ಆರ್‌.ಎಸ್‌. ಪಂಚಮುಖಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉತ್ತರ ಕರ್ನಾಟಕದಲ್ಲಿ ಶಾಸನ ಕ್ಷೇತ್ರದಲ್ಲಿ ಫ್ಲೀಟ್‌ ನಂತರ ಗಣನೀಯ ಸೇವೆ ಸಲ್ಲಿಸಿದವರಲ್ಲಿ ಆರ್‌.ಎಸ್‌. ಪಂಚಮುಖಿಯವರೂ ಒಬ್ಬರು. ಹಳೆಯ ಮೈಸೂರುಪ್ರಾಂತ್ಯದಲ್ಲಿ ಬಿ. ಎಲ್. ರೈಸ್‌, ರಾ ನರಸಿಂಹಾಚಾರ್, ಮೊದಲಾದವರು ಹುರುಪಿನಿಂದ ಸಂಶೋಧನೆಯ ಕೆಲಸದಲ್ಲಿ ತೊಡಗಿದ್ದರು. ಅದಕ್ಕೂ ಹೆಚ್ಚಾಗಿ ಪ್ರಾಚ್ಯ ಸಂಶೋಧನಾಸಂಸ್ಥೆಯು ಮೊದಲು ಉದಕಮಂಡಲದಲ್ಲಿ ಇತ್ತು. ಅದು ಮೈಸೂರಿಗೆ ಹತ್ತಿರವೂ ಹೌದು. ನಂತರ ಮೈಸೂರಿಗೆ ಬಂದಿತು. ಹಾಗಾಗಿ ಹಳೆಯ ಮೈಸೂರು ಪ್ರದೇಶದಲ್ಲಿ ಸಂಶೋಧನಾಕಾರ್ಯ ಭರದಿಂದ ಸಾಗಿತು.ಇದೇ ಮಾತನ್ನು ಮುಂಬಯಿ ಕರ್ನಾಟಕ ಮತ್ತು ಹೈದ್ರಾಬಾದ್‌ ಕರ್ನಾಟಕದ ವಿಷಯದಲ್ಲಿ ಎದೆ ಮುಟ್ಟಿಕೊಂಡು ಹೇಳಲು ಆಗದು. ಅಲ್ಲಿ ಆಮೆ ಗತಿಯಲ್ಲಿ ಕೆಲಸ ಸಾಗಿತ್ತು. ಆ ಪ್ರದೇಶಗಳು ಆರ್ಥಿಕ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿಮಾತ್ರವಲ್ಲ ಇನ್ನಿತರ ರಂಗದಲ್ಲೂ ಸರಿದೊರೆಯಾಗಿ ಸಾಗಬೇಕಿತ್ತು. ಆ ಕೊರತೆಯನ್ನು ತಕ್ಕ ಮಟ್ಟಿಗೆ.ಆರ್‌.ಎಸ್‌ .ಪಂಚಮುಖಿಯವರು ತುಂಬಿದರು. ಅವರ ಪೂರ್ಣ ಹೆಸರು ರಾಘವೇಂದ್ರಾಚಾರ್ ಸ್ವಾಮಿರಾಯಾಚಾರ್ ಪಂಚಮುಖಿ. ಅವರು ಜನಿಸಿದುದು ಕಟ್ಟು ನಿಟ್ಟಿನ ಸಂಪ್ರದಾಯಸ್ಥ ಮಧ್ವ ಬ್ರಾಹ್ಮಣರ ಕುಟುಂಬದಲ್ಲಿ. ಅವರ ಹಿರಿಯರು ಶಾಸ್ತ್ರ ಕೋವಿದರು. ೧೮೯೮ ಮೇ ತಿಂಗಳ ೪ರಂದು ಬಿಜಾಪುರ ಜಿಲ್ಲೆಯ ಜಾಲಿಹಾಳು ಗ್ರಾಮದಲ್ಲಿ ಅವರು ಜನಿಸಿದರು. ಅವರ ಪ್ರಾಥಮಿಕ ಶಿಕ್ಷಣ ಹುಟ್ಟಿದ ಊರಿನಲ್ಲಿಯೇ ಆಯಿತು. ಜತೆ ಜತೆಗೆ ಸಂಸ್ಕೃತ , ಸಾಹಿತ್ಯ ಮತ್ತು ವೇದಾಂತದ ಬೋಧನೆ ಮನೆಯಲ್ಲಿಯೇ ನಡೆಯುತಿತ್ತು. ಹೈಸ್ಕೂಲ ಶಿಕ್ಷಣ ಬಾಗಲಕೋಟೆಯಲ್ಲಿ ಆಯಿತು. ಇಂಟರ್‌ಮಿಡಿಯಟ್‌ ಶಿಕ್ಷಣ ಅದೇತಾನೆ ಮುಂಬಯಿ ಸರ್ಕಾರ ಧಾರವಾಡದಲ್ಲಿ ಸ್ಥಾಪಿಸಿದ ಕರ್ನಾಟಕ ಕಾಲೇಜಿನಲ್ಲಿ. ಅವರು ಮೊದಲ ಬ್ಯಾಚಿನ ವಿದ್ಯಾರ್ಥಿ. ನಂತರ ಪೂನಾದ ಡೆಕ್ಕನ್‌ ಕಾಲೇಜಿನಲ್ಲಿ ಪದವಿಗಾಗಿ ಸೇರಿದರು. ಪದವಿ ಮುಗಿಯುಲು ಒಂದು ವರ್ಷ ಇರುವಾಗ ಮಹಾತ್ಮ ಗಾಂಧಿಯವರ ಕರೆಗೆ ಓಗೊಟ್ಟು ಅಸಹಕಾರ ಚಳುವಳಿಯಲ್ಲಿ ಭಾಗವಹಿಸಲು ಕಾಲೇಜು ಬಿಟ್ಟರು. ಅನೇಕ ಗೆಳೆಯರೊಂದಿಗೆ ಸೇರಿ ಬಾಗಲಕೋಟೆಯಲ್ಲಿ ರಾಷ್ಟ್ರೀಯತೆಗೆ ಒತ್ತು ಕೊಡುವ ಶಿಕ್ಷಣ ನೀಡಲು ನ್ಯಾಷನಲ್‌ ಸ್ಕೂಲು ಸ್ಥಾಪಿಸಿದರು. ಅದು ಒಂದು ವರ್ಷ ಯಶಸ್ವಿಯಾಗಿ ನಡೆದರೂ ನಂತರ ಮುಚ್ಚ ಬೇಕಾಯಿತು. ಮತ್ತೆ ೧೯೨೩ ರಲ್ಲಿ ಕರ್ನಾಟಕ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಂದುವರಿಸಿದರು.ಕನ್ನಡದಲ್ಲಿ ವಿಶ್ವ ವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದರು ಬಂಗಾರದ ಪದಕ ವಿಜೇತರಾದರು. ಎಂ .ಎ ಓದಲು ಶಿಷ್ಯವೇತನವೂ ಸಿಕ್ಕಿತು. ಕನ್ನಡ,ಸಂಸ್ಕೃತ ಮತ್ತು ವೇದಾಂತ ವಿಷಯಗಳನ್ನು ಆಯ್ದುಕೊಂಡು ಎಂ. ಎ. ಪಾಸಾದರು. ಅವರದು ಶಿಸ್ತು ಬದ್ಧ ಸಂಯಮದ ಜೀವನ. ಹೊತ್ತು ಬಂದಂತೆ ಕೊಡೆ ಹಿಡಿಯುವ ಜಾಯಮಾನವಲ್ಲ. ಅಸತ್ಯ, ಅನ್ಯಾಯ ಮತ್ತು ಅನೀತಿಗಳಣ್ನು ಕಂಡರೆ ಮೈಲುದೂರ. ಅವರು ಎಂದೂ ತಮ್ಮ ತತ್ವ ಮತ್ತು ನಂಬಿಕೆಗಳೊಂದಿಗೆ ರಾಜಿ ಮಾಡಿಕೊಂಡವರಲ್ಲ. ಹಾಗಾಗಿ ನಿಷ್ಠುರಿ ಎಂಬ ಬಿರುದು ಬಂದರೂ ಹಿಂಜರಿಯಲಿಲ್ಲ. ಜೀವನವನ್ನು ವ್ಯವಸ್ಥಿತವಾಗಿ ನಡೆಸುವುದು ಅವರ ಗುರಿ. ಮಕ್ಕಳಿಗೂ ಅವರು ತಮ್ಮ ನಡೆಯಿಂದಲೇ ಮಾದರಿಯಾಗಿದ್ದರು. ಮಳೆ ಇರಲಿ, ಚಳಿ ಇರಲಿ ಬೆಳಗ್ಗೆ ನಾಲ್ಕು ಗಂಟೆಗೆ ಹಾಸಿಗೆಯಿಂದ ಎದ್ದರೆ ಅವರ ದಿನಚರಿ ಗಡಿಯಾರದಂತ ನಿಖರ. ವಾಯು ಸೇವನೆ ತಪ್ಪಿಸುವವರಲ್ಲ.ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಸತತ ಮಾರ್ಗದರ್ಶನ. ತಮ್ಮಲ್ಲಿ ಬರುವ ಪಿಎಚ್‌ ಡಿ ವಿದ್ಯಾರ್ಥಿಗಳೊಂದಿಗೆ ಮೂರು ನಾಲಕ್ಕು ತಾಸು ಚರ್ಚಿಸಿ ಮಾರ್ಗದರ್ಶನ ನೀಡುತಿದ್ದರು. ಎಲ್ಲಿಯೇ ಇರಲಿ ದಿನಚರಿಗೆ ಭಂಗಬಾರದು. ರಾತ್ರಿ ೯.೩೦ಕ್ಕೆ ಮಲಗಿದ ತಕ್ಷಣ ನೆಮ್ಮದಿಯ ನಿದ್ರೆ. ಈ ಅಭ್ಯಾಸವನ್ನು ಅವರು ಎಂಬತ್ತು ವರ್ಷದವರಾದರೂ ಅನುಸರಿಸಿದರು. ನೀತಿ ನಿಯಮಗಳ ವಿಷಯ ಬಂದಾಗ ಎಳ್ಳಷ್ಟೂ ಅಲುಗದ ನಿಷ್ಠೆ. ಅನುಕೂಲವಾಗಲೀ ಪ್ರತಿ ಕೂಲವಾಗಲೆ ಹೊಂದಾಣಿಕೆ ಮಾಡಿಕೊಂಡು ಹೋಗುವುದು ಅವರ ಸ್ವಭಾಕ್ಕೆ ಸಲ್ಲದ ವಿಷಯ. ಇದರ ಪರಿಣಾಮವಾಗಿ ಅವರು ಹೊರ ನೋಟಕ್ಕೆ ವಿಕ್ಷಿಪ್ತ ವ್ಯಕ್ತಿಯಂತೆ ಹಲವರಿಗೆ ಕಂಡರೂ ಅವರಿಗೆ ಅದರ ಯೋಚನೆ ಇರಲಿಲ್ಲ. ಸಮಯಪಾಲನೆ, ನಿಖರತೆ.ಪಾಲಿಸುವಲ್ಲಿ ಇವರು ತಲ್ಲೀನರು.ಅವರದು ದೊಡ್ಡ ಸಂಸಾರ. ಮೂರು ಜನ ಗಂಡು ಮಕ್ಕಳು ನಾಲಕ್ಕು ಜನ ಹೆಣ್ಣು ಮಕ್ಕಳು. ಮಕ್ಕಳು, ಮೊಮ್ಮಕ್ಕಳು ಮಕ್ಕಳು ಸೇರಿದಾಗ ಮನೆ ನಂದ ಗೋಕುಲ. ಎಲ್ಲರಿಗೂ ಅವರದೆ ಮಾರ್ಗದರ್ಶನ. ಅವರು ಎಂದೂ ಮಕ್ಕಳನ್ನು ದಂಡಿಸಿದವರಲ್ಲ. ಆದರೆ ಕಣ್ಣು ಹೆದರಿಕೆಯಿಂದಲೇ ಎಲ್ಲ ಸಲೀಸಾಗಿ ಸಾಗುತಿತ್ತು. ಅವರೆಲ್ಲರೂ ಸುಶಿಕ್ಷಿತರಾದರು. ಜೀವನದಲ್ಲಿ ಉನ್ನತಿ ಸಾಧಿಸಿದರು.ಮಕ್ಕಳ ಮಾತು ಹಾಗಿರಲಿ ಅಜ್ಜ ಏನೆಂದುಕೊಂಡಾರು ಎಂಬ ಭಾವನೆಯು ಮೊಮ್ಮಕ್ಕಳನ್ನೂ ಸನ್ಮಾರ್ಗದಲ್ಲಿ ನಡೆಸುತಿತ್ತು. ಶಿಕ್ಷಣ ಮುಗಿದೊಡನೆ ೧೯೨೫ ರಲ್ಲಿ ಉದಕಮಂಡಲದಲ್ಲಿ ಸಹಾಯಕ ಸಂಶೋಧಕರಾಗಿ ನೇಮಕವಾಯಿತು. ಪುರಾತತ್ವ ಇಲಾಖೆಯಲ್ಲಿ ಸೇವೆಗೆ ಸೇರಿದ . ಉತ್ತರ ಕರ್ನಾಟಕ ಪ್ರದೇಶದ ಪ್ರಪ್ರಥಮ ಸಂಶೋಧಕರು ಎಂಬ ಕೀರ್ತಗೆ ಭಾಜನರು ಪಂಚಮುಖಿ. ವೃತ್ತಿ. ನಿಮಿತ್ತ ಹಳ್ಳಿ ತಿರುಗಾಟ ಮತ್ತು ವ್ರತ ನಿಷ್ಠ ಜೀವನ ಶೈಲಿಗೆ ತಡೆಯಾಗಲಿಲ್ಲ. ಆದರೆ ಜೀವನ ಶೈಲಿಯಲ್ಲಿ ಹೊಂದಾಣಿಕೆ ಇಲ್ಲ. ಹಾಗೆಂದು ಕರ್ತವ್ಯ ಪಾಲನೆಯಲ್ಲೂ ನಿಷ್ಠರು-೧೯೨೬ರಿಂದ ೧೯೩೯ ರವರೆಗೆ ಪುರಾತತ್ತ್ವ ವಸ್ತುಗಳ ಸಂಶೋಧನೆಗಾಗಿ ಹಳ್ಳಿ ಹಳ್ಳಿ ತಿರುಗಾಟ ಅಲ್ಲಿ ಸ್ವಯಂ ಪಾಕ. ಇಲ್ಲವಾದರೆ ಹಣ್ಣು ಹಂಪಲು ತಿಂದು ಕೆಲಸದಲ್ಲಿ ಮಗ್ನರಾಗುತಿದ್ದರು. ಅವಲಕ್ಕಿ ಬೆಲ್ಲವಂತೂ ಆಪದ್ಭಾಂವನಾಗುತಿತ್ತು. ಉದ್ಯೋಗಕ್ಕೆ ಸೇರಿದ ಹೊಸದರಲ್ಲಿ ಜರ್ಮನ್‌ ಪ್ರಾಚ್ಯ ತಜ್ಞರಿಂದ ತರಬೇತಿ ಪಡೆದು ಸಂಶೋಧನಾ ವಿಧಾನವನ್ನು ಅರೆದು ಕುಡಿದರು. ಮೂಲತಃ ಉತ್ತರ ಕರ್ನಾಟಕದವರಾದ್ದರಿಂದ ತಮ್ಮ ಪ್ರದೇಶದ ಇತಿಹಾಸ ಸಂಶೋಧನೆಯು ಅವರಿಗೆ ಸಂತೋಷ ಮತ್ತು ಸಂತೃಪ್ತಿಯನ್ನು ಕೊಡುತಿತ್ತು. ಅವರ ಮೊದಲ ಆದ್ಯತೆ ಯಾರ ಕಣ್ಣಿಗೂ ಬೀಳದ , ನಿರ್ಲಕ್ಷ್ಯಕ್ಕ ಒಳಗಾದ ಶಾಸನಗಳ ನಕಲು ಪ್ರತಿ ತೆಗೆಯುವುದು.ಅವುಗಳ ವರ್ಣನಾತ್ಮಕ ಸೂಚಿಯ ತಯಾರಿ, ವಾರ್ಷಿಕ ವರದಿಯ ತಯಾರಿ , ಅವುಗಳ ಅಧ್ಯಯನ ಮತ್ತು ಶಾಸನ ಸಂಪುಟಗಳ ಪ್ರಕಟನೆಗೆ ಸಿದ್ಧ ಪಡಿಸುವಲ್ಲಿ ಅವರು ಸದಾ ಮಗ್ನರು.ಉದಕಮಂಡಲದಲ್ಲಿ ದಕ್ಷಿಣ ಭಾರತದ ಎಲ್ಲ ಭಾಷೆಯ ಶಾಸನಗಳೂ ಸಂಗ್ರಹವಾಗುತಿದ್ದುದರಿಂದ ಅವರಿಗೆ ತಮಿಳು ಮತ್ತು ತೆಲಗು ಭಾಷೆಗಳ ಶಾಸನಗಳ ಪರಿಚಯವೂ ತಾನಾಗಿಯೇ ಆಯಿತು. ಮುಂಬಯಿಸರ್ಕಾರ೧೯೩೯ ರಲ್ಲಿ ಪುರಾತ್ತತ್ವದ ಮಹತ್ವನ್ನು ಮನಗಂಡು ಪ್ರಾದೇಶಿಕ ಸಂಸ್ಥೆಗಳನ್ನುಸ್ಥಾಪಿಸಿದರು. ಉದಕಮಂಡಲದಲ್ಲಿದ್ದ ಒಂದೇ ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಿದುದರಿಂದ ಗುಜರಾತ್‌, ಮಹಾರಾಷ್ಟ್ರ ಮತ್ತು ಕರ್ನಾಟಕದ ಧಾರವಾಡಗಳಲ್ಲೂ ಪ್ರಾದೇಶಿಕ ಕೇಂದ್ರಗಳು ತಲೆ ಎತ್ತಿದವು. ಕೇಂದ್ರ ಸರ್ಕಾರವು ಕರ್ನಾಟಕದ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಸಂಶೋಧನಾ ಕೇಂದ್ರ ತೆರೆಯಿತು. ಪಂಚಮುಖಿಯವರೆ ಕೇಂದ್ರದ ಪ್ರಥಮ ನಿರ್ದೇಕರಾಗಿ ನೇಮಕವಾದರು. ಒಂದು ಚಿಕ್ಕ ಕೋಣೆಯಲ್ಲಿ ಇವರ ಕಚೇರಿ. ಜೊತೆಗೆ ಒಬ್ಬ ಗುಮಾಸ್ತ. ಹೀಗೆ ಏಕವ್ಯಕ್ತಿಯ ಸೈನ್ಯವಾಗಿತ್ತು ಕನ್ನಡ ಅಧ್ಯಯನ ಕೇಂದ್ರ. ಆದರೆ ಅವರ ನಿಷ್ಠೆ ಮತ್ತು ಕರ್ತವ್ಯ ಪರತೆಯಿಂದ ಬಹುಬೇಗ ಧಾರವಾಡದ ಕೇಂದ್ರ ಮಾದರಿ ಎನಿಸಿತು. ಅವರು ಕಡ್ಡಾಯವಾಗಿ ಎರಡು ತಿಂಗಳು ಕ್ಷೇತ್ರ ಕಾರ್ಯಮಾಡುತಿದ್ದರು. ಹಳ್ಳಿಗೆ ಹೋಗಿ ಹಸ್ತಪ್ರತಿ, ಶಾಸನ ಪ್ರತಿ, ಲೋಹ ಮುದ್ರೆ, ಶಿಲ್ಪಗಳು ಸಂಗ್ರಹಣೆ ಮತ್ತು ನಿರ್ಲಕ್ಷಿತ ಸ್ಮಾರಕಗಳ ಪರಿಶೀಲನೆ ಕೆಲಸ ಮಾಡಿದರು. ಕೇಂದ್ರದಿಂದ ಅವರಿಗೆ ಬಿಡುಗಡೆಯಾದ ಹಣ ಕಡಿಮೆಯಾದರೂ, ತಮ್ಮ ಕೈಯಿಂದಲೇ ಖರ್ಚುಮಾಡಿ ಪ್ರಾಚೀನ ಶಿಲಾಯುಗದ ನಂತರದ ಎಲ್ಲ ಹಂತಗಳ ಸಂಸ್ಕೃತಿಯ ಸಂಶೋಧನೆಗೆ ಹೊಸ ಸ್ಥಳ ಗಳನ್ನು ಗುರುತಿಸಿ ಕೆಲಸ ಕೈ ಗೊಂಡರು.ಕೃಷ್ಣಾ, ಘಟಫ್ರಭಾ, ಮಲಪ್ರಭಾ ಮತ್ತು ಭೀಮಾನದಿ ದಂಡೆಯ ಪ್ರದೇಶಗಳಾದ ಹೆರಕಲ್‌, ವಡಗಾಂವ್ ಮಾಧವ ಪುರ,ಇಟಗಿ ,ಬ್ಯಾಡ,ಮೆಣಸಗಿಗಳನ್ನು ಗುರುತಿಸಿ ಉತ್ಖನನಕಾರ್ಯ ಮೊದಲುಮಾಡಿದರು. ಅಲ್ಲಿ ಬ್ರಾಹ್ಮಿ ಮಾದರಿಯ ಶಿಲಾಲೇಖಗಳನ್ನು ಗುರುತಿಸಿದರು.ಇಟಗಿಯಲ್ಲಿ ಮಣ್ಣಿನಲ್ಲಿ ಹೂತುಹೋದ ಉಕ್ಕಾಪಾತ್ರೆಯನ್ನು ಶೋಧಿಸಿದರು.ಅವರ ಸಂಗ್ರಹಿಸಿದ ನಾಣ್ಯ ಲೋಹ ವಿಗ್ರಹ, ಹಿಂದೂ ಜೈನ, ಬೌದ್ಧ ವಾಸ್ತು ಶಿಲಪದ ಮಾದರಿ, ಚಿತ್ರಕಲೆ, ಅಪರೂಪದ ಹಸ್ತಪ್ರತಿಗಳು, ಪುರಾತನ, ಮಣ್ಣಿನ ಪಾತ್ರೆಯತುಣುಕುಗಳು, ಶಿಲಾಶಾಸನಗಳು, ತಾಮ್ರ ಪಟಗಳು ,ಮಣಿಗಳೂ ಪುರಾತನ ಅವಶೇಷಗಳನ್ನು ಗಮನಿಸಿದ ಭಾರತ ಸರ್ಕಾರದ ಪ್ರಾಚ್ಯ ಸಂಸ್ಥೆಯಮಹಾನಿರ್ದೇಶಕರು, ಸಂಸ್ಥೆ ಗೆ ಹೆಚ್ಚಿನ ಹಣಕಾಸು ನೀಡಿ ಧಾರವಾಡದಲ್ಲಿ ಒಂದು ವಸ್ತು ಸಂಗ್ರಹಾಲಯ ತೆರೆಯಲು ಶಿಫಾರ್ಸುಮಾಡಿದರು. ಇದರಿಂದ ಭಾರತೀಯ ಪುರಾತತ್ತ್ವ ನಕಾಶೆಯಲ್ಲಿ ಧಾರವಾಡದ ಹೆಸರು ಮೊದಲಬಾರಿಗೆ ನಮೂದಾಯಿತು. ಅದಕ್ಕೆ ಕಾರಣ ಪಂಚಮುಖಿಯವರು. ಸಂಸ್ಥೆಯ ಮೂಲಕ ಸಂಶೋಧನ ಉಪನ್ಯಾಸ ಮಾಲೆಯನ್ನು ಪ್ರಾಂಭಿಸಿದರು.ಅದರಿಂದ ಭಾರತದ ಶ್ರೇಷ್ಠ ಸಂಶೋಧಕರ ಸಂಪರ್ಕ ದೊರೆಯಿತು. ರಾಷ್ಟ್ರ ಮಟ್ಟದಲ್ಲಿ ಮನ್ನಣೆ ದೊರೆಯಿತು. ಅವರ ಕಾಣಿಕೆ ಬರಿ ಶಾಸನಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಸಂಶೋಧನಕಲೆ, ವಾಸ್ತು ಶಿಲ್ಪ ಪ್ರತಿಮಾಲಕ್ಷಣ, ಜಾನಪದ, ಕನ್ನಡ ಮತ್ತು ಸಂಸ್ಕೃತ ಭಾರತೀಯ ತತ್ವಜ್ಞಾನ ಅದರಲ್ಲೂ ದ್ವೈತ ತತ್ವ, ಧರ್ಮ, ಭಕ್ತಿಸಾಹಿತ್ಯ, ಹೀಗೆ ಹಲವಾರು ರಂಗಗಳಿಗೆ ಅವರ ಕೊಡುಗೆ ಗಣನೀಯ. ಅವರು ಉತ್ತಮ ಮಾರ್ಗದರ್ಶಿಯಾಗಿದ್ದರು ಸುಮಾರು ಹತ್ತಕ್ಕೂ ಹೆಚ್ಚುಜನರ ಪಿ ಎಚ್‌ಡಿ ಪದವಿ ಪಡೆಯಲು ಮಾರ್ಗದರ್ಶನ ಮಾಡಿದರು. ಅವರ ಬಳಿಗೆ ರಾಷ್ಟ್ರಮಟ್ಟದ ಸಂಶೋಧನಾ ವಿದ್ಯಾರ್ಥಿಗಳನ್ನು ತರಬೇತಿಗಾಗಿ ಕಳುಹಿಸುತಿದ್ದರು ಎನ್ನುವುದು ಅವರ ಹಿರಿಮೆಗೆ ಸಾಕ್ಷಿ. ಭಾರತದ ೧೮೫೭ ರ ಮೊದಲೇ ಸ್ವಾತಂತ್ರ್ಯ ಸಂಗ್ರಾಮವನ್ನು ಅವರು ಪೂರ್ವ-ಪಶ್ಚಿಮ ಸಂಸ್ಕೃತಿಗಳ ಸಂಘರ್ಷಣೆ ಎಂದು ಬಣ್ಣಿಸಿರುತ್ತಾರೆ. ಅವರದು ಏಕಕಾಲಕ್ಕೆ ಸಂಗ್ರಹ ಮತ್ತು ಸಂಶೋಧನೆ ಮಾಡಿದ ಹೆಗ್ಗಳಿಕೆ. ಅದರಲ್ಲೂ ಉತ್ತರ ಕರ್ನಾಟಕದ ನಿರ್ಲಕ್ಷಿತ ವಿಷಯಗಳ ಅನಾವರಣಕ್ಕೆ ಸತತ ಪ್ರಯತ್ನ ಮಾಡಿದರು. ಅವರ ನಿರಂತರ ಪರಿಶ್ರಮದಿಂದಾಗಿ ಧಾರವಾಡದ ಕನ್ನಡ ಸಂಶೋಧನ ಸಂಸ್ಥೆಯು ಮೂಲ ಸಾಮಗ್ರಿಗಳನ್ನು ಒದಗಿಸುವ ಮಾದರಿ ಕೇಂದ್ರವಾಯಿತು. ಅವರು ಕನ್ನಡದಲ್ಲಿ ಕರ್ನಾಟಕ ಅರಸು ಮನೆತನಗಳು, ಐರಾವತ, ಕವಿ ಜಿಹ್ವಾಬಂಧನ, ಕರ್ನಾಟಕ ಹರಿದಾಸ, ಸಾಹಿತ್ಯಕರ್ನಾಟಕ ಜನಪದ ಗೀತಗಳು,ಕರ್ನಾಟಕದ ಶಾಸನಗಳು ಸೇರಿದಂತೆ ೧೬ ಕೃತಿಗಳನ್ನು ಸಂಸ್ಕೃತದಲ್ಲಿ ತಂತ್ರ ದೀಪಿಕಾ, ಬ್ರಹ್ಮ ಸೂತ್ರ ಭಾಷ್ಯ, ಮೊದಲಾದ ೫ ಕೃತಿಗಳನ್ನು, ಇಂಗ್ಲಿಷ್‌ನಲ್ಲಿ ಸುಮಾರು ೩೦ ಗ್ರಂಥಗಳನ್ನು ಹೊರತಂದರು. ಅಲ್ಲದೆ ವಿವಿಧ ವಿದ್ವತ್‌ಪತ್ರಿಕೆಗಳಲ್ಲಿ ಪ್ರಕಟಿಸಿದ ಸಂಶೋಧನಾ ಪ್ರಬಂಧಗಳು ನೂರಕ್ಕೂ ಹೆಚ್ಚು. ಅವರ ಅಪಾರ ಪಾಂಡಿತ್ಯ ಮತ್ತು ಸಾಧನೆಯಿಂದ ಆಗಿ ಅನೇಕ ಸಂಘ ಸಂಸ್ಥೆಗಳ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. ಭಾರತೀಯ ಐತಿಹಾಸಿಕ ದಾಖಲೆಗಳ ಆಯೋಗ, ಕನ್ನಡ ವಿಶ್ವಕೋಶ ಸಮಿತಿ ,ಪ್ರಾದೇಶಿಕ ಐತಿಹಾಸಿಕ ದಾಖಲೆಗಳ ಸ್ಮಾರಕ ಸಮಿತಿ, ಪ್ರಾಚ್ಯ ವಸ್ತು ಸಂಗ್ರಹಾಲಯ ಕಮಿಟಿ,ಸಂಶೋಧನ ಮತ್ತು ಪ್ರಕಟಣಾ ಸಮಿತಿ , ಹೊಸ ದೆಹಲಿ, ಕನ್ನಡ ಸ್ನಾತಕೋತ್ತರ ಶಿಕ್ಷಕಆಂಗಿಕೃತ ಸಮಿತಿ ಇತ್ಯಾದಿಗಳಲ್ಲಿ ಸೇವೆ ಸಲ್ಲಿಸಿದರು. ಅವರಿಗೆ ಬಂದ ಪ್ರಶಸ್ತಿ ಮತ್ತು ಸನ್ಮಾನಗಳೂ ಅನೇಕ. ಸಂಸ್ಕೃತ ಸಾಹಿತ್ಯ ಮತ್ತು ಶಾಸ್ತ್ರ ಪಾಂಡಿತ್ಯಗೌರವಿಸಿ, " ವಿದ್ಯಾರತ್ನ " ಪ್ರಶಸ್ತಿ ದೊರೆಯಿತು.ಮತ್ತು ,ದ್ವೈತ ಸಿದ್ಧಾಂತ ಕುರಿತ ಸೇವೆಗೆ "ವಿದ್ಯಾಭೂಷಣ '" ಎಂಬ ಪ್ರಶಸ್ತಿಗೆ ಪಾತ್ರರಾಗಿದ್ದರು. ಅವರದು ಹೆಸರು ಮತ್ತು ಹಣದ ಬಗೆಗೆ ಸದಾ ಉಪೇಕ್ಷೆಯ ಮನೋಭಾವ. ಅವರದು ಕೊನೆ ತನಕ . "ವೃತ್ತಿಯೇ ವೈಕುಂಠ ". ಎಂಬ ಪ್ರವೃತ್ತಿ. ಪಂಚಮುಖಿಯವರಿಗೆ ಇತಿಹಾಸವೆಂದರೆ ,"ರಾಜರ ಬದುಕು ಮತ್ತು ವಿಜಯಗಳ ಕಥನವಲ್ಲ ಆಯಾಕಾಲದ ಜನರ , ಜನ ಜೀವನದ , ಸಂಸ್ಕೃತಿಯ ಕನ್ನಡಿ " .ಸಂಶೋಧನೆಯು ಇತಿಹಾಸ ಕಾಲದ ಸಾಧನೆ ಮತ್ತು ಸೋಲಿನ ಕಾರಣ ಮತ್ತು ಪರಿಣಾಮಗಳ ವಿಶ್ಲೇಷಣೆಯಾಗಿರಬೇಕು ಎಂಬುದು ಅವರ ದೃಢನಂಬಿಕೆ.. ಅದೇ ಹಾದಿಯಲ್ಲಿ ಸಂಶೋಧನೆ ಮಾಡಿದರು, ಮತ್ತು ಹೊಸ ಸಂಶೋಧಕರಿಗೆ ದಾರಿ ದೀಪವಾದರು. ಎಂಟು ದಶಕ್ಕೂ ಅಧಿಕ ತುಂಬು ಜೀವನ ನಡೆಸಿ, ಪ್ರಾಚ್ಯ ಪ್ರಪಂಚಕ್ಕೆ ಸಾರ್ಥಕ ಸೇವೆ ಸಲ್ಲಿಸಿದರು. .