾಸ್ಥಾನಸ್ತವನ "ಎಂಬ ಗ್ರಂಥಗಳನ್ನು ರಚಿಸಿರುವನೆಂದು ಪಾರ್ಶ್ವಕವಿಯ (ಸು.1205) ಹೇಳಿಕೆ. ಆದರೆ ಈ ಕೃತಿಗಳು ಉಪಲಬ್ಧವಿಲ್ಲ. ಇವು ಸಂಸ್ಕೃತ ರಚನೆಗಳಾಗಿದ್ದಿರಬಹುದು. ಚಂದ್ರಪ್ರಭಪುರಾಣ ಹದಿನಾರು ಆಶ್ವಾಸಗಳುಳ್ಳ ಚಂಪೂ ಗ್ರಂಥ. ಎಂಟನೆಯ ತೀರ್ಥಂಕರನಾದ ಚಂದ್ರಪ್ರಭನ ಚರಿತ್ರೆ ಕಾವ್ಯದ ವಸ್ತು. ಈ ಗ್ರಂಥ ಹನ್ನೆರಡನೆಯ ಶತಮಾನದ ಇತರ ಚಂಪೂ ಗ್ರಂಥಗಳಂತೆ ಸಂಸ್ಕೃತಭೂಯಿಷವಿವಾಗಿ, ಬಿಗಿಯಾದ ಬಂಧದಿಂದ ಕೂಡಿ ಪ್ರೌಢವಾಗಿದೆ. ಗ್ರಂಥಾವತಾರದಲ್ಲಿ ಚಂದ್ರಪ್ರಭನನ್ನು ಸುತ್ತಿಸಿದ್ದಾನೆ. ಬಳಿಕ ಸಿದ್ಧಾದಿಗಳನ್ನು, ಪಂಚಗುರುಗಳನ್ನು, ಜಿನಧರ್ಮವನ್ನು, ಯಕ್ಷಯಕ್ಷಿಯರನ್ನು, ಸರಸ್ವತಿಯನ್ನು ಸ್ತುತಿಸಿ ಅನಂತರ ಅನುಬದ್ಧಕೇವಲಿಗಳಿಂದ ಶ್ರುತಕೀರ್ತಿಯ ತನಕ ತನ್ನ ಗುರುಪರಂಪರೆಯನ್ನು ಹೇಳಿಕೊಂಡಿದ್ದಾನೆ. ಗ್ರಂಥಾಂತ್ಯದಲ್ಲಿ ಸಂಸ್ಕೃತದಲ್ಲಿ ರಚಿತವಾದ 24 ತೀರ್ಥಂಕರರ ಸ್ತುತಿಸಂಗ್ರಹವಿದೆ. ಈ ಕೃತಿಯ ರಚನೆಯಲ್ಲಿ ಕವಿ ವೀರನಂದಿಯ ಸಂಸ್ಕೃತ ಚಂದ್ರಪ್ರಭ ಚರಿತ್ರೆಗೆ ಬಹಳಷ್ಟು ಋಣಿಯಾಗಿಯಾಗಿರುವಂತೆಯೂ ಅನೇಕ ಸುಂದರ ಸನ್ನಿವೇಶಗಳ ನಿರ್ಮಾಣದಲ್ಲಿ ಹಾಗೂ ಮನೋಜ್ಞವಾದ ವರ್ಣನಾಪದ್ಯಗಳಿಗೆ ಪಂಪನ ಆದಿಪುರಾಣ ಪ್ರೇರಣೆ ಒದಗಿಸಿರುವಂತೆಯೂ ತಿಳಿಯುತ್ತದೆ. ಚಂದ್ರಪ್ರಭನ ಚರಿತ್ರೆ ಸಾಂಪ್ರದಾಯಿಕ ಕಥೆಯಾದುದರಿಂದ ಕವಿಯ ಸಹಜ ಶಕ್ತಿಯ ಪ್ರಕಟಣೆಗೆ ಇಲ್ಲಿ ಅವಕಾಶವಿಲ್ಲ. ವರ್ಣನೆಗಳಲ್ಲಿ ಕಲ್ಪನಾವಿಲಾಸವಿದೆ. ಅಗ್ಗಳ ಪಂಡಿತಕವಿ ಆದರೂ ಕವಿಹೃದಯ ವಿದೆ. ಸಂಸ್ಕೃತ-ಕನ್ನಡ ಎರಡರಲ್ಲೂ ಈತನಿಗೆ ಉದ್ದಾಮ ಪಾಂಡಿತ್ಯವಿದೆ. ಈ ಕವಿಯ ಕಾವ್ಯಶಕ್ತಿಯನ್ನು ಕುರಿತು ದೇವಕವಿ, ಆಂಡಯ್ಯ, ಕಮಲಭವ, ಬಾಹುಬಲಿ, ಪಾರ್ಶ್ವ ಕವಿ ಮೊದಲಾದ ಕವಿಗಳು ಹೊಗಳಿದ್ದಾರೆ. ಚಂದ್ರಪ್ರಭ ಸಾಂಗತ್ಯವನ್ನು ಬರೆದ ದೊಡ್ಡಯ್ಯ, ಚಂದ್ರಪ್ರಭ ಷಟ್ಪದಿಯನ್ನು ಬರೆದ ದೊಡ್ಡಣಾಂಕ ಇವನ ಗ್ರಂಥದಿಂದ ಉಪಕೃತರಾದಂತೆ ಕಂಡುಬರುತ್ತದೆ. ಮಲ್ಲಿಕಾರ್ಜುನನ ಸೂಕ್ತಿಸುಧಾರ್ಣವ ಮತ್ತು ಅಭಿನವವಾದಿವಿದ್ಯಾನಂದನ ಕಾವ್ಯಸಾರಗಳಲ್ಲಿ ಇವನ ಕಾವ್ಯದ ಪದ್ಯಗಳು ಸಂಕಲನಗೊಂಡಿವೆ. ಸಾಳ್ವ ಮತ್ತು ಭಟ್ಟಾಕಳಂಕ ಇವರು ತಮ್ಮ ಗ್ರಂಥಗಳಲ್ಲಿ ಇವನ ರಚನೆಗಳನ್ನು ಲಕ್ಷ್ಯಗಳಾಗಿ ಉದಾಹರಿಸಿದ್ದಾರೆ. ಈತನ ಪ್ರಭಾವ ಮುಂದಿನ ಕನ್ನಡ ಸಾಹಿತ್ಯದ ಮೇಲೆ ಸ್ಪಷ್ಟವಾಗಿ ಆಗಿರುವುದು ಕಂಡುಬರುತ್ತದೆ. ಜೈನಪುರಾಣ ಗ್ರಂಥಗಳ ಸಾಲಿನಲ್ಲಿ ಈ ಕವಿಯ ಚಂದ್ರಪ್ರಭಪುರಾಣ ಒಂದು ಮಧ್ಯಮ ಗುಣದ ಕಾವ್ಯ ಎಂದು ಹೇಳಬಹುದು.

"https://kn.wikipedia.org/w/index.php?title=ಅಗ್ಗಳ&oldid=821042" ಇಂದ ಪಡೆಯಲ್ಪಟ್ಟಿದೆ