ವೀಣೆ ಸುಬ್ಬಣ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೀಣೆ ಸುಬ್ಬಣ್ಣ

ವೀಣೆ ಸುಬ್ಬಣ್ಣ, ಹಳೆ ಮೈಸೂರು ಸಂಸ್ಥಾನದ ಶ್ರೇಷ್ಟ ಸಂಗೀತ ಕಲಾವಿದರಲ್ಲೊಬ್ಬರು. ಸುಬ್ಬಣ್ಣನವರ ಜನ್ಮ ೧೮೫೪ರಲ್ಲಿ ಪ್ರತಿಭಾವಂತ ಹಾಗು ಪ್ರತಿಷ್ಟಿತ ವೈಣಿಕರ ವಂಶದಲ್ಲಾಯಿತು. ಈ ವೈಣೆಕರ ತಲೆಮಾರಿನಲ್ಲಿ ಸುಬ್ಬಣ್ಣನವರದ್ದು ೨೫ನೆ ತಲೆ. ಸುಬ್ಬಣ್ಣನವರು ವೀಣಾ ತರಬೇತಿಯನ್ನು ತಮ್ಮ ತಂದೆಯವರಾದ ದೊಡ್ಡ ಶೇಷಣ್ಣನವರಲ್ಲಿ ಮೈಸೂರು ಸಂಸ್ಥಾನದ ಇನ್ನೊಬ್ಬ ಶ್ರೇಷ್ಟ ವೈಣಿಕರಾದ ವೀಣೆ ಶೇಷಣ್ಣನವರ ಜೊತೆಯಲ್ಲಿ ಕಲಿತರು. ಸುಬ್ಬಣ್ಣನವರು ತಂದೆ ದೊಡ್ಡ ಶೇಷಣ್ಣನವರು ಮೈಸೂರು ಆಸ್ಥಾನದ ಕಲಾವಿದರಾಗಿದ್ದರು. ಸುಬ್ಬಣ್ಣ ಮೈಸೂರಿನ ಪ್ರಸಿದ್ದ ವಾಗ್ಗೇಯಕಾರಾದ ಸದಾಶಿವರಾಯರ ಬಳಿ ಹಾಡುಗಾರಿಕೆಯಲ್ಲಿ ಕೂಡ ಶಿಕ್ಷಣ ಪಡೆದರು. ವೀಣೆ ಹಾಗು ಹಾಡುಗಾರಿಕೆಯಲ್ಲಿ ನಿಷ್ಣಾತರಾದ ಸುಬ್ಬಣ್ಣನವರನ್ನು ಮೈಸೂರಿನ ಅರಸರಾದ ಚಾಮರಾಜ ಒಡೆಯರು ತಮ್ಮ ಆಸ್ತಾನದ ವಿದ್ವಾಂಸರನ್ನಾಗಿ ನೇಮಿಸಿದರು. ಅನೇಕ ರಾಜ್ಯಗಳು ಹಾಗು ಸಂಸ್ತಾನಗಳಲ್ಲಿ ತಮ್ಮ ಸಂಗೀತ ಪ್ರತಿಭೆಯನ್ನು ತೋರಿ ಸುಬ್ಬಣ್ಣನವರು ವೈಣಿಕ ಕೇಸರಿ, ವೈಣಿಕ ವರಚೂಡಾಮಣಿ, ವೈಣಿಕ ಪ್ರವೀಣಂ ಇತ್ಯಾದಿ ಬಿರುದುಗಳನ್ನು ಪಡೆದರು. ಶ್ರೀಯುತರು ೧೯೩೦ರಲ್ಲಿ ನಂಜನಗೂಡಿನಲ್ಲಿ ನಡೆದ ಕರ್ನಾಟಕ ಸಂಗೀತ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ ಗೌರವಕ್ಕೆ ಕೂಡ ಪಾತ್ರರಾದರು. ಒಂದು ಕಾಲದಲ್ಲಿ ಆಗರ್ಭ ಶ್ರೀಮಂತರಾಗಿದ್ದ ಸನ್ಮಾನ್ಯರು ಕೊಡುಗೈ ದಾನಿ ಹಾಗು ಸಂಗೀತ ಕಲಾಪೋಷಕರು ಕೂಡ ಆಗಿದ್ದರು. ಅವರು ತಮ್ಮ ಮನೆಯಲ್ಲಿಯೆ ಹಲವಾರು ಸಂಗೀತಗಾರರ ಕಛೇರಿಗಳನ್ನು ಏರ್ಪಡಿಸಿ, ಸಂಗೀತಗಾರರಿಗೆ ಉಚಿತ ಸನ್ಮಾನವನ್ನು ಕೂಡ ಮಾಡುತಿದ್ದರು. ೮೫ ವರ್ಷಗಳ ತುಂಬು ಜೀವನ ನೆಡಸಿದ ಸುಬ್ಬಣ್ಣನವರು ೧೯೩೯ರಲ್ಲಿ ದಿವಂಗತರಾದರು.