ಕಡಲ ಮೊಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಡಲ ಮೊಲ

ಕಡಲ ಮೊಲ[ಬದಲಾಯಿಸಿ]

ಒಪಿಸ್ತೊಬ್ರಾಂಕಿಯ ಗಣ ಹಾಗೂ ಟೆಕ್ಟಿಬ್ರಾಂಕಿಯೇಟ ಉಪಗಣದ ಅಪ್ಲೀಸಿಡೀ ಕುಟುಂಬಕ್ಕೆ ಸೇರಿದ ಒಂದು ಜಠರಪಾದಿ ಮೃದ್ವಂಗಿ. ಅಪ್ಲೀಸಿಯ ಇದರ ವೈಜ್ಞಾನಿಕ ನಾಮ. ಸಾಮಾನ್ಯವಾಗಿ ಪ್ರಪಂಚದ ಎಲ್ಲ ಕಡಲುಗಳಲ್ಲೂ ಇದು ವಾಸಿಸುತ್ತದೆ. ಮುಖ್ಯವಾಗಿ ಮರಳು ಅಥವಾ ಮಣ್ಣಿನ ತೀರ ಪ್ರದೇಶ ಇದಕ್ಕೆ ಬಹು ಇಷ್ಟವಾದ ವಾಸಸ್ಥಳ.

ಕಡಲ ಮೊಲ ಲಕ್ಷಣಗಳು[ಬದಲಾಯಿಸಿ]

ಅಲ್ಲಿ ತನ್ನ ಆಹಾರವಸ್ತುವಾದ ಕಡಲ ಪಾಚಿಯ ಮೇಲೆ ಹರಿದಾಡುತ್ತಿರುತ್ತದೆ. ಇದು ಬಸವನ ಹುಳುವನ್ನು ಹೋಲುತ್ತದೆ. ತಲೆಯ ಮೇಲೆ ಎರಡು ಜೊತೆ ಕೋಡುಬಳ್ಳಿಗಳಿವೆ. ಮೊದಲ ಜೊತೆ ಅಗಲವಾಗಿದ್ದು ಮೊಲದ ಕಿವಿಗಳಂತೆ ಪ್ರಮುಖವಾಗಿ ಕಾಣುವುದರಿಂದ ಈ ಪ್ರಾಣಿಗೆ ಕಡಲ ಮೊಲ ಎಂದು ಹೆಸರು ಬಂದಿದೆ, ಹಿಂದಿನ ಎರಡನೆಯ ಜೊತೆ ಕೋಡುಬಳ್ಳಿಗಳು ಮೊನಚಾಗಿದ್ದು ಘ್ರಾಣೇಂದ್ರಿಯಗಳಾಗಿ ಕೆಲಸ ಮಾಡುತ್ತವೆ. ಇವುಗಳ ಬುಡದ ಹೊರಪಾಶರ್ವ್‌ದಲ್ಲಿ ಒಂದು ಜೊತೆ ಕಣ್ಣುಗಳಿವೆ. ದೇಹದ ಪಾಶರ್ವ್‌ಭಾಗದಲ್ಲಿ ಸ್ನಾಯುಮಯವಾದ ಪಾದದ ಪಕ್ಕದಿಂದ ಮೇಲ್ಮುಖನಾಗಿರುವ ಪಾಶರ್ವ್‌ಪಾದ (ಪ್ಯಾರಪೋಡಿಯ) ಎಂಬ ಎರಡು ಮಡಿಕೆಗಳು ಮೇಲೆ ಚಾಚಿವೆ. ಇವನ್ನು ರೆಕ್ಕೆಯಂತೆ ಬಡಿಯುವುದರ ಮೂಲಕ ನೀರಿನಲ್ಲಿದ್ದು ಈಜುತ್ತದೆ. ದೇಹದ ಮೇಲಿರುವ ಮ್ಯಾಂಟಲ್ ಪದರ ಕೂಡ ದೇಹದ ಮೇಲೆ ಚಾಚಿಕೊಂಡು ಚಿಪ್ಪನ್ನು ಮುಚ್ಚಿಬಿಡುತ್ತದೆ. ಇದರ ಫಲವಾಗಿ ಚಿಪ್ಪು ಮಾರ್ಪಟ್ಟು ತೆಳುವಾಗಿ ಪಾರದರ್ಶಕವಾಗಿರುತ್ತದೆ. ಅಲ್ಲದೆ ಶ್ವಸನಕಾರ್ಯದಲ್ಲಿ ನೆರವಾಗುವ ಒಂದು ಕಿವಿರು ಅಥವಾ ಕ್ಲೋಮ ಮ್ಯಾಂಟಲ್ ಕುಹರದ ಬಲಭಾಗದಲ್ಲಿ ಹಿಂದಕ್ಕೆ ಚಾಚಿರುತ್ತದೆ. ಮ್ಯಾಂಟಲ್ ಕುಹರವನ್ನು ಆವರಿಸುವ ಗೋಡೆಯಲ್ಲಿ ಕೆನ್ನೀಲಿ ಬಣ್ಣವನ್ನು ಸ್ರವಿಸುವ ಏಕಕೋಶಿಕ ಗ್ರಂಥಿಗಳಿವೆ, ಕೆಣಕಿದಾಗ ಈ ಪ್ರಾಣಿ ಆತ್ಮರಕ್ಷಣೆಗಾಗಿ ಈ ವರ್ಣಕಗಳನ್ನು ಹೊರಗೆಡವುತ್ತದೆ. ಇದು ಕಡಲ ಪಾಚಿಯನ್ನಲ್ಲದೆ, ವಲಯವಂತಹ ಹುಳುಗಳು, ಮೃದ್ವಂಗಿ ಮತ್ತು ಕಠಿಣ ಚರ್ಮಿಗಳನ್ನು ತಿನ್ನುತ್ತದೆ. ಬಾಯ ಬಳಿ ದಪ್ಪನಾದ ಸ್ನಾಯುಮಯವಾದ ಎರಡು ತುಟಿಗಳಿವೆ. ಜಠರ ಸಂಕೀರ್ಣವಾಗಿದ್ದು ಅದಕ್ಕೆ ಮೇತೆ (ಕ್ರಾಪ್), ಸ್ನಾಯುಮಯವಾದ ಗಿಜóರ್ಡ್ ಮತ್ತು ಆನುಷಂಗಿಕ ಅಂಧನಾಳಗಳಿವೆ. ಕಡಲ ಮೊಲ ದ್ವಿಲಿಂಗ ಪ್ರಾಣಿ. ಗರ್ಭ ಕಟ್ಟಿದ ಮೊಟ್ಟೆಗಳನ್ನು ಸರದಂತೆ ಉದ್ದುದ್ದವಾಗಿ ಇಡುತ್ತದೆ. ಪುರ್ವ ಕಾಲದಲ್ಲಿ ಜನ ಈ ಪ್ರಾಣಿಗಳು ವಿಷಪುರಿತವಾದುವುವೆಂದು ಬಗೆದಿದ್ದರು. ಪ್ರ.ಶ. ಮೊದಲ ಶತಮಾನದ ಉತ್ತರಾರ್ಧದಲ್ಲಿ ಡೊಮಿಷೆನ್ ಎಂಬ ರೋಮ್ ದೇಶದ ಚಕ್ರವರ್ತಿ ತನ್ನ ಸೋದರ ಟೈಟಸ್ ಎಂಬ ಚಕ್ರವರ್ತಿಯನ್ನು ಅಪ್ಲೀಸಿಡೀ ಕುಟುಂಬದ ಪ್ರಾಣಿಗಳಿಂದ ಪಡೆದ ವಿಷವನ್ನು ಕೊಟ್ಟು ಸಾಯಿಸಿದನೆಂದು ಒಂದು ಉಲ್ಲೇಖವಿದೆ. ನೇಪಲ್ಸ್‌ ಕೊಲ್ಲಿಯಲ್ಲಿ ವಾಸಿಸುವ ಅಪ್ಲೀಸಿಯ ಲೆಪೋರಿನ ಎಂಬುದು ಮನುಷ್ಯನ ಚರ್ಮಕ್ಕೆ ತಾಕಿದರೆ ನೋವು ಮತ್ತು ಕಾಯಿಲೆ ಪ್ರಾಪ್ತವಾಗುವುದೆಂದು ಅಲ್ಲಿಯ ಬೆಸ್ತರು ನಂಬುತ್ತಾರೆ. ನಿಜವಾಗಿ ಹೇಳುವುದಾದರೆ ಇವು ಅಂಥ ಕ್ರೂರ ಪ್ರಾಣಿಗಳೂ ಅಲ್ಲ. ಇವುಗಳ ದೇಹದಲ್ಲಿ ವಿಷಸಂಬಂಧವಾದ ವಸ್ತುವೂ ಇಲ್ಲ.[೧] [೨][೩]

ಉಲ್ಲೇಖಗಳು[ಬದಲಾಯಿಸಿ]

  1. http://www.seaslugforum.net/find/aplyvacc
  2. https://en.wikipedia.org/wiki/BMC_Evolutionary_Biology
  3. http://finelinesciencepress.com/Fineline_Science_Press/Excerpts_files/Chapter6-Everybody's-a-Commentator.pdf[ಶಾಶ್ವತವಾಗಿ ಮಡಿದ ಕೊಂಡಿ]
"https://kn.wikipedia.org/w/index.php?title=ಕಡಲ_ಮೊಲ&oldid=1157453" ಇಂದ ಪಡೆಯಲ್ಪಟ್ಟಿದೆ