ವಿಷಯಕ್ಕೆ ಹೋಗು

ಶ್ಮಶಾನ ಕುರುಕ್ಷೇತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ಮಶಾನ ಕುರುಕ್ಷೇತ್ರ ರಾಷ್ಟ್ರಕವಿ ಕುವೆಂಪು ಅವರ ಒಂದು ಪ್ರಸಿದ್ದ ನಾಟಕ. ೧೯೩೧ರಲ್ಲಿ ರಚಿತವಾಗಿರುವ ಈ ನಾಟಕ ಮಹಾ ಯುದ್ಧದ ಪರಿಣಾಮಗಳನ್ನು ಬಿಚ್ಚಿಡುತ್ತದೆ. ಪ್ರತಿಮಾವಿಧಾನದಿಂದ ಸೃಷ್ಟಿಯಾಗಿರುವ ನಾಟಕ ’ಶ್ಮಶಾನ ಕುರುಕ್ಷೇತ್ರ’. ಯುದ್ಧದ ಪರಿಣಾಮವನ್ನು ತೀವ್ರತರವಾಗಿ ಕಟ್ಟಿಕೊಡುವ ನಾಟಕ ಅದು. ಮೊದಲನೆಯ ಮಹಾಯುದ್ಧ ಮಗಿದು ಹೋಗಿತ್ತು. ಅದರ ಪರಿಣಾಮದಿಂದಾಗಿ ಪ್ರಪಂಚದಲ್ಲೆಲ್ಲಾ ಯುದ್ಧವಿರೋಧಿ ಮಾತುಗಳು ಕೇಳುತ್ತಿದ್ದಾಗ ಶ್ಮಶಾನ ಕುರುಕ್ಷೇತ್ರ ನಾಟಕ ಬಂದಿತ್ತು. ’ಕಡೆಗುಂ ಪೊಲಸಾದುದೀ ಭಾರತ ಸಂಗ್ರಾಮಂ!’ ಎನ್ನುವ ಭೀಮನ ಮಾತುಗಳಲ್ಲಿ ಇಡೀ ಮಹಾಭಾರತ ಯುದ್ಧದ ನಿರರ್ಥಕತೆ ಬಿಂಬಿತವಾಗಿದೆ. ಕುರುಕ್ಷೇತ್ರ ಯುದ್ಧವೇ ನಾಟಕದ ವಸ್ತುವಾದರೂ, ಅದನ್ನು ಯಾವ ಯುದ್ಧಕ್ಕಾದರೂ ಅನ್ವಯಿಸಿಕೊಳ್ಳಬಹುದಾದಂತಹ ನಾಟಕ. ಕನ್ನಡದ ರಂಗನಿರ್ದೇಶಕರೊಬ್ಬರು ಕಾರ್ಗಿಲ್ ಯುದ್ಧಕ್ಕೂ ಅದನ್ನು ಅನ್ವಯಿ ಸಿ ರಂಗಪ್ರದರ್ಶನ ನೀಡಿದ್ದನ್ನು ಗಮನಿಸಿದರೆ, ಆ ನಾಟಕದ ಸಾರ್ವಕಾಲಿಕತೆ ಮನದಟ್ಟಾಗುತ್ತದೆ. ನಾಟಕದ ಮೊದಲಲ್ಲಿರುವ "ಇದೊಂದು ಪ್ರತಿಮಾಸೃಷ್ಟಿ. ಯುದ್ಧದ ದುರಂತಕ್ಕೆ, ಅನ್ಯಾಯ, ಕ್ರೌರ್ಯ, ವಿನಾಶನ, ಅವಿವೇಕ, ದುರ್ಲಂಘ್ಯ ವಿಧಿ, ಸರ್ವ ವಿಫಲತೆ, ಸಂಸ್ಕೃತಿಯ ಸಾವು - ಇದಕ್ಕೆ ಪ್ರತಿಮೆ. ಒಂದೊಂದು ಯುದ್ಧವೂ ಪ್ರಾರಂಭವಾಗುವಾಗ ಅದು ಯುದ್ಧವನ್ನೆ ಕೊನೆಗಾಣಿಸುವ ಜಗತ್ತಿನ ಕೊನೆಯ ಅನಿವಾರ್ಯ ಸಂಕಟವೆಂದು ಸಾರುತ್ತೇವೆ. ಅನ್ಯಾಯವೆಲ್ಲ ತೊಲಗಿ ನ್ಯಾಯಸ್ಥಾಪನೆ ಆಗುವುದೆಂದು ಭಾವಿಸುತ್ತೇವೆ, ಕಲಿ ಹೋಗಿ ಕೃತಯುಗ ಆರಂಭವಾಗುತ್ತದೆಂ ದು. ಆದರೆ? ಮತ್ತೆ! ವಿಶೇಷತೆಗಾಗಿ ಸಾಮಾನ್ಯರ ಆಹುತಿ. ಸಂಸ್ಕೃತಿ ನಾಗರಿಕತೆ ಪ್ರಗತಿ ಎಲ್ಲ ಶ್ಮಶಾನರುದ್ರನ ಮೆಯ್ಗೆ ಭಸ್ಮಲೇಪನವಾಗುತ್ತದೆ. ಸರಿ ಪುನರ್‍ಸೃಷ್ಟಿಯ ಪ್ರಾರಂಭ, ನಾಟಕಾರಂಭ: ವಿಶ್ವಲೀಲೆ ಸಾಗುತ್ತದೆ" ಎಂಬ ಮಾತುಗಳು ನಾಟಕದ ಮಹತ್ತಿಗೆ ಕೀಲಿಕೈಯಂತಿವೆ.
ನಾಟಕದ ಪಾತ್ರಗಳು
ಕೃಷ್ಣ
ರುದ್ರ
ಧರ್ಮರಾಯ
ಭೀಮ
ಅರ್ಜುನ
ಸಹದೇವ
ಕುಂತಿ
ದ್ರೌಪದಿ
ಮಾತೆ
ಕಂದ
ಕೌರವ
ಧೃತರಾಷ್ಟ್ರ
ವಿಧುರ
ಸಂಜಯ
ಅಶ್ವತ್ಥಾಮ
ಗಾಂಧಾರಿ
ಭಾನುಮತಿ
ಗೀರ್ವಾಣ
ನೀಲಾಕ್ಷ
ಚಾಣೂರ
ಮುದುಕಿ
ಕಲಿ
ದ್ವಾಪರ
ಮರುಳುಗಳು
ಬಂಧುಗಳು, ಪರಿವಾರದವರು, ಸೈನಿಕರು, ಸಖಿಯರು - ಇತ್ಯಾದಿ