ಸ್ವಾಮಿ ಎನ್.ಎಸ್.ಮರಿ ಜೋಸೆಫ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ವಾಮಿ ಡಾ. ಎನ್.ಎಸ್. ಮರಿಜೋಸೆಫ್(ನಾಗೇನಹಳ್ಳಿ ಶಾಂತಪ್ಪ ಮರಿಜೋಸೆಫ್)ರವರು. ಕೇವಲ ಸಾಮಾನ್ಯ ಯಾಜಕರಾಗಿರಲಿಲ್ಲ. ಯಾಜಕರಲ್ಲಿ ಅದ್ವಿತೀಯರಾಗಿದ್ದರು. ಪ್ರತಿಭೆ ಅವರಲ್ಲಿ ಮೇಳೈಸಿತ್ತು. ಬರವಣಿಗೆಯಲ್ಲಿ ಮಾತ್ರವಲ್ಲ ಮಾತಿನಲ್ಲೂ ಅವರು ತೂಕದ ವ್ಯಕ್ತಿಯಾಗಿದ್ದರು. ಯಾವುದೇ ಕೆಲಸಕ್ಕೆ ಕೈಹಾಕಿದರೂ ಯೋಚಿಸದೆ ಕೈಹಾಕುತ್ತಿರಲಿಲ್ಲ. ಅದೇನಾಗುತ್ತೋ ನೋಡಿಯೇ ಬಿಡೋಣ ಎಂಬ ಹುಂಬತನ ಅವರಲ್ಲಿರಲಿಲ್ಲ. ಸಾಧಕಬಾಧಕಗಳನ್ನು ಲೆಕ್ಕ ಹಾಕಿಯೇ  ಅವರು ಮುಂದಡಿಯಿಡುತ್ತಿದ್ದುದು. ಹಾಗಾಗಿಯೇ ಆಡಳಿತದಲ್ಲಿ ಅವರು ದಕ್ಷತೆಯನ್ನು ಮೆರೆದಿದ್ದು. ನೋಡಲು ಒರಟರಂತೆ ಕಂಡರೂ ಹೃದಯವೈಶಾಲ್ಯತೆಗೇನೂ ಅವರಲ್ಲಿ ಕೊರತೆಯಿರಲಿಲ್ಲ. ಬರವಣಿಗೆಯಲ್ಲಾಗಲಿ ಮಾತಿನಲ್ಲಾಗಲಿ ಅವರಿಗೆ ಅವರೇ ಸಾಟಿ. ಮೇಲಾಗಿ ಅಚ್ಚ ಕನ್ನಡಿಗರೆಂಬ ಸ್ವಮುದ್ರೆ ಅವರಲ್ಲಿತ್ತು. ಆರಾಧನಾ ಗೀತೆಗಳನ್ನು ರಚಿಸುವುದರಲ್ಲಿ ಅವರು ಎತ್ತಿದ ಕೈ; ಹಾಗೆಯೇ ಹಾಡುವುದರಲ್ಲೂ ಸಹ. ಅನೇಕ ಧ್ವನಿ ಸುರುಳಿಗಳನ್ನು ಹೊರತಂದಿರುವ ಪೂಜ್ಯರು ಕೆಲವು ಧ್ವನಿಸುರುಳಿಗಳಲ್ಲಿ ತಮ್ಮ ಕಂಠದಾನವನ್ನೂ ಮಾಡಿದ್ದಾರೆ. ತಾವೇ ಸ್ವರಚಿಸಿ ಹಾಡಿರುವ 'ಕಂಡಿತಿ ಮ್ಹಾಚಿನ್ಹೆ ಗಗನದೊಳು...' ಗೀತೆಯಂತೂ ಎಲ್ಲರ ಮನೆಮನಗಳಲ್ಲೂ ವಿರಾಜಿಸಿರುವುದು ಉತ್ಪ್ರೇಕ್ಷೆಯಲ್ಲ.

ಪೂಜ್ಯರು ಹುಟ್ಟಿದ್ದು ೧೯೪೨, ಅಕ್ಟೋಬರ್ ೧೬ರಂದು. ಹುಟ್ಟೂರು ಮೈಸೂರು. ತಂದೆ ನಾಗೇನಹಳ್ಳಿ  ಶಾಂತಪ್ಪ, ತಾಯಿ ಚೌರಮ್ಮ. ಜ್ಞಾನಸ್ನಾನ ದೀಕ್ಷೆ ದೊರೆತದ್ದು ಮೈಸೂರಿನ ಪ್ರಧಾನಾಲಯದಲ್ಲೇ. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣಗಳು ದೊರೆತದ್ದು ಮೈಸೂರಿನಲ್ಲಿ. ಹತ್ತನೆಯ ತರಗತಿ ತೇರ್ಗಡೆಯಾದ ಬಳಿಕ ಅವರು ನಡೆದದ್ದು ಮೈಸೂರಿನ ಸಂತ ಮರಿಯಮ್ಮನವರ ಗುರುವಿದ್ಯಾಯಲಕ್ಕೆ. ಅಲ್ಲಿಂದ ಮುಂದೆ ಬೆಂಗಳೂರಿನ ಸಂತ ಪೇತ್ರರ ಗುರುವಿದ್ಯಾಲಯಕ್ಕೆ ತೆರಳಿ ಗಳಿಸಿದ್ದು ತತ್ವಶಾಸ್ತ್ರ ಹಾಗೂ ದೈವಶಾಸ್ತ್ರ ಪದವಿಗಳನ್ನು. ೧೯೬೬, ಸೆಪ್ಟಂಬರ್ ೨೮ರಲ್ಲಿ ಅತಿ ಪೂಜ್ಯ ಜೇಮ್ಸ್ನಾಕ್ಸ್ರವರಿಂದ ಉಪಯಾಜಕದೀಕ್ಷೆ. ಮರುವರ್ಷವೇ ಮೈಸೂರಿನ ಅಂದಿನ ಧರ್ಮಾಧ್ಯಕ್ಷ ಅತಿ ಪೂಜ್ಯ ಮಥಿಯಾಸ್ ಫೆರ್ನಾಂಡಿಸ್ರವರಿಂದ ಯಾಜಕದೀಕ್ಷೆಯ ಪಟ್ಟ.

ದೀಕ್ಷೆಯ ಬಳಿಕ ಮೊದಲು ಸೇವೆ ಸಲ್ಲಿಸಿದ್ದು ಮೈಸೂರಿನ ಪ್ರಧಾನಾಲಯದಲ್ಲಿ , ಉಪಯಾಜಕರಾಗಿ. ಬಳಿಕ ಮೈಸೂರು ದಕ್ಷಿಣದ ಸಂತ ತೆರೆಸಮ್ಮನವರ ದೇವಾಲಯದಲ್ಲಿ ಸಹಾಯಕ ಗುರುಗಳಾಗಿ ಸೇವೆ.  ೧೯೭೦ ಹಾಗೂ ೧೯೭೧ರಲ್ಲಿ ಮಾರ್ಟಳ್ಳಿಯ  ಲೂರ್ದುಮಾತೆಯ ಹಾಗೂ ಪಿ.ಜಿ.ಪಾಳ್ಯದ ಸಂತ ಜೋಸೆಫರ ದೇವಾಲಯಗಳ ಧರ್ಮಗುರುಗಳಾಗಿ ತಲಾ ಒಂದು ವರ್ಷದ ಸೇವೆ.  ಬಳಿಕ ಉನ್ನತ ವ್ಯಾಸಂಗಕ್ಕಾಗಿ ರೋಮ್ಗೆ ಹಾರಿದ ಪೂಜ್ಯರು ಮರಳಿದ ಬಳಿಕ ಸೇವೆ ಸಲ್ಲಿಸಿದ್ದು ಮೈಸೂರು ವಿಶ್ವವಿದ್ಯಾಲಯದ 'ಕ್ರೈಸ್ತಧರ್ಮ ಪೀಠ'ದಲ್ಲಿ ಉಪನ್ಯಾಸಕರಾಗಿ. ಅಷ್ಟು ಮಾತ್ರವಲ್ಲ ಆ ವಿಭಾಗದ ಮುಖ್ಯಸ್ಥರಾಗಿಯೂ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಹೆಗ್ಗಳಿಕೆ. ೧೯೯೫ ಹಾಗೂ ೨೦೦೯ರಲ್ಲಿ ಎರಡು ಬಾರಿ ಶ್ರೇಷ್ಟ ಗುರುಗಳಾಗಿ ಆಯ್ಕೆ, ಅಲ್ಲದೆ, 'ಮೈಸೂರು ಧರ್ಮಕ್ಷೇತ್ರದ ಶಿಕ್ಷಣ ಸಂಸ್ಥೆ'ಗಳ ಕಾರ್ಯದರ್ಶಿಯೂ ಆಗಿ ಸೇವೆ ಸಲ್ಲಿಕೆ. ಮುಂದೆ ಪ್ರಧಾನಾಲಯದ ಪ್ರಧಾನಗುರುಗಳಾಗಿಯೂ ಸೇವೆ ಸಲ್ಲಿಸಿದ ಬಳಿಕ ಇವರು ೨೦೧೮ರಲ್ಲಿ ಬೋಗಾದಿಯ ಸಂತ ಪೇತ್ರರ ದೇವಾಲಯದ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದೇ ಅಂತಿಮ. ಅಲ್ಲಿದ್ದಾಗಲೇ ಅನಾರೋಗ್ಯಪೀಡಿತರಾದ 'ಮರಿಜೋ'ರವರು ಬಳಿಕ ಧಾರ್ಮಿಕ ಸೇವೆಗಳಿಂದ ಮುಕ್ತರಾಗಿ ವಿಶ್ರಾಂತಿಗಾಗಿ ಮೈಸೂರಿನ 'ಪ್ರಶಾಂತ ನಿಲಯ'ವನ್ನು ಸೇರಿದರು. ತೀವ್ರ ಅಸ್ವಸ್ಥೆಗೆ ಒಳಗಾದ ಇವರನ್ನು ಬೆಂಗಳೂರಿನ ಸಂತ ಜಾನ್ಸ್ ಮೆಡಿಕಲ್ ಕಾಲೇಜಿಗೆ ದಾಖಲಿಸಿದಾಗ ಅವರಿಗೆ 'ಬೋನ್ಮ್ಯಾರೋ ಕ್ಯಾನ್ಸರ್' ಇರುವುದು ತಿಳಿದು ಬಂದಿತ್ತು. ಜೊತೆಗೆ ಬಹು ಅಂಗಾಂಗಗಳ ವೈಫಲ್ಯವೂ ಅವರನ್ನು ಕಾಡಿತ್ತು. ಇವೆಲ್ಲದರ ಫಲವಾಗಿ ಅವರು ದಿ.೦೫-೦೨-೨೦೧೯ರ ಬೆಳಿಗ್ಗೆ ೩.೧೫ಕ್ಕೆ ಕೊನೆಯುಸಿರೆಳೆದರು.