ಮಾನವ ಕಾಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಾಮಾನ್ಯ ಅರ್ಥದಲ್ಲಿ, ಮಾನವ ಕಾಲು ಎಂದರೆ ಪಾದ, ತೊಡೆ, ಮತ್ತು ಟೊಂಕ ಅಥವಾ ನಿತಂಬಸ್ನಾಯು ಪ್ರದೇಶ ಕೂಡ ಒಳಗೊಂಡಂತೆ ಮಾನವ ಶರೀರದ ಸಂಪೂರ್ಣ ಕೆಳಗಿನ ಅವಯವ.[೧] ಆದರೆ, ಮಾನವ ಅಂಗರಚನಾಶಾಸ್ತ್ರದಲ್ಲಿನ ವ್ಯಾಖ್ಯಾನವು ಕೇವಲ ಮಂಡಿಯಿಂದ ಗುಲ್ಫಕ್ಕೆ ವಿಸ್ತರಿಸುವ ಕೆಳಗಿನ ಅವಯವದ ವಿಭಾಗವನ್ನು ಸೂಚಿಸುತ್ತದೆ. ಇದನ್ನು ಕ್ರಸ್ ಎಂದು ಕೂಡ ಕರೆಯಲಾಗುತ್ತದೆ. ಕಾಲುಗಳನ್ನು ನಿಂತುಕೊಳ್ಳಲು, ಮತ್ತು ಕುಣಿತದಂತಹ ಆಟಪಾಟ ಸಂಬಂಧಿ ಸೇರಿದಂತೆ ಎಲ್ಲ ಬಗೆಯ ಚಲನೆಗೆ ಬಳಸಲಾಗುತ್ತದೆ, ಮತ್ತು ಒಬ್ಬ ವ್ಯಕ್ತಿಯ ದ್ರವ್ಯರಾಶಿಯ ಗಣನೀಯ ಭಾಗವನ್ನು ರಚಿಸುತ್ತವೆ. ಹೆಂಗಸರ ಕಾಲುಗಳು ಸಾಮಾನ್ಯವಾಗಿ ಹೆಚ್ಚಿನ ಟೊಂಕದ ಒಳತಿರುಗಿನ ಮತ್ತು ಟಿಬಿಯೊಫ಼ೀಮೋರಲ್ ಕೋನಗಳನ್ನು ಹೊಂದಿರುತ್ತವೆ, ಆದರೆ ಗಂಡಸರಲ್ಲಿ ಇರುವುದಕ್ಕಿಂತ ಹೆಚ್ಚು ಗಿಡ್ಡ ಊರ್ವಸ್ಥಿ ಮತ್ತು ಜಂಘಾಸ್ಥಿ ಉದ್ದಗಳನ್ನು ಹೊಂದಿರುತ್ತವೆ.

ವಿಕಸನವು ಮಾನವ ಶರೀರಕ್ಕೆ ಎರಡು ವಿಶಿಷ್ಟ ಲಕ್ಷಣಗಳನ್ನು ಒದಗಿಸಿದೆ: ದೃಶ್ಯ ನಿರ್ದೇಶಿತ ಬಳಕೆಗೆ ಮೇಲಿನ ಅವಯವದ ವಿಶೇಷೀಕರಣ ಮತ್ತು ಸಮರ್ಥ ದ್ವಿಪಾದ ನಡಿಗೆಗೆ ನಿರ್ದಿಷ್ಟವಾಗಿ ಮಾರ್ಪಾಡಾಗಿರುವ ಕಾರ್ಯವಿಧಾನವಾಗಿ ಕೆಳಗಿನ ಅವಯವದ ಅಭಿವೃದ್ಧಿ. ನೆಟ್ಟಗೆ ನಡೆಯುಬ ಸಾಮರ್ಥ್ಯವು ಮಾನವರಿಗೆ ಅನನ್ಯವಲ್ಲವಾದರೂ, ಇತರ ಪ್ರೈಮೇಟ್‍ಗಳು ಇದನ್ನು ಕೇವಲ ಅಲ್ಪಾವಧಿಗೆ ಸಾಧಿಸಬಲ್ಲವು ಮತ್ತು ಇದಕ್ಕೆ ಬಹಳ ಶಕ್ತಿ ವ್ಯಯಿಸಬೇಕಾಗುತ್ತದೆ. ದ್ವಿಪಾದ ಸ್ಥಿತಿಗೆ ಮಾನವ ರೂಪಾಂತರವು ಕಾಲಿಗೆ ಮಾತ್ರ ಸೀಮಿತವಾಗಿಲ್ಲ, ಜೊತೆಗೆ ಶರೀರದ ಗುರುತ್ವ ಕೇಂದ್ರದ ನೆಲೆ, ಆಂತರಿಕ ಅಂಗಗಳ ಪುನರ್ವ್ಯವಸ್ಥೆ, ಮತ್ತು ಮುಂಡದ ರೂಪ ಹಾಗೂ ಜೈವಿಕ ಕಾರ್ಯವಿಧಾನದ ಮೇಲೆ ಕೂಡ ಪ್ರಭಾವ ಬೀರಿದೆ. ಮಾನವರಲ್ಲಿ, ಇಮ್ಮಡಿ ಎಸ್ ಆಕಾರದ ಬೆನ್ನೆಲುಬು ತೂಕವನ್ನು ಮುಂಡದಿಂದ ಪಾದಗಳ ಭಾರ ಹೊರುವ ಮೇಲ್ಮೈ ಮೇಲೆ ಸ್ಥಳಾಂತರಿಸುವ ಧಕ್ಕೆ ಚೋಷಕವಾಗಿ ಕಾರ್ಯನಿರ್ವಹಿಸುತ್ತದೆ. ಆಧಾರ ಒದಗಿಸಲು ಮತ್ತು ಚಲನೆಗಾಗಿ ಅವುಗಳ ವಿಶಿಷ್ಟ ವಿಶೇಷೀಕರಣದ ಪರಿಣಾಮವಾಗಿ ಮಾನವ ಕಾಲುಗಳು ಅಸಾಧಾರಣವಾಗಿ ಉದ್ದ ಮತ್ತು ಪ್ರಬಲವಾಗಿವೆ — ಅರಾಂಗಟ್ಯಾನ್‍ಗಳಲ್ಲಿ ಕಾಲಿನ ಉದ್ದವು ಮುಂಡದ ಶೇಕಡ ೧೧೧ರಷ್ಟು ಇದೆ; ಚಿಂಪಾಜ಼ಿಗಳಲ್ಲಿ ಶೇಕಡ ೧೨೮ರಷ್ಟು ಇದೆ, ಮತ್ತು ಮಾನವರಲ್ಲಿ ಶೇಕಡ ೧೭೧ರಷ್ಟು ಇದೆ. ಕಾಲಿನ ಅನೇಕ ಸ್ನಾಯುಗಳು ಕೂಡ ದ್ವಿಪಾದ ಸ್ಥಿತಿಗೆ ಮಾರ್ಪಾಡುಗೊಂಡಿವೆ, ಹೆಚ್ಚು ಗಣನೀಯವಾಗಿ ನಿತಂಬ ಸ್ನಾಯುಗಳು, ಮಂಡಿಯ ಕೀಲಿನ ಚಾಚುಸ್ನಾಯುಗಳು, ಮತ್ತು ಮೀನಖಂಡದ ಸ್ನಾಯುಗಳು.

ಅನೇಕ ಪಾಶ್ಚಾತ್ಯ ಸಂಸ್ಕೃತಿಗಳಲ್ಲಿ ಹದಿಹರೆಯದ ಮತ್ತು ವಯಸ್ಕ ಮಹಿಳೆಯರು ಹಲವುವೇಳೆ ತಮ್ಮ ಕಾಲುಗಳಿಂದ ಕೂದಲನ್ನು ತೆಗೆಯುತ್ತಾರೆ. ದೃಢ, ಕಂದಾಗಿಸಿದ ಮತ್ತು ಕೂದಲು ತೆಗೆದಿರುವ ಕಾಲುಗಳನ್ನು ಕೆಲವೊಮ್ಮೆ ತಾರುಣ್ಯದ ಚಿಹ್ನೆಯಾಗಿ ನೋಡಲಾಗುತ್ತದೆ ಮತ್ತು ಈ ಸಂಸ್ಕೃತಿಗಳಲ್ಲಿ ಹಲವುವೇಳೆ ಇವನ್ನು ಆಕರ್ಷಕವೆಂದು ಪರಿಗಣಿಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. "Lower Extremity". Medical Subject Headings (MeSH). National Library of Medicine. Retrieved 18 April 2009.