ಕಲ್ಲಿನಾಥ ಶಾಸ್ತ್ರೀ ಪುರಾಣಿಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಂಡಿತ ಕಲ್ಲಿನಾಥ ಶಾಸ್ತ್ರೀ ಪುರಾಣಿಕರದು, ಉತ್ತರ ಕರ್ನಾಟಕದಲ್ಲಿಅಜರಾಮರವಾದ ಹೆಸರು. ಅರಸರು, ಜಗದ್ಗುರುಗಳು, ಪಂಡಿತರು, ಸಾಹಿತಿಗಳು ಮತ್ತು ಜನಸಾಮನ್ಯರಿಂದ ಅಪಾರ ಗೌರವ ಮತ್ತು ಮನ್ನಣೆ ಪಡೆದೆವರಿವರು. ಇವರು ೧೮೯೦ರಿಂದ ೯-೧೨-೧೯೬೮ರವರೆಗೂ ಬಾಳಿದರು ಮತ್ತು ಕೊನೆಯ ದಿನದ ವರೆಗೂ ನಾಡು-ನುಡಿಗಾಗಿ ದುಡಿದರು. ಬೆಂಗಳೂರಿನ ಡಬ್ಬಲ್ ರೋಡ್ ( ಕೆಂಗಲ್ ಹನುಮಂತಯ್ಯ ರೋಡ್)ಬಳಿ ಇರುವ ಕೋಳದ ಮಠದಲ್ಲಿ ಇವರ ಗದ್ದುಗೆ ಇದೆ.

ಇಂದಿನ ಕೊಪ್ಪಳ ಜಿಲ್ಲೆಯಲ್ಲಿರುವ ಕುಕನೂರಿನ ಬಳಿ ಇರುವ ದ್ಯಾಂಪುರ ಇವರ ಊರು. ಇವರು ಸುಪ್ರಸಿದ್ಧ ಆರ್ಯುವೇದ ಪಂಡಿತರಾಗಿದ್ದು, ಹಲವಾರು ಹೊಸ ಔಷಧಗಳನ್ನು ಸಂಶೋಧನೆ ಮಾಡಿದಲ್ಲದೆ, ಅನೇಕ ಮಹತ್ವದ ವೈದಕೀಯ ಗ್ರಂಥಗಳನ್ನು ರಚಿಸಿದ್ದಾರೆ, ಜನಸಾಮಾನ್ಯರಿಗೆ ಧರ್ಮ-ಭಾಷೆ-ಲಿಂಗ ಭೇದವಿಲ್ಲದೆ ಉಚಿತವಾಗಿ ವೈದಕೀಯ ಸೇವೆ ನೀಡಿ - ವೈದ್ಯಭೂಷಣರೆಂದು ಖ್ಯಾತರಾಗಿದ್ದರು. ರಾಜ್ಯಾದಂತ ಅನೇಕ ಬಾರಿ ಪ್ರವಾಸ ಮಾಡಿ, ಧರ್ಮ ಪ್ರಚಾರ ನೆಡೆಸಿದ ಇವರು, ಶರಣ ಬಸವೇಶ್ವರ ಪುರಾಣ ಮೊದಲಾಗಿ ೧೨ ಪುರಾಣಗಳನ್ನು ರಚಿಸಿದ್ದು, ಇಂದಿಗೂ ಈ ಪುರಾಣಗಳನ್ನೇ ಶ್ರಾವಣ ಮಾಸ ಮೊದಲಾದ ಸಂದರ್ಭದಲ್ಲಿ ಪ್ರವಚನ ಮಾಡಲಾಗುತ್ತಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಉತ್ತರ ಕರ್ನಾಟಕದಲ್ಲಿ, ಉರ್ದು,ತೆಲುಗು, ಮರಾಠಿ ಭಾಷೆಗಳ ಪ್ರಾಬಲ್ಯದ ನಡುವೆ ನಲುಗಿ ಹೋಗಿದ್ದೆ ಕನ್ನಡ ಭಾಷೆಯ ಉಳಿವಿಗಾಗಿ ಮತ್ತು ಪ್ರಚಾರಕ್ಕಾಗಿ ಇವರು ಅಪಾರ ಕೆಲಸ ಮಾಡಿದ್ದಾರೆ. ವಿದ್ಯಾಭ್ಯಾಸವಿಲ್ಲದೆ ಗ್ರಾಮೀಣ ಜನರ ಬದುಕಿನಲ್ಲಿ ಸುಧಾರಣೆಯಾಗುವುದಿಲ್ಲವೆಂದು ಮತ್ತು ಅವರು ವಂಚನೆ, ದೌರ್ಜನ್ಯಗಳಿಗೆ ಬಲಿಯಾಗುವುದು ನಿಲ್ಲುವುದಿಲ್ಲವೆಂಬುದು ಇವರ ದೃಢವಾದ ನಂಬಿಕೆಯಾಗಿತ್ತು. ಅದ್ದರಿಂದ ಮಕ್ಕಳಿಗೆ ಮತ್ತು ವಯಸ್ಕರಿಗೂ ವಿದ್ಯಾಭ್ಯಾಸ ನೀಡಲು ಹೋರಾಡಿದ್ದರು. ಕಡು ಬಡತನದಲ್ಲಿ ಜೀವಿಸುತ್ತಿದ್ದರೂ, ಇವರ ಮನೆಯಲ್ಲಿ ನಿರಂತರವಾಗಿ ವಿದ್ಯಾದಾನ, ಅನ್ನದಾನ ನೆಡೆಯುತ್ತಿತು. ಬಡವರಿಗೆ ಸಹಾಯವಾಗಲು ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವ ಪರಂಪರೆಗೆ ನಾಂದಿ ಹಾಡಿದವರಲ್ಲಿ ಇವರು ಪ್ರಮುಖರಾಗಿದ್ದಾರೆ. ನಾಡಿನ ಹೆಸರಾಂತ ಕವಿಗಳು, ಸಾಹಿತಿಗಳು, ಪಂಡಿತರು ಇವರು ಮನೆಯಲ್ಲಿ ಇದ್ದು ಸಾಹಿತ್ಯ-ಸಂಸ್ಕೃತಿಯ ಪ್ರಚಾರ ಮತ್ತು ಕೃಷಿಯಲ್ಲಿ ಭಾಗಿಯಾಗಿದ್ದಾರೆ. ಕುಗ್ರಾಮವಾದ ದ್ಯಾಂಪುರ, ಇವರಿಂದಾಗಿ ಪ್ರಸಿದ್ಧವಾಯಿತು.

ಇವರ ಧರ್ಮಪತ್ನಿ ದಾನಮ್ಮ, ಮಕ್ಕಳು - ಸಿದ್ದಯ್ಯ ಪುರಾಣಿಕ, ಅನ್ನದಾನಯ್ಯ ಪುರಾಣಿಕ, ಬಸವರಾಜ ಪುರಾಣಿಕ, ರುದ್ರಮ್ಮ ಮತ್ತು ಶರಣಮ್ಮ.