ಕ್ಯೂಲೆಕ್ಸ್ ಸೊಳ್ಳೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ಯೂಲೆಕ್ಸ್ ( Culex ) ಸೊಳ್ಳೆಯು ಡಿಪ್ಟಿರ ಗಣದ ಕ್ಯೂಲಿಸಿಡೀ ಕುಟುಂಬಕ್ಕೆ ಸೇರಿದ ಕೀಟ.

ಕ್ಯೂಲೆ‍ಕ್ಸ್ ಸೊಳ್ಳೆ

ವಿವರಣೆ[ಬದಲಾಯಿಸಿ]

ಗಾತ್ರ ಬಲುಸಣ್ಣದು. ಇದರ ವಾಸ ಸಾಮಾನ್ಯವಾಗಿ ನೀರಿನ ಬಳಿ. ಇದಕ್ಕೆ ಒಂದು ಜೊತೆ ರೆಕ್ಕೆಗಳಿವೆ. ಎರಡನೆಯ ಜೊತೆ ರೆಕ್ಕೆಗಳೂ ಇದ್ದು ಇವು ಸಣ್ಣ ಕೊಡತಿಯಾಕಾರದ ಉಪಾಂಗಗಳಾಗಿ ಮಾರ್ಪಾಡಾಗಿವೆ. ಇವುಗಳಿಗೆ ಹಾಲ್ಟಿಯರ್ಸ್ ಅಥವಾ ಬ್ಯಾಲೆನ್ಸರ್ಸ್ ಎಂದು ಹೆಸರು. ಕ್ಯೂಲೆಕ್ಸ್ ಸೊಳ್ಳೆಯ ದೇಹವನ್ನು ತಲೆ, ಎದೆ ಮತ್ತು ಹೊಟ್ಟೆ ಎಂದು ಮೂರು ಭಾಗಗಳನ್ನಾಗಿ ವಿಂಗಡಿಸಬಹುದು. ಗಂಡು ಸೊಳ್ಳೆಗೂ ಹೆಣ್ಣು ಸೊಳ್ಳೆಗೂ ಹಲವು ವ್ಯತ್ಯಾಸಗಳಿವೆ. ಗಂಡು ಸೊಳ್ಳೆಯಲ್ಲಿ ಆಂಟೆನ ಮೊಟಕಾಗಿದ್ದು ಅದರ ಮೇಲೆ ದಟ್ಟವಾಗಿ ಕೂದಲುಗಳು ಬೆಳೆದಿರುತ್ತವೆ. ಹೆಣ್ಣುಸೊಳ್ಳೆಯಲ್ಲಿ ಆಂಟೆನ ನೀಳವಾಗಿದೆ. ಅದರ ಮೇಲೆ ಕೇವಲ ಕೆಲವೇ ಕೂದಲುಗಳಿವೆ. ಹೆಣ್ಣು ಸೊಳ್ಳೆಗಳು ರಕ್ತವನ್ನು ಹೀರಿ ಜೀವಿಸುತ್ತವೆ. ಗಂಡು ಸೊಳ್ಳೆಗಳು ಸಾಧಾರಣವಾಗಿ ಸಸ್ಯಾಹಾರಿಗಳು; ಹೂಗಳ ಮಕರಂದವನ್ನೊ ಸಸ್ಯಗಳ ರಸವನ್ನೊ ಕುಡಿದು ಬದುಕುತ್ತವೆ. ಇವು ಸೇವಿಸುವ ಆಹಾರವನ್ನು ಅವಲಂಬಿಸಿ ವದನಾಂಗಗಳು ಸ್ವಲ್ಪ ಬೇರೆಯಾಗಿದೆ. ಕ್ಯೂಲೆಕ್ಸ್ ಸೊಳ್ಳೆ ಕೆಲವು ಗುಣಲಕ್ಷಣಗಳಲ್ಲಿ ಬೇರೆ ಬಗೆಯ ಸೊಳ್ಳೆಗಳಿಂದ ಬೇರೆಯಾಗಿದೆ. ಇದು ನೆಲದ ಮೇಲೆ ಕುಳಿತಾಗ ದೇಹ ಭೂಮಿಗೆ ಸಮಾಂತರವಾಗಿರುತ್ತದೆ. ಇದಕ್ಕೆ ಸಣ್ಣ ಪಾಲ್ಪಿ ಉಂಟು. ದೇಹದ ಮಧ್ಯಭಾಗದ ಮೇಲಿನ ಕೂದಲುಗಳು ಮೂರು ಬಗೆಯಾಗಿದ್ದು ಒಂದು ಸಣ್ಣ ಸ್ಕುಟೆಲಂ ಎಂಬ ಏಣಿನ ಮೇಲಿದೆ. ಕ್ಯೂಲೆಕ್ಸ್ ಸೊಳ್ಳೆಯ ಬೆಳೆವಣಿಗೆಯಲ್ಲಿ ಪೂರ್ಣರೂಪಾಂತರವನ್ನು ಕಾಣಬಹುದು. ಇದರ ಜೀವನಚಕ್ರ ಸಂಪೂರ್ಣಗೊಳ್ಳಲು ಸುಮಾರು 10-15 ದಿನಗಳು ಬೇಕು. ಇದು ಮೊಟ್ಟೆಗಳನ್ನು ನೀರಿನ ಮೇಲಿಡುತ್ತದೆ. ಅವು ಒಂದಕ್ಕೊಂದು ಅಂಟಿಕೊಂಡು ದೋಣಿಯಾಕಾರದ ರಚನೆಯನ್ನು ತಳೆದು ನೀರಿನ ಮೇಲೆ ತೆಪ್ಪದ ಹಾಗೆ ತೇಲುತ್ತಿರುತ್ತವೆ. ಡಿಂಬಗಳ ದೇಹದ 8ನೆಯ ಖಂಡದಲ್ಲಿ ಒಂದು ಉದ್ದನೆಯ ಶ್ವಾಸನಾಳವಿದೆ.

ರೋಗಪ್ರಸಾರ[ಬದಲಾಯಿಸಿ]

ಕ್ಯೂಲೆಕ್ಸ್ ಸೊಳ್ಳೆಗಳು ಆನೆಕಾಲುರೋಗವನ್ನು ಉಂಟು ಮಾಡುವ ಫೈಲೇರಿಯ ಹುಳುಗಳನ್ನು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತವೆ. ಕೆಲವು ಪ್ರಭೇದಗಳು ಮಿದುಳಿನ ಅಂಗಾಂಶಗಳನ್ನು ಬಾಧಿಸುವ ಎನ್‍ಸೆಫಲೈಟಿಸ್ ಎಂಬ ರೋಗಕಾರಕ ವೈರಸ್ಸನ್ನು ಹರಡುತ್ತವೆ.

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: