ಬಿ.ರಾಜಶೇಖರಪ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ. ಬಿ ರಾಜಶೇಖರಪ್ಪ ಕರ್ನಾಟಕದ ಪ್ರಖ್ಯಾತ ಇತಿಹಾಸ ಸಂಶೋಧಕರಲ್ಲಿ ಒಬ್ಬರು. ಇವರ ಜನನ ಸ್ಥಳ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಕೊಕ್ಕನೂರು (೧೫-೬-೧೯೪೭). ಇವರು ಇತಿಹಾಸ ಕ್ಷೇತ್ರವಲ್ಲದೆ ಸಾಹಿತ್ಯ ಕ್ಷೇತ್ರದಲ್ಲಿಯೂ ಗಣನೀಯ ಸೇವೆ ಸಲ್ಲಿಸಿದ್ದಾರೆ.

ಇವರ ಪ್ರಕಟಿತ ಸಾಹಿತ್ಯ ಕೃತಿಗಳು :

  • ತರಂಗ ( ಕಾವ್ಯ ಸಂಕಲನ ೧೯೭೧ )
  • ಮಹಾಕವಿಯತ್ತ ಎರಡು ಹೆಜ್ಜೆ (ಕುವೆಂಪು ಕುರಿತ ಲೇಖನಗಳ ಸಂಕಲನ, ೨೦೦೪)
  • ಕರಿಯು ಕನ್ನಡಿಯೊಳಗೆ (ಸಾಹಿತ್ಯ ವಿಮರ್ಶೆ, ೨೦೦೪)

ಸಂಶೋಧನ ಕೃತಿಗಳು :

  • ದುರ್ಗ ಶೋಧನ (ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದ ಲೇಖನಗಳು,೨೦೦೧)
  • ಇತಿಹಾಸ ಕಥನ (ಕರ್ನಾಟಕ ಸಾಹಿತ್ಯ ಅಕ್ಯಾಡಮಿ ಪ್ರಶಸ್ತಿ ವಿಜೇತ ಕೃತಿ ,೨೦೦೧)
  • ನಿರಂತರ ( ಆಯ್ದ ಶಾಸನ, ಸ್ಥಳ ನಾಮ,ಭಾಷಾವಿಜ್ಝಾನ, ವಿಮರ್ಶೆ ಮುಂತಾದುವುಗಳ ಸಂಗ್ರಹ),ಚಿತ್ರದುರ್ಗ ಪಾಳೇಗಾರರ ದಾಖಲೆಗಳು.
  • ಪ್ರಾಚೀನ ಚಿತ್ರದುರ್ಗ (ಪಿ ಹೆಚ್ ಡಿ ಮಹಾ ಪ್ರಬಂಧ)

ಶ್ರೀಯುತರಿಗೆ ಕರ್ನಾಟಕ ಇತಿಹಾಸ ಅಕ್ಯಾಡಮಿಯಿಂದ ಶಾಸನ ಕ್ಷೇತ್ರದ ಸಾಧನೆಗಾಗಿ ಡಾ. ಬಾ. ರಾ. ಗೋಪಾಲ್ ಪ್ರಶಸ್ತಿ ದೊರಕಿದೆ .ಶ್ರೀಯುತರು ೨೦೦೫ನೇ ಇಸವಿಯಲ್ಲಿ ಕರ್ನಾಟಕ ರಾಜ್ಯ ಪ್ರಾಚ್ಯ ವಸ್ತು ಮತ್ತು ಸಂಗ್ರಹಾಲಯಗಳ ಇಲಾಖೆಯಿಂದ ಜರುಗಿದ , ವಿಜಯನಗರ ಇತಿಹಾಸ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಸುಮಾರು ನಾನೂರೈವತ್ತು ಶಿಲಾ ಹಾಗೂ ತಾಮ್ರ ಶಾಸನಗಳನ್ನು ಅಧ್ಯಯನ ಮಾಡಿದ್ದಾರೆ.

ಬಿ ರಾಜಶೇಖರಪ್ಪನವರ ಶಾಸನ ಕ್ಷೇತ್ರದ ಪ್ರಮುಖ ಮೈಲಿಗಲ್ಲುಗಳೆಂದರೆ

  1. ೧೯೨೯ರಿಂದ ೧೯೮೪ರವರೆಗೆ ಪ್ರಾಕೃತಭಾಷೆಯದೆಂದೇ ನಂಬಿಕೊಂಡು ಬಂದಿದ್ದ ಚಂದವಳ್ಳಿಯ ಮಯೂರವರ್ಮನ ಕಾಲದ ಶಾಸನವನ್ನು ಸಂಸ್ಕೃತದ್ದೆಂದು ತೋರಿಸಿ ಕೊಟ್ಟದ್ದು .
  2. ೭ನೇ ಶತಮಾನಕ್ಕೆ ಸೇರಿದ ಬಾದಾಮಿಯ ವರ್ಷ ಶಾಸನವೇ ಅತ್ಯಂತ ಪ್ರಾಚೀನವೆಂದು ತಿಳಿಯಲಾಗಿತ್ತು ,ಅದಕ್ಕಿಂತ ಪ್ರಾಚೀನವಾದ ೫ನೇ ಶತಮಾನದ ವರ್ಷ ಶಾಸನವನ್ನು ಚಿತ್ರದುರ್ಗದ ಧವಳಪ್ಪನ ಗುಡ್ಡದಲ್ಲಿ ಪತ್ತೆ ಹಚ್ಚಿದ್ದು .
  3. ಕನ್ನಡ ನಾಡಿನಲ್ಲಿ ಸಿಕ್ಕಿದ ತಮಿಳು ಶಾಸನಗಳಲ್ಲಿ ,ಕೋಲಾರಜಿಲ್ಲೆಯಲ್ಲಿ ದೊರಕಿದ ೧೦ನೇಶತಮಾನದ ಶಾಸನವೇ, ಪ್ರಾಚೀನವೆಂದು ತಿಳಿಯಲಾಗಿತ್ತು. ಆದರೆ ಕ್ರಿ.ಶ. ೬ನೇ ಶತಮಾನಕ್ಕೆ ಸೇರಿದ ತಮಿಳು ಶಾಸನವನ್ನು ಚಿತ್ರದುರ್ಗ ಜಿಲ್ಲೆಯ ತಮಟಕಲ್ಲು ಗ್ರಾಮದಲ್ಲಿ ಪತ್ತೆ ಹಚ್ಚಿದ್ದು.
  4. ಚಿತ್ರದುರ್ಗದ ಬಳಿಯ ಪಂಡ್ರಹಳ್ಳಿಯಲ್ಲಿ ಬಿ.ಎಲ್. ರೈಸ್ ರು ಕಂಡು ಹಿಡಿದು ಪ್ರಕಟಿಸಿದ ಶಾಸನವನ್ನು ಮಹಿಳೆಯು ರಚಿಸಿದ ಶಾಸನವೆಂದು ತೋರಿಸಿ ಕೊಟ್ಟಿದ್ದು ; ಇದು ಕನ್ನಡ ನಾಡಿನಲ್ಲಿ ಮಹಿಳೆಯು ರಚಿಸಿದ ಮೊದಲ ಶಾಸನ.

ಶ್ರೀಯುತರು ೨೦೦೪ರಲ್ಲಿ ನಡೆದ ಹರಿಹರ ತಾಲ್ಲೋಕಿನ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.