ಶಿಕಾರಿಪುರ ರಂಗನಾಥರಾವ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಚ್. ಶೇಷಗಿರಿರಾವ್

ಹಸ್ತಪ್ರತಿ ಮತ್ತು ಶಾಸನಗಳು ಸಯಾಮಿ ಅವಳಿಗಳಂತೆ.ಮುಖ ಬೇರೆ ಬೇರೆಯಾದರೂ ಅವುಗಳು ಏಕ ದೇಹಿಗಳು.ಒಂದು ರೀತಿಯಲ್ಲಿ ಪೌರಾಣಿಕ ಪಕ್ಷಿ ಗಂಡ ಬೇರುಂಡದ ತರಹ.ಅವೆರಡಕ್ಕೂ ಸಾಮಾನ್ಯವಾಗಿರುವುದು ಲಿಪಿ ಮಾತ್ರ. ಭಾರತದ ಅತಿ ಪ್ರಾಚೀನ ಲಿಪಿ ಎಂದರೆ ಸಿಂಧೂ ಕಣಿವೆಯಲ್ಲಿನ ಪುರಾತನ ನಗರಗಳಾದ ಹರಪ್ಪಾ ಮತ್ತು ಮಹಂಜೆದಾರೋದಲ್ಲಿ ದೊರೆತ ಮುದ್ರೆಗಳ ಮೇಲಿರುವ ಬರಹ. ಅವುಗಳ ರಹಸ್ಯವನ್ನು ಬಯಲುಮಾಡಲು ಹಲವರು ಪ್ರಯತ್ನಿಸಿದ್ದಾರೆ. ಆದರೆ ಯಾವ ವಿವರಣೆಯೂ ಪೂರ್ಣವಾಗಿ ಒಪ್ಪಿತವಾಗಿಲ್ಲ. ಅವುಗಳಲ್ಲೆಲ್ಲ ಸಾಕಷ್ಟು ಮಟ್ಟಿಗೆ ಒಪ್ಪಿತವಾಗುವಂತೆ ಲಿಪಿಯ ನಿಗೂಢತೆಯನ್ನು ಬಿಡಿಸಿದವರು.ಡಾ. ಎಸ್‌.ಆರ್‌.ರಾವ್‌. ಜೊತೆಗೆ ಸಾಗರದತಳದಲ್ಲಿದ್ದ ಪೌರಾಣಿಕವೆನ್ನಲಾದ ಶ್ರೀಕೃಷ್ಣನ ದ್ವಾರಕೆಯ ಅವಶೇಷಗಳನ್ನು ಜಗತ್ತಿಗೆ ಪರಿಚಯಿಸಿದ ಸಂಶೋಧಕರು ಅವರು. ಇನ್ನು ಅನೇಕ ಪ್ರಮುಖ ಪ್ರಾಚೀನ ಪುರಾತತ್ವತಾಣಗಳು, ರಚನೆಗಳು,ಮತ್ತು ದೇಗುಲಗಳು ಬೆಳಕಿಗೆ ಬರಲು ಮತ್ತು ಅವುಗಳ ಸಂರಕ್ಷಣೆಗೆ ಕಾರಣರು. ಕಳೆದವಾರ ಕಾಲವಶರಾದ ಡಾ.ಎಸ್‌. ಆರ್‌. ರಾವ್‌ ಅವರು ಅಪ್ಪಟ ಕನ್ನಡಿಗರು. ಅವರ ಜನನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ.ತಂದೆ ಹುಚ್ಚೂರಾಯರು ತಾಯಿ ಕಮಲಮ್ಮ. ಅವರು ಹುಟ್ಟಿದ್ದು ೧೯೨೨ರಲ್ಲಿ .ಅವರ ಪೂರ್ಣ ಹೆಸರು ಶಿಕಾರಿಪುರ ರಂಗನಾಥ ರಾವ್‌. ವಿದ್ವತ್‌ಲೋಕದಲ್ಲಿ ಎಸ್‌.ಆರ್‌.ರಾವ್‌ ಎಂದೇ ಚಿರಪರಿಚಿತರು. ಅವರದು ತುಂಬು ಕುಟುಂಬ ಏಳುಜನ ಮಕ್ಕಳಲ್ಲಿ ಇವರು ಆರನೆಯವರು. ತಂದೆ ಹಳ್ಳಿಯೊಂದರ ಶಾನುಭೋಗರು.ಬಾಲ್ಯದಲ್ಲಿ ಬಡತನವನ್ನೇ ಹಾಸಿಹೊದಿದ್ದರು.ಆದರೆ ತಾಯಿ, ತಂದೆಯರ ಶಿಸ್ತು ಮತ್ತು ಜ್ಞಾನದಾಹವೇ ಅವರು ಶಿಕ್ಷಣದಲ್ಲಿ ಮುಂದುವರಿಯಲು ಪ್ರೇರಣೆಯಾಯಿತು..ಇವರ ಪ್ರಾಥಮಿಕ ಶಿಕ್ಷಣ ಶಿವಮೊಗ್ಗದಲ್ಲಿ. ನಂತರದ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಪದವಿ. ಆಗ ಅನಾಥಾಲಯದಲ್ಲಿ ಅವರ ವಾಸ. ಬೀದಿಯ ದೀಪದ ಕೆಳಗೆ ಓದು. ಮನೆ ಮನೆಯಲೆದು ಕಾಲೇಜು ಶುಲ್ಕ ಕಟ್ಟಿದರು. ಅದರಿಂದ ಅವರು ಹಠ ಹರಳುಗಟ್ಟಿತು. ಶ್ರದ್ಧೆಯಿಂದ ಅಭ್ಯಾಸ ಮಾಡಿದರು. . ಪರಿಣಾಮವಾಗಿ ಬಿ.ಎ. ಆನರ್ಸ್ ಪದವಿಯಲ್ಲಿ ಚಿನ್ನದ ಪದಕ ಪಡೆದ ಅತ್ಯುತ್ತಮ ವಿದ್ಯಾರ್ಥಿ ಎನಿಸಿದರು. ನಾಗಪುರ ವಿಶ್ವ ವಿದ್ಯಾಲಯದಿಂದ ಎಂ. ಎ ಪದವಿ ಪಡೆದರು ನಂತರ ಅವರದು ಹೋದ ಹಾದಿಯೇ ರಾಜ ವೀಧಿಯಾಯಿತು. ’ಚಿಂದಿಯಿಂದ ಚಿನಾಂಬರ’ ಎಂಬ ಮಾತಿಗೆ ಅವರೇ ಜ್ವಲಂತ ಉದಾಹರಣೆಯಾದರು. ಅವರು ೧೯೪೮ರಲ್ಲಿ ಹಿಂದಿನ ಬರೋಡಾ ಸಂಸ್ಥಾನದಲ್ಲಿ ಪುರಾತತ್ವ ಇಲಾಖೆಯ ಸಹಾಯಕನಿರ್ದೇಶಕರಾಗಿ ಕೆಲಸಕ್ಕೆ ಸೇರಿದರು.ಬರೋಡ ಸಂಸ್ಥಾನವು ಭಾರತ ಒಕ್ಕೂಟದಲ್ಲಿ ವಿಲೀನವಾದಾಗ ಭಾರತಸರ್ಕಾರದ ಪುರಾತತ್ವ ಇಲಾಖೆಯ ಉಪನಿರ್ದೇಶಕರಾದರು . ಇಲಾಖೆಯಲ್ಲಿ ೧೯೮೦ರವರೆಗೆ ವಿವಿಧ ಹುದ್ದೆ ನಿರ್ವಹಿಸಿ ೧೯೮೦ ರಲ್ಲಿ ಉಪಮಹಾನಿರ್ದೇಶಕರಾಗಿ ನಿವೃತ್ತರಾದರು.ನಿವೃತ್ತಿಯನಂತರ ಅವರ ಸೇವೆಗೆ ಇನ್ನೂ ಹೆಚ್ಚು ಮೆರಗು ಬಂತು ೧೯೮೧ ರಿಂದ ೧೯೯೪ ರವರೆಗೆ ಎಮೆರೈಟಿಸ್‌ ವಿಜ್ಞಾನಿಯಾಗಿ ಗೋವಾದ ನ್ಯಾಷನಲ್‌ ಇನಸ್ಟಿಟ್ಯೂಟ್‌ ಅಫ್ ಓಷನೋಗ್ರಫಿಯಲ್ಲಿಸೇವೆ ಸಲ್ಲಿಸಿದರು ಅವರು ಆಗ್ರಾ, ನಾಗಪುರ, ಔರಂಗಾಬಾದ್‌ ಮತ್ತು ಬೆಂಗಳೂರು ವೃತ್ತದಲ್ಲಿ ಅಧೀಕ್ಷಕರಾಗಿ ಸೇವೆ ಸಲ್ಲಿಸಿದರು.ಅವರ ಸೇವಾವಧಿಯಲ್ಲಿ ರಂಗಪುರ,ಅಮ್ರೇಲಿ,ದ್ವಾರಕಾ,ಹನೂರು, ಐಹೊಳೆ, ಕಾವೇರಿಪಟ್ಟಣಂ ಮೊದಲಾದ ಪ್ರದೇಶಗಳಲ್ಲಿ ಉತ್ಖನನ ನಡೆಸಿದರು..ಅವರ ಪ್ರಮುಖ ಅನ್ವೇಷಣೆ ಎಂದರೆ ಐತಿಹಾಸಿಕ ಬಂದರು ನಗರ ಲೋಥಾಲ್‌. ಸ್ವಾತಂತ್ರಾನಂತರ ಸಿಂಧೂಕಣಿವೆ ನಾಗರೀಕತೆಯ ಕೇಂದ್ರಗಳಾದ ಹರಪ್ಪಾ ಮತ್ತು ಮೆಹಂಜದಾರೋ ಪಾಕಿಸ್ತಾನದ ಪಾಲಾದವು.ಭಾರತದಲ್ಲಿನ ಸಿಂಧೂಕಣಿವೆಯ ನಾಗರೀಕತೆಯ ಸ್ಥಳಗಳಲ್ಲಿಗಳ ಶೋಧಕ್ಕಾಗಿ ಅವರು ನಡೆಸಿದ ಉತ್ಖನನದಿಂದ ಹಲವಾರು ಪ್ರಾಚೀನ ತಾಣಗಳು ಬೆಳಕಿಗೆ ಬಂದವು. ಲೋಥಾಲ್ ನ ಸಂಶೋಧನೆಯು ೧೯೫೨ರಲ್ಲಿ ಭಾರತೀಯ ಇತಿಹಾಸಕ್ಕೆ ಹೊಸ ತಿರುವು ನೀಡಿತು. ಲೋಥಾಲ್‌ ಜಗತ್ತಿನಲ್ಲೇ ಪ್ರಥಮ ಸುಸಜ್ಜಿತ ಬಂದರು ಪಟ್ಟಣವಾಗಿತ್ತು ಎಂಬ ಅಂಶ ಅವರ ಪರಿಶ್ರಮದಿಂದ ಬೆಳಕಿಗೆ ಬಂದಿತು.ಅದರಿಂದ ಅವರ ಹೆಸರುಅಂತಾರಾಷ್ಟ್ರೀಯ ವಲಯದಲ್ಲಿ ಬೆಳಗಿತು ಅವರು ಭಾರತದ ಪಶ್ಚಿಮ ಮತ್ತು ದಕ್ಷಿಣ ಭಾಗಗಳಲ್ಲಿನ ಹಲವಾರು ಪ್ರದೇಶಗಳಲ್ಲಿ ತಂಡದೊಡನೆ ಉತ್ಖನನ ನಡೆಸಿರುವರು.ಐತಿಹಾಸಿಕ ಸ್ಮಾರಕಗಳ .ಹಲವಾರು ಕೋಟೆಗಳ ಸುಸ್ಥಿತಿಗೆಗೆ ಅವರು ಕಾರಣ. ಜಗತ್ಪ್ರಸಿದ್ಧ ತಾಜ್‌ಮಹಲ್‌, ಐಹೊಳೆ , ಪಟ್ಟದಕಲ್ಲು, ಬಿಜಾಪುರದ ಸ್ಮಾರಕಗಳ ಸಂರಕ್ಷಣೆಯಲ್ಲೂ ಅವರ ಪಾಲು ಇದೆ.ಅವರು ಡಾ. ರಾವ್‌ಅವರು ಉತ್ತರ ಗುಜರಾತಿನ ಸಿದ್ದೂಪುರದಲ್ಲಿನ ರುದ್ರಮಹಲ್‌ ಕ್ಷೇತ್ರದಲ್ಲಿ ಸ್ಥಳೀಯ ಮುಸ್ಲಿಮರ ತೀವ್ರ ಪ್ರತಿರೋಧದದ ನಡುವೇಯೂ ಉತ್ಖನನ ನಡೆಸಿ ಪರಿವರ್ತಿತವಾದ ಮಸೀದೆಯ ಅಂಗಳದಲ್ಲಿ ಮಂದಿರೊಂದನ್ನು ಪತ್ತೆ ಹಚ್ಚಿದರು. ಹೊಸಪೇಟೆ ಸಮೀಪದ ಹಂಪೆ ಮತ್ತು ಫತೇಪುರ ಸಿಕ್ರಿಗಳಲ್ಲಿನ ಉತ್ಖನನಕ್ಕೂ ಅವರು ಮಾರ್ಗದರ್ಶನ ನೀಡಿದರು. ಅವರ ಮಹಾನ್‌ ಸಂಶೋಧನೆಯಾದದ್ದು ೧೯೭೨ ರಲ್ಲಿ . ಸಿಂಧೂ ಕಣಿವೆ ನಾಗರೀಕತೆಯು ಕೊನೆಯಾದದ್ದು ಆರ್ಯರ ದಾಳಿಯಿಂದಲ್ಲ, ಅಭೂತಪೂರ್ವ ಪ್ರವಾಹದಿಂದ ಎಂದು ಪುರಾವೆ ಒದಗಿಸಿದರು. ಅವರ “ ಲೋಥಲ್‌ ಮತ್ತು ಸಿಂಧೂ ಕಣಿವೆ ನಾಗರೀಕತೆ” ಎಂಬ ಸಂಪ್ರಬಂಧಕ್ಕೆ ನಾಗಪುರ ವಿಶ್ವವಿದ್ಯಾಲಯವು ಡಿಲಿಟ್‌ ಪ್ರಶಸ್ತಿ ಪ್ರದಾನ ಮಾಡಿತು. ಅವರಿಗೆ ಮೈಸೂರು, ಕುವೆಂಪು, ಮತ್ತು ಕನ್ನಡ ವಿಶ್ವವಿದ್ಯಾಲಯಗಳೂ ಗೌರವ ಡಿಲಿಟ್‌ಪ್ರಶಸ್ತಿ ನೀಡಿ ತಮ್ಮ ಗೌರವ ಹೆಚ್ಚಿಸಿಕೊಂಡವು. ಅವರ ಕೆಲಸ ಮತ್ತು ಕಲಿಕೆ ಜೊತಜೊತೆಯಲ್ಲಿಯೇ ಸಾಗಿದವು. ಪ್ರಮುಖ ಪುರಾತತ್ವತಜ್ಞರಾದ ವೀಲರ್‌ ಅವರಿಂದ ವೈಜ್ಞಾನಿಕ ಉತ್ಖನನ ಕಲಿತರು.ಪ್ಯಾರಿಸ್‌ಮತ್ತು ಇಂಗ್ಲೆಂಡಿನ ಹೆಸರಾಂತ ಪುರಾತತ್ವ ತಜ್ಞರ ಜೊತೆ ಕ್ಷೇತ್ರಾನುಭವ ಮಾರ್ಗದರ್ಶನ ಪಡೆದರು. ಅಮರೇಲಿ, ರಂಗಾಪುರ್‌( ಗುಜರಾತ್,ಕನ್ಹೇರಿ ( ಮಹಾರಾಷ್ಟ್ರ)ಚಂದ್ರಪುರ್(ಗೋವಾ) ಮೊದಲಾದ ಸಿಂಧೂ ಕಣಿವೆಯ ಪುರಾತ್ತತ್ವ ತಾಣಗಳನ್ನು ಬೆಳಕಿಗೆ ತಂದರು. ಕಂಚಿನ ಯುಗದ ತಾಣಗಳಾದ ತೇವೋರ್( ಮಹಾರಾಷ್ಟ್ರ)ಭಾಗಟ್ರಾವ್‌( ಗುಜರಾತ್), ನವಶಿಲಾಯುಗದ ತಾಣ ಪೈಯಾಂಪಲ್ಲಿ,ಮತ್ತು ಐಹೊಳೆ, ಕಾವೇರಿಪಟ್ಣಂ ಗಳ ಪುರಾತತತ್ವ ತಾಣಗಳು ದೊರೆಯಲು ಅವರೇ ಕಾರಣರು. ಅವರದು ಇಚ್ಛೆಯರಿತು ನಡೆವ ಸತಿ ಮತ್ತು ಮುಚ್ಚಟೆಯ ಮೂರು ಮಕ್ಕಳ ಸಂಸಾರ (ಗೋಪಾಲ್, ಶಕುಂತಲಾ ಮತ್ತು ನಳಿನಿ ) ಅವರು ತಮ್ಮ ಜೀವನದ ಬಹುಭಾಗವನ್ನು ಪ್ರವಾಸ ಮತ್ತು ಕ್ಷೇತ್ರಕಾರ್ಯದಲ್ಲೇ ಕಳೆದರೂ ಹೊಂದಿಕೊಂಡು ಹೋಗುವ ಹೆಂಡತಿ ಶ್ರೀಮತಿ ಕಮಲ. ಅವರ ಮಗಳು ಹೇಳುವ ಹಾಗೆ “ನಮ್ಮ ತಂದೆ ವಿಶ್ವ ಸಂಚಾರಿ,ಲಂಡನ್, ರೋಮ್, ಪ್ಯಾರಿಸ್‌, ನ್ಯೂಯಾರ್ಕ್, ವಾಷಿಂಗ್‌ಟನ್‌, ಈಜಿಪ್ಟ್, ಇರಾಕ್‌, ಮಾಸ್ಕೋ ಟೊಕಿಯೋ, ಪೀಕಿಂಗ್‌ ಮೊದಲಾದ ನಗರಗಳ ವಿಶ್ವವಿದ್ಯಾಲಯಗಳಲ್ಲಿ, ಮ್ಯೂಜಿಯಂಗಳಲ್ಲಿ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಭಾಷಣ ನೀಡುವಾಗ ಮನೆಯ ನೆನಪೇ ಇರುತ್ತಿರಲಿಲ್ಲ.ಅನೇಕ ಸಲ ಅಮ್ಮನಿಗೆ ಅವರು ಎಲ್ಲಿರುವರು ಎಂದೇ ಗೊತ್ತಾಗುತ್ತಿರಲಿಲ್ಲ. ಆದರೆ ಮನೆಯಲ್ಲಿದ್ದಾಗ ಮಾತ್ರ ಬರಹದ ನಡುವೆ ಬಿಡುವು ಮಾಡಿಕೊಂಡು, ನಮಗೆ ಸಂಸ್ಕೃತ ಕಲಿಸುವರು. ಅಥವಾ ತಮ್ಮ ಕ್ಷೇತ್ರಕಾರ್ಯದ ಅನುಭವ ಹಂಚಿಕೊಳ್ಳುವರು” ಅದರ ಫಲ ಮೂವರೂ ಮಕ್ಕಳೂ ಸುಶಿಕ್ಷಿತರಾದರು. . ಒಬ್ಬ ಮಗಳು ತಂದೆಯ ಹಾದಿಯಲ್ಲಿಯೇ ಮುನ್ನೆಡೆದಿದ್ದಾಳೆ.ಹೀಗೆ ಬಿಡುವಿಲ್ಲದ ಕೆಲಸದ ನಡುವೆಯೂ ನೆಮ್ಮದಿಯಿಂದ ಜೀವನ ನಡೆಸಿದರು. ಅವರು ದೇಶಾದ್ಯಂತ ಭೂಗರ್ಭದಲ್ಲಿ ಅಡಗಿದ ಐತಿಹಾಸಿಕ ಸತ್ಯಗಳ ಶೋಧನೆಗೆ,ಜಗತ್ತಿನಾದ್ಯಂತ ಹೊಸ ವಿಷಯ ಕಲಿಯಲು, ಕಲಿಸಲು ತಾವು ಶೋಧಿಸಿರುವುದನ್ನು ತಜ್ಞರ ಗಮನಕ್ಕೆ ತರಲು ಸಂಚರಿಸಿದರು.ವಿಶೇಷವಾಗಿ ಸಮುದ್ರ ಪುರಾತತ್ವ ಭಾರತದಲ್ಲಿ ಅವರ ನನಸಾದ ಕನಸಾಗಿತ್ತು.. ಅವರ ಮತ್ತೊಂದು ಮಹತ್ವದ ಸಂಶೋಧನೆ ಸಿಂದೂ ಲಿಪಿಯ ನಿಗೂಢತೆ ಬಿಡಿಸಿದ್ದು. ಸಿಂಧೂ ಕಣಿವೆಯ ಪುರಾತತ್ವ ತಾಣಗಳಾದ ಹರಪ್ಪಾ ಮೊಹಂಜದಾರೋಗಳಲ್ಲಿ ದೊರೆತ ಭಾಷೆಯ ಲಿಪಿಗಳು ಇಂಡೋ ಯುರೋಪಿಯನ್‌ ಅಲ್ಲ , ಅವು ಖಚಿತವಾಗಿ ಇಂಡೋ ಆರ್ಯನ್‌ ಎಂದು ಸಿದ್ಧ ಮಾಡಿದರು. ಕ್ರಿ.. ಪೂ. ೧೭೦೦ರಲ್ಲಿ ಚಿತ್ರಲಿಪಿಯಾಗಿದ್ದುದು ಕ್ರಮೇಣ ವರ್ಣಲಿಪಿಯಾಗಿ ವಿಕಾಸ ವಾದುದನ್ನು ತಮ್ಮ ಹೊಸ ಹೊಸ ಉತ್ಖನನದ ತಾಣಗಳಲ್ಲಿ ದೊರೆತ ವಸ್ತುಗಳ ಪುರಾವೆ ಒದಗಿಸಿದರು.ಈ ಕಾರ್ಯಕ್ಕಾಗಿ ಅವರಿಗೆ ಇಂದಿರಾಗಾಂಧಿ ಫೆಲೋಷಿಪ್‌ ದೊರೆಯಿತು. ಸುಮಾರು ಮೂವತ್ತುವರ್ಷದ ಶ್ರಮದಿಂದ ಸಿಂಧೂ ಕಣಿವೆಯಲ್ಲಿ ದೊರೆತ ೯೦೦ಮುದ್ರೆಗಳನ್ನು ಓದಲು ಸಫಲರಾದರು . ರಾವ್‌ ಅವರು 1992 ರಲ್ಲಿ ಸಿಂಧೂ ಕಣಿವೆ ನಾಗರೀಕತೆಯ ಕಾಲದ ಲಿಪಿಗಳ ರಹಸ್ಯವನ್ನು ಬಯಲು ಮಾಡುವ ಪ್ರಯತ್ನದಲ್ಲಿ ಯಶಗಳಿಸಿದರು ಎನ್ನಲಾಗಿದೆ. ಹರಪ್ಪ ಲಿಪಿಗಳು ಚಿಕ್ಕದಾದ ಸಂಕೇತಗಳ ಸರಪಣಿಗಳಾಗಿವೆ. ಈ ವಿವರಣೆಯು ಇನ್ನೂ ವಿವಾದದಿಂದ ಹೊರತಾಗಿಲ್ಲ.ಇವು ಅಕ್ಷರಗಳ ಸಂಕೇತಗಳಾಗಿವೆ ವಿನಃ, ಅವುಗಳ ಭಾಷೆಯ ಸ್ವರೂಪ ಕುರಿತ ಮಾಹಿತಿ ಇಲ್ಲ ಎನ್ನಲಾಗಿದೆ.. ಹರಪ್ಪದಲ್ಲಿ ೧೮೭೩ ರಲ್ಲಿ ಮೊದಲಬಾರಿಗೆ ಮುದ್ರೆಗಳು ದೊರೆತವು.ಈವರೆಗೆ ಬೇರೆ ಬೇರೆ ತಾಣಗಳಲ್ಲಿ ಸಿಕ್ಕಸುಮಾರು ೪೦೦೦ ಮುದ್ರೆಗಳ ಪಟ್ಟಿ ಮಾಡಲಾಗಿದೆ. ಅದರಲ್ಲಿ ೩೭೦೦ ಮುದ್ರೆಗಳು ಮತ್ತು ೪೧೭ವಿಶಿಷ್ಟ ಸಂಕೇತಗಳು ಇವೆ.ಬರಹದಲ್ಲಿ ಸರಾಸರಿ ೫ ಸಂಕೇತಗಳು ಇವೆ. ಅತಿ ಉದ್ದವಾದುದು ೧೭ಸಂಕೇತಗಳನ್ನು ಹೊಂದಿದೆ. ಭಾಷೆ ಅಪರಿಚಿತವಾದರೂ ಭಾಗಶಃ ಓದಬಹುದು ಎನ್ನಲಾಗಿದೆ. ಅವರ ವಾದವನ್ನು ಹೆಸರಾಂತ ಪುರಾತತ್ವ ತಜ್ಞರಾದ ಪ್ರೊ. ಗ್ರುಮಂಡ್‌, ಕೇಂಬ್ರಡ್ಜ್ ಆಲಫಬೆಟ್‌ ಮ್ಯೂಜಿಯಂನ ನಿರ್ದೇಶಕ ಡೈರಿಂಗರ್ಹಾಸ್‌, ಪಿ.ಬಿ ದೇಸಾಯಿ ಮ್ಯೂನಿಚ್‌ ವಿಶ್ವವಿದ್ಯಾಲಯದ ಪ್ರೊ. ಎ. ಕಮ್ಮೆನಭುರ್‌ ಸಹಮತ ಸೂಚಿಸಿದ್ದಾರೆ.ಆದರೆ ಅದು ಇಂಡೋ ಯುರೋಪಿಯನ್‌ಗೆ ಅತಿ ಹತ್ತಿರವಾದ ಇಂಡೋ ಅರ್ಯನ್‌ ಭಾಷೆಯಾಗಿದೆ ಎಂಬ ವಾದವೂ ಇದೆ.ಇದನ್ನು ಲಿಪಿ ಶಾಸ್ತ್ರದಲ್ಲಿ ದಿಶೆ ಬದಲಿಸುವ ಶತಮಾನದ ಶೋಧ ಎಂದು ಹೇಳಿದ್ದಾರೆ. ಹರಪ್ಪ ಭಾಷೆಯ ಅನಾವರಣವೂ ರಾಜಕೀಯ ಧ್ವನಿಯನ್ನೂ ಹೊಂದಿದೆ,ದ್ರಾವಿಡ ಮತ್ತು ಇಂಡೋ ಭಾರತದ ಮೂಲವೆಂದು ದ್ರಾವಿಡ ಮತ್ತು ಉತ್ತರ ಭಾರತದ ಹಿಂದೂ ಹಿತಾಸಕ್ತರು ವಾದಿಸುವರು. ಡಾ.ರಾವ್‌ಫೊನಿಷಿಯನ್‌ ವರ್ಣಗಳೊಂದಿಗೆ ಹೋಲಿಸಿ ಅವುಗಳ ದ್ವನಿ ನಿಗದಿಮಾಡಿದಾಗ ಏಕಟ್ರ ಚತುಸ್‌,ಪೆಂಟ , ಹಪ್ತ, ,ಸಪ್ತ , ದಸ ,ದ್ವಾದಸ ಮತ್ತು ಶತ ಮೊದಲಾದ ಸಂಖ್ಯೆಗಳನ್ನು ಗುರುತಿಸಲಾಯಿತು(೧,೩ ೪,೫,೭,೧೦,೧೨,೧೦). ಮುಖ್ಯವಾಹಿನಿಯ ವಿದ್ವಾಂಸರು ಅವರ ಹೇಳಿಕೆಯ ತತ್ವವನ್ನು ಒಪ್ಪಿದರೂ, ಅದು ಸವಿವರವಾದ ಭಾಷೆ ಎಂದು ಅನೇಕರು ಒಪ್ಪಿಲ್ಲ ಫ್ರೊ.ಜಾನ್‌ ಇಮಿಚಿನರ್‌ ಪ್ರಕಾರ, “ಈ ವಿವರಣೆಯು ಬಹುತೇಕ ವ್ಯಕ್ತಿ ನಿಷ್ಠವಾಗಿದೆ.ಆದರೆ ಡಾ.ರಾವ್‌ವಿವರಣೆ ಇದ್ದದರಲ್ಲೇ ಉತ್ತಮ” ಎನ್ನಲಾಗಿದೆ. ಸಿಂಧೂಲಿಪಿಗಳ ಮ್ಯೂಜಿಯಂ ಒಂದನ್ನು ತಿರುಪತಿಯಲ್ಲಿ ಸ್ಥಾಪಿಸಲಾಗಿದೆ. ಅವರ ಸೇವೆಯ ಕೊನೆಯ ಹಂತದಲ್ಲಿ ಶ್ರೀಕೃಷ್ಣನಿಂದ ನಿರ್ಮಿತವಾದ ದ್ವಾರಕಾ ನಗರವನ್ನು ಸಾಗರ ತಳದ ಉತ್ಖನನ ನಡೆಸಿ ಶೋಧಿಸಿ ಹೊಸ ಹಾದಿ ತೋರಿದರು. ಅದರಿಂದ ಅವರಿಗೆ ವೈಯುಕ್ತಿಕಸಾಧನೆಗಾಗಿ ವರ್ಲಡ್‌ ಟ್ರಸ್ಟ್ ಪ್ರಶಸ್ತಿ ದೊರೆಯಿತು. ಗೋವಾದ ರಾಷ್ಟ್ರೀಯ ಸಮುದ್ರ ಅಧ್ಯಯನ ಸಂಸ್ಥೆಗೆ ವಿಶೇಷ ಸಲಹೆಗಾರ ಮತ್ತು ವಿಜ್ಞಾನಿಯಾಗಿ೧೯೮೧ ರಿಂದ ೧೫ ವರ್ಷ ಕಾರ್ಯನಿರ್ವಹಿಸಿದರು. ಆಗಲೇ ಸಮುದ್ರತಳದ ಪುರಾತತ್ವ ಎಂಬ ನವೀನ ಶಿಸ್ತನ್ನು ಹುಟ್ಟಿಹಾಕಿ, ಅರೇಬಿಯನ್‌ ಸಮುದ್ರದ ಉತ್ಖನನ ಮಾಡಿ ದ್ವಾರಕಾ ಮತ್ತು ಬಂಗಾಕೊಲ್ಲಿಯ ಉತ್ಖನನದಿಂದ ಪುಂಪುಹಾರ್ ಅವಶೇಷಗಳನ್ನು ಶೋದಿಸಿದರು. ತಮಿಳುನಾಡಿ ಇತಿಹಾಸಪ್ರಸಿದ್ಧ ಪಟ್ಟಣ ಪುಂಪುಹಾರ ಅನ್ನು ಸಾಗರದ ಸವಕಳಿಯಿಂದಾಗಿ ಖಾಲಿ ಮಾಡ ಬೇಕಾಯಿತು ಪೂರ್ವ ತೀರವು ಅಬ್ಬರದ ಅಲೆಗಳಿಂದ ಕೂಡಿದೆ. ಪೂಂಪುಹಾರದಲ್ಲಿ ಉತ್ಖನನದಿಂದ ಪ್ರಾಚೀನ ತಮಿಳು ಸಾಹಿತ್ಯದಲ್ಲಿ ಉಲ್ಲೇಖಿತವಾದ ಇಟ್ಟಿಗೆಯ ಗೋಡೆಯು ದೊರೆತಿದೆ. ಪಶ್ಚಿಮತೀರದ ಗುಜರಾತಿನ ಕಚ್‌ಹತ್ತಿರದ ಉತ್ಖನನದಿಂದ ಸಾಗರದ ಅಡಿಯಲ್ಲಿ ಸುಮಾರು ಏಳು ಚದರಮೈಲುಪ್ರದೇಶದ ಪಟ್ಟಣದ ಅವಶೇಷ ದೊರಕಿದೆ.ಅದನ್ನೇ ಪುರಾಣ ಪ್ರಶಿದ್ದ ದ್ವಾರಕಾ ನಗರ ಎಂದು ಗುರುತಿಸಲಾಗಿದೆ. ಪೌರಾಣಿಕ ವಿವರಣೆಗಳು ತಾಳೆ ಹೊಂದಿತ್ತವೆ. ಒಂದು ಭಾಗದಲ್ಲಿ ೫೬೦ಮೀ ಉದ್ದ ಸುಸ್ಥಿತಿಯಲ್ಲಿರುವ ಗೋಡೆ ಇದೆ. ಬಂದರು, ಉಗ್ರಾಣ, ಮತ್ತು ಹಡಗುಗಳು ಅಲೆಯ ಹೊಡೆತಕ್ಕೆ ತೇಲಿ ಹೋಗದಂತೆ ತಡೆಯಲುಭಾರವಾದ ಲಂಗರುಗಳು ದೊರಕಿವೆ ಅವುಗಳಿಗೆ .ಮೂರು ರಂದ್ರಗಳಿವೆ. ಸುಮಾರು ನೂರುಕೆಜಿಗೂ ಹೆಚ್ಚು ತೂಗುವ ೧೫೦-೨೫೦ ಕೆಜಿ ತೂಕದವು ೫೦ಕಲ್ಲುಗಳು ಸಿಕ್ಕಿವೆ. ಇನ್ನೂ ನೂರಾರು ನೀರಲ್ಲಿ ಮುಳುಗಡೆಯಾಗಿರಬಹುದು. ದ್ವಾರಕೆಯ ಶೋಧವು ಒಂದು ಆಕಸ್ಮಿಕ. ಸಾಗರತಡಿಯಲ್ಲಿನ ಪುರಾತನ ಸ್ಮಾರಕ ಒಂದನ್ನು ಮರೆ ಮಾಡಿದ್ದ ಆಧುನಿಕ ಕಟ್ಟಡವನ್ನು ಕೆಡವಿದಾಗ, ಅದರಡಿಯಲ್ಲಿ ದೇವಾಲಯವು ಕಂಡುಬಂದಿತು. ಅದರಿಂದ ಹೊರಟ ಮೆಟ್ಟಿಲುಗಳು ಸಾಗರದ ತಡಿಯವರೆಗ ಇದ್ದವು.ಮತ್ತು ಬಂದರು ಪ್ರದೇಶದಲ್ಲೂ ಗೋಚರವಾದವು ಹಾಗೆಯೇ ಮುಂದುವರಿದಾಗ ಭಾರತದ ಪುರಾತತ್ವ ಇತಿಹಾಸದಲ್ಲೇ ಅತ್ಯಂತ ರೋಚಕ ಸಂಶೋಧನೆಯಾದ ಮುಳುಗಡೆಯಾದ ನಗರವೇ ಸಿಕ್ಕಿತು.ಅಲ್ಲಿ ದೊರಕಿದ ಮಡಕೆಯ ಚೂರುಗಳು ಕ್ರಿ. ಪೂ,೧೩೫೪ರವೆಂದು ಗುರುತಿಸಲಾಗಿದೆ.ಅಲ್ಲಿದೊರೆತ ವಸ್ತುಗಳ ಪೂರ್ಣ ಅಧ್ಯಯನ ಇನ್ನೂ ಆಗಬೇಕಿದೆ. ಜಲಾಂರ್ತಗತ ಪರಂಪರೆ ಯುನೆಸ್ಕೋದ ಸಮಾವೇಶದಲ್ಲಿ ಭಾರತದ ಪ್ರತಿನಿಧಿಯಾಗಿ ಮೂರವರ್ಷದ ಅವಧಿಯ ಮೂರುಬಾರಿ ಪ್ರಾತಿನಿಧ್ಯ ಪಡೆದರು. ಸಮಾವೇಶದ ಚಾರ್ಟರ್‌ನ ಉದ್ದೇಶ, “ ಜಲಾಂರ್ತಗತ ಸಾಂಸ್ಕೃತಿಕ ಪರಂಪರೆಯನ್ನು ಗುರುತಿಸಿ, ಪಟ್ಟಿಮಾಡಿ ,ಸಂರಕ್ಷಿಸುವುದು” ಅದಕ್ಕೆ ಕೇವಲ ಆರು ರಾಷ್ಟ್ರಗಳು ಸಹಿಹಾವೆ ಎನ್ನಲಾಗಿದೆ.. ಭಾರತಲ್ಲಿ ೭೫೦೦ ಕಿಮಿ. ತೀರವಿದೆ. ಮತ್ತು ಅತ್ಯಧ್ಭುತವಾದ ದ್ವಾರಕಾನಗರದ ಅವಶೇಗಳು ಸಾಗರದಡಿಯಲ್ಲಿ ಸಿಕ್ಕಿವೆ. ಆದರೆ ಇನ್ನೂ ಸಹಿ ಹಾಕಬೇಕಿದೆ. ಈ ಅನ್ವೇಣೆಗಾಗಿ ಗುಪ್ತ ಫೌಂಡೇಷನ್‌ಪ್ರಶಸ್ತಿ, ವರ್ಲ್ಡ್ ಷಿಪ್‌ಪ್ರಶಸ್ತಿ ಪ್ರದಾನ ಮಾಡಲಾಯಿತುಅವರಿಗೆ ರಾಜ್ಯ , ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳ ಮಹಾಪೂರವೇ ಹಿರಿದುಬಂದಿದೆ. ಅವರು ೧೯೭೩ ರಿಂದ ಹಿಡಿದು ೨೦೧೧ ರವರೆಗೆ ಪುರಾತತ್ವ , ಶಿಲ್ಪಕಲೆ,ವಾಸ್ತುಶಿಲ್ಪಗಳವಿಷಯದಲ್ಲಿ “ರಿಮಿನಿಸೆನ್ಸ್ ಅನ್ ಆರ್ಚಿಯಾಲಜಿಸ್ಟ್” ಎಂಬ ಅವರಾತ್ಮ ಕಥನವೂ ಸೇರಿದಂತೆ ೨೧ ಕೃತಿಗಳನ್ನು ರಚಿಸಿದ್ದಾರೆ.ಅವೆಲ್ಲವೂ ಪುರಾತತ್ವ ಶಾಸ್ತ್ರದಲ್ಲಿನ ಪರಾಮರ್ಶನ ಗ್ರಂಥಗಳೇ. ಅವರು ಭಾಗವಹಿಸಿದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮಾವೇಶ, ಸಮ್ಮೇಳನಗಳು ಅಗಣಿತ.ಅವರ ಸಂಪ್ರಬಂಧ ರಚನೆ , ಮಂಡನೆ ಮತ್ತು ಪ್ರಕಟನೆಯು ೧೯೫೭ರಿಂದ ಪ್ರಾರಂಭವಾಗಿ ೨೦೦೪ ರವರೆಗ ಸತತವಾಗಿ ಸಾಗಿಬಂದಿವೆ.ಸುಮಾರು ಐವತ್ತಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ. ಭಾರತದಲ್ಲಿ ಮೆರೀನ್‌ಅರ್ಕಿಯಾಲಜಿ ಯಲ್ಲಿ ಅವರದೇ ಅಂತಿಮ ಅಭಿಪ್ರಾಯ. ಆಸ್ಟ್ರೇಲಿಯಾ, ಅಮೆರಿಕಾ, ಬ್ರಿಟನ್‌ಗಳ ಜಲಾಂತರ್ಗತ ಪುರಾತತ್ವ ಸಮೇಳನಗಳಲ್ಲಿ ಸದಾ ಪ್ರಮುಖ ಪಾತ್ರ ವಹಿಸುತಿದ್ದರು. ರಾಜ್ಯೋತ್ಸವ, ಕರ್ನಾಟಕ ಪುರಾತ್ವ ರತ್ನಸೇರಿದಂತೆ ಹಲವು ಪ್ರಶಸ್ತಿಗಳಿಗೆ ಬಂದಿವೆ. ದಾವಣಗೆರೆಯಲ್ಲಿ ನಡೆದ ಕರ್ನಾಟಕ ಇತಿಹಾಸ ಪರಿಷತ್ತಿನ ಅಧ್ಯಕ್ಷಪದವಿ ಅವರಿಗೆ ಒಲಿದಿತ್ತು; .ಅವರು ಅಧ್ಯಕ್ಷತೆ ವಹಿಸಿದ, ಉದ್ಘಾಟನೆ ಮಾಡಿದ ಕಾರ್ಯಕ್ರಮಗಳು ಹಲವಾರು. ವಿದ್ವತ್‌ಸಭೆಗೆ ಅವರು ಕಿರೀಟಪ್ರಾಯರಾಗಿದ್ದರು. ಅವರ ಕೊನೆಗಾಲದ ಮನೆ ಬೆಂಗಳೂರಾಗಿತ್ತು ಇಳಿವಯಸ್ಸಿನಲ್ಲೂ ಅವರಿಗೆ ಇತಿಹಾಸವೆಂದರೆ ಇಂಗದ ಆಸಕ್ತಿ . ಅವರ ಸೊಸೆಯ ಗೆಳತಿಯಾದ ಶ್ರೀಮತಿ ನಳಿನ ವೆಂಕಟೇಶ್‌ ಹೇಳುವ ಹಾಗೆ ಯಾರೇ ಆಸಕ್ತರು ಕೇಳಿದರೂ ಅವರು ಎಷ್ಟೇ ಕಿರಿಯರಾದರೂ ವಿವರಣೆ ಕೊಡಲು ಮುಂದಾಗುತ್ತಿದ್ದರು.ವಿದ್ವತ್‌ಸಭೆಯಲ್ಲಿ ಹೇಳುವ ಹಾಗೆ ಪ್ರತಿ ವಿವರವನ್ನೂ ಉತ್ಸಾಹದಿಂದ ನೀಡುತಿದ್ದರು. ಭಾರತದಲ್ಲಿ ಪುರಾತತ್ವಜಗತ್ತಿನ ಹೊಸಯುಗದ ಪ್ರವರ್ತನ ಮಾಡಿದ ಹಿರಿಯ ಜೀವ ಇನ್ನುಇಲ್ಲವಾದರೂ ಅವರಶೋಧ ವಿಧಾನವು ಸದಾಮಾರ್ಗದರ್ಶನ ಮಾಡಲಿದೆ.