ಪುತ್ರಂಜೀವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಪುತ್ರಂಜೀವಿ ಇಂದ ಪುನರ್ನಿರ್ದೇಶಿತ)
ಪುತ್ರಂಜೀವ
ಪುತ್ರಂಜೀವ ರಾಕ್ಸ್ ಬರ್ ಗೈ
Scientific classification
ಸಾಮ್ರಾಜ್ಯ:
plantae
ಕುಲ:
ಪುತ್ರಂಜೀವ

Species

ಪುತ್ರಂಜೀವ ಮದ್ಯಮ ಪ್ರಮಾಣದ ಮರ. ಹಿಮಾಲಯದ ತಪ್ಪಲಲ್ಲಿ, ಶ್ರೀಲಂಕಾ,ಮಯನ್ಮಾರ್, ಥೈಲ್ಯಾಂಡ್ ಹಾಗೂ ಬಾಂಗ್ಲಾದೇಶದಲ್ಲಿ ಬೆಳೆಯುತ್ತದೆ. ಕರ್ನಾಟಕದಲ್ಲಿ ನಿತ್ಯಹರಿದ್ವರ್ಣಕಾಡುಗಳಲ್ಲಿ ಕಂಡುಬರುತ್ತದೆ. ಇದೊಂದು ಅಲಂಕಾರಿಕ ಸಸ್ಯ. ಇದಕ್ಕೆ ಅಮಾನಿ, ಮೆಣಸಿನಕಾಳೆ ಎಂಬ ಇತರ ಹೆಸರುಗಳಿವೆ. ಈ ಮರವನ್ನು ಮಲಯಾಳಮ್ ಭಾಷೆಯಲ್ಲಿ ಪೊಂಗಲಮ್, ಸಂಸ್ಕೃತದಲ್ಲಿ ಗರ್ಭದಾ, ಸೂತಜೀವಕ, ಅರ್ಥಸಾಧಕ ಎಂದು ಕರೆಯಲಾಗುತ್ತದೆ. ಈ ಮರಗಳು ಸಾಮಾನ್ಯವಾಗಿ ನದಿಗಳ ಉದ್ದಕ್ಕೂ ಇರುವ ಮೆಕ್ಕಲುಮಣ್ಣಿನಲ್ಲಿ, ಜೌಗು ಮಣ್ಣಿನಲ್ಲಿ ಬೆಳೆಯುತ್ತವೆ. ಶುಷ್ಕ ಪ್ರದೇಶಗಳಲ್ಲಿ ಇವುಗಳ ಬೆಳವಣಿಗೆ ಕುಂಠಿತವಾಗಿರುತ್ತದೆ. ಮಳೆಗಾಲದಲ್ಲಿ ಬೀಜಗಳ ಮೂಲಕ ವರ್ಧಿಸುವುವು.

ಸಸ್ಯಶಾಸ್ತ್ರೀಯ ವರ್ಗೀಕರಣ[ಬದಲಾಯಿಸಿ]

ಇದು ಪುತ್ರಂಜೀವೇಸಿ (Putranjivaceae) ಕುಟುಂಬಕ್ಕೆ ಸೇರಿದ್ದು, ಪುತ್ರಂಜೀವ ರಾಕ್ಸ್ ಬರ್ ಗಿ(Putranjiva Roxburghii Roxb.)ಎಂದು ವೈಜ್ಞಾನಿಕವಾಗಿ ಕರೆಯುತ್ತಾರೆ. ಭಾರತೀಯರಿಗೆ ಈ ಮರದ ಪರಿಚಯ ಹಿಂದಿನಿಂದಲೂ ಇದೆ. ಬಂಜೆತನವನ್ನು ಹೋಗಲಾಡಿಸುವ ಗುಣವನ್ನು ಹೊಂದಿರುವ ಕಾರಣ ಇದಕ್ಕೆ ಪುತ್ರಂಜೀವ ಎಂದು ನಾಮಕರಣ ಮಾಡಲಾಗಿದೆ. ರಾಕ್ಸ್ ಬರ್ ಗಿ ಎಂಬ ದ್ವಿನಾಮ ೧೮೩೨ ರಲ್ಲಿ ಕಲ್ಕತ್ತಾದ ಸಸ್ಯೋದ್ಯಾನವನದ ಮುಖ್ಯಾಧಿಕಾರಿಯಾಗಿದ್ದ ವಿಲಿಯಂ ರಾಕ್ಸ್ ಬರ್ಗ್ ಅವರ ಗೌರವಾರ್ಥ ಇಡಲಾಗಿದೆ.

ಸಸ್ಯದ ಗುಣಲಕ್ಷಣಗಳು[ಬದಲಾಯಿಸಿ]

ಈ ಮರವು ನಿತ್ಯ ಹರಿದ್ವರ್ಣದ ಭಿನ್ನಲಿಂಗಿಮರ, 8-18 ಮೀ.ಎತ್ತರಕ್ಕೆ ಬೆಳೆಯುತ್ತದೆ. ಈ ಮರಗಳು ಜೋತುಬಿದ್ದ ಕೊಂಬೆಗಳನ್ನು ಹೊಂದಿರುತ್ತವೆ. ತೊಗಟೆ ಬೂದುಬಣ್ಣವಾಗಿದ್ದು, ಎಲೆಗಳು ಕಡು ಹಸಿರು ಬಣ್ಣವಿದ್ದು, ಅಂಡಾಕಾರದಲ್ಲಿ ೬-೧೦ಸೆಂ.ಮೀ ಉದ್ದ ಹಾಗೂ ೨-೪ಸೆಂ.ಮೀ ಅಗಲ ಇರುತ್ತದೆ. ಇದರ ಹಣ್ಣುಗಳು ಒಂದು ಬೀಜವನ್ನು ಹೊಂದಿರುತ್ತದೆ. ಬೀಜ ಮತ್ತು ಎಲೆ ಇವುಗಳ ಉಪಯುಕ್ತ ಅಂಗ.

ಔಷಧೀಯ ಉಪಯೋಗಗಳು[ಬದಲಾಯಿಸಿ]

ತಲೆನೋವಿಗೆ ಇದರ ಬೀಜವನ್ನು ಅರೆದು ಶಿರೋ ಲೇಪವನ್ನು ಮಾಡುತ್ತಾರೆ. ಇದರ ಎಲೆಯ ಕಷಾಯವನ್ನು ಜ್ವರಕ್ಕೆ ಬಳಸುತ್ತಾರೆ. ಅತಿಯಾದ ದಾಹ, ಮೂತ್ರಾಶಯ ಹಾಗೂ ಗರ್ಭಾಶಯ ಸಂಬಂಧಿ ಖಾಯಿಲೆಗಳಲ್ಲಿ ಇದನ್ನು ಬಳಸುತ್ತಾರೆ. ಹಸುಗಳ ಗಂಟಲು ಊದಿಕೊಂಡಾಗ ಇದರ ಎಲೆಗಳ ಲೇಪನವನ್ನು ಹಚ್ಚುವ ಕ್ರಮ ಬಿಹಾರದಲ್ಲಿ ರೂಢಿಯಲ್ಲಿದೆ.

ಇತರ ಉಪಯೋಗಗಳು[ಬದಲಾಯಿಸಿ]

ಇದರ ಬೀಜಗಳಿಂದ ಸರ ಪೋಣಿಸಿ ಮಕ್ಕಳ ಕುತ್ತಿಗೆ ಯಾ ಕೈಗೆ ಕಟ್ಟುವ ಪದ್ಧತಿ ಇದೆ. ಮುಖ್ಯವಾಗಿ ಈ ಮರವನ್ನು ಅಲಂಕಾರಕ್ಕೆ ನೆಟ್ಟು ಬೆಳೆಸುತ್ತಾರೆ. ಬೀಜಗಳಿಂದ ಎಣ್ಣೆ ತೆಗೆದು ಬೆಳಕು ಉರಿಸಲು ಉಪಯೋಗಿಸುತ್ತಾರೆ. ಇದನ್ನು ಮನೆ ಕಟ್ಟುವುದಕ್ಕೆ, ವ್ಯವಸಾಯದ ಉಪಕರಣಗಳ ಹಿಡಿಕೆಗಳಿಗೆ ಮತ್ತು ಕಡೆತದ ಸಾಮಾನುಗಳಿಗೆ ಉಪಯೋಗಿಸುತ್ತಾರೆ. ಇದರ ಎಲೆಗಳನ್ನು ಮೇವಿಗಾಗಿ ಉಪಯೋಗಿಸುತ್ತಾರೆ. ಬಜೆದಿಂದ ಮಾಡಿದ ಲೇಪವನ್ನು ಹಣೆಗೆ ಹಚ್ಚುವುದರಿಂದ ತಲೆನೋವಿನಿಂದ ಪರಿಹಾರ. ಎಲೆಯನ್ನು ಕುದಿಸಿ ಮಾಡಿದ ಕಷಾಯವನ್ನು ಸೇವನೆ ಮಾಡುವುದರಿಂದ ಜ್ವರದಿಂದ ಪರಿಹಾರ.

ಅಧಾರ ಗ್ರಂಥಗಳು[ಬದಲಾಯಿಸಿ]

  1. ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ
  2. ಹಸಿರು ಹೊನ್ನು.ಬಿ.ಜಿ.ಎಲ್.ಸ್ವಾಮಿ
  3. A Text Book Of Dravyaguna Vijnana by Dr. Prakash L Hegde and Dr. Harini A
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಬಾಹ್ಯಸಂಪರ್ಕಗಳು[ಬದಲಾಯಿಸಿ]