ಚುಕ್ಕಾಣಿಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚುಕ್ಕಾಣಿಗನು ಒಂದು ಹಡಗು, ಹಾಯಿದೋಣಿ, ಜಲಾಂತರ್ಗಾಮಿ ನೌಕೆ, ಇತರ ಬಗೆಯ ಕಡಲ ನೌಕೆ, ಅಥವಾ ಬಾಹ್ಯಾಕಾಶ ನೌಕೆಯನ್ನು ನಿಯಂತ್ರಿಸುವ ಒಬ್ಬ ವ್ಯಕ್ತಿ. ಸಣ್ಣ ನೌಕೆಗಳಲ್ಲಿ, ವಿಶೇಷವಾಗಿ ಖಾಸಗಿ ಒಡೆತನದ ವಾಣಿಜ್ಯಿಕವಲ್ಲದ ನೌಕೆಗಳಲ್ಲಿ, ನೌಕಾಧಿಪತಿ ಮತ್ತು ಚುಕ್ಕಾಣಿಗನ ಕಾರ್ಯಗಳನ್ನು ಒಬ್ಬ ವ್ಯಕ್ತಿಯಲ್ಲಿ ಸಂಯೋಜಿಸಬಹುದು. ಹೆಚ್ಚು ದೊಡ್ಡ ನೌಕೆಗಳಲ್ಲಿ, ಪಹರೆಯ ಪ್ರತ್ಯೇಕ ಅಧಿಕಾರಿಯಿರುತ್ತಾನೆ. ಇವನು ಹಡಗಿನ ಸುರಕ್ಷಿತ ಸಂಚರಣೆಗೆ ಹೊಣೆಯಾಗಿರುತ್ತಾನೆ ಮತ್ತು ಚುಕ್ಕಾಣಿಗನಿಗೆ ಆದೇಶಗಳನ್ನು ನೀಡುತ್ತಾನೆ. ವ್ಯಾಪಾರಿ ಹಡಗುಗಳಲ್ಲಿ, ಚುಕ್ಕಾಣಿ ಹಿಡಿದಿರುವ ವ್ಯಕ್ತಿಯು ಸಾಮಾನ್ಯವಾಗಿ ಸಮರ್ಥ ನಾವಿಕನಾಗಿರುತ್ತಾನೆ, ವಿಶೇಷವಾಗಿ ಹಡುಗಗಳ ಆಗಮನಗಳು, ನಿರ್ಗಮನಗಳ ಅವಧಿಯಲ್ಲಿ, ಮತ್ತು ನಿರ್ಬಂಧಿತ ನೀರಿನಲ್ಲಿ ಅಥವಾ ನಿಖರವಾದ ನಡೆಸುವಿಕೆ ಅಗತ್ಯವಿರುವ ಇತರ ಪರಿಸ್ಥಿತಿಗಳಲ್ಲಿ ಕುಶಲವಾಗಿ ಹಡಗನ್ನು ಚಲಿಸುವಾಗ. ಸಾಮಾನ್ಯ ನಾವಿಕನು ಸಾಧಾರಣವಾಗಿ ತೆರೆದ ನೀರಿನಲ್ಲಿ ಹಡಗನ್ನು ನಡೆಸಲು ಮೀಸಲಿರುತ್ತಾನೆ. ಮೇಲಾಗಿ, ಸೇನಾ ಹಡಗುಗಳು ಚುಕ್ಕಾಣಿಯಲ್ಲಿ ನಾವಿಕ ಅಥವಾ ಕ್ವಾರ್ಟರ್‌ಮಾಸ್ಟರ್ ಅನ್ನು ಹೊಂದಿರಬಹುದು.

ಒಬ್ಬ ವೃತ್ತಿಪರ ಚುಕ್ಕಾಣಿಗನು ಸ್ಥಿರ ಗತಿ/ಮಾರ್ಗವನ್ನು ಕಾಪಾಡಿಕೊಳ್ಳುತ್ತಾನೆ, ಎಲ್ಲ ಚುಕ್ಕಾಣಿ ಆದೇಶಗಳನ್ನು ಸರಿಯಾಗಿ ನಿರ್ವಹಿಸುತ್ತಾನೆ, ಮತ್ತು ಹಡಗಿನ ವೇದಿಕೆ ಮೇಲಿನ ಅಧಿಕಾರಿಯೊಂದಿಗೆ ಹಡಗಿನ ಚಲನೆ ಮತ್ತು ನಡೆಸುವಿಕೆಗೆ ಸಂಬಂಧಿಸಿದ ಸಂಚರಣಾ ಪದಗಳನ್ನು ಬಳಸಿ ಸಂವಹನ ನಡೆಸುತ್ತಾನೆ. ಸ್ಥಿರ ಗತಿಯಲ್ಲಿ ಹಡಗನ್ನು ನಡೆಸಲು ಚುಕ್ಕಾಣಿಗನು ದೃಶ್ಯ ಆಕರಸೂಚನೆಗಳು, ಕಾಂತೀಯ ಮತ್ತು ಭ್ರಾಮಕ ದಿಕ್ಸೂಚಿ, ಮತ್ತು ಚುಕ್ಕಾಣಿ ಕೋಣ ಸೂಚಕದ ಮೇಲೆ ಅವಲಂಬಿಸುತ್ತಾನೆ. ವ್ಯಾಪಾರಿ ಅಥವಾ ನೌಕಾಪಡೆ ಹಡಗುಗಳ ಮೇಲೆ ಮೇಟ್ ಅಥವಾ ಇತರ ಅಧಿಕಾರಿಯು ಚುಕ್ಕಾಣಿಗನಿಗೆ ನಿರ್ದೇಶನಗಳನ್ನು ನೀಡುತ್ತಾನೆ.

ಸುರಕ್ಷಿತ ಸಂಚರಣೆ ಮತ್ತು ಹಡಗು ನಿರ್ವಹಣೆಗೆ ಚುಕ್ಕಾಣಿಗ ಮತ್ತು ಹಡಗಿನ ವೇದಿಕೆ ಮೇಲಿನ ಅಧಿಕಾರಿ ನಡುವೆ ಸ್ಪಷ್ಟ ಮತ್ತು ನಿಖರ ಸಂವಹನವು ಅತ್ಯಗತ್ಯವಾಗಿದೆ. ತರುವಾಯ, ಕಡಲೋದ್ಯಮದಲ್ಲಿ ಪ್ರಮಾಣಕ ನಡೆಸುವಿಕೆ ಆದೇಶಗಳ ಸಮೂಹ, ಚುಕ್ಕಾಣಿಗನ ಪ್ರತಿಕ್ರಿಯೆಗಳು, ಕಾನಿಂಗ್ ಅಧಿಕಾರಿಯ ಅಂಗೀಕಾರವನ್ನು ವ್ಯಾಪಕವಾಗಿ ಗುರುತಿಸಲಾಗಿದೆ. ಆದೇಶವನ್ನು ಕೇಳಿ ಅರ್ಥಮಾಡಿಕೊಳ್ಳಲಾಗಿದೆ ಎಂದು ತೋರಿಸಲು ಚುಕ್ಕಾಣಿಗನು ಯಾವುದೇ ಮೌಖಿಕ ಆದೇಶಗಳನ್ನು ಮತ್ತೊಮ್ಮೆ ಹೇಳುತ್ತಾನೆ. ನಾವಿಕರ ತರಬೇತಿ, ಪ್ರಮಾಣೀಕರಣ ಮತ್ತು ಕಾವಲುಗಾರಿಕೆಯ ಮಾನದಂಡಗಳ ಮೇಲಿನ ಅಂತರರಾಷ್ಟ್ರೀಯ ಒಪ್ಪಂದಕ್ಕೆ ಚುಕ್ಕಾಣಿಗನು ಚುಕ್ಕಾಣಿ ಆದೇಶಗಳನ್ನು ಇಂಗ್ಲಿಷ್‍ನಲ್ಲಿ ಅರ್ಥಮಾಡಿಕೊಂಡು ಅವುಗಳಿಗೆ ಪ್ರತಿಕ್ರಿಯಿಸುವುದು ಸಾಧ್ಯವಾಗುವುದು ಬೇಕಾಗುತ್ತದೆ. ಆಟೊಪೈಲಟ್ ವ್ಯವಸ್ಥೆಗಳ ಆಧಿಕ್ಯ ಮತ್ತು ಹಡಗಿನ ವೇದಿಕೆ ಮೇಲಿನ ಕಾರ್ಯಾಚರಣೆಗಳ ಹೆಚ್ಚಿದ ಗಣಕೀಕರಣವು ತೆರೆದ ನೀರಿನಲ್ಲಿ ಚುಕ್ಕಾಣಿಗರು ಕಾವಲು ಕಾಯುವ ಅಗತ್ಯವನ್ನು ಕಡಿಮೆ ಮಾಡಿವೆ.