ಚೆಂಬು ಗ್ರಾಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ನಿಸರ್ಗದ ಮಡಿಲಲ್ಲಿ ನಿದ್ದೆಮಾಡುತ್ತಾ ಶತಮಾನಗಳಿಂದ ವಿರಮಿಸಿರುವ ಮೈಸೂರು-ಬಂಟ್ವಾಳ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಚೆಂಬು ಗ್ರಾಮದ ಕಥೆ ಮರೆಯಲಾರದ್ದು. ಊರಿನ ಮಧ್ಯಭಾಗದಲ್ಲೇ ಹೊಳೆ ಹರಿಯುತ್ತದೆ. ಬೆಟ್ಟಗಳ ಸಾಲಿನಿಂದ ಜುಳುಜುಳು ಕಲರವಮಾಡುತ್ತಾ ಹರಿದು ಬರುವ ಚಿಕ್ಕ ತೊರೆಗಳು, ಅಕ್ಕಪಕ್ಕದ ಕಾಡಿನ ವಾತಾವರಣ,ನಿಸರ್ಗರಮಣೀಯವಾಗಿದೆ. ಕರ್ನಾಟಕದ ಈ ಕುಗ್ರಾಮದಲ್ಲಿ ರಾಜ್ಯ ಸರಕಾರದ 'ವಿದ್ಯುಚ್ಛಕ್ತಿ ಯೋಜನೆ' ಬರದೆ ಇದ್ದಾಗ್ಯೂ ಈ ಹಳ್ಳಿಯ ಜನರ ಮನೆಯಲ್ಲಿ ದಿನವಿಡೀ ವಿದ್ಯುತ್ ಪ್ರವಾಹ ನಿರಂತರವಾಗಿ ಸರಬರಾಜಾಗುತ್ತಿರುವುದು ಒಂದು ಮಹತ್ವದ ಸಂಗತಿಯಾಗಿದೆ, ಹಾಗೂ ಅನುಕರಣೀಯವಾಗಿದೆ. ವಿದ್ಯುತ್ ಕಡಿತದ ಕಿರಿಕಿರಿಯಿಲ್ಲದ ವೋಲ್ಟೇಜ್ ವೈಪರೀತ್ಯದಿಂದ ವಂಚಿತರಾಗದ, ಪುಕ್ಕಟೆ ವಿದ್ಯುತ್ ಬಳಸಿ ಪರಿಸರದ ನಿರ್ಮಲತೆಯನ್ನು ಕಾಪಾಡಿಕೊಂಡು ಬರುತ್ತಿರುವ ಮಾದರಿ ಹಳ್ಳಿಯಾಗಿದೆ.

ಚೆಂಬು ಗ್ರಾಮದ ಪರಿಸರ[ಬದಲಾಯಿಸಿ]

೧೨ ಕಿ.ಮೀ.ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ’ಚೆಂಬು ಹಳ್ಳಿ’ ದಕ್ಷಿಣ ಕನ್ನಡ, ಹಾಗೂ ’ಕೊಡಗು’ ಜಿಲ್ಲೆಯ ಗಡಿಯಲ್ಲಿದೆ. ಬೆಟ್ಟ-ಗುಡ್ಡಗಳ ತಪ್ಪಲಿನಲ್ಲಿರುವ ಚೆಂಬು ಹಳ್ಳಿಯ ಜನರು ಸ್ವತಂತ್ರವಾಗಿ ವಿದ್ಯುತ್ ತಯಾರಿಸಿ ಸ್ವಾವಲಂಭಿಗಳಾಗಿ ರಾಜ್ಯಕ್ಕೇ ಮಾದರಿಯಾಗಿದ್ದಾರೆ.

ಚಾಂಬಾಡು ಕಿರುಚಾವಡಿ[ಬದಲಾಯಿಸಿ]

ಚಾಂಬಾಡು ಕಿರು ಚಾವಡಿ ಹೊಸುರು ಗೌಡರ ಮನೆತನದ ಧರ್ಮದೈವ ರುದ್ರಾಂಡಿಯ ಪ್ರಧಾನ ನೆಲೆಯಾಗಿದೆ, ಇದು ತರುವಾಯ ಗ್ರಾಮ ದೈವವಾಗಿದೆ. ಪುರಾಣ ಪ್ರಕಾರ ಉಲ್ಲಾಕುಳು ದೈವಗಳು ತಲಕಾವೇರಿಗೆ ಬಂದು ನೆಲೆಯಾಗುತ್ತಾರೆ, ಗ್ರಾಮದೈವವಾದ ರುದ್ರಾಂಡಿಯ ಆಹ್ವಾನ ಮೇರೆಗೆ ಉಲ್ಲಾಕುಳು ಚೆಂಬು ಐದೂರಿಗೆ ಬರುತ್ತಾರೆ, ಹಾಗೆ ಬಂದ ಉಲ್ಲಾಕುಳು ಮೊದಲು ಚಾಂಬಾಡು ಕಿರುಚಾವಡಿಯ ಹತ್ತಿರದಲ್ಲಿ ತಮ್ಮ ಕುದುರೆಗಳನ್ನು ಕಟ್ಟುತ್ತಾರೆ, ಆಗಿನ ಆ ಅಶ್ವಾಲಯ ಇಂದು 'ಉದಿಪನ ಚಾವಡಿ'ಯೆಂದು ಕರೆದುಕೊಂಡಿದೆ, ಬಲ್ಲಾಳರ ಕಾಲದಲ್ಲಿ ಈ ಸ್ಥಳದಲ್ಲಿ ಉಲ್ಲಾಕುಳುಗಳ ಆಚರಣೆಯ ಸಂದರ್ಭದ ಒಲಸರಿಗಾಗಿ ಮರದ ಕುದುರೆಯನ್ನು ರಚಿಸಿ ಇಡಲಾಗಿತ್ತು, ಇದು ರಾತ್ರಿ ಹೊತ್ತು ಜೀವ ತಳೆದು ಭತ್ತವನ್ನು ಮೇಯುತ್ತಿತ್ತೆಂದು ಜನರು ಹೇಳುತ್ತಾರೆ. ರುದ್ರಾಂಡಿಯು ಕರೆದು ತಂದ ಉಲ್ಲಾಕುಳುಗಳನ್ನು ತನ್ನ ನೆಲೆಯಾದ ಕಿರು ಚಾವಡಿಯಲ್ಲಿ ನೆಲೆಗೊಳಿಸಿ ತಾನು ಹೊರಗೆ 'ದೊಂಪದ ಬಲಿ' ನೇಮೋತ್ಸವವನ್ನು ಹೊಂದುವ ದೈವವಾಗುತ್ತಾಳೆ, ಉಲ್ಲಾಕುಳುಗಳಿಗೆ ಉಪ್ಪಂಗಳ ಮಾಡ ಪ್ರತ್ಯೇಕವಾಗಿದೆ. ಉಲ್ಲಾಕುಳುಗಳ ಭಂಡಾರ ಭಗಂಡೇಶ್ವರ ದೇವಸ್ಥಾನದ ಪ್ರಕಾರ ಜಗಲಿಯ ಮೇಲೆ ಒಮದು ಪುಟ್ಟ ಗುಡಿಯಲ್ಲಿದೆ, ಅಶ್ವಾರೋಹಿಗಳಾಗಿರುವ ಎರಡು ಮೂರ್ತಿಗಳನ್ನು ಹಾಗೆಯೇ ಬಿಲ್ಲು, ಸೂರ‍್ಯ ಎನ್ನುವ ಉಲ್ಲಾಕುಳುಗಳ ಆಯುಧಗಳನ್ನು ಕಾಣುತ್ತೇವೆ, ಇಲ್ಲಿಂದ ವರ್ಷಾವರ್ತಿ ಎರಡು ಬಾರಿ ಉಲ್ಲಾಕುಳು ನೇಮೋತ್ಸವಕ್ಕೆ ಭಂಡಾರವನ್ನು ಚೆಂಬೈದೂರಿಗೆ ಕೊಂಡೊಯ‍್ಯುವುದು ಸಂಪ್ರದಾಯ, ಪೂಜಾರಿಗಳ ಮತ್ತು ಇತರ ಪ್ರಮುಖರು ಹೋಗಿ ರಕ್ಷಕ ಸಮಿತಿಯವರ ಅಪ್ಪಣೆ ಮೇರೆಗೆ ಭಂಡಾರವನ್ನು ತರುವುದು ಸಂಪ್ರದಾಯ, ಭಂಡಾರದ ರಕ್ಷಣೆಗೆ ರಕ್ಷಕರು ಒಟ್ಟಿಗೆ ಇರುತ್ತಾರೆ. ಚೆಂಬುವಿನಿಂದ ೧೫ ಕಿ. ಮೀ. ದೂರದ ಭಾಗಮಂಡಲದಿಂದ ಭಂಡಾರ ತರುವ ಕಾಡು ದಾರಿಯಲ್ಲಿ ಬರುವಾಗ ನಿರ್ದಿಷ್ಟ ಸ್ಥಳಗಳಲ್ಲಿ 'ಕಟ್ಟೆಪೂಜೆ' ನೆರವೇರಿಸಲಾಗುತ್ತದೆ, ಭಂಡಾರ ತರುವಾಗ ಕಟ್ಟೆಪೂಜೆ ನಡೆಯುವ ಸ್ಥಳಗಳು ಪೂರ್ವದಲ್ಲಿ ಉಲ್ಲಾಕುಳು ರಾಕ್ಷಸ ಸಂಹಾರಕ್ಕೆ ರುದ್ರಚಾಮುಂಡಿಯ ಬೇಡಿಕೆ ಪ್ರಕಾರ ಬರುವಾಗ ವಿಶ್ರಾಂತಿ ಪಡೆದ ಸ್ಥಳಗಳೆಂದು ಪ್ರತೀತಿ. ಕುದುಪಾಜೆ ಕುಟುಂಬಸ್ಥರ ಸನ್ನಿಧಿ ಮಂಟಮೆಯಲ್ಲಿ ಪೊಲ್ಮಾರ್, ಪನೇಡ್ಕ ಮುಂತಾದೆಡೆ ಈ ಕಟ್ಟೆಪೂಜೆ ವಿಧಿಗಳು ನಡೆಯುತ್ತವೆ, ಹೀಗೆ ಬರುವ ಭಂಡಾರವನ್ನು ಮೂಲರುದ್ರಾಂಡಿ ದೈವದ ಕಿರು ಚಾಂಬಾಡು ಚಾವಡಿಯಲ್ಲಿ "ಕೆರಿಸಿ"ಉಲ್ಲಾಕುಳಿಗೆ ವರ್ಷಾವರ್ತಿ ಜಾರ್ದೆ ಮತ್ತು ಕಾಲಾವಧಿ ನೇಮೋತ್ಸವಗಳು ನಡೆಯುತ್ತವೆ. ಒಟ್ಟಾರೆ ಈ ಸ್ಥಳ ಪುರಾಣ ಉಲ್ಲಾಕುಳು ಚೆಂಬೈದೂರಿಗೆ ಭಾಗಮಡಂಲದಿಂದ ಬಂದು ರಕ್ಷಕ ದೈವಗಳಾಗುವುದನ್ನು ಮತ್ತು ನೆಲಮೂಲದ ಅಧೀನ ದೈವವಾಗುವ ಸಮಕಥನವನ್ನು ನಮ್ಮ ಮುಂದಿಡುತ್ತದೆ. [೧]

'ಸೋಲಾರ್ ವಿದ್ಯುಚ್ಛಕ್ತಿ ಘಟಕಗಳು'[ಬದಲಾಯಿಸಿ]

ಈ ಪುಟ್ಟಗ್ರಾಮದ ಒಟ್ಟು ೧೩೫ ಮನೆಗಳ ಪೈಕಿ ಸುಮಾರು ೭೫ ಮನೆಯವರು ತಮ್ಮ ಸ್ವಂತ ಖರ್ಚಿನಿಂದ ಸೋಲಾರ್ ವಿದ್ಯುತ್ ಘಟಕಗಳನ್ನು ಅಳವಡಿಕೊಂಡಿದ್ದಾರೆ. ಮೈಕ್ರೋ-ಜಲವಿದ್ಯುತ್ ಘಟಕಗಳಲ್ಲಿ ೮೦ ಕ್ಕೂ ಮಿಕ್ಕಿನ ಮನೆಗಳಲ್ಲಿ ಅಳವಡಿಸಲಾಗಿದೆ. ಇಲ್ಲಿನ ಸ್ಥಳೀಯ ಪ್ರಗತಿಪರ ಯುವಜನತೆ ಸುಮಾರು ೧೫ ವರ್ಷಗಳ ಹಿಂದೆಯೇ ಸ್ವತಃ 'ಜಲಚಕ್ರ'ಗಳನ್ನು ನಿರ್ಮಿಸಿ ಅದನ್ನು ಬೆಲ್ಟ್ ಗಳ ಮೂಲಕ ಹಳೆ ಜನರೇಟರ್ ಗಳಿಗೆ ಸಂಪರ್ಕಿಸಿ ಪುಲ್ಲಿ, ಬೆಲ್ಟ್, ಹಳೆಯ ಜನರೇಟರ್ ಗೆ ಪೈಪ್ ಸೆರಿಸಿ ಸುಮಾರು ೨೦ ಸಾವಿರದಿಂದ ೩೦ ಸಾವಿರ ಹಣವನ್ನು ಖರ್ಚುಮಾಡಿದರು. ಈ ಯಂತ್ರಗಳು ಇಂದಿಗೂ ಸಮರ್ಪಕವಾಗಿ ಕೆಲಸಮಾಡುತ್ತಿವೆ. ಮಳೆಗಾಲದಲ್ಲಿ ನೀರಿಗೆ ಬರವಿಲ್ಲ. ಬೇಸಿಗೆಯಲ್ಲಿ ತೊರೆಗಳು ಬತ್ತುತ್ತವೆ. ಆಗ 'ಮೈಕ್ರೋ ಜಲವಿದ್ಯು ಘಟಕ'ದೊಂದಿಗೆ 'ಸೋಲಾರ್ ವಿದ್ಯುತ್ ವ್ಯವಸ್ಥೆ'ಯನ್ನು ಏರ್ಪಡಿಸಲಾಗಿದೆ.

'ಕ್ರೆಡೆಲ್ ಸಂಸ್ಥೆಯ ಸಹಕಾರ'[ಬದಲಾಯಿಸಿ]

ಈ ಸಂಸ್ಥೆ,'ಮೈಕ್ರೊ ಜಲ ವಿದ್ಯುತ್ ಘಟಕ'ಗಳಿಗೆ ಧನಸಹಾಯವನ್ನು ನೀಡಲು ಮುಂದೆಬಂದರು. ಗ್ರಾಮದ ಜನ ಇದರ ಸದುಪಯೋಗ ಪಡೆದರು. 'ಕೇಂದ್ರ ಸರಕಾರದ ಮಿನಿಸ್ಟ್ರಿ ಆಫ್ ನ್ಯೂ ರಿನ್ಯುವೇಬಲ್ ಎನರ್ಜಿ'(ಎಂ.ಎನ್.ಆರ್.ಪಿ) ನ 'ಪಿಕೋ ಎಡ್ರಸ್ ಸ್ಕೀಂ' ನ ಆಡಿಯಲ್ಲಿ ರಾಜ್ಯದಲ್ಲಿ 'ಕರ್ನಾಟಕ ರಿನ್ಯುವಲ್ ಎನರ್ಜಿ ಡೆವೆಲಪ್ ಮೆಂಟ್ ಲಿಮಿಟೆಡ್ ಸಂಸ್ಥೆ' (ಕ್ರೆಡೆಲ್) ಯನ್ನು 'ನೋಡೆಲ್ ಏಜೆನ್ಸಿ'ಯಾಗಿ ನೇಮಿಸಿದ್ದಾರೆ. ಗುಡ್ಡಗಾಡು ಪ್ರದೇಶವಿದ್ದು ಎತ್ತರದಿಂದ ಹರಿದು ಬರುವ ತೊರೆನೀರಿನ ಸೌಲಭ್ಯವಿರುವ ಪ್ರದೇಶಗಳಲ್ಲಿ ಮಾತ್ರ ಈ ಯೋಜನೆ ಜಾರಿಯಲ್ಲಿದೆ. ಶಿವಮೊಗ್ಗದ 'ನಿಸರ್ಗ ಎನ್ವಿರಾನ್ ಮೆಂಟ್ ಟೆಕ್ನಾಲಜಿ ಸಂಸ್ಥೆ', ಹಾಗೂ ಅದರ ಸಹ ಸಂಸ್ಥೆ,'ಬೆಳ್ತಂಗಡಿಯ ಕರಾವಳಿ ಎನ್ವಿರಾನ್ಮೆಂಟ್ ಟೆಕ್ನಾಲಜಿ ಸಂಸ್ಥೆ'ಯವರು, ಇದಕ್ಕೆ ಬೇಕಾದ ಯಂತ್ರೋಪಕರಣಗಳನ್ನು ತಯಾರಿಸಿ ಸರಬರಾಜುಮಾಡುವ ಗುತ್ತಿಗೆಯನ್ನು ಪಡೆದಿವೆ.

ಧರ್ಮಸ್ಥಳದ ಶ್ರೀಕ್ಷೇತ್ರದ ನೆರವು[ಬದಲಾಯಿಸಿ]

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ (ಎಸ್.ಕೆ.ಡಿ.ಆರ್.ಡಿ.ಪಿ) ಯವರೂ ಚೆಂಬು ಗ್ರಾಮೀಣಾಭಿವೃದ್ಧಿ ಯೋಜನೆಯ ಹಾಗೂ ನೈಸರ್ಗಿಕ ವಿದ್ಯುತ್ ಉತ್ಪಾದನೆಗೆ ಬೆಂಬಲವಾಗಿ ನಿಂತು ಸ್ವಸಹಾಯದ ಸಂಸ್ಥೆಗಳ ಸದಸ್ಯರು ಸ್ಥಾಪಿಸುವ ಇಂತಹ ಚಿಕ್ಕ ಘಟಕಗಳಿಗೆ ಧನಸಹಾಯವನ್ನು ನೀಡುತ್ತಿದ್ದಾರೆ.

'ವಾಲ್ ಟೆಕ್ ಹೈಡೆಲ್ ಸಿಸ್ಟಂ ಸಂಸ್ಥೆ’ಯ ನೆರವು[ಬದಲಾಯಿಸಿ]

ಕೇರಳದ ಮೂಲದ ಈ ಕಂಪೆನಿ, ಕಡಿಮೆ ನೀರಿನ ಪ್ರದೇಶಗಳಲ್ಲಿ ಬಳಸಬಹುದಾದ ಕಮ್ಮಿ ಸಾಮರ್ಥ್ಯದ ಯಂತ್ರೋಪಕರಣಗಳನ್ನು ಉತ್ಪಾದಿಸುತ್ತಿದ್ದು 'ಎಸ್.ಕೆ.ಡಿ.ಆರ್.ಡಿ.ಪಿ.'ಯವರು ಈ ಯಂತ್ರಗಳನ್ನು ತಮ್ಮ ಸದಸ್ಯರಿಗೆ ಒದಗಿಸುತ್ತಿದ್ದಾರೆ. 'ಚೆಂಬು ಗ್ರಮ'ದ ೧೩ ಜನರು ಈ ಸೌಲಭ್ಯದಿಂದ ಉಪಕೃತರಾಗಿದ್ದಾರೆ.

ಈ ಯೋಜನೆಯ ಫಲಾನುಭವಿಗಳು[ಬದಲಾಯಿಸಿ]

  • 'ಮೇಲ್ಚೆಂಬುವಿನ ಅರುಣಕುಮಾರ್'
  • 'ಪೂಜಾರಿ ಗದ್ದೆಯ ಪಿ.ಆರ್.ದಿನೇಶ್',
  • 'ಕಾಂತಬೈಲಿನ ಕೆ.ಕೆ.ಶಿವಪ್ಪ',
  • 'ಬಿಳಿಯೂರು ಕಜೆಯ ಬಿ.ಆರ್.ಜಯಂತ',
  • 'ಉಂಬಾಳೆಯ ಎನ್.ಪಿ.ರುದ್ರೇಶ',
  • 'ಎಂ.ವಿ.ಬಾಲಕೃಷ್ಣ',
  • 'ಎಂ.ರಮೇಶ್',
  • 'ಗುಂಡ್ಯ ಮನೆಯ ಮೀನಾಕ್ಷಿ',
  • 'ಹೊದ್ದೆಟ್ಟಿ ಮನೆಯ ಎಚ್.ಪಿ.ನೇತ್ರಾವತಿ',
  • 'ಎನ್.ಎ.ಹೇಮಲತಾ',
  • 'ಹೊಸೂರು ಮನೆಯ ಜಯರಾಮ',
  • 'ಕೆದಂಬಾಡಿ ಮನೆಯ ಕೆ.ಎಸ್.ಮಲ್ಲಯ್ಯ',
  • 'ಪೆರಂಬಾರು ಮನೆಯ ಲಿಂಗಪ್ಪ'

'ಸುಳ್ಯ' ಹಾಗೂ 'ಮಡಕೇರಿ' ತಾಲ್ಲೂಕುಗಳಲ್ಲಿ ೨೦೦ 'ಮಿನಿ ವಿದ್ಯುತ್ ಉತ್ಪಾದನಾ ಕೇಂದ್ರ'ಗಳನ್ನು ನಿರ್ಮಿಸಲು 'ಎಸ್.ಕೆ.ಡಿ.ಆರ್.ಡಿ.ಪಿ'. ಉದ್ದಿಶ್ಯವನ್ನು ಹೊಂದಿದ್ದು ಸುಮಾರು ೧೩೦ ಕ್ಕೂ ಹೆಚ್ಚು ಕೇಂದ್ರಗಳನ್ನು ಸ್ಥಾಪಿಸಿದೆ. 'ಅಡಿಕೆ ಬೆಳೆ' ಈ ಪ್ರದೇಶದ ಪ್ರಮುಖ ಬೆಳೆಯಾಗಿದೆ. 'ಹಳದಿ ಎಲೆ ರೋಗ' ಇಲ್ಲಿನ ಆಡಿಕೆ ಬೆಳೆಗೆ ಮಾರಕವಾಗಿತ್ತು. ರೋಗ ನಿಯಂತ್ರಣಕ್ಕೆ ಕೃಷಿ ಇಲಾಖೆಯೂ ಶಕ್ತಿಮೀರಿ ದುಡಿಯುತ್ತಿದೆ. ಆದರೂ ಈ ಊರಿನ ಜನ ಹೊರಗೆ ಹೋಗದೆ, ಧೃತಿಗೆಡದೆ, ತಮ್ಮ ನೆಲವನ್ನು ಪ್ರೀತಿಸುತ್ತಿದ್ದಾರೆ. ಸ್ವಾವಲಂಭನೆ, ಮತ್ತು ಸ್ವಾಭಿಮಾನ, ಅವರ ಹೃದಯವನ್ನಾವರಿಸಿದೆ. ಕೆಲವು ಕೃಷಿಕರು, ಉಪಬೆಳೆಗಳಾದ 'ಕಾಳುಮೆಣಸು', 'ಕೋಕೋ', 'ಬಾಳೆ'ಯನ್ನು ನಂಬಿ ಬೆಳೆಸುತ್ತಿದ್ದಾರೆ. ಮತ್ತೆ ಕೆಲವರು 'ರಬ್ಬರ್ ಕೃಷಿಗಾರ'ರಾಗಿದ್ದಾರೆ.[೨]

ತೊರೆನೀರಿನ ರಭಸವನ್ನು ಬಳಸಿ ವಿದ್ಯುತ್ ಉತ್ಪಾದನೆ[ಬದಲಾಯಿಸಿ]

೧ ಕಿ.ವ್ಯಾಟ್ ನಿಂದ ೫ ಕಿ.ವ್ಯಾಟ್ ವರೆಗೆ ಈ ತರಹದ ವ್ಯವಸ್ಥೆಯನ್ನು ಬಳಸಿ ಕಡಿಮೆ ದರದಲ್ಲಿ ವಿದ್ಯುತ್ ಉತ್ಪಾದಿಸಬಹುದು. ಪ್ರತಿ ಘಟಕಕ್ಕೆ ೧.೧೦ ಲಕ್ಷ ರುಪಾಯಿಗಳ ಧನಸಹಾಯನೀಡಲಾಗುತ್ತದೆ. ಕನಿಷ್ಠ ೧೫ ಅಡಿ ಎತ್ತರದಲ್ಲಿ ೨ ಅಂಗುಲ ವ್ಯಾಸದ ಕೊಳವೆಯಿಂದ ನೀರು ದೊರೆತರೆ, ೧ ಕಿ.ವ್ಯಾಟ್ ವಿದ್ಯುತ್, ಹಾಗೂ ೫೦ ಅಡಿ ಎತ್ತರದಲ್ಲಿ ನೀರು ದೊರೆತರೆ, ೨ ಕಿ.ವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ಪ್ರತಿವರ್ಷವೂ ಸುಮಾರು ೨೫೦ ಕೃಷಿಕರು ಧನಸಹಾಯದ ಲಾಭ ಪಡೆಯುತ್ತಾರೆ. ಬ್ಯಾಂಕ್ ಋಣದ ವ್ಯವಸ್ಥೆಯನ್ನು ಗುತ್ತಿಗೆ ಪಡೆದ ಕಂಪೆನಿಗಳು, ಹೊಂದಾಣಿಕೆ ಮಾಡಿ ಹಂಚುತ್ತಾರೆ. ೧೧ ಜನ ಕೃಷಿಕರಿಗೆ ಈಗಾಗಲೇ 'ಕ್ರೆಡಿಲ್' ಸಹಾಯಧನವನ್ನು ವಿತರಿಸಿದೆ. ೧ ಇಂಚ್ ನೀರಿದ್ದರೆ,೮೦ ವ್ಯಾಟ್ ಶಕ್ತಿಯ 'ಮೈಕ್ರೊ ಜಲವಿದ್ಯುತ್ ಘಟಕ'ವನ್ನು ಅಳವಡಿಸಬಹುದು. ೭ ಅಥವಾ ೯ ವ್ಯಾಟ್ ಶಕ್ತಿಯ, 'ಸಿ.ಎಫ್.ಎಲ್.ಬಲ್ಬ್'ಗಳನ್ನು ಉರಿಸಲು, ಮತ್ತು ಕಪ್ಪು ಬಿಳುಪು ಟೆಲೆವಿಶನ್, ಮೊಬೈಲ್ ಚಾರ್ಜ್ ಮಾಡಲು ಇವು ಉಪಯೋಗವಾಗುತ್ತವೆ. ದೊರೆಯುವ ಧನಸಹಾಯದ ೫,೦೦೦ ರೂಗಳಲ್ಲಿ,

  • 'ಜಲಚಕ್ರ' ಮತ್ತು 'ಜನರೇಟರ್ ವೆಚ್ಚ'- ೪,೪೦೦ ರೂ
  • 'ಪೈಪ್ ಖರೀದಿ'ಗೆ ೬೦೦ ರೂಗಳನ್ನು ಬಳಸಬಹುದು.
  • 'ಮನೆಯ ವೈರಿಂಗ್' ಅವರ ಅನುಕೂಲಕ್ಕೆ ತಕ್ಕಂತೆ,ತಾವೇ ವಹಿಸಬಹುದು.

ಹೆಚ್ಚಿನ ನೀರಿನ ಒತ್ತಡದ ಅನುಕೂಲವಿದ್ದರೆ[ಬದಲಾಯಿಸಿ]

೩೦೦-೮೦೦ ವ್ಯಾಟ್ 'ಜಲಚಕ್ರ' ಮತ್ತು 'ಜನರೇಟರ್' ಸ್ಥಾಪಿಸಬಹುದು. ೩೦೦ ವ್ಯಾಟ್ ನಲ್ಲಿ ಕಲರ್ ಟಿವಿ, ಫ್ಯಾನ್, ಮತ್ತು ಕಂಪ್ಯೂಟರ್ ನಡೆಸಬಹುದು.ಇದಕ್ಕೆ ತಗಲುವ ಖರ್ಚು, ೧೨ ಸಾವಿರ ರೂಪಾಯಿಗಳು. ೮೦೦ ವ್ಯಾಟ್ ನಲ್ಲಿ, ಇಸ್ತ್ರಿ ವ್ಯವಸ್ಥೆ, ಗ್ರೈಂಡರ್ ಗಳನ್ನು ಬಳಸಬಹುದು. ಇದಕ್ಕೆ ತಗುಲುವ ವೆಚ್ಚ- ೨೨ ಸಾವಿರ ರೂಗಳು. ಸಹಾಯಧನದ ಮಿತಿ ೫ ಸಾವಿರರೂ. ಉಳಿದ ಹಣವನ್ನು 'ಎಸ್.ಕೆ.ಡಿ.ಆರ್.ಡಿ.ಪಿ', ಸಾಲದರೂಪದಲ್ಲಿ ಒದಗಿಸಿಕೊಡುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. ಸ್ಥಳ ನಾಮಗಳು ಮತ್ತು ಐತಿಹಗಳು:(೨೦೧೬)ಸಂ.ಪೂವಪ್ಪ ಕಣಿಯೂರು.ಪ್ರ,ಕನ್ನಡ ಸಂಘ ನೆಹರು ಮೆಮೋರಿಯಲ್ ಕಾಲೇಜು,ಸುಳ್ಯ.
  2. 'ಚೇತನ ರಾಂ ಇರಂತ ಕಜಿ', ೪೨, 'ಸುಧಾ',೨೫, ಆಗಸ್ಟ್, ೨೦೧೧.