ತಾಯಿನಾಡು (ದಿನಪತ್ರಿಕೆ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಾಯಿನಾಡು (ದಿನಪತ್ರಿಕೆ)
ಪ್ರಕಟಣೆ: ಬೆಂಗಳೂರು
ಈಗಿನ ಸಂಪಾದಕರು: ಪಿ.ಬಿ.ಶ್ರೀನಿವಾಸನ್
ಜಾಲತಾಣ: ಲಭ್ಯವಿಲ್ಲ
ಇವನ್ನೂ ನೋಡಿ ವರ್ಗ:ಕನ್ನಡ ಪತ್ರಿಕೆಗಳು
ಹೆಚ್.ಆರ್.ನಾಗೇಶರಾವ್ ಸಂಗ್ರಹ
ಹೆಚ್.ಆರ್.ನಾಗೇಶರಾವ್ ಸಂಗ್ರಹದಿಂದ

ತಾಯಿನಾಡು[ಬದಲಾಯಿಸಿ]

ಸ್ಥಾಪಕರು : ಪಿ.ಆರ್.ರಾಮಯ್ಯ ಸ್ಥಾಪನೆಯ ವರ್ಷ : ೧೯೨೭ "ಸುಖ ದುಃಖೇ ಸಮೇಕೃತ್ವಾ ಲಾಭಾಲಾಭೌ ಜಯಾಜಯೌ| ತತೋ ಯುದ್ಧಾಯ ಯುಜಸ್ವ ನೈವಮ್ ಪಪಮವಾಪ್ಸ್ಯಸಿ ||ಗೀತಾ||" - ಇದು ‘ತಾಯಿನಾಡು’ ಪತ್ರಿಕೆಯ ನಾಮ ಲಾಂಛನ ದಡಿ ಮುಖಪುಟದಲ್ಲಿ ಮುದ್ರಿತವಾಗುತ್ತಿದ್ದ ಶ್ಲೋಕ ವಾಕ್ಯ; ಇದೇ ಕೀರ್ತಿಶೇಷ ಪಿ.ಆರ್.ರಾಮಯ್ಯನವರನ್ನು ಎಂತಹ ಸತ್ವಪರೀಕ್ಷೆ-ಸಂಕಷ್ಟ-ಸವಾಲುಗಳ ಎದುರಿನಲ್ಲೂ ಧೃತಿಗೆಡದೆ ಮುನ್ನಡೆಸುತ್ತಿದ್ದ ನಿಷ್ಕಾಮ ಕರ್ಮಸೂತ್ರ. ಜತೆಗೆ "ವಂದೇ ಮಾತರಮ್" ಎಂಬ ದೇಶಭಕ್ತಿ ಘೋಷವೂ ‘ತಾಯಿನಾಡು’ ಅಂಕಿತದ ಮೇಲೆ ಅನ್ವರ್ಥವಾಗಿ ರಾರಾಜಿಸುತ್ತಿತ್ತು.[೧]

ಇತಿವೃತ್ತ[ಬದಲಾಯಿಸಿ]

  • ಮೂರು ದಶಕಗಳ ಕಾಲ ಮೈಸೂರು ಸಂಸ್ಥಾನದ ಜನತೆಯ ನೆಚ್ಚಿನ ಸುದ್ದಿ ಸಾಧನವಾಗಿ, ಸಾರ್ವಜನಿಕ ಕುಂದುಕೊರತೆಗಳ ಪ್ರಚಾರಕನಾಗಿ, ರಾಜಕೀಯ ಚಟುವಟಿಕೆಗಳ ಯಥಾರ್ಥದರ್ಶಿಯಾಗಿ, ಜಾಗತಿಕ ಪ್ರಗತಿ ವರ್ತಮಾನಗಳ ವಾಹಕವಾಗಿ ‘ತಾಯಿನಾಡು’ ವಿಜೃಂಭಿಸಿತ್ತು. ಆಗ್ಗೆ ‘ತಾಯಿನಾಡು’ ಪತ್ರಿಕೆ ಒಳ್ಳೇ ಉಚ್ಛ್ರಾಯ ಸ್ಥಿತಿಯಲ್ಲಿದ್ದು ಅತ್ಯಂತ ಪ್ರಸಾರ, ಜನಪ್ರಿಯತೆ, ಪ್ರಭಾವ ಹೊಂದಿತ್ತು. ರಾಷ್ಟ್ರೀಯ ಭಾವನೆಯುಳ್ಳ ದಿನಪತ್ರಿಕೆಯಾಗಿ ಅದು ಮೈಸೂರು ಸಂಸ್ಥಾನದಲ್ಲೇ ಅಲ್ಲದೆ ಹೊರಗಡೆಯೂ ಹೆಸರು ಪಡೆದಿತ್ತು.
  • ದೇಶಕ್ಕೆ ಸ್ವಾತಂತ್ರ್ಯ ಬರುವ ಹೊತ್ತಿಗೆ ಪತ್ರಿಕೆ ಒಳ್ಳೆಯ ಏರುದೆಶೆಯಲ್ಲಿದ್ದಿತು; ರಾಜ್ಯದ ಮುಖ್ಯ ನಗರಗಳಲ್ಲೂ, ಮೂಲೆ ಮೂಲೆಯ ಹಳ್ಳಿ-ಪಟ್ಟಣಗಳಲ್ಲೂ ಒಳ್ಳೆಯ ಪ್ರಸಾರವಿದ್ದಿತು; ಸ್ವಾತಂತ್ರ್ಯಾಂದೋಲನದ ಕೊನೆಯ ಹೋರಾಟ ಮುಗಿದಿದ್ದು ಅದರ ಫಲಶ್ರುತಿಯ ಕುತೂಹಲಕರ ವಾರ್ತೆ ಗಳನ್ನು ಅರಿಯುವ ತವಕ-ಉತ್ಸಾಹ ಜನರಲ್ಲಿ ಪುಟಿಯುತ್ತಿತ್ತು. ಈಗಿನಷ್ಟು ಮಿಂಚಿನ ವೇಗದಲ್ಲಿ ಸುದ್ದಿ ಬಿತ್ತರಿಸುವ ಸಾಧನಗಳು ಆಗ ಇರಲಿಲ್ಲ.
  • ಸಾಮ್ರಾಜ್ಯಶಾಹಿಯ ಹಿಡಿತದಲ್ಲಿದ್ದ ಆಕಾಶವಾಣಿಗಿಂತ ತಮ್ಮ ಮೆಚ್ಚಿನ ಪತ್ರಿಕೆಗಳಲ್ಲಿ ಬರುತ್ತಿದ್ದ ಮುದ್ರಿತ ಸಮಾಚಾರವನ್ನು ಮಾತ್ರವೇ ಜನರು ನಂಬುತ್ತಿದ್ದರು. ಪತ್ರಿಕೆಗಳ ಪ್ರಸಾರ ಸಂಖ್ಯೆ ಆಗಿನ ಮಟ್ಟಕ್ಕೆ ತಕ್ಕಂತೆ ಅನುದಿನ ಹೆಚ್ಚುತ್ತಲೇ ಇದ್ದಿತು. ಬೆಂಗಳೂರಿನ ಪತ್ರಿಕೆಗಳಲ್ಲಿ ‘ತಾಯಿ ನಾಡು’ವಿಗೇ ಅಗ್ರಮಾನ್ಯತೆ. ಸಿಬ್ಬಂದಿಗೆ ನಿಗದಿತ ದಿನದಲ್ಲಿ ತಿಂಗಳ ಸಂಬಳ ತಪ್ಪದೆ ಬರುತ್ತಿತ್ತು. ಕೊನೆಯ ಕೆಲವು ವರ್ಷಗಳಲ್ಲಿ ಬೋನಸ್ ಕೂಡ ಲಭಿಸಿತು. ಕಾನೂನಿನಲ್ಲಿ ಇಲ್ಲದಿದ್ದರೂ, ಶ್ರೀ ರಾಮಯ್ಯನವರೇ ನೌಕರರಿಗೆ ಪ್ರಾವಿಡೆಂಡ್ ಫಂಡ್ ಸೌಲಭ್ಯ ಆರಂಭಿಸಿದ್ದರು.
  • ಆಗ ದೇಶೀಯ ವಾರ್ತೆಗಳು A.P.I. ನಿಂದ, ಮತ್ತು ವಿದೇಶಿ ವಾರ್ತೆಗಳು ರಾಯಿಟರ್ ಸಂಸ್ಥೆಯಿಂದ ತಂತಿ ಮೂಲಕ ಬರುತ್ತಿದ್ದವು. ಬೆಂಗಳೂರಿನಲ್ಲಿ A.P.I. ಕಚೇರಿ ಕ್ವೀನ್ಸ್ ರಸ್ತೆಯಲ್ಲಿತ್ತು, (ಮುಂದೆ ಅದೇ P.T.I. ಆಯಿತು) ಆಗ ಟೆಲಿಪ್ರಿಂಟರ್ ಸೌಲಭ್ಯವಿರಲಿಲ್ಲ. ತಂತಿಯ ಮೂಲಕ ಅವರ ಕಚೇರಿಗೆ ಬಂದುದನ್ನು, ಚಂದಾದಾರರಾದ ಸ್ಥಳೀಯ ಪತ್ರಿಕೆಗಳಿಗೆ, ಬಹು ಮುಖ್ಯ ಮತ್ತು ಜರೂರಾದುದನ್ನು ಫೋನ್ ಮೂಲಕ ತಿಳಿಸುತ್ತಿದ್ದರು.
  • ಉಳಿದ ವಾರ್ತೆಗಳನ್ನು ಟೈಪ್ ಮಾಡಿ ಪ್ರತಿ 2 ಗಂಟೆಗೊಮ್ಮೆ ತಮ್ಮ ದೂತರ ಮೂಲಕ ಎಲ್ಲ ಕಚೇರಿಗಳಿಗೂ ಕಳಿಸುತ್ತಿದ್ದರು. ಎಷ್ಟೋ ವೇಳೆ ಅತ್ಯಂತ ಪ್ರಾಮುಖ್ಯದ ಸುದ್ದಿಗಳನ್ನು (FLASH NEWS) ಆ ಸಂಸ್ಥೆಯ ಮುಂಬಯಿ ಮತ್ತು ಮದ್ರಾಸ್ ಪ್ರಾದೇಶಿಕ ಕಚೇರಿ ಯವರು ನೇರವಾಗಿ ಪತ್ರಿಕಾ ಕಚೇರಿಗಳಿಗೆ ತಂತಿ ಮೂಲಕ ಕಳಿಸಿದ್ದೂ ಉಂಟು. ಅಂದರೆ ಫೋನ್ ಬಳಿ ಚುರುಕಾಗಿ, ಶೀಘ್ರವಾಗಿ, ತಪ್ಪಿಲ್ಲದೆ, ಉತ್ಸಾಹದಿಂದ ಬರೆದುಕೊಳ್ಳುವ ಹುಮ್ಮಸ್ಸಿನ ಸಿಬ್ಬಂದಿಯವರು ಇರಬೇಕು.
  • ಸಾಮಾನ್ಯವಾಗಿ ವಯಸ್ಸಾದ ಹಾಗೂ ಹಿರಿಯ ಉದ್ಯೋಗಿಗಳು ಹೊಸಬರಿಗೆ ಹಾಗೂ ಕಿರಿಯರಿಗೆ ಈ ಫೋನ್ ಕಿರಿಕಿರಿಯನ್ನು ವರ್ಗಾಯಿಸಿ, ಅವರು ಬರೆದುಕೊಂಡಾದ ಮೇಲೆ ವಾರ್ತೆಗಳನ್ನು ಯಾವ ರೀತಿ ಪತ್ರಿಕೆಗೆ ಕೊಡಬೇಕೆಂಬುದಾಗಿ ನಿರ್ದೇಶಿಸುತ್ತಿದ್ದರು; ಹೀಗೆ ನಡೆದುಕೊಳ್ಳುವುದು ಹೆಚ್ಚುಗಾರಿಕೆಯೆಂದು ಭಾವಿಸಿದ್ದರು. ಆಡಳಿತ ಇಲಾಖೆಗೆ ಪ್ರತ್ಯೇಕ ಫೋನ್ ಇದ್ದುದರಿಂದ, ಸಂಪಾದಕೀಯ ವಿಭಾಗದಲ್ಲಿದ್ದ ಫೋನ್ ಸ್ಥಳೀಯ ಹಾಗೂ ಹೊರಗಿನ ವರದಿಗಾರರಿಂದ ಬರುತ್ತಿದ್ದ ತುರ್ತು ವರ್ತಮಾನಗಳ ಸ್ವೀಕಾರಕ್ಕೆಂದು ಮೀಸಲಾಗಿರುತ್ತಿತ್ತು.
  • 1946ರಲ್ಲಿ ರಾಜ್ಯದ ಸಿರಾ - ಮಧುಗಿರಿ ತಾಲ್ಲೂಕುಗಳಲ್ಲಿ ಭೀಕರ ಕ್ಷಾಮ - ನೂರಾರು ಜನ ಹೊಟ್ಟೆಗಿಲ್ಲದೆ ಪ್ರಾಣಬಿಟ್ಟರು. ಪತ್ರಿಕೆಗಳಲ್ಲಿ ದಾರುಣ ವರದಿಗಳು ಬಂದು ಭಾರತವನ್ನೇ ತಲ್ಲಣಗೊಳಿಸಿದವು, ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸುತ್ತಿದ್ದ ಕಾಂಗ್ರೆಸ್ ಮತ್ತಿತರ ರಾಜಕೀಯ ಪಕ್ಷಗಳು ಬ್ರಿಟಿಷರ ಬೇಜವಾಬ್ದಾರಿತನವನ್ನು ಖಂಡಿಸಿ ಪ್ರದರ್ಶನಗಳನ್ನು ನಡೆಸಿದರು. ಆಗ ಜನರನ್ನು ಸಾಂತ್ವನಗೊಳಿಸಲು ವೈಸ್‌ರಾಯ್‌ರವರೇ ಸಿರಾದ ಕ್ಷಾಮ ಪ್ರದೇಶಗಳ ಪ್ರತ್ಯಕ್ಷ ದರ್ಶನಕ್ಕೆ ಬಂದರು.
  • ಅಮೆರಿಕದ ಮಾಜಿ ಅಧ್ಯಕ್ಷ ಹರ್ಬರ್ಟ್ ಹೂವರ್ ಅವರು ಮಧುಗಿರಿಯ ಕ್ಷಾಮ ಪ್ರದೇಶಕ್ಕೆ ಭೇಟಿಕೊಟ್ಟರು. ಆ ವರದಿಗಳನ್ನು ನಮ್ಮ ವಿಶೇಷ ಪ್ರತಿನಿಧಿಗಳೂ, A.P.I. ಸಂಸ್ಥೆಯ ವರದಿಗಾರರು ಫೋನ್ ಮೂಲಕವೇ ಕೊಟ್ಟರು. ಪತ್ರಿಕೆಗೆ ಬೇಗನೆ ಸುದ್ದಿಗಳನ್ನು ಅಳವಡಿಸಿ, ಆಯಾ ಸ್ಥಳಗಳಿಗೆ ಹೋಗುವ ಸಂಚಿಕೆಗಳಲ್ಲಿ ಇಂತಹ ವಿಶೇಷ ವಾರ್ತೆಗಳು ಮನಸೆಳೆದಂತೆ ಪ್ರಕಟವಾಗುವ ಹಾಗೆ ಮಾಡುವುದು ಸಂಪಾದಕೀಯ ಸಿಬ್ಬಂದಿಯ ಮಹತ್ವದ ಹೊಣೆಗಾರಿಕೆ.
  • ‘ತಾಯಿನಾಡು’ ಪತ್ರಿಕೆ ಈ ದಿಶೆಯಲ್ಲಿ ಮುಂಚೂಣಿಯಲ್ಲಿದ್ದಿತು; ಇಂತಹ ಪ್ರಸಂಗಗಳಿಗೆ ಸಂಬಂಧಿಸಿದ ಛಾಯಾಚಿತ್ರಗಳನ್ನೂ - ಸಾಧ್ಯವಾದರೆ ಮಾರನೇ ದಿನವೇ - ಪ್ರಕಟಿಸುವ ವಿಶಿಷ್ಟ ವೈಖರಿಯೂ ಜನರನ್ನು ಮೆಚ್ಚಿಸುತ್ತಿತ್ತು. ಇಂದಿನ ಪತ್ರಿಕೆಗಳಲ್ಲಿ ಇದೇನೂ ಅತಿಶಯದ ವಿಷಯವಲ್ಲ. ಈಗಿನಂತಹ ಆಧುನಿಕ ಸೌಕಯವಿಲ್ಲದ ಅಂದಿನ ಯುಗದಲ್ಲಿ ಇದೊಂದು ಮಹಾ ಸಾಧನೆಯೇ ಸರಿ.

'ತಾಯಿನಾಡು'ವಿನ ವಿಶೇಷತೆ[ಬದಲಾಯಿಸಿ]

  • ಶ್ರೀ ರಾಮಯ್ಯನವರಿಗೆ ಶ್ರದ್ಧೆಯಿಂದ ಕೆಲಸ ಮಾಡುವವರ ಮೇಲೆ ಅತಿ ವಿಶ್ವಾಸ. ತಾವು ಇಂಗ್ಲಿಷ್‍ನಲ್ಲಿ ಬರೆದ ವಿಶೇಷ ಲೇಖನಗಳನ್ನೂ, ಪ್ರವಾಸ ವರದಿಗಳನ್ನೂ ಭಾಷಾಂತರಿಸಿ ಕೊಡಲು ಅಂತಹವರಿಗೆ ವಹಿಸುತ್ತಿದ್ದರು. ಉಪಸಂಪಾದಕರಾಗಿ ಕೆಲಸ ಮಾಡುತ್ತಿದ್ದವರು ವರದಿಗಾರರ ಕಷ್ಟ-ಹೊಣೆಗಾರಿಕೆಗಳನ್ನೂ, ವರದಿಗಾರರು ಉಪಸಂಪಾದಕರ ಹೊರೆಯನ್ನು ಪರಸ್ಪರ ಅರಿತುಕೊಳ್ಳಲು, ಎರಡು ಶಾಖೆಗಳಲ್ಲೂ ಅನುಭವ ಪಡೆಯುವಂತೆ ಸಂಪಾದಕರ ಮುಖೇನ ಅವಕಾಶ ಕಲ್ಪಿಸುತ್ತಿದ್ದರು.
  • ಕಾಂಗ್ರೆಸ್ ಅಧಿವೇಶನಗಳಿಗೆ, ದೆಹಲಿಯ ಐತಿಹಾಸಿಕ ಸಮಾರಂಭ-ಅಧಿವೇಶನಗಳಿಗೆ, ಸಂಸತ್ ಕಾರ್ಯಕಲಾಪಗಳಿಗೆ ಸಂಪಾದಕರಾಗಲೀ ಅಥವಾ ಉತ್ಸಾಹಿ ಸಿಬ್ಬಂದಿಗಳಾಗಲೀ ಹೋಗಲು ಸೌಲಭ್ಯ ಒದಗಿಸುತ್ತಿದ್ದರು. ಬೆಂಗಳೂರಿನಲ್ಲಿ ಪ್ರಜಾಪ್ರತಿನಿಧಿ ಸಭೆ ಮತ್ತು ನ್ಯಾಯ ವಿಧಾಯಕ ಸಭೆಯ ಅಧಿವೇಶನಗಳಿಗೂ, ಅನಂತರ ಮೈಸೂರಿನಲ್ಲಿ ಪ್ರಜಾಪ್ರತಿನಿಧಿ ಸಭೆಯ ಅಧಿವೇಶನಕ್ಕೂ (ಮೈಸೂರು ಸಂಸ್ಥಾನದ ದಿವಾನರಾಗಿ ನೇಮಕಗೊಂಡ ಸರ್ ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್‌ರವರು ಭಾಗವಹಿಸಿದ ಪ್ರಥಮ ಕೋಲಾಹಲ ಕಾರಿ ಅಧಿವೇಶನ) ವರದಿ ಮಾಡಲು ಪ್ರತಿನಿಧಿಗಳನ್ನು 'ತಾಯಿನಾಡು' ಕಳುಹಿಸಿತ್ತು. ಸಂಪಾದಕರು ವಿದೇಶ ಪ್ರವಾಸಗಳನ್ನು ಕೈಗೊಂಡು ತಮ್ಮ ವೃತ್ತಿ ಅನುಭವ ವಿಸ್ತರಿಸಿಕೊಳ್ಳಲು ಪತ್ರಿಕೆ ನೆರವಾಗಿತ್ತು.
  • ಪತ್ರಿಕೆಯಲ್ಲಿ ಪ್ರಕಟವಾಗುವ ಸುದ್ದಿಗಳು, ಸಂಪಾದಕೀಯಗಳು, ಟೀಕೆ ಟಿಪ್ಪಣಿಗಳು ಎಲ್ಲವೂ ಸತ್ಯವಾಗಿರಬೇಕು, ವ್ಯಕ್ತಿನಿಂದೆಯಿಂದ ಮತ್ತು ಅತಿರೀಕಗಳಿಂದ ಮುಕ್ತವಾಗಿರಬೇಕು, ಬರವಣಿಗೆ ಸಾಮಾನ್ಯರಿಗೂ ಅರ್ಥವಾಗುವಂತೆ ತಿಳಿಯಾದ ಶೈಲಿಯಲ್ಲಿರಬೇಕು - ಇಂಥ ಕೆಲವು ಆದರ್ಶ ಪತ್ರಿಕಾ ತತ್ತ್ವಗಳನ್ನು ‘ತಾಯಿನಾಡು’ ಅನನ್ಯವಾದ ರೀತಿಯಲ್ಲಿ ಪಾಲಿಸಿಕೊಂಡು ಬಂದಿತು. ಇಂಗ್ಲಿಷಿನಲ್ಲಿ ಮದರಾಸಿನ ‘ಹಿಂದೂ’ ಪತ್ರಿಕೆ ಕರಾರುವಾಕ್ಕಾದ ವರದಿಗಳು, ಪಾಂಡಿತ್ಯಪೂರ್ಣವೂ, ಆಧಾರಯುತವೂ ಆದ ಲೇಖನಗಳಿಗೆ ಮೊದಲಿಂದಲೂ ಹೆಸರಾದದ್ದು.
  • ಈಗ ಅದು ಶತಮಾನೋತ್ಸವವನ್ನು ಆಚರಿಸುತ್ತಿದೆ. ಕನ್ನಡನಾಡಿನಲ್ಲಿ ಈ ಶುದ್ಧ ಸಂಪ್ರದಾಯವನ್ನು ‘ತಾಯಿನಾಡು’ ಬೆಳಸಿಕೊಂಡು ಬಂದಿದ್ದು ಅದು ‘ಮೈಸೂರಿನ ಹಿಂದೂ’ ಎಂದು ಖ್ಯಾತಿ ಪಡೆದಿತ್ತು. ಪತ್ರಿಕೋದ್ಯಮದ ಘನತೆ ಗೌರವಗಳನ್ನು ಎತ್ತಿ ಹಿಡಿಯುವುದರಲ್ಲೂ ‘ತಾಯಿನಾಡು ’ ಮುಂದಾಗಿತ್ತು; ಪತ್ರಿಕಾ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಪ್ರತಿಪಾದಿಸುತ್ತಿತ್ತು. ಪತ್ರಿಕೆಯ ವರಿಷ್ಠರು ವೃತ್ತಿ ಗೌರವ ರಕ್ಷಣೆಗೆ ಬೆಲೆ ಕೊಡುತ್ತಿದ್ದರು.
  • ಶ್ರೀ ರಾಮಯ್ಯನವರು ಸರ್ಕಾರದ ಮೇಲಾಗಲೀ, ಅಧಿಕಾರಿಗಳ ಮೇಲಾಗಲೀ ಪತ್ರಿಕೆಯ ಹೆಸರು ಹೇಳಿಕೊಂಡು ಸ್ವಕೀಯ ಲಾಭ ಮಾಡಿಕೊಳ್ಳಲು ಎಂದೂ ಪ್ರಯತ್ನಿಸಲಿಲ್ಲವೆಂಬುದು ಜನಜನಿತ ಸತ್ಯ. ಅವರ ಆರ್ಥಿಕ ಸಂಕಷ್ಟದ ದಿನಗಳಲ್ಲೂ ಸರ್ಕಾರಿ ಕೃಪಾಶಯಕ್ಕೆ ಕೈ ಒಡ್ಡಿದವರಲ್ಲ. ಸಂಪಾದಕೀಯ ವಿಭಾಗಕ್ಕೆ ಸೇರುವ ಹೊಸಬರಿಗೆ ಅವರು ಸ್ಪಷ್ಟವಾಗಿ ಎಚ್ಚರಿಕೆಯ ಮಾತು ಹೇಳುತ್ತಿದ್ದರು: "ನೀವು ಯಾವ ಕಚೇರಿಗೆ ಹೋದರೂ ‘ತಾಯಿನಾಡು’ ಪತ್ರಿಕೆಯಲ್ಲಿರುವುದಾಗಿ ಹೇಳಿಕೊಂಡು ಯಾವುದೇ ಅಹವಾಲು-ಬೇಡಿಕೆ-ಒತ್ತಾಯಗಳನ್ನು ಮಾಡಕೂಡದು.
  • ಸಾರ್ವಜನಿಕ ಸಭೆ-ಸಮಾರಂಭಗಳಿಗೆ ಈ ಪತ್ರಿಕೆಯ ಹೆಸರು ಹೇಳಿಕೊಂಡು ಹೋಗಿ ವಿಶೇಷ ಆಸನಗಳಲ್ಲಿ ಮಂಡಿಸುವುದಾಗಲೀ, ಸಂಪಾದಕರಿಂದ ನಿಯೋಜಿಸಲ್ಪಡದೆ ಯಾವುದೇ ಕಲಾಪಗಳ, ಸಂಗೀತ-ನೃತ್ಯ-ಚಲಚ್ಚಿತ್ರ ಕಾಯಕ್ರಮಗಳ ವರದಿಗಳನ್ನು, ವಿಮರ್ಶೆಗಳನ್ನು ಕೊಡುವುದು ನಿಷಿದ್ಧ". ವರದಿಗಳಿಗೆ ಅವನ್ನು ಬರೆದವರೂ, ಲೇಖನಗಳಿಗೆ-ಅನುವಾದಗಳಿಗೆ ಉಪಸಂಪಾದಕರೂ ಹೆಸರು ಹಾಕಿಕೊಳ್ಳುವುದನ್ನು ಅವರು ಒಪ್ಪುತ್ತಿರಲಿಲ್ಲ. ಪತ್ರಕರ್ತ ಯಾವಾಗಲೂ ಅನಾಮಿಕನಾಗಿರಬೇಕು; ಆದರೆ ಸರ್ವಾಂತಯಾಮಿಯಾಗಿ ಇರಬೇಕು.
  • ಪತ್ರಿಕೆಗಳಲ್ಲಿ ಸಂಗತಿಗಳ ವರದಿಗಳೂ ಪ್ರಕಟವಾಗುವುದು ಮುಖ್ಯವೇ ಹೊರತು, ಅವುಗಳನ್ನು ಒಕ್ಕಣಿಸಿದವನ ಹೆಸರಿನ ಹೆಚ್ಚುಗಾರಿಕೆಲ್ಲವೆಂಬುದು ಅವರ ಕಟ್ಟುಪಾಡು. ಪತ್ರಿಕೆಯಲ್ಲಿನ ಭಾಷೆ ನೇರವಾಗಿರಬೇಕು, ಸರಳವಾಗಿರಬೇಕು; ಶಬ್ದಾಡಂಬರವಾಗಲೀ, ವಿದ್ವತ್ಪ್ರದರ್ಶನವಾಗಲೀ ಸುದ್ದಿ ಯ ಅಂಕಣದಲ್ಲಿ ಅನಗತ್ಯ. ಬೇಕಾದರೆ ವಿಶೇಷ ಲೇಖನಗಳಲ್ಲಿ ಪದ ಪಾಂಡಿತ್ಯ ವಿಜೃಂಭಿಸಬಹುದು. ಅನುವಾದಗಳು ಸಾಮಾನ್ಯರಿಗೆ ಅರ್ಥವಾಗುವುದೇ ಎಂದು ಖಚಿತ ಪಡಿಸಿಕೊಳ್ಳದೆ ಪತ್ರಿಕೆಯಲ್ಲಿ ಪ್ರಕಟಿಸಿದರೆ ಅಪಾರ್ಥ-ಅನರ್ಥವಾಗುವುದೆಂದು ಅವರ ವಾದ.
  • ನಿಮಗೇ ಅರ್ಥವಾಗದ ವಿಷಯಗಳನ್ನು ಅನುವಾದ ಮಾಡಿ ತುರುಕಬೇಡಿ, ತಿಳಿಯದಿದ್ದರೆ ಇನ್ನೊಬ್ಬರನ್ನು ಕೇಳಿ, ಸರಿಯಾಗಿ ಗೊತ್ತಾದಲ್ಲಿ ಮಾತ್ರ ಪತ್ರಿಕೆಗೆ ಕೊಡಿ ಎಂಬುದವರ ಉಪದೇಶ. ಕೋರ್ಟ್ ಸುದ್ದಿಗಳು, ನಿಧನ ವಾರ್ತೆಗಳು, ಕೊಲೆ ವರದಿಗಳು - ಇವುಗಳನ್ನು ಪ್ರಕಟಿಸುವಾಗ ಮೈಯೆಲ್ಲಾ ಕಣ್ಣಾಗಿರಬೇಕೆಂದು ಬುದ್ಧಿವಾದ ಹೇಳುತ್ತಿದ್ದರು.
  • ಫೋನಿನಲ್ಲಿ ನಿಧನ ವಾರ್ತೆಯನ್ನು ತೆಗೆದುಕೊಂಡು ಪ್ರಕಟಿಸುವಂತಿಲ್ಲ; ಮೃತರ ಸಮೀಪ ಬಂಧುಗಳಿಂದ ಲಿಖಿತವಾಗಿ, ತಮ್ಮ ಹೆಸರು-ವಿಳಾಸ, ಸಹಿ ಸಮೇತ ಕಳಿಸಿಕೊಟ್ಟಲ್ಲಿ ಮಾತ್ರ ಪ್ರಕಟಿಸಲು ಅವಕಾಶ. ವಿವಾಹ ಸುದ್ದಿಗಳ ಜತೆಗೆ ಮುದ್ರಿತ ಆಮಂತ್ರಣ ಪತ್ರಿಕೆಗಳೂ ಮತ್ತು ಕಳಿಸಿದವರ ಹೆಸರು-ವಿಳಾಸಗಳೂ ಇರಲೇಬೇಕು. ಪರ ಊರಿನವರು ಅಲ್ಲಿನ ‘ತಾಯಿನಾಡು‘ ಏಜೆಂಟರ ಮೂಲಕ ಇಂತಹ ಸಮಾಚಾರಗಳನ್ನು ಕಳಿಸಬೇಕಾಗಿತ್ತು.

‘ತಾಯಿನಾಡು’ ಸಂಸ್ಕೃತಿ[ಬದಲಾಯಿಸಿ]

  • ವಿಶೇಷ ಸಂದರ್ಭಗಳಲ್ಲಿ ‘ತಾಯಿನಾಡು’ ಅಂತಹ ಸುದ್ದಿ ಬಂದ ತಕ್ಷಣ ‘ಸ್ಪೆಷಲ್‘ ಸಂಚಿಕೆಗಳನ್ನು ಪ್ರಕಟಿಸಿ, ಬೆಂಗಳೂರು, ಮೈಸೂರು ಮತ್ತು ಹತ್ತಿರದ ಪಟ್ಟಣಗಳಲ್ಲಿ ಉಚಿತವಾಗಿ ಅಥವಾ ಸಾಂಕೇತಿಕ ಬೆಲೆಗೆ ಹಂಚಿ ವಾಚಕರ ವಿಶ್ವಾಸಗಳಿಸುತ್ತಿತ್ತು. ಇಂತಹ ಮಿಂಚಿನ ವಿತರಣಾ ವ್ಯವಸ್ಥೆಯಲ್ಲಿ ಆಗ ಬಳೇಪೇಟೆ ಚೌಕದಲ್ಲಿ ವಿಶಾಲ ಅಂಗಡಿಯನ್ನು ಹೊಂದಿದ್ದ ಬೆಂಗಳೂರಿನ ಮುಖ್ಯ ಏಜೆಂಟ್ ಶ್ರೀ ಎಮ್.ಎ.ಆಚಾರ್ಯ ಮತ್ತು ಕಂಪನಿಯ ಮಾಲೀಕರ ಮತ್ತು ಅವರ ಶ್ರದ್ಧಾಳು ಸಿಬ್ಬಂದಿಯ ಪಾದರಸಸದೃಶ ಚಟುವಟಿಕೆ ಉಲ್ಲೇಖನೀಯ.
  • ರಾಜ್ಯದ ಎಲ್ಲೆಡೆ ಇಂತಹ ವಿಶ್ವಾಸಾರ್ಹ ಏಜೆಂಟರ ಒತ್ತಾಸೆ ಮತ್ತು ಸಹಕಾರ ಶ್ರೀ ರಾಮಯ್ಯನವರಿಗಿದ್ದ ದೊಡ್ಡ ಆಸ್ತಿ. ಮುಂದೆ ಪ್ರಾತಃಕಾಲದ ಮುದ್ರಣ ಪ್ರಾರಂಭವಾದ ಮೇಲಂತೂ, ಸಂಜೆಯ ವಿಶೇಷ ಸಂಚಿಕೆಗಳನ್ನು ಹೊರಡಿಸಿ ಮತ್ತಷ್ಟು ಜನಪ್ರಿಯವಾಗುವ ನೂರಾರು ಸಂದರ್ಭಗಳು ‘ತಾಯಿನಾಡು’ವಿಗೆ ಒದಗಿ ಬಂದವು. ಇದರಿಂದ ಪತ್ರಿಕೆಯ ವಿಶ್ವಾಸಾರ್ಹತೆ ವಿಸ್ತೃತಗೊಳ್ಳುತ್ತಿತ್ತು. ‘ಬೆಳಗಿನ ಮುದ್ರಣ‘ ಪ್ರಾರಂಭವಾದ ಮೇಲೆ, ಭಾನುವಾರದ ರಜಾ ರದ್ದಾಗಿ ವಾರದ ಏಳೂ ದಿನಗಳಲ್ಲೂ ಪತ್ರಿಕೆ ಪ್ರಕಟವಾಗುವುದು ರೂಢಿಗೆ ಬಂದಿತು.
  • ಪತ್ರಿಕೆಯಲ್ಲಿ ಕ್ರೀಡಾವಾರ್ತೆ, ಹವಾಮಾನ ವರದಿ, ಚಿನ್ನ-ಬೆಳ್ಳಿ ಧಾರಣೆ, ಸಂಗೀತ ವಿಮರ್ಶೆ, ಚಲಚ್ಚಿತ್ರ-ನಾಟಕಗಳ ಅವಲೋಕನ, ಗ್ರಂಥ ವಿಮರ್ಶೆ ಮುಂತಾದವೆಲ್ಲಾ ವಿವಿಧ ಆಸಕ್ತ ಜನರನ್ನು ಆಕರ್ಷಿಸುತ್ತಿದ್ದವು. ಪ್ರಥಮ ಸ್ವಾತಂತ್ರ್ಯೋತ್ಸವ ಸಂಚಿಕೆ, ಮಹಾತ್ಮ ಗಾಂಧೀಜಿ ಹತ್ಯೆಯ ಶೋಕ ಸಂಚಿಕೆ, ಮೈಸೂರು ಜವಾಬ್ದಾರಿ ಸರ್ಕಾರ ಸ್ಥಾಪನೆಯ ವಿಶೇಷಾಂಕ, ಪ್ರಥಮ ಗಣರಾಜ್ಯೋತ್ಸವ ಪುರವಣಿ, ಹೈದರಾಬಾದ್ ಕಾರ್ಯಾಚರಣೆ ವಿಶೇಷಾಂಕ, ದಸರಾ ಸಂಚಿಕೆ ಮುಂತಾದವು ನೆನಪಿನಲ್ಲಿಡುವಂತಹ ಸಂಚಿಕೆಗಳು.
  • ಸಚಿತ್ರ ವರ್ಣರಂಜಿತ ಪುರವಣಿಗಳನ್ನು ತರುತ್ತಿದ್ದಾಗ ‘ತಾಯಿನಾಡು’ವಿನ ಇಂಗ್ಲಿಷ್ ಸೋದರ ಪತ್ರಿಕೆ `Daily News' ಕೂಡ, ತನ್ನ ಇತಿ-ಮಿತಿಗಳಲ್ಲಿ ಕೆಲವು ಬಾರಿ ವಿಶೇಷ ಸಂಚಿಕೆಗಳನ್ನು ಹೊರಡಿಸಿದ್ದಿತು. ಮುಂಬಯಿ, ದೆಹಲಿ ಮತ್ತು ಹೈದರಾಬಾದ್‍ಗಳಿಗೆ ಪತ್ರಿಕೆಯ `AIR MAIL Edition' ಪ್ರತಿಗಳನ್ನು ಕೆಲವು ವರ್ಷಗಳ ಕಾಲ ಕಳಿಸಿದ್ದು ವೈಶಿಷ್ಟ್ಯಪೂರ್ಣ ಸಾಹಸ. ಸಂಪಾದಕ ಶ್ರೀ ಪಿ.ಬಿ. ಶ್ರೀನಿವಾಸನ್‌ರು ಶ್ರೀ ರಾಮಯ್ಯನವರಿಗೆ ಬಂಧುವಿಗಿಂತ ಹೆಚ್ಚಾಗಿದ್ದರು.
  • ಶ್ರೀಮತಿ ಪಿ.ಆರ್.ಜಯಲಕ್ಷ್ಮಮ್ಮನವರು ಹಲವಾರು ಮಹಿಳಾ ಸಂಸ್ಥೆಗಳು, ಸಮಾಜ ಸೇವಾ ಸಂಘಗಳು, ಧಾರ್ಮಿಕ ಸಂಘಟನೆಗಳ ನಿಕಟ ಸಂಪರ್ಕವಿಟ್ಟುಕೊಂಡಿದ್ದುದರಿಂದ ತಮ್ಮ ಪತಿಯ ಸಾರ್ವಜನಿಕ ಸೇವೆ ಮತ್ತು ಪತ್ರಿಕಾ ಜೀವನದ ಹಾಗೂ ಪತ್ರಿಕೆಯ ವರ್ಚಸ್ಸಿನ ಸಂವರ್ಧನೆಗೆ ನೆರವಾಗಿ, ಆದರ್ಶ ಸಹಧರ್ಮಿಣಿಯಾಗಿ ಬೆಳಗಿದರು. ಶ್ರೀ ರಾಮಯ್ಯನವರು ಎರಡು ಬಾರಿ ಬೆಂಗಳೂರು ಕಾರ್ಪೊರೇಷನ್ ಸದಸ್ಯರಾಗಿದ್ದರೆ, ಶ್ರೀಮತಿ ಜಯಲಕ್ಷ್ಮಮ್ಮನವರಂತೂ ಉಪಮೇಯರ್‌ರಾಗಿ ನಾಗರೀಕ ಸೇವೆಗೆ ಪ್ರಸಿದ್ಧರಾದರು.
  • ಶ್ರೀ ರಾಮಯ್ಯನವರು ವಿಶಾಲ ರಾಷ್ಟೀಯ ಮನೋಭಾವದವರೂ, ಜಾತ್ಯತೀತ ಧೋರಣೆಯವರೂ, ಹಿಂದುಳಿದ ವರ್ಗಗಳ ಹಿತೈಷಿಯೂ ಆಗಿದ್ದರು; ಹರಿಜನ ಸೇವಾ ಸಂಘ, ಗೋಪಾಲಸ್ವಾಮಿ ಅಯ್ಯರ್ ಸ್ಮಾರಕ ದಲಿತ ವಿದ್ಯಾರ್ಥಿ ನಿಲಯ, ಆದಿವಾಸಿ ಸಂಘ, ಹಿಂದಿ ಪ್ರಚಾರ ಪರಿಷತ್ ಮುಂತಾದ ಸೇವಾ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ದುಡಿದು, ಈ ಸಂಸ್ಥೆಗಳ ಚಟುವಟಿಕೆಗಳಿಗೆ ಪತ್ರಿಕೆಯಲ್ಲಿ ಸಾಕಷ್ಟು ಪ್ರಚಾರ ನೀಡುತ್ತಿದ್ದರು.
  • ತರುಣ ಪತ್ರಿಕೋದ್ಯಮಿಗಳಿಗೆ, ವೃತ್ತಿಯನ್ನು ಕಲಿಯಬೇಕೆನ್ನುವ ಉತ್ಸಾಹಿಗಳಿಗೆ ಶ್ರೀ ರಾಮಯ್ಯನವರು ಉತ್ತೇಜನ ಕೊಡುತ್ತಿದ್ದರು. ಇಲ್ಲಿ ಆರಂಭಿಕ ತರಪೇತಿ ಪಡೆದು ಮುಂದೆ ಬೇರೆ ಬೇರೆ ಪತ್ರಿಕೆಗಳಲ್ಲಿ ಅಥವಾ ಪ್ರಸರಣಾ ರಂಗಗಳಲ್ಲಿ ಹಿರಿಯ ಹುದ್ದೆಗಳನ್ನು ಅಲಂಕರಿಸಿದವರು ಅನೇಕ; ಶ್ರೀ ಹೆಚ್.ಆರ್.ನಾಗೇಶರಾವ್, ಶ್ರೀ ಕೆ.ಸತ್ಯನಾರಾಯಣ, ಶ್ರೀಮತಿ ನಾಗಮಣಿ ಎಸ್.ರಾವ್, ದಿ|| ಎಸ್.ಆರ್.ಕೃಷ್ಣಮೂರ್ತಿಯವರನ್ನು ಇಲ್ಲಿ ಉಲ್ಲೇಖಿಸಬಹುದು.
  • ಹೀಗೆ ಅತ್ಯುಚ್ಛ್ರಾಯ ಸ್ಥಿತಿಯಲ್ಲಿದ್ದ ‘ತಾಯಿನಾಡು‘ ಪತ್ರಿಕೆ ಹಾರ್ಡಿಂಜ್ ರಸ್ತೆಯಲ್ಲಿ (ಈಗ ಪಂಪ ಮಹಾಕವಿ ರಸ್ತೆ) 1947ರಲ್ಲಿ ಸ್ವಂತ ಕಟ್ಟಡ ಕೊಂಡು, ತನ್ನ ಪ್ರಸಾರ ಹೆಚ್ಚಳವನ್ನು ಪೂರೈಸುವ ಸಲುವಾಗಿ ಅಲ್ಲಿ ರೋಟರಿ ಮುದ್ರಣ ಯಂತ್ರವನ್ನು ಸ್ಥಾಪನೆ ಮಾಡಿತು. ಸದೃಢ ತಳಹದಿಯ ಮೇಲೆ ಆಧುನಿಕವಾಗಿ ಪತ್ರಿಕೆಯನ್ನು ವಿಸ್ತರಿಸುವ ಯೋಜನೆಗಳನ್ನು ಶ್ರೀ ರಾಮಯ್ಯನವರು ಹಮ್ಮಿಕೊಳ್ಳುತ್ತಿರುವಾಗಲೇ ಅನಿರೀಕ್ಷಿತ ಶ್ರೀಮಂತ ಪೈಪೋಟಿ ಅವರಿಗೆದುರಾಯಿತು.
  • 1952ರಲ್ಲಿ ಅವರು ಪತ್ರಿಕೆಯ ಅದ್ಧೂರಿ ರಜತ ಮಹೋತ್ಸವವನ್ನು ನಡೆಸಿದರು. ಆ ವರ್ಷ ‘ತಾಯಿನಾಡು’ ಮುಖಪುಟ ಲಾಂಛನದಲ್ಲಿ ಅದರ ಹೆಸರಿನ ಅಕ್ಷರಗಳಿಗೆ ಸುತ್ತು ಗೆರೆಯನ್ನು ಹಾಕಿ ಆಕರ್ಷಕವಾಗಿ ಕಾಣುವಂತೆ ಮಾಡಲಾಯಿತು; ಒಂದು ವರ್ಷ ಕಾಲ ಪತ್ರಿಕೆಯ ಮೇಲುಗಡೆ `JUBILEE YEAR' ಎಂದೂ ಛಾಪಿಸಿ ಸಂಭ್ರಮಿಸಿದ್ದಾಯಿತು. ಪತ್ರಿಕೆಯ ಸುಧಾರಣೆಗೆ, ಪ್ರಸರಣ ವಿಸ್ತರಣೆಗೆ ಹಲವಾರು ವಿನೂತನ ತಂತ್ರಗಳನ್ನು ರೂಪಿಸಿದ್ದೂ ಆಯಿತು.
  • ಆದರೆ, ಅಧಿಕ ಸಾಧನ-ಸಂಪತ್ತು-ಬಂಡವಾಳವನ್ನು ಹೊಂದಿದ್ದ, ಯಥೇಚ್ಚ ಧನಬಲ-ರಾಜಕೀಯ ಪ್ರಭಾವವನ್ನುಳ್ಳ ಹಾಗೂ ತಮಗಿಂತ ನವನವೀನ ಮುದ್ರಣಯಂತ್ರಗಳಿಂದ ಸಜ್ಜಾದ ಹಾಗೂ ವಿತರಣಾ ವ್ಯವಸ್ಥೆಗೆ ಸ್ವಂತ ವಾಹನಗಳ ಶ್ರೇಣಿಯನ್ನೇ ಹೊಂದಿದ್ದ ಭಾರೀ ಪತ್ರಿಕಾ ಸಮೂಹ ವೊಂದು, ಹಿಂದೆಂದೂ ಧೃತಿಗೆಡದ ಶ್ರೀ ರಾಮಯ್ಯನವರನ್ನು ತಲ್ಲಣಗೊಳಿಸಿತು.
  • ಆರ್ಥಿಕ ಚೈತನ್ಯ ಕುಂದಿ, ಸಾಲದ ಹೊರೆ ಏರುತ್ತಿದ್ದ ಹಾಗೂ ಸಿಬ್ಬಂದಿ ಮತ್ತು ನಿರ್ವಹಣಾ ವೆಚ್ಚಗಳು ಮಿತಿ ಮೀರುತ್ತಾ ತಮ್ಮ ಸೀಮಿತ ಸಾಧನ ಸಂಪತ್ತು ಕರಗುತ್ತಾ ಬಂದಾಗ ತಮ್ಮ ಒಂಟಿ ಹೋರಾಟ ಇನ್ನು ನಿರರ್ಥಕವೆಂದು ಶ್ರೀ ರಾಮಯ್ಯನವರು ವಿಧಿಯಿಲ್ಲದೆ ಗ್ರಹಿಸಿದರು. ಸಮಬಲದ ಪೈಪೋಟಿಯಿಂದ ಪತ್ರಿಕೆಯನ್ನು ನಡೆಸಬಲ್ಲ ಸಮೃದ್ಧ ಹಣ-ಜನ ಬೆಂಬಲವುಳ್ಳ ಶ್ರೀಮಂತರೊಬ್ಬರು ಮುಂದೆ ಬಂದಾಗ, ಅವರ ಮಡಿಲಲ್ಲಾದರೂ ‘ತಾಯಿನಾಡು‘ ಪ್ರವರ್ಧಮಾನಕ್ಕೆ ಬಂದು ಶಾಶ್ವತವಾಗಿ ತಲೆ ಎತ್ತಿ ನಿಲ್ಲುವುದೆಂದು ನೆರೆ ನಂಬಿ ಅವರಿಗೆ ತಮ್ಮ ಪ್ರೀತಿಯ ಸಂಸ್ಥೆಯನ್ನು ಶ್ರೀ ಪಿ.ಆರ್.ರಾಮಯ್ಯನವರು ಹಸ್ತಾಂತರಿಸಿದರು; ಈ ಹೊಂಗನಸು ಮರೀಚಿಕೆಯಾದುದೊಂದು ವಿಧಿಯ ದುರ್ವಿಲಾಸ!
  • ನಿಚ್ಚಳ ಜನಹಿತ ಭಾವನೆಯಿಂದ ಶ್ರಮಿಸಿ ಒಂದು ಪತ್ರಿಕೆಯನ್ನು ಎಷ್ಟು ಪ್ರಭಾವಶಾಲಿಯಾಗಿ ಮಾಡಬಹುದೆಂಬುದನ್ನು ರಾಮಯ್ಯನವರು ತೋರಿಸಿಕೊಟ್ಟರು. ಪತ್ರಕರ್ತರಿಗೆ ತಮ್ಮ ವೃತ್ತಿಯ ಆದರ್ಶ ಮತ್ತು ಮೌಲ್ಯಗಳನ್ನು ತಿಳಿದುಕೊಳ್ಳಲು ‘ತಾಯಿನಾಡು’ ನೆರವಾಯಿತು. ಬಹು ಸಣ್ಣ ಪ್ರಮಾಣದಲ್ಲಿ ಆರಂಭವಾದ ‘ತಾಯಿನಾಡು’ ಪತ್ರಿಕೆ ಈ ಶತಮಾನದ ಪ್ರಥಮಾರ್ಧದಲ್ಲಿ ಅತ್ಯಂತ ದೊಡ್ಡ ಕನ್ನಡ ಪತ್ರಿಕೆಯಾಗಿ ಬೆಳೆಯಲು ಶ್ರಮಿಸಿದ ರಾಮಯ್ಯನವರ ಸಾಧನೆ ಕನ್ನಡ ಪತ್ರಿಕಾ ರಂಗದ ಇತಿಹಾಸದಲ್ಲಿ ಒಂದು ಪ್ರಮುಖ ಅಧ್ಯಾಯ.

`ತಾಯಿನಾಡು' ಸತ್ಸಂಪ್ರದಾಯ[ಬದಲಾಯಿಸಿ]

  • ‘ತಾಯಿನಾಡು’ ಪತ್ರಿಕೆಯಲ್ಲಿ ಇಂದು ನಂಬಲಸಾಧ್ಯವಾದಂಥ ಸಂಪ್ರದಾಯವೊಂದಿತ್ತು. ಯಾವುದೇ ಕ್ರೀಡೆ ಅಥವಾ ಮನರಂಜನಾ ಕೂಟಗಳ ಬಗ್ಗೆ ವರದಿ ಮಾಡಬೇಕಾದಲ್ಲಿ ಪತ್ರಿಕೆಯ ಉದ್ಯೋಗಿಗಳು ‘ಉಚಿತ ಪಾಸ್’ಗಳನ್ನು ಬಳಸುವಂತಿರಲಿಲ್ಲ, ಪತ್ರಿಕೆಯ ವತಿಯಿಂದಲೇ ಟಿಕೆಟ್ ಪಡೆಯಬೇಕಿತ್ತು. ಪ್ರಾಯೋಜಕರು ಅಂಥ ಪಾಸ್‍ಗಳನ್ನು ಪತ್ರಿಕೆಗೆ ಕಳುಹಿಸಿದಲ್ಲಿ ಸಂಪಾದಕರು ಅವುಗಳನ್ನು ಹಿಂದಿರುಗಿಸುತ್ತಿದ್ದರು.
  • ಇಂಟರ್‌ನ್ಯಾಶನಲ್ ರೆಸ್ಲಿಂಗ್ ಫೆಡರೇಶನ್’ ಬೆಂಗಳೂರಿನಲ್ಲಿ ಕುಸ್ತಿ ಸ್ಫರ್ಧೆಯೊಂದನ್ನು ನಡೆಸಿತ್ತು. ಸ್ಫರ್ಧಾಕೂಟದ ಎಲ್ಲ ದಿನಗಳಿಗೂ ಅನ್ವಯವಾಗುವ ಎರಡು ಪಾಸ್‍ಗಳನ್ನು ಅದು ‘ತಾಯಿನಾಡು’ ಪತ್ರಿಕೆಗೆ ಕಳುಹಿಸಿತ್ತು. ಈ ಬಗ್ಗೆ ಕೂಟದ ‘ಸಂಘಟಕರಿಗೆ’ ಸಂಪಾದಕ ಪಿ.ಬಿ.ಶ್ರೀನಿವಾಸನ್ ದಿನಾಂಕ 18-06-1953ರಂದು ಬರೆದ ಪತ್ರ ಇಂತಿದೆ.

"Dear Sir, Since it is the policy of our paper not to accept complimentary passes, we return herewith the pass so kindly sent. We readily appreciate your courtesy and gesture. We will buy tickets and attend the performances as that would obviate many difficulties.

Thanking you, Yours faithfully, Editor ಹೆಚ್.ಆರ್.ನಾಗೇಶರಾವ್ ಅವರ ಸಂಗ್ರಹದಲ್ಲಿ ಸಂಪಾದಕರ ಕರಡು ಬರಹ ಮತ್ತು ಟೈಪ್ ಆದ ಪ್ರತಿಗಳೆರಡೂ ಇವೆ.

ತಾಯಿನಾಡು : ಸಂಪಾದಕೀಯ[ಬದಲಾಯಿಸಿ]

  • ಪತ್ರಿಕಾ ಕೆಲಸಗಾರರು - ಹೊಸ ಮಸೂದೆ ಪತ್ರಿಕಾ ಕಛೇರಿಗಳಲ್ಲಿ ಪತ್ರಿಕೆಯ ಪ್ರವರ್ಧಮಾನಕ್ಕೆ ದುಡಿಯುವ ಕೆಲಸಗಾರರ ಹಿತ ಚಿಂತನೆಯನ್ನೇ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರದವರು ಒಂದು ಮಸೂದಾ ಕಾನೂನನ್ನು ರಚಿಸಿ ಅದನ್ನು ರಾಜ್ಯ ಸಭೆಯ ಅವಗಾಹನೆ ಗೊಪ್ಪಿಸಿದ್ದಾರೆ. ಆ ಮಸೂದೆಯ ಕಲಮುಗಳಲ್ಲಿ ಕೆಲಸ ಮಾಡುವ ವೇಳೆ, ರಜಾ ದಿನಗಳು, ಗ್ರಾಚುಯಿಟಿ, ಪ್ರಾವಿಡೆಂಟ್ ಫಂಡ್, ಇತ್ಯಾದಿ ಸೌಲಭ್ಯಗಳನ್ನೂ, ಕೆಲಸಗಾರರನ್ನು ತೆಗೆಯಬೇಕಾದರೆ ಯಾವ ಅವಧಿಯ ನೋಟೀಸ್ ಇರಬೇಕೆಂಬ ಅವಧಿಯನ್ನೂ ನಮೂದಿಸಿದ್ದಾರೆ.
  • ಸಾರ್ವಜನಿ ಕರಲ್ಲಿ ಯಾರೇ ಆಗಲಿ ಮಸೂದೆಯನ್ನು ಒಮ್ಮೆ ಅವಲೋಕಿಸಿದರೆ ಪತ್ರಿಕೆಯವರಿಗೆ ಈವರೆಗೆ ಇಷ್ಟರಮಟ್ಟಿನ ಸೌಲಭ್ಯಗಳೂ ಇರಲಿಲ್ಲವೇ ಎಂಬ ಶಂಕೆ ಉದಯಿಸಬಹುದು. ಆದರೆ ಅವರು ಆ ರೀತಿ ಆತಂಕಪಡಬೇಕಿಲ್ಲ. ಪ್ರೆಸ್ ಕಮೀಷನ್ನಿನವರು ಕಣ್ಣು ಬಿಟ್ಟು ತನಿಖೆ ಆರಂಭಿ ಸುವ ಮೊದಲೇ ಅನೇಕ ಪತ್ರಿಕಾ ಕಛೇರಿಗಳಲ್ಲಿ ಪ್ರಾವಿಡೆಂಟ್ ಫಂಡ್ ಸೌಲಭ್ಯವೂ; ನೋಟೀಸ್ ಅವಧಿಯೂ; ರಜಾ ದಿನಗಳ ಸೌಲಭ್ಯವೂ ಇದ್ದವು.
  • ಆದರೂ ಆ ಸೌಕರ್ಯಗಳಿಗಿಂತಲೂ ಹೆಚ್ಚಿನದನ್ನು ಈಡೇರಿಸಿಕೊಳ್ಳುವ ಸಲುವಾಗಿ ಕಾರ್ಯನಿರತ ಪತ್ರಿಕೋದ್ಯೋಗಿಗಳು ಸುಸಂಘಟಿತರಾಗಿ ಒತ್ತಾಯಪಡಿಸಿದ್ದ ರಿಂದ ಪ್ರೆಸ್ ಕಮೀಷನ್ನಿನವರು ಕೆಲವು ಶಿಫಾರಸುಗಳನ್ನು ಮಾಡಿದರು. ಈಗ ಅವನ್ನೆಲ್ಲಾ ಕ್ರೋಢೀಕರಿಸಿ ಮಸೂದಾ ಕಾನೂನಿನಲ್ಲಿ ಸೇರಿಸಿದ್ದಾರೆ. ನಾಲ್ಕು ಜನ ಕೆಲಸ ಮಾಡುವ ಕಡೆ ಈ ಸೌಲಭ್ಯಗಳೆಲ್ಲವೂ ಇರಬೇಕಾದ್ದೇ ಸರಿ.
  • ಆದರೆ ಕೇವಲ ಕೆಲವು ಪತ್ರಿಕೆಗಳು ತಮ್ಮ ಕೆಲಸಗಾರರ ವಿಷಯದಲ್ಲಿ ಕಾಠಿಣ್ಯತೆಯನ್ನು ತೋರಿಸಿದಾಕ್ಷಣ ಪತ್ರಿಕಾ ಪ್ರಪಂಚದ ಮೇಲೇಯೇ ಕಾನೂನಿನ ನಿರ್ಬಂಧವನ್ನು ಹಾಕುವುದು ಪತ್ರಿಕಾ ಸ್ವಾತಂತ್ರ್ಯದ ದೃಷ್ಟಿಯಲ್ಲಿ ಸರಿಯಲ್ಲ ಎಂಬುದಾಗಿ ವಾದಿಸುವವರೂ ಇದ್ದಾರೆ. ಪತ್ರಿಕೆಯು ಜನಪ್ರಿಯವಾಗಿ ಎಲ್ಲರಿಂದಲೂ ಪ್ರೋತ್ಸಾಹಿಸಲ್ಪಟ್ಟರೆ ಆಗ ಕೆಲಸ ಗಾರರಿಗೆ ಯಾವ ಸೌಕರ್ಯಗಳನ್ನಾದರೂ ಒದಗಿಸಬಹುದು. ಒಂದು ಕಡೆ ಕಾರ್ಯನಿರತ ಪತ್ರಿಕೋದ್ಯೋಗಿಗಳು ಸಂಘಟಿತರಾಗುವುದೂ.
  • ಇನ್ನೊಂದು ಕಡೆ ಪತ್ರಿಕಾ ವ್ಯಾಪಾರದಲ್ಲಿ ಪ್ರಬಲವಾದ ಪೈಪೋಟಿ ಏರ್ಪಟ್ಟು ಏರಿಳಿತಗಳಾಗುವುದೂ ಸರಿಯಾದ ಮನ್ನಣೆಗೆ ಅಡ್ಡಿ ತಂದೊಡ್ಡುತ್ತಿರುವು ದನ್ನು ಸಾರ್ವಜನಿಕರು ಗಮನಿಸಬೇಕು. ಪತ್ರಿಕೆಯು ತನ್ನ ಪ್ರಜಾ ಸೇವೆಯೊಂದಿಗೆ ವ್ಯಾಪಾರ ವಲಯದ ಒಳ್ಳೆಯ ಪರಿಣಾಮ ಮತ್ತು ದುಷ್ಪರಿಣಾಮಗಳನ್ನೂ ಗಮನಿಸಬೇಕು. ಸರ್ಕಾರದವರಿಗೆ ಕಂದಾಯ ಸಲ್ಲುವಂತೆ ಪತ್ರಿಕೆಗಳಿಗೆ ವರಮಾನ ಬರುವುದಾದರೆ ಏನು ಬೇಕಾದರೂ ಮಾಡಬಹುದು.
  • ಪತ್ರಿಕೆಗಳು ಇನ್ನೂ ಶೈಶವಾವಸ್ಥೆಯಲ್ಲಿಯೇ ಇದೆ ಎಂದು ಪ್ರಜಾ ಮುಖಂಡರುಗಳಿಂದ ಪದೇ ಪದೆ ಹೇಳಿಸಿಕೊಳ್ಳುತ್ತಿರುವ ಪತ್ರಿಕೆಗಳಿಗೆ ಇಷ್ಟೊಂದು ನಿರ್ಬಂಧ ಬೇಕಾಗಿಯೇ ಇಲ್ಲ. ಒಂದು ಪತ್ರಿಕಾ ಆಯದ ವರಮಾನ ಇನ್ನೊಂದು ಪತ್ರಿಕಾಲಯಕ್ಕೆ ಭಿನ್ನವಾಗಿದೆ. ಆದರೂ ರಜಾ ದಿನಗಳಲ್ಲೂ, ಪ್ರಾವಿಡೆಂಟ್ ಫಂಡ್ ಕೊಡುವ ವಿಷಯದಲ್ಲಿಯೂ ಅನೇಕ ಪತ್ರಿಕೆಗಳು ಈ ಮೊದಲೇ ಒಳ್ಳೆಯ ದಾರಿ ಹಾಕಿಕೊಟ್ಟಿದೆ. ಈಗಿನ ಮಸೂದಾ ಕಾನೂನಿನಿಂದ ಅದಕ್ಕೆ ಒಂದು ಭದ್ರತೆ ಸಿಕ್ಕಿದಂತಾಯಿತೆಂದು ತೃಪ್ತಿಪಟ್ಟುಕೊಳ್ಳಬಹುದು.
  • ಈ ಹಿಂದೆಯೇ ಕೆಲಸಗಾರರಿಗೆ ಅನೇಕ ಸೌಲಭ್ಯಗಳು ದೊರೆತಿವೆ. ಈಗ ದೊರೆತಿರುವ ಸೌಲಭ್ಯಗಳು ಅಷ್ಟೇನೂ ಕ್ರಾಂತಿಕಾರಕವಾಗಿಲ್ಲ. ಈ ಸೌಕರ್ಯಗಳನ್ನನುಭವಿಸುವ ಕಾರ್ಯಕರ್ತರು ತಮ್ಮ ಸೇವಾ ಕ್ಷೇತ್ರಗಳಲ್ಲಿ ಸದಾ ನಿಷ್ಠರಾಗಿ, ಪ್ರೀತಿಯಿಂದ ಸೇವೆ ಸಲ್ಲಿಸಿದರೆ ಇಷ್ಟು ದಿವಸವೂ ಕಷ್ಟಪಟ್ಟಿದ್ದಕ್ಕೆ ಪ್ರತಿಫಲ ಬಂದೇ ಬರುವುದು ಪತ್ರಿಕೆಗಳಿಗೆ ಸಾರ್ವಜನಿಕರ ಪ್ರೋತ್ಸಾಹವು ದೊರೆತಂತೆಲ್ಲಾ ಕೆಲಸಗಾರರ ಸ್ಥಿತಿಗತಿಗಳೂ ಉತ್ತಮವಾಗುವುದೆಂಬುದನ್ನು ಮನಸ್ಸಿನಲ್ಲಿಡಬೇಕು.''(30-09-1955)

(ಆ ದಿನಗಳಲ್ಲಿ ಪತ್ರಕರ್ತ ಹೆಚ್.ಆರ್.ನಾಗೇಶರಾವ್ 'ತಾಯಿನಾಡು' ಪತ್ರಿಕೆಯ ಸಂಪಾದಕೀಯ ಪುಟದ ಇನ್-ಚಾರ್ಜ್ ಹಾಗೂ ಸಂಪಾದಕೀಯಗಳ ಬರಹಗಾರರಾಗಿದ್ದರು)

ತಾಯಿನಾಡು : ಅಂಕಣ - ನಾರದ ಉವಾಚ[ಬದಲಾಯಿಸಿ]

ನಾರದ ಉವಾಚ ಎಂಬ ನಿತ್ಯ ಟೀಕಾಂಕಣವನ್ನು ಹೆಚ್.ಆರ್.ನಾಗೇಶರಾವ್ ಬರೆಯುತ್ತಿದ್ದರು. ಆ ಅಂಕಣದ ಆಯ್ದ ಭಾಗಗಳನ್ನು ಇಲ್ಲಿ ನೀಡಲಾಗಿದೆ. "ಸದ್ಯಕ್ಕೆ ಹೊಸೂರು ಮದ್ರಾಸ್ ಪ್ರಾಂತದಲ್ಲೇ ಇರಲಿ" ಎಂದು ಗಡಿ ವಿವಾದದ ಇತ್ಯರ್ಥಕ್ಕಾಗಿ ಬಂದಿದ್ದ ಶ್ರೀ ಹೆಚ್.ವಿ.ಪಾಟಸ್ಕರ್ ವರದಿ ಸಲ್ಲಿಸಿದ್ದಾರಂತೆ. - ಹೌದು, ತಮಿಳುನಾಡಿನಲ್ಲಿ ಅದು ಹಳೆಯದಾಗುವ ತನಕ! ...... ಆಮೇಲೆ ಹೊಸೂರು ಗೊತ್ತೇ ಇದೆಯಲ್ಲಾ "ಪುದೂರು", ಆಗುತ್ತದೆ! (೧-೯-೧೯೫೭) "ಹಾಸ್ಯ ನಟರಿಗೆ ೧೯೫೭ನೆಯ ವರ್ಷ ಯಾಕೋ ಶುಭದಾಯಕವಾಗಿಲ್ಲ" ಎಂಬುದಾಗಿ ಚಲಚ್ಚಿತ್ರ ಪ್ರಿಯರೊಬ್ಬರು ಬರೆಯುತ್ತಾರೆ, ದುಹ್ಖದಿಂದ. - ಅವರ ಕಳಕಳಿಯಲ್ಲಿ ನಾವೂ ಭಾಗಿಗಳಾಗುತ್ತಾ, ದಕ್ಷಿಣ ಭಾರತದ ಉಜ್ವಲ ಹಾಸ್ಯ ನಟ ದಿವಂಗತ ಎನ್.ಎಸ್. ಕೃಷ್ಣನ್‍ರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇವೆ! ಎನ್.ಎಸ್. ಕೃಷ್ಣನ್‍ರನ್ನು ಅಣಕಿಸಿ ಅನುಕರಿಸುವುದರಿಂದಲಾದರೂ ಹಾಸ್ಯ ನಟರು ವೃದ್ಧಿಯಾಗಲೆಂದು ಹಾರೈಸುತ್ತೇವೆ! - ಕನ್ನಡದ ಜನ ಕೃಷ್ಣನ್‍ರ ತಮಿಳು ವಿನೋದ-ವಿಡಂಬನೆಗಳನ್ನು ಮೆಚ್ಚುವ ಭರದಲ್ಲಿ ತಾವೂ ತಮಿಳರಾಗದೆ, ಕನ್ನಡದಲ್ಲಿ 'ಕೃಷ್ಣನ್ ಹಾಸ್ಯ' ಹೊರಹೊಮ್ಮುವಂತೆ ಮಾಡುವುದಾದರೆ, ಅವರ ಸ್ಮರಣೆಗೆ ನಿಜವಾದ ಮೆಚ್ಚುಗೆ ಸೂಚಿಸಿದಂತಾದೀತು! (೩-೯-೧೯೫೭) "ಕರ್ಣಾಟಕದಲ್ಲಿ ಸರ್ವೋದಯ ಸಮಾಜ ರಚನೆಯಾಗಲಿ" ಎಂದು ವಿನೋಬಾರು ಹಾರೈಸಿದ್ದಾರೆ. - ಸದ್ಯಕ್ಕೇನೋ, "ಸರ್ಪೋದಯ ಸಮಾಜ" ರಚನೆಯಾಗುತ್ತಿರುವಂತೆ ಕಾಣುತ್ತಿದೆ. ರಾಜ್ಯದ ಹೆಸರಿಗಾಗಿಯೇ ನಡೆಯುತ್ತಿರುವ ಕಚ್ಚಾಟ ನೋಡಿದರೆ! (೫-೯-೧೯೫೭) ಹಿಂದಿಯನ್ನು ಭಾರತದ ಸರ್ಕಾರಿ ಭಾಷೆಯನ್ನಾಗಿ ಮಾಡುವುದನ್ನು ೧೯೯೦ರವರೆಗೂ ಮುಂದಕ್ಕೆ ಹಾಕಬೇಕೆಂದು ದಕ್ಷಿಣ ಭಾರತದ ಕಾಂಗ್ರೆಸ್ ಎಂ.ಪಿ. ಗಳು ಶ್ರೀ ನೆಹ್ರೂ ಅವರಿಗೆ ಮನವಿ ಸಲ್ಲಿಸಿದ್ದಾರಂತೆ. - ಅಷ್ಟು ಕಾದ ಮೇಲೆ ಇನ್ನು ಹತ್ತು ವರ್ಷದಲ್ಲೇನು ಅವಸರ? .... ಸರಿಯಾಗಿ ೨೦೦೧ನೇ ಇಸವಿಯ ಜನವರಿ ೧ನೇ ತಾರೀಖಿನಿಂದ ಆರಂಭವಾಗಬಹುದಲ್ಲಾ! ಹೀಗೆ ಮನವಿ ಸಲ್ಲಿಸುರುವುದಕ್ಕೆ ಒಂದು ಪ್ರಮುಖ ಕಾರಣವೇನೆಂದರೆ, ಈಗಿನ ದಕ್ಷಿಣ ಭಾರತ ಪಾರ್ಲಿಮೆಂಟೇರಿಯನ್ನರೆಲ್ಲಾ (ಶಾಸನ ಸಭಾ ಸದಸ್ಯರುಗಳೂ ಸೇರಿ!) ಹಿಂದಿ ಭಾಷೆಯನ್ನು ಅರ್ಥ ಮಾಡಿಕೊಳ್ಳುವಂತಾಗಬೇಕಾದರೆ ಇನ್ನೂ ಕಾಲು ಶತಮಾನ ಬೇಕೆಂಬ ಭಾವನೆ ಇರಬಹುದು! - ಅಥವಾ ಇನ್ನೂ ೨೫ ವರ್ಷದ ಹೊತ್ತಿಗೆ ತಾವು ಯಾರೂ ಪಾರ್ಲಿಮೆಂಟಿನಲ್ಲಾಗಲೀ, ಶಾಸನ ಸಭೆಗಳಲ್ಲಾಗಲೀ ಅಥವಾ ಸರ್ಕಾರದಲ್ಲಾಗಲೀ ಇರುವುದಿಲ್ಲವೆಂಬ ಮೊಂಡು ಧೈರ್‍ಯ ಇದ್ದರೂ ಇರಬಹುದು! ಅಂತೂ ಸದ್ಯಕ್ಕೆ ಹಿಂದಿ ಭಾಷೆ ನಾಡಿನ ಮಂದಿಯ 'ಮುಂದೀ' ಭಾಷೆ ಆಗದೆ, 'ಹಿಂದಿ' ಆಗಿಯೇ ಉಳಿಯಬೇಕೆನ್ನುವುದೇ ಈ ಮನವಿಯ ಅಂತರಾರ್ಥ! ಜೈ 'ಹಿಂದಿ'! (೬-೯-೧೯೫೭) ಸಣ್ಣ ಉಳಿತಾಯ ಯೋಜನೆ ಚಳುವಳಿಯನ್ನು ಜನಪ್ರಿಯಗೊಳಿಸುವ ಸಲುವಾಗಿ ಉತ್ತಮ ಗೀತೆಗಳು ಮತ್ತು ಭಾವಗೀತೆಗಳನ್ನು ರಚಿಸುವವರಿಗೆ ಬಹುಮಾನ ಕೊಡಲು ಭಾರತ ಸರ್ಕಾರ ಉದ್ದೇಶಿಸಿದೆ. - "ವಿವಿಧ ಭಾಷೆಗಳ ಅತ್ಯುತ್ತಮ ಗೀತೆಗಳನ್ನು ಆರಿಸುವಾಗ, ಆದಷ್ಟು ಪದ ಉಳಿತಾಯ ಮಾಡಿರುವವರಿಗೇ ಪ್ರಶಸ್ತಿ ಕೊಡುವುದು ಶ್ರೇಷ್ಠ" ಎಂಬುದಾಗಿ, ಮುಂದೆ ಈ ಗೀತೆಗಳ boreಗೆ ಒಳಪಡುವ ಜನ ಸಾಮಾನ್ಯರ ಪರವಾಗಿ ಆಶಿಸಲಾಗಿದೆ! ಭಾರತ ಸರ್ಕಾರದ ಈ ಯೋಜನೆಯೇನೋ ಆಃವಾನಕರವಾಗಿದ್ದರೂ ಸಹಾ 'ನವ್ಯ ಕವಿ'ಗಳು ಆಶಾಭರಿತರಾಗುವಂತಿಲ್ಲ! - ಏಕೆಂದರೆ, ಬಹುಮಾನಗಳನ್ನು ಕೊಡುವುದೂ ಸಹಾ ನಗದಾಗಿಯಲ್ಲ-೧೨ ವರ್ಷಗಳ ರಾಷ್ಟ್ರೀಯ ಯೋಜನಾ ಸೇವಿಂಗ್ಸ್ ಸರ್ಟಿಫಿಕೇಟ್‍ಗಳ ರೂಪದಲ್ಲಿ! ಅಂತೂ, ಸರ್ಕಾರವೂ ಸಹಾ ಒಂದು ಬಗೆಯಲ್ಲಿ ಬಹುಮಾನದ ಹಣದ ಬಟವಾಡೆ ತಪ್ಪಿಸಿಕೊಂಡು ಉಳಿತಾಯ ಮಾಡಿದಂತಾಯಿತು! - "Cash Prize" ಕೊಡದೇ ಹೋದ ಮೇಲೆ ನಾವೂ ಸಹಾ ವೃಧಾ ಕವನ ಹೊಸೆಯಲು ತೊಡಗದೇ ನಮ್ಮ energyಯನ್ನು ಉಳಿತಾಯ ಮಾಡುತ್ತೇವೆ" ಎನ್ನುತ್ತಾರೆ, ಕವಿ-ಸಿಂಹರೊಬ್ಬರು!

  • ಉಳಿಸಯ್ಯ, ದೇವರೇ,
  • ಉಳಿತಾಯ ಯೋಜನೆಗಳ|
  • ಉಳಿಯಂತೆ ಕೊರೆಯುವಾ
  • ಭಾಷಣ-ಘೋಷಣೆಗಳಿಂದ||
  • ಉಳಿದರೆ ತಾನೇ ಹಣ|
  • ಉಳಿಸಲು ಝಣ ಝಣ||
  • ಉಳಿಯಲಿ ಜನ-ಜನ-
  • ಒದಗಿಸಿ ಕೈತುಂಬಾ ಧನ||

- ಎಂಬುದಾಗಿ ಗೆಳೆಯರೊಬ್ಬರು ಸ್ಯಾಂಪಲ್ ಸೇವಿಂಗ್ಸ್ ಕವಿತೆ ಕಳಿಸಿಕೊಟ್ಟಿದ್ದಾರೆ .... ಕವನದ ಇತರ ಚರಣಗಳನ್ನು ಕಾಲಂ-ಉಳಿತಾಯದ ದೃಷ್ಟಿಯಿಂದ ಪ್ರಕಟಿಸದೆ ನಿಲ್ಲಿಸಲಾಗಿದೆ! (೮-೯-೧೯೫೭) ಅಮೆರಿಕದ ಹುರುಳಿಕಾಯಿ ಮತ್ತು ಕುಂಬಳಕಾಯಿಯ ಕೆಲವು ವಿಶೇಷ ಜಾತಿಗಳನ್ನು ಲಾಲ್‍ಬಾಗಿನಲ್ಲಿ ಬೆಳೆಯಲಾಗುತ್ತಿದೆ. "ರಷ್ಯಾದ Red ಜಾತಿಗಳು 'ಕೆಂಪು ತೋಟ'ಕ್ಕೆ ಮೊಟ್ಟ ಮೊದಲು ಬರುವುದು ಅತ್ಯಗತ್ಯವಾಗಿತ್ತು" ಎನ್ನುತ್ತಾರೆ, ಲಾಲ್‍ಬಾವುಟದ ನಿಷ್ಠ ಅನುಯಾಯಿಯೊಬ್ಬರು! (೧೦-೯-೧೯೫೭) ನಗರದ ಮಲಯಾಳಿಗಳು ಭಾನುವಾರ 'ಓಣಂ' ಉತ್ಸವವನ್ನು ಆಚರಿಸಿದರು. - ಈ ಓಣಂ ಉತ್ಸವ ಸಂಭ್ರಮಕ್ಕೆ ಹೋಲಿಸಿದರೆ ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ 'ವಸಂತ ಸಾಹಿತ್ಯೋತ್ಸವ' ನಿಜವಾಗಿಯೂ 'ಒಣ(೦) ಉತ್ಸವ' ಎಂದೇ ಅನ್ನಬೇಕು! ಏಕೆಂದರೆ, ಬೆಂಗಳೂರಿನಲ್ಲಿ ಕನ್ನಡಿಗರಿಗೆ ಕನ್ನಡವೆಂದರೇ 'ಕತ್ತು+ಉರಿ'ಯಲ್ತೆ! - ಸಾಹಿತ್ಯ ಪರಿಷತ್ತಿನ ಕನ್ನಡ ಉತ್ಸವವೆಂದರೆ ಮೂಗು ಮುರಿಯುವ ಕನ್ನಡಿಗರೆಲ್ಲಾ, ಕೇರಳೀಯರ ಉತ್ಸಾಹದ ಪ್ರದರ್ಶನವನ್ನು ಟೌನ್ ಹಾಲ್‍ನ ಬಾಗಿಲಾಚೆ ನಿಂತು ಮಿಕ ಮಿಕ ನೋಡುತ್ತಾ, 'ಕೇರಳ ಪ್ರಾಣಾಯಾಮ' ಮಾಡುತ್ತಿದ್ದರೆಂಬುದು ನಿಜಕ್ಕೂ ದಿಟ! (೧೧-೯-೧೯೫೭) ಬೆಳಗಾವಿ-ಧಾರವಾಡ ಜಿಲ್ಲೆಗಳು ತನಗೇ ಸೇರಬೇಕೆಂದು ಮುಂಬಯಿ ಸರ್ಕಾರವು ಒತ್ತಾಯ ಮಾಡಿದೆಯೆಂಬ ಸುದ್ದಿ ನಿರಾಧಾರವೆಂಬುದಾಗಿ ಮುಂಬಯಿ ಸರ್ಕಾರ ತಿಳಿಸಿದೆ. - ಹಾಗಿದ್ದರಿನ್ನು ಕನ್ನಡಿಗರು ಎಂದಿನಂತೆ ಕುಂಭಕರ್ಣ ನಿದ್ರೆ ಹೊಡೆಯಬಹುದು, ಯಾವ ದುಹ್ಸ್ವಪ್ನದ ಆತಂಕವೂ ಇಲ್ಲದೆ! (೧೨-೯-೧೯೫೭) ಗೋವಾ ಬಗ್ಗೆ ಪೋರ್ಚುಗಲ್ ಅನುಸರಿಸುತ್ತಿರುವ ಮೊಂಡು ನೀತಿಯನ್ನು ನೋಡಿದರೆ ಇನ್ನು ಭಾರತೀಯರಿಗೆ ಉಳಿದಿರುವ ಒಂದೇ ಮಾರ್ಗವೆಂದರೆ, "ಗೋವಾಕ್ಕೆ GOವಾ (ಹೋಗುವಾ)" ಎಂದು ಸಾಮೂಹಿಕವಾಗಿ ಘೋಷಿಸುವುದೇ - ಎಂಬುದಾಗಿ ವಾಚಕರೊಬ್ಬರು ಸೂಚಿಸುತ್ತಾರೆ. - Amen! (೧೩-೯-೧೯೫೭) "ವಿಮೆ ಉದ್ಯಮದಲ್ಲಿ ದಕ್ಷಿಣ ವಲಯ ಮಿಕ್ಕೆಲ್ಲಾ ವಲಯಗಳಿಗಿಂತ ಮುಂದಿದೆ" ಎಂದು ಜೀವ ವಿಮೆ ಕಾರ್ಪೊರೇಷನ್ನಿನ ಅಧ್ಯಕ್ಷ ಶ್ರೀ ಜಿ.ಆರ್. ಕಾಮತ್‍ರವರು ಹೇಳಿದ್ದಾರೆ. - ಅಂದರೆ, ಸಾವಿನಲ್ಲಿ ದಕ್ಷಿಣ ಭಾರತದವರಿಗೆ ಅಷ್ಟೊಂದು ನಂಬಿಕೆ: 'ಜಾತಸ್ಯ ಮರಣಮ್ ಧ್ರುವಮ್'! ಆದರೆ, ಉತ್ತರ ಭಾರತದವರು ಎಷ್ಟೇ ಆಗಲಿ, ಲೆಕ್ಕಾಚಾರಸ್ಥರು: 'ಋಣಮ್ ಕೃತ್ವಾ ಘೃತಮ್ ಪಿಬೇತ್' ಎಂಬ ಚಾರ್ವಾಕ ಸಿದ್ಧಾಂತದವರು. - ಆದ್ದರಿಂದಲೇ, ಅವರು ಭವಿಷ್ಯತ್ತಿನ ವಿಪತ್ತಿನ ಬೆದರಿಕೆಯಲ್ಲಿ ಸದ್ಯ ಕೈಯ್ಯಲ್ಲಿನ ಪುಡಿಗಾಸನ್ನೂ ಕಳೆದುಕೊಳ್ಳಲು ದಕ್ಷಿಣದವರಂತೆ ಮುನ್ನುಗ್ಗರು! ವಿಮೆಯೊಂದು ಭ್ರಮೆ!

  • A Bird in Hand is worth
  • Two in the Bush!

*ಕನ್ನಡಿಯೊಳಗಿನ ಗಂಟಿನ

  • ಕನಸಿನ ಲೆಕ್ಕದಿ

*ನನಸಿನ ಹಣವನು

  • ಕಳೆಯುವುದೇಕೆ?

- ಎನ್ನುತ್ತಾರೆ, ಕಲ್ಲಿಗೆ ತಲೆ ಒಡ್ಡಿದರೂ ನುಚ್ಚು ನೂರಾಗದ ಭದ್ರ ಚಿಪ್ಪಿನ ಬುದ್ಧಿವಂತರು! (೧೪-೯-೧೯೫೭) ಥೈಲೆಂಡಿನಲ್ಲಿ ನಡೆಸಿರುವ ಅಲ್ಲೋಲ ಕಲ್ಲೋಲದ ವಿದ್ಯಮಾನಗಳನ್ನು ನೋಡಿದರೆ - " ಅದನ್ನು 'ಥಕ್ಕ-ಥೈ-ಲ್ಯಾಂಡ್' ಎಂದು ಕರೆಯಬಹುದಲ್ಲವೇ? ಎನ್ನುತ್ತಾರೆ, ಕಥಕ್ಕಳಿ ಅಭಿಮಾನಿಗಳೊಬ್ಬರು! - ತಥಾಸ್ತು! (೨೧-೯-೧೯೫೭) 'ಕನ್ನಡಿಗರೊಂದಿಗೆ ಸೋದರರಂತೆ ಬಾಳಿ' ಎಂಬುದಾಗಿ ಬೆಳಗಾವಿನ ಮಃಆರಾಷ್ಟ್ರೀಯರಿಗೆ ಮುಂಬಯಿ ಮುಖ್ಯಮಂತ್ರಿ ಶ್ರೀ ವೈ.ಬಿ.ಚವಾಣ್‍ರು ಸಲಹೆ ಮಾಡಿದ್ದಾರೆ. - ಸದ್ಯ, ಬೆಳಗಾಮ್ನ ಮಹಾರ್‍ಆಷ್ಟ್ರೀಯರಿಗೆ ಬುದ್ಧಿ ಹೇಳುವಂತಹ ಒಬ್ಬರಾದರೂ ಮಹಾರಾಷ್ಟ್ರೀಯರು ಇದ್ದಾರಲ್ಲಾ ಎಂದು ಸಂತೋಷ ಪಡಬೇಕಿದೆ! (೨೨-೯-೧೯೫೭) ಮೈಸೂರು ವಿಧಾನ ಸಭೆಯಲ್ಲಿ ಕನ್ನಡ, ಇಂಗ್ಲೀಷ್, ಮರಾಠಿ, ಉರ್ದು ಮತ್ತು ತೆಲುಗು - ಹೀಗೆ ಐದು ಭಾಷೆಗಳಲ್ಲಿ ಭಾಷಣಗಳಾದವಂತೆ. - ಐದು ರಾಜ್ಯಗಳ ಭಾಗಗಳು ಸೇರಿ ಹೊಸ ಮೈಸೂರಾಗಿರುವುದಕ್ಕೆ ಸರಿಯಾಗಿಯೇ ಇದೆಯ್ಲ್ಲಾ - ಈ ಭಾಷಾ ಮೇಲೋಗರ! - ಕನ್ನಡದ ಪ್ರಭಾವ ದಕ್ಷಿಣ ಕನ್ನಡದ್ದು, ಇಂಗ್ಲೀಷ್ ಪ್ರಭಾವ ಹಳೆಯ ಮೈಸೂರಿನದು, ಮರಾಠಿ ಪ್ರಭಾವ ಉತ್ತರ ಕರ್ಣಾಟಕದ್ದು, ಉರ್ದು ಪ್ರಭಾವ ಹೈದರಾಬಾದಿನದು, ತೆಲುಗು ಬಳ್ಳಾರಿಯದು - ಇವುಗಳೆಲ್ಲದರ ಕಲಸು ಮೇಲೋಗರವೇ ಹೊಸ - ಕಸಿವಿಸಿಯ ಮೈಸೂರು! (೨೯-೯-೧೯೫೭) "ಈ ಬಾರಿ ಅಹಿಂಸಾ ಮೂರ್ತಿ ಮಹಾತ್ಮ ಗಾಂಧಿಯವರ ಜನ್ಮದಿನೋತ್ಸವವೂ, ಹಿಂಸೆಯ ಮೂರ್ತಿ ಸ್ವರೂಪವಾದ ಆಯುಧಗಳ ಆರಾಧನೋತ್ಸವವೂ ಒಂದೇ ದಿನ ಸಂಧಿಸಿದುದು ಅಚ್ಚರಿಯಲ್ಲವೆ?" ಎಂದು ವಾಚಕರೊಬ್ಬರು ಬರೆಯುತ್ತಾರೆ! - ಬಾಯಿಯಲ್ಲಿ ಗಾಂಧೀ ತತ್ವ ಹೇಳಿಕೊಂಡು, ಕಾರ್ಯಾಚರಣೆಯಲ್ಲಿ ಆ ತತ್ವಗಳ ಕುತ್ತಿಗೆ ಕೊಯ್ಯುವಂತಹವರಿಗೆ ಅನುಕೂಲವಾಗಲೆಂದು ಒದಗಿ ಬಂದಿರಬೇಕು ಈ ಆಯುಧ ಪೂಜೆ! - ಅಥವಾ, ಗಾಂಧೀ ಹಿಂಬಾಲಕರು ಕಾಂಗ್ರೆಸ್ಸಿನಲ್ಲಿ ಅಥವಾ ಸರ್ಕಾರದಲ್ಲೀಗ ಝಳಪಿಸುತ್ತಿರುವ ಅಧಿಕಾರ ಲಾಲಸೆಯ ಎರಡಲುಗಿನ "ಆ ಹಿಂಸಾ"ಯುಧ ಪೂಜೆಯ ಅಗತ್ಯವನ್ನು ಅರುಹಲು ಈ ಅವಕಾಶ ಕೂಡಿ ಬಂದಿರಬೇಕು!(೫-೧೦-೧೯೫೭) ನಗರದ ಹಲವಾರು ಗೋಡೆಗಳ ಮೇಲೆ ಹಚ್ಚಿರುವ ಎರಡು ಚಲಚ್ಚಿತ್ರಗಳ ಪೋಸ್ಟರುಗಳನ್ನು ಒಟ್ಟಿಗೆ ಓದಿಕೊಂಡು ಹಲವು ಶಾಸನ ಸಭಾ ಸದಸ್ಯರುಗಳು ತಮ್ಮ ಮೇಲಿನ ಅಪಪ್ರಚಾರ ಅದೆಂದು ವಿನಾ ಕಾರಣ ಗಾಬರಿಗೊಂಡಿದ್ದಾರೆಂಬುದು ನಿಜವಲ್ಲವಂತೆ! - "ನೀಲಮಲೈ ತಿರುಡನ್" - "ಎಂ.ಎಲ್.ಎ" ಎಂಬುದಾಗಿ ಈ ಪ್ರತ್ಯೇಕ ಜಂಟಿ ಪೋಸ್ಟರುಗಳಲ್ಲಿ ಮುದ್ರಿತವಾಗಿದೆ! "ನೀಲಮಲೈ ತಿರುಡನ್"ಗೂ "ಎಂ.ಎಲ್.ಎ"ಗೂ ಸಂಬಂಧವಿರಲಿ-ಬಿಡಲಿ, ವಿಜಯ ದಶಮಿಯ ದಿನ ನಗರದ 'ಜೈ ಹಿಂದ್' ಟಾಕೀಸಿನಲ್ಲಿ "ತಿರುಡನ್" ಚಿತ್ರವನ್ನು ನೋಡಲು ನೂಕು ನುಗ್ಗಲಿನ ಉತ್ಸಾಹ ಸಮ್ಮರ್ದಕ್ಕೆ ಸಿಕ್ಕಿ ಗೋಡೆ ಉರುಳಿ ಟಾಕೀಸಿನ ಮ್ಯಾನೇಜರ್ ಮೃತಪಟ್ಟುದು ಚಲಚ್ಚಿತ್ರ ಪ್ರೇಮಿಗಳೆಲ್ಲರೂ ದುಹ್ಖ ಪಡುವ ಪ್ರಸಂಗ! - ಈ ದುರಂತದ ನಂತರವಾದರೂ ನಗರದ ಚಲಚ್ಚಿತ್ರ ಪ್ರೇಮಿ ಜನ ಕ್ಯೂಗಳಲ್ಲಿ ಶಾಂತವಾಗಿ ನಿಂತು, ಶಿಸ್ತಿನಿಂದ ನಡೆದು, ಅನಾಹುತಕ್ಕೆಡೆಯಿಲ್ಲದಂತೆ ಟಿಕೆಟ್ ಪಡೆದು, ಚಿತ್ರಗಳನ್ನು ನೋಡಿ ಆನಂದಿಸುವಂತಾದರೆ, ದಿವಂಗತ ಮ್ಯಾನೇಜರ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಿದಂತಾಗುವುದು! ಅಂತೂ ಈ ಪ್ರಸಂಗ "ಬೀಳು ಗೋಡೆಯ ಮರಣಂ" ಎಂಬ ಹೃದಯ ವಿದ್ರಾವಕ ಕನ್ನಡ ಚಿತ್ರಕ್ಕೆ ಕಥಾವಸ್ತುವಾದೀತೆಂದು ಥಿಯೇಟರ್ ವಲಯಗಳಲ್ಲಿ ಭಾವಿಸಲಾಗಿದೆ!(೮-೧೦-೧೯೫೭) ಶಿಕ್ಷಣ ಉಪಮಂತ್ರಿಗಳಿಗೆ ಕನ್ನಡ ಬಾರದಿರುವುದರಿಂದ, ವಿಧಾನ ಸಭೆಯಲ್ಲಿ ಇಂಗ್ಲೀಷ್ ಅರ್ಥವಾಗದ ಸದಸ್ಯೆಯೊಬ್ಬರಿಗೆ ಕನ್ನಡದಲ್ಲಿ ಉತ್ತರ ಕೊಡಲಾಗದೆ, ಸ್ಪೀಕರರೇ ಭಾಷಾಂತರ ಮಾಡಬೇಕಾಯಿತಂತೆ. - ಶಿಕ್ಷಣ ಉಪಮಂತ್ರಿಗಳ ಅಧಿಕಾರಾವಧಿ ಮುಗಿಯುವುದರೊಳಗಾಗಿ ಅವರಿಗೆ ಕನ್ನಡ ಬರುವಂತೆ ಶಿಕ್ಷಣ ಕೊಡಲು ಸರ್ಕಾರವು ತಕ್ಷಣ ಕೊಡಲು ಸರ್ಕಾರವು ತಕ್ಷಣ ಕ್ರಮ ಕೈಗೊಳ್ಳಬೇಕಲ್ಲವೆ? ಶಿಕ್ಷಣ ಮಂತ್ರಿಗಳೇ ಏಕೆ "Ten Easy Lessons in Kannada" ಪ್ರಾರಂಭಿಸ ಬಾರದು? (೧೦-೧೦-೧೯೫೭) ಬೇಗನೆ ದೊಡ್ಡ ದೊಡ್ಡ ಕೃತಕ ಚಂದ್ರಗಳನ್ನು (ಉಪಗ್ರಹ) ರಷ್ಯಾ ಬಿಡುವುದೆಂದು ಪ್ರಕಟಿಸಲಾಗಿದೆ. - ಪಾಪ, ಬಡ ಚಂದ್ರನ ಮೇಲೆ ಸ್ಪರ್ಧೆ ಮಾಡಿ ಏನು ಪ್ರಯೋಜನ? ..... ಒಂದು ಕೃತಕ ಸೂರ್ಯನನ್ನೇ ತಯಾರಿಸಿ, ಏಕೆ ಬಿಟ್ಟು ಬಿಡಬಾರದು? ನಗರದ 'ಫೇರ್ ಪ್ರೈಸ್' ಡಿಪೋ ಒಂದರಲ್ಲಿ ಅಕ್ಕಿಯ ಕಳ್ಳತನ ಆಗಿರುವ ಪ್ರಸಂಗ ತಮಗೆ ಕಂಡು ಬಂದಿದೆಯೆಂದು ಮೇಯರ್‌ರವರು ತಿಳಿಸಿದ್ದಾರೆ. - "Everything is fair in (Price) War and Love (for Rice)" ಎಂದುಕೊಂಡು ಈ ಕಳ್ಳತನ ನಡೆದಿರಬೇಕು! "ವಿಮಾನಗಳನ್ನೆಲ್ಲಾ ಇನ್ನು ಮ್ಯೂಸಿಯಂಗಳಲ್ಲಿಡಬೇಕು; ರಾಕೆಟ್‍ಗಳು ಅವುಗಳ ಸ್ಥಾನಗಳನ್ನಾಕ್ರಮಿಸಿವೆ" ಎಂದು ರಷ್ಯನ್ ನಾಯಕ ಕ್ರುಶ್ಚೇವ್ ಹೇಳಿದ್ದಾರೆ. - ಅಷ್ಟೇ ಅಲ್ಲ, ಈ ರಾಕೆಟ್ ವೇಗದಲ್ಲಿ ಪ್ರಗತಿಯಾಗಿರುವ ಬುದ್ಧಿಯುಳ್ಳವರನ್ನೆಲ್ಲಾ ಮಾತ್ರ ಜಗತ್ತಿನಲ್ಲಿಟ್ಟುಕೊಂಡು, ಉಳಿದ 'ಹಿಂದುಳಿದ' ಜನ ಕೋಟಿಯನ್ನೆಲ್ಲಾ ಕ್ರುಶ್ಚೇವ್‍ರ ಮ್ಯೂಸಿಯಂನಲ್ಲಿ ಇಡಬೇಕಾದ ಕಾಲ ಬಂದಿದೆ! - ಅಥವಾ ರಾಕೆಟ್ ವೇಗದ ಬುದ್ಧಿ ಬೆಳವಣಿಗೆಯವರನ್ನೆಲ್ಲಾ, ರಾಕೆಟ್ ಜತೆಗೆ ಕಟ್ಟಿ, ಕೃತಕ ಗ್ರಹಗಳ ಸಮೇತ ಚಂದ್ರ ಲೋಕಕ್ಕೋ ಕಳಿಸುವುದು, ಸಾಮಾನ್ಯ ಮಾನವರ ದೃಷ್ಟಿಯಿಂದ ಇದ್ದುದೂ ಒಳ್ಳೆಯದು! (೧೧-೧೦-೧೯೫೭) ರೈಲ್ವೇ ದೂರ ಪ್ರಯಾಣಿಕರಿಗೆ ಇಂಡಿಯನ್ ಕಾಫೀ ಬೋರ್ಡಿನ ರುಚಿಕರವಾದ ಕಾಫಿಯನ್ನು ಒದಗಿಸಲಾಗುವುದೆಂದು ತಿಳಿದು ಬಂದಿದೆ. - ಅಂದರೆ, ಮಧುರ ಕಾಫಿ ಬೇಕಾದವರೆಲ್ಲಾ, ಮನೆ ಬಿಟ್ಟು ದೂರದ ರೈಲ್ವೇ ಪ್ರಯಾಣ ಕೈಗೊಳ್ಳಬೇಕೆಂದಾಯಿತು!

  • - 'ದೂರ್ ಚಲೋ ದೂರ್ ಚಲೋ

*ದಖ್ಖನೀವಾಲಾ

  • Indian Coffee
  • ತುಂಹಾರಾ ಹೈ'||

- ಎಂಬುದಾಗಿ ಇನ್ನು ಮುಂದೆ ಕಾಫೀ ಪ್ರಿಯರು ಹಾಡಬಹುದು! "ಅಮೇರಿಕಾದಿಂದ ಹಣ ಸಹಾಯ ಸಂಪಾದಿಸಲು ತೆರಳಿದ್ದ ಶ್ರೀ ಟ್.ಟಿ.ಕೃಷ್ಣಮಾಚಾರಿಯವರ ಸಂಧಾನ ಏನಾಯಿತು?" ಎಂದು ಪ್ರಶ್ನಿಸುತ್ತಾರೆ, ವಾಚಕರೊಬ್ಬರು. - T.T.K. ಐಕ್ ಮತ್ತು ಡಲ್ಲೆಸ್‍ರ ಜತೆಯಲ್ಲಿ ಟೀ (ಕುಡಿಯುತ್ತಾ; ಪ್ರಪಂಚ ವಿದ್ಯಮಾನಗಳ) ಟೀಕೆ ಮಾಡಿಕೊಂಡು ಬಂದರು - ಎಂದು ಒಂದೇ ವಾಕ್ಯದಲ್ಲಿ ಸಾರಾಂಶ ಹೇಳಬಹುದು!(೧೩-೧೦-೧೯೫೭) ರಷ್ಯಾದ ಉಪಗ್ರಹವು ತನ್ನ "ಬೀಪ್-ಬೀಪ್" ಸಂಜ್ಞಾ ಪ್ರಸಾರವನ್ನು ನಿಲ್ಲಿಸಿದೆಯೆಂದು ಪ್ರಕಟಿಸಲಾಗಿದೆ. ಹಾಗಿದ್ದರೆ, ಅಮೆರಿಕಾವು ತನ್ನ `weep-weep' ಪ್ರತಿಕ್ರಿಯೆಯ ಪ್ರಸಾರವನ್ನೂ ಇನ್ನು ನಿಲ್ಲಿಸಬಹುದು! `ಸಾಹಿತಿಗಳು ಬಡವರಾಗಿರಲೇಬೇಕು; ಅವರ ದೇವತೆಯು ಹಣದಲ್ಲಿಲ್ಲ; ಸಾಹಿತಿಗಳು ಹಣಕ್ಕೆ ವಿರೋಧವಾಗಿದ್ದಾರೆ' ಎಂದು ಆಚಾರ್‍ಯ ವಿನೋಬಾರವರು ಸಾಹಿತಿಗಳ ಸಭೆಯಲ್ಲಿ ಹೇಳಿದರಂತೆ. - "ಸಾಹಿತಿ, ನೀ ಹೊಟ್ಟೆ ಬಟ್ಟೆಗಿಲ್ಲದೆ ಸಾಯಿತೀ" ಎಂಬ ಸೂತ್ರಕ್ಕೆ ಆಚಾರ್‍ಯರೂ ಅನುಮೋದನೆ ಕೊಟ್ಟಂತಾಯಿತು! (೧೭-೧೦-೧೯೫೭) ಅಮೆರಿಕಾಕ್ಕೆ ಮಾನವ ಕೂದಲನ್ನು ಅತ್ಯಧಿಕವಾಗಿ ಸರಬರಾಜು ಮಾಡುವ ರಾಷ್ಟ್ರಗಳಲ್ಲೊಂದಾಗಲು ಪಾಕಿಸ್ತಾನಕ್ಕೆ ಮಹದವಕಾಶ ದೊರೆತಿದೆಯೆಂದು ಕರಾಚಿಯ ವಾರ್ತೆ ತಿಳಿಸಿದೆ. - ಹಾಗಿದ್ದರೆ, ಇನ್ನು ಕೆಲವು ತಿಂಗಳಲ್ಲೇ ಪಾಕಿಸ್ತಾನದಲ್ಲಿ 'ದಾಡೀವಾಲಾ'ಗಳ ಸಂಖ್ಯೆ ಅರ್ಧಕ್ಕರ್ಧವಾದರೂ ಕಡಿಮೆ ಆಗುವುದೆಂದು ನಿರೀಕ್ಷಿಸಬಹುದು! - ದಕ್ಷಿಣ ಭಾರತದ ಜನರು ತಿರುಪತಿ ತಿಮ್ಮಪ್ಪನಿಗೆ ಮೂದಲು ಮುಡಿ ಕೊಡುವಂತೆ, ಪಾಕಿಸ್ತಾನದ ಜನತೆ ಅಮೆರಿಕಾದ ಹಣಮಂತಪ್ಪನಿಗಿನ್ನು ದಾಡೀ ಒಪ್ಪಿಸಬಹುದು! - `Don't worry about BREAD, if only you can grow more BEARD' ಎಂಬುದು ಪಾಕಿಸ್ತಾನಿಗಳಿಗೆ Uncle Samನ ಸಮಾಧಾನ! - ದಾಡೀವಾಲಾ ಜಿಂದಾಬಾದ್! (೧೮-೧೦-೧೯೫೭)

ತಾಯಿನಾಡು : ಪುಸ್ತಕ ವಿಮರ್ಶೆ[ಬದಲಾಯಿಸಿ]

  • ತಾಯಿನಾಡು ಹಾಗೂ ಸೋದರ ವಾರಪತ್ರಿಕೆ ಚಿತ್ರಗುಪ್ತಗಳಿಗೆ ಹೆಚ್.ಆರ್.ನಾಗೇಶರಾವ್ `ಪುಸ್ತಕಪ್ರಿಯ' ಹೆಸರಿನಲ್ಲಿ ಗ್ರಂಥವಿಮರ್ಶೆ ಮಾಡುತ್ತಿದ್ದರು. (ಕೈಹೊತ್ತಿಗೆಗಳ ಮಹಾಪೂರವಿದ್ದ ಐವತ್ತರ ದಶಕ ಕನ್ನಡ ಸಾಹಿತ್ಯಕ್ಕೆ ಸಮೃದ್ಧ ಕಾಲ. ಹತ್ತಾರು ವಿವಾದಗಳ ನಡುವೆ ಪ್ರಧಾನವಾಗಿ ಚರ್ಚಿತವಾದ ಕೃತಿಗಳೆಂದರೆ ಕಾದಂಬರಿ ಸಾರ್ವಭೌಮ ಅನಕೃ ಅವರ ‘ಶನಿಸಂತಾನ’, `ಸಂಜೆಗತ್ತಲು' ಮತ್ತು ‘ನಗ್ನಸತ್ಯ’ ಕೃತಿಗಳು.
  • ಈ ಬಗ್ಗೆ ಮನನೊಂದು ಅನಕೃ ಬರೆದ ‘ಸಾಹಿತ್ಯ ಮತ್ತು ಕಾಮ ಪ್ರಚೋದನೆ’ ಕೃತಿಯ ವಿಮರ್ಶೆಯನ್ನು ‘ಪುಸ್ತಕಪ್ರಿಯಹೆಚ್.ಆರ್.ನಾಗೇಶರಾವ್ ಅವರು ‘ತಾಯಿನಾಡು’ವಿನ ‘ಪ್ರಕಟಣ ಪ್ರಪಂಚ’ ಅಂಕಣದಲ್ಲಿ ಬರೆದಿದ್ದರು. ಅದರ ಪೂರ್ಣಪಾಠ ಇಂತಿದೆ.) ವಿಮರ್ಶಾ ಪ್ರಚೋದನೆಯಿಂದ ಬರೆದ ‘ಸಾಹಿತ್ಯ ಮತ್ತು ಕಾಮ ಪ್ರಚೋದನೆ’ (ಲೇಖಕರು: ಶ್ರೀ ಅ.ನ.ಕೃಷ್ಣರಾವ್, ಪ್ರಕಾಶಕರು: ವಾಹಿನಿ ಪ್ರಕಾಶನ, ಜಯಚಾಮರಾಜ ರಸ್ತೆ, ಬೆಂಗಳೂರು - ೨, ಬೆಲೆ ರೂ.೩-೦-೦)
  • ಕರ್ನಾಟಕದ ಪ್ರಖ್ಯಾತ ಲೇಖಕರಾದ ಶ್ರೀ ಅ.ನ.ಕೃಷ್ಣರಾಯರು ಇತ್ತೀಚೆಗೆ ಪ್ರಕಟಿಸಿದ ಹಲವು ಕಾದಂಬರಿಗಳ ಮೇಲೆ ಕೆಲವು ವ್ಯಕ್ತಿಗಳೂ, ವಿಮರ್ಶಕರೂ, ಸಾಹಿತಿಗಳೂ, ಸಂಸ್ಥೆಗಳೂ ಮತ್ತು ಪತ್ರಿಕೆಗಳೂ ಪ್ರಕಟಿಸಿದ ಕಟು ವಿಮರ್ಶೆಗಳಿಂದ ಪ್ರಚೋದಿತರಾಗಿ ಶ್ರೀ ಕೃಷ್ಣರಾಯರು ಪ್ರಕಟಿಸಿರುವ ಉತ್ತರ ರೂಪದ ಪುಸ್ತಕವೇ ಈ ‘ಸಾಹಿತ್ಯ ಮತ್ತು ಕಾಮ ಪ್ರಚೋದನೆ’. ಸ್ವಕೀಯ ಹಿನ್ನೆಲೆ-ಪ್ರಸ್ತಾಪಗಳಿಲ್ಲದೇ ಈ ಪುಸ್ತಕವು ಬಂದಿದ್ದರೆ ಅದನ್ನು ಕನ್ನಡ ಸಾಹಿತ್ಯದ ಒಂದು ಪ್ರಮುಖ ಮುಖದ ಉಪಯುಕ್ತ ಸಂಶೋಧನಾ ಗ್ರಂಥವೆನ್ನಬಹುದಾಗಿತ್ತು.
  • ಕಹಿ ಮಾತುಗಳಿಲ್ಲದೇ ಈ ಪುಸ್ತಕ ಹೊರಬಿದ್ದಿದ್ದರೆ, ಶ್ರೀ ಅ.ನ.ಕೃಷ್ಣರಾಯರ ಟೀಕಾಕಾರರೂ ಕೂಡಾ ಅವರ ವಾದಸರಣಿಯನ್ನು ವಿರಸವಿಲ್ಲದೆ ಮನಸ್ಸಿಗೆ ತೆಗೆದುಕೊಳ್ಳಬಹುದಾಗಿತ್ತು. ಈ ವಿವರಣೆಯ ಹಿಂಬದಿಯಲ್ಲಿ ತಮ್ಮ ಹಿಂದಿನ ವಿಮರ್ಶೆಗಳನ್ನೇ ಪುನರ್ವಿಮರ್ಶೆ ಮಾಡುವ ಮನೋಪರಿವರ್ತನೆ ಕೂಡಾ ಆಗುತ್ತಿತ್ತೋ ಏನೋ! ಆದರೆ, ಎರಡೂ ಕಡೆಗಳಿಂದಲೂ ಬಂದಿರುವ ಅಸಹನೆಯ ಮಾತುಗಳು, ಕನ್ನಡ ಸಾಹಿತಿಗಳಿಗೇ ಆಗಲಿ ವಿಮರ್ಶಕರಿಗೇ ಆಗಲಿ ಭೂಷಣ ತರುವುದಿಲ್ಲ.
  • ಶ್ರೀ ಅ.ನ.ಕೃಷ್ಣರಾಯರು ಇಂದು ತಮ್ಮ ಟೀಕಾಕಾರರನ್ನು ದೂರುವ ಮೊದಲು, ಹಲವು ವರ್ಷಗಳ ಹಿಂದೆ ತಾವೇ ಇತರ ಸಾಹಿತಿಗಳ ಮೇಲೆ ಪ್ರಾರಂಭಿಸಿದ ‘ಪ್ರಗತಿಶೀಲ’ ಚಳವಳಿಯ ದಿನಗಳನ್ನು ಸ್ಮರಣೆಗೆ ತೆಗೆದುಕೊಳ್ಳಬೇಕು. ‘ಪ್ರಗತಿ’ ಅಥವಾ ‘ಪ್ರತಿಗಾಮಿ’ ಎಂಬುದು ಹೆಸರು ಹಿಡಿದು ಕರೆದುಕೊಳ್ಳುವುದರಿಂದ ಆಗುವುದಿಲ್ಲ. ‘ಪ್ರಗತಿಶೀಲ ಸಾಹಿತಿ’ ಎಂಬ ಹೆಸರಿಟ್ಟುಕೊಂಡಾತನು ಬರೆದಿದ್ದೆಲ್ಲಾ ಪ್ರಗತಿಶೀಲವಾಗುವುದಿಲ್ಲ ಅಥವಾ ಪ್ರಗತಿಶೀಲನೆಂಬ ಚೀಟಿ ಅಂಟಿಸಿಕೊಳ್ಳದಿದ್ದಾತನು ಬರೆದಿದ್ದೆಲ್ಲಾ ಪ್ರತಿಗಾಮಿಯೂ ಅಲ್ಲ.
  • ಈ ರೀತಿಯ ಭೇದ ವಿಂಗಡಣೆಗಳು ಕೋಮುವಾರು ವಿಂಗಡಣೆಗಳಿಗಿಂತ ಸಂಕುಚಿತವಾದವು. ಹುರುಳಿಲ್ಲದವು. ಪ್ರಗತಿಶೀಲರಾಗಬಯಸುವ ಪ್ರತಿಯೊಬ್ಬರೂ ಈ ಮಾತನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಶ್ರೀ ಅ.ನ.ಕೃಷ್ಣರಾಯರ ಈ ವಿಮರ್ಶಾ ಗ್ರಂಥಕ್ಕೆ ಕಾರಣವಾಗಿರುವ ಖಂಡನೆಗಳು, ಅವರ ದೃಷ್ಟಿಯಲ್ಲಿ ಪ್ರಗತಿಶೀಲರಲ್ಲವೆಂದು ಕಂಡು ಬಂದಿದ್ದಂತಹ ಸಾಹಿತಿ ವ್ಯಕ್ತಿಗಳಿಂದ ಬಂದಿರುವುದಕ್ಕಿಂತಲೂ ಹೆಚ್ಚಾಗಿ, ಅವರ ರೀತಿಯಲ್ಲೇ ಪಂಥೀಕರಣ ವಿಂಗಡಣೆ ಮಾಡುತ್ತಿರುವವರಿಂದಲೇ ಬಂದಿರುವುದನ್ನು ಸ್ಪಷ್ಟವಾಗಿ ಕಾಣಬಹುದು.
  • ಈ ಟೀಕಾಕಾರರು ಶ್ರೀ ಕೃಷ್ಣರಾಯರಿಗಿಂತ ತಾವು ಪುರೋಗಾಮಿಗಳೆಂದು ಭಾವಿಸಿಕೊಂಡಿದ್ದಾರೆ. ಆದರೆ ಈ ಬಗೆಯ ಸಾಹಿತ್ಯದಲ್ಲಿನ ‘ಪ್ರಗತಿಶೀಲತೆ-ಪುರೋಗಾಮಿತನಗಳ’ ಸ್ಪರ್ಧೆಯಿಂದಾದ ವೈಷಮ್ಯಪೂರಿತ ವಾಗ್ಯುದ್ಧ ಸಾಹಿತ್ಯದ ಬೆಳವಣಿಗೆಗೆ ಶ್ರೇಯಸ್ಕರವಲ್ಲ. ತಮ್ಮ ರೀತಿಯ ಪಂಥೀಯವಾದಿಗಳಿಂದಲೇ ಎದುರಿಸಲ್ಪಟ್ಟ ಮೇಲಾದರೂ ಶ್ರೀ ಅ.ನ.ಕೃಷ್ಣರಾಯರು ‘ಇದು ಬೇಕು-ಅದು ಬೇಡ ಎನ್ನುವುದಾಗಲಿ, ಇದು ಶ್ಲೀಲ ಅದು ಅಶ್ಲೀಲವೆನ್ನುವುದಾಗಲಿ ಇಂದಿನ ಸಾಹಿತಿಯ, ಸಾಹಿತ್ಯ ಪ್ರೇಮಿಯ ಕೆಲಸವಲ್ಲ.
  • ಕನ್ನಡದ ಬೆಳೆಯನ್ನು-ಅದು ಏನೇ ಆಗಿರಲಿ-ಹೆಚ್ಚಿಸಬೇಕಾದುದು ನಮ್ಮೆಲ್ಲರ ಕರ್ತವ್ಯ. ಜಳ್ಳನ್ನು ತೂರಿ ಕಾಳನ್ನು ಉಳಿಸಿಕೊಳ್ಳಬೇಕಾದುದು ನಮ್ಮ ಮುಂದಿನ ಪೀಳಿಗೆಯವರ ಕೆಲಸ. ಜರಡಿಯಾಡುವ ಕೆಲಸವನ್ನು ಕಾಲವೇ ನಿರ್ವಹಿಸುವಾಗ ನಾವು ತೊಂದರೆಪಟ್ಟುಕೊಳ್ಳಬೇಕಾದ ಅಗತ್ಯ ಇಲ್ಲ’ ಎಂಬ ಸಿದ್ಧಾಂತಕ್ಕೆ (ಪುಟ ೨೯೩, ಉಪಸಂಹಾರ) ಬಂದಿರುವುದು ಸಮಾಧಾನಕರ ವಿಷಯ. ಈ ಸೂತ್ರವನ್ನು ನಮ್ಮ ಎಲ್ಲಾ ಬಗೆಯ ಸಾಹಿತಿಗಳೂ ವಿಮರ್ಶಕರೂ ಗ್ರಹಿಸಿ ನಡೆದಲ್ಲಿ ಸಾಹಿತ್ಯ ತಾನಾಗಿಯೇ ಮುನ್ನಡೆಯುವುದು.
  • ತಲೆಚೀಟಿಯನ್ನೂ ಅಂಟಿಸುವ ಅವಶ್ಯಕತೆಯಿಲ್ಲದೆ ತಾನಾಗಿಯೇ ಪ್ರಗತಿಶೀಲ-ಪುರೋಗಾಮಿಯಾಗುವುದು. ಸಾಹಿತ್ಯ ರಚಿಸುವುದು ಸಾಹಿತಿಯ ಕರ್ತವ್ಯ. ಅದನ್ನು ಓದುವುದು, ಬಿಡುವುದು, ಆರಿಸುವುದು, ವಿಂಗಡಿಸುವುದು ಓದುವ ಜನತೆಯ ಕರ್ತವ್ಯ. ಜನತೆಯು ತಮ ತಮಗೆ ಬೇಕಾದ ರೀತಿಯ ಸಾಹಿತ್ಯ ಗ್ರಂಥಗಳನ್ನು ಓದುತ್ತಾರೆ. ತಮ್ಮ ಅಭಿರುಚಿಗೆ ಸಲ್ಲದ ಅಥವಾ ಸೇರದ ಗ್ರಂಥಗಳನ್ನು ದೂರೀಕರಿಸುತ್ತಾರೆ.
  • ಸಾಹಿತ್ಯ ನಿರ್ಮಾಣವು ಅಥವಾ ವಾಚನವು ಕೇವಲ ಅ.ನ.ಕೃಷ್ಣರಾಯರು ಅಥವಾ ಅವರ ಕಟು ಟೀಕೆಗೆ ಒಳಗಾಗಿರುವ ನಿರಂಜನರಿಗೆ ಮಾತ್ರ ಸೇರಿದ್ದಲ್ಲ, ಅಥವಾ ಅವರಿಬ್ಬರ ದೃಷ್ಟಿಯಲ್ಲೂ ಪ್ರತಿಗಾಮಿಗಳಾದಂತಹವರ ಗುತ್ತಿಗೆಯೂ ಅಲ್ಲ. ಪ್ರತಿಯೊಬ್ಬ ಸಾಹಿತಿಗೂ ಒಂದೊಂದು ಬಗೆಯ ಪ್ರಾವೀಣ್ಯತೆ, ಗ್ರಂಥ ರಚನಾ ನೈಪುಣ್ಯ, ನಿರೂಪಣಾ ಚತುರತೆ, ವಿಶಿಷ್ಟ ಶೈಲಿಗಳಿವೆ. ತನಗೆ ಸರಿತೋರಿದ್ದನ್ನು ಆಯಾ ಸಾಹಿತಿ ನಿರ್ಮಿಸುತ್ತಾ ಹೋಗುವುದರಲ್ಲಿ ಯಾವ ಆತಂಕವೂ ಇರಬಾರದು.
  • ಸಾಹಿತ್ಯದ ಸೆನ್ಸಾರ್‌ಷಿಪ್ಪನ್ನೂ ಸಾಹಿತಿಗಳೇ ತಮ್ಮ ಕೈಗೆ ತೆಗೆದುಕೊಳ್ಳುವುದನ್ನು ಬಿಟ್ಟು ಆ ಹಕ್ಕಿನ ನಿಜ ಅಧಿಕಾರಿಗಳಾದ ಜನಸಾಮಾನ್ಯರಿಗೆ ವಹಿಸಿಕೊಡಬೇಕು. ಜನತೆಯನ್ನು ಉದ್ಧಾರ ಮಾಡುವುದಕ್ಕಾಗಿ ಗ್ರಂಥಗಳನ್ನು ರಚಿಸುತ್ತೇವೆಂಬ ಘೋಷಣೆ-ಪ್ರಚಾರಗಳನ್ನು ಮಾಡಿಕೊಂಡು ಸಾಹಿತ್ಯ ರಚನೆಗೆ ಕೈಹಾಕುವುದು ನಿಲ್ಲಬೇಕು, ತನಗೆ ಹೊಳೆದ ಭಾವನೆಗಳನ್ನೂ ತತ್ವಗಳನ್ನೂ ತಿಳಿಸುವುದಷ್ಟೇ ತನ್ನ ಕೆಲಸ.
  • ತನ್ನ ಕಲಾ ಚಾತುರ್ಯಯ ಹಾಗೂ ವೃತ್ತಿ, ಜನ ಮೆಚ್ಚಿದರೆ ಸಂತೋಷ, ಸಮಾಜವನ್ನು ತಿದ್ದುವುದಕ್ಕೆ ಅದರಿಂದ ಸಹಾಯವಾಗುವುದೆಂದು ಜನತೆಯೇ ಕಂಡು ಕೊಂಡರೆ ತಾನು ಪಟ್ಟ ಶ್ರಮಕ್ಕೂ ಸಾರ್ಥಕ-ಎಂಬ ಸಮಾಧಾನ ಮನೋಭಾವ ಸಾಹಿತಿಗೆ ಬರಬೇಕು. ಸಮಾಜದ ಯಾವುದೇ ಮುಖದ ವಾಸ್ತವ ಯಥಾರ್ಥ ಚಿತ್ರಣದಿಂದಲೇ ಸಮಾಜ ತಿದ್ದಲಾಗುವುದೋ ಇಲ್ಲವೋ ಹೇಳಲು ಸಾಧ್ಯವಿಲ್ಲ. ಯಾಥಾರ್ಥ ಚಿತ್ರಣ ಕೆಲವರ ಮನಸ್ಸಿನ ಮೇಲೆ ಪರಿಣಾಮ ಮಾಡಬಹುದು, ಕೆಲವರನ್ನು ತಿದ್ದಬಹುದು, ಮತ್ತೆ ಕೆಲವರನ್ನು ಕೆಡಿಸಲೂ ಬಹುದು.
  • ಕೆಲವರ ದುಶ್ಚಾಳಿಗೆ ನಿರೋಧವಾಗಬಹುದು. ಕೆಲವರಿಗೆ ಪ್ರಚೋದಕವಾಗಬಹುದು. ಕೆಲವರು ಮನಸ್ಸಿನಲ್ಲಿ ಆನಂದಿಸಿ, ಹೊರಗಡೆ ವಿಪರೀತ ನೈತಿಕತೆಯನ್ನು ಪ್ರಕಟಿಸಬಹುದು. ಮತ್ತೆ ಕೆಲವರು ‘ಇಂಗ್ಲಿಷಿನಲ್ಲಾಗಿದ್ದರೆ ಪರವಾಗಿಲ್ಲ, ಕನ್ನಡದಲ್ಲಿ ಮಾತ್ರ ಸಲ್ಲದು’ ಎಂಬ ರೀತಿಯ ತೆರೆಯನ್ನು ಎಳೆದರೂ ಎಳೆಯಬಹುದು. ಇನ್ನೂ ಅನೇಕರು ಅಂತಹ ಚಿತ್ರಗಳನ್ನೇ ಬಹಿಷ್ಕರಿಸಿದರೂ ಬಹಿಷ್ಕರಿಸಬಹುದು, ಓದುಗರ ಅಭಿರುಚಿ-ಸಂಸ್ಕೃತಿ ಮನೋಭಾವಗಳಿಗೆ ತಕ್ಕಂತೆ ಗ್ರಂಥಗಳೂ ಮೆಚ್ಚಲ್ಪಡುವುವು ಅಥವಾ ತಿರಸ್ಕರಿಸಲ್ಪಡುವುವು.
  • ಆರ್ಥಿಕ ಪರಿಗಣನೆಯೊಂದಿಲ್ಲದಿದ್ದರೆ, ಸಾಹಿತಿ ತನ್ನ ಮೇಲಿನ ವಿಮರ್ಶೆಗಳಿಗೆ ಹೆದರದೆ, ನಿರಾತಂಕವಾಗಿರಬಹುದು, ನಿರಾತಂಕವಾಗಿರಬಹುದು. ವಿಮರ್ಶೆಗಳಿಗೆ ಬೆಲೆ ಕೊಡುವುದಾದರೆ ಪ್ರಶಂಸೆ, ಖಂಡನೆಗಳಿಗೆ ಮನಸೋಲಬಾರದು, ಹಾಗಿಲ್ಲದಿದ್ದರೆ ವಿಮರ್ಶೆಗಳನ್ನೇ ಬಯಸಬಾರದು. ಸಾಹಿತಿಗೆ ಪ್ರಿಯವಾಗುವಂತಹ ವಿಮರ್ಶೆಯನ್ನೇ ವಿಮರ್ಶಕರು ಕೊಡುತ್ತಾ ಹೋಗಬೇಕಾದರೆ, ವಿಮರ್ಶೆಗೆ ಅರ್ಥವಾದರೂ ಏನು?

ಸಾಹಿತ್ಯ ಮತ್ತು ಜೀವನ[ಬದಲಾಯಿಸಿ]

  • ಸಾಹಿತ್ಯ ಮತ್ತು ಜೀವನ’ ಎಂಬ ಮಾಲೆಯ ನಾಲ್ಕನೆಯ ಪುಸ್ತಕವೆಂದು ಪರಿಗಣಿಸಿ ‘ಸಾಹಿತ್ಯ ಮತ್ತು ಕಾಮ ಪ್ರಚೋದನೆ’ಯನ್ನು ಪರಿಗಣಿಸುವುದಾದರೆ, ಇದೊಂದು ಶ್ರಮಸಾಧ್ಯವಾದ ಸಾಹಿತ್ಯ ಸಂಗ್ರಹವೆಂದೇ ಕರೆಯಬೇಕು. ಹಳೆಗನ್ನಡ-ಹೊಸಗನ್ನಡ ಸಾಹಿತ್ಯವನ್ನೆಲ್ಲಾ ಪರಿಶೋಧಿಸಿ ಶ್ರೀ ಅ.ನ.ಕೃಷ್ಣರಾಯರು ಕಾಮ ಪ್ರಚೋದನಾ ಪ್ರಸ್ತಾಪಗಳನ್ನೂ, ವರ್ಣನೆಗಳನ್ನೂ ಗದ್ಯ-ಪದ್ಯ-ನಾಟಕ-ಸಂಭಾಷಣೆಗಳಿಂದೆಲ್ಲಾ ಆಯ್ದು ಕೊಟ್ಟಿದ್ದಾರೆ.
  • ಆರು ಪುಟಗಳ ತುಂಬಾ ಆಕ್ರಮಿಸಿರುವ ಪಟ್ಟಿಯಲ್ಲಿರುವ ಸುಮಾರು ೨೦೦ ಉಪಯುಕ್ತ ಇಂಗ್ಲಿಷ್, ಕನ್ನಡ, ತೆಲುಗು ಗ್ರಂಥಗಳನೆಲ್ಲಾ ಆಳವಾಗಿ ಪರಿಶೋಧಿಸಿ ಮಹಾ ವಿಚಾರವಂತರ ಅಭಿಪ್ರಾಯ ಸರಣಿಯನ್ನೆಲ್ಲಾ ಓದುಗರ ಮುಂದಿಟ್ಟು ವಿಮರ್ಶಿಸಿದ್ದಾರೆ. ‘ಹಿಂದಿನವರು ಕಾಮ ಪ್ರಚೋದನೆ ಮಾಡಿಲ್ಲವೆ? ಇಂದಿನವರು ಮಾಡಿದಲ್ಲವೆ? ಮತಗಳು ಮಾಡಿಲ್ಲವೆ? ಸಾಹಿತ್ಯವು ಮಾಡಿಲ್ಲವೆ? ನಮ್ಮ ಸಮಾಜವೇ ಮಾಡಿಲ್ಲವೆ?’ ಮುಂತಾಗಿ ಎತ್ತಿ ತೋರಿಸಿ, ಆ ರೀತಿ ಮಾಡಲು ತಮಗೂ ಹಕ್ಕುಂಟೆಂಬುದನ್ನು ಸ್ಥಾಪಿಸಿದ್ದಾರೆ.
  • ಹಾಗೆ ಮಾಡಿದುದರಲ್ಲಿ ತಪ್ಪೇನೂ ಇಲ್ಲವೆಂದು ವಾದಿಸಿದ್ದಾರೆ. ಅವರ ವಾದವನ್ನು ನಾವು ಒಪ್ಪಬಹುದು, ಬಿಡಬಹುದು; ಆದರೆ ಇರುವ ನಿಜಾಂಶವನ್ನು ಗ್ರಹಿಸಲು ಅಡ್ಡಿಯೇನಿಲ್ಲ. ಶ್ರೀ ಅ.ನ.ಕೃಷ್ಣರಾಯರ ಮತ್ತು ಅವರ ಸಾಹಿತ್ಯದ ಅಭಿಮಾನಿಗಳೂ ವಿರೋಧಿಗಳೂ ಜತೆಗೆ ವಿಮರ್ಶಕ ಬಾಂಧವರೂ ಅಗತ್ಯವಾಗಿ ಓದಬೇಕಾಗುದುದು ಈ ಗ್ರಂಥ. ಶ್ರೀ ಅ.ನ.ಕೃಷ್ಣರಾಯರು ತಮ್ಮ ವಿಮರ್ಶಕರ ಮೇಲೆ ಸಿಟ್ತಿಗೆದ್ದರೂ ಪರವಾಗಿಲ್ಲ. ಇಂತಹ ವಿದ್ವತ್ಪೂರ್ಣ ಗ್ರಂಥ ನಿರ್ಮಿಸಿದುದಕ್ಕಾಗಿ ಅಭಿನಂದಿಸುತ್ತೇವೆ.
  • ಆರ್ಥಿಕ ದೃಷ್ಟಿಯಿಂದ ಅಷ್ಟು ಲಾಭದಾಯಕವಾಗದಿದ್ದರೂ, ಕನ್ನಡ ಸಾಹಿತ್ಯದ ಒಂದು ಮುಖದ ಸಿಂಹಾವಲೋಕನಕ್ಕೆ ಸಹಾಯಕವಾಗಲೆಂದು ಈ ಗ್ರಂಥವನ್ನು ಪ್ರಕಾಶಿಸಿರುವ ‘ವಾಹಿನಿ ಪ್ರಕಾಶನ’ದವರ ಧೈಯ ಸಾಹಸ ಮೆಚ್ಚಬೇಕಾದುದೇ. ಸಾಹಿತ್ಯದಲ್ಲಿನ ಈ ಕುರುಕ್ಷೇತ್ರ ನೋಡಿದ ಮೇಲೆ, ಯಾರಾದರೂ ‘ಸಾಹಿತ್ಯ ಮತ್ತು ಸಹನೆ’ ಎಂಬ ಗ್ರಂಥ ಬರೆದಲ್ಲಿ ನಾಡಿಗೂ ಸಾಹಿತ್ಯಕ್ಕೂ ಉಪಕಾರವಾದೀತು! [14-9-1952]

ರಂಗಮ್ಮನ ವಠಾರ[ಬದಲಾಯಿಸಿ]

(ಕಾದಂಬರಿ. ಲೇಖಕರು: ಶ್ರೀ ‘ನಿರಂಜನ’, ಪ್ರಕಾಶಕರು: ವಾಹಿನಿ ಪ್ರಕಾಶನ, ಜಯಚಾಮರಾಜ ರಸ್ತೆ, ಬೆಂಗಳೂರು-2, ಬೆಲೆ: ಒಂದೂವರೆ ರೂಪಾಯಿ)

  • "ವಠಾರ ಜೀವನವೆಂದರೆ ‘ಗಟಾರ’ ಜೀವನವಲ್ಲ" ಎಂಬುದನ್ನು ಬಿತ್ತರಿಸುವ ಶ್ರೇಷ್ಠ ಕೃತಿ, ಈ 274 ಪುಟಗಳ ಕೈ ಹೊತ್ತಿಗೆ. ಬೆಂಗಳೂರಿನಂತಹ ನಗರದಲ್ಲಿ, ಮಧ್ಯಮ ವರ್ಗದ ಜನರು ವಸತಿಗಾಗಿ ‘ಕಡಿಮೆ’ ಬಾಡಿಗೆಯ ವಠಾರಗಳನ್ನು ಅವಲಂಬಿಸಿ, ಎಂತಹ ಕಷ್ಟಗಳನ್ನೂ ನುಂಗಿ ಕೊಂಡು ಜೀವನ ನಡೆಸುತ್ತಿರುವುದನ್ನು ನಿರಂಜನರು ಹೃದಯಂಗಮವಾಗಿ ವಿವರಿಸಿದ್ದಾರೆ.
  • ಇಂತಹ ದುರ್ಭರ ಸ್ಥಿತಿಯಲ್ಲೂ ಜೀವನದ ಕಹಿಯನ್ನು ಮರೆತು ತಮ್ಮ ಪ್ರೇಮದ ಬಾಳ್ವೆಯಿಂದ, ವಿನೋದ ರಸಿಕತೆಯಿಂದ ವಾತಾವರಣವನ್ನೇ ಆಹ್ಲಾದಗೊಳಿಸಬಹುದೆಂಬುದಕ್ಕೆ ಉತ್ತಮ ನಿದರ್ಶನವಾಗಿ ಬರುತ್ತಾರೆ, ಚಂಪಾವತಿ ಮತ್ತು ಶಂಕರನಾರಾಯಣರಾಯರು. ವಠಾರ ಜೀವನವನ್ನು ವಿಷಮಯವಾಗಿ ಮಾಡಲು ಪ್ರಯತ್ನಿಸುವ ಪಾತ್ರಗಳೂ ಇಲ್ಲದೇ ಇಲ್ಲ. ಎಂತಹ ದ್ವೇಷವಿದ್ದರೂ ಸಾವಿನ ಮುಂದೆ ಮತ್ತು ಸಾರ್ವತ್ರಿಕ ಗಂಡಾಂತರದ ಮುಂದೆ ಮರೆತು ವಿಶಾಲ ಹೃದಯವನ್ನು ತೋರುವ ವ್ಯಕ್ತಿಗಳೂ ಇಲ್ಲಿ ಚಿತ್ರಿತವಾಗಿದ್ದಾರೆ;
  • ಕೊಡ ನೀರಿಗಾಗಿ ಮತ್ತು ಒಂದು ನಿಮಿಷ ಮುಂಚಿತವಾಗಿ ನೀರು ಹಿಡಿಯುವುದಕ್ಕಾಗಿ ಕಚ್ಚಾಡುವ ‘ಮಹಾರಾಯಿತಿ’ಯರೂ ಇದ್ದಾರೆ. ವಠಾರ ಜೀವನದಲ್ಲಿ ನಿಜ ಪ್ರೇಮ ಹುಟ್ಟುತ್ತದೆ; ಕಾಮ ತಲೆದೋರುತ್ತದೆ. ದ್ವೇಷ ಅಸೂಯೆಗಳು ಕೆರಳುತ್ತವೆ; ಸರಸ ವಿರಸವಾಗುತ್ತದೆ; ಸುಸಂಸ್ಕೃತ ರೂ ಅನಾಗರಿಕರೂ ಒಟ್ಟಿಗೆ ಬಾಳ ಬೇಕಾಗುತ್ತದೆ. ಮಾನವತೆಯ ಭಿನ್ನ ಭಿನ್ನ ವಿಭಾಗಗಳನ್ನು ಮತ್ತು ಪ್ರಕೃತಿ ವಿಶೇಷಗಳನ್ನಿಲ್ಲಿ ಕಾಣಬಹುದಾಗಿದೆ. ಚಿಕ್ಕ ಜಗತ್ತನ್ನೇ ನೋಡಬಹುದಾಗಿದೆ.
  • ಕೇವಲ ಬಾಡಿಗೆ ಆಸೆಯ ಮನೆಯೊಡತಿ ರಂಗಮ್ಮನಲ್ಲೂ ಮಾನವೀಯ ಅನುಕಂಪ, ಸಹಾನುಭೂತಿ, ಸುಖದ ಹಾರೈಕೆ ಮತ್ತು ಕಷ್ಟ ಕಾಲದಲ್ಲಿ ನೆರವಾಗುವ ಬುದ್ಧಿ ಇರುವುದೆಂಬುದನ್ನೂ ಲೇಖಕರು ತೋರಿಸಿದ್ದಾರೆ. ವಠಾರ ಜೀವನದಲ್ಲಿ ಎಲ್ಲ ಬಗೆಯ ಜನರ ಪ್ರತಿಬಿಂಬವನ್ನೂ ಕಾಣ ಬಹುದಾಗಿದೆ. ಈ ಸಂಗ್ರಹಾರ್ಹ ಕಾದಂಬರಿ ಕೆಲವೆಡೆ ಬರುವ ಕೋಮುವಾರು ಪ್ರಸ್ತಾಪಗಳಿಲ್ಲದೆಯೇ ಸಾಗಬಹುದಾಗಿತ್ತು;
  • ದಿನಕ್ಕೆ ಮೂರೇ ಕೊಡ ನೀರಿನಲ್ಲಿ ಒಂದೊಂದು ಕುಟುಂಬವೂ ಕಾಲ ಹಾಕುತ್ತಿತ್ತೆಂದು (ಬಾವಿಯ ಸೌಕಯದ ವ್ಯವಸ್ಥೆಯೇನನ್ನೂ ಕಲ್ಪಿಸದೆ!) ಹೇಳುವುದು ವಿಪರೀತ ಉತ್ಪ್ರೇಕ್ಷೆಯೆನ್ನಬೇಕು. ಪುಸ್ತಕದಲ್ಲಿ ಬರುವ ಸಂವಾದಾತ್ಮಕ ಹಿನ್ನುಡಿ ಬಹಳ ಉದ್ದವಾಯಿತೆಂದೇ ಹೇಳಬೇಕಾಗಿದೆ; ಪ್ರತಿಯೊಂದು ಪುಸ್ತಕದಲ್ಲೂ ಇದೇ ಬಗೆಯ ಪೀಠಿಕಾ ತಂತ್ರವನ್ನು ಉಪಯೋಗಿಸತೊಡಗಿದರೆ, ಇದು ಅಪ್ರತ್ಯಕ್ಷ ಆತ್ಮ ಪ್ರಶಂಸೆಯ ವಿನೂತನ ವಿಧಾನವೋ ಎಂಬ ಅನುಮಾನವನ್ನು ಓದುಗರಲ್ಲಿ ಮೂಡಿಸಿದರೂ ಅಚ್ಚರಿಯಿಲ್ಲ.

ಪುಸ್ತಕಪ್ರಿಯ’ ತಾಯಿನಾಡು, ‘ಪ್ರಕಟಣ ಪ್ರಪಂಚ’ ಅಂಕಣ; 25-9-1954

ಕೆಳಗಿನ ವಿಷಯಗಳನ್ನೂ ನೋಡಿ[ಬದಲಾಯಿಸಿ]

  1. http://avadhimag.com/2015/05/18/ತಾಯಿನಾಡು-ಹುಟ್ಟಿ-ಬೆಳೆದದ್/