ಇನ್ಸೆಪ್ಷನ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇನ್ಸೆಪ್ಷನ್
A man in a suit with a gun in his right hand is flanked by five other individuals in the middle of a street which, behind them, is folded upwards. Leonardo DiCaprio's name and those of other cast members are shown above the words "Your Mind Is the Scene of the Crime". The title of the film "INCEPTION", film credits, and theatrical and IMAX release dates are shown at the bottom.
ಚಿತ್ರಮಂದಿರ ಬಿಡುಗಡೆಯ ಪೋಸ್ಟರ್
ನಿರ್ದೇಶನಕ್ರಿಸ್ಟಫ಼ರ್ ನೋಲನ್
ನಿರ್ಮಾಪಕ
  • ಎಮಾ ಥಾಮಸ್
  • ಕ್ರಿಸ್ಟಫ಼ರ್ ನೋಲನ್
ಲೇಖಕಕ್ರಿಸ್ಟಫ಼ರ್ ನೋಲನ್
ಪಾತ್ರವರ್ಗ
  • ಲಿಯೊನಾರ್ಡೊ ಡಿಕ್ಯಾಪ್ರಿಯೊ
  • ಕೆನ್ ವಾಟನಾಬೆ
  • ಜೋಸಫ಼್ ಗಾರ್ಡನ್-ಲೆವಿಟ್
  • ಮಾರಿಯೋನ್ ಕೊಟೀಯಾ
  • ಎಲೆನ್ ಪೇಜ್
  • ಟಾಮ್ ಹಾರ್ಡಿ
  • ಸಿಲಿಯನ್ ಮರ್ಫ಼ಿ
  • ಟಾಮ್ ಬೆರೆಂಜರ್
  • ಮೈಕಲ್ ಕೇನ್
ಸಂಗೀತಹ್ಯಾನ್ಸ್ ಜ಼ಿಮರ್
ಛಾಯಾಗ್ರಹಣವಾಲಿ ಫ಼ಿಸ್ಟರ್
ಸಂಕಲನಲೀ ಸ್ಮಿತ್
ವಿತರಕರುವಾರ್ನರ್ ಬ್ರದರ್ಸ್ ಪಿಕ್ಚರ್ಸ್
ಬಿಡುಗಡೆಯಾಗಿದ್ದು
  • ಜುಲೈ 8, 2010 (2010-07-08) (ಓಡಿಯಾನ್ ಲೆಸ್ಟರ್ ಸ್ಕ್ವೇರ್)
  • ಜುಲೈ 16, 2010 (2010-07-16) (ಅಮೇರಿಕ ಮತ್ತು ಯುನೈಟಡ್ ಕಿಂಗ್ಡಮ್)
ಅವಧಿ148 ನಿಮಿಷಗಳು[೧]
ದೇಶ
  • ಅಮೇರಿಕ[೨]
  • ಯುನೈಟಡ್ ಕಿಂಗ್ಡಮ್[೨]
ಭಾಷೆಇಂಗ್ಲಿಷ್
ಬಂಡವಾಳ$160 ಮಿಲಿಯನ್[೩]
ಬಾಕ್ಸ್ ಆಫೀಸ್$828.3 ಮಿಲಿಯನ್[೩]

ಇನ್ಸೆಪ್ಷನ್ ೨೦೧೦ರ ಒಂದು ವಿಜ್ಞಾನ ಕಾಲ್ಪನಿಕ ಸಾಹಸಪ್ರಧಾನ ಚಲನಚಿತ್ರ. ಇದನ್ನು ಕ್ರಿಸ್ಟೋಫರ್ ನೋಲನ್ ಬರೆದು ನಿರ್ದೇಶಿಸಿದ್ದಾರೆ. ನೋಲನ ತಮ್ಮ ಹೆಂಡತಿ ಎಮಾ ಥಾಮಸ್ ಜೊತೆಗೆ ಇದರ ನಿರ್ಮಾಪಕರೂ ಆಗಿದ್ದಾರೆ. ಚಿತ್ರದಲ್ಲಿ ಲಿಯೊನಾರ್ಡೊ ಡಿಕಾಪ್ರಿಯೊ ತಮ್ಮ ಗುರಿಗಳ ಉಪಪ್ರಜ್ಞೆಯೊಳಗೆ ಪ್ರವೇಶಿಸಿ ಮಾಹಿತಿಯನ್ನು ಕದಿಯುವ ವೃತ್ತಿಪರ ಕಳ್ಳನಾಗಿ ನಟಿಸಿದ್ದಾರೆ. ಒಬ್ಬ ಗುರಿಯ ಉಪಪ್ರಜ್ಞೆಯೊಳಗೆ ಮತ್ತೊಬ್ಬ ವ್ಯಕ್ತಿಯ ಭಾವನೆಯ ಅಂತರ್ನಿವೇಶಕ್ಕೆ ಸಂದಾಯವಾಗಿ ಅವನಿಗೆ ತನ್ನ ಅಪರಾಧದ ಇತಿಹಾಸವನ್ನು ಅಳಿಸಿಹಾಕುವ ಅವಕಾಶ ಸಿಗುತ್ತದೆ.[೪] ಸಮೂಹ ಪಾತ್ರವರ್ಗದಲ್ಲಿ ಕೆನ್ ವಾಟನಾಬೆ, ಜೋಸಫ಼್ ಗಾರ್ಡನ್-ಲೆವಿಟ್, ಮಾರಿಯೋನ್ ಕೊಟೀಯಾ, ಎಲೆನ್ ಪೇಜ್, ಟಾಮ್ ಹಾರ್ಡಿ, ದಿಲೀಪ್ ರಾವ್, ಕಿಲಿಯನ್ ಮರ್ಫಿ, ಟಾಮ್ ಬೆರೆಂಜರ್ ಮತ್ತು ಮೈಕಲ್ ಕೇನ್ ಸೇರಿದ್ದಾರೆ.

೨೦೦೨ರಲ್ಲಿ ಇನ್ಸಾಮ್ನಿಯಾ ಚಿತ್ರವನ್ನು ಮುಗಿಸಿದ ಮೇಲೆ, ನೋಲನ್ ವಾರ್ನರ್ ಬ್ರದರ್ಸ್‌ಗೆ ಅರಿವುಳ್ಳ ಕನಸುಕಾಣುವಿಕೆಯ ಮೇಲೆ ಆಧಾರಿತವಾದ ಒಂದು ಭಯಪ್ರಧಾನ ಚಿತ್ರದ ೮೦ ಪುಟಗಳ ಲಿಖಿತ ಸಾರಾಂಶವನ್ನು ಪ್ರಸ್ತುತಪಡಿಸಿದರು.[೫] ಈ ಪ್ರಮಾಣದ ಮತ್ತು ಸಂಕೀರ್ಣತೆಯ ಕೃತಿಯನ್ನು ನಿಭಾಯಿಸುವ ಮೊದಲು ಹೆಚ್ಚಿನ ಅನುಭವಬೇಕೆಂದು ನಿರ್ಧರಿಸಿ, ನೋಲನ್ ಈ ಯೋಜನೆಯನ್ನು ನಿವೃತ್ತಗೊಳಿಸಿ ಇತರ ಯೋಜನೆಗಳನ್ನು ಕೈಗೆತ್ತಿಕೊಂಡರು.[೬] ಇದರ ಸಾರಂಶವನ್ನು ೬ ತಿಂಗಳ ಕಾಲದಲ್ಲಿ ಪರಿಷ್ಕರಿಸಿದ ಮೇಲೆ ಫ಼ೆಬ್ರುವರಿ ೨೦೦೯ರಲ್ಲಿ ವಾರ್ನರ್ ಖರೀದಿಸಿತು.[೭] ಇನ್ಸೆಪ್ಷನ್ ಚಿತ್ರವನ್ನು ಜಪಾನ್, ಕೆನಡಾ ಸೇರಿದಂತೆ ಆರು ದೇಶಗಳಲ್ಲಿ ಚಿತ್ರೀಕರಿಸಲಾಯಿತು.[೮] ಇದರ ಅಧಿಕೃತ ಬಂಡವಾಳವು ಅಮೇರಿಕನ್ $160 ಮಿಲಿಯನ್ ಆಗಿತ್ತು.[೯] ನೋಲನ್‍ರ ಪ್ರಸಿದ್ಧಿ ಮತ್ತು ದ ಡಾರ್ಕ್ ನೈಟ್ನ ಯಶಸ್ಸು ಚಿತ್ರಕ್ಕೆ ಅಮೇರಿಕನ್ $100 ಮಿಲಿಯನ್‍ನಷ್ಟು ಜಾಹೀರಾತು ವೆಚ್ಚದಲ್ಲಿ ಪಡೆಯಲು ನೆರವಾಯಿತು.

ಇನ್ಸೆಪ್ಷನ್‍ನ ಪ್ರಥಮ ಪ್ರದರ್ಶನವು ಲಂಡನ್‍ನಲ್ಲಿ ಜುಲೈ ೮, ೨೦೧೦ರಂದು ನಡೆಯಿತು; ಇದನ್ನು ಚಿತ್ರಮಂದಿರಗಳಲ್ಲಿ ಜುಲೈ ೧೬, ೨೦೧೦ರಿಂದ ಆರಂಭಿಸಿ ಬಿಡುಗಡೆ ಮಾಡಲಾಯಿತು.[೧೦][೧೧] ಇನ್ಸೆಪ್ಷನ್ ವಿಶ್ವಾದ್ಯಂತ ಅಮೇರಿಕನ್ $828 ಮಿಲಿಯನ್‍ಗಿಂತ ಹೆಚ್ಚು ಗಳಿಸಿತು, ಮತ್ತು ೨೦೧೦ರ ನಾಲ್ಕನೇ ಅತಿ ಹೆಚ್ಚು ಹಣಗಳಿಸಿದ ಚಿತ್ರವಾಗಿತ್ತು. ಗೃಹ ವೀಡಿಯೊ ಮಾರುಕಟ್ಟೆ ಕೂಡ ಉತ್ತಮ ಫಲಿತಾಂಶಗಳನ್ನು ಹೊಂದಿತ್ತು, ಮತ್ತು ಅಮೇರಿಕನ್ $68 ಮಿಲಿಯನ್‍ನಷ್ಟು ಡಿವಿಡಿ ಮತ್ತು ಬ್ಲೂ-ರೇ ಡಿಸ್ಕ್‌ಗಳು ಮಾರಾಟವಾದವು. ೨೦೧೦ರ ದಶಕದ ಶ್ರೇಷ್ಠ ಚಲನಚಿತ್ರಗಳಲ್ಲಿ ಒಂದು ಎಂದು ಪರಿಗಣಿತವಾದ[೧೨] ಇನ್ಸೆಪ್ಷನ್ ಅದರ ಚಿತ್ರಕಥೆ, ದೃಶ್ಯ ಪರಿಣಾಮಗಳು, ಸಂಗೀತ, ನೋಲನ್‍ರ ನಿರ್ದೇಶನ ಮತ್ತು ಸಮೂಹ ಪಾತ್ರವರ್ಗಕ್ಕಾಗಿ ವಿಮರ್ಶಾತ್ಮಕ ಪ್ರಶಂಸೆಯನ್ನು ಪಡೆಯಿತು.[೧೩] ಇದು ನಾಲ್ಕು ಅಕಾಡೆಮಿ ಪ್ರಶಸ್ತಿಗಳನ್ನು ಗೆದ್ದಿತು (ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಶಬ್ದ ಸಂಕಲನ, ಅತ್ಯುತ್ತಮ ಶಬ್ದ ಮಿಶ್ರಣ ಮತ್ತು ಅತ್ಯುತ್ತಮ ದೃಶ್ಯ ಪರಿಣಾಮಗಳು) ಮತ್ತು ಇನ್ನೂ ನಾಲ್ಕು ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿತ್ತು: ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ಮೂಲ ಚಿತ್ರಕಥೆ, ಅತ್ಯುತ್ತಮ ಕಲಾ ನಿರ್ದೇಶನ ಮತ್ತು ಅತ್ಯುತ್ತಮ ಮೂಲ ಸಂಗೀತ.

ಕಥಾವಸ್ತು[ಬದಲಾಯಿಸಿ]

ಡಾಮಿನಿಕ್ "ಡಾಮ್" ಕಾಬ್ ಮತ್ತು ಆರ್ಥರ್ ಹೊರತೆಗೆಯುವವರು ಆಗಿರುತ್ತಾರೆ: ಅವರು ಪ್ರಾಯೋಗಿಕ ಸೇನಾ ತಂತ್ರಜ್ಞಾನವನ್ನು ಬಳಸಿ, ತಮ್ಮ ಗುರಿಗಳ ಉಪಪ್ರಜ್ಞೆಗಳ ಒಳಹೊಕ್ಕು ಹಂಚಿಕೊಂಡ ಕನಸಿನ ಲೋಕದ ಮೂಲಕ ಅಮೂಲ್ಯ ಮಾಹಿತಿಯನ್ನು ಹೊರತೆಗೆದು ಕಾರ್ಪೊರೇಟ್ ಬೇಹುಗಾರಿಕೆಯನ್ನು ನಡೆಸುತ್ತಾರೆ. ಅವರ ಅತ್ಯಂತ ಹೊಸ ಗುರಿಯಾದ ಜಪಾನಿ ಉದ್ಯಮಿ ಸೈಟೊ ಒಂದು ಅಸಾಧ್ಯವೆಂದು ತೋರುವ ಕೆಲಸಕ್ಕಾಗಿ ಕಾಬ್‍ನನ್ನು ಪರೀಕ್ಷಿಸಲು ತಾನು ಸ್ವತಃ ಅವರ ಕಾರ್ಯವನ್ನು ಏರ್ಪಡಿಸಿದೆನು ಎಂದು ಹೇಳುತ್ತಾನೆ. ಆ ಕೆಲಸವೆಂದರೆ ಒಬ್ಬ ವ್ಯಕ್ತಿಯ ಉಪಪ್ರಜ್ಞೆಯಲ್ಲಿ ಒಂದು ವಿಚಾರವನ್ನು ಸೇರಿಸುವುದು, ಅಥವಾ "ಇನ್ಸೆಪ್ಷನ್". ಕಾಯಿಲೆ ಆಗಿರುವ ಪ್ರತಿಸ್ಪರ್ಧಿ ಮಾರೀಸ್ ಫಿಷರ್‌ನ ಶಕ್ತಿ ಸಂಸ್ಥೆಯನ್ನು ಮುರಿಯಲು, ಕಾಬ್ ಫಿಷರ್‌ನ ಮಗ ಮತ್ತು ಉತ್ತರಾಧಿಕಾರಿಯಾದ ರಾಬರ್ಟ್‌ನನ್ನು ತನ್ನ ತಂದೆಯ ಕಂಪನಿಯನ್ನು ಮುಚ್ಚುವಂತೆ ಮನವೊಲಿಸಬೇಕು ಎಂದು ಸೈಟೊ ಬಯಸುತ್ತಾನೆ. ಪ್ರತಿಯಾಗಿ, ಒಮ್ಮೆ ಕೆಲಸ ಮುಗಿದ ಮೇಲೆ ತನ್ನ ಪ್ರಭಾವವನ್ನು ಬಳಸಿ ಕಾಬ್‍ನನ್ನು ಅವನ ಮಕ್ಕಳ ಬಳಿಗೆ ಮನೆಗೆ ವಾಪಸಾಗಲು ತಡೆಯುತ್ತಿರುವ ಸಾಬೀತಾಗದ ಅಪರಾಧಿ ಸ್ಥಿತಿಯಿಂದ ಮುಕ್ತಗೊಳಿಸುವೆನು ಎಂದು ಸೈಟೊ ಮಾತುಕೊಡುತ್ತಾನೆ.

ಕೆಲಸವು ಅಸಾಧ್ಯವೆಂದು ಆರ್ಥರ್ ನಂಬಿರುತ್ತಾನಾದರೂ, ಅದನ್ನು ಮಾಡಬಹುದು ಎಂದು ಕಾಬ್ ಸಾಧಿಸುತ್ತಾನೆ. ಕಾಬ್ ಪ್ರಸ್ತಾಪವನ್ನು ಸ್ವೀಕರಿಸಿ ತನ್ನ ತಂಡವನ್ನು ಒಟ್ಟುಗೂಡಿಸುತ್ತಾನೆ: ವಂಚಕ ಮತ್ತು ಗುರುತಿನ ನಕಲುಮಾಡುವ ಈಮ್ಸ್; ಸ್ಥಿರ ಕನಸಿನೊಳಗಿನ ಕನಸಿನ ಕಾರ್ಯತ್ರಂತ್ರಕ್ಕಾಗಿ ಪ್ರಬಲ ಶಾಮಕವನ್ನು ತಯಾರಿಸುವ ಔಷಧ ವ್ಯಾಪಾರಿಯಾದ ಯೂಸುಫ಼್; ಮತ್ತು ಕಾಬ್‍ನ ಮಾವ ಪ್ರಾಧ್ಯಾಪಕ ಸ್ಟೀಫ಼ನ್ ಮೈಲ್ಸ್‌ನ ನೆರವಿನಿಂದ ನೇಮಕ ಮಾಡಿಕೊಳ್ಳಲಾದ, ಕನಸಿನ ಭೂದೃಶ್ಯಗಳ ಚಕ್ರಭೀಮನ ಕೋಟೆಯನ್ನು ವಿನ್ಯಾಸಗೊಳಿಸುವ ಕಾರ್ಯವಹಿಸಲಾದ ವಾಸ್ತುಶಾಸ್ತ್ರದ ವಿದ್ಯಾರ್ಥಿನಿ ಏರಿಯಾಡ್ನಿ. ಕಾಬ್‍ನೊಂದಿಗೆ ಕನಸು ಹಂಚಿಕೊಳ್ಳುವಾಗ, ಅವನ ಉಪಪ್ರಜ್ಞೆಯು ತನ್ನ ಮೃತ ಹೆಂಡತಿ ಮಾಲ್‍ನ ಅತಿಕ್ರಮಿಸುವ ಪ್ರಕ್ಷೇಪಣವನ್ನು ಹೊಂದಿದೆ ಎಂದು ಏರಿಯಾಡ್ನಿ ಅರಿಯುತ್ತಾಳೆ.

ಸಿಡ್ನಿಯಲ್ಲಿ ಮಾರೀಸ್ ಮೃತನಾದ ನಂತರ, ಶವದ ಜೊತೆಗೆ ರಾಬರ್ಟ್ ಫಿಷರ್ ಲಾಸ್ ಏಂಜಲೀಸ್‍ಗೆ ವಾಪಸು ಹತ್ತು ಗಂಟೆಗಳ ಹಾರಾಟ ಮಾಡುತ್ತಾನೆ. (ಅವರ ಯಶಸ್ಸನ್ನು ಪರೀಕ್ಷಿಸಲು ಬಯಸುವ ಸೈಟೊ ಸೇರಿದಂತೆ) ತಂಡವು ಇದನ್ನು ಫ಼ಿಷರ್‌ಗೆ ನಿದ್ದೆ ಮದ್ದು ನೀಡಿ ಅವನನ್ನು ಹಂಚಿಕೊಂಡ ಕನಸಿನಲ್ಲಿ ಕರೆದೊಯ್ಯುವ ಅವಕಾಶವಾಗಿ ಬಳಸುತ್ತದೆ. ಕನಸಿನ ಪ್ರತಿ ಹಂತದಲ್ಲಿ, ಕನಸನ್ನು ಸೃಷ್ಟಿಸುವ ವ್ಯಕ್ತಿಯು, ಹೆಚ್ಚು ಆಳದ ಕನಸಿನ ಹಂತದಿಂದ ಇತರ ನಿದ್ರಿಸುತ್ತಿರುವ ತಂಡದ ಸದಸ್ಯರನ್ನು ಎಚ್ಚರಿಸಲು ಬಳಸುವ ಶಾಮಕ ಸೆಳೆತವನ್ನು ಸಿದ್ಧಪಡಿಸಲು ಉಳಿದುಕೊಳ್ಳುತ್ತಾನೆ; ಯಶಸ್ವಿಯಾಗಲು, ಈ ಶಾಮಕ ಸೆಳೆತಗಳು ಕನಸಿನ ಪ್ರತಿ ಹಂತದಲ್ಲಿ ಏಕಕಾಲಿಕವಾಗಿ ಘಟಿಸಬೇಕಿರುತ್ತದೆ. ಆದರೆ ಈ ಸಂಗತಿಯು ಪ್ರತಿ ಅನುಕ್ರಮದ ಹಂತದಲ್ಲಿ ಹೆಚ್ಚು ವೇಗವಾಗಿ ಸಾಗುವ ಸಮಯದ ಸ್ವರೂಪದ ಕಾರಣದಿಂದ ಜಟಿಲಗೊಂಡಿರುತ್ತದೆ. ಅವರು ಶಾಮಕ ಸೆಳೆತಗಳನ್ನು ಸಮನ್ವಯಗೊಳಿಸಲು ನೆರವಾಗಲು ಶ್ರವಣ ಸೂಚನೆಯಾಗಿ ಒಂದು ಹಾಡನ್ನು ಬಳಸುತ್ತಾರೆ. ಮಳೆ ಬೀಳುತ್ತಿರುವ ಲಾಸ್ ಏಂಜಲೀಸ್‍ನ ಯೂಸುಫ಼್‍ನ ಕನಸು ಮೊದಲ ಹಂತವಾಗಿರುತ್ತದೆ.

ತಂಡವು ಫ಼ಿಷರ್‌ನನ್ನು ಅಪಹರಿಸುತ್ತದೆ. ಆದರೆ ನಿರ್ದಿಷ್ಟವಾಗಿ ಅಂತಹ ಅತಿಕ್ರಮಣಕಾರರ ವಿರುದ್ಧ ರಕ್ಷಿಸಲು ತರಬೇತಿಪಡೆದ ಅವನ ಉಪಪ್ರಜ್ಞೆಯ ಸಶಸ್ತ್ರ ಪ್ರಕ್ಷೇಪಣಗಳಿಂದ ದಾಳಿಗೊಳಗಾಗುತ್ತಾರೆ. ತಂಡವು ರಾಬರ್ಟ್ ಮತ್ತು ಗಾಯಗೊಂಡ ಸೈಟೊನನ್ನು ಒಂದು ಉಗ್ರಾಣಕ್ಕೆ ಕರೆದೊಯ್ಯುತ್ತದೆ. ಕನಸಿನಲ್ಲಿ ಸಾಯುವುದು ಮಾಮೂಲಾಗಿ ಸೈಟೊನನ್ನು ಎಚ್ಚರಗೊಳಿಸುವುದು, ಆದರೆ ಬಹು ಹಂತದ ಕನಸನ್ನು ಸ್ಥಿರೀಕರಿಸಲು ಬೇಕಾದ ಪ್ರಬಲ ಶಾಮಕ ಮದ್ದುಗಳು ಎಚ್ಚರಿಸುವ ಬದಲು ಸಾಯುತ್ತಿರುವ ಕನಸುಗಾರನನ್ನು ತ್ರಿಶಂಕು ಸ್ಥಿತಿಗೆ (ಅನಂತ ಉಪಪ್ರಜ್ಞೆಯ ಲೋಕ. ಇದರಿಂದ ತಪ್ಪಿಸಿಕೊಳ್ಳುವುದು ಅಸಾಧ್ಯವಲ್ಲದಿದ್ದರೂ ಬಹಳ ಕಠಿಣ. ಇದರಲ್ಲಿ ಕನಸುಗಾರನು ತಾನು ಕನಸಿನಲ್ಲಿದ್ದೇನೆ ಎಂದು ಮರೆಯುವ ಅಪಾಯವಿರುತ್ತದೆ) ಕಳಿಸುವುದು ಎಂದು ಅಲ್ಲಿ ಕಾಬ್ ಹೇಳುತ್ತಾನೆ. ಈ ಹಿನ್ನಡೆಗಳ ನಡುವೆಯೂ ತಂಡವು ಯೋಜನೆಯನ್ನು ಮುಂದುವರಿಸುತ್ತದೆ.

ರಾಬರ್ಟ್‌ನು ತನ್ನ ತಂದೆಯ ಉಯಿಲನ್ನು ಮರುಪರಿಗಣಿಸುವಂತೆ ಸೂಚಿಸಲು, ಈಮ್ಸ್ ರಾಬರ್ಟ್‌ನ ಧರ್ಮಪಿತನಾದ ಪೀಟರ್ ಬ್ರೌನಿಂಗ್‍ನ ವೇಷ ಧರಿಸುತ್ತಾನೆ. ಉಳಿದವರು ಎರಡನೇ ಹಂತವಾದ ಆರ್ಥರ್ ಕನಸು ಕಂಡ ಹೋಟೆಲ್‍ಗೆ ಹೋಗಲು ಶಾಮಕ ಮದ್ದು ಪಡೆದ ನಂತರ, ಯೂಸುಫ಼್ ಅವರನ್ನು ವ್ಯಾನ್‍ನಲ್ಲಿ ಕರೆದೊಯ್ಯುತ್ತಿರುತ್ತಾನೆ. ರಾಬರ್ಟ್ ಬ್ರೌನಿಂಗ್‍ನಿಂದ ಅಪಹರಣಗೊಂಡಿದ್ದಾನೆಂದು, ಮತ್ತು ತಾನು ಅವನ ಉಪಪ್ರಜ್ಞೆಯ ರಕ್ಷಕನಾಗಿದ್ದೇನೆಂದು ಕಾಬ್ ಅವನ ಮನವೊಲಿಸುತ್ತಾನೆ. ಬ್ರೌನಿಂ‍ಗ್‍ನ ಉಪಪ್ರಜ್ಞೆಯನ್ನು ಅನ್ವೇಷಿಸಲು ರಾಬರ್ಟ್ ಮತ್ತೊಂದು ಹಂತ ಕೆಳಗೆ ಹೋಗುವಂತೆ ಕಾಬ್ ಮನವೊಲಿಸುತ್ತಾನೆ (ವಾಸ್ತವದಲ್ಲಿ ಇದು ರಾಬರ್ಟ್‌ನ ಉಪಪ್ರಜ್ಞೆಯನ್ನು ಪ್ರವೇಶಿಸುವ ಸಂಚಾಗಿರುತ್ತದೆ). ಮೂರನೇ ಹಂತವು ಈಮ್ಸ್ ಕನಸುಕಂಡ ಹಿಮಾವೃತ ಪರ್ವತದ ಮೇಲಿನ ಭದ್ರಪಡಿಸಲಾದ ಆಸ್ಪತ್ರೆಯಾಗಿರುತ್ತದೆ. ಸೈಟೊ ರಾಬರ್ಟ್‌ನನ್ನು ತನ್ನ ಉಪಪ್ರಜ್ಞೆಯ ಸಮಾನರೂಪದಲ್ಲಿ ಕರೆದೊಯ್ದಾಗ ತಂಡವು ಅದರ ಒಳನುಸುಳಿ ಕಾವಲು ಪಡೆಗಳನ್ನು ದೂರದಲ್ಲಿ ಇರಿಸಿರಬೇಕಾಗಿರುತ್ತದೆ. ಮೊದಲ ಸ್ತರದಲ್ಲಿ ರಾಬರ್ಟ್‌ನ ಪ್ರಕ್ಷೇಪಣಗಳಿಂದ ಹಿಂಬಾಲಿಸಲ್ಪಡುತ್ತಿರುವ ಯೂಸುಫ಼್ ಬೇಕೆಂದೆ ಒಂದು ಸೇತುವೆಯಿಂದ ವಾಹನವನ್ನು ಕೆಳಗೆ ಹಾರಿಸುತ್ತಾನೆ, ಮತ್ತು ಹಾಗಾಗಿ ಶಾಮಕ ಸೆಳೆತವನ್ನು ಬಹಳ ಬೇಗನೇ ಆರಂಭಿಸಿಬಿಡುತ್ತಾನೆ. ಇದು ಈಮ್ಸ್‌ನ ಸ್ತರದಲ್ಲಿ ಹಿಮ ಶಿಲಾಪಾತವನ್ನು ಉಂಟುಮಾಡುತ್ತದೆ, ಮತ್ತು ಆರ್ಥರ್‌ನ ಸ್ತರದ ಗುರುತ್ವಶಕ್ತಿಯನ್ನು ತೆಗೆದುಬಿಡುತ್ತದೆ. ಹಾಗಾಗಿ ಇದು ವ್ಯಾನ್ ನೀರಿಗೆ ಅಪ್ಪಳಿಸುವ ಕ್ಷಣಕ್ಕೆ ಸರಿಹೊಂದುವಂತೆ ಆರ್ಥರ್ ಹೊಸ ಶಾಮಕ ಸೆಳೆತವನ್ನು ರೂಪಿಸುವಂತೆ ಮಾಡುತ್ತದೆ. ಮಾಲ್‍ಳ ಪ್ರಕ್ಷೇಪಣವು ಈಮ್ಸ್‌ನ ಸ್ತರದಲ್ಲಿ ಉದ್ಭವಿಸಿ ರಾಬರ್ಟ್‌ನನ್ನು ಕೊಲ್ಲುತ್ತದೆ; ಕಾಬ್ ಮಾಲ್‌ಳನ್ನು ಕೊಲ್ಲುತ್ತಾನೆ ಮತ್ತು ಸೈಟೊ ತನಗಾದ ಗಾಯಗಳಿಂದ ಸಾಯುತ್ತಾನೆ. ರಾಬರ್ಟ್ ಮತ್ತು ಸೈಟೊನನ್ನು ರಕ್ಷಿಸಲು ಕಾಬ್ ಮತ್ತು ಏರಿಯಾಡ್ನಿ ಲಿಂಬೊವನ್ನು ಪ್ರವೇಶಿಸುತ್ತಾರೆ. ಇದೇ ವೇಳೆಗೆ ಆಸ್ಪತ್ರೆಗೆ ಸ್ಫೋಟಕಗಳನ್ನು ಕೂಡಿಸಿ ಜೋಡಿಸುವ ಮೂಲಕ ಶಾಮಕ ಸೆಳೆತವನ್ನು ವ್ಯವಸ್ಥೆ ಮಾಡುತ್ತಾನೆ.

ಕನಸು ಹಂಚಿಕೊಳ್ಳುವ ತಂತ್ರಜ್ಞಾನದೊಂದಿಗೆ ಪ್ರಯೋಗ ಮಾಡುವಾಗ ತಾನು ಮತ್ತು ಮಾಲ್ ತ್ರಿಶಂಕು ಸ್ಥಿತಿಗೆ ಹೋಗಿದ್ದೇವೆಂದು ಕಾಬ್ ಏರಿಯಾಡ್ನಿಗೆ ಹೇಳುತ್ತಾನೆ. ನಿಜ ಕಾಲದಲ್ಲಿ ಕೆಲವು ಗಂಟೆಗಳು ಶಾಮಕ ಮದ್ದಿನ ಪ್ರಭಾವದಲ್ಲಿ, ಅವರು ಕನಸಿನಲ್ಲಿ ತಮ್ಮ ಹಂಚಿಕೊಂಡ ನೆನಪುಗಳಿಂದ ಲೋಕವನ್ನು ಸೃಷ್ಟಿಸುತ್ತಾ ಐವತ್ತು ವರ್ಷ ಕಳೆದರು. ಮಾಲ್ ವಾಸ್ತವಕ್ಕೆ ಮರಳಲು ನಿರಾಕರಿಸಿದಾಗ, ಕಾಬ್ ಅವಳ ಚಿಹ್ನೆಯನ್ನು (ಕನಸುಗಾರರು ತಮ್ಮ ಕನಸುಗಳನ್ನು ವಾಸ್ತವದಿಂದ ವ್ಯತ್ಯಾಸ ಮಾಡಲು ಬಳಸುವ ವಸ್ತು) ಪುನಃಸಕ್ರಿಯಗೊಳಿಸುವ ಮೂಲಕ ಇನ್ಸೆಪ್ಷನ್‌ನ ಮೂಲಭೂತ ರೂಪವನ್ನು ಬಳಸಿದನು, ಮತ್ತು ತಮ್ಮ ಲೋಕವು ವಾಸ್ತವವಲ್ಲ ಎಂದು ಅವಳ ಉಪಪ್ರಜ್ಞೆಗೆ ನೆನೆಪಿಸಿದನು. ಆದರೆ, ಎಚ್ಚರವಾದ ಮೇಲೆ, ಇನ್ಸೆಪ್ಷನ್ ಸ್ಥಾಪನೆಯಾಗಿತ್ತು ಮತ್ತು ತಾನು ಕನಸು ಕಾಣುತ್ತಿದ್ದೇನೆಂದು ಇನ್ನೂ ನಂಬಿದ್ದಳು. ನಿಜವಾಗಿಯೂ ಎಚ್ಚರಗೊಳ್ಳುವ ಪ್ರಯತ್ನದಲ್ಲಿ, ಅವಳು ಆತ್ಮಹತ್ಯೆ ಮಾಡಿಕೊಂಡು, ಅವನೂ ಅದನ್ನೇ ಮಾಡಬೇಕೆಂದು ಒತ್ತಡತರಲು ತನ್ನ ಸಾವಿಗಾಗಿ ಕಾಬ್ ಮೇಲೆ ಆಪಾದನೆ ಹೊರಿಸಿದಳು. ಕೊಲೆ ಆಪಾದನೆಯನ್ನು ಎದುರಿಸಿದ ನಂತರ ಕಾಬ್ ಅಮೇರಿಕದಿಂದ ಪರಾರಿಯಾಗಿ ತನ್ನ ಮಕ್ಕಳನ್ನು ತನ್ನ ಮಾವನ ಆರೈಕೆಯಲ್ಲಿ ಬಿಟ್ಟನು.

ತನ್ನ ತಪ್ಪೊಪ್ಪಿಗೆಯ ಮೂಲಕ, ಮಾಲ್‍ನ ಸಾವಿನ ಬಗೆಗಿನ ತನ್ನ ತಪ್ಪಿತಸ್ಥ ಭಾವನೆಯನ್ನು ಒಪ್ಪಿಕೊಳ್ಳುತ್ತಾನೆ. ಏರಿಯಾಡ್ನಿ ಮಾಲ್‌ಳ ಪ್ರಕ್ಷೇಪಣವನ್ನು ಸಾಯಿಸಿ ರಾಬರ್ಟ್‌ನನ್ನು ಶಾಮಕ ಸೆಳೆತದ ನೆರವಿನಿಂದ ಎಚ್ಚರಿಸುತ್ತಾಳೆ. ರಕ್ಷಿತ ಆಸ್ಪತ್ರೆಯಲ್ಲಿ ಎಚ್ಚೆತ್ತುಕ್ಕೊಂಡ ಅವನು ತಿಜೋರಿಯಿರುವ ಕೋಣೆಯನ್ನು ಪ್ರವೇಶಿಸಿ ಸ್ಥಾಪಿಸಲಾದ ವಿಚಾರವನ್ನು ಕಂಡುಕೊಂಡು ಒಪ್ಪಿಕೊಳ್ಳುತ್ತಾನೆ: ತನ್ನ ಸಾಯುತ್ತಿರುವ ತಂದೆಯ ಪ್ರಕ್ಷೇಪಣವಾಗಿದ್ದು ಅವನು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕೆಂದು ಹೇಳುತ್ತಾನೆ. ಕಾಬ್ ತ್ರಿಶಂಕು ಲೋಕದಲ್ಲಿ ಸೈಟೊನನ್ನು ಹುಡುಕಲು ಉಳಿದುಕೊಳ್ಳುತ್ತಾನೆ, ಮತ್ತು ಇತರ ತಂಡ ಸದಸ್ಯರು ಸರಿಹೊಂದಿಸಲಾದ ಶಾಮಕ ಸೆಳೆತಗಳನ್ನು ಅವಲಂಬಿಸಿ ವಾಸ್ತವಕ್ಕೆ ಮರಳುತ್ತಾರೆ. ಅಂತಿಮವಾಗಿ ಕಾಬ್ ತ್ರಿಶಂಕು ಲೋಕದಲ್ಲಿ ವಯಸ್ಸಾದ ಸೈಟೊನನ್ನು ಕಂಡುಹಿಡಿದು ಅವನಿಗೆ ತಮ್ಮ ಒಪ್ಪಂದವನ್ನು ನೆನಪಿಸುತ್ತಾನೆ. ಕನಸುಗಾರರೆಲ್ಲರೂ ವಿಮಾನದಲ್ಲಿ ಎಚ್ಚರಗೊಳ್ಳುತ್ತಾರೆ ಮತ್ತು ಸೈಟೊ ದೂರವಾಣಿ ಕರೆಯನ್ನು ಮಾಡುತ್ತಾನೆ.

ಲಾಸ್ ಏಂಜಲೀಸ್ ವಿಮಾನ ನಿಲ್ದಾಣದಲ್ಲಿ ಆಗಮಿಸಿದ ನಂತರ, ಕಾಬ್ ಒಳವಲಸೆ ಪರೀಕ್ಷಣಾ ಸ್ಥಳವನ್ನು ದಾಟಿ ಸಾಗುತ್ತಾನೆ. ಪ್ರೊಫ಼ೆಸರ್ ಮೈಲ್ಸ್ ಅವನ ಜೊತೆಗೆ ಮನೆಗೆ ಹೋಗುತ್ತಾನೆ. ಮಾಲ್‌ಳ ಹಳೆಯ ಚಿಹ್ನೆಯಾದ, ಕನಸಿನ ಲೋಕದಲ್ಲಿ ಅನಿರ್ದಿಷ್ಟವಾಗಿ ತಿರುಗುವ ಆದರೆ ವಾಸ್ತವದಲ್ಲಿ ನಿಲ್ಲುವ, ಬುಗುರಿಯನ್ನು ಬಳಸಿ, ಕಾಬ್ ತಾನು ನಿಜವಾಗಿಯೂ ವಾಸ್ತವ ಜಗತ್ತಿನಲ್ಲಿ ಇದ್ದೇನೆಂದು ಸಾಬೀತುಮಾಡಲು ಪರೀಕ್ಷೆ ಮಾಡುತ್ತಾನೆ. ಆದರೆ ಅವನು ಅದರ ಫಲಿತಾಂಶವನ್ನು ಗಮನಿಸುವುದಿಲ್ಲ, ಬದಲಾಗಿ ತೋಟದಲ್ಲಿ ತನ್ನ ಮಕ್ಕಳೊಂದಿಗೆ ಕೂಡಿಕೊಳ್ಳುತ್ತಾನೆ.

ಪಾತ್ರವರ್ಗ[ಬದಲಾಯಿಸಿ]

A man in a black suit, a woman in a pink dress, a man in a plaid suit, a woman in a black dress, a Japanese man in a black suit, and an old man in a blue suit clap their hands, while a man in a black suit stands. A microphone stand is in the foreground, and blue curtains are in the background.
ಜುಲೈ ೨೦೧೦ರಲ್ಲಿ ಚಿತ್ರದ ಪ್ರಥಮ ಪ್ರದರ್ಶನದಲ್ಲಿ ಪಾತ್ರವರ್ಗ
  • ಡಾಮ್ ಕಾಬ್ ಆಗಿ ಲಿಯೊನಾರ್ಡೊ ಡಿಕ್ಯಾಪ್ರಿಯೊ
  • ಆರ್ಥರ್ ಆಗಿ ಜೋಸಫ಼್ ಗಾರ್ಡನ್-ಲೆವಿಟ್
  • ಏರಿಯಾಡ್ನಿ ಆಗಿ ಎಲೆನ್ ಪೇಜ್
  • ಈಮ್ಸ್ ಆಗಿ ಟಾಮ್ ಹಾರ್ಡಿ
  • ಮಿ. ಸೈಟೊ ಆಗಿ ಕೆನ್ ವಾಟನಾಬೆ
  • ಯೂಸುಫ಼್ ಆಗಿ ದಿಲೀಪ್ ರಾವ್
  • ರಾಬರ್ಟ್ ಮೈಕಲ್ ಫಿಷರ್ ಆಗಿ ಕಿಲಿಯನ್ ಮರ್ಫಿ
  • ಪೀಟರ್ ಬ್ರೌನಿಂಗ್ ಆಗಿ ಟಾಮ್ ಬೆರೆಂಜರ್
  • ಮಾಲ್ ಕಾಬ್ ಆಗಿ ಮಾರಿಯೋನ್ ಕೊಟೀಯಾ
  • ಮಾರೀಸ್ ಫಿಷರ್ ಆಗಿ ಪೀಟ್ ಪಾಸಲ್ತ್‌ವೇಟ್
  • ಪ್ರೊಫ಼ೆಸರ್ ಸ್ಟೀಫನ್ ಮೈಲ್ಸ್ ಆಗಿ ಮೈಕಲ್ ಕೇನ್
  • ನ್ಯಾಶ್ ಆಗಿ ಲೂಕಾಸ್ ಹಾಸ್
  • ಟಲೂಲಾ ರೈಲಿ

ತಯಾರಿಕೆ[ಬದಲಾಯಿಸಿ]

ಬೆಳವಣಿಗೆ[ಬದಲಾಯಿಸಿ]

ಆರಂಭದಲ್ಲಿ, ನೋಲನ್ ಕನಸುಗಳ್ಳರ ಬಗ್ಗೆ ೮೦ ಪುಟಗಳ ಸಾರಾಂಶವನ್ನು ಬರೆದರು. ಮೂಲತಃ, ನೋಲನ್ ಇನ್ಸೆಪ್ಷನ್‌ನ್ನು ಭಯಪ್ರಧಾನ ಚಲನಚಿತ್ರವಾಗಿ ಕಲ್ಪಿಸಿಕೊಂಡಿದ್ದರು, ಆದರೆ ಅಂತಿಮವಾಗಿ ಅದನ್ನು ಕಳ್ಳತನ ವಿಷಯದ ಚಲನಚಿತ್ರವಾಗಿ ಬರೆದರು.

ನೋಲನ್ ಚಿತ್ರದ ಕಥೆಯ ಮೇಲೆ ಒಂಭತ್ತು ಹತ್ತು ವರ್ಷಗಳವರೆಗೆ ಕೆಲಸಮಾಡಿದರು.[೧೪]

ನೋಲನ್‍ರ ಚಿತ್ರದಲ್ಲಿ ಕೆಲಸಮಾಡಲು ಡಿಕ್ಯಾಪ್ರಿಯೊ ಈ ಪರಿಕಲ್ಪನೆಯಿಂದ ಕುತೂಹಲಗೊಂಡು ಒಪ್ಪಿಕೊಂಡರು. ಡಿಕ್ಯಾಪ್ರಿಯೊ ಮತ್ತು ನೋಲನ್ ಚಿತ್ರಕಥೆಯ ಬಗ್ಗೆ ಮಾತಾಡುತ್ತಾ ಹಲವು ತಿಂಗಳು ಕಳೆದರು.

ಸ್ಥಳಗಳು ಮತ್ತು ಸೆಟ್‍ಗಳು[ಬದಲಾಯಿಸಿ]

ಪ್ರಧಾನ ಛಾಯಾಗ್ರಹಣವು ಟೋಕ್ಯೊದಲ್ಲಿ ಜೂನ್ ೧೯, ೨೦೦೯ರಂದು ಆರಂಭವಾಯಿತು.[೫][೧೫]

ನಂತರ ತಯಾರಿಕೆಯು ಯುನೈಟಡ್ ಕಿಂಗ್ಡಮ್‌ಗೆ ಸಂಚರಿಸಿ, ಕಾರ್ಡಿಂಗ್ಟನ್‍ನಲ್ಲಿನ ವಾಯುನೌಕಾಖಾನೆಯಲ್ಲಿ ಚಿತ್ರೀಕರಣ ಮಾಡಲಾಯಿತು.[೧೬]

ಆರ್ಥರ್‌ನ ಪಾತ್ರವಹಿಸುವ ಜೋಸಫ಼್ ಗಾರ್ಡನ್-ಲೆವಿಟ್, ಭಾರಿದೊಡ್ಡ ಹ್ಯಾಮ್‍ಸ್ಟರ್ ಪಂಜರದಂತಹ ತಿರುಗುತ್ತಿರುವ ಮೊಗಸಾಲೆಯಲ್ಲಿ ಹೊಡೆದಾಡುವುದನ್ನು ಕಲಿಯುವುದರಲ್ಲಿ ಹಲವು ವಾರಗಳನ್ನು ಕಳೆದರು.[೧೭] ಜುಲೈ ೧೫, ೨೦೦೯ ರಂದು ಯೂನಿವರ್ಸಿಟಿ ಕಾಲೇಜ್, ಲಂಡನ್‍ನಲ್ಲಿ ಚಿತ್ರೀಕರಣ ನಡೆಯಿತು. ನಂತರ ಚಿತ್ರೀಕರಣಕ್ಕಾಗಿ ಫ಼್ರಾನ್ಸ್‌ಗೆ ಹೋಗಲಾಯಿತು.

ಮೊರೊಕ್ಕೋದ ಟ್ಯಾಂಜಿಯರ್ ಮೊಂಬಾಸಾದ ಕಾರ್ಯನಿರ್ವಹಿಸಿತು.

ನಂತರ ಚಿತ್ರೀಕರಣವು ಲಾಸ್ ಎಂಜಲೀಸ್ ಪ್ರದೇಶದಲ್ಲಿ ಮುಂದುವರಿಯಿತು.

ಪ್ರಧಾನ ಛಾಯಾಗ್ರಹಣದ ಅಂತಿಮ ಹಂತವು ಆಲ್ಬರ್ಟಾದಲ್ಲಿ ನವೆಂಬರ್ ೨೦೦೯ರ ಕೊನೆಯಲ್ಲಿ ನಡೆಯಿತು.

ಚಲನಚಿತ್ರ ಛಾಯಾಗ್ರಹಣ[ಬದಲಾಯಿಸಿ]

ಚಲನಚಿತ್ರವನ್ನು ಮುಖ್ಯವಾಗಿ ವಿಕೃತ ರೂಪಾಂತರದ ಶೈಲಿಯಲ್ಲಿ ೩೫ ಮಿ.ಮಿ. ಚಿತ್ರಪಟಲದಲ್ಲಿ ಚಿತ್ರೀಕರಿಸಲಾಯಿತು. ಪ್ರಧಾನ ದೃಶ್ಯಭಾಗಗಳನ್ನು ೬೫ ಮಿ.ಮಿ ನಲ್ಲಿ ಮತ್ತು ವಾಯವೀಯ ದೃಶ್ಯಭಾಗಳನ್ನು ವಿಸ್ಟಾವಿಷನ್‍ನಲ್ಲಿ ಚಿತ್ರೀಕರಿಸಲಾಯಿತು.

ದೃಶ್ಯ ಪರಿಣಾಮಗಳು[ಬದಲಾಯಿಸಿ]

ಇನ್ಸೆಪ್ಷನ್ನಲ್ಲಿನ ಕನಸಿನ ದೃಶ್ಯಭಾಗಗಳಿಗೆ, ನೋಲನ್ ಕಡಿಮೆ ಪ್ರಮಾಣದಲ್ಲಿ ಕಂಪ್ಯೂಟರ್ ಸೃಷ್ಟಿತ ಚಿತ್ರಗಳನ್ನು ಬಳಸಿದರು, ಮತ್ತು ಎಲ್ಲೆಲ್ಲಿ ಸಾಧ್ಯವೊ ಅಲ್ಲಿ ಕ್ರಿಯಾಶೀಲ ಪರಿಣಾಮಗಳನ್ನು ಬಳಸಿದರು.

ಸಂಗೀತ[ಬದಲಾಯಿಸಿ]

ಇನ್ಸೆಪ್ಷನ್‍ನ ಸಂಗೀತವನ್ನು ಹ್ಯಾನ್ಸ್ ಜ಼ಿಮರ್ ಸಂಯೋಜಿಸಿದರು.[೧೮] ಸಂಗೀತವನ್ನು ಚಿತ್ರೀಕರಣದ ಜೊತೆ ಏಕಕಾಲಿಕವಾಗಿ ಸಂಯೋಜಿಸಲಾಯಿತು.[೧೯] ಹ್ಯಾನ್ಸ್ ಜ಼ಿಮರ್‌ರ ಸಂಗೀತವು ಅತ್ಯುತ್ತಮ ಮೂಲ ಸಂಗಿತ್ತ ವರ್ಗದಲ್ಲಿನ ಅಕ್ಯಾಡೆಮಿ ಪ್ರಶಸ್ತಿಗೆ ೨೦೧೧ರಲ್ಲಿ ನಾಮನಿರ್ದೇಶನಗೊಂಡಿತು.

ವಿಷಯಗಳು[ಬದಲಾಯಿಸಿ]

ವಾಸ್ತವ ಮತ್ತು ಕನಸುಗಳು[ಬದಲಾಯಿಸಿ]

A staircase in a square format. The stairs make four 90-degree turns in each corner, so they are in the format of a continuous loop.
ಚಲನಚಿತ್ರದಲ್ಲಿ ಪೆನ್ರೋಸ್ ಮೆಟ್ಟಿಲುಗಳನ್ನು ಬಳಸಿಕೊಳ್ಳಲಾಗಿದೆ.

ಇನ್ಸೆಪ್ಷನ್‍ನಲ್ಲಿ, ನೋಲನ್ ಜನರು ಕನಸಿನ ಎಡೆಯನ್ನು ಹಂಚಿಕೊಳ್ಳುವ ಕಲ್ಪನೆಯನ್ನು ಅನ್ವೇಷಿಸಬೇಕೆಂದಿದ್ದರು. ಚಿತ್ರದ ಕಥೆಯ ಬಹುಪಾಲು ಈ ಪರಸ್ಪರ ಸಂಪರ್ಕ ಹೊಂದಿರುವ ಕನಸಿನ ಲೋಕಗಳಲ್ಲಿ ನಡೆಯುತ್ತದೆ. ಈ ರಚನೆಯು ವಾಸ್ತವ ಅಥವಾ ಕನಸಿನ ಪ್ರಪಂಚಗಳಲ್ಲಿನ ಕ್ರಿಯೆಗಳು ಇತರ ಕ್ರಿಯೆಗಳಿಗೆ ಅಡ್ಡಲಾಗಿ ಏರಿಳಿಯುವ ಚೌಕಟ್ಟನ್ನು ಸೃಷ್ಟಿಸುತ್ತದೆ. ಕನಸು ಯಾವಾಗಲೂ ಸೃಷ್ಟಿಯ ಸ್ಥಿತಿಯಲ್ಲಿರುತ್ತದೆ, ಮತ್ತು ಪಾತ್ರಗಳು ಅದರಲ್ಲಿ ಸಂಚರಿಸಿದಾಗ ಮಟ್ಟಗಳನ್ನು ಬದಲಾಯಿಸುತ್ತದೆ.

ಕನಸುಗಳು ಮತ್ತು ಚಲನಚಿತ್ರ[ಬದಲಾಯಿಸಿ]

ಚಲನಚಿತ್ರವು ಸ್ವತಃ ಚಿತ್ರ ತಯಾರಿಕೆಗೆ ರೂಪಕವಾಗಿದೆ ಎಂದು ಇತರರು ವಾದಿಸಿದ್ದಾರೆ, ಮತ್ತು ಸ್ವತಃ ಚಿತ್ರನೋಡಲು ಹೋಗುವ ಅನುಭವ, ಕತ್ತಲಿರುವ ಕೋಣೆಯಲ್ಲಿ ಒಬ್ಬರ ಕಣ್ಣ ಮುಂದೆ ಹೊಳೆಯುವ ಚಿತ್ರಗಳು ಕನಸನ್ನು ಹೋಲುತ್ತವೆ. ಚಲನಚಿತ್ರ ನೋಡುವಾಗ ಮತ್ತು ಮಲಗಿದಾಗ, ದೃಶ್ಯ ಪದರವು ಬಹಳವಾಗಿ ಸಕ್ರಿಯವಾಗಿರುತ್ತದೆ ಮತ್ತು ತರ್ಕ, ಉದ್ದೇಶಪೂರ್ವಕ ವಿಶ್ಲೇಷಣೆ ಹಾಗೂ ಸ್ವ-ಅರಿವನ್ನು ನಿರ್ವಹಿಸುವ ಮುಂಪದರವು ನಿಶ್ಶಬ್ದವಾಗಿರುತ್ತದೆ. ಈ ಚಲನಚಿತ್ರದ ಕಥೆಯಲ್ಲಿರುವಂತೆ, ಒಂದು ಚಲನಚಿತ್ರದಲ್ಲಿ ಒಬ್ಬರು ಮತ್ತೊಬ್ಬರ ಕನಸಿನ ಸ್ಥಳದೊಳಗೆ ಪ್ರವೇಶಿಸುತ್ತಾರೆ. ಮತ್ತು ಯಾವುದೇ ಕಲಾಕೃತಿಗೆ ಇರುವಂತೆ, ಅದರ ಬಗ್ಗೆ ಒಬ್ಬರ ಗ್ರಹಿಕೆಯು ಅಂತಿಮವಾಗಿ ಒಬ್ಬರ ಸ್ವಂತದ ವ್ಯಕ್ತಿಗತ ಬಯಕೆಗಳು ಮತ್ತು ಉಪಪ್ರಜ್ಞೆಯಿಂದ ಪ್ರಭಾವಿತವಾಗಿರುತ್ತದೆ.

ಚಲನಚಿತ್ರ ತಂತ್ರ[ಬದಲಾಯಿಸಿ]

ಪ್ರಕಾರ[ಬದಲಾಯಿಸಿ]

ಈ ಚಲನಚಿತ್ರದೊಳಗೆ ನೋಲನ್ ಹಲವು ವಿಭಿನ್ನ ಚಲನಚಿತ್ರ ಪ್ರಕಾರಗಳ ಅಂಶಗಳನ್ನು ಒಂದುಗೂಡಿಸಿದರು, ಗಮನಾರ್ಹವಾಗಿ ವಿಜ್ಞಾನ ಕಾಲ್ಪನಿಕ ಶೈಲಿ, ಕಳ್ಳತನದ ವಿಷಯದ ಚಿತ್ರ ಮತ್ತು ಫಿಲ್ಮ್ ನ್ವಾರ್. ಮಾರಿಯೋನ್ ಕೊಟೀಯಾ ಡಾಮ್ ಕಾಬ್‍ನ ಮೃತ ಹೆಂಡತಿಯ ಆತ್ಮಹತ್ಯೆಯ ಬಗೆಗಿನ ತಪ್ಪಿತಸ್ಥ ಮನೋಭಾವದ ಪ್ರಕ್ಷೇಪಣದ ಪಾತ್ರವಹಿಸಿದ್ದಾರೆ. ಚಲನಚಿತ್ರದ ಮುಖ್ಯ ವೈರಿಯಾಗಿ ಅವಳು ಅವನ ಕನಸುಗಳಲ್ಲಿ ಮತ್ತೆಮತ್ತೆ, ಕೇಡಿನ ಉದ್ದೇಶದಿಂದ ಬರುತ್ತಾಳೆ. ಡಾಮ್ ಅವಳ ಈ ಪ್ರಕ್ಷೇಪಣಗಳನ್ನು ನಿಯಂತ್ರಿಸಲು ಆಗುವುದಿಲ್ಲ, ಮತ್ತು ಸೆಳೆಯುವವನಾಗಿ ಅವನ ಸಾಮರ್ಥ್ಯಗಳಿಗೆ ಸವಾಲೊಡ್ಡುತ್ತಾಳೆ.[೨೦] ನಿರ್ಧಾರಕ ಮಾಯಾಂಗನೆಯಾಗಿ ಕಾಬ್‍ನೊಂದಿಗೆ ಅವಳ ಸಂಬಂದವು ಅವನ ಮನಸ್ಸಿನಲ್ಲಿರುತ್ತದೆ, ಮತ್ತು ಕಾಬ್‍ನ ಸ್ವಂತದ ನರವಿಕಾರ ಮತ್ತು ತಾನು ಪ್ರೀತಿಸುವ ಮಹಿಳೆಯ ಬಗ್ಗೆ ತನಗೆ ಎಷ್ಟು ಕಡಿಮೆ ಗೊತ್ತಿದೆ ಎಂಬುದರ ಭಯದ ಅಭಿವ್ಯಕ್ತಿಯಾಗಿರುತ್ತದೆ.[೨೧]

ನೋಲನ್ ಕಳ್ಳತನದ ವಿಷಯದ ಚಿತ್ರದ ರಚನೆಯೊಂದಿಗೆ ಆರಂಭಿಸಿದರು, ಏಕೆಂದರೆ ವಿವರಣೆಯು ಆ ಪ್ರಕಾರದ ಅತ್ಯಗತ್ಯ ಘಟಕವಾಗಿರುತ್ತದೆ. ಆದರೆ ಕನಸುಗಳು ಮತ್ತು ಉಪಪ್ರಜ್ಞೆಯ ಪ್ರಪಂಚಕ್ಕೆ ಒಗ್ಗುವ ಹೆಚ್ಚಿನ ಭಾವನಾತ್ಮಕ ಕಥೆಯನ್ನು ಹೊಂದಿರಲು ಅದನ್ನು ಮಾರ್ಪಡಿಸಿದರು.[೨೧] ಚಿತ್ರದ ಮುಕ್ಕಾಲು ಭಾಗವು ಅದರ ಕಥಾವಸ್ತುವನ್ನು ವಿವರಿಸಲು ಸಮರ್ಪಿತವಾಗಿದೆ. ಈ ರೀತಿಯಲ್ಲಿ, ಪಾತ್ರಚಿತ್ರಣಕ್ಕಿಂತ ವಿವರಣೆಗೆ ಆದ್ಯತೆ ನೀಡಲಾಗಿದೆ. ಪಾತ್ರಗಳ ಸಂಬಂಧಗಳನ್ನು ಅವುಗಳ ಕೌಶಲಗಳು ಮತ್ತು ಪಾತ್ರಗಳಿಂದ ಸೃಷ್ಟಿಸಲಾಗಿದೆ. ಏರಿಯಾಡ್ನಿ ಚಕ್ರಭೀಮನ ಕೋಟೆಯನ್ನು ಸೃಷ್ಟಿಸಿ ಅದರೊಳಗೆ ಇತರರಿಗೆ ಮಾರ್ಗದರ್ಶನ ನೀಡುತ್ತಾಳೆ. ಇದರ ಜೊತೆಗೆ ಕಾಬ್‍ಗೆ ಅವನ ಸ್ವಂತದ ಉಪಪ್ರಜ್ಞೆಯಲ್ಲಿ ಸಂಚರಿಸಲು ನೆರವಾಗುತ್ತಾಳೆ. ಕನಸು ಹಂಚುವಿಕೆಯ ಏಕಮಾತ್ರ ವಿದ್ಯಾರ್ಥಿಯಾಗಿ, ಪ್ರೇಕ್ಷಕರಿಗೆ ಕಥೆಯ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತಾಳೆ.

ಮುಕ್ತಾಯ[ಬದಲಾಯಿಸಿ]

ಬಹಳ ಕ್ಷೀಣವಾದ ಅಲುಗಾಟವನ್ನು ತೋರಿಸಲು ಆರಂಭಿಸಿರುವ ಬುಗುರಿಯ ದೃಶ್ಯದಿಂದ ಚಿತ್ರವು ಮುಕ್ತಾಯದ ಶೀರ್ಷಿಕೆಗಳಿಗೆ ಬದಲಾಯಿಸುತ್ತದೆ. ಇದರಿಂದ ಅಂತಿಮ ದೃಶ್ಯವು ವಾಸ್ತವವೇ ಅಥವಾ ಮತ್ತೊಂದು ಕನಸೇ ಎಂಬ ಬಗ್ಗೆ ಅನುಮಾನ ಉಂಟಾಗುತ್ತದೆ.

ಬಿಡುಗಡೆ[ಬದಲಾಯಿಸಿ]

ಮಾರಾಟಗಾರಿಕೆ[ಬದಲಾಯಿಸಿ]

ಈ ಚಲನಚಿತ್ರವನ್ನು ಮಾರಾಟಮಾಡಲು ವಾರ್ನರ್ ಬ್ರದರ್ಸ್ ಯುಎಸ್$100 ಮಿಲಿಯನ್ ಖರ್ಚುಮಾಡಿದರು.

ಚಿತ್ರಕ್ಕೆ ವೈರಲ್ ಮಾರಾಟಗಾರಿಕೆ ಪ್ರಚಾರವನ್ನು ಬಳಸಲಾಯಿತು. ಮೊದಲು ಚಲನಚಿತ್ರದ ಅಧಿಕೃತ ಜಾಲತಾಣವು ಕೇವಲ ಕಾಬ್‍ನ ತಿರುಗುತ್ತಿರುವ ಬುಗುರಿಯ ಆ್ಯನಿಮೇಷನ್‍ನ್ನು ಹೊಂದಿತ್ತು. ಎಪ್ರಿಲ್ ೨೦೧೦ರಲ್ಲಿ, ವಾರ್ನರ್ ಪ್ರಚಾರಕ್ಕಾಗಿ ಟಿ-ಶರ್ಟಗಳನ್ನು ನೀಡಿತು.

ಚಿತ್ರದ ಅಧಿಕೃತ ಟ್ರೇಲರ್‌ನ್ನು ಮೇ ೧೦, ೨೦೧೦ರಂದು ಬಿಡುಗಡೆ ಮಾಡಲಾಯಿತು ಮತ್ತು ಇದಕ್ಕೆ ಬಹಳ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತು.[೨೨]

ಗೃಹ ಮಾಧ್ಯಮ[ಬದಲಾಯಿಸಿ]

ಫ಼್ರಾನ್ಸ್‌ನಲ್ಲಿ ಇನ್ಸೆಪ್ಷನ್‍ನ ಡಿವಿಡಿ ಮತ್ತು ಬ್ಲೂ-ರೇ ಅನ್ನು ಡಿಸೆಂಬರ್ ೩, ೨೦೧೦ರಂದು ಬಿಡುಗಡೆಮಾಡಲಾಯಿತು,[೨೩] ಮತ್ತು ಯುಕೆ ಹಾಗೂ ಅಮೇರಿಕದಲ್ಲಿ ಡಿಸೆಂಬರ್ ೭, ೨೦೧೦ರಂದು ಬಿಡುಗಡೆ ಮಾಡಲಾಯಿತು.[೨೪][೨೫]. ೨೦೧೮ರ ವೇಳೆಗೆ ಗೃಹ ಮಾಧ್ಯಮ ಬಿಡುಗಡೆಗಳು ೯ ಮಿಲಿಯನ್ ಘಟಕಗಳಿಗಿಂತ ಹೆಚ್ಚು ಮಾರಾಟವಾಗಿ $160 ಮಿಲಿಯನ್‍ಗಿಂತ ಹೆಚ್ಚು ಗಳಿಸಿವೆ.[೨೬]

ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ[ಬದಲಾಯಿಸಿ]

ಬಾಕ್ಸ್ ಆಫ಼ಿಸ್[ಬದಲಾಯಿಸಿ]

ಚಿತ್ರ ಬಿಡುಗಡೆ ದಿನಾಂಕ ಬಾಕ್ಸ್ ಆಫ಼ಿಸ್ ಆದಾಯ ಬಾಕ್ಸ್ ಆಫ಼ಿಸ್ ಸ್ಥಾನ ಬಂಡವಾಳ ಉಲ್ಲೇಖ
ಅಮೇರಿಕ ಉತ್ತರ ಅಮೇರಿಕಾ ಅಂತರರಾಷ್ಟ್ರೀಯ ವಿಶ್ವಾದ್ಯಂತ ಸಾರ್ವಕಾಲಿಕ ಅಮೇರಿಕಾ ಸಾರ್ವಕಾಲಿಕ ವಿಶ್ವಾದ್ಯಂತ
ಇನ್ಸೆಪ್ಷನ್ ಜುಲೈ 2010 ಯುಎಸ್$292,576,195 ಯುಎಸ್$532,956,569 ಯುಎಸ್$825,532,764 ಸಂ. 80 ಸಂ. 67 ಯುಎಸ್$160,000,000 [೨೭]

ವಿಮರ್ಶಾತ್ಮಕ ಪ್ರತಿಕ್ರಿಯೆ[ಬದಲಾಯಿಸಿ]

ಕೆಲವು ವಿಮರ್ಶಕರು ಈ ಚಿತ್ರವನ್ನು ಸಂಪೂರ್ಣವಾಗಿ ಪ್ರಾಮಾಣಿಕವೆಂದು ನೋಡಲು ಇಷ್ಟಪಡುತ್ತಾರೆ, ಮತ್ತು ಇದರ ಅತಿಯಾದ ವಿಷಯಗಳನ್ನು ನಿಷ್ಕ್ರಿಯ ಕಂತೆ ಪುರಾಣದ ವಸ್ತುವಾಗಿದೆ ಎಂದು ಕೂಡ ಟೀಕಿಸುತ್ತಾರೆ. ಆದರೆ ಆನ್‍ಲೈನ್ ಚರ್ಚೆಯು ಹೆಚ್ಚು ಸಕಾರಾತ್ಮಕವಾಗಿದೆ.[೨೮] ಚಿತ್ರದ ಅಂತ್ಯದ ಅಸ್ಪಷ್ಟತೆಯ ಮೇಲೆ ಬಿಸಿ ಚರ್ಚೆಯು ಕೇಂದ್ರೀಕರಿಸಿದೆ. ಡೆವಿನ್ ಫ಼ರಾಸಿಯಂತಹ ಅನೇಕ ವಿಮರ್ಶಕರು ಚಿತ್ರವು ಸ್ವಯಂ ಸೂಚಕ ಮತ್ತು ಕುಹಕದಿಂದ ಕೂಡಿದೆ, ಚಿತ್ರ ತಯಾರಿಕೆಯ ಬಗ್ಗೆ ಚಿತ್ರ ಮತ್ತು ಕನಸುಗಳ ಬಗೆಗಿನ ಕನಸು ಆಗಿದೆ ಎಂದು ವಾದಿಸಿದ್ದಾರೆ.[೨೯] ಇತರ ವಿಮರ್ಶಕರು ಇನ್ಸೆಪ್ಷನ್‍ನ್ನು ಕ್ರೈಸ್ತ ರೂಪಕ ಕಥೆ ಎಂದು ಅಭಿಪ್ರಾಯ ಪಡುತ್ತಾರೆ ಮತ್ತು ಚಿತ್ರದ ಧಾರ್ಮಿಕ ಹಾಗೂ ಜಲ ಸಾಂಕೇತಿಕತೆ ಮೇಲೆ ಕೇಂದ್ರೀಕರಿಸುತ್ತಾರೆ.[೩೦] ಮತ್ತೂ ಇತರ ವಿಮರ್ಶಕರು ಚಿತ್ರದ ಅಸ್ಪಷ್ಟ ಅಂತ್ಯದಲ್ಲಿ ಕಡಿಮೆ ಮೌಲ್ಯವನ್ನು ಮತ್ತು ಅದರ ರಚನೆ ಮತ್ತು ಕಥೆ ಹೇಳುವ ಹೊಸ ವಿಧಾನದಲ್ಲಿ ಹೆಚ್ಚು ಮೌಲ್ಯವನ್ನು ಕಾಣುತ್ತಾರೆ, ಮತ್ತು ಇನ್ಸೆಪ್ಷನ್ ನಿರಂತರ ನಿರೂಪಣೆಯಲ್ಲಿ ನಲಿದಾಡುವ ಕಥೆಯ ಹೊಸ ರೂಪವಾಗಿರುವುದನ್ನು ಒತ್ತಿ ಹೇಳುತ್ತಾರೆ.[೩೧]

ಉಲ್ಲೇಖಗಳು[ಬದಲಾಯಿಸಿ]

  1. "Inception". British Board of Film Classification. June 29, 2010. Archived from the original on ಫೆಬ್ರವರಿ 28, 2014. Retrieved August 8, 2010.
  2. ೨.೦ ೨.೧ "Film: Inception". Lumiere. Retrieved November 7, 2017.
  3. ೩.೦ ೩.೧ "Inception (2010)". Box Office Mojo. Retrieved January 16, 2011.
  4. Eisenberg, Mike (May 5, 2010). "Updated 'Inception' Synopsis Reveals More". Screen Rant. Retrieved July 18, 2010.
  5. ೫.೦ ೫.೧ Hiscock, John (July 1, 2010). "Inception: Christopher Nolan interview". Daily Telegraph. UK. Retrieved July 7, 2010.
  6. Itzkoff, Dave (June 30, 2010). "A Man and His Dream: Christopher Nolan and Inception". ದ ನ್ಯೂ ಯಾರ್ಕ್ ಟೈಮ್ಸ್. Retrieved July 1, 2010. This is a film I first pitched to the studio probably nine years ago, and I wasn't really ready to finish it. I needed more experience in making a big movie.
  7. Fleming, Michael (February 11, 2009). "Nolan tackles Inception for WB". Variety. Retrieved February 25, 2009.
  8. "Filming Locations – NolanFans". December 6, 2009. Retrieved March 23, 2012.
  9. Fritz, Ben (July 15, 2010). "Movie projector: 'Inception' headed for No. 1, 'Sorcerer's Apprentice' to open in third". Los Angeles Times. Retrieved July 27, 2010. It's also one of the most expensive, at $160 million, a cost that was split by Warner and Legendary Pictures.
  10. Subers, Ray (July 16, 2010). "Weekend Briefing: 'Inception' Breaks In, 'Apprentice' Lacks Magic". Box Office Mojo. Retrieved July 18, 2010.
  11. Peters, Jenny (July 14, 2010). "Partying for a Cause at the "Inception" Premiere". Fashion Wire Daily. Archived from the original on ಸೆಪ್ಟೆಂಬರ್ 27, 2011. Retrieved October 1, 2010.
  12. Dietz, Jason (November 18, 2019). "The Best Movies of the Decade (2010-19), According to Film Critics". Metacritic. Retrieved January 26, 2020.
  13. Zeitchik, Steven (July 19, 2010). "'Inception' rides out critical backlash". Los Angeles Times.
  14. Weintraub, Steve (March 25, 2010). "Christopher Nolan and Emma Thomas Interview". Collider.com. Archived from the original on March 27, 2010. Retrieved April 6, 2010.
  15. "Production Notes, 2010, p. 13" (PDF).
  16. "Production Notes, 2010, p. 14" (PDF).
  17. Boucher, Geoff (April 4, 2010). "Inception breaks into dreams". Los Angeles Times. Retrieved April 6, 2010.
  18. George (July 23, 2009). "Inception Cast and Crew Updates". Cinema Rewind. Archived from the original on August 1, 2009. Retrieved August 31, 2009.
  19. Cassidy, Kevin (July 13, 2010). "Q&A: Composer Hans Zimmer". The Hollywood Reporter. Retrieved July 14, 2010.
  20. Kit, Borys (April 1, 2009). "Three circle Nolan's 'Inception'". The Hollywood Reporter. Archived from the original on April 6, 2009. Retrieved April 2, 2009.
  21. ೨೧.೦ ೨೧.೧ Capps, Robers (December 8, 2010). "Inception's director discusses the film's ending and creation". Wired. Retrieved January 24, 2011.
  22. Gallagher, Brian (May 10, 2010). "Official Full-Length Inception Trailer Is Here!". MovieWeb. Archived from the original on ಆಗಸ್ಟ್ 29, 2011. Retrieved July 5, 2011.
  23. "PHOTOS – Inception : découvrez le DVD en images". Première. Archived from the original on February 9, 2011. Retrieved May 4, 2011.
  24. Redwine, Ivana (December 7, 2010). "New DVD Releases – December 7, 2010". About.com. Retrieved May 4, 2011.
  25. Barton, Joe (December 6, 2010). "New on DVD: Week of December 6". Moviefone. Archived from the original on ಜುಲೈ 21, 2011. Retrieved April 5, 2011.
  26. "Inception (2010) – Financial Information". The Numbers. Retrieved November 27, 2018.
  27. "Inception (2010)". Box Office Mojo. Retrieved August 18, 2011.
  28. Schager, Nick (July 14, 2010). "Inception". Slant. Retrieved May 27, 2011.
  29. Faraci, Devin (July 19, 2010). "Never Wake Up: The Meaning and Secret of Inception". Chud.com. Retrieved May 27, 2011.
  30. Lancashire, David (October 6, 2010). "Cobb is Dead". Retrieved May 27, 2011.[ಶಾಶ್ವತವಾಗಿ ಮಡಿದ ಕೊಂಡಿ]
  31. Thomas, Kristin (August 12, 2010). "Revisiting Inception". Observations on Film Art (blog). Retrieved May 27, 2011.

ಹೆಚ್ಚಿನ ಓದಿಗೆ[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]