ಅಹಮದ್ ಷಾ ದುರಾನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಹಮದ್ ಷಾ ದುರಾನಿ
ನಾದಿರ್ ಷಾ

ಅಹಮದ್ ಷಾ ದುರಾನಿ[೧] ಆಫ್ಘನರಲ್ಲಿ ಅಬ್ದಾಲಿ ಮನೆತನಕ್ಕೆ ಸೇರಿದವ. ದುರಾನಿ ಸಾಮ್ರಾಜ್ಯ ಸ್ಥಾಪಕ. ಆಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳುವ ಪ್ರಯತ್ನದಲ್ಲಿ 'ನಾದಿರ್ ಷಾ'[೨]ನಿಗೆ ನೆರವಾದ (೧೭೩೮). ೧೭೪೭ರಲ್ಲಿ ನಾದಿರ್ ಷಾ ಕೊಲೆಯಾದ. ಅನಂತರ ಆಫ್ಘಾನಿಸ್ತಾನದಲ್ಲಿ ದೊರೆಯಾದ ದುರಾನಿ (ದುರ್-ಇ-ದುರಾನ್, ಎಂದರೆ ಮುತ್ತುಗಳಲ್ಲಿ ಶ್ರೇಷ್ಠ) ಎಂಬ ಬಿರುದನ್ನು ಧರಿಸಿ ಸಿಂಹಾಸನವನ್ನೇರಿದ. ಉತ್ತರ ಹಿಂದೂಸ್ತಾನದಲ್ಲಿ ಅನಾಯಕತ್ವ ಹರಡುತ್ತಿದ್ದ ಕಾಲವದು. ಆಗ ಮೊಘಲ್ ಸಾಮ್ರಾಜ್ಯ ಬಲಗುಂದಿ ಇಳಿಗತಿಯಲ್ಲಿ ಸಾಗುತ್ತಿತ್ತು. ಮರಾಠಾ ಸಾಮ್ರಾಜ್ಯ ಉತ್ತರ ಹಿಂದೂಸ್ತಾನದಲ್ಲೂ ವ್ಯಾಪಿಸಿ, ಹರಡಿದಷ್ಟೂ ಶಿಥಿಲತೆ ಎಡೆಮಾಡಿಕೊಟ್ಟಿತು; ರಜಪೂತರ ಕ್ಷಾತ್ರ ಕುಂದಿತ್ತು. ಇದನ್ನು ಕಂಡು ಅಹಮದ್ ಷಾ ಹಿಂದೂಸ್ತಾನಕ್ಕೆ ಅನೇಕ ಬಾರಿ ನುಗ್ಗಿ ಅಲ್ಲಿನ ಸಂಪತ್ತನ್ನು ದೋಚಿಕೊಂಡು ಹಿಂತಿರುಗಿದ. ಮಥುರಾ, ಬೃಂದಾವನ ಮುಂತಾದ ಅನೇಕ ಪವಿತ್ರ ಕ್ಷೇತ್ರಗಳಿಗೆ ನುಗ್ಗಿ ಗುಡಿಗೋಪುರಗಳನ್ನು ನೆಲಸಮ ಮಾಡಿ, ಅಸಂಖ್ಯಾತ ಹಿಂದೂಗಳನ್ನು ಕೊಂದು ಅಲ್ಲಿನ ಸಂಪತ್ತನ್ನು ಸೂರೆ ಮಾಡಿದ. ಎರಡು ಸಲ (೧೭೫೬, ೧೭೬೦) ದೆಹಲಿಯ ಲೂಟಿ ನಡೆಯಿತು. ಮೂರನೆಯ ಪಾಣೀಪತ್ ಕಾಳಗದಲ್ಲಿ (೧೭೬೧) ಮರಾಠರನ್ನು ಸೋಲಿಸಿ ಅವರ ಅವನತಿಗೆ ಕಾರಣನಾದ. ಭಾರತದ ದಿಗ್ವಿಜಯಗಳಿಂದ ತನ್ನ ನಾಡಿನಲ್ಲಿ ಪ್ರತಿಷ್ಠೆ ಹೆಚ್ಚಿಸಿಕೊಂಡ. ಕಾಂದಹಾರ್, ಪೇಶಾವರ್, ಪಂಜಾಬ್, ಕಾಶ್ಮೀರ್, ಸಿಂಧ್‍ಗಳ ಮೇಲೂ ಇವನ ಅಧಿಕಾರವಿತ್ತು. ೧೭೬೨ರ ಅನಂತರ ಪಂಜಾಬಿನಲ್ಲಿ ಸಿಕ್ಕರು ದಂಗೆಯೆದ್ದು ೧೭೬೭ರ ಹೊತ್ತಿಗೆ ಅವನ ಸೈನಿಕರನ್ನು ಅಲ್ಲಿಂದ ಓಡಿಸಿದರು. ಅನಿವಾರ್ಯವಾಗಿ ಅಹಮದ್ ಷಾ ಪಂಜಾಬನ್ನು ಸಿಖ್ ರಿಗೆ ಬಿಟ್ಟುಕೊಡಬೇಕಾಯಿತು. ಅವನು ತನ್ನ ನಾಡಿಗೆ ಹಿಂದಿರುಗಿದ ಮೇಲೆ ಅದೇ ತಾನೆ ಬಂಗಾಳದಲ್ಲಿ ಕಾಲಿಟ್ಟಿದ್ದ ಬ್ರಿಟಿಷರು ದೇಶದಲ್ಲಿ ವ್ಯಾಪಿಸಲು ಅನುಕೂಲವಾಯಿತು. ಇವನ ವಂಶದವರು ದೋಸ್ತ್ ಮಹಮ್ಮದನ (೧೮೬೩) ಕಾಲದವರೆಗೂ ಆಫ್ಘಾನಿಸ್ತಾನವನ್ನು ಆಳಿದರು. (ಎಚ್.ಜಿ.ಆರ್.)

ಉಲ್ಲೇಖಗಳು[ಬದಲಾಯಿಸಿ]