ಆಸ್ಕರ್ ಶೆಮ್ಮರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಸ್ಕರ್ ಶೆಮ್ಮರ್
ರಾಷ್ಟ್ರೀಯತೆ ಜರ್ಮನ್
ಕ್ಷೇತ್ರ ಚಿತ್ರಕಲೆ, ಶಿಲ್ಪಕಲೆ, ಬೊಂಬೆಯಾಟ, ನಾಟಕ, ನೃತ್ಯ
Movement ಬೌಹಾಸ್

ಆಸ್ಕರ್ ಶೆಮ್ಮರ್ ಜರ್ಮನಿಯ ಬಹುಮುಖಿ ಕಲಾವಿದ.ಚಿತ್ರಕಲೆ, ಶಿಲ್ಪಕಲೆ, ಬೊಂಬೆಯಾಟ, ನಾಟಕ, ನೃತ್ಯ, ಹೀಗೆ ಹಲವು ಕಲಾಪ್ರಕಾರಗಳಲ್ಲಿ ಸೈ ಎನ್ನಿಸಿಕೊಂಡ ಕಲಾವಿದ.ಬೌಹೌಸ್ ಕಲಾ-ಶಾಲೆಯ ಪ್ರತಿಪಾದಕ.

ಬಾಲ್ಯ[ಬದಲಾಯಿಸಿ]

ಆಸ್ಕರ್ ಶೆಮ್ಮರ್ ೪ ಸೆಪ್ಟೆಂಬರ್ ೧೮೮೮ರಂದು ಸ್ಟುಟ್‍ಗಾರ್ಡ್, ಜರ್ಮನಿಯಲ್ಲಿ ಜನಿಸಿದರು. ಕಾರ್ಲ್ ಲಿಯೋನಾರ್ಡ್ ಶೆಮ್ಮರ್ ಮತ್ತು ಮೀನಾ ನೌಹೌಸ್ ದಂಪತಿಗಳ ಆರು ಮಕ್ಕಲಲ್ಲಿ ಕಡೆಯ ಮಗುವಾದ ಆಸ್ಜರ್, ೧೨ ವರ್ಷದವರಾಗಿದ್ದಾಗ ತಮ್ಮ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡರು. ಅಕ್ಕನ ಆರೈಕೆಯಲ್ಲಿ ೩ ವರ್ಷ ಕಳೆದ ನಂತರ, ೧೫ ವರ್ಷದ ಹೊತ್ತಿಗೆ, ೧೯೦೩ಯ ಸರಿಸುಮಾರಿನಲ್ಲಿ ಸ್ವತಂತ್ರವಾಗಿ ಕೆಲಸಗಾರನಾಗಿ ತಮ್ಮ ಹೊಣೆಯನ್ನು ತಾವೇ ಹೊತ್ತುಕೊಂಡರು.

ಶಿಕ್ಷಣ[ಬದಲಾಯಿಸಿ]

ಭಿತ್ತಿಚಿತ್ರ ರಚನೆಯನ್ನು ಅಭ್ಯಸಿಸಲು ಮೊದಲು ಮಾಡಿದ ಆಸ್ಕರ್, ಫ್ರೆಡೆರಿಕ್ ವಾನ್ ಕೆಲ್ಲರ್ ಬಳಿ ಕೆಲಸ ಕಲಿತರು. ೧೯೧೦ರಲ್ಲಿ ಬರ್ಲಿನ್ ನಗರಕ್ಕೆ ತೆರಳಿದ ಆಸ್ಕರ್, ೨ ವರ್ಷ ಕಾಲ ಹಲವು ಪ್ರಸಿದ್ಧ ಚಿತ್ರಗಳನ್ನು ಬಿಡಿಸಿದರು.೧೯೧೨ರಲ್ಲಿ ಸ್ಟುಟ್‍ಗಾರ್ಡ್‍ಗೆ ಮರಳಿ ಅಡಾಲ್ಫ್ ಹೊಲ್ಜ಼ೆಲ್ ಶಿಷ್ಯವೃತ್ತಿಯನ್ನು ಕೈಗೊಂಡರು. ೧೯೧೪ರಲ್ಲಿ ಪ್ರಥಮ ವಿಶ್ವಯುದ್ಧದಲ್ಲಿ ಭಾಗವಹಿಸಲು ಸೈನ್ಯಕ್ಕೆ ಆಯ್ಕೆಯಾದ ಆಸ್ಕರ್, ಪಶ್ಚಿಮ ಭಾಗದ ಯುದ್ಧರಂಗದಲ್ಲಿ ಕಾದಾಡಿ, ಗಾಯಾಳುವಾದರು. ಗಾಯದ ಕಾರಣ ರಣಕಣದಿಂದ ನಕ್ಷೆ ವಿಭಾಗಕ್ಕೆ ಸೇರಿದರು. ೧೯೧೮ರಲ್ಲಿ ಅಡಾಲ್ಫ್ ಹೊಲ್ಜ಼ೆಲ್ ಶಿಷ್ಯವೃತ್ತಿಗೆ ಮರಳಿದರು.

ಬೌಹೌಸ್ ಕಲಾ-ಶಾಲೆ[ಬದಲಾಯಿಸಿ]

೧೯೧೯ರಲ್ಲಿ ಶಿಲ್ಪಕಲೆಯೆಡೆಗೆ ಆಕರ್ಷಿತರಾದ ಆಸ್ಕರ್, ತಮ್ಮ ಕಲಾ ಪ್ರದರ್ಶನವನ್ನು ಬರ್ಲಿನ್‍ನಲ್ಲಿ ಏರ್ಪಡಿಸಿದರು. ಹೆಲೆನಾ ಟುಟೆನ್‍ರನ್ನು ೧೯೨೦ರಲ್ಲಿ ವರಿಸಿದ ಆಸ್ಕರ್, ಶಿಲ್ಪಕಲೆಯಲ್ಲಿಯೇ ಮುಂದುವರೆದರು.೧೯೨೩ರಲ್ಲಿ ಬೌಹೌಸ್ ಕಲಾಶಾಲೆಯ ಶಿಲ್ಪಕಲಾ ವಿಭಾಗದಲ್ಲಿ ಶಿಕ್ಷಕ ವೃತ್ತಿಗೆ ಆಸ್ಕರ್ ರಿಗೆ ಆಹ್ವಾನ ಬಂದಿತು.೧೯೨೯ರವರೆಗೆ ಬೌಹೌಸ್ ಕಲಾಶಾಲೆಯ ಜನಪ್ರಿಯ ಶಿಕ್ಷಕರಾಗಿ ಹೆಸರು ಮಾಡಿದರು. ವಿಷಮ ರಾಜಕೀಯ ಪರಿಸ್ಥಿತಿಯ ಕಾರಣ ಮತ್ತು ಬೌಹೌಸ್ ಕಲಾಶಾಲೆಯ ನೂತನ ಮುಖ್ಯಸ್ಥ ಹಾನ್ಸ್ ಮೇಯೆರ್ ರೊಂದಿಗಿನ ವಿರಸದಿಂದ ಆಸ್ಕರ್, ೧೯೨೯ರಲ್ಲಿ ರಾಜೀನಾಮೆಯಿತ್ತು ಬ್ರೆಸ್ಲಾವ್ ಕಲಾ ಅಕಾಡೆಮಿಗೆ ಸೇರಿದರು.

ವೈಶಿಷ್ಟ್ಯ[ಬದಲಾಯಿಸಿ]

೧೯೨೨ರ ಕಲಾಪ್ರದರ್ಶನದಲ್ಲಿ "ಟ್ರಿಯಾಡಿಸ್ಚೆಸ್ ಬ್ಯಾಲೆ"ದಿಂದ ಆಸ್ಕರ್ ಹೆಸರು ಮಾಡಿದರು. ಮುಖರಹಿತ ಹೆಣ್ಣುಗಳನ್ನು ತಮ್ಮ ಚಿತ್ರಗಳಲ್ಲಿ ಹೆಚ್ಚಾಗಿ ಬಳಸಿಕೊಂಡ ಆಸ್ಕರ್, ಕ್ಯೂಬಿಸಂ, ಗಂಡು-ಹೆಣ್ಣಿನ ಸಂಬಂಧ ಹೀಗೆ ಹಲವು ಜ್ವಲಂತ ಸಮಸ್ಯೆಗಳನ್ನು ತಮ್ಮ ಚಿತ್ರಕಲೆ ಮತ್ತು ಶಿಲ್ಪಕಲೆಯಲ್ಲಿ ತೋರಿದ ಆಸ್ಕರ್, ಬ್ಯಾಲೆ ನೃತ್ಯಪ್ರಕಾರದಲ್ಲಿ ರಂಗ ನಿರ್ದೇಶನವನ್ನೂ ಮಾಡಿದರು. ರೆನಾರ್ಡ್ ಎಂಬ ಬ್ಯಾಲೆ ಮತ್ತು ನೈಟಿಂಗೇಲ್ ಎಂಬ ಒಪೇರಾಗಳಲ್ಲಿ ರಂಗಸಜ್ಜಿಕೆಯನ್ನೂ ಅಣಿಗೊಳಿಸಿದರು.[೧]

ಕಡೆದಿನಗಳು[ಬದಲಾಯಿಸಿ]

ಬೌಹೌಸ್ ಸ್ಟ್ರೆಪ್ಪೆ (ಬೌಹೌಸ್ ನ ಮೆಟ್ಟಿಲುಹಾದಿ) ಎಂಬುದು ಆಸ್ಕರ್ ರ ಬಲು ಜನಪ್ರಿಯವಾದ ಕೃತಿ.ನಾಝಿ ಹಿಡಿತ ಜರ್ಮನಿಯಲ್ಲಿ ಬಲವಾದ ನಂತರ ಕಲಾವಿದರಿಗೆ ಹಲವು ಸಂಕಷ್ಟಗಳು ಬರತೊಡಗಿದವು. ೧೯೩೩ರವರೆಗೆ ಸಂಯುಕ್ತ ಜರ್ಮನಿ ರಾಷ್ಟ್ರ ಕಲಾಶಾಲೆಯಲ್ಲಿ ಶಿಕ್ಷಕರಾಗಿ ದುಡಿದ ಆಸ್ಕರ್ ನಾಝಿಗಳ ಬಳವಂತದಿಂದ ರಾಜೀನಾಮೆ ನೀಡಬೇಕಾಗಿ ಬಂತು. ತಲೆತಪ್ಪಿಸಿಕೊಂಡು ಸ್ವಿಟ್ಜರ್ ಲ್ಯಾಂಡಿಗೆ ಓಡಿಬಂದ ಆಸ್ಕರ್ ದಂಪತಿಗಳು, ಅಲ್ಲಿಯೇ ನೆಲೆ ನಿಂತರು. ದ್ವಿತೀಯ ವಿಶ್ವಯುದ್ಧದಲ್ಲಿ ಕರ್ಟ್ ಹರ್ಬರ್ಟ್ ಎಂಬುವವರ ಕಾರ್ಖಾನೆಯಲ್ಲಿ ಬಣ್ಣಗಾರಿಕೆ ಕೆಲಸ ನಿರ್ವಹಿಸಿದರು. ೧೯೪೩ರಲ್ಲಿ ಅಸುನೀಗಿದ ಆಸ್ಕರ್ ತಾಯ್ನಾಡು ಜರ್ಮನಿಯಿಂದ ಹೊರಗಡೆಯೇ ಪ್ರ್ರಾಣ ಬಿಟ್ಟರು.

ಕೀರ್ತಿ[ಬದಲಾಯಿಸಿ]

ಜರ್ಮನಿಯಲ್ಲಿ ಮತ್ತು ದ್ವಿತೀಯ ವಿಶ್ವಯುದ್ಧದ ನಂತರ ಆಸ್ಕರ್ ರ ಚಿತ್ರಕಲೆ-ಶಿಲ್ಪಕಲೆಯ ಪ್ರದರ್ಶನಗಳು ವಿಶ್ವದ ಎಲ್ಲೆಡೆ ನಡೆದಿವೆ. ಮಾನವ ದೇಹವನ್ನು ವಿವಿಧ ಬಗೆಗಳಲ್ಲಿ ದುಡಿಸಿಕೊಂಡ ಶೆಮ್ಮರ್, ಬಹು ಸಂಕೀರ್ಣ ಬಗೆಗಳಲ್ಲಿ ಅಂಗಾಂಗಗಳನ್ನು ಚಿತ್ರಿಸಿದ್ದಾರೆ. ಅಮೇರಿಕೆಯ ಬಾಲ್ಟಿಮೋರ್ ನಗರದಲ್ಲಿ ೧೯೮೬ರಲ್ಲಿ ಶೆಮ್ಮರ್ ರಚಿಸಿದ ಕಲಾಪ್ರಾಕಾರಗಳನ್ನು ಬಾಲ್ಟಿಮೋರ್ ಕಲಾ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಯಿತು.[೨] ೧೯೯೮ರಲ್ಲಿ ನ್ಯೂಯಾರ್ಕ್ ನಗರದಲ್ಲಿ ಶೆಮ್ಮರ್ ೧೯೨೮ರಲ್ಲಿ ರಚಿಸಿದ ಐಡಿಯಲಿಸ್ಟಿಕ್ ಎನ್ಕೌಂಟರ್ ಎಂಬ ಚಿತ್ರವು ಸೋತ್‍ಬೇ ಕೇಂದ್ರ ಹರಾಜಿನಲ್ಲಿ ೧೪.೮೭ ಲಕ್ಷ ಡಾಲರ್ ಮೊತ್ತಕ್ಕೆ ಹರಾಜಾಯಿತು.

ಉಲ್ಲೇಖಗಳು[ಬದಲಾಯಿಸಿ]

Oskar Schlemmer The Official Site Archived 2019-02-04 ವೇಬ್ಯಾಕ್ ಮೆಷಿನ್ ನಲ್ಲಿ.

  1. "Oskar Schlemmer's ballet of geometry – in pictures". The Guardian. Guardian News and Media Limited. 24 November 2016. Retrieved 4 September 2018.
  2. Wilson, William (September 14, 1986). "Oskar Schlemmer: Bauhaus' Mr. Clean". Los Angeles Times. Retrieved 4 September 2018.