ಸದಸ್ಯ:Abbani prahlad/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೊನ್ನುಡಿ ದಿನಪತ್ರಿಕೆ

ಕೋಲಾರದಿಂದ 1979ರಲ್ಲಿ ಪ್ರಕಟಣೆ ಆರಂಭಿಸಿದ ‘ಹೊನ್ನುಡಿ’ ಕನ್ನಡ ದಿನಪತ್ರಿಕೆಗೆ ಆರಂಭದ ಸಂಪಾದಕರಾಗಿದ್ದವರು ಅ.ನಾ.ಪ್ರಹ್ಲಾದರಾವ್. ಕೋಲಾರ ತಾಲ್ಲೂಕಿನ ಅಬ್ಬಣಿ ಗ್ರಾಮದ ಅ.ನಾ.ಪ್ರಹ್ಲಾದರಾವ್ ಅದಕ್ಕೂ ಮುನ್ನ ಕೋಲಾರ ಪತ್ರಿಕೆ ದೈನಿಕದಲ್ಲಿ ಉಪಸಂಪಾದಕ/ವರದಿಗಾರರಾಗಿದ್ದರು. ಪ್ರತಿ ನಿತ್ಯ ಸಂಪಾದಕೀಯ ಲೇಖನಗಳನ್ನು ಬರೆಯುವ ಮೂಲಕ ರಾಜಧಾನಿಯನ್ನು ಹೊರತು ಪಡಿಸಿ, ಜಿಲ್ಲಾ ಪತ್ರಿಕೆಗಳಲ್ಲಿ ನಿತ್ಯ ಸಂಪಾದಕೀಯ ಬರೆಯುವ ಪರಂಪರೆಯನ್ನು ಆರಂಭಿಸಿದ್ದು ಹೊನ್ನುಡಿ ಪತ್ರಿಕೆಯ ವಿಶೇಷ. ಪತ್ರಿಕೆ ಸಂಪಾದಕೀಯವಲ್ಲದೆ ನಿತ್ಯವೂ ಮತ್ತೆರಡು ಆಕರ್ಷಕ ಅಂಕಣಗಳನ್ನು ಹೊಂದಿತ್ತು. ‘ಹೊನ್ನಲಗು’ ಅಂಕಣ ಪ್ರಜಾವಾಣಿಯ ‘ಛೂಬಾಣ’ದಂತೆ ಭ್ರಷ್ಟ ರಾಜಕಾರಣಿಗಳು ಹಾಗೂ ಅಧಿಕಾರಿಗಳನ್ನು ಬೆಚ್ಚಿಸುವ ಗೂಢಾರ್ಥ ಬರಹಗಳಾಗಿದ್ದವು. ಮತ್ತೊಂದು ಅಂಕಣ ‘ಹೊನ್ನಂಬು’. ಈ ಅಂಕಣದಲ್ಲಿ ಅಂದಂದಿನ ಸಂಗತಿಗಳನ್ನು ನವಿರು ಹಾಸ್ಯದ ಮೂಲಕ ಟೀಕೆ ಮಾಡಲಾಗುತ್ತಿತ್ತು. ಸಂಪಾದಕೀಯ, ಹೊನ್ನಲಗು ಹಾಗೂ ಹೊನ್ನುಡಿ ಅಂಕಣಗಳನ್ನು ಸಂಪಾದಕರಾದ ಅ.ನಾ.ಪ್ರಹ್ಲಾದರಾವ್ ಬರೆಯುತ್ತಿದ್ದರು. ಈ ಪತ್ರಿಕೆಯನ್ನು ಸಮಾನ ಮನೋಭಾವದ ಯುವಕರು ಆರಂಭಿಸಿದ್ದರು. ಅ.ನಾ.ಪ್ರಹ್ಲಾದರಾವ್ ಜೊತೆ ಕೋಲಾರ ಪುರಸಭೆಯ ಅಧ್ಯಕ್ಷರಾಗಿದ್ದ ಸಿ.ಸೋಮಶೇಖರ್, ಎಂ.ಜಿ.ಪ್ರಭಾಕರ್, ಜಯದೇವಪ್ಪ, ಛಾಯಾಗ್ರಾಹಕ ಜಿ.ಸೋಮಶೇಖರ್, ವಿಶ್ವನಾಥಶಾಸ್ತ್ರಿ ಹಾಗೂ ವಿಶ್ವನಾಥ್ ದೇಶಕುಲಕರ್ಣಿ ಈ ಪತ್ರಿಕೆಯನ್ನು ಆರಂಭಿಸಿದ್ದರು. ವಕೀಲ ಸಿ.ಎಸ್.ದ್ವಾರಕನಾಥ್, ಸಾಹಿತಿ ಲಕ್ಷ್ಮಿಪತಿ ಕೋಲಾರ, ಕ್ರೈಂ ವರದಿಗಾರಿಕೆಯಲ್ಲಿ ಸಂಚಲನ ಮೂಡಿಸಿದ್ದ ಬಾಲಕೃಷ್ಣ ಕಾಕತ್ಕರ್, ಸಾಹಿತಿ ಹೊ.ಅ.ಪುರುಷೋತ್ತಮರಾವ್, ಮುಂದೆ ರೇಷ್ಮೆ ಸಚಿವರಾಗಿ ಹಾಗೂ ಅಖಿಲ ಭಾರತ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾಗಿದ್ದ ಚಿಕ್ಕಬಳ್ಳಾಪುರ ಶಾಸಕರಾಗಿದ್ದ ಕೆ.ಎಂ.ಮುನಿಯಪ್ಪನವರು ರಾಜಕೀಯ ಪ್ರವೇಶಕ್ಕೆ ಮೊದಲು ಹೊನ್ನುಡಿ ವರದಿಗಾರರಾಗಿ ಕೆಲಸ ಮಾಡುತ್ತಿದ್ದರು. ಮೊದಲಾದ ಪ್ರಗತಿಪರ ಲೇಖಕರು ಹೊನ್ನುಡಿ ಪತ್ರಿಕೆಗಾಗಿ ವಿಶೇಷ ಲೇಖನ, ವರದಿಗಳನ್ನು ಬರೆಯುತ್ತಿದ್ದರು. ಆಗ ರಾಜ್ಯದಲ್ಲಿ ದನಿಯಾಗಿ ಮೇಲೆದಿದ್ದ ದಲಿತ ಸಂಘರ್ಷ ಸಮಿತಿಯ ಚಟುವಟಿಕೆಗಳ ಪರವಾದ ನಿಲುವನ್ನು ಹೊನ್ನುಡಿ ತೆಳೆದಿತ್ತು. ಪ್ರತಿ ಭಾನುವಾರ ಸಾಹಿತ್ಯ ಚಟುವಟಿಕೆಗಳಿಗೆ ಮೀಸಲಿಡುತ್ತಿದ್ದ ಹೊನ್ನುಡಿ, ಅಂದಿನ ಅವಿಭಾಜ್ಯ ಕೋಲಾರ ಜಿಲ್ಲೆಯ ಹಲವಾರು ಲೇಖಕರನ್ನು ಬೆಳಕಿಗೆ ತಂದಿತು. ಹುಣಸೀಕೋಟೆ ಅನಸೂಯಮ್ಮ ಕೊಲೆ ಪ್ರಕರಣವನ್ನು ಬಯಲು ಮಾಡಿತ್ತು. ಗೋಕಾಕ್ ವರದಿ ಜಾರಿಗೆ ಒತ್ತಾಯಿಸಿದ ನಡೆದ ಆಂದೋಲನದಲ್ಲಿ ಕನ್ನಡ ಪರವಾದ ಸುದ್ದಿ, ವರದಿ, ಲೇಖನಗಳನ್ನು ಪ್ರಕಟಿಸಿ ಕನ್ನಡಿಗರಲ್ಲಿ ಜಾಗೃತಿ ಉಂಟು ಮಾಡಿತು. 1983ರಲ್ಲಿ ಅ.ನಾ.ಪ್ರಹ್ಲಾದರಾವ್ ಕರ್ನಾಟಕ ಸರ್ಕಾರದ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಗೆ ಸೇರಿಕೊಂಡ ನಂತರ ಅವರು ಪತ್ರಿಕೆಯ ಸಂಪರ್ಕ ಕಡಿದುಕೊಂಡರು. ಪ್ರಕಾಶಕರಾಗಿದ್ದ ಎಂಜ.ಜಿ.ಪ್ರಭಾಕರ್ ಕೆಲವು ವರ್ಷ ಮುನ್ನೆಡೆಸಿದರು.