ಮೀರಾ ಅಲ್ಫಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೀರಾ ಅಲ್ಫಾಸ
ಚಿತ್ರ:MiraAlfassa-TheMother.jpg
ಮೀರಾ ಅಲ್ಫಾಸ
ಜನ್ಮ(೧೮೭೮-೦೨-೨೧)೨೧ ಫೆಬ್ರವರಿ ೧೮೭೮
ಜನ್ಮ ಸ್ಥಳಪ್ಯಾರಿಸ್
ಜನ್ಮ ನಾಮಮೀರಾ ಅಲ್ಫಾಸ
ಮರಣ17 November 1973(1973-11-17) (aged 95)
ಮರಣ ಸ್ಥಳಶ್ರೀ ಅರವಿಂದಾಶ್ರಮ, ಪುದುಚೇರಿ
ತತ್ತ್ವಶಾಸ್ತ್ರಅತೀತ ಮಾನಸ ಯೋಗ
ಉಕ್ತಿಮಾನವ ಮತ್ತು ಮನಸ್ಸು ಸೃಷ್ಟಿಯ ಪರಮಾವಧಿಗಳಲ್ಲ. ಅತೀತ ಮಾನಸಿಕ ಜೀವಿಯು ಅನುವಾಗುತ್ತಿದೆ

ಮೀರಾ ಅಲ್ಫಾಸ - (ಫೆಬ್ರುವರಿ ೨೧ ೧೮೭೮ - ನವೆಂಬರ್ ೧೭ ೧೯೭೩) (ನಂತರ ಮೀರಾ ಮೋರಿಸೆಟ್, ಮೀರಾ ರಿಚರ್ಡ್) ಹೆಸರಾಂತ ಆಧ್ಯಾತ್ಮ ಗುರುಗಳಲ್ಲೊಬ್ಬರು. ಇವರನ್ನು ಅರವಿಂದಾಶ್ರಮದ ಶ್ರೀ ಮಾತೆಯವರೆಂದೂ ಕರೆಯುವ ವಾಡಿಕೆಯಿದೆ. ಇವರು ಶ್ರೀ ಅರವಿಂದರ ಸಹಕಾರ್ಯಕಾರಿಗಳಾಗಿದ್ದರು. ಶ್ರೀ ಅರವಿಂದರೂ ಇವರೂ ಕೂಡಿ ಅತೀತ ಮಾನಸ ಯೋಗವೆಂಬ ವಿನೂತನ ಯೋಗ ಪದ್ಧತಿಯನ್ನು ಪ್ರಾರಂಭಿಸಿದರು. ಅವರ ವಿವರಣೆಯಂತೆ, ಹಿಂದಿನ ವಿಕಸನಗಳಲ್ಲಿ ಪ್ರಾಣ ಮತ್ತು ಮನಸ್ಸುಗಳು ಪೃಥ್ವಿಯಲ್ಲಿ ಹೇಗೆ ಸಹಜವಾಗಿ ಕ್ರಿಯಾಶೀಲಗೊಂಡವೋ ಅದೇ ರೀತಿಯಲ್ಲಿ ಈ ಯೋಗವು ಮನಸ್ಸಿನಾಚೆಯಿರುವ (ಅತೀತ ಮಾನಸಿಕ) ಶಕ್ತಿಯನ್ನೂ ಕೂಡ ಪೃಥ್ವಿಯ ಮಟ್ಟಕ್ಕೆ ಕೆಳತಂದು ಕಾರ್ಯಗತಗೊಳಿಸಲು ಯತ್ನಿಸುವುದು.

ಚಿತ್ರ:P;.JPG
'ಪಾಂಡಿಚೆರಿಯ ಅರವಿಂದಾಶ್ರಮದ ಹೊರನೋಟ'-೨೦೧೨

ಜನನ[ಬದಲಾಯಿಸಿ]

ಮೀರ (ಅಥವಾ ಮಿರ್ರಾ) ಅಲ್ಫಾಸಾ ೧೮೭೮ರಲ್ಲಿ ಫ್ರಾನ್ಸ್ ದೇಶದ ಪ್ಯಾರಿಸ್ ನಗರದಲ್ಲಿ ಜನಿಸಿದರು. ಅವರ ತಂದೆ ಮಾರೀಸ್ ಟರ್ಕಿ ದೇಶೀಯ ಯಹೂದ್ಯ ಮತ್ತು ಅವರ ತಾಯಿ ಈಜಿಪ್ಟ್ ದೇಶೀಯ ಯಹೂದ್ಯೆ ಮಾತಿಲ್ಡೆ ಇಸ್ಮಾಲೌನ್. ಅವರ ಕುಟುಂಬ ಮೀರಾ ಜನಿಸುವ ಒಂದು ವರ್ಷಮೊದಲು ಫ್ರಾನ್ಸ್ ದೇಶಕ್ಕೆ ವಲೆಸೆ ಬಂದು ನೆಲೆಸಿದ್ದಿತು. ಮೀರಾ ರವರಿಗೆ ಮತ್ತೇಯೋ ಎಂಬ ಒಬ್ಬ ಹಿರಿಯ ಸೋದರನು ಇದ್ದನು.

ಜೀವನ[ಬದಲಾಯಿಸಿ]

ಮೀರಾ ರವರ ಕಥನದಂತೆ, ಅವರು ಬಾಲ್ಯದಿಂದಲೇ ಅಧ್ಯಾತ್ಮಿಕವಾಗಿ ಜಾಗೃತರಾಗಿದ್ದು ಅನೇಕ ಅನುಭವಗಳನ್ನು ಪಡೆದುಕೊಂಡಿದ್ದರು.ಅವರು ಮುಂದೆ ೧೯೦೫ರಲ್ಲಿ ಆಲ್ಜೀರಿಯಾದ ಟ್ಲೇಂಚೆನ್ ನಲ್ಲಿ ಮ್ಯಾಕ್ಸ್ ಥಿಯೋನ್ ಎಂಬ ಗುಹ್ಯವಿದ್ಯಾಭ್ಯಾಸಿಯಿಂದ ಶಿಕ್ಷಣವನ್ನು ಪಡೆದುಕೊಂಡರು. ೧೯೧೪ರಲ್ಲಿ ಅವರು ಶ್ರೀ ಅರವಿಂದರನ್ನು ಭೇಟಿಮಾಡಿದರು ಮತ್ತು ಅವರ ಅಧ್ಯಾತ್ಮಿಕ ಗುರಿಯೂ ಕೂಡ ಮೀರಾ ರವರ ಗುರಿಯೇ ಆಗಿತ್ತೆಂದು ಕಂಡುಕೊಂಡರು. ಬಳಿಕ ಅವರು ೧೯೨೦ರಲ್ಲಿ ಶ್ರೀ ಅರವಿಂದರೊಡನೆ ಸಹಯೋಗಿಸಲು ಶಾಶ್ವತವಾಗಿ ಪುದುಚೇರಿಯಲ್ಲಿಯೇ ನೆಲೆಸಿದರು. ಶ್ರೀ ಅರವಿಂದರು ೧೯೨೬ರಲ್ಲಿ ಏಕಾಂತಕ್ಕೆ ತೆರಳಿದಾಗ ಮೀರಾರವರೇ ಆಶ್ರಮದ ಜವಾಬ್ದಾರಿಯನ್ನು ವಹಿಸಿಕೊಂಡರು, ಮತ್ತು ಅವರ ಮೇಲ್ವಿಚಾರಣೆಯಡಿ ಶ್ರೀ ಅರವಿಂದ ಆಶ್ರಮವು ದೊಡ್ಡ ಸಂಸ್ಥೆಯಾಗಿ ಬೆಳೆಯಿತು. ಶ್ರೀ ಅರವಿಂದರು ೧೯೨೭ರಲ್ಲಿ ರಚಿಸಿದ ತಮ್ಮ 'ದಿ ಮದರ್' ಎಂಬ ಕೃತಿಯಲ್ಲಿ ಮೀರಾರವರನ್ನು ಪರಾಶಕ್ತಿಯ ಅಭಿವ್ಯಕಿಯೆಂದೂ, ಯೋಗದಲ್ಲಿ ತಮ್ಮ ಸರಿಸಮರೆಂದೂ ಘೋಷಿಸಿದರು. ಅಂದಿನಿಂದ ಮೀರಾರವರನ್ನು ಶಿಷ್ಯವರ್ಗವು ಶ್ರೀ ಮಾತೆಯೆಂದೇ ಸಂಬೋಧಿಸತೊಡಗಿತು. ಶ್ರೀ ಅರವಿಂದರ ಮರಣಾನಂತರ ಮುಂದುವರೆಸಿದ ಅವರ ಸಾಧನೆಯಲ್ಲಿ ೧೯೫೬ರಲ್ಲಿ ಅವರು ಅತೀತ ಮಾನಸಿಕ ಶಕ್ತಿಯು ಅಡಚಣೆಯಿಲ್ಲದೆ ಭೌತಿಕಕ್ಕೆ ಹರಿದು ಬರುವಂತೆ ತೆರವನ್ನು ನಿರ್ಮಿಸಿರುವರೆಂದೂ, 'ಪೃಥ್ವಿಯ ಮೇಲೆ ಅತೀತ ಮಾನಸದ ಅಭಿವ್ಯಕ್ತಿಯು ಭರವಸೆಯಲ್ಲ, ಒಂದು ಜೀವಂತ ತಥ್ಯ' ಎಂದು ಘೋಷಿಸಿದರು. ಆನಂತರ (ಅಂದರೆ, ೧೯೫೬ರಿಂದ ೧೯೭೩ರಲ್ಲಿ ಅವರ ದೇಹಾಂತವರೆಗೆ) ಪ್ರಾಣ ಮತ್ತು ಮನಸ್ಸುಗಳು ಪೃಥ್ವೀ ಪ್ರಕೃತಿಯಲ್ಲಿ ನೆಲೆಗೊಂಡಂತೆ ಅತೀತ ಮಾನಸವನ್ನು ಸುಭದ್ರವಾಗಿ ಭೌತಿಕ ಪ್ರಕೃತಿಯಲ್ಲಿ ಸಂಸ್ಥಾಪಿಸಲು ಅವರು ಭೌತಿಕ ಸ್ತರದಲ್ಲಿ, ಅಂದರೆ ತಮ್ಮ ಶರೀರದಲ್ಲಿಯೇ ಭೌತಿಕದ ಪರಿವರ್ತನೆಯ ಕಾರ್ಯದಲ್ಲಿ ತೊಡಗಿರುವರೆಂದು ಹೇಳಿದರು.

ಬೋಧನೆ[ಬದಲಾಯಿಸಿ]

ಮೀರಾ ರವರು, ಶ್ರೀ ಅರವಿಂದರಂತೆ, ಅತೀತ ಮಾನಸ ಯೋಗವನ್ನು ಬೋಧಿಸುವರು. ಪ್ರಕೃತಿಯ ವಿಕಸನವು ಅಧ್ಯಾತ್ಮಿಕ ದೃಷ್ಟಿಕೋನದಿಂದ ಪ್ರಜ್ಙೆಯ ವಿಕಸನವೆಂದೂ, ಭೌತಿಕ, ಪ್ರಾಣ, ಮತ್ತು ಮನಸ್ಸುಗಳು ಕ್ರಮವತ್ತಾಗಿ ಜಡಜಗತ್ತು, ಸಸ್ಯ ಮತ್ತು ಪಶುಗಳು, ಮತ್ತು ಮನುಷ್ಯನಲ್ಲಿ ಅಭಿವ್ಯಕ್ತಿಯನ್ನು ಪಡೆದುಕೊಂಡಿತೆಂದೂ, ಮುಂದಿನ ವಿಕಸನವು ಮನಸ್ಸನ್ನು ಮೀರಿಸಿದ ಪ್ರಜ್ಙೆಯ ಸ್ಥಿತಿಯ ಅಭಿವ್ಯಕ್ತಿಯೆಂದು ಹೇಳುವರು. ಪೌರ್ವಾತ್ಯ ಮತ್ತು ಪಾಶ್ಚಿಮಾತ್ಯ ಅಧ್ಯಾತ್ಮಿಕ ಪರಂಪರೆಗಳು ಸೂಚಿಸುವಂತೆ, ಮನಸ್ಸಿನಾಚೆಯ ಅತಿ ಪ್ರಜ್ಙೆಯಲ್ಲಿಯೇ ಸಂತೃಪ್ತರಾಗಿ, ಭೌತಿಕ ಜಗತ್ತಿಗೆ ಈ ಅನ್ವೇಷಣೆಯ ಗೆಲುವುಗಳನ್ನು ಕೆಳ ತರದೆ ಅತೀತದಲ್ಲಿ ಲೀನವಾಗಿಹೋಗುವುದು ತರವಲ್ಲದ್ದೆಂದೂ, ಅತಿಪ್ರಜ್ಙೆಯ ಪ್ರಾಪ್ತಿಗಳನ್ನು ಮಾನಸಿಕ, ಪ್ರಾಣಿಕ ಮತ್ತು ಭೌತಿಕಗಳಿಗೆ ಇಳಿಸಬೇಕೆಂದೂ, ಈ ರೀತಿ ನವೀನ ಜೀವಜಾತಿಯನ್ನು, ಅತಿಮಾನವತೆಯನ್ನು ಅಭಿವ್ಯಕ್ತಗೊಳಿಸಬೇಕೆಂದು ಅಭಿಪ್ರಾಯ ಪಡುವರು.

ಅವರ ಬೋಧನೆಗಳನ್ನು ಶ್ರೀ ಅರವಿಂದಾಶ್ರಮದಿಂದ ಪ್ರಕಾಶಿತವಾದ ಅವರ 'ಸಮಗ್ರ ವಾಙ್ಮಯ'ದಲ್ಲಿಯೂ, ಸತ್ಪ್ರೇಮ್ ರವರಿಂದ ಸ್ಥಾಪಿತವಾದ ಮೀರಾ ಅದಿತಿ ಸಂಸ್ಥೆಯ 'ದಿ ಮದರ್ಸ್ ಅಜೆಂಡಾ'ದಲ್ಲಿ ಕಾಣಬಹುದು (ಸೂಚನೆ: ಸಮಗ್ರ ವಾಙ್ಮಯವು ಮೀರಾ ಅದಿತಿಯ ಪ್ರಕಟಣೆಗಳನ್ನು ಒಳಗೊಂಡಿಲ್ಲ).