ಮೇಜರ್ ಸೋಮನಾಥ್ ಶರ್ಮಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೇಜರ್

ಸೋಮನಾಥ್ ಶರ್ಮಾ

೨೦೦೩ರಲ್ಲಿ ಬಿಡುಗಡೆಗೊಂಡ ಸೋಮನಾಥ್ ಶರ್ಮಾರವರ ಚಿತ್ರವಿರುವ ಅಂಚೆ ಚೀಟಿ
ಜನನ೩೧ ಜನವರಿ ೧೯೨೩
ದಾದ್, ಕಾಂಗ್ರ ಜಿಲ್ಲೆ, ಪಂಜಾಬ್‌ ಪ್ರಾಂತ್ಯ (ಬ್ರಿಟೀಷ್‌ ಭಾರತ), ಪ್ರಸ್ತುತ ಹಿಮಾಚಲ ಪ್ರದೇಶ
ಮರಣ3 November 1947(1947-11-03) (aged 24)
ಬಡ್ಗಾಮ್, ಭಾರತ
Allegianceಬ್ರಿಟೀಷ್ ಭಾರತ
ಭಾರತ
ಶಾಖೆ ಬ್ರಿಟಿಷ್‌‌‌ ಭಾರತೀಯ‌ ಸೇನೆ
ಭಾರತೀಯ ಸೇನೆ
ಸೇವಾವಧಿ1942–1947
ಶ್ರೇಣಿ(ದರ್ಜೆ) ಮೇಜರ್
ಸೇವಾ ಸಂಖ್ಯೆIC-521[೧]
ಘಟಕಕುಮಾವ್‌ ರೆಜಿಮೆಂಟ್‌, ೪ನೇ ಬೆಟಾಲಿಯನ್ ‌ಕುಮಾವ್‌ ರೆಜಿಮೆಂಟ್‌
ಭಾಗವಹಿಸಿದ ಯುದ್ಧ(ಗಳು)
ಪ್ರಶಸ್ತಿ(ಗಳು)
ಸಂಬಂಧಿ ಸದಸ್ಯ(ರು)ಜನರಲ್ ವಿ.ಎನ್ ಶರ್ಮ (ಸಹೋದರ)

ಭಾರತೀಯ ಭೂಸೇನೆಯಲ್ಲಿ ಕಾರ್ಯನಿರ್ವಹಿಸಿದ ಮೇಜರ್ ಸೋಮನಾಥ್ ಶರ್ಮಾ ಭಾರತದ ಅತ್ಯುನ್ನತ ಮಿಲಿಟರಿ ಪುರಸ್ಕಾರವಾದ ಪರಮ ವೀರ ಚಕ್ರ ಪುರಸ್ಕಾರ ಪಡೆದ ಮೊದಲಿಗರು. (೩೧ ಜನವರಿ ೧೯೨೩ - ೩ ನವೆಂಬರ್ ೧೯೪೭).[೨]

ಶರ್ಮಾ ಅವರನ್ನು ೧೯೪೨ರಲ್ಲಿ ೮ನೇ ಬೆಟಾಲಿಯನ್, ೧೯ನೇ ಹೈದರಾಬಾದ್ ರೆಜಿಮೆಂಟ್‌ಗೆ ನಿಯೋಜಿಸಲಾಯಿತು.[೩] ಎರಡನೆಯ ಮಹಾಯುದ್ಧದ ಅರಾಕನ್ ಅಭಿಯಾನದ ಸಮಯದಲ್ಲಿ ಅವರು ಬರ್ಮಾದಲ್ಲಿ ಸೇವೆ ಸಲ್ಲಿಸಿದರು. ೧೯೪೭-೧೯೪೮ರ ಇಂಡೋ-ಪಾಕಿಸ್ತಾನಿ ಯುದ್ಧದಲ್ಲಿ ಹೋರಾಡಿದ ಸೋಮನಾಥ್ ಶರ್ಮಾ ಅವರು ನವೆಂಬರ್ ೩, ೧೯೪೭ರಂದು ಶ್ರೀನಗರ ವಿಮಾನ ನಿಲ್ದಾಣದ ಬಳಿ ಪಾಕಿಸ್ತಾನಿ ಒಳನುಸುಳುವವರನ್ನು ಹಿಮ್ಮೆಟ್ಟಿಸುವಾಗ ಹುತಾತ್ಮರಾದರು; ಈ ಯುದ್ಧದಲ್ಲಿ ಅವರ ಶೌರ್ಯ ಮತ್ತು ತ್ಯಾಗಕ್ಕಾಗಿ, ಅವರಿಗೆ ಮರಣೋತ್ತರವಾಗಿ ಪರಮ ವೀರ ಚಕ್ರವನ್ನು ನೀಡಲಾಯಿತು.

ಬಾಲ್ಯ ಜೀವನ[ಬದಲಾಯಿಸಿ]

ಸೋಮನಾಥ ಶರ್ಮಾ ೩೧ ಜನವರಿ ೧೯೨೩ ರಂದು ಪಂಜಾಬ್ನ ಕಾಂಗ್ರಾದ ದಾದ್ನಲ್ಲಿ (ಇಂದಿನ ಹಿಮಾಚಲ ಪ್ರದೇಶ) ದೋಗ್ರಾ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಅವರ ತಂದೆ, ಅಮರ್ ನಾಥ್ ಶರ್ಮಾ ಮಿಲಿಟರಿ ಅಧಿಕಾರಿಯಾಗಿದ್ದರು.[೪] ಅವರ ಹಲವು ಸಹೋದರರೂ ಕೂಡ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದರು. ಡೆಹ್ರಾಡೂನ್ನ ಪ್ರಿನ್ಸ್ ಆಫ್ ವೇಲ್ಸ್ ರಾಯಲ್ ಮಿಲಿಟರಿ ಕಾಲೇಜಿಗೆ ಸೇರ್ಪಡೆಗೊಳ್ಳುವ ಮೊದಲು ಶರ್ಮಾ ನೈನಿತಾಲ್ನ ಶೆರ್ವುಡ್ ಕಾಲೇಜಿನಲ್ಲಿ ಶಾಲಾ ಶಿಕ್ಷಣವನ್ನು ಪೂರೈಸಿದರು. ನಂತರ ಅವರು ಸ್ಯಾಂಡ್ಹರ್ಸ್ಟ್ನ ರಾಯಲ್ ಮಿಲಿಟರಿ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ತನ್ನ ಬಾಲ್ಯದಲ್ಲಿ ಅಜ್ಜನಿಂದ ಕಲಿತ ಭಗವದ್ಗೀತೆಯಲ್ಲಿ ಕೃಷ್ಣ ಮತ್ತು ಅರ್ಜುನನ ಬೋಧನೆಗಳಿಂದ ಸೋಮನಾಥ್ ಪ್ರಭಾವಿತರಾಗಿದ್ದರು.

ಮಿಲಿಟರಿ ವೃತ್ತಿ[ಬದಲಾಯಿಸಿ]

ಫೆಬ್ರವರಿ ೨೨, ೧೯೪೨ ರಂದು, ರಾಯಲ್ ಮಿಲಿಟರಿ ಕಾಲೇಜಿನಿಂದ ಪದವಿ ಪಡೆದ ನಂತರ ಶರ್ಮಾ ಅವರನ್ನು ಬ್ರಿಟಿಷ್ ಭಾರತೀಯ ಸೈನ್ಯದ ೮ನೇ ಬೆಟಾಲಿಯನ್, ೧೯ನೇ ಹೈದರಾಬಾದ್ ರೆಜಿಮೆಂಟ್ಗೆ ನಿಯೋಜಿಸಲಾಯಿತು (ನಂತರ ಭಾರತೀಯ ಸೇನೆಯ ೪ನೇ ಬೆಟಾಲಿಯನ್, ಕುಮಾನ್ ರೆಜಿಮೆಂಟ್ ಆಗಿ ಮಾರ್ಪಟ್ಟಿತು). ಎರಡನೆಯ ಮಹಾಯುದ್ಧದ ಸಮಯದಲ್ಲಿ, ಅರಾಕನ್ ಅಭಿಯಾನದ ಸಮಯದಲ್ಲಿ ಅವರು ಬರ್ಮಾದಲ್ಲಿ ಜಪಾನಿಯರ ವಿರುದ್ಧ ಕ್ರಮ ಕೈಗೊಂಡರು. ಆ ಸಮಯದಲ್ಲಿ ಅವರು ಕರ್ನಲ್ ಕೆ.ಎಸ್. ತಿಮ್ಮಯ್ಯ ಅವರ ನೇತೃತ್ವದಲ್ಲಿ ಸೇವೆ ಸಲ್ಲಿಸಿದರು, ಅವರು ನಂತರ ಜನರಲ್ ಹುದ್ದೆಗೆ ಏರಿ ೧೯೫೭ರಿಂದ ೧೯೬೧ ರವರೆಗೆ ಸೇನಾ ಮುಖ್ಯಸ್ಥರಾಗಿದ್ದರು.

ತನ್ನ ಮಿಲಿಟರಿ ವೃತ್ತಿಜೀವನದುದ್ದಕ್ಕೂ, ಶರ್ಮಾ ಅವರ ಚಿಕ್ಕಪ್ಪ ಕ್ಯಾಪ್ಟನ್ ಕೆ. ಡಿ. ವಾಸುದೇವ ಅವರಿಂದ ಹೆಚ್ಚು ಪ್ರಭಾವಿತರಾದರು. ವಾಸುದೇವ ೮ನೇ ಬೆಟಾಲಿಯನ್ನೊಂದಿಗೆ ಸೇವೆ ಸಲ್ಲಿಸಿದರು, ಮಲಯನ್ ಅಭಿಯಾನದಲ್ಲಿ ಭಾಗವಹಿಸಿದರು, ಈ ಸಮಯದಲ್ಲಿ ಅವರು ಜಪಾನಿನ ಆಕ್ರಮಣ ಎದುರಿಸಿ ಅವರ ನೇತೃತ್ವದಲ್ಲಿ ಯುದ್ಧ ಮಾಡುತ್ತಿದ್ದ ನೂರಾರು ಸೈನಿಕರ ಪ್ರಾಣ ಕಾಪಾಡಲು ಸಹಾಯ ಮಾಡಿ ತಾವೇ ಪ್ರಾಣಾರ್ಪಣೆ ಮಾಡಿದ್ದರು.[೪]

ಬಡ್ಗಾಮ್‌ ಕದನ[ಬದಲಾಯಿಸಿ]

ಅಕ್ಟೋಬರ್ ೨೭, ೧೯೪೭ರಂದು ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನ ನಡೆಸಿದ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ಭಾರತೀಯ ಸೇನೆಯ ಒಂದು ತಂಡವನ್ನು ನಿಯೋಜಿಸಲಾಯಿತು. ಅಕ್ಟೋಬರ್ ೩೧ ರಂದು, ಶರ್ಮಾ ನೇತೃತ್ವದಲ್ಲಿ ಕುಮಾನ್ ರೆಜಿಮೆಂಟ್ನ ೪ನೇ ಬೆಟಾಲಿಯನ್ನ ಡಿ ಕಂಪನಿಯನ್ನು ಶ್ರೀನಗರಕ್ಕೆ ಮಿಲಿಟರಿ ವಿಮಾನದ ಮೂಲಕ ಕಳಿಸಲಾಯಿತು.. ಈ ಸಮಯದಲ್ಲಿ, ಹಾಕಿ ಮೈದಾನದಲ್ಲಿ ಈ ಹಿಂದೆ ಉಂಟಾದ ಗಾಯಗಳ ಪರಿಣಾಮವಾಗಿ ಅವರ ಎಡಗೈ ಪ್ಲ್ಯಾಸ್ಟರ್ ಹಾಕಲಾಗಿತ್ತು. ಆದರೆ ಅವರು ತನ್ನ ಕಂಪನಿಯೊಂದಿಗೆ ಯುದ್ಧದಲ್ಲಿ ಇರಬೇಕೆಂದು ಒತ್ತಾಯಿಸಿದ್ದಕ್ಕಾಗಿ ಹೋಗಲು ಅನುಮತಿ ನೀಡಲಾಯಿತು.

ನವೆಂಬರ್ ೩ರಂದು, ಮೂರು ಕಂಪನಿಗಳ ಬ್ಯಾಚ್ ಅನ್ನು ಗಸ್ತು ಕರ್ತವ್ಯದ ಮೇಲೆ ಬಡ್ಗಾಮ್ ಪ್ರದೇಶಕ್ಕೆ ನಿಯೋಜಿಸಲಾಗಿತ್ತು. ಉತ್ತರದಿಂದ ಶ್ರೀನಗರದ ಕಡೆಗೆ ಚಲಿಸುವ ಒಳನುಸುಳುಕೋರರನ್ನು ಪರಿಶೀಲಿಸುವುದು ಅವರ ಉದ್ದೇಶವಾಗಿತ್ತು. ಶತ್ರುಗಳ ಯಾವುದೇ ಚಲನವಲನ ಇಲ್ಲದ ಕಾರಣ, ನಿಯೋಜಿಸಲಾದ ಮೂರು ಕಂಪನಿಗಳಲ್ಲಿ ಎರಡು ಮಧ್ಯಾಹ್ನ 2: 00 ಕ್ಕೆ ಶ್ರೀನಗರಕ್ಕೆ ಮರಳಿದವು. ಆದರೆ, ಶರ್ಮಾ ಅವರ ಡಿ ಕಂಪನಿಗೆ ಮಧ್ಯಾಹ್ನ ೩ ಗಂಟೆಯವರೆಗೆ ಸ್ಥಾನದಲ್ಲಿರಲು ಆದೇಶಿಸಲಾಯಿತು. ಮಧ್ಯಾಹ್ನ ೨:೩೫ಕ್ಕೆ, ಶರ್ಮಾ ಅವರ ಕಂಪನಿಯ ಮೇಲೆನ ಬಡ್ಗಾಮ್ ನ ಸ್ಥಳೀಯ ಮನೆಗಳಿಂದ ಗುಂಡಿನ ದಾಳಿ ಆರಂಭವಾಯಿತು, ಆದರೆ ಮುಗ್ಧ ನಾಗರಿಕರನ್ನು ಗಾಯಗೊಳಿಸುವುದನ್ನು ಅಥವಾ ಕೊಲ್ಲುವುದನ್ನು ತಪ್ಪಿಸಲು ಪ್ರತಿದಾಳಿಗೆ ಆದೇಶ ನೀಡಲಿಲ್ಲ. ಇದ್ದಕ್ಕಿದ್ದಂತೆ, ಬುಡಕಟ್ಟು ಲಷ್ಕರ್‌ ನ ೭೦೦ ಒಳನುಸುಳುಕೋರರ ತಂಡ ಗುಲ್ಮಾರ್ಗ್ನ ದಿಕ್ಕಿನಿಂದ ಬಡ್ಗಾಮ್ ಗೆ ತಲುಪಿದರು. ಡಿ ಕಂಪನಿಯನ್ನು ಮೂರು ಕಡೆಯಿಂದ ಸುತ್ತುವರಿಯಲಾಯಿತು. ಈ ಗುಂಡಿನ ಚಕಮಕಿಯಲ್ಲಿ ಸೋಮನಾಥ ಶರ್ಮರ ಡಿ ಕಂಪನಿ ಭಾರೀ ಸಾವುನೋವುಗಳನ್ನು ಅನುಭವಿಸಿತು. ಶ್ರೀನಗರ ಮತ್ತು ವಿಮಾನ ನಿಲ್ದಾಣ ಎರಡನ್ನೂ ಕಳೆದುಕೊಂಡರೆ ಭಾರತೀಯ ಸೇನೆಯ ಸ್ಥಿತಿ ಅತ್ಯಂತ ದುರ್ಬಲವಾಗಬಹುದು ಎಂಬ ಕಾರಣಕ್ಕೆ ಶರ್ಮಾ ತಾವಿದ್ದ ಪ್ರದೇಶವನ್ನು ಉಳಿಸಿಕೊಳ್ಳುವ ಮಹತ್ವವನ್ನು ಅರಿತುಕೊಂಡರು. ಭಾರೀ ಗುಂಡಿನ ಕಾಳಗದ ಮಧ್ಯೆ ಮತ್ತು ಏಳರಿಂದ ಒಂದರ ಅನುಪಾತದಲ್ಲಿದ್ದ ತಮ್ಮ ಕಂಪನಿಯನ್ನು ಧೈರ್ಯದಿಂದ ಹೋರಾಡಲು ಹುರಿದುಂಬಿಸಿದರು, ಆಗಾಗ್ಗೆ ಅವರು ಒಂದು ಸ್ಥಳದಿಂದ ಇನ್ನೊಂದಕ್ಕೆ ಓಡುವಾಗ ಶತ್ರುಗಳ ಗುಂಡುಗಳು ಅವರಿಗೂ ತಗಲುತ್ತವೆ. ಭಾರೀ ಸಾವುನೋವುಗಳು ಕಂಪನಿಯ ಗುಂಡಿನ ಶಕ್ತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದಾಗ, ಶರ್ಮಾ ತನ್ನ ಸೈನಿಕರಿಗೆ ಮದ್ದುಗುಂಡುಗಳನ್ನು ವಿತರಿಸುವ, ಲಘು ಮೆಷಿನ್ ಗನ್ಗಳನ್ನು ನಿರ್ವಹಿಸುವ ಕೆಲಸವನ್ನು ಸ್ವತಃ ವಹಿಸಿಕೊಂಡರು. ಒಳನುಸುಳುಕೋರರ ವಿರುದ್ಧ ಹೋರಾಡುವಲ್ಲಿ ನಿರತರಾಗಿದ್ದಾಗ, ಅವರ ಬಳಿಯಿದ್ದ ಮದ್ದುಗುಂಡುಗಳ ಸಂಗ್ರಹದ ಮೇಲೆ ಶತ್ರುಗಳ ಒಂದು ಶೆಲ್ ಸ್ಫೋಟಿಸಿತು. ಅವರು ತಮ್ಮ ಗಾಯಗಳಿಗೆ ಬಲಿಯಾಗುವ ಮೊದಲು, ತಮ್ಮ ಬ್ರಿಗೇಡ್ನ ಪ್ರಧಾನ ಕಚೇರಿಗೆ ಸಂದೇಶವನ್ನು ರವಾನಿಸಿದರು:

"ಶತ್ರುಗಳು ನಮ್ಮಿಂದ ಕೇವಲ ೫೦ ಗಜಗಳಷ್ಟು ದೂರದಲ್ಲಿದ್ದಾರೆ. ನಾವು ಕಡಿಮೆ ಸಂಖ್ಯೆಯಲ್ಲಿದ್ದೇವೆ. ನಾವು ವಿನಾಶಕಾರಿ ಬೆಂಕಿಯಲ್ಲಿದ್ದೇವೆ. ಆದಾಗ್ಯೂ ನಾನು ಒಂದು ಇಂಚು ಹಿಂದೆ ಸರಿಯುವುದಿಲ್ಲ. ನಮ್ಮ ಕೊನೆಯ ಸೈನಿಕ ಮತ್ತು ನಮ್ಮ ಕೊನೆಯ ಬುಲೆಟ್ ಇರುವವರೆಗೆ ಹೋರಾಡುತ್ತೇನೆ." - ಮೇಜರ್ ಸೋಮನಾಥ ಶರ್ಮಾ, ಬಡ್ಗಾಮ್ ಕದನ, ೧೯೪೭ ಕುಮಾನ್ ರೆಜಿಮೆಂಟ್ನ ೧ ನೇ ಬೆಟಾಲಿಯನ್ನಿಂದ ಸಹಾಯ ಮಾಡುವ ಕಂಪನಿ ಬಡ್ಗಾಮ್ ತಲುಪುವ ಹೊತ್ತಿಗೆ, ಶರ್ಮಾ ಅವರ ಕಂಪನಿಯು ಹೊಂದಿದ್ದ ಸ್ಥಾನವು ದಯನೀಯ ಸ್ಥಿತಿಯಲ್ಲಿತ್ತು. ಆದಾಗ್ಯೂ, ಬುಡಕಟ್ಟು ಒಳನುಸುಳುಕೋರರ ೨೦೦ ಸಾವುನೋವುಗಳು ಶತ್ರುಗಳ ಮುನ್ನಡೆಯುವ ಸ್ಥೈರ್ಯವನ್ನು ಕಳೆದುಕೊಳ್ಳಲು ಕಾರಣವಾಯಿತು. ಇದರಿಂದ ಭಾರತೀಯ ಪಡೆಗಳು ಶ್ರೀನಗರ ವಾಯುನೆಲೆಗೆ ಹಾರಲು ಮತ್ತು ಶ್ರೀನಗರಕ್ಕೆ ಪ್ರವೇಶಿಸುವ ಎಲ್ಲಾ ಮಾರ್ಗಗಳನ್ನು ನಿರ್ಬಂಧಿಸಲು ಸಮಯ ದೊರೆಯಿತು. ಯುದ್ಧದ ಸಮಯದಲ್ಲಿ, ಶರ್ಮಾ ಅವರೊಂದಿಗೆ, ಒಬ್ಬ ಕಿರಿಯ ನಿಯೋಜಿತ ಅಧಿಕಾರಿ ಮತ್ತು ಡಿ ಕಂಪನಿಯ ೨೦ ಇತರ ಸೈನಿಕರು ಮೃತರಾದರು. ಮೂರು ದಿನಗಳ ನಂತರ ಶರ್ಮಾ ಅವರ ಶವವನ್ನು ಪತ್ತೆಹಚ್ಚಲಾಯಿತು. ಇದು ಗುರುತಿಸಲಾಗದಷ್ಟು ವಿರೂಪಗೊಂಡಿದ್ದರೂ ಅವರ ದೇಹವನ್ನು ಅವರ ಪಿಸ್ತೂಲಿನ ಚರ್ಮದ ಹೋಲ್ಸ್ಟರ್ ಮತ್ತು ಎದೆಯ ಕಿಸೆಯಲ್ಲಿದ್ದ ಭಗವದ್ಗೀತೆಯ ಕೆಲವು ಪುಟಗಳ ಮೂಲಕ ಗುರುತಿಸಲಾಯಿತು.

ಸೋಮನಾಥ ಶರ್ಮಾರ ಮೂರ್ತಿ, ಪರಮಯೋಧ ಸ್ಥಳ, ರಾಷ್ಟ್ರೀಯ ಯುದ್ಧ ಸ್ಮಾರಕ, ದೆಹಲಿ
ಸೋಮನಾಥ ಶರ್ಮಾರ ಹೆಸರು, ತ್ಯಾಗಚಕ್ರ, ರಾಷ್ಟ್ರೀಯ ಯುದ್ಧ ಸ್ಮಾರಕ, ದೆಹಲಿ

ಪರಮವೀರ ಚಕ್ರ[ಬದಲಾಯಿಸಿ]

ಶ್ರೀನಗರ ವಿಮಾನ ನಿಲ್ದಾಣವನ್ನು ರಕ್ಷಿಸುವಲ್ಲಿ ೧೯೪೭ರ ನವೆಂಬರ್ ೩ರಂದು ಮಾಡಿದ ಕಾರ್ಯಗಳಿಗಾಗಿ ಸೋಮನಾಥ ಶರ್ಮಾ ಅವರಿಗೆ ಮರಣೋತ್ತರವಾಗಿ ೨೧ ಜೂನ್ ೧೯೫೦ರಂದು, ಪರಮ್ ವೀರ್ ಚಕ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲು ಗೆಜೆಟ್ ನಲ್ಲಿ ಘೋಷಿಸಲಾಯಿತು. ಈ ಗೌರವವನ್ನು ಮೊಟ್ಟಮೊದಲ ಬಾರಿಗೆ ನೀಡಲಾಯಿತು. ಕಾಕತಾಳೀಯವಾಗಿ, ಶರ್ಮಾ ಸಹೋದರನ ಅತ್ತೆ ಸಾವಿತ್ರಿ ಖಾನೋಲ್ಕರ್ ಅವರು ಪರಮ ವೀರ್ ಚಕ್ರದ ವಿನ್ಯಾಸಕರಾಗಿದ್ದರು. ಅಧಿಕೃತ ಉಲ್ಲೇಖವು ಹೀಗಿದೆ:

ನವೆಂಬರ್ ೩, ೧೯೪೭ರಂದು, ಮೇಜರ್ ಸೋಮನಾಥ್ ಶರ್ಮಾ ಅವರ ಕಂಪನಿಗೆ ಕಾಶ್ಮೀರ ಕಣಿವೆಯ ಬಡ್ಗಾಮ್‌ ಗೆ ಹೋಗಿ ಗಸ್ತು ತಿರುಗಲು ಆದೇಶಿಸಲಾಯಿತು. ಅವರು ನವೆಂಬರ್ 3 ರಂದು ನಿಗದಿತ ಸ್ಥಳವನ್ನು ತಲುಪಿದರು ಸುಮಾರು ೫೦೦ ರಷ್ಟಿರಬಹುದು ಎಂದು ಅಂದಾಜಿಸಲಾದ ಶತ್ರುಗಳ ಗುಂಪು ಕಂಪನಿಯನ್ನು ಮೂರು ಕಡೆಯಿಂದ ಆಕ್ರಮಣ ಮಾಡಿದಾಗ ಕಂಪನಿಯು ಭಾರೀ ಪ್ರಮಾಣದ ಸಾವುನೋವುಗಳನ್ನು ಅನುಭವಿಸಿತು. ಪರಿಸ್ಥಿತಿಯ ಗಂಭೀರತೆ ಮತ್ತು ವಿಮಾನ ನಿಲ್ದಾಣ ಹಾಗೂ ಶ್ರೀನಗರ ಎರಡಕ್ಕೂ ಉಂಟಾಗುವ ನೇರ ಬೆದರಿಕೆಯನ್ನು ಸಂಪೂರ್ಣವಾಗಿ ಅರಿತುಕೊಂಡ ಮೇಜರ್ ಸೋಮನಾಥ್ ಶರ್ಮಾ ತಮ್ಮ ಕಂಪನಿಗೆ ಶತ್ರುಗಳನ್ನು ಹಿಮ್ಮಟ್ಟಿಸಿ ಹೋರಾಡಲು ಉತ್ತೇಜಿಸಿದರು.. ವಿಪರೀತ ಧೈರ್ಯದಿಂದ ಅವರು ತೆರೆದ ಮೈದಾನದಾದ್ಯಂತ ತಮ್ಮ ಕಂಪನಿಯ ವಿವಿಧ ವಿಭಾಗಗಳಿಗೆ ಚಲಿಸುತ್ತಲೇ ಇದ್ದರು ಮತ್ತು ಶತ್ರುಗಳ ದಾಳಿಗೆ ಬೆದರದೆ ಸತತವಾಗಿ ತನ್ನ ಕಂಪನಿಗೆ ಸೂಕ್ತ ಆದೇಶಗಳನ್ನು ನೀಡುತ್ತ ಭಾರತೀಯ ಸೈನ್ಯದ ವಿಮಾನಗಳಿಗೆ ಮಾರ್ಗದರ್ಶಿಸಲು ಬಟ್ಟೆಯ ಪಟ್ಟಿಗಳನ್ನು ಹಾಕಿದರು. ಶತ್ರುಗಳ ಆಕ್ರಮಣದಿಂದ ಸಾವುನೋವುಗಳು ಹೆಚ್ಚಾಗಿ ಲೈಟ್ ಮೆಷಿನ್ ಗನ್ ಗಳಿಗೆ ಬುಲೆಟ್ ಗಳನ್ನು ತುಂಬುವ ಕೆಲಸಕ್ಕೂ ಕೈಹಾಕಿದರು. ಈ ಅಧಿಕಾರಿಯ ಎಡಗೈ ಪ್ಲ್ಯಾಸ್ಟರ್ನಲ್ಲಿದ್ದು, ವೈಯಕ್ತಿಕವಾಗಿ ಬುಲೆಟ್ಗಳನ್ನು ಭರ್ತಿ ಮಾಡುವುದು ಕಠಿಣವಾಗಿದ್ದರೂ ಸತತವಾಗಿ ಈ ಕಾರ್ಯದಲ್ಲಿ ಮಗ್ನರಾದರು. ಒಂದು ಷೆಲ್ ಮದ್ದುಗುಂಡುಗಳ ಮಧ್ಯದಲ್ಲಿಯೇ ಬಿದ್ದುದರ ಪರಿಣಾಮವಾಗಿ ಸ್ಫೋಟ ಸಂಭವಿಸಿ ಅವರನ್ನು ಕೊಂದಿತು. ಮೇಜರ್ ಶರ್ಮಾ ಅವರ ಕಂಪನಿಯು ಈ ಸ್ಥಾನವನ್ನು ಉಳಿಸಿಕೊಂಡಿತು ಅವರ ಸ್ಪೂರ್ತಿದಾಯಕ ಉದಾಹರಣೆಯ ಪರಿಣಾಮವಾಗಿ ಶತ್ರುವು ಮುಂದುವರಿಯದಂತೆ ಆರು ಗಂಟೆಗಳ ಕಾಲ ತಡೆಹಿಡಿಯಲಾಯಿತು, ಹೀಗಾಗಿ ಭಾರತೀಯ ಸೈನ್ಯದ ತುಕಡಿಗಳು ಸಹಾಯಕ್ಕಾಗಿ ಧಾವಿಸಲು ಸಮಯ ಸಿಕ್ಕಿತು. ಅವರ ನಾಯಕತ್ವ, ಶೌರ್ಯ ಮತ್ತು ದೃಢವಾದ ರಕ್ಷಣಾ ಕಾರ್ಯಗಳು ಈ ಧೈರ್ಯಶಾಲಿ ಅಧಿಕಾರಿಯನ್ನು ಕೊಲ್ಲಲ್ಪಟ್ಟ ಆರು ಗಂಟೆಗಳ ನಂತರ ಏಳು:ಒಂದರ ಅನುಪಾತದಲ್ಲಿದ್ದ ಶತ್ರುಗಳ ವಿರುದ್ಧ ಹೋರಾಡಲು ಅವರ ಸೈನಿಕರನ್ನುಪ್ರೇರೇಪಿಸಿದವು. ಅವರು ಭಾರತೀಯ ಸೈನ್ಯದ ಇತಿಹಾಸದಲ್ಲಿ ವಿರಳವಾಗಿರುವ ಧೈರ್ಯ ಮತ್ತು ಸಾಹಸ ಗುಣಗಳಿಗೆ ಉದಾಹರಣೆಯಾಗಿದ್ದಾರೆ. ಅವರ ಬಲಿದಾನದ ಕೆಲವೇ ಕ್ಷಣಗಳ ಮೊದಲು ಬ್ರಿಗೇಡ್ ನ ಪ್ರಧಾನ ಕಚೇರಿಗೆ ಅವರು ನೀಡಿದ ಕೊನೆಯ ಸಂದೇಶವೆಂದರೆ, "ಶತ್ರುಗಳು ನಮ್ಮಿಂದ ಕೇವಲ ೫೦ ಗಜಗಳಷ್ಟು ದೂರದಲ್ಲಿದ್ದಾರೆ. ನಾವು ಕಡಿಮೆ ಸಂಖ್ಯೆಯಲ್ಲಿದ್ದೇವೆ. ನಾವು ವಿನಾಶಕಾರಿ ಬೆಂಕಿಯಲ್ಲಿದ್ದೇವೆ. ಆದಾಗ್ಯೂ ನಾನು ಒಂದು ಇಂಚು ಹಿಂದೆ ಸರಿಯುವುದಿಲ್ಲ. ನಮ್ಮ ಕೊನೆಯ ಸೈನಿಕ ಮತ್ತು ನಮ್ಮ ಕೊನೆಯ ಬುಲೆಟ್ ಇರುವವರೆಗೆ ಹೋರಾಡುತ್ತೇನೆ."

ಪರಂಪರೆ[ಬದಲಾಯಿಸಿ]

೧೯೮೦ ರ ದಶಕದಲ್ಲಿ, ಶಿಪ್ಪಿಂಗ್ ಸಚಿವಾಲಯದ ಆಶ್ರಯದಲ್ಲಿ ಭಾರತ ಸರ್ಕಾರದ ಉದ್ಯಮವಾದ ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಸ್ಸಿಐ), ಪರಮ ವೀರ ಚಕ್ರ ಪುರಸ್ಕೃತರ ಗೌರವಾರ್ಥವಾಗಿ ಅವರ ಹದಿನೈದು ಕಚ್ಚಾ ತೈಲ ಟ್ಯಾಂಕರ್ಗಳಿಗೆ ಪರಮವೀರ ಚಕ್ರ ಪುರಸ್ಕೃತರ ಹೆಸರುಗಳನ್ನಿಟ್ಟಿತು.ಮೇಜರ್ ಸೋಮನಾಥ್ ಶರ್ಮಾ ಎಂಬ ಕಚ್ಚಾ ತೈಲ ಟ್ಯಾಂಕರ್ ಅನ್ನು ೧೧ ಜೂನ್ ೧೯೮೪ರಂದು ಎಸ್ಸಿಐಗೆ ತಲುಪಿಸಲಾಯಿತು. ೨೫ ವರ್ಷಗಳ ಸುದೀರ್ಘ ಸೇವೆಯಲ್ಲಿ ಆ ಟ್ಯಾಕರ್ ನಿರತವಾಗಿತ್ತು.

ದೂರದರ್ಶನ ಮಾಧ್ಯಮದಲ್ಲಿ[ಬದಲಾಯಿಸಿ]

ಪರಮ ವೀರ ಚಕ್ರ ವಿಜೇತರ ಜೀವನದ ಕುರಿತಾದ ಟಿವಿ ಸರಣಿಯ ಮೊದಲ ಕಂತು, ಪರಮ ವೀರ ಚಕ್ರ (೧೯೮೮) ೩ ನವೆಂಬರ್ ೧೯೪೭ರ ಶರ್ಮಾ ಅವರ ಸಾಹಸ ಕಾರ್ಯಗಳನ್ನು ಒಳಗೊಂಡಿದೆ. ಆ ಸಂಚಿಕೆಯಲ್ಲಿ, ಅವರ ಪಾತ್ರವನ್ನು ಫಾರೂಕ್ ಶೇಖ್ ನಿರ್ವಹಿಸಿದ್ದಾರೆ. ಧಾರಾವಾಹಿಯನ್ನು ಚೇತನ್ ಆನಂದ್ ನಿರ್ದೇಶಿಸಿದ್ದಾರೆ. ಈ ಧಾರಾವಾಹಿಯು ದೂರದರ್ಶನದ ರಾಷ್ಟ್ರೀಯ ವಾಹಿನಿಯಲ್ಲಿ ಪ್ರಸಾರವಾಗಿತ್ತು.

ಟಿಪ್ಪಣಿಗಳು[ಬದಲಾಯಿಸಿ]

  1. Chakravorty 1995, pp. 75–76.
  2. "SOMNATH SHARMA | Gallantry Awards". Gallantry Awards, Government of India. Archived from the original on 16 ಡಿಸೆಂಬರ್ 2017. Retrieved 15 ಡಿಸೆಂಬರ್ 2017.
  3. "Major Somnath Sharma: A hero for generations of soldiers - ADU News". www.aviation-defence-universe.com. Retrieved 23 ಜೂನ್ 2020.
  4. ೪.೦ ೪.೧ "The soldier who won India's first Param Vir Chakra". Rediff. Archived from the original on 11 ಡಿಸೆಂಬರ್ 2016. Retrieved 24 ಸೆಪ್ಟೆಂಬರ್ 2016.

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]