ದಿವಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಿವಾನ್ ಶಬ್ದವು ಸರ್ಕಾರದ ಪ್ರಧಾನ ಅಧಿಕಾರಿಯನ್ನು ಸೂಚಿಸುತ್ತದೆ. ಇವನು ಸಚಿವೋತ್ತಮ. ಮುಸ್ಲಿಂ ಆಡಳಿತದಲ್ಲಿ ಬೊಕ್ಕಸದ ಮುಖ್ಯ ಅಧಿಕಾರಿ. ಕೆಲವು ಸರ್ಕಾರಿ ಇಲಾಖೆಗಳ ಸ್ಥಳೀಯ ಮುಖ್ಯಸ್ಥ. ಮೊಗಲ್ ಚಕ್ರವರ್ತಿ ಅಕ್ಬರನ ಆಸ್ಥಾನದಲ್ಲಿದ್ದ ಅಬುಲ್ ಫಜ಼ಲ್ ತನ್ನ ಐನೆ ಅಕ್ಬರಿ ಎಂಬ ಗ್ರಂಥದಲ್ಲಿ ಅಕ್ಬರನ ಸಾಮ್ರಾಜ್ಯದ ಆಡಳಿತ ವ್ಯವಸ್ಥೆಯನ್ನು ವಿವರಿಸಿದ್ದಾನೆ. ರಾಜ್ಯದ ಆಡಳಿತದಲ್ಲಿ ಅನೇಕ ದೊಡ್ಡ ಅಧಿಕಾರಿಗಳಿದ್ದರು. ಅವರಲ್ಲಿ ದಿವಾನ್ ಅಥವಾ ವಜೀರ್ ಎಂಬುವನು ಬೊಕ್ಕಸದ ಮುಖ್ಯ ಅಧಿಕಾರಿಯಾಗಿದ್ದ. ಪ್ರಾಂತ್ಯದಲ್ಲೂ ದಿವಾನ್ ಮತ್ತು ಸುಬೇದಾರ್ ಎಂಬ ಎರಡು ಉನ್ನತ ಅಧಿಕಾರಿಗಳಿದ್ದರು. ದಿವಾನ ತನ್ನ ಪ್ರಾಂತ್ಯದ ಚಟುವಟಿಕೆಗಳನ್ನು ಚಕ್ರವರ್ತಿಗೆ ನೇರವಾಗಿ ವರದಿ ಮಾಡುತ್ತಿದ್ದ.

ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಆರಂಭವಾದ ಅನಂತರ ದೇಶೀಯ ಸಂಸ್ಥಾನಗಳಲ್ಲಿ ಪ್ರಧಾನ ಮಂತ್ರಿಗಳನ್ನು ದಿವಾನರೆಂದು ಕರೆಯುತ್ತಿದ್ದರು. ಹಳೆಯ ಮೈಸೂರು ಸಂಸ್ಥಾನದಲ್ಲಿ 1799-1811ರಲ್ಲಿ ಪೂರ್ಣಯ್ಯ ದಿವಾನರಾಗಿದ್ದರು. 1881ರಿಂದ ಈಚೆಗೆ ದಿವಾನ್ ಅಧಿಕಾರ ನಡೆಸಿದವರು ಇವರು (ಅವರ ಅಧಿಕಾರಾವಧಿಗಳನ್ನು ಆವರಣಗಳೊಳಗೆ ಕೊಟ್ಟಿದೆ); ರಂಗಾಚಾರ್ಲು (1881-1882), ಕೆ. ಶೇಷಾದ್ರಿ ಆಯ್ಯರ್ (1882-1901), ಪಿ.ಎನ್. ಕೃಷ್ಣಮೂರ್ತಿ (1901-1906), ವಿ. ಪಿ. ಮಾಧವರಾವ್ (1906-1909), ಟಿ. ಆನಂದರಾವ್ (1909-1912), ಎಂ. ವಿಶ್ವೇಶ್ವರಯ್ಯ (1912-1918), ಕಾಂತರಾಜ ಅರಸು (1918-1922), ಆಲ್ಬಿಯನ್ ಬ್ಯಾನರ್ಜಿ (1922-1926), ಮಿರ್ಜಾ ಮಹಮ್ಮದ್ ಇಸ್ಮೇಲ್ (1926-1941), ಎನ್. ಮಾಧವರಾವ್ (1941-1945), ಆರ್ಕಾಟ್ ರಾಮಸ್ವಾಮಿ ಮದಲಿಯಾರ್ (1945-1946).

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ದಿವಾನ್&oldid=1189061" ಇಂದ ಪಡೆಯಲ್ಪಟ್ಟಿದೆ