ಜೈರಾಮದಾಸ್ ದೌಲತರಾಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೈರಾಮದಾಸ್ ದೌಲತರಾಮ್ ಅವರ ನೆನಪಿನಲ್ಲಿ ಭಾರತಸರಕಾರವು ಹೊರಡಿಸಿದ ಅಂಚೆಚೀಟಿ

ಜೈರಾಮದಾಸ್ ದೌಲತರಾಮ್ (1891-1979) - ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ. ಪತ್ರಿಕೋದ್ಯಮಿ, ರಾಜಕಾರಣಿ.

ಆರಂಭಿಕ ಬದುಕು[ಬದಲಾಯಿಸಿ]

ಹುಟ್ಟಿದ್ದು ಕರಾಚಿಯ ಶ್ರೀಮಂತ ಕ್ಷತ್ರಿಯ ಮನೆತನದಲ್ಲಿ . ತಂದೆ ದೌಲತ್‍ರಾಮ್ ಜೇಠಮಲ್ ಕರಾಚಿಯ ಪ್ರಖ್ಯಾತ ವಕೀಲ. ತಾಯಿ ವಿಷಿನ್ ಬಾಯಿ.

ಜೈರಾಮ್‍ದಾಸ್ ದೌಲತ್‍ರಾಮ್ ತುಂಬ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಸಿಂಧ್ ಪ್ರಾಂತ್ಯಕ್ಕೆ ಪ್ರಥಮರಾಗಿ ತೇರ್ಗಡೆ ಹೊಂದಿದರು (1908). ಕರಾಚಿಯ ಡಿ. ಜೆ. ಕಾಲೇಜಿನಲ್ಲೂ ಮುಂಬಯಿಯ ಎಲ್ಪನ್‍ಸ್ಟನ್ ಕಾಲೇಜಿನಲ್ಲೂ ಉಚ್ಚಶಿಕ್ಷಣ ಪಡೆದರು. ಮುಂಬಯಿ ಪ್ರಾಂತ್ಯಕ್ಕೇ ದ್ವಿತೀಯರಾಗಿ ಇವರು ಪದವಿ ಪಡೆದರು (1912). ಇವರ ಪ್ರತಿಭೆಯನ್ನು ಗುರುತಿಸಿದ ಚಿಕ್ಕಪ್ಪ ಇವರನ್ನು ಇಂಗ್ಲೆಂಡಿಗೆ ಐ.ಸಿ.ಎಸ್. ಪರೀಕ್ಷೆಗಾಗಿ ಕಳಿಸುವ ಯೋಚನೆ ಮಾಡಿದರು. ಆದರೆ ತಾಯಿ ಇದಕ್ಕೆ ಸಮ್ಮತಿಸಲಿಲ್ಲ. ಆಕೆ ಪ್ರೀತಿಯ ಮಗನನ್ನು ಕೆಲವು ವರ್ಷಗಳ ಮಟ್ಟಿಗೂ ದೂರ ದೇಶಕ್ಕೆ ಕಳಿಸಲು ಸಮ್ಮತಿಸಲಿಲ್ಲ. ಬಾಲ್ಯದಿಂದಲೇ ಸಾರ್ವಜನಿಕ ಜೀವನ ಹಾಗೂ ಸೇವೆಗಳಲ್ಲಿ ಅಸ್ಥೆಹೊಂದಿದ್ದ ಜೈರಾಮ್‍ದಾಸ್‍ರಿಗೆ ಇದೊಂದು ವರವಾಗಿ ಪರಿಣಮಿಸಿತು. ಇವರು ಮುಂಬಯಿಯಲ್ಲಿ ನ್ಯಾಯ ಪದವಿ ಪಡೆದರು (1915). ಅನಂತರ ಕರಾಚಿಯಲ್ಲಿ ವಕೀಲಿ ಆರಂಭಿಸಿದರು.

ವಿದ್ಯಾರ್ಥಿಯಾಗಿದ್ದಾಗಲೇ ಜೈರಾಮ್‍ದಾಸರಿಗೆ ಅಖಿಲ ಭಾರತ ಮಟ್ಟದ ನಾಯಕರಾದ ಗೋಪಾಲ ಕೃಷ್ಣ ಗೋಖಲೆ, ಲೋಕಮಾನ್ಯ ತಿಲಕ, ಫಿರೋಜ ಷಹ ಮೆಹತಾ ಹಾಗೂ ಮಹಾತ್ಮ ಗಾಂಧಿಯವರ ಸಮೀಪ ಸಂಪರ್ಕ ಉಂಟಾಗಿತ್ತು. ಈ ಸಂಪರ್ಕ ಅವರಲ್ಲಿ ರಾಷ್ಟ್ರೀಯ ಸೇವಾಭಾವವನ್ನು ಉದ್ದೀಷಿಸಿತು. ಅನಂತರ ಲಾಲ ಲಜಪತರಾಯ, ಸರೋಜಿನಿ ನಾಯಿಡು ಮುಂತಾದ ಇತರ ಅನೇಕ ಮುಂಖಡರ ಸ್ನೇಹ ಲಭಿಸಿತು. ಹಿಂದೂ ಧಾರ್ಮಿಕ ಗ್ರಂಥಗಳು ಅದರಲ್ಲೂ ಭಗವದ್ಗೀತೆಯ ಅಧ್ಯಯನ ಹಾಗೂ ಚಾರ್ಲ್ಸ್ ಡಾರ್ವಿನ್, ಜೆ. ಎಸ್. ಮಿಲ್, ಸ್ಪನ್ಸರ್, ರೂಸೋ ಮೊದಲಾದ ಪಾಶ್ಚಾತ್ಯ ವಿದ್ವಾಂಸರ ಗ್ರಂಥಗಳ ಅಧ್ಯಯನದಿಂದ ಜಯರಾಮ್‍ದಾಸರಲ್ಲಿ ಉದಾರವಾದ ಮತ್ತು ತರ್ಕಶುದ್ಧವಾದ ದೃಷ್ಟಿ ಬೆಳೆಯಿತು.

ಸಾರ್ವಜನಿಕ ಬದುಕು[ಬದಲಾಯಿಸಿ]

ರಾಷ್ಟ್ರೀಯ ಸೇವಾಭಾವದ ತೀವ್ರತೆಯಿಂದಾಗಿ ಇವರಿಗೆ ವಕೀಲಿ ರುಚಿಸಲಿಲ್ಲ. ಇವರು ಅದನ್ನು ತೊರೆದು ಸಾರ್ವಜನಿಕ ಜೀವನದಲ್ಲಿ ಧುಮುಕಿದರು (1916). ಆ್ಯನಿ ಬೆಸಂಟರ ಹೋಮ್ ರೂಲ್ ಲೀಗನ್ನು ಸೇರಿ ಸಿಂಧ್ ಪ್ರಾಂತೀಯ ರಾಜಕೀಯ ಸಮ್ಮೇಳನದ ಕಾರ್ಯದರ್ಶಿಯಾಗಿ ಚುನಾಯಿತರಾದರು. ಅವರಿಗೆ ಆಗ ಕೇವಲ 26 ವರ್ಷ. 1918ರಲ್ಲಿ ಆಖಿಲ ಸಿಂಧ್ ವಿದ್ಯಾರ್ಥಿ ಸಮ್ಮೇಳನದ ಅಧ್ಯಕ್ಷರಾದರು. ಅಮೃತಸರ ಕಾಂಗ್ರೆಸ್ ಅಧಿವೇಶನದಲ್ಲಿ (1919) ಮೊದಲ ಬಾರಿಗೆ ಜೈರಾಮ್‍ದಾಸ್ ಅಖಿಲ ಭಾರತ ವೇದಿಕೆಯನ್ನೇರಿದರು. ಮಾಂಟೆಗ್ಯೂ-ಚೆಮ್ಸಫರ್ಡ್ ಸುಧಾರಣೆಗಳ ಪರ-ವಿರೋಧಿ ಗುಂಪುಗಳ ನಡುವೆ ಸೇತುವೆಯಂತೆ ಕೆಲಸ ಮಾಡಿದರು.

1921ರಲ್ಲಿ ಅಸಹಕಾರ ಆಂದೋಲನ ಪ್ರಾರಂಭವಾದೊಡನೆ ಸಿಂಧೀ ರಾಷ್ಟ್ರೀಯ ಪತ್ರಿಕೆಯಾದ ಹಿಂದೂ (ಆಮೇಲೆ ಹಿಂದೂಸ್ಥಾನ) ಎಂಬ ದೈನಿಕ ಪತ್ರಿಕೆಯ ಸಂಪಾದಕತ್ವ ವಹಿಸಿದರು. ಈ ಪತ್ರಿಕೆ ಮೊದಲೇ ಸರ್ಕಾರದ ವಕ್ರದೃಷ್ಟಿಗೆ ಈಡಾಗಿತ್ತು. ಸಂಪಾದಕ ಜೈರಾಮ್‍ದಾಸ್ ದಸ್ತಗಿರಿಯಾದರು. ಮೊದಲು ಸಾಬರಮತಿಯಲ್ಲಿ, ಆಮೇಲೆ ಯರವಾಡದಲ್ಲಿ ಒಟ್ಟು ಎರಡು ವರ್ಷ ಕಾರಾಗೃಹ ವಾಸ ಅನುಭವಿಸಿದರು. 1924ರಲ್ಲಿ ವಾಯವ್ಯ ಪ್ರಾಂತ್ಯದ ಕೋಹಾಟಿನಲ್ಲಿ ತೀವ್ರವಾದ ಹಿಂದೂ ಮುಸ್ಲಿಂ ಗಲಭೆಗಳಾದುವು. ಮಹಾತ್ಮಗಾಂಧಿ ಉಪವಾಸ ಪ್ರಾರಂಭಿಸಿದರು. ಈ ಸಮಯದಲ್ಲಿ ಜೈರಾಮ್‍ದಾಸರು ಮುಖಂಡರ ಮಾತು ಕತೆಗಳಲ್ಲಿ ಪ್ರಮುಖ ಪಾತ್ರವಹಿಸಿದರಲ್ಲದೆ ಅನಂತರ ಗಾಂಧೀಜಿಯೊಂದಿಗೆ ವಾಯುವ್ಯ ಪ್ರಾಂತ್ಯದಲ್ಲಿ ಸಂಚರಿಸಿದರು.

ಲಾಲಾ ಲಜಪತರಾಯ್ ಹಾಗೂ ಮದನಮೋಹನ ಮಾಲವೀಯರ ಸಲಹೆಯ ಮೇರೆಗೆ ಇವರು ದಿಲ್ಲಿಯ ಹಿಂದೂಸ್ಥಾನ್ ಟೈಮ್ಸ ಪತ್ರಿಕೆಯ ಸಂಪಾಕತ್ವವನ್ನು ವಹಿಸಿಕೊಂಡರು (1925). ಎರಡು ವರ್ಷ ಅದರಲ್ಲಿ ಕೆಲಸ ಮಾಡಿ ಸಾರ್ವತ್ರಿಕ ಚುನಾವಣೆಗಳಲ್ಲಿ ಭಾಗವಹಿಸುವುದಕ್ಕಾಗಿ ಸಿಂಧ್ಗೆ ಮರಳಿದರು (1928). ಮುಂಬಯಿಯ ವಿಧಾನ ಪರಿಷತ್ತಿಗೆ ಸಕ್ರಮವಾಗಿ ಗೆದ್ದು ಆರಿಸಿ ಬಂದರಾದರೂ ಗಾಂಧೀಜಿಯ ಆದೇಶದಂತೆ ಆ ಸ್ಥಾನವನ್ನು ತ್ಯಜಿಸಿ. ಕಾಂಗ್ರೆಸ್ಸು ಸಂಘಟಿಸಿದ ಅಖಿಲ ಭಾರತ ವಿದೇಶೀ ಅರಿವೆ ನಿಷೇಧ ಸಮಿತಿಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು.

ಸಿಂಧನಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದ ಮುಖ್ಯ ಸಂಘಟಕರು ದೌಲತ್ ರಾಮ್. ಚಳುವಳಿಯನ್ನು ನಿರ್ದಯೆಯಿಂದ ಹತ್ತಿಕ್ಕುತ್ತಿದ್ದ ಪೋಲೀಸರ ಗುಂಡೇಟು ಇವರಿಗೆ ತಾಗಿ ಇವರ ಹೊಟ್ಟೆಯೊಲೊಂದು ಗುಂಡು ಸೇರಿಹೋಗಿತ್ತು. ಗಾಂಧೀಜಿಯ ದಸ್ತಗಿರಿಯಾದಾಗ ಯಂಗ್ ಇಂಡಿಯ ಪತ್ರಿಕೆಯ ಸಂಪಾದನೆ ಇವರ ಕೊರಳಿಗೆ ಬಿತ್ತು. ದಸ್ತಗಿರಿ, ಬಿಡುಗಡೆ-ಇವು ಪಾಳಿಯಂತೆ ಬಂದುಹೋದವು.

ಕರಾಚಿ ಕಾಂಗ್ರೆಸ್ ಅಧಿವೇಶನದಲ್ಲಿ ಇವರ ಸಮರ್ಥ ವ್ಯಕ್ತಿತ್ವ ಇನ್ನಷ್ಟು ಬೆಳಕಿಗೆ ಬಂತು. ಇವರು ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಯಾದರು. ಅಸಹಕಾರ ಚಳವಳಿಯ ಸಮಯದಲ್ಲಿ ಇವರು ಮತ್ತೆ ಸೆರಮನೆ ಸೇರಿದರು (1932).

1933ರಲ್ಲಿ ಬಿಡುಗಡೆಹೊಂದಿದ ಜೈರಾಮದಾಸ್ ಗಾಂಧಿಜಿಯವರ ರಚನಾತ್ಮಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕ್ವೆಟ್ಟದಲ್ಲಿ 1935ರಲ್ಲಿ ಸಂಭವಿಸಿದ ಭೂಕಂಪದಲ್ಲಿ ಸಂತ್ರಸ್ತ ಜನರ ಪುನರ್ವಸತಿ ಮತ್ತು ಪರಿಹಾರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಸಿಂಧ್ನಲ್ಲಿ ಉಂಟಾದ ಮಹಾಪ್ರವಾಹದಿಂದ ಪೀಡಿತರಾದವರಿಗಾಗಿಯೂ ಪರಿಹಾರಕಾರ್ಯಗಳನ್ನು ಸಂಘಟಿಸಿದರು. 1942ರಲ್ಲಿ ಜೈರಾಮ್ ದಾಸರು ಪುನಃ ದಸ್ತಗಿರಿಯಾಗಿ ಸಿಂಧ್ ಹೈದರಾಬಾದಿನ ಕೇಂದ್ರ ಸೆರೆಮನೆಯಲ್ಲಿ ಮೂರು ವರ್ಷಗಳ ಕಾಲ ಸ್ಥಾನಬದ್ಧತೆಯಲ್ಲಿದ್ದರು.

1945ರಲ್ಲಿ ಹೊರಬಂದ ಜೈರಾಮ್ ದಾಸ್ ಮತ್ತೆ ತಮ್ಮ ಕೆಲಸ ಮುಂದುವರಿಸಿದರು. 1946ರಲ್ಲಿ ಚುನಾವಣೆಗಳಲ್ಲಿ ಮುಖ್ಯಪಾತ್ರವಹಿಸಿದರು. ಆಮೇಲೆ ಭಾರತ ಸಂವಿಧಾನ ರಚನಾ ಸಭೆಯ ಸದಸ್ಯರಾಗಿದ್ದರು. ಅದರ ಕಲಾಪಗಳಲ್ಲಿ ಇವರು ವಹಿಸಿದ ಪಾತ್ರ ಗಣನೀಯವಾದದ್ದು. ಸ್ವಾತಂತ್ರ್ಯಾನಂತರ ಸಿಂಧ್ ಪ್ರಾಂತ್ಯ ಪಾಕಿಸ್ತಾನಕ್ಕೆ ಸೇರಿತು. ಬಿಹಾರದ ರಾಜ್ಯಪಾಲರಾಗಿ ನೇಮಕವಾಗಿದ್ದ ದೌಲತ್ ರಾಮರು ಜನವರಿ 1948ರಲ್ಲಿ ಆ ಸ್ಥಾನಕ್ಕೆ ರಾಜೀನಾಮೆಯಿತ್ತು ಕೇಂದ್ರ ಸರ್ಕಾರದ ಆಹಾರ ಹಾಗೂ ಕೃಷಿ ಶಾಖೆಗಳ ಸಚಿವರಾದರು. ಎರಡು ವರ್ಷಗಳಿಗಿಂತ ಹೆಚ್ಚುಕಾಲ ಆ ಸ್ಥಾನದಲ್ಲಿ ಇದ್ದು ಅನಂತರ ಅಸ್ಸಾಂ ಪ್ರಾಂತ್ಯದ ರಾಜ್ಯಪಾಲರಾದರು. ಆ ಹುದ್ದೆಯಿಂದ ನಿವೃತ್ತರಾದ ಜೈರಾಮ್‍ದಾಸ್ ಗಾಂಧೀಜಿಯ ಲೇಖನಗಳನ್ನು ಸಂಗ್ರಹಿಸುವ ಕಾರ್ಯದ ಪ್ರಧಾನ ಸಂಪಾದಕರಾಗಿ ಸ್ವಲ್ಪಕಾಲ ಕೆಲಸ ಮಾಡಿದರು. ಅವರು ರಾಜ್ಯ ಸಭೆಯ ಸದಸ್ಯರಾಗಿ ಆಯ್ಕಗೊಂಡಿದ್ದು 1959ರಲ್ಲಿ. 1964 ಮತ್ತು 1970ರಲ್ಲಿ ಮತ್ತೆ ಇವರು ಆ ಸಭೆಗೆ ಆರಿಸಲ್ಪಟ್ಟರು. ಸಿಂಧ್‍ನಿಂದ ಬಂದ ನಿರಾಶ್ರಿತರ ಪುನರ್ವಸತಿ ಮತ್ತು ಪರಿಹಾರಕಾರ್ಯಕ್ಕಾಗಿ ಇವರು ವಿಶೇಷವಾಗಿ ಶ್ರಮಿಸಿದರು. ಜೈರಾಮ್‍ದಾಸ್ ಧಾರ್ಮಿಕ ಸಾಮಾಜಿಕ ಸುಧಾರಣಾಪ್ರಿಯ. ಗಾಂಧೀ ಆರ್ಥಿಕ ವಿಚಾರದಲ್ಲಿ ಇವರಿಗೆ ನಂಬಿಕೆ. ಇಂದಿನ ಶೈಕ್ಷಣಿಕ ಪದ್ಧತಿ ರಾಷ್ಟ್ರೀಯ ಭಾವನೆಗೆ ಪೋಷಕವಾಗಿಲ್ಲವೆಂಬುದು ಇವರ ಅಭಿಪ್ರಾಯವಾಗಿತ್ತು.